ಅಂಕಣಗಳು

ಎಡವಿಬಿದ್ದಾಗಿದೆ, ಆದರೂ 'ಲಿವ್‌ಸ್ಟ್ರಾಂಗ್‌' ಲ್ಯಾನ್ಸ್

I'm sitting here today to acknowledge my mistakes and to say sorry for that. My story was ...

I'm sitting here today to acknowledge my mistakes and to say sorry for that. My story was perfect for so long, you overcome the disease win Tour De France Seven times, have a happy marriage, children. But I was a flawed character. I droped to win..ನಾನಿಂದು ನನ್ನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ನನ್ನ ಕತೆ ಒಂದು ಸುಂದರ, ರಮ್ಯ ಕಾವ್ಯದಂತಿತ್ತು. ಒಂದು ದೊಡ್ಡ ಕಾಯಿಲೆಯನ್ನು ಗೆದ್ದೆ, ಏಳು ಬಾರಿ ಟೂರ್ ಡಿ ಫ್ರಾನ್ಸ್ ಚಾಂಪಿಯನ್ ಆದೆ, ಸುಂದರ ಮಡದಿ ಮಕ್ಕಳು... ಆದರೆ ಈ ಕತೆ ಎಷ್ಟು ಸುಂದರವಾಗಿತ್ತೋ ಅದರ ಹಿಂದೆ ಕಳಂಕವೂ ಇತ್ತು. ನಾನು ಮಾದಕ ವಸ್ತುಗಳ ಮೊರೆಹೋಗಿದ್ದೆ...) ಹೀಗೆ ಸಾಗಿತ್ತು ಆತನ ತಪ್ಪೊಪ್ಪಿಗೆ. ಇದಕ್ಕೆ ವೇದಿಕೆ ಕಲ್ಪಿಸಿದ್ದ ಓಪ್ರಾವಿನ್‌ಪ್ರಿ ನ್ಯಾಯಾಲಯದಲ್ಲಿ ಕ್ಷಮೆಗೆ ಮೊರೆಯಿಡುವ ಅಪರಾಧಿಯ ಮುಂದೆ ನಿರ್ಭಾವುಕರಾಗಿ ಕುಳಿತುಕೊಳ್ಳುವ ನ್ಯಾಯಾಧೀಶರಂತೆ ಕುಳಿತಿದ್ದಳು. ಒಂದರ ಮೇಲೊಂದು ಪ್ರಶ್ನೆ ಕೇಳಿ ಈತನ ಮಾದಕ ಕಾಂಡದ ಮುಖವಾಡ ಕಳಚುವ ಪ್ರಯತ್ನದಲ್ಲಿದ್ದಳು. ಅಂದು ಆತನನ್ನು ಜಗತ್ತು ಕ್ಯಾರೆ ಎನ್ನಲಿಲ್ಲ. ಮಾಡಿದ ತಪ್ಪಿಗೆ ಅನುಭವಿಸಲಿ ಬಿಡಿ ಎಂಬಂತಿತ್ತು. ಹಾಗೆಂದು ಆತನೇನು ಕಳ್ಳನಲ್ಲ, ಭಯೋತ್ಪಾದಕನಲ್ಲ, ಕೊಲೆಗಡುಕನೂ ಅಲ್ಲ. ಆತ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್. ಮನುಷ್ಯನ ಸಾಮರ್ಥ್ಯಕ್ಕೆ ಸವಾಲಾಗಿರುವ ಟೂರ್ ಡಿ ಫ್ರಾನ್ಸ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಅನ್ನು 7 ಬಾರಿ ಗೆದ್ದ ವೀರ. ಸೈಕ್ಲಿಂಗ್‌ಗೆ  ಹೀರೋಯಿಸಂ ತಂದ ಅಥ್ಲೀಟ್. ಸೈಕಲ್ ತುಳಿದು ಸೂಪರ್ ಸ್ಟಾರ್ ಆಗಬಹುದು ಎಂದು ತೋರಿಸಿಕೊಟ್ಟಿದ್ದ ವ್ಯಕ್ತಿ.
ಟೂರ್ ಡಿ ಫ್ರಾನ್ಸ್.
ಇದು ವಿಶ್ವ ಸೈಕ್ಲಿಂಗ್‌ನಲ್ಲಿ ಅತಿ ಪ್ರತಿಷ್ಠಿತ ಮತ್ತು ಅತ್ಯಂತ ಸವಾಲಿನ ರ್ಯಾಲಿ. 21 ದಿನ, 3250 ಕಿ.ಮೀ.ಗಳನ್ನು ಸೈಕ್ಲಿಸ್ಟ್‌ಗಳು ಕ್ರಮಿಸಬೇಕು. ಅದೂ ಕಡಿದಾದ ಹಾದಿ. ಫ್ರಾನ್ಸ್‌ನ ಗಡಿಗುಂಟ ಸಾಗುವ ರ್ಯಾಲಿ ಕೆಲವೊಮ್ಮೆ ಅಕ್ಕಪಕ್ಕದ ದೇಶಗಳ ಗಡಿದಾಟಿ ಹೋಗಿಬರುತ್ತದೆ. 1903ರಿಂದ ಈವರೆಗೆ ಮಹಾಯುದ್ಧಗಳ ಅವಧಿ ಹೊರತುಪಡಿಸಿ ಪ್ರತಿ ವರ್ಷದ ಸಂಪ್ರದಾಯದಂತೆ ನಡೆಯುತ್ತಲೇ ಬಂದಿದೆ. ಹಲವಾರು ಖ್ಯಾತನಾಮ ಸೈಕ್ಲಿಸ್ಟ್‌ಗಳು ಇಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. 1991ರಿಂದ 95ರವರೆಗೆ ಸ್ಪೇನಿನ ಮಗ್ಯುಯೆಲ್ ಇಂದುರೈನ್ ಸತತ ಐದು ಬಾರಿ ಇಲ್ಲಿ ಚಾಂಪಿಯನ್ ಎನಿಸಿ ವಿಶ್ವದ ಮುಂದೆ ಒಂದು ದೊಡ್ಡ ಸವಾಲು ಒಡ್ಡಿದ. ಇದು ಅಸಾಧ್ಯದ ಮಾತು. ಯಾರೂ ಈ ಪರಿ ಸತತವಾಗಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದೇ ಸೈಕ್ಲಿಂಗ್ ಜಗತ್ತು ಭಾವಿಸಿತ್ತು. ಆದರೆ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಇದನ್ನು ಒಪ್ಪಲಿಲ್ಲ. 1999ರಿಂದ 2005ರವರೆಗೆ ಸತತ ಏಳು ವರ್ಷ ಟೂರ್ ಡಿ ಫ್ರಾನ್ಸ್ ಅನ್ನು ತನ್ನ ಹೆಸರಿಗೆ ಬರೆದುಕೊಂಡ. ಪ್ರತಿ ವರ್ಷವೂ ಸಮರ್ಥ ಸವಾಲುದಾರರನ್ನು ಎದುರಿಸಿದ. ಈತನ athleticismಅನ್ನು ಮಣಿಸಲು ಯಾರಿಗೂ ಸಾಧ್ಯವಾಗಲಿಲ್ಲ.
ಪ್ರತಿ ಜಯದೊಂದಿಗೆ ಆರ್ಮ್‌ಸ್ಟ್ರಾಂಗ್ ಸಹ ಬೆಳೆದ. ಆಧುನಿಕ ಸೈಕ್ಲಿಂಗ್‌ನ ದಂತಕಥೆ ಅನಾವರಣವಾಗುವುದನ್ನು ಜಗತ್ತು ಕೂತೂಹಲದಿಂದ ವೀಕ್ಷಿಸಿತು. ಪ್ರತಿ ಜಯ ಲ್ಯಾನ್ಸ್‌ನ auraಹೆಚ್ಚಿಸಿತು. ಒಬ್ಬ ಸ್ಟಾರ್ ಅಥ್ಲೀಟ್‌ನಿಂದ ಈತ ಸೈಕ್ಲಿಂಗ್ ಜಗತ್ತಿನ ಸೂಪರ್ ಸ್ಟಾರ್ ಆದ. ಒಂದು ರೀತಿಯಲ್ಲಿ ಸೈಕ್ಲಿಂಗ್‌ಗೆ ಅನ್ವರ್ಥವಾದ. ಈತನ ಈ ಯಶಸ್ಸಿನ ಹಿಂದೆ ಮತ್ತೊಂದು ಬಗೆಯ ಹೋರಾಟದ ಕತೆಯೂ ಇದೆ. ಅದೇ ಕ್ಯಾನ್ಸರ್.
ಹೌದು 25ನೇ ವರ್ಷಕ್ಕೆ ಕಾಲಿಡುವ ವೇಳೆಗೆ ಆರ್ಮ್‌ಸ್ಟ್ರಾಂಗ್ ಕ್ಯಾನ್ಸರ್‌ಗೆ ತುತ್ತಾಗಿದ್ದ. ಅದೂ ಸಾಮಾನ್ಯವಾಗಿ ಆ ವಯಸ್ಸಿನ ಜನರಲ್ಲಿ ಹೆಚ್ಚಿಗಿದ್ದ Testicular Cancer.ಆರಂಭದಲ್ಲೇ ಪತ್ತೆಹಚ್ಚಿದರೆ ಇದು ಗುಣವಾಗುವ ಕಾಯಿಲೆ. ಆದರೆ ಆರ್ಮ್‌ಸ್ಟ್ರಾಂಗ್ ಆರಂಭದಲ್ಲಿ ಇದನ್ನು ಕಡೆಗಣಿಸಿದ. ಕಡೆಗೆ ಅದನ್ನು ಪತ್ತೆಹಚ್ಚುವ ವೇಳೆಗೆ ಅರ್ಬುದ ಆತನ ಉದರ, ಶ್ವಾಸಕೋಶ ಹಾಗೂ ಮಿದುಳಿಗೆ ಹಬ್ಬಿತ್ತು. ಬದುಕುಳಿಯುವ ಸಾಧ್ಯತೆ ಕಡಿಮೆ ಎಂದೇ ವೈದ್ಯರು ಹೇಳಿದ್ದರು. ಅದು 1996, ಆಗಿನ್ನೂ ಆರ್ಮ್‌ಸ್ಟ್ರಾಂಗ್ ಸುತ್ತ ಸ್ಟಾರ್‌ಗಿರಿಯ ಪ್ರಭಾವಳಿ ಮೂಡಿರಲಿಲ್ಲ. ಹೇಗಾದರೂ ಸರಿ ಕ್ಯಾನ್ಸರ್ ಮಾರಿಯ ವಿರುದ್ಧ ಹೋರಾಡಲೇ ಬೇಕು, ಅದನ್ನು ಗೆಲ್ಲಲೇಬೇಕು ಎಂದು ಮನಸ್ಸು ಮಾಡಿದ. ಅದಕ್ಕೆ ಆತನ ತಾಯಿಯ ಒತ್ತಾಸೆಯೂ ಇತ್ತು. ಮುಂದಿನ ಎರಡು ವರ್ಷ ಈ ಹೋರಾಟಕ್ಕೇ ಮೀಸಲಾಯಿತು. ದೇಹ ದಂಡಿಸುವ ಫಿಸಿಕಲ್ ಕಂಡೀಷನಿಂಗ್, ಔಷಧೋಪಚಾರ ಮತ್ತು ಅದನ್ನೂ ಮೀರಿದ ಛಲಗಾರಿಕೆ ಕೊನೆಗೂ ಆತನನ್ನು ಕ್ಯಾನ್ಸರ್‌ನ ಕರಾಳ ಬಾಹುಗಳಿಂದ ಹೊರಗೆಳೆಯಿತು. ತರುವಾಯದ ಏಳು ವರ್ಷ ಕ್ರೀಡಾ ಕ್ಷೇತ್ರದಲ್ಲಿ ಆತನ ಶ್ರೇಷ್ಠತೆಯ ಮುದ್ರೆ ಒತ್ತಿತು. ಮದುವೆ, ಮಕ್ಕಳು, ಸ್ಟಾರ್ ಪಟ್ಟ ಎಲ್ಲವೂ ಆತನನ್ನು ಅರಸಿ ಬಂತು. ಆದರೆ ಈಗ ಸ್ವತಃ ಆರ್ಮ್‌ಸ್ಟ್ರಾಂಗ್ ಒಪ್ಪಿಕೊಂಡಿರುವಂತೆ ಈ ಶ್ರೇಷ್ಠತೆ ನೇರ ನಡೆಯಿಂದ ಗಳಿಸಿದ್ದಾಗಿರಲಿಲ್ಲ. ಶಕ್ತಿವರ್ಧಕ ಮಾದಕ ಮಾರ್ಗದಿಂದ ಬಂದ ಯಶಸ್ಸಾಗಿತ್ತು. 'I could not have won the race seven times without drugs' ಎಂದು ಆರ್ಮ್‌ಸ್ಟ್ರಾಂಗ್ ಈಗ ಹೇಳಿದ್ದಾನೆ. ಹಾಗೆಂದು ಈ ಬಗೆಗೆ ಗುಮಾನಿ ಮೊದಲಿನಿಂದಲೂ ಇತ್ತು. 1999ರಲ್ಲಿಯೇ ಫ್ರಾನ್ಸ್‌ನ ನಿಯತಕಾಲಿಕೆಯೊಂದು ಆರ್ಮ್‌ಸ್ಟ್ರಾಂಗ್ ಮಾದಕ ಮಾರ್ಗದಿಂದ ಪ್ರಶಸ್ತಿ ಗೆದ್ದಿದ್ದಾನೆ ಎಂದು ಆರೋಪಿಸಿತು. ತನಿಖೆ ಆಯಿತು. ಕ್ಯಾನ್ಸರ್ ಗುಣಪಡಿಸುವ ಔಷಧದ ನೆಪದಲ್ಲಿ ಆರ್ಮ್‌ಸ್ಟ್ರಾಂಗ್ ಪಾರಾದ. ಆತ ನಿಷ್ಕಳಂಕಿತ ಎಂದು ತನಿಖಾಧಿಕಾರಿ ಹೇಳಿದ. ಅಂದು ಆರ್ಮ್‌ಸ್ಟ್ರಾಂಗ್ ಮನದೊಳಗೆ ಹಿರಿಹಿರಿ ಹಿಗ್ಗಿದ. ತನ್ನ ಮೋಸವನ್ನು ಜಗತ್ತಿನ ಕಣ್ಣಿಂದ ಮರೆಮಾಚಿದ ತೃಪ್ತಿಯಿಂದ ಬೀಗಿದ. ಅದು ಅಲ್ಲಿಗೇ ಮುಗಿಯಲಿಲ್ಲ. ಒಂದು ಗೆಲುವು ತಂದ ಉಮೇದು ಮತ್ತೆ ಮತ್ತೆ ಅದರತ್ತಲೇ ಎಳೆಯಿತು. ಮಾದಕ ಅಥವಾ doping ಆತನ ಜೀವನದ ಭಾಗವಾಯಿತು. ಯಶಸ್ಸಿನ ಫಾರ್ಮುಲಾ ಎನಿಸಿತು. ಆತನ ಸುತ್ತ ಒಂದು ತಂಡವೇ ಇತ್ತು. ತನ್ನ ಸಹ ಸೈಕ್ಲಿಸ್ಟ್‌ಗಳನ್ನೂ ಈ ಜಾಲಕ್ಕೆ ಎಳೆದ ಆರೋಪವೂ ಇಂದು ಈತನ ಮೇಲಿದೆ.
