ಸುಶೀಲ್‌ಕುಮಾರ್ ಶಿಂದೆ 
ಅಂಕಣಗಳು

ಶಿಂದೆ, ನಿಮ್ಮ ನಿಷ್ಠೆ 'ಕುಟುಂಬ'ಕ್ಕೊ, ದೇಶಕ್ಕೊ?

ಗೃಹ ಸಚಿವ ಆಡುವ ಪ್ರತಿ ಮಾತೂ ತೂಕದ್ದಾಗಿರಬೇಕು.

ಗೃಹ ಸಚಿವ ಆಡುವ ಪ್ರತಿ ಮಾತೂ ತೂಕದ್ದಾಗಿರಬೇಕು. ಆದರೆ ಶಿಂದೆ ಈ ವಿಚಾರದಲ್ಲಿ ತೂಕರಹಿತರಾಗಿದ್ದಾರೆ.

ಜುಲೈ 30, 31.2012. ಬಹುತೇಕ ಇಡೀ ಉತ್ತರ, ಈಶಾನ್ಯ ಭಾರತ ಕತ್ತಲ ಸಾಮ್ರಾಜ್ಯವಾಗಿತ್ತು. ಭಾರತದ ಕಾಲು ಭಾಗದಷ್ಟು ಜನ ತೀವ್ರ ತೊಂದರೆಗೆ ಒಳಗಾದರು. ರೈಲುಗಳು ಹಳಿ ಬಿಟ್ಟು ಕದಲಲ್ಲಿಲ್ಲ, ವಿಮಾನಗಳು ಹಾರಲಿಲ್ಲ. ಎಷ್ಟೋ ಮನೆಗಳಲ್ಲಿ ಒಲೆ ಉರಿಯಲಿಲ್ಲ. ಯಾವುದೋ ನೈಸರ್ಗಿಕ ವಿಕೋಪ ಎದುರಾಗಿ ಜೀವನವೇ ಕುಸಿದಂತೆ ಜನ ಅಸಹಾಯಕರಾದರು. ಅಂತಾರಾಷ್ಟ್ರೀಯ ಮಾಧ್ಯಮಗಳು ಇದಕ್ಕೆ ಭಾರೀ ಪ್ರಚಾರ ಕೊಟ್ಟವು. ಸುಮಾರು 25 ಕೋಟಿ ಮಂದಿ 11 ಗಂಟೆಗಳ ಕಾಲ ಪಡಿಪಾಟಲು ಪಟ್ಟರು. ಕಾರಣ ಉತ್ತರ ವಿದ್ಯುತ್ ಗ್ರಿಡ್ ವೈಫಲ್ಯ. ಮತ್ತೆ ಸಂಪೂರ್ಣವಾಗಿ ಜನಜೀವನ ಹಳಿಗೆ ಬರಲು ಹೆಚ್ಚೂ ಕಡಿಮೆ 24 ತಾಸೇ ಬೇಕಾಯಿತು. ಇದರ ಬಿಸಿ ಸರ್ಕಾರಕ್ಕೆ ತಟ್ಟಿತು. ಇಷ್ಟಾದರೂ ಅಂದಿನ ಇಂಧನ ಸಚಿವ ಮಾತ್ರ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲೇ ಇಲ್ಲ. ಉತ್ತರದ ರಾಜ್ಯ ಸರ್ಕಾರಗಳು ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಬಳಸಿದ್ದರಿಂದ ಗ್ರಿಡ್ ಓವರ್‌ಲೋಡ್ ಆಗಿ ಕುಸಿಯಿತೆಂದು ಹೇಳಿಬಿಟ್ಟರು. ಇವರ ತಲೆಹರಟೆಯ ಮಾತು ಅಷ್ಟಕ್ಕೆ ಮುಗಿಯಲಿಲ್ಲ. "ಕೇವಲ 24 ಗಂಟೆಗಳಲ್ಲಿ ಉತ್ತರ ಭಾರತಕ್ಕೆ ಮತ್ತೆ ಕರೆಂಟ್ ಕೊಟ್ಟಿದ್ದೇವೆ. ಬೇರಾವ ದೇಶದಲ್ಲಿ ಇಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗುತ್ತದೆ ಹೇಳಿ. ಇದೇ ಅಮೆರಿಕದಲ್ಲಾಗಿದ್ದರೆ ದಿನಗಟ್ಟಲೇ ಜನ ಕತ್ತಲಲ್ಲಿ ಇರಬೇಕಾಗಿತ್ತು. ಈ ವಿಷಯದಲ್ಲಿ ನನ್ನನ್ನು ಟೀಕಿಸುವುದಕ್ಕಿಂತ ತ್ವರಿತವಾಗಿ ಪರಿಸ್ಥಿತಿ ತಹಬಂದಿಗೆ ತಂದದ್ದಕ್ಕಾಗಿ ನೀವು ನನ್ನನ್ನು ಶ್ಲಾಘಿಸಬೇಕು" ಎಂದು ಬಿಟ್ಟರು. ಇವರ ಮಾತನ್ನು, ಬೊಗಳೆಯನ್ನು ಜನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ಅಧ್ಯಕ್ಷರಿಗೆ ಇದು ತೀರಾ ಗಂಭೀರ ಎಂದೆನಿಸಿರಬೇಕು. ಇಷ್ಟು ಒಳ್ಳೆಯ ಕೆಲಸ ಮಾಡುವ ವ್ಯಕ್ತಿಯನ್ನು ಅಭಿನಂದಿಸಬೇಕು ಮತ್ತು ಅವರಿಗೆ ಏನಾದರೂ ಇನಾಮು ನೀಡಬೇಕೆಂದು ತೀರ್ಮಾನಿಸಿ ಅವರಿಗೆ ಡಬಲ್ ಪ್ರಮೋಷನ್ ನೀಡಿತು. ಆತ ಬೇರಾರೂ ಅಲ್ಲ. ಸುಶೀಲ್‌ಕುಮಾರ್ ಶಿಂದೆ. ಅವರ ಅದೃಷ್ಟವೋ ಏನೋ ಪವರ್‌ಕಟ್ ಆದ ಸಂದರ್ಭದಲ್ಲಿ ಕೇಂದ್ರ ಸಂಪುಟ ವಿಸ್ತರಣೆ ಮತ್ತು ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನಕ್ಕೆ ತೆರಳಿದ ಹಿನ್ನೆಲೆಯಲ್ಲಿ ಲೋಕಸಭಾ ನಾಯಕನ ಸ್ಥಾನವೂ ಖಾಲಿಯಾಗಿತ್ತು. ಆಗ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಅವರನ್ನು ಪ್ರಣಬ್ ನಿರ್ವಹಿಸುತ್ತಿದ್ದ ಹಣಕಾಸು ಇಲಾಖೆಗೆ ವರ್ಗಾಯಿಸುವುದು ಅನಿವಾರ್ಯವಾಗಿತ್ತು. ಪವರ್ ಮಿನಿಸ್ಟರ್ ಆದ ದಿನದಿಂದಲೂ ಇಲಾಖೆಗೆ ಪವರ್ ತುಂಬಲು ಯಾವ ಕೆಲಸವನ್ನೂ ಮಾಡದಿದ್ದ, ಪ್ರಧಾನಿ ಮನಮೋಹನಸಿಂಗ್ ಪದೇ ಪದೇ ಹೇಳಿದರೂ ವಿದ್ಯುತ್ ಕ್ಷೇತ್ರದಲ್ಲಿ ಅಗತ್ಯವಾಗಿ ಆಗಬೇಕಿದ್ದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗಿದ್ದ ಸುಶೀಲ್‌ಕುಮಾರ್ ಶಿಂದೆ ಏಕಾಏಕಿ ಗೃಹ ಸಚಿವರಾಗಿಬಿಟ್ಟರು! ಅಷ್ಟೇ ಏಕೆ ಅವರನ್ನು ಲೋಕಸಭಾ ನಾಯಕನ ಸ್ಥಾನದಲ್ಲಿಯೂ ಕೂರಿಸಿದ್ದಾಯಿತು. ಈ ಡಬಲ್ ಪ್ರಮೋಷನ್‌ನಿಂದ ಹಿರಿಹಿರಿ ಹಿಗ್ಗಿ "ಸೋನಿಯಾ ಗಾಂಧಿ ಯಾವತ್ತೂ ನನ್ನ ಕೈ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ. ಇಂದು ನಾನು ಏನಾಗಿದ್ದೇನೋ ಅದು ಸೋನಿಯಾ ಕೃಪೆ" ಎಂದು ತಾವು ಅಲಂಕರಿಸಿದ್ದ ಸ್ಥಾನ, ಹೊತ್ತಿದ್ದ ಜವಾಬ್ದಾರಿಯನ್ನೂ ಕಡೆಗಣಿಸಿ ಶಿಂದೆ ತಮ್ಮ ಕುಟುಂಬನಿಷ್ಠೆ ಪ್ರದರ್ಶಿಸಿದರು. ಅವರ ಮಾತು ಸತ್ಯಕ್ಕೆ ದೂರವಾದದ್ದೇನೂ ಆಗಿರಲಿಲ್ಲ. 2012ರ ಆರಂಭದಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭೆಗೆ ನಡೆದ ಚುನಾವಣಾ ಸಂದರ್ಭದಲ್ಲಿಯೇ ಅವರ ಕುಟುಂಬ ನಿಷ್ಠೆ ವೇದ್ಯವಾಗಿತ್ತು. ಗಾಂಧಿ ಕುಟುಂಬದ ಸುಪರ್ದಿನಲ್ಲಿರುವ ರಾಯ್‌ಬರೇಲಿ ಮತ್ತು ಅಮೇಠಿಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ನಿಗದಿಯಾಗಿತ್ತು. ಅವರ ಸಹಾಯಕ್ಕೆಂದು ಮತ್ತು ಪ್ರಚಾರ ವ್ಯವಸ್ಥೆಯ ಮೇಲ್ವಿಚಾರಣೆಗೆ ಶಿಂದೆ ಹೊರಟಿದ್ದರು. ಆದರೆ ಈ ವಿಷಯ ಸ್ಥಳೀಯ ಮುಖಂಡರ ಗಮನಕ್ಕೆ ಬಂದಿರಲಿಲ್ಲ. ಅವರು ಪ್ರಿಯಾಂಕಾ ಗಾಂಧಿ ವಾಸ್ತವ್ಯಕ್ಕೆ ಅಗತ್ಯ ಏರ್ಪಾಡುಗಳನ್ನು ಮಾಡಿದ್ದರು. ಶಿಂದೆ ಅವರಿಗೆಂದು ಯಾವುದೇ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲ. ಶಿಂದೆ ಅದಕ್ಕಾಗಿ ತಲೆಕೆಡಿಸಿಕೊಳ್ಳಲೂ ಇಲ್ಲ. ಅಲ್ಲಿಯೇ ವರಾಂಡಾದಲ್ಲಿ ಪ್ರಿಯಾಂಕಾ ಅವರ ಭದ್ರತಾ ಸಿಬ್ಬಂದಿ ಜತೆ ನೆಲದಲ್ಲಿಯೇ ಮಲಗಿ ರಾತ್ರಿ ಕಳೆದರು. ನಂತರ ವಿಷಯ ಪ್ರಿಯಾಂಕಾ ಕಿವಿಗೆ ಬಿದ್ದು ಅವರು ಸ್ಥಳೀಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಆದರೆ ಶಿಂದೆ ಮಾತ್ರ ಅದು ತಮ್ಮ ಕರ್ತವ್ಯ (ಕುಟುಂಬ ಸೇವೆ) ಎಂದೇ ಬಗೆದಿದ್ದರು. ಹಾಗೆಂದು ಶಿಂದೆ ತಮ್ಮ ರಾಜಕೀಯ ಜೀವನದುದ್ದಕ್ಕೂ ಕುಟುಂಬದ ಕಟ್ಟಾಳಾಗಿರಲಿಲ್ಲ. ಸೊಲ್ಲಾಪುರದ ಕೋರ್ಟ್ ಕ್ಲರ್ಕ್ ಆಗಿ ನಂತರ ಸಿಐಡಿಯಲ್ಲಿ ಏಳು ವರ್ಷ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಶಿಂದೆ ಅವರನ್ನು ರಾಜಕೀಯಕ್ಕೆ ತಂದದ್ದು ಶರದ್ ಪವಾರ್. ಸಿಐಡಿ ಎಸ್‌ಐ ಆಗಿದ್ದಾಗ ಶಿಂದೆ ರಾಜಕಾರಣಿಗಳ ಸಖ್ಯ ಬೆಳೆಸಿದ್ದರು. ಹಾಗೆಯೇ ಪವಾರ್ ಸಖ್ಯವೂ ಇತ್ತು. 1971ರಲ್ಲಿ ರಾಜಕೀಯಕ್ಕೆ ಬರುವಂತೆ ಶಿಂದೆಯನ್ನು ಪವಾರ್ ಹುರಿದುಂಬಿಸಿದರು. ಅಲ್ಲಿಂದ ಮುಂದೆ ಶಾಸಕನಾಗಿ, ಸಚಿವನಾಗಿ ಶಿಂದೆ ರಾಜಕೀಯದಲ್ಲಿ ತಳವೂರಿದರು. ಸತತ ಒಂಭತ್ತು ಬಾರಿ ಮಹಾರಾಷ್ಟ್ರ ರಾಜ್ಯದ ಬಜೆಟ್ ಮಂಡಿಸಿದ ಹೆಗ್ಗಳಿಕೆಯೂ ಅವರದ್ದಾಗಿದೆ. 1999ರಲ್ಲಿ ಸೋನಿಯಾ ಗಾಂಧಿ ವಿದೇಶಿ ಮೂಲವನ್ನು ಮುಂದಿಟ್ಟುಕೊಂಡು ಪವಾರ್ ಕಾಂಗ್ರೆಸ್‌ನಿಂದ ಹೊರಬಂದು ಎನ್‌ಸಿಪಿ ಸ್ಥಾಪಿಸಿದಾಗ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರು ಸಾಮೂಹಿಕವಾಗಿ ಪವಾರ್ ಕ್ಯಾಂಪ್‌ಗೆ ಗುಳೆ ಹೋಗಬಹುದು ಎಂಬ ಲೆಕ್ಕಾಚಾರವಿತ್ತು. ಹೀಗೆ ಹೋಗಬಹುದಾದವರ ಪಟ್ಟಿಯಲ್ಲಿ ಶಿಂದೆ ಹೆಸರು ಮುಂಚೂಣಿಯಲ್ಲಿತ್ತು. ಆದರೆ ತುಂಬಾ ಜಾಣ್ಮೆಯಿಂದ ತಮ್ಮ ರಾಜಕೀಯ ದಾಳ ಉರುಳಿಸಿದರು. ಸೋನಿಯಾ ಅವರ ವಿದೇಶಿ ಮೂಲ ಪ್ರಶ್ನಿಸುವ ಮೂಲಕ ಪವಾರ್ ಎಡವಿದ್ದಾರೆಂದೂ ತಾವು ಅವರ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಲ್ಲದೆ ಕಾಂಗ್ರೆಸ್ ಉಳಿಯಬೇಕಾದರೆ ಸೋನಿಯಾ ಬೇಕೇ ಬೇಕು ಎನ್ನುವ ಮೂಲಕ ಕುಟುಂಬದ ಮೆಚ್ಚುಗೆಗೆ ಪಾತ್ರರಾದರು.
