ಅಂಕಣಗಳು

ನಮ್ಮ ಚಂದಮಾಮನ ಮೇಲೆ ರಕ್ತದ ಕಣಗಳಿವೆ...!

20 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಮುಸ್ಲಿಂ ಉಗ್ರವಾದಿಗಳ ಕ್ರೌರ್ಯಕ್ಕೆ ನಲುಗಿ 3,50,000 ಹಿಂದುಗಳು ತಾಯ್ನೆಲವನ್ನು ತೊರೆಯಬೇಕಾಯಿತು. 1989-1990ರ ಅವಧಿಯಲ್ಲಿ ನಡೆದ ಹಿಂಸಾಚಾರಕ್ಕೆ ಕಾಶ್ಮೀರಿ ಪಂಡಿತರು ಭಾರಿ ಸಂಖ್ಯೆಯಲ್ಲಿ ಮೃತರಾದರು.
ಹೀಗೆ ಸಾವನ್ನಪ್ಪಿದವರಲ್ಲಿ ಪತ್ರಕರ್ತ ರಾಹುಲ್ ಪಂಡಿತ ಅವರ ಸಹೋದರನೂ ಒಬ್ಬ. ರಾಹುಲ್ ಅವರ ಸಹೋದರ ಹಾಗೂ ಇನ್ನಿಬ್ಬರು ಪಂಡಿತರನ್ನು ಬಸ್‌ನಿಂದ ಹೊರಗೆಳೆದ ಉಗ್ರರು ಗುಂಡಿಕ್ಕಿ ಕೊಂದರು. ನಂತರ ಆಗಿನ್ನೂ ಚಿಕ್ಕವರಾಗಿದ್ದ ರಾಹುಲ್ ಪಂಡಿತ ಮತ್ತವರ ಕುಟುಂಬ ಕಾಶ್ಮೀರ ಕಣಿವೆಯಿಂದ ಕಾಲು ಕಿತ್ತಿತು.
ಈ ಘಟನೆಗಳ ಅನುಭವವನ್ನು ಹರವಿಡುವ ರಾಹುಲ್ ಪಂಡಿತ ಅವರ ಪುಸ್ತಕ 'ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್‌' ಹೊಸದೆಲ್ಲಿಯ ರ್ಯಾಂಡಮ್ ಹೌಸ್ ಪ್ರಕಾಶನದಿಂದ ಪ್ರಕಟಗೊಂಡಿದೆ. ತಮ್ಮ ಸಮುದಾಯ ಇನ್ನೆಂದೂ ತಾಯ್ನೆಲಕ್ಕೆ ಹಿಂತಿರುಗಲಾಗದ ಹತಾಶೆಯ ಬಗ್ಗೆ, ಪುಸ್ತಕದ ಒಡಲಿನ ಬಗ್ಗೆ ಅವರು ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿರುವ ಸಂದರ್ಶನದಲ್ಲಿ ಬೆಳಕು ಚೆಲ್ಲಿದ್ದಾರೆ.

ಪುಸ್ತಕ ಬರೆಯುವ ನಿರ್ಧಾರವನ್ನು ಈಗ ತೆಗೆದುಕೊಂಡಿದ್ದೇಕೆ?
ನನ್ನ ಮೊದಲ ಪುಸ್ತಕ ಈ ವಿಷಯದ್ದೇ ಆಗಿರಬೇಕು ಎಂಬುದು ನನ್ನ ಒತ್ತಾಸೆಯಾಗಿತ್ತು ಹಾಗೂ ಈ ಉದ್ದೇಶಕ್ಕಾಗಿಯೇ ನಾನು ಬರಹಗಾರ ಮತ್ತು ಪತ್ರಕರ್ತನಾಗಿದ್ದು. 1993-1996ರ ಅವಧಿಯಲ್ಲಿ ನಾನು ಕಾಲೇಜು ವ್ಯಾಸಂಗ ಮಾಡುತ್ತಿರುವಾಗಲೇ ಈ ಬಗ್ಗೆ ಯೋಚಿಸಿದ್ದೆ. ಆದರೆ ಆಗಿನ್ನೂ ಬರಹಗಾರ, ಪತ್ರಕರ್ತನಾಗಿ ಗುರುತಿಸಿಕೊಂಡಿರಲಿಲ್ಲ. ನನ್ನ ಭಾಷೆಯೂ ಬಹಳ ಕಚ್ಚಾ ಹಾಗೂ ಗಡುಸಾಗಿತ್ತು.
2000ನೇ ಇಸ್ವಿ ನಂತರವಷ್ಟೇ ನಾನು ಈ ಪುಸ್ತಕವನ್ನು ಗಂಭೀರವಾಗಿ ಬರೆಯತೊಡಗಿದೆ. ಆದರೆ ಇದರಲ್ಲಿ ವೈಯಕ್ತಿಕ ಚರಿತ್ರೆ ಇದ್ದ ಕಾರಣ ಬರೆಯುವುದು ಕಷ್ಟಕರವೇ ಆಗಿತ್ತು. ಕೆಲ ಹಂತಗಳಲ್ಲಿ ಇದೇಕೋ ಸಾಧ್ಯವಾಗದೆಂದೆನಿಸಿ ನಿಲ್ಲಿಸಿದ್ದಿದೆ. ಅಲ್ಲದೇ ಅದಕ್ಕೆ ಯಾವ ಧ್ವನಿ ಬರಬೇಕು ಎಂಬುದರ ಬಗ್ಗೆ ಗೊಂದಲವಿತ್ತು. 2005-06ರ ಅವಧಿಯಲ್ಲಿ ನಾನು ಮಾವೋವಾದಿ ಚಳವಳಿ ಕುರಿತ 'ಹಲೋ ಬಸ್ತಾರ್‌' ಬರೆದು ಮುಗಿಸಿದ್ದಲ್ಲದೇ 'ಅಬ್ಸೆಂಟ್ ಸ್ಟೇಟ್‌' ಎಂಬ ಇನ್ನೊಂದು ಪುಸ್ತಕಕ್ಕೂ ಸಹವರ್ತಿ ಲೇಖಕನಾಗಿದ್ದೆ. ಈ ಪುಸ್ತಕದ ಯೋಚನೆ ಯಾವತ್ತೂ ನನ್ನ ತಲೆಯಲ್ಲಿ ಇದ್ದೇ ಇತ್ತು. ಈ ನಡುವೆ ನಾವು ಕಾಶ್ಮೀರ ತೊರೆಯಬೇಕಾದ ಪರಿಸ್ಥಿತಿ ಬಗ್ಗೆ ಕೆಲ ಸುಳ್ಳುಗಳನ್ನು ಹರಡುತ್ತಿರುವುದು ಗಮನಕ್ಕೆ ಬಂತು.

  ಯಾವವು ಆ ಅಸತ್ಯಗಳು?
ಕಾಶ್ಮೀರಿ ಪಂಡಿತರ ವಲಸೆಗೆ ಭಾರತ ಸರ್ಕಾರವೇ ಕಾರಣವಾಯಿತು ಎಂಬ ಸುಳ್ಳು ವಾದ. ಆಗಿನ ರಾಜ್ಯಪಾಲ ಜಗಮೋಹನ್ ಅವರು ಸೇರಿದಂತೆ ಸರ್ಕಾರವು ಮುಸ್ಲಿಮರೊಂದಿಗೆ ಕಠಿಣವಾಗಿ ವರ್ತಿಸುವುದಕ್ಕೆ ಯೋಜಿಸಿತ್ತು;ಅದಕ್ಕೆ ಕಾಶ್ಮೀರಿ ಪಂಡಿತರ ವಲಸೆಯನ್ನು ಬಳಸಿಕೊಂಡಿತು ಎಂಬ ಸುಳ್ಳನ್ನು ಪ್ರಚುರಪಡಿಸುವುದರಲ್ಲಿ ಕೆಲವರು ತೊಡಗಿಕೊಂಡಿದ್ದಾರೆ. ಆದರೆ ವಾಸ್ತವವೆಂದರೆ ಆ ಅವಧಿಯಲ್ಲಿ ಕಾಶ್ಮೀರದ ಎರಡು ಪ್ರಮುಖ ಸಮುದಾಯಗಳಾದ ಮುಸ್ಲಿಂ ಮತ್ತು ಕಾಶ್ಮೀರಿ ಪಂಡಿತರ ನಡುವೆ ಕಂದಕ ಉಂಟಾಯಿತು. ಕಾಶ್ಮೀರಿ ಪಂಡಿತರು ಅತ್ಯಂತ ಅಮಾನುಷವಾದ ಜನಾಂಗೀಯ ಮೂಲೋತ್ಪಾಟನೆಯ ಬಲಿಪಶುಗಳಾದರು. ಈ ಮೂಲೋತ್ಪಾಟನೆಯನ್ನು ಇಸ್ಲಾಂ ಉಗ್ರರ ಸಹಾಯದೊಂದಿಗೆ ಮುಸ್ಲಿಂ ಸಮುದಾಯ ಮುನ್ನಡೆಸಿತು. ಈ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕಾಗುತ್ತದೆ.

  ಭಾರತ-ಪಾಕಿಸ್ತಾನಗಳ ನಡುವಿನ 65 ವರ್ಷಗಳ ಜಗಳವನ್ನು ಬಗೆಹರಿಸುವ ರಾಜಕೀಯ ಯತ್ನದಲ್ಲಿ ಕಾಶ್ಮೀರಿ ಪಂಡಿತರಿಗೆ ಮೋಸ ಮಾಡಲಾಗಿದೆ ಎಂದು ಅನಿಸುತ್ತಿದೆಯೇ?
ಈ ಸಂಘರ್ಷದಲ್ಲಿ ಆದ ನಿಜವಾದ ವಿದ್ರೋಹವೆಂದರೆ ಬಹುಸಂಖ್ಯಾತರಿಂದ ಆಗಿದ್ದು. 1989-90ರಲ್ಲಿ ನಾವು ಹಿಂಸಾಚಾರಕ್ಕೆ ಒಳಗಾಗಿದ್ದಕ್ಕೆ ಮುಖ್ಯ ಕಾರಣಗಳು ಎರಡು: ನಾವು ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದೆವು ಹಾಗೂ ಧರ್ಮದ ಗುರುತನ್ನು ಎತ್ತಿ ಹಿಡಿದೆವು. ಆದರೆ ಬಲವಂತದ ವಲಸೆಗೆ ಒಳಗಾಗುತ್ತಿದ್ದಂತೆ ಅಂದಿನ ರಾಜೀವ್ ಗಾಂಧಿ ಸರ್ಕಾರದಿಂದ ಇಂದಿನ ಆಡಳಿತ ವ್ಯವಸ್ಥೆಯವರೆಗೂ ಕಾಶ್ಮೀರಿ ಪಂಡಿತರ ಹಕ್ಕುಗಳನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಇವತ್ತು ಸಾವಿರಾರು ಕಾಶ್ಮೀರಿ ಪಂಡಿತರು ನಿರಾಶ್ರಿತ ಶಿಬಿರಗಳಲ್ಲಿ ಕೊಳೆಯುತ್ತಿದ್ದಾರೆ. ಯೋಜನಾ ಆಯೋಗದ ಹಾಸ್ಯಾಸ್ಪದ ಬಡತನ ರೇಖೆಯ ವ್ಯಾಖ್ಯಾನಕ್ಕಿಂತಲೂ ಘೋರವಾದ ಪರಿಸ್ಥಿತಿಯಲ್ಲಿ ಹಲವರು ಬದುಕುತ್ತಿದ್ದಾರೆ. ನನ್ನ ಭಯ ಏನೆಂದರೆ, ಅಧಿಕಾರದಲ್ಲಿರುವವರು ಇನ್ನು ಕೆಲ ವರ್ಷಗಳಲ್ಲಿ ಇವರೆಲ್ಲ ಬಲವಂತದಿಂದ ಕಾಶ್ಮೀರಕ್ಕೆ ಹೋಗಿ ಬದುಕುವಂತೆ ಮಾಡಬಹುದು ಎಂಬುದು.  

  ಈ ವಿಷಯದ ಬಗ್ಗೆ ಹಿಂದು ರಾಷ್ಟ್ರವಾದದ ಆರೆಸ್ಸೆಸ್ ನಿಮ್ಮನ್ನು ಜತೆ ಸೇರಿಸಿಕೊಳ್ಳಲು ಬಯಸಿತು. ಆದರೆ ನಿಮ್ಮ ಪಾಲಕರು ಅದಕ್ಕೆ ವಿರೋಧಿಸಿದರು. ನವೆಂಬರ್‌ನಲ್ಲಿ ಹಿಂದು ನಾಯಕ ಎಂದು ಗುರುತಿಸಿಕೊಂಡಿರುವ ಬಾಳಾ ಠಾಕ್ರೆ ತೀರಿಕೊಂಡಾಗ, ಅವರು ಪಂಡಿತರಿಗೆ ಸಹಕರಿಸಿದ್ದರು ಎಂಬ ಟ್ವೀಟ್ ಸಂದೇಶಗಳಿಗೆ ನೀವೂ ಗಮನದ ಮುದ್ರೆ ಒತ್ತಿದ್ದಿರಿ. ಹಿಂದು ಬಲಪಂಥೀಯರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಒಬ್ಬ ಪತ್ರಕರ್ತನಾಗಿ, ಬರಹಗಾರನಾಗಿ ಯಾವುದೇ ತೀವ್ರವಾದಿ ಸಿದ್ಧಾಂತವನ್ನು ನಾನು ವಿರೋಧಿಸುತ್ತೇನೆ. ಕಾಶ್ಮೀರಿ ಪಂಡಿತರ ವ್ಯಥೆಯ ಕತೆಗೆ ಬಲಪಂಥೀಯ ಬಣ್ಣ ಕಟ್ಟುವ ಯತ್ನ ಮೊದಲಿನಿಂದಲೂ ಇದೆ. ನಾನು ಆ ಹಣೆಪಟ್ಟಿಯಿಂದ ಹೊರಗಿರುವುದಕ್ಕೆ ಬಯಸುತ್ತೇನೆ. ಎಲ್ಲ ಕಾಶ್ಮೀರಿ ಪಂಡಿತರೂ ಆರೆಸ್ಸೆಸ್ ಬೆಂಬಲಿಸುವವರಲ್ಲ. ಬೆಂಬಲಿಸಿದರೂ ಅದು 1989-90ರಲ್ಲಾದ ವಿದ್ಯಮಾನವನ್ನು ಸುಳ್ಳಾಗಿಸುವುದಿಲ್ಲ. ಠಾಕ್ರೆ ಅವರಿಗೆ ವೈಯಕ್ತಿಕ ನೆಲೆಯಲ್ಲಿ ನಾನು ಕೃತಜ್ಞ. ಏಕೆಂದರೆ ಅವರು ನೀಡಿದ ಬೆಂಬಲಕ್ಕೆ ನಮ್ಮ ಇಡೀ ಸಮುದಾಯ ಕೃತಜ್ಞವಾಗಿರಬೇಕು ಎಂಬುದು ನನ್ನ ಅನಿಸಿಕೆ. ಅವರ ವೈಯಕ್ತಿಕ ರಾಜಕಾರಣ ನನಗೇನೂ ಒಪ್ಪಿಗೆ ಇಲ್ಲ.

  ಬಾಳಾ ಠಾಕ್ರೆ ಅವರು ಕಾಶ್ಮೀರಿ ಪಂಡಿತರ ಸಮುದಾಯಕ್ಕೆ ಯಾವ ರೀತಿ ಸಹಾಯ ಒದಗಿಸಿದರು?
