ಅಂಕಣಗಳು

ರಬ್ಬರ್ ಸ್ಟ್ಯಾಂಪ್ ಆಗಿರುವ ಸ್ಪೀಕರ್ ಕಚೇರಿ!

ಶಾಸಕರ ರಾಜಿನಾಮೆ ಪರ್ವದಲ್ಲಿ ಸ್ಪೀಕರ್ ಬೋಪಯ್ಯನವರು ಈವರೆಗೆ ತೋರಿದ ವರ್ತನೆಯಿಂದ ಅವರು ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡರು ಅಥವಾ ಬಿಜೆಪಿ ಅವರನ್ನು ದುರ್ಬಳಕೆ ಮಾಡಿಕೊಂಡಿತು ಎಂದು ಅನಿಸುತ್ತಿದೆಯೇ ?
ಅವರು ತಮ್ಮ ಹುದ್ದೆ ದುರುಪಯೋಗಪಡಿಸಿಕೊಂಡರೋ ಇಲ್ಲವೋ ಎಂಬುದಕ್ಕೆ ನನ್ನ ಬಳಿ ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲ. ರಾಜಿನಾಮೆ ಕೊಡಬಯಸಿದ ಶಾಸಕರು ಸಭಾಧ್ಯಕ್ಷರ ಭೇಟಿಗೆ ಪೂರ್ವಾನುಮತಿ ಕೇಳಿದ್ದರೋ ಇಲ್ಲವೋ ಗೊತ್ತಿಲ್ಲ. ಒಂದೊಮ್ಮೆ ಸಮಯ ನಿಗದಿಪಡಿಸಿದ್ದು, ಶಾಸಕರು ಅವರ ಕಚೇರಿಗೆ ಬಂದಾಗ ಅವರು ಎಲ್ಲಿದ್ದಾರೆ ಎಂಬುದು ಗೊತ್ತಾಗದೇ ಮಾಹಿತಿ ಕೇಳಿದಾಗ ಕೊಡದಿದ್ದರೆ ಅದು ತಪ್ಪು. ಸ್ಪೀಕರ್ ಕಚೇರಿಗೆ ಅದರದ್ದೇ ಆದ ಮಹತ್ವವಿದೆ. ಸ್ಪೀಕರ್ ಯಾವಾಗಲೂ ಆಪ್ತಕಾರ್ಯದರ್ಶಿಯನ್ನು ಹೊಂದಿರಬೇಕು. ಒಂದುವೇಳೆ ಸ್ಪೀಕರ್ ಕಚೇರಿಯಲ್ಲಿರದಿದ್ದರೆ, ಅವರ ಆಪ್ತ ಕಾರ್ಯದರ್ಶಿಗಳಿಗೆ ಆ ಪತ್ರವನ್ನು ಸ್ವೀಕರಿಸಿ 'ತುರ್ತು ಕಾಗದ ಪತ್ರಗಳಿವೆ. ಇದನ್ನು ತಮಗೆ ಕಳುಹಿಸಬೇಕೆಂದು ಕೋರುತ್ತಿದ್ದಾರೆ' ಎಂದು ಹೇಳುವ ಅಧಿಕಾರ ಇರುತ್ತದೆ. ಈ ಪ್ರಕರಣದಲ್ಲಿ ಸ್ಪೀಕರ್ ಅವರ ಆಪ್ತಕಾರ್ಯದರ್ಶಿ ಅಂದು ಲಭ್ಯರಿದ್ದರೇ? ಇಲ್ಲವೇ? ಎಂಬುದು ನಮಗೆ ಗೊತ್ತಿಲ್ಲ. ಪೂರ್ವಾನುಮತಿ ಇತ್ತೋ, ಇಲ್ಲವೋ ಗೊತ್ತಿಲ್ಲ. ಆಪ್ತ ಕಾರ್ಯದರ್ಶಿ ಅಲಭ್ಯರಿದ್ದರೋ ಎಂಬುದೂ ಗೊತ್ತಿಲ್ಲ. ಸ್ಪೀಕರ್ ಪಬ್ಲಿಕ್ ಸರ್ವೆಂಟ್ ಆಗಿರುವುದರಿಂದ ಅವರು ಎಲ್ಲಿ ಹೋದರೂ ತಮ್ಮ ಇರುವಿಕೆಯನ್ನು ಗೊತ್ತುಪಡಿಸಬೇಕು. ಏಕೆಂದರೆ ಅದಕ್ಕಾಗಿ ರಾಜ್ಯದ ಬೊಕ್ಕಸದಿಂದ ಹಣ ಖರ್ಚು ಮಾಡುತ್ತೇವೆ. ಖಾಸಗಿ ಕೆಲಸಕ್ಕೆ ಬೇಕಾದರೂ ಸ್ಪೀಕರ್ ತೆರಳಬಹುದು. ಆ ಸಂದರ್ಭದಲ್ಲೂ ಅವರು ಸ್ವದೇಶದಲ್ಲಿದ್ದಾರೋ, ವಿದೇಶದಲ್ಲಿದ್ದಾರೋ ಎಂಬುದನ್ನು ತಿಳಿಸಬೇಕಾಗುತ್ತದೆ. ಆದರೆ ಇಲ್ಲಿ ಮಾಧ್ಯಮಗಳು ಬಿಂಬಿಸಿದ ಪ್ರಕಾರ, ಬೋಪಯ್ಯ ಎಲ್ಲಿ ಹೋಗಿದ್ದಾರೆ ಎಂದು ಹೇಳುವವರೇ ಇರಲಿಲ್ಲ. ಇದು ತಪ್ಪು ಎನ್ನುವುದು ನನ್ನ ಭಾವನೆ.

 ಹಾಗಾದರೆ ನೀವು ಈಗ ಹೇಳಿದ ಎಲ್ಲ ಚಿತ್ರಣಗಳು ