ಅಂಕಣಗಳು

ಐ ಆ್ಮ್ 'ರೆಡ್ಡಿ' ಟು ಸಾವಯವ ಕ್ರಾಂತಿ!

ಅದು 1978ರ ಇಸವಿ. ಆತ ಕೃಷಿಯಲ್ಲಿ ಸೋತು ಕುಳಿತಿದ್ದರು. ಬೇಸತ್ತು ಹೋಗಿದ್ದರು. ಇದರಲ್ಲಿ ಇನ್ನು ಬದುಕಿನ ನಿರ್ವಹಣೆ ಸಾಧ್ಯವೇ ಇಲ್ಲವೆಂಬ ನಿರ್ಧಾರಕ್ಕೆ ಬಂದಿದ್ದರು. ಪರ್ಯಾಯ ಮಾರ್ಗಗಳತ್ತ ಯೋಚಿಸದಿದ್ದರೆ ಮುಂದಿನ ಜೀವನ ಪ್ರಶ್ನಾರ್ಥಕವಾಗಲಿದೆ ಎಂಬುದು ಖಚಿತವಾಗಿತ್ತು. ಜಮೀನು ಮಾರುವುದೊಂದೇ ಉಳಿದಿರುವ ಮಾರ್ಗ. ಬಂದ ಹಣದಲ್ಲಿ ಯಾವುದಾದರೊಂದು ವ್ಯಾಪಾರ ಶುರುವಿಟ್ಟುಕೊಳ್ಳಬೇಕು. ಅದರಲ್ಲಿ ಜೀವನ ಸಾಗಿಸಬೇಕು. ಭೂ ತಾಯಿಯ ಸಾಂಗತ್ಯ ಇಲ್ಲಿಗೆ ಕೊನೆಗೊಂಡಂತೆಯೇ ಸರಿ ಎಂದುಕೊಂಡು ಹೆಜ್ಜೆ ಮುಂದಿಟ್ಟಿದ್ದರು. ಆ ಹಂತದಲ್ಲಿ ಸಿಕ್ಕವರು ಅಲೆನ್ ಡೆಕ್ಕರ್, ಕ್ಯಾಲಿಫೋರ್ನಿಯಾದ ಸಾವಯವ ಕೃಷಿಕ. ಅಲ್ಲಿನ ಸಾವಯವ ಚಿಕಿತ್ಸಾ ಕೇಂದ್ರದ 200ಕ್ಕೂ ಹೆಚ್ಚು ನಿವಾಸಿಗಳಿಗಾಗಿ ತರಕಾರಿ ಬೆಳೆದುಕೊಡುತ್ತಿದ್ದವ. 'ಭೂಮಿಯನ್ನು ಸಹಜವಾಗಿ ಬಾಳಲು ಬಿಡಿ. ಬಲವಂತದ ಬೆಳೆಗೆ ನೆಲ ಒಗ್ಗುವುದೂ ಇಲ್ಲ, ಒಲಿಯುವುದೂ ಇಲ್ಲ. ಸಾವಯವವೊಂದೇ ಕೃಷಿ ಸಾಧನೆಗೆ ಪೂರಕ. ಹೀಗೆ ಕೃಷಿಗೆ ತೊಡಗಿಕೊಳ್ಳಿ' ಎಂಬ ಕಿವಿಮಾತನ್ನು ಹೇಳಿದ್ದ ಅಲೆನ್. ಮುಂದಿನದು ಇತಿಹಾಸ.