Blood doping, performance enhancing drugs, Growth hormones ಇವೆಲ್ಲವುಗಳಿಗೆ ಈತನ ದೇಹ ಆತಿಥ್ಯ ನೀಡಿದೆ. ಆರ್ಮ್‌ಸ್ಟ್ರಾಂಗ್ ಈಗ ಮಾಡಿದ ತಪ್ಪೊಪ್ಪಿಗೆಯನ್ನು ಮೊದಲೇ ಮಾಡಬಹುದಿತ್ತು. ಆದರೆ ಯಶಸ್ಸು ಮತ್ತು ಹಣದ ಮದ ಆತನನ್ನು ಆಕ್ರಮಣಶೀಲನನ್ನಾಗಿ (bully) ಮಾಡಿತ್ತು. ಈತನ ವಿರುದ್ಧ ಗುಮಾನಿ ವ್ಯಕ್ತಪಡಿಸಿದವರನ್ನು, ಬೊಟ್ಟು ಮಾಡಿದವರನ್ನು ಹತ್ತಿಕ್ಕುವ, ಮಟ್ಟಹಾಕುವ, ಬೆದರಿಸುವ ಮಟ್ಟಕ್ಕೂ ಈತನ ಅಹಮಿಕೆ ವ್ಯಾಪಿಸಿತು. ಇಂದು ಆರ್ಮ್‌ಸ್ಟ್ರಾಂಗ್ ಕ್ಷಮಾದಾನಕ್ಕಾಗಿ ಬೇಡುತ್ತಿದ್ದಾನೆ. ಇನ್ನೊಮ್ಮೆ ಸೈಕಲ್ಲೇರಲು ಅವಕಾಶ ಕೊಡಿ ಎಂದು ಮೊರೆ ಇಡುತ್ತಿದ್ದಾನೆ. ತನ್ನ ಮೇಲೆ ಹೇರಲಾಗಿರುವ ಆಜೀವ ನಿಷೇಧದಲ್ಲಿ ರಿಯಾಯಿತಿ ನೀಡಿ ಎಂದು ಅಂಗಲಾಚುತ್ತಿದ್ದಾನೆ. ಅದನ್ನು ಈಡೇರಿಸುವುದು, ಬಿಡುವುದು ಸೈಕ್ಲಿಂಗ್ ಫೆಡರೇಷನ್ ಅಧಿಕಾರಿಗಳ ಮರ್ಜಿಯನ್ನು ಅವಲಂಬಿಸಿದೆ. ಒಪ್ರಾವಿನ್‌ಫ್ರಿಯ ಮುಂದೆ ಕಣ್ಣು ತೇವ ಮಾಡಿಕೊಂಡು 'ಸುಂದರ ಬದುಕು ನನ್ನದಾಗಿತ್ತು. ಆದರೆ ಈ ಸೌಂದರ್ಯದ ಹಿಂದೆ ಕರಾಳ ಮುಖವಿತ್ತು' ಎಂದು ಆರ್ಮ್‌ಸ್ಟ್ರಾಂಗ್ ಹೇಳಿದ. ಆ ಕರಾಳ ಮುಖದ ಹಿಂದೆ ಒಂದು ಮಿಡಿಯುವ ಹೃದಯವೂ ಇದೆ. ಅದೇ Livestrong
ಆರ್ಮ್‌ಸ್ಟ್ರಾಂಗ್ ಕ್ಯಾನ್ಸರ್‌ಗೆ ತುತ್ತಾಗಿ ಹೋರಾಟ ನಡೆಸುತ್ತಿದ್ದ ದಿನಗಳವು. ಈ ಕಾಯಿಲೆಯ ಬಗ್ಗೆ ಆತನಿಗೂ ಹೆಚ್ಚಿನ ಅರಿವಿರಲಿಲ್ಲ. ಇದ್ದದ್ದು ಬರೀ ಆತಂಕ ಮಾತ್ರ. ತನ್ನಂತೆಯೇ ಬಳಲುತ್ತಿರುವ ಅಸಂಖ್ಯ ಜನರೂ ಆತಂಕದಿಂದಲೇ ಬದುಕು ದೂಡುತ್ತಿದ್ದುದು, ಪ್ರತಿ ಥೆರಪಿ, ಪರೀಕ್ಷೆ, ತಪಾಸಣೆಯ ನಂತರ ಗಡ್ಡೆ ಕರಗಿದೆಯೇ ಇಲ್ಲವೇ, ಕ್ಯಾನ್ಸರ್ ಕ್ಷೀಣಿಸಿದೆಯೇ ಇಲ್ಲವೇ ಎಂದು ದುಗುಡದಿಂದಲೇ ಎದುರುನೋಡುತ್ತಿದ್ದುದು. ತನ್ನ ಬದುಕಿನಲ್ಲಿ ಬಂದ ಈ ಸ್ಥಿತಿಯಿಂದ ಹೊರಬರುವ ಹೋರಾಟವನ್ನು ತಾನೇ ರೂಪಿಸಿಕೊಳ್ಳಲು ಮುಂದಾದ ಆರ್ಮ್‌ಸ್ಟ್ರಾಂಗ್ ಕ್ಯಾನ್ಸರ್ ಕುರಿತ ಸಂಪೂರ್ಣ ತಿಳಿವಳಿಕೆ ಪಡೆದ. ಅಷ್ಟೇ ಅಲ್ಲದೆ ತನ್ನನ್ನೂ ಕಾಯಿಲೆಗೆ ತುತ್ತಾದವ(ವಿಕ್ಟಿಮ್) ಎಂದು ಭಾವಿಸುವ ಬದಲು ಅದರೊಂದಿಗೆ ಬದುಕುವ, ಅದನ್ನು ಸೋಲಿಸುವವ (ಸರ್ವೈವರ್) ಎಂದು ಭಾವಿಸಿದ್ದ. ಈ ಅರಿವನ್ನು ತನಗೇ ಸೀಮಿತಗೊಳಿಸಿಕೊಳ್ಳುವ ಬದಲು ತನ್ನಂತೆ ಅವಸ್ಥೆಪಡುವ ಎಲ್ಲ ಕ್ಯಾನ್ಸರ್ ರೋಗಿಗಳಿಗೆ ಪಸರಿಸಲು ಮುಂದಾದ. ಆಗ ಹುಟ್ಟಿದ್ದೇ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಫೌಂಡೇಷನ್. ಈ ಫೌಂಡೇಷನ್ ವತಿಯಿಂದ ಅನೇಕ ಸೈಕಲ್ ರ್ಯಾಲಿಗಳನ್ನು ನಡೆಸಿದ, ದಾನಿಗಳಿಂದ ಉದಾರ ದೇಣಿಗೆ ಬೇಡಿ ಪಡೆದ. ಕ್ಯಾನ್ಸರ್ ಪೀಡಿತರಿಗೆ ಅದನ್ನು ಹೇಗೆ ನಿಭಾಯಿಸಬಹುದು. ಅದರಿಂದ ಸಾಧ್ಯವಾದರೆ ಹೇಗೆ ಮುಕ್ತರಾಗಬಹುದು, ಒಂದು ವೇಳೆ ಅದು ಉಳಿದರೆ ಅದರೊಟ್ಟಿಗೆ ಹೇಗೆ ಬದುಕಬಹುದು ಎಂಬುದರ ಕುರಿತು ಮಾಹಿತಿ ನೀಡಲು ಮುಂದಾದ. ಕ್ರಮೇಣ ಈ ಫೌಂಡೇಷನ್ Livstron ಎಂದು ಹೊಸ ಅವತಾರ ಪಡೆಯಿತು. ಅಸಂಖ್ಯ ಕ್ಯಾನ್ಸರ್ ಪೀಡಿತರ ಮುಖದಲ್ಲಿ ಮಂದಹಾಸ ಮೂಡಿಸುವುದೇ ಇದರ ಧ್ಯೇಯ, ಉದ್ದೇಶವಾಯಿತು. ತೀರಾ ಇತ್ತೀಚೆಗೆ ಭಾರತದ ಕ್ರಿಕೆಟಿಗ ಯುವರಾಜ್ ಸಿಂಗ್ ಕ್ಯಾನ್ಸರ್ ಪೀಡಿತರಾಗಿ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದಾಗ ಮೊದಲು ಆತನಿಗೆ ಶಕ್ತಿ ತುಂಬಿದ್ದೇ ಆರ್ಮ್‌ಸ್ಟ್ರಾಂಗ್! ಇಂದು ಈತ fallen hero.ಈತನನ್ನು ಜರೆಯುವುದಕ್ಕೆ, ಜರೆಯುವವರಿಗೆ ವಿಷಯಗಳ ಕೊರತೆ ಇಲ್ಲ. ಇಂದು ವಿಶ್ವಕ್ರೀಡಾ ಕ್ಷೇತ್ರವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಸೈಕ್ಲಿಂಗ್‌ನಲ್ಲಿರುವಷ್ಟು doping menace (ಮಾದಕ ಶಾಪಗ್ರಸ್ತ) ಬೇರಾವ ಕ್ರೀಡೆಯಲ್ಲಿಯೂ ಇಲ್ಲ. ಶಕ್ತಿವರ್ಧಕ ಡ್ರಗ್ಸ್ ಬಳಕೆ ಸೈಕ್ಲಿಸ್ಟ್‌ಗಳಲ್ಲೇ ಹೆಚ್ಚಿರುವುದು. ಇಲ್ಲಿ ಇಡೀ ವ್ಯವಸ್ಥೆಯೇ ಇದರ ಪ್ರಭಾವಳಿಗೆ ಸಿಲುಕಿದೆ. 