ಸುಮ್ಮನೆ ಹೃದಯಕ್ಕೆ ಹಾಯ್ ಎನಿಸುವ ಕತೆಯೊಂದನ್ನು ಕೇಳೋಣ. ವಿಚಿತ್ರ ತಿರುವು, ಅತಿ ಗಹನತೆ, ಊಹಿಸದ ಮುಕ್ತಾಯ ಇಂಥದ್ದನ್ನೆಲ್ಲ ಹೊಂದಿರುವ ಕತೆಯೇನೂ ಇದಲ್ಲ. ಆದರೆ ತನ್ನಷ್ಟಕ್ಕೇ ಒಂದು ಓಘದಲ್ಲಿ ಸಾಗುವ ಕತೆಯೂ ಮನಸಿಗೆ ತಾಗಿ ಬಿಡಬಲ್ಲುದು ಎಂಬುದಕ್ಕೆ ನಾನು ಇಂಟರ್ನೆಟ್‌ನಲ್ಲಿ ಓದಿಕೊಂಡ ಈ ಕತೆಯೇ ಉದಾಹರಣೆ. ನೀವೀಗ ಮಕ್ಕಳಾಗಿದ್ದೀರಿ ಅಂದುಕೊಂಡು ಕತೆ ಓದಿ...
ಅದೆಷ್ಟೋ ವರ್ಷಗಳ ಹಿಂದೆ ನಡೆಯಿತು ಎನ್ನಲಾದ ಕಥಾ ಪ್ರಸಂಗವಿದು. ಹಿಮಾಲಯದ ತಪ್ಪಲಿನಲ್ಲಿ ಒಂದು ಕೊಳವಿತ್ತು. ಅಲ್ಲಿ ಯಾವಾಗಲೂ ಕೆಂಪು ಬಿಳಿ ಹಾಗೂ ಹಳದಿ ಬಣ್ಣದ ತಾವರೆಗಳು ಅರಳಿರುತ್ತಿದ್ದವು. ಈ ಕಾರಣದಿಂದ ಅದಕ್ಕೆ ತಾವರೆಕೊಳ ಎಂದೇ ಕರೆಯಲಾಗುತ್ತಿತ್ತು. ಆನೆಗಳು ಅಲ್ಲಿ ಜಲಕ್ರೀಡೆಯಾಡಲು ಬರುತ್ತಿದ್ದವು.
ಈ ಕಾಲಘಟ್ಟದಲ್ಲಿಯೇ ಭಗವಂತನು ಒಂದು ಆನೆಮರಿಯಾಗಿ ಜನ್ಮತಾಳಿದನು. ಉಳಿದೆಲ್ಲ ಆನೆಗಳೂ ಕಪ್ಪು-ಕಂದು ಬಣ್ಣ ಹೊಂದಿದ್ದರೆ ಆ ಆನೆ ಮರಿ ಹಾಲುಬಿಳುಪಿನ ಮೈಕಾಂತಿ ಹೊಂದಿತ್ತು. ಉಳಿದ ಆನೆ ಮರಿಗಳಂತೆ ಮನಸ್ಸು ಬಂದಂತೆ ಅಡ್ಡಾಡುವುದನ್ನಾಗಲಿ, ಇತರೆ ಆನೆಗಳ ಜೊತೆ ಕುಸ್ತಿಗೆ ಹೋಗುವುದನ್ನಾಗಲಿ ಮಾಡದೆ ತುಂಬ ಗಂಭೀರವಾಗಿ ಇರುತ್ತಿತ್ತು. ಈ ಆನೆ ಮರಿಯ ಮೇಲೆ ತಾಯಿ ಆನೆಗೆ ಅತೀ ಎಂಬಂಥ ವಾತ್ಸಲ್ಯವಿತ್ತು. ಅದು ನಿತ್ಯವೂ ಹಸಿರುಹುಲ್ಲು, ಕಬ್ಬಿನ ಜಲ್ಲೆಯನ್ನು ಎಲ್ಲೆಲ್ಲಿಂದಲೋ ಹೊತ್ತು ತಂದು ಮರಿಯ ಮುಂದೆ ಇಟ್ಟು ಹೇಳುತ್ತಿತ್ತು: 'ಕಂದಾ, ಇದು ನಮ್ಮ ಆಹಾರ. ಮೊದಲ ತುತ್ತು ನಿನಗೆ. ನಂತರದ ತುತ್ತು ನನಗೆ'
ಹೀಗೇ ಕಾಲ ಉರುಳಿತು. ಬೆಳೆಯುತ್ತಾ ಹೋದಂತೆಲ್ಲಾ ತಾಯಿ ಆನೆ ಹಾಗೂ ಮರಿ ಆನೆಯ ನಡುವಣ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು. ದಿನಗಳು ಉರುಳಿದಂತೆಯೇ ಶ್ವೇತವರ್ಣದ ಆನೆ ಮರಿ ಪ್ರಾಯಕ್ಕೆ ಬಂತು. ತನ್ನ ಗಾಂಭೀರ್ಯ ನಡೆ ಹಾಗೂ ಶೌರ್ಯದಿಂದಾಗಿ ಕಾಡಿನ ರಾಜ ಅನ್ನಿಸಿಕೊಂಡಿತು. ಇದೇ ಸಂದರ್ಭದಲ್ಲಿ ತಾಯಿ ಆನೆಗೆ ವಯಸ್ಸಾಯಿತು. ವೃದ್ಧಾಪ್ಯದ ಕಾರಣದಿಂದಾಗಿ ಅದಕ್ಕೆ ದೃಷ್ಟಿ ಮಂದವಾಗಿ ಕೆಲವೇ ದಿನಗಳಲ್ಲಿ ಏನೂ ಕಾಣಿಸದಂತಾಯಿತು. ಈ ಸಂದರ್ಭದಲ್ಲಿ ತಾಯಿಯ ಯೋಗಕ್ಷೇವುದ ಹೊಣೆ ಹೊತ್ತುಕೊಂಡ ಶ್ವೇತವರ್ಣದ ಮರಿ ಆನೆ, ದಿನವೂ ಹಸಿರುಹುಲ್ಲು, ಕಬ್ಬಿನಜಲ್ಲೆ, ಬಗೆಬಗೆಯ ಸೊಪ್ಪುಗಳನ್ನು ತಂದು ತಾಯಿಯ ಮುಂದೆ ಹರಡಿ ಹೇಳುತ್ತಿತ್ತು: 'ಅಮ್ಮಾ, ಇದು ನಮ್ಮ ಆಹಾರ. ಮೊದಲ ತುತ್ತು ನಿನಗೆ, ಎರಡನೇ ತುತ್ತು ನನಗೆ...'
ಈ ಮೂಕ ಪ್ರಾಣಿಗಳ ಬಾಂಧವ್ಯ ಕಂಡು ಹಿಮಾಲಯದ ತಪ್ಪಲಿನಲ್ಲಿದ್ದ ಎಲ್ಲ ಋಷಿಮುನಿಗಳೂ ಬೆರಗಾಗಿ ಹೋಗಿದ್ದರು. ಮನುಷ್ಯರೆಲ್ಲಾ ಈ ಪ್ರಾಣಿಗಳಿಂದ ಕಲಿಯಬೇಕಾದುದು ತುಂಬಾ ಇದೆ ಎಂದು ತಮಗೆ ತಾವೇ ಹೇಳಿಕೊಳ್ಳುತ್ತಿದ್ದರು.
ಸಂದರ್ಭ ಹೀಗಿದ್ದಾಗಲೇ ಬೇಟೆಗೆಂದು ಬಂದ ರಾಜ, ಶ್ವೇತವರ್ಣದ ಆನೆಯನ್ನು ನೋಡಿಬಿಟ್ಟ. ಅಪರೂಪದ ರೂಪ ಲಾವಣ್ಯದಿಂದ ಕೂಡಿರುವ ಈ ಆನೆ ನನ್ನ ಅರಮನೆಯಲ್ಲಿರಬೇಕು. ಇದನ್ನೇ ಪಟ್ಟದಾನೆಯನ್ನಾಗಿ ಮಾಡಿಕೊಳ್ಳಬೇಕು ಎಂದು ಯೋಚಿಸಿದ. ಉತ್ಸವದ ಸಂದರ್ಭದಲ್ಲಿ ಈ ಆನೆಯ ಮೇಲೆ ಸವಾರಿ ಹೊರಟರೆ ಹೇಗಿರುತ್ತದೆ ಎಂದೂ ಲೆಕ್ಕಾಚಾರ ಹಾಕಿದ. ನಂತರ, ಶ್ವೇತವರ್ಣದ ಆನೆಯನ್ನು ಮಾವುತರ ಮೂಲಕ ಹಿಡಿಸಿ, ಅದನ್ನು ಸಕಲ ರಾಜಮರ್ಯಾದೆಯೊಂದಿಗೆ ಅರಮನೆಗೆ ಕರೆತಂದ.