ಹೌದು, ಇವತ್ತು ಆ ನಾರಾಯಣ ರೆಡ್ಡಿ ಎಂಬ ಸಣಕಲು ದೇಹದ, ಆದರೆ ತೇಜಃಪುಂಜ ಕಣ್ಣುಗಳ ವ್ಯಕ್ತಿ ಸಾವಯವ ಕೃಷಿಯಲ್ಲಿ ಇನ್ನಿಲ್ಲದ ಸಾಧನೆ ಮಾಡಿದ್ದಾರೆ. ದೇಶದ ಕೃಷಿ ವಲಯದಲ್ಲಿ ಹೆಮ್ಮೆಯ ಹೆಸರು ಎನ್. ನಾರಾಯಣ ರೆಡ್ಡಿಯವರದ್ದು. ಮೂರು, ಮೂರೂವರೆ ದಶಕಗಳಲ್ಲಿ ದೊಡ್ಡಬಳ್ಳಾಪುರದ ಬಳಿಯ ತಮ್ಮ ಜಮೀನನ್ನು ಬೃಹತ್ ಪ್ರಯೋಗಾಲಯವಾಗಿಸಿಬಿಟ್ಟಿದ್ದಾರೆ. ಕಲ್ಪನೆಗೂ ನಿಲುಕದ ಸಾಧನೆಯ ಶೃಂಗದಲ್ಲಿ ನಿಂತು ಸಾವಿರಾರು ರೈತರನ್ನು ತಮ್ಮ ಅನುಯಾಯಿಗಳನ್ನಾಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಚಳವಳಿಯೊಂದನ್ನೇ ಹುಟ್ಟು ಹಾಕಿರುವ ವೃದ್ಧ ಜೀವ, ದೇಶದಲ್ಲಿ ಸಾವಯವದ ಬಗ್ಗೆ ಯಾವ ವಿಜ್ಞಾನಿಗೂ ಕಡಿಮೆ ಇಲ್ಲದಂತೆ ಅಧಿಕೃತವಾಗಿ ಮಾತನಾಡಬಲ್ಲರು. ದೇಶದಲ್ಲಿ ನೀರಾವರಿ, ಕೃಷಿಯ ಕುರಿತು ಪ್ರಾಯೋಗಿಕ ಮಾದರಿಗಳನ್ನು ತಾವೇ ಸ್ವತಃ ಕೈಗೊಂಡು ಕಣ್ತೆರೆಸಿದ್ದಾರೆ. ನಿರ್ದಿಷ್ಟ ಸೈದ್ಧಾಂತಿಕ ಚೌಕಟ್ಟಿನಲ್ಲಿ ಕೃಷಿಯನ್ನು ಲಾಭದಾಯಕ ಎಂದು ತೋರಿಸಿಕೊಟ್ಟ ರೆಡ್ಡಿಯವರು ಈ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲರು. 'ವಿಶ್ವವಿದ್ಯಾಲಯಗಳ ಬದಲಿಗೆ ಕೃಷಿ ಸಂಶೋಧನೆಗಳು, ಪ್ರಯೋಗಗಳು ರೈತನ ಹೊಲದಲ್ಲಿ ನಡೆಯಬೇಕು. ವೈಜ್ಞಾನಿಕ ಮಾರುಕಟ್ಟೆ ಹಾಗೂ ಆರ್ಥಿಕ ದೃಷ್ಟಿಕೋನದಡಿಯಲ್ಲಿ ರೂಪುಗೊಳ್ಳುವ ಸಂಶೋಧನೆಗಳು ಮಾತ್ರ ನೈಜ ಅರ್ಥವನ್ನು ಪಡೆಯಲು ಸಾಧ್ಯ. ಉಳಿದೆಲ್ಲವೂ ವಿಜ್ಞಾನಿ ಸಮೂಹದ ಅಗತ್ಯಕ್ಕೆ ಸೀಮಿತ' ಎಂಬ ಸತ್ಯ ನಿಷ್ಠುರತೆ ರೆಡ್ಡಿಯವರದ್ದು.
'ರೈತನ ಜಮೀನಿನಲ್ಲಿ ಹರಿಯುವ ನೀರನ್ನು ತಡೆದು, ಅಲ್ಲಿನ ಅಂತರ್ಜಲವನ್ನು ಬತ್ತಿಸಿ, ಬೋರ್‌ವೆಲ್‌ಗಳಿಗೆ ಸಬ್ಸಿಡಿ ಘೋಷಿಸುವ ಸರಕಾರಗಳು, ನೀರಾವರಿ ಯೋಜನೆಗಳಿಗೆ ಕೋಟ್ಯಂತರ ರು. ಸುರಿಯುತ್ತವೆ. ತಾತ್ವಿಕ ಚಿಂತನೆಯಿಲ್ಲದ ಯೋಜನೆಗಳು ಬರಡು ನೆಲದಲ್ಲಿ ಹಸಿರನ್ನು ಚಿಗುರಿಸಲಾರವು. ಅರ್ಥಶಾಸ್ತ್ರ ಕೇವಲ ಮಾರುಕಟ್ಟೆ, ಉದ್ಯಮ, ಕೈಗಾರಿಕೆಗಳಿಗೆ ಸೀಮಿತವಾದ ಪದವಲ್ಲ. ಅದು ಜೀವನ ಶಿಸ್ತು. ಆರ್ಥಿಕ ಮುನ್ನೋಟವಿಲ್ಲದ ಕೃಷಿ ಎಂದಿಗೂ ಲಾಭದಾಯಕವಾಗಲು ಸಾಧ್ಯವೇ ಇಲ್ಲ. ಹಾಗೆಯೇ ನೆಲವನ್ನು ನಂಬಿದವನ ಬದುಕು ಬರಡಾಗಲೂ ಸಾಧ್ಯವಿಲ್ಲ. ಹಾಗೊಮ್ಮೆ ಅಗುತ್ತಿದ್ದರೆ ಅದು ಮುನುಷ್ಯನ ದುರಾಸೆ ಮತ್ತು ಅಜ್ಞಾನದ ಫಲವಷ್ಟೆ' ಎನ್ನುತ್ತಾರೆ ನಾರಾಯಣ ರೆಡ್ಡಿ.
ಕಳೆದವಾರ ಮೈಸೂರಿನ ರಂಗಾಯಣದ ವಾರ್ಷಿಕ ಬಹುರೂಪಿ ಉತ್ಸವದಲ್ಲೊಂದು ಅಪರೂಪದ ಕ್ಷಣ. ಇಡೀ ಉತ್ಸವದ ಈ ವರ್ಷದ ಹೂರಣ ನೀರು. ವಿಚಾರಸಂಕಿರಣ, ನಾಟಕ, ಸಿನೆಮಾ, ಚರ್ಚೆ ಎಲ್ಲದಕ್ಕೂ ನೀರೇ ವಸ್ತು. ರಂಗಾಯಣದ ಈಗಿನ ನಿರ್ದೇಶಕರಾದ ಡಾ.ಬಿ.ವಿ. ರಾಜಾರಾಮ್ ಅತ್ಯಂತ ಯುಕ್ತ ಮತ್ತು ಅಭಿನಂದನಾರ್ಹ ನಿರ್ಧಾರ ತೆಗೆದುಕೊಂಡಿದ್ದರು. ರೆಡ್ಡಿ ಅಲ್ಲಿ ಹರಟೆಗೆ ಸಿಕ್ಕಿದ್ದರು. ನಿರಾಡಂಬರ ವ್ಯಕ್ತಿಯದ್ದು ಅದನ್ನೇ ಸಂಕೇತಿಸುವ ಅಚ್ಚ ಬಿಳಿಯ ಪಂಚೆ-ಅಂಗಿ. ಬೊಚ್ಚು ಬಾಯಲ್ಲಿ ಸಾವಯವ ಉತ್ಪನ್ನಗಳಷ್ಟೇ ಆರೋಗ್ಯಕಾರಿ, ಶುದ್ಧ, ನಿಷ್ಕಲ್ಮಶ ನಗೆ ಚೆಲ್ಲುತ್ತಾ ಮಾತಿಗೆ ಕುಳಿತ ಅವರು ಹೇಳಿದ್ದೆಲ್ಲವೂ ಅವರ ಅಪಾರ ಅನುಭವ ಸಾರವನ್ನು ಪ್ರತಿಬಿಂಬಿಸುತ್ತಿತ್ತು. ಇಳುವರಿ ಹೆಚ್ಚಳದ ನಿಟ್ಟಿನಲ್ಲಿ ಅವರ ಪ್ರಯೋಗಗಳು ಸಾಗಿದ್ದು ಪಾರಂಪರಿಕ ವ್ಯವಸ್ಥೆಯ ಚೌಕಟ್ಟಿನಲ್ಲೇ. ಸಾವಯವದಿಂದ ಹೊರತಾದ ಒಂದು ಸಣ್ಣ ತುಣುಕು ರಾಸಾಯನಿಕ ಅಥವಾ ಕೀಟನಾಶಕವನ್ನೂ ಅವರು ತಮ್ಮ ಜಮೀನಿಗೆ ಸೋಕಿಸಿಲ್ಲ. ಮಣ್ಣು ಮತ್ತು ಸಸ್ಯ ಸಂಕುಲಕ್ಕೆ ಮಾರಕವಾದ ರಾಸಾಯನಿಕ ಬಳಕೆಯಿಂದ ಖಂಡಿತಾ ಇಳುವರಿ ಹೆಚ್ಚಳ ಸಾಧ್ಯವೇ ಇಲ್ಲ. ನಮ್ಮ ಸಾರಜನಕ ಅಂಶಗಳನ್ನು ಹೆಚ್ಚಿಸುವ ಅದೆಷ್ಟೋ ವಸ್ತುಗಳು ನಮ್ಮ ನಿಸರ್ಗದಲ್ಲೇ ಲಭ್ಯವಿವೆ. ಅದು ನಾಶವಾಗದಂತೆ, ಅದಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಳ್ಳುವ ಬದುಕನ್ನು ನಾವು ರೂಢಿಸಿಕೊಳ್ಳಬೇಕು. ನಮ್ಮ ಸೌಲಭ್ಯಕ್ಕಾಗಿ ಕೈಗೊಳ್ಳುವ ಅದೆಷ್ಟೋ ಕ್ರಮಗಳು ಭೂಮಿಯಲ್ಲಿನ ಪೌಷ್ಟಿಕಾಂಶವನ್ನು ಹಾನಿಗೊಳಿಸುತ್ತವೆ. ಇದರಿಂದ ಭೂಮಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅದಿಲ್ಲದಿದ್ದರೆ ಖಂಡಿತವಾಗಿಯೂ ರಾಸಾಯನಿಕಗಳ ಬಳಕೆಯಿಲ್ಲದೇ ಇಳುವರಿ ಹೆಚ್ಚಳ ಸಾಧ್ಯ. ಮಾತ್ರವಲ್ಲ ಕೃಷಿಯನ್ನು ಲಾಭದಾಯಕವಾಗಿಯೂ ಪರಿವರ್ತಿಸಬಹುದು ಎಂಬುದು ಅವರ ಖಚಿತ ನಿಲುವು.
ನೀರಿನ ಅತೀ ಬಳಕೆಯಿಂದಲೇ ಬೆಳೆಗಳು ನಾಶವಾಗುತ್ತವೆ. ಇಳುವರಿ ಕುಂಠಿತಗೊಳ್ಳುತ್ತದೆ. ಭತ್ತದ ಬೆಳೆಯಲ್ಲಿ ನಾವು ಪಾಲಿಸುತ್ತಿರುವ ಪದ್ಧತಿ ಅತ್ಯಂತ ಅವೈಜ್ಞಾನಿಕ. ಭತ್ತದ ಕೃಷಿಗೆ ಅಷ್ಟು ನೀರು ನಿಲ್ಲಿಸುವ ಅಗತ್ಯವೇ ಇಲ್ಲ ಎನ್ನುವ ಅವರು, 'ನಮ್ಮ ಕೃಷಿಯಲ್ಲಿನ ನೀರಾವರಿ ಸಮಸ್ಯೆಗೆ ಮೂಲ ಕಾರಣವೇ ಭತ್ತ ಮತ್ತು ಕಬ್ಬಿಗೆ ನಾವು ಅನುಸರಿಸುತ್ತಿರುವ ಪದ್ಧತಿ. ಶ್ರೀಪದ್ಧತಿಯಡಿ ಕೈಗೊಳ್ಳುವ ಭತ್ತದ ಬೇಸಾಯ ಎಲ್ಲ ಸಮಸ್ಯೆಗಳಿಗೂ ಉತ್ತರದಾಯಿಯಾಗುತ್ತದೆ. ಎಲ್ಲಡೆ ಅದೇ ಪದ್ಧತಿಯ ಕಡ್ಡಾಯ ಅನುಸರಿಕೆಯ ನಿಟ್ಟಿನಲ್ಲಿ ಸರಕಾರ ನಿಯಮಾವಳಿ ರೂಪಿಸಬೇಕು. ವೈಜ್ಞಾನಿಕ ಶ್ರೀಪದ್ಧತಿಯ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಮಂಡ್ಯ, ಮೈಸೂರು ಕರ್ನಾಟಕ ಭಾಗದಲ್ಲಿ ಶ್ರೀಪದ್ಧತಿಯನ್ನು ಕಡ್ಡಾಯ ಜಾರಿಗೊಳಿಸಿದ್ದೇ ಆದಲ್ಲಿ ಕಾವೇರಿ ಸಮಸ್ಯೆಯೇ ಕೊನೆಯಾಗುತ್ತದೆ. ನನಗೆ ಅಧಿಕಾರ ಕೊಟ್ಟದ್ದೇ ಆದಲ್ಲಿ ಇಂಥ ಪ್ರಯೋಗದ ಮೂಲಕ ನಾಲ್ಕೇನಾಲ್ಕು ವರ್ಷಗಳಲ್ಲಿ ಕಾವೇರಿ ಸಮಸ್ಯೆಗೆ ಇತಿಶ್ರೀ ಹಾಡುತ್ತೇನೆ' ಎಂದು ವಿಶ್ವಾಸದಲ್ಲಿ ನುಡಿಯುತ್ತಾರೆ ನಾರಾಯಣ ರೆಡ್ಡಿ.