ರಾಜಕೀಯದಲ್ಲಿ ಏಳ್ಗೆ ಕಾಣಲು ನಾನಾ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಕಾಂಗ್ರೆಸ್ ವಿಷಯಕ್ಕೆ ಬಂದರೆ ಕುಟುಂಬ ನಿಷ್ಠೆಯ ಪ್ರದರ್ಶನ ಅಂತಹ ಒಂದು ತಂತ್ರ. ಶಿಂದೆ ಅದನ್ನೇ ಅನುಸರಿಸಿದ್ದರಲ್ಲಿ ಏನೂ ತಪ್ಪಿಲ್ಲ. ಆದರೆ ಆ ನಿಷ್ಠೆಯಿಂದಾಗಿ ಪ್ರಾಪ್ತವಾದ ಸ್ಥಾನಮಾನಗಳನ್ನು ನಿರ್ವಹಿಸುವ ಗಾಂಭೀರ್ಯ, ಸೂಕ್ಷ್ಮತೆ ಎರಡನ್ನೂ ಶಿಂದೆ ಈವರೆಗೆ ತೋರಿಲ್ಲ. ಗೃಹ ಸಚಿವ ಎಂದರೆ ಒಂದು ರೀತಿ ಅತ್ಯಂತ ಪ್ರಭಾವಿ ಹುದ್ದೆ. ಪ್ರಧಾನಿ ನಂತರದ ಪ್ರಭಾವಶಾಲಿ ಸ್ಥಾನ. ಇಡೀ ದೇಶದ ಸುರಕ್ಷತೆ ಹೊಣೆ ಗೃಹ ಸಚಿವರ ಮೇಲಿರುತ್ತದೆ.  ಎಲ್ಲ ತನಿಖಾ ಸಾಧನಗಳೂ ಅವರ ಕೈಯಲ್ಲಿಯೇ ಇರುತ್ತದೆ. ಇದನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಅತ್ಯಂತ ಸೂಕ್ಷ್ಮ, ಆಯಕಟ್ಟಿನ ಹುದ್ದೆ ಅದು. ಗೃಹ ಸಚಿವ ಆಡುವ ಪ್ರತಿ ಮಾತೂ ತೂಕದ್ದಾಗಿರಬೇಕು. ಆದರೆ ಶಿಂದೆ ಈ ವಿಚಾರದಲ್ಲಿ ತೂಕರಹಿತರಾಗಿದ್ದಾರೆ. ಔ್ಟ್ಟಡಜ ಈಛಟಿಟ್ಟಿಟಿ (ಬಡಬಡಾಯಿಸುವವ) ನಂತಾಗಿದ್ದಾರೆ. ಈ ಹುದ್ದೆಗೇರಿದ ಕೆಲವೇ ತಿಂಗಳಲ್ಲಿ ಕೋಲ್‌ಗೇಟ್ ಹಗರಣದ ಬಿಸಿ ಸರ್ಕಾರಕ್ಕೆ ಮುಟ್ಟಿತು. ಆ ಸಂದರ್ಭದಲ್ಲಿ ಶಿಂದೆ ಉದುರಿಸಿದ ಆಣಿಮುತ್ತು "ಜನ ಕಾಲಕ್ರಮೇಣ ಹಗರಣಗಳನ್ನು ಮರೆತು ಬಿಡುತ್ತಾರೆ. ಈಗ ಬೊಫೋರ್ಸ್ ಅನ್ನು ಯಾರು ನೆನಪಿಸಿಕೊಳ್ಳುತ್ತಾರೆ? ಹಾಗೆಯೇ ಕೋಲ್‌ಗೇಟ್ ಅನ್ನು ಸಹ ಮರೆಯುತ್ತಾರೆ" ಎಂದು ಉಡಾಫೆಯಿಂದ ಹೇಳಿದರು. ಅದೂ ಅವರದೇ ಸುಪರ್ದಿನಲ್ಲಿರುವ ಸಿಬಿಐ ಈ ಹಗರಣದ ತನಿಖೆ ಕೈಗೊಂಡಿದ್ದಾಗ. ಬಾಸ್ ಈ ರೀತಿ ಮಾತಾಡಿದ ಮೇಲೆ ತನಿಖಾ ಅಧಿಕಾರಿಗಳಿಗೆ ಅದು ರವಾನಿಸುವ ಸಂದೇಶವಾದರೂ ಏನು? ತನಿಖೆ ವಿಳಂಬ ಮಾಡಿ, ಜನ ಮರೆಯುವಂತೆ ಮಾಡಿ ಎಂದೇ? ಶಿಂದೆ ಅವರ ತಲೆಹರಟೆ ಮಾತುಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಅದರ ಕೆಲವು ನಮೂನೆ ಹೀಗಿವೆ: 2012ರ ಸೆಪ್ಟೆಂಬರ್‌ನಲ್ಲಿ ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿದಂತೆ "ಸಣ್ಣ ಸಣ್ಣ ರಾಜ್ಯಗಳನ್ನು ರಚಿಸುವುದರಿಂದ ದೇಶದ ಸುರಕ್ಷತೆಗೆ ಕಂಟಕ ಬರುತ್ತದೆ. ಬಿಹಾರ ಮತ್ತು ಮಧ್ಯಪ್ರದೇಶ ವಿಭಜಿಸಿ ರಚಿಸಲಾದ ಜಾರ್ಖಂಡ್ ಮತ್ತು ಛತ್ತೀಸ್‌ಗಡ ಇಂದು ಮಾವೋ ಉಗ್ರರ ನೆಲೆವೀಡಾಗಿದೆ ಎಂಬುದನ್ನು ನಾವು ಮರೆಯಬಾರದು". ಇನ್ನು ದಿಲ್ಲಿಯಲ್ಲಿ ಕಾಮುಕರ ಅಟ್ಟಹಾಸಕ್ಕೆ ಬರ್ಬರವಾಗಿ ಸಾವಿಗೀಡಾದ ಯುವತಿ ನಿರ್ಭಯಾಗೆ ನ್ಯಾಯ ದೊರಕಿಸಿಕೊಡಿ, ತಪ್ಪಿತಸ್ಥರನ್ನು ಶೀಘ್ರ ಶಿಕ್ಷಿಸಿ ಎಂದು ಆಗ್ರಹಿಸಿ ಅಸಂಖ್ಯ ಯುವಕರು ಇಂಡಿಯಾಗೇಟ್ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದಾಗ ಅವರನ್ನು ಮಾತನಾಡಿಸುವ ಸೌಜನ್ಯ ತೋರದ ಶಿಂದೆ ಹೇಳಿದ್ದು "ಯಾವ ಯಾವ ಕಾರಣಕ್ಕೋ ಯಾರ್ಯಾರೋ ಬೀದಿಗಿಳಿದು ಪ್ರತಿಭಟಿಸುತ್ತಾರೆ. ನಾಳೆ ಮಾವೋವಾದಿಗಳು ಬೀದಿಗಿಳಿದು ಹೋರಾಟ ನಡೆಸಬಹುದು. ಒಬ್ಬ ಗೃಹ ಸಚಿವನಾಗಿ ನಾನು ಅವರ ಬಳಿ ತೆರಳಿ ಮಾತನಾಡಬೇಕೇ?" ಎಂದು. ಇನ್ನು ಜೈಪುರದ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ "ಬಿಜೆಪಿ, ಆರ್‌ಎಸ್‌ಎಸ್ ಭಯೋತ್ಪಾದಕರ ತರಬೇತಿ ಶಿಬಿರ ನಡೆಸುತ್ತಿವೆ" ಎಂದು ಅಸಂಬದ್ಧ ಹೇಳಿಕೆ ನೀಡಿ ಕೊನೆಗೆ ಕ್ಷಮೆಯಾಚಿಸುವ ಅನಿವಾರ್ಯತೆ ಸೃಷ್ಟಿಸಿಕೊಂಡರು. ಇದೆಲ್ಲದಕ್ಕಿಂತ ಹೆಚ್ಚಿನ ಹಾಸ್ಯಾಸ್ಪದ ಹೇಳಿಕೆ ಬಂದದ್ದು ಕಳೆದ ವಾರ ಹೈದರಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದಾಗ. "ಸ್ಫೋಟ ನಡೆಯಬಹುದು ಎಂಬ ಮಾಹಿತಿ ಬಂದಿತ್ತು. ಅದನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿದ್ದೆ" ಎಂದು. ಅಲ್ಲಾ ಸ್ವಾಮಿ "ನನ್ನ ಮೇಜಿನ ಮೇಲೆ ಒಂದು ಲಕೋಟೆ ಇತ್ತು, ಅದನ್ನು ಸಂಬಂಧಪಟ್ಟ ವಿಭಾಗಕ್ಕೆ ರವಾನಿಸಿದ್ದೇನೆ" ಎಂದು ಹೇಳಲು ನೀವು ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ to and fro