ಮರುದಿನವೇ ಈ ಹೊಸ ಆನೆಯ ವಿಶ್ರಾಂತಿಗೆಂದು ಬಯಲೊಂದು ನಿರ್ಮಾಣವಾಯಿತು. ಅದಕ್ಕೆ ಆಹಾರವೆಂದು ಬೆಲ್ಲ, ಕಬ್ಬು, ಬಗೆಬಗೆಯ ಸೊಪ್ಪು ಸೇರಿದಂತೆ ಏನೇನೋ ತರಲಾಯಿತು. ದಿನಕ್ಕೆ ಮೂರು ಬಾರಿ ಸುಗಂಧ ದ್ರವ್ಯದಿಂದ ಆನೆಗೆ ಸ್ನಾನ ಮಾಡಿಸುವಂತೆ ರಾಜ ಆಜ್ಞಾಪಿಸಿದ. ಅದು ಜಲಕ್ರೀಡೆಯಾಡಲು ಅನುಕೂಲವಾಗುವಂತೆ ಒಂದು ಕೊಳವನ್ನೂ ನಿರ್ಮಿಸಿದ.
ಆದರೆ, ಶ್ವೇತವರ್ಣದ ಆನೆ, ಇದೇನನ್ನೂ ಕಣ್ಣೆತ್ತಿ ಕೂಡ ನೋಡಲಿಲ್ಲ. ಅದು ಉಪವಾಸ ಕೂತು ಬಿಟ್ಟಿತು. ಆಹಾರ ಸೇವಿಸದ ಕಾರಣದಿಂದ ದಿನೇ ದಿನೆ ಕೃಶವಾಗ ತೊಡಗಿತು. ಸುದ್ದಿ ತಿಳಿದ ಮಹಾರಾಜ ಧಾವಿಸಿ ಬಂದು ಹೇಳಿದ: 'ಎಲೈ ಆನೆಮರಿಯೆ, ನಿನ್ನನ್ನು ನನ್ನ ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನೀನು ಅರಮನೆಯ ಉದ್ದಕ್ಕೂ ಮನಸ್ಸು ಬಂದಂತೆ ತಿರುಗಬಹುದು. ನೀನು ಬಯಸಿದ ಆಹಾರವನ್ನೇ ಪೂರೈಸಲಾಗುತ್ತದೆ. ಯಾವ ಚಿಂತೆಯೂ ಇಲ್ಲದೆ ನೀನು ಆರಾಮಾಗಿ ಇರಬಹುದು. ಈಗ ಆಹಾರ ತಿನ್ನು...'
ಆಗ ಆನೆ ಮರಿ ಹೇಳಿತು: 'ಮಹಾರಾಜ, ನನಗೆ ಈ ಬಂಧನದಿಂದ ಬಿಡುಗಡೆ ಬೇಕು. ಕಾಡಿನಲ್ಲಿ ನನ್ನ ತಾಯಿ ಇದ್ದಾಳೆ. ಆಕೆ ಕುರುಡಿ. ಹಾಗಾಗಿ, ಆಹಾರ ಹುಡುಕಲು ಆಕೆಗೆ ಸಾಧ್ಯವಾಗುವುದಿಲ್ಲ. ಅಂಧತ್ವದ ಕಾರಣದಿಂದ ಆಕೆ ಯಾವ ಸಂದರ್ಭದಲ್ಲಾದರೂ ಕಂದಕಕ್ಕೆ ಬಿದ್ದು ಹೋಗಬಹುದು. ಆಕೆಗೆ ನಾನೇ ದಿಕ್ಕು. ನಾನು ಜೊತೆಗಿದ್ದರೆ ಮಾತ್ರ ಆಕೆ ನೆಮ್ಮದಿಯಿಂದ ಬದುಕುತ್ತಾಳೆ. ಆಕೆಯನ್ನು ನೋಡಿಕೊಳ್ಳಲಿಕ್ಕಾದರೂ ನಾನು ಹೋಗಲೇಬೇಕು. ನೀನು ಮೃಷ್ಟಾನ್ನ ಭೋಜನವನ್ನೇ ತಂದು ಎದುರಿಗಿಟ್ಟರೂ ನನಗೆ ಸಂತೋಷ ಆಗುವುದಿಲ್ಲ. ದಯವಿಟ್ಟು ನನ್ನನ್ನು ಬಿಡುಗಡೆ ಮಾಡು...'