ನೀರು ಕಡಿಮೆಯಾಗಿ ಯಾವ ಬೆಳೆಯೂ ನಾಶವಾಗಿದ್ದಿಲ್ಲ. ಕಡಿಮೆ ನೀರಿನಲ್ಲಿ ಹೆಚ್ಚು ಪೋಷಕಾಂಶಗಳನ್ನು ಮಣ್ಣು ಹಿಡಿದಿಡುತ್ತದೆ. ಸಮಸ್ಯೆ ಎಲ್ಲಿದೆ ಎಂಬುದನ್ನು ಗುರುತಿಸುವಲ್ಲಿ ನಾವು ವಿಫಲರಾಗುತ್ತೇವೆ. ಇದೇ ಕೃಷಿ ವೈಫಲ್ಯಕ್ಕೂ ಕಾರಣ. ಜಮೀನಿನ ಪರಿಶೀಲನೆಗೆ, ಸೂಕ್ಷ್ಮ ಅವಲೋಕನವನ್ನು ರೈತರು ರೂಢಿಸಿಕೊಳ್ಳಬೇಕು. ಕಂಟೂರ್‌ಟ್ರೆಂಚ್‌ನಂಥ ಪುಟ್ಟಪುಟ್ಟ ಸಂರಚನೆಗಳ ಬಗ್ಗೆ ರೈತರು ಯೋಚಿಸಬೇಕು. ಒಟ್ಟಾರೆ ಇಂಗುಗುಂಡಿಗಳು ಜಮೀನಿನ ಅಮೃತ ತಾಣವಿದ್ದಂತೆ. ಜಮೀನಿನ ಭೌಗೋಳಿಕ ಲಕ್ಷಣಗಳನ್ನಾಧರಿಸಿ ಇಂಗುಗುಂಡಿಗಳ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಪ್ರತೀ ಜಮೀನು ಒಂದೊಂದು ವಾಟರ್ ಶೆಡ್‌ಗಳಾಗಿ ರೂಪುಗೊಂಡಾಗಲೇ ಒಟ್ಟಾರೆ ನೀರಿನ ಸಮಸ್ಯೆ ನೀಗಲು ಸಾಧ್ಯ. ಇಂಥ ಪ್ರಯೋಗಗಳು ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಮುದಾಯಿಕವಾಗಿಯೂ ನಡೆಯಬೇಕು. ಬಿದ್ದ ಮಳೆ ನೀರೆಲ್ಲ ಒಂದೇ ಕಡೆ ಹರಿದು ಹೋಗುವುದು ಸಾಮಾನ್ಯ. ಅಂಥ ಕಡೆಗಳಲ್ಲಿ ತಡೆಯೊಡ್ಡುವ ಕೆಲಸ ಎರಡು ಮೂರು ಎಕರೆಯಂಥ ಪುಟ್ಟ ಜಮೀನುಗಳಲ್ಲೂ ಆಗಬೇಕು. ಇನ್ನು ವೈಯಕ್ತಿಕ ಜಮೀನಿನಿಂದಾಚೆ ಬಿದ್ದು ಹರಿದೋಡುವ ಮಳೆ ನೀರಿಗೆ ಸಾಮುದಾಯಿಕ ಪ್ರಯತ್ನ ಅಗತ್ಯ. ಜಮೀನಿನಿಂದ ಹೊರಗಿನ ಸುತ್ತಮುತ್ತಲಿನ ಇಂಥ ಐದಾರು ಜಾಗಗಳನ್ನು ಗುರುತಿಸಿ ಅಕ್ಕಪಕ್ಕದವರೆಲ್ಲರೂ ಸೇರಿ ಹೀಗೆ ಓಡುವ ನೀರನ್ನು ತಡೆದು ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗಬೇಕು. ವೈಯಕ್ತಿಕ ಕೆಲಸಗಳಿಗಿಂತ ಎಲ್ಲರೂ ಸೇರಿ ಮಾಡುವ ಕೆಲಸ ಹೆಚ್ಚು ಪರಿಣಾಮಕಾರಿ. ಪಾರಂಪರಿಕ ಕೃಷಿ ವ್ಯವಸ್ಥೆಯ ಸಾಫಲ್ಯದ ಗುಟ್ಟು ಇದರಲ್ಲೇ ಅಡಗಿತ್ತು ಎಂಬುದು ರೆಡ್ಡಿಯವರ ಅನುಭವಜನ್ಯ ಸಲಹೆ.