'I did'nt invent the culture(dope), but I did'nt try to stop the culture and that is my mistake and that is what I want to be sorry for' (ಈ ಸಂಪ್ರದಾಯ-ಮಾದಕ ವ್ಯಸನ- ನನ್ನಿಂದ ಆರಂಭವಾಗಿದ್ದಲ್ಲ. ಆದರೆ ಅದಕ್ಕೆ ತಡೆ ಹಾಕದಿದ್ದುದೇ ನಾನು ಮಾಡಿದ ತಪ್ಪು. ಈ ತಪ್ಪಿಗಾಗಿಯೇ ಇಂದು ನಾನು ಕ್ಷಮೆ ಕೇಳುತ್ತಿದ್ದೇನೆ) ಎಂದು ಆರ್ಮ್‌ಸ್ಟ್ರಾಂಗ್ ಹೇಳಿರುವುದರಲ್ಲಿ ಯಾವುದೇ ಮಿಥ್ಯೆ ಇಲ್ಲ. ತಾನೂ ಕೂಡ ಡೋಪಿಂಗ್ ಮಾಡಿದ್ದಾಗಿ ಟೆನಿಸ್ ಪಟು ಆಂಡ್ರೆ ಅಗಾಸಿ ಹೇಳಿಕೊಂಡಿದ್ದರೂ, ಆತ ಫಾಲನ್ ಹೀರೊ ಆಗಿಲ್ಲ. ಅನೇಕ ಅಥ್ಲೀಟ್‌ಗಳು ತಪ್ಪೊಪ್ಪಿಕೊಂಡು ಕೆಲ ಕಾಲದ ನಿಷೇಧದ ಬಳಿಕ ಮತ್ತೆ ಹಿಂತಿರುಗಿದ ಪ್ರಸಂಗಗಳಿವೆ. ಆದರೆ ಇಂದು ಆರ್ಮ್‌ಸ್ಟ್ರಾಂಗ್ ಭವಿಷ್ಯ ಮಂಕಾಗಿದೆ. ಆತನೇ ಸ್ಥಾಪಿಸಿದ Livstrongನಿಂದ ಆತನನ್ನು ಹೊರಹಾಕಲಾಗಿದೆ. ಪ್ರಾಯೋಜಕರು ಈತನಿಂದ ದೂರವಾಗಿದ್ದಾರೆ. ಇಡೀ ವ್ಯವಸ್ಥೆ ಈತನನ್ನು ಖಳನಾಯಕನಂತೆ ನೋಡುತ್ತಿದೆ. ಇಂದು ಈತನ ಬೆಂಬಲಕ್ಕೆ ನಿಂತಿರುವುದು Cancer Survivor ಗಳು ಮಾತ್ರ. 'Lance Contimues to be my hero. I don't know how they banned him, but he will always be an inspiration to me' ಎಂದು ಯುವರಾಜ್ ಸಿಂಗ್ ಸಹ ಆರ್ಮ್‌ಸ್ಟ್ರಾಂಗ್ ಬೆಂಬಲಕ್ಕೆ ನಿಂತಿದ್ದಾರೆ. ಆರ್ಮ್‌ಸ್ಟ್ರಾಂಗ್ ತಪ್ಪು ಮಾಡಿರುವುದು ನಿಜ, ಆದರೆ ಆತನನ್ನು ಇತಿಹಾಸದ ಪುಟಗಳಲ್ಲಿ foot note ಮಟ್ಟಕ್ಕೆ ತಳ್ಳುವ ಮೊದಲು ಕ್ಯಾನ್ಸರ್ ಜೊತೆಗಿನ ಆತನ ಒಡನಾಟ, ಮಿಡಿವ ಹೃದಯಕ್ಕೆ ಒಂದು ಥ್ಯಾಂಕ್ಸ್ ಹೇಳಲೇಬೇಕು.
Livstrong Lance!

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಸಮ್ಮತಿ, ಲೀಟರ್‌ಗೆ 8 ರೂ. ಏರಿಕೆ?

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