ತಾಯಿಗಾಗಿ ಹಂಬಲಿಸಿದ ಆನೆಯ ಮಾತು ಕೇಳಿ ರಾಜನಿಗೆ ಆಶ್ಚರ್ಯ ಮತ್ತು ಖುಷಿ ಒಟ್ಟಿಗೇ ಆಯಿತು. ಆತ ತಕ್ಷಣವೇ ಆನೆಯನ್ನು ಬಿಡುಗಡೆ ಮಾಡಿದ. ಶ್ವೇತವರ್ಣದ ಆನೆ ಓಡುತ್ತಲೇ ಕಾಡಿಗೆ ಬಂತು. ಜೋರಾಗಿ ಒಮ್ಮೆ ಕೂಗು ಹಾಕಿತು. ಅದಕ್ಕೆ ಉತ್ತರವೆಂಬಂತೆ ಮತ್ತೊಂದು ಮೂಲೆಯಿಂದ ಸದ್ದು ಹೊರಟಿತು. ಕೂಗು ಕೇಳಿದ ಜಾಗಕ್ಕೆ ಶ್ವೇತವರ್ಣದ ಆನೆ ಬಂದು ನೋಡಿದರೆ -ತಾಯಿ ಆನೆ ಒಂದು ಹೊಂಡದಲ್ಲಿ ಮುಳುಗಿರುವುದು, ಅಲ್ಲಿಂದ ಆಚೆಗೆ ಬರಲು ಗೊತ್ತಾಗದೆ ಚಡಪಡಿಸುತ್ತಿರುವುದು ಕಾಣಿಸಿತು. ಇದನ್ನು ಕಂಡ ಮರಿಯಾನೆ, ತಕ್ಷಣವೇ ನುಗ್ಗಿ ಹೋಗಿ, ಸ್ವಲ್ಪವೂ ನೋವಾಗದಂತೆ ತಾಯಿ ಆನೆಯನ್ನು ಹೊಂಡದಿಂದ ಮೇಲೆತ್ತಿತು. 'ಅಮ್ಮಾ, ನಿನ್ನ ಸೇವೆ ಮಾಡಬೇಕೆಂದು ಮಹಾರಾಜನ ಬಳಿ ಪ್ರಾರ್ಥಿಸಿದೆ. ಆತ ನನ್ನನ್ನು ಬಂಧನದಿಂದ ಬಿಡುಗಡೆ ಮಾಡಿದ...' ಎಂದು ಹೇಳಿತು. ನಂತರ ಪಕ್ಕದ ಕೊಳದಿಂದ ಪನ್ನೀರು ತಂದು ಹೊಂಡದ ಕೆಸರಿನಿಂದ ಮುಚ್ಚಿ ಹೋದಂತಿದ್ದ ತಾಯಿ ಆನೆಯ ಕಣ್ಣುಗಳನ್ನು ತೊಳೆಯಿತು. ಆಗಲೇ ಒಂದು ಪವಾಡ ನಡೆದು ಹೋಯಿತು. ಕುರುಡಾಗಿದ್ದ ಆನೆಗೆ ದೃಷ್ಟಿ ಮರಳಿ ಬಂತು. ನಮ್ಮ ವಿಷಯದಲ್ಲಿ ಭಗವಂತನ ಕರುಣೆ ದೊಡ್ಡದು ಎಂದು ಎರಡು ಆನೆಗಳೂ ಸಂಭ್ರಮಿಸಿದವು.
ಕೆಲ ಸಮಯದ ನಂತರ ತರಹೇವಾರಿ ಹಣ್ಣು, ಸೊಪ್ಪು ಹಾಗೂ ಕಬ್ಬಿನ ಜಲ್ಲೆಯನ್ನು ಹೊತ್ತು ತಂದ ಶ್ವೇತವರ್ಣದ ಆನೆ, ಅದನ್ನೆಲ್ಲಾ ತಾಯಿದ ಮುಂದೆ ಸುರಿದು ಹೇಳಿತು: ಅಮ್ಮಾ, ಮೊದಲ ತುತ್ತು ನಿನಗೆ, ಎರಡನೆಯದು ನನಗೆ...'
ನಾಸಿರುದ್ದೀನ್ ನಗೆಬುಗ್ಗೆ
ಮುಲ್ಲಾ ನಾಸಿರುದ್ದೀನ್ ಅಂದರೆ ತಮಾಷೆಗೆ, ಹಾಸ್ಯದ ಮೂಲಕವೇ ಹೊಳಹು ತೋರುವುದಕ್ಕೆ ಪ್ರಸಿದ್ಧ. ಆತನ ಕುರಿತಾದ ಪ್ರಸಂಗಗಳನ್ನು ನೀವು ಕೇಳಿಯೇ ಇರುತ್ತೀರಿ. ಮೊದಲೇ ಕೇಳಿದ್ದರೂ ಈ ಪ್ರಸಂಗಗಳನ್ನು ಇನ್ನೊಮ್ಮೆ ಮೆಲುಕು ಹಾಕುವುದಕ್ಕೇನೂ ಅಡ್ಡಿ ಇಲ್ಲ.