ಮಾತು ಮತ್ತೆ ಸಾವಯವದತ್ತ ಹೊರಳಿತು. ಅವರು ಹೇಳುವ ಪ್ರಕಾರ, 'ಮಣ್ಣಿನ ಸಮಗ್ರ ಪೋಷಕಾಂಶ ಯಾವುದೇ ಬೆಳೆಗೆ ಮುಖ್ಯ. ಎಲೆಯಿಂದಲೇ ಗಿಡವೊಂದರ ಬೆಳವಣಿಗೆ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಎಲೆಗಳು ಆ ಗಿಡದ ಬೆಳವಣಿಗೆಯ ಟಿಪ್ಪಣಿಯಂತಿರುತ್ತವೆ'. ಕೇಳಿದರೆ ಆಶ್ಚರ್ಯವಾಗುತ್ತದೆ. ಆದರೆ ರೆಡ್ಡಿಯವರು ತಮ್ಮ ಪ್ರತಿ ಮಾತಿಗೂ ವೈಜ್ಞಾನಿಕ ನೆಲೆಗಟ್ಟಿನಲ್ಲಿಯೇ ಆಧಾರ ನೀಡುತ್ತಾರೆ. ಅವರು ಹೇಳುತ್ತಾರೆ, 'ರಾಸಾಯನಿಕ ಬಳಸಿದ ಗಿಡದ ಎಲೆಗಳು ಅಚ್ಚಹಸಿರಿನಿಂದ ಕೂಡಿರುತ್ತವೆ. ಅವುಗಳಲ್ಲಿ ಆರೋಗ್ಯದ ಲಕ್ಷಣ ಇರುವುದಿಲ್ಲ. ಸಾವಯವದಲ್ಲಿ ಎಲೆಗಳಲ್ಲಿಯೇ ಜೀವಂತಿಕೆ ಕಾಣುತ್ತದೆ. ರಾಸಾಯನಿಕಗಳ ಬಳಕೆಯಿಂದ ತತ್‌ಕ್ಷಣದಲ್ಲಿ ಇಳುವರಿ ಹೆಚ್ಚಾಗಬಹುದು, ಆದರೆ ನಿಸರ್ಗದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತದೆ. ಭೂಮಿಗೆ ಫಲವತ್ತತೆ ನೀಡುವ ಬ್ಯಾಕ್ಟೀರಿಯಾಗಳು, ಎರೆಹುಳುಗಳ ಸಂತತಿ ಕ್ಷೀಣಿಸುತ್ತದೆ. ಪರಿಣಾಮವಾಗಿ ಬೆಳೆಗೆ ಕೀಟಬಾಧೆ, ರೋಗಬಾಧೆ ಶುರುವಾಗುತ್ತದೆ'. ಈ ಕಾರಣಕ್ಕಾಗಿಯೇ ಎಲೆಗಳ ಮೇಲೆ ಸೂಕ್ಷ್ಮ ಪೋಷಕಾಂಶಗಳನ್ನು ಸಿಂಪಡಿಸುವ ಬಗ್ಗೆ ರೆಡ್ಡಿಯವರ ವಿರೋಧ. ಅದು ಗಿಡದಲ್ಲಿಯೇ ಅಸಮತೋಲನ ಸೃಷ್ಟಿಸುತ್ತದೆ. ಏಕೆಂದರೆ ಎಲೆಗಳು ತನಗೆ ಸಿಗುವ ಪ್ರತಿಯೊಂದನ್ನೂ ಹೀರಿಕೊಳ್ಳುತ್ತವೆ, ಗಿಡ ಅಥವಾ ಕಾಂಡ ಬೇರುಗಳ ಮೂಲಕ ಮಾತ್ರ ಆಹಾರ ಪಡೆದುಕೊಳ್ಳುತ್ತದೆ ಎನ್ನುವ ಎಚ್ಚರಿಕೆ ಆ ಸಾವಯವ ಕೃಷಿಯಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಈ ಹಿರಿ ಜೀವ.