ಮಹಾರಾಷ್ಟ್ರದ ಕಾಲೇಜುಗಳಲ್ಲಿ ಸ್ವಲ್ಪಮಟ್ಟದ ಮೀಸಲು ವ್ಯವಸ್ಥೆಯೊಂದನ್ನು ನಮಗಾಗಿ ನೀಡಿ ಎಂದು ಸಮುದಾಯದ ಕೆಲ ನಾಯಕರು ಅವರನ್ನು ಕೇಳಿಕೊಂಡಿದ್ದರು. ಏಕೆಂದರೆ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯ ನೀಡುವ ಸಮುದಾಯ ನಮ್ಮದು. ಆ ಬೇಡಿಕೆಯೇ ನಮ್ಮಲ್ಲಿ ಅನೇಕರಿಗೆ ಅವಕಾಶದ ಬಾಗಿಲುಗಳನ್ನು ತೆರೆಯಿತು. ಮಹಾರಾಷ್ಟ್ರದ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ನಾವು ಪ್ರವೇಶ ಪಡೆದೆವು. ನಮ್ಮ ಸಮುದಾಯದ ಅನೇಕರು ತಮ್ಮ ಕಾಲ ಮೇಲೆ ನಿಂತುಕೊಳ್ಳುವುದಕ್ಕೆ ಅದೇ ಕಾರಣ.

  ಕಾಶ್ಮೀರಿ ಪಂಡಿತರಿಗೆ ಉತ್ತಮ ಭವಿಷ್ಯದ ಬಗ್ಗೆ ಭರವಸೆ ಇನ್ನೂ ಇದೆಯೇ? ಶಾಶ್ವತವಾಗಿ ನಿರಾಶ್ರಿತರಾಗಿಯೇ ಬದುಕಬೇಕಾಗುತ್ತದೆ ಎಂಬ ಹತಾಶೆ ಕಾಡುತ್ತಿದೆಯೇ?
ಭಾರತ ಸರ್ಕಾರದ ಕಡೆಯಿಂದ ಯಾವುದೇ ಭರವಸೆ ಅಸಾಧ್ಯ ಎಂದೇ ಅನಿಸುತ್ತಿದೆ. ಪರಿಹಾರ ಬಂದರೆ ಕಾಶ್ಮೀರ ಕಣಿವೆಯಿಂದಲೇ ಬರಬೇಕಾಗುತ್ತದೆ. ಸದ್ಯಕ್ಕೆ ಅಂಥ ಯಾವ ಸಾಧ್ಯತೆಗಳೂ ಇಲ್ಲ. ಪುಸ್ತಕ ಬರೆಯುವಾಗಲೂ ಈ ಬಗ್ಗೆ ಯೋಚಿಸುತ್ತಿದ್ದೆ. ನನ್ನ ಪೀಳಿಗೆ ಬಹಳ ಆರ್ಥಿಕ ಅಭದ್ರತೆ ಎದುರಿಸಿತು. ಉನ್ನತ ಶಿಕ್ಷಣ ಪಡೆಯುವುದಕ್ಕಾಗಲಿಲ್ಲ. ಎರಡು ಬೆಡ್‌ರೂಮ್ ಮನೆಯಿಂದ ಮೂರು ಬೆಡ್‌ರೂಮ್‌ಗಳ ಮನೆಗೆ ಹೋಗುವುದೇ ಈ ಪೀಳಿಗೆಯ ಅತಿದೊಡ್ಡ ಸಫಲತೆ ಎಂಬಂತಾಗಿತ್ತು. ಆದರೆ, ನಾನು ಪುಸ್ತಕ ಬರೆಯುವ ಸಂದರ್ಭದಲ್ಲಿ ಜಮ್ಮುವಿಗೆ ಭೇಟಿ ನೀಡಿದ್ದೆ. ನಮ್ಮ ಮುಂದಿನ ಪೀಳಿಗೆಯಲ್ಲಿ ಕಂಡುಬರುತ್ತಿರುವ ದೃಢಮನಸ್ಥಿತಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಈ ದೇಶದ ಬೌದ್ಧಿಕ ವರ್ಗ ನಮ್ಮ ನೋವಿನ ಕತೆಯತ್ತ ನೋಡುತ್ತಲೇ ಇಲ್ಲವಾದ್ದರಿಂದ ನಾವು ನಮ್ಮಷ್ಟಕ್ಕೇ ಎದ್ದುನಿಂತು ನಮ್ಮ ಕಥನವನ್ನು ಹೇಳಿಕೊಳ್ಳಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