'ಹೆಂಡತಿಗೆ ಹೆದರದ ಗಂಡಂದಿರ ಸಂಘ'ದ ಸದಸ್ಯನಾಗಿದ್ದ ಮುಲ್ಲಾ ನಾಸಿರುದ್ದೀನ್. ಅದೊಂದು ದಿನ ಅಧ್ಯಕ್ಷರು ಸಭೆ ಕರೆದಿದ್ದರು. ಎಲ್ಲರೂ ಜಮಾಯಿಸಿದರು. ಸಂಘದ ರೂಢಿಯಂತೆ ಅಧ್ಯಕ್ಷರು ಯಾರನ್ನೂ 'ಕುಳಿತುಕೊಳ್ಳಿ' ಎಂದಷ್ಟೇ ಹೇಳುತ್ತಿರಲಿಲ್ಲ. 'ಹೆಂಡತಿಯ ಹೆದರಿಕೆ ಇಲ್ಲದ ಎಲ್ಲರೂ ಕುಳಿತುಕೊಳ್ಳಿ' ಎಂದು ಹೇಳುವುದೇ ಅಲ್ಲಿನ ರಿವಾಜಾಗಿತ್ತು. ಅವತ್ತೂ ಹಾಗೆಯೇ ಹೇಳಿದರು. ಒಬ್ಬ ನಾಸಿರುದ್ದೀನ್ ಹೊರತಾಗಿ ಎಲ್ಲರೂ ಕುಳಿತುಕೊಂಡರು.
'ಅರೇ, ಇದೇನು ನಾಸಿರುದ್ದೀನ್? ನಿನಗೆ ಹೆಂಡತಿ ಎಂದರೆ ಭಯವೇ?' ಅಧ್ಯಕ್ಷರ ಪ್ರಶ್ನೆ.
'ಛೇ, ಛೇ...ಅವಳಿಗೆ ಹೆದರೋದೇನು ಬಂತು? ಆದರೆ ಕುಳಿತುಕೊಳ್ಳಲಾಗದಷ್ಟು ಹೊಡೆದುಬಿಟ್ಟಿದ್ದಾಳೆ ಏನು ಮಾಡೋದು' ಕೇಳಿದ ನಾಸಿರುದ್ದೀನ್.
ರಸ್ತೆಯಲ್ಲಿ ನಿಂತು ಮುಲ್ಲಾ ನಾಸಿರುದ್ದೀನ್ ಅರಚಿಕೊಳ್ಳುತ್ತಿದ್ದ- 'ನಾನು ಒಂದು ಕತ್ತೆಯನ್ನು ಕಳೆದುಕೊಂಡಿದ್ದೇನೆ. ಹುಡುಕಿಕೊಟ್ಟವರಿಗೆ ಎರಡು ಕತ್ತೆಗಳನ್ನು ಬಹುಮಾನವಾಗಿ ಕೊಡುತ್ತೇನೆ.'
'ನಿನಗೇನು ಹುಚ್ಚಾ' ಅಂತ ಹಳ್ಳಿಗರು ಕೇಳಿದರು.
'ನಿಮಗೆ ಗೊತ್ತಿಲ್ಲ, ಒಂದು ವಸ್ತುವನ್ನು ನಮ್ಮದಾಗಿ ಹೊಂದಿರುವುದಕ್ಕಿಂತ ಕಳೆದಿದ್ದನ್ನು ಪುನಃ ಪಡೆದುಕೊಳ್ಳುವುದರಲ್ಲಿ ಭಾರಿ ಖುಷಿಯಿರುತ್ತೆ' ಅಂದ ನಾಸಿರುದ್ದೀನ್.
ವಕ್ರತುಂಡೋಕ್ತಿ
ಹೆಂಗಸರ ಯೋಚನೆಯನ್ನೇ ಅರ್ಥ ಮಾಡಿಕೊಳ್ಳಲಾಗುವುದಿಲ್ಲ ಎಂದು ಗಂಡಸರು ಹತಾಶೆಗೊಳ್ಳುತ್ತಾರೆ. ಗಂಡಸರು ಯೋಚಿಸುವುದು ಹೇಗೆ ಅಂತ ಚೆನ್ನಾಗಿ ಗೊತ್ತಿರುವುದರಿಂದ ಹೆಂಗಸರು ಹತಾಶೆ ಅನುಭವಿಸುತ್ತಾರೆ.