ಮೇಜಿನ ನಾಲ್ಕು ಕಾಲುಗಳಂತೆ ಹೊಲಕ್ಕೆ ಮಣ್ಣು, ಗಿಡ, ಪ್ರಾಣಿ, ಮಾನವ ಇವು ಅತ್ಯಗತ್ಯ. ಇದರಲ್ಲಿ ಯಾವುದು ಹೆಚ್ಚು, ಯಾವುದು ಕಡಿಮೆ ಎನ್ನುವ ಮಾತೇ ಇಲ್ಲ. ನಾಲ್ಕಕ್ಕೂ ಸಮಾನ ಮಹತ್ವ. ಬೇಸಾಯದಲ್ಲಿ ರಾಸಾಯನಿಕಗಳ ಬಳಕೆ ಜಾಸ್ತಿಯಾದರೆ ಭೂಮಿ- ಕೃಷಿಕನ ನಡುವಿನ ಸಂಬಂಧ ಶಿಥಿಲಗೊಳ್ಳುತ್ತ ಬರುತ್ತದೆ. ಸದಾ ಆಕ್ರಮಣಶೀಲ ಪ್ರವೃತ್ತಿ ಹೊಂದಿರುವ ಕೃಷಿಕ ಭೂಮಿಗೆ ವೈರಿಯಂತಾಗುತ್ತಾನೆ. ಹದಗೊಳಿಸಲು ಭೂಮಿಯನ್ನು ಸಣ್ಣಸಣ್ಣ ಹಿಡುವಳಿಗಳಾಗಿ ವಿಂಗಡಿಸುವುದು ಜ್ವಲಂತ ಉದಾಹರಣೆ. ವಾಸ್ತವಿಕವಾಗಿ ಮಣ್ಣನ್ನು ಮೃದುಗೊಳಿಸಲು ಭೂಮಿಗೆ ಇಷ್ಟು ಕಠಿಣವಾದ ಚಿಕಿತ್ಸೆ ನೀಡುವ ಅಗತ್ಯವೇ ಇಲ್ಲ ಎನ್ನುತ್ತಾರೆ ಅವರು.
ತಾವು ನಂಬಿರುವ ಸಿದ್ಧಾಂತ ಮತ್ತು ತಮ್ಮ ಬೇಸಾಯ ಪದ್ಧತಿಗಳನ್ನು ಒಂದೇ ಆಗಿಸಿಕೊಂಡವರು ರೆಡ್ಡಿ. ಸಾವಯವ ಬೇಸಾಯಕ್ಕೆ ತೊಡಗಿದ ಮೇಲೆ ತಾವು ಅಧ್ಯಾತ್ಮಕ್ಕೆ ಮತ್ತಷ್ಟು ಹತ್ತಿರವಾಗಿರುವುದಾಗಿ ಹೇಳಿಕೊಳ್ಳುವ ಅವರು, ಸಾವಯವ ಕೃಷಿಯಿಂದ ಪ್ರತಿಯೊಂದು ಸಂಗತಿಯೂ ಒಂದನ್ನೊಂದು ಪರಸ್ಪರ ಅವಲಂಬಿಸಿವೆ ಎನ್ನುವ ಸತ್ಯ ಅರಿವಾಗಿದೆ. ಇದರಿಂದ ತಮ್ಮಲ್ಲಿ ನಿಸ್ವಾರ್ಥ ಮನೋಭಾವ ಬೆಳೆದಿದೆ. ಇದುವೇ ತಾವು ಆರ್ಥಿಕ ವಿಚಾರದ ಹೊರತಾಗಿಯೂ ಸಾವಯವ ಕೃಷಿ ಅಪ್ಪಿಕೊಂಡು ಮುಂದುವರಿಸಲು ಪ್ರೇರಣೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸಮಾನ ಮನಸ್ಕರು, ಸಲಹೆಗಳಿಗಾಗಿ ದೂರವಾಣಿ 9620588974 ಸಂಖ್ಯೆಯಲ್ಲಿ ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!