ಗುಮಾಸ್ತನಾ? ಈ ದೇಶದ ಗೃಹಮಂತ್ರಿ ಎಂಬ ಪ್ರಜ್ಞೆ ನಿಮಗಿಲ್ಲವೇ? IB, NIA, CBI ಹೀಗೆ ನಾನಾ ತನಿಖಾ ಸಂಸ್ಥೆಗಳ ಮೂಲಕ ದೇಶದ ಸುರಕ್ಷತೆಗೆ ಸಂಬಂಧಿಸಿದಂತೆ, ಉಗ್ರರ, ದೇಶವಿರೋಧಿಗಳ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿ ಪ್ರತಿಕ್ಷಣಕ್ಕೂ ನಿಮಗೆ ಬರುತ್ತದೆ. ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವುದೇ ನಿಮ್ಮ ಕೆಲಸವಾದರೆ ಅದಕ್ಕೆ ಗೃಹ ಸಚಿವರೇಕೆ ಬೇಕು. ಅಲ್ಲಿ ಒಬ್ಬ ಗುಮಾಸ್ತನನ್ನು ಕೂರಿಸಿದರೆ ಸಾಕು, ಅವರಾಗಿ ಕೆಲಸ ಮಾಡುತ್ತಾರಲ್ಲವೇ? ರಸ್ತೆ ಬದಿ ವ್ಯಾಪಾರ ಮಾಡುವವರನ್ನು ತೆರವುಗೊಳಿಸುವುದು, ಜನ ರೊಚ್ಚಿಗೆದ್ದಾಗ ಲಾಠಿ ಬೀಸುವ ಇನ್ಸ್‌ಪೆಕ್ಟರ್‌ಗಿರಿಗೂ ಸಾಕಷ್ಟು ವ್ಯತ್ಯಾಸ ಇದೆ. ಶಿಂದೆ ಈ ವ್ಯತ್ಯಾಸವನ್ನು ಅರಿತಂತಿಲ್ಲ. ಉಗ್ರ ನಿಗ್ರಹ ಕ್ರಮಗಳಿರಲಿ, ಕನಿಷ್ಠ ಸೂಕ್ಷ್ಮ ಮಾಹಿತಿ ಬಂದಾಗ ಅದನ್ನು Coordinate ಮಾಡುವ ಚಾಕಚಕ್ಯತೆಯನ್ನೂ ಶಿಂದೆ ಪ್ರದರ್ಶಿಸಿಲ್ಲ. ಇಲ್ಲಿ ಶಿಂದೆ ಒಂದು ಮಾತನ್ನು ಅರ್ಥ ಮಾಡಿಕೊಳ್ಳಬೇಕು. "Two executions does not make a home minister" (ಕಸಬ್ ಮತ್ತು ಅಫ್ಜಲ್‌ನನ್ನು ಗಲ್ಲಿಗೇರಿಸಿದ ಮಾತ್ರಕ್ಕೆ ಸಮರ್ಥ ಗೃಹ ಸಚಿವನಾಗಲು ಸಾಧ್ಯವಿಲ್ಲ). ಆದರೆ ಅದನ್ನೇ ದೊಡ್ಡ ಹೆಗ್ಗಳಿಕೆ ಎಂದು ಶಿಂದೆ ಭಾವಿಸಿದರೆ ಅದು ಈ ದೇಶದ ದುರಂತವೇ ಸರಿ.
ಕೊನೆಯದಾಗಿ ಒಂದು ಮಾತು. ಐಬಿಎನ್ 7 ಚಾನೆಲ್‌ಗಾಗಿ ಪತ್ರಕರ್ತ ಪ್ರಭು ಚಾವ್ಲಾ ನಡೆಸಿಕೊಟ್ಟ 'ಟೀಖಿ ಬಾತ್‌' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಶಿಂದೆ 'ಸೋನಿಯಾ ಹೇಳಿದರೆ ಬಂದೂಕು ಹಿಡಿದು ಶೂಟ್ ಮಾಡಲೂ ನಾನು ಹೇಸುವುದಿಲ್ಲ' ಎಂದು ಹೇಳಿದ್ದರು. ಹಾಗಾದರೆ ಇವರ ನಿಷ್ಠೆ, ಕರ್ತವ್ಯಬದ್ಧತೆ ಒಂದು ಕುಟುಂಬಕ್ಕೋ ಅಥವ ದೇಶಕ್ಕೋ ಎಂದು ಕೇಳಬೇಕಾಗುತ್ತದೆ.

-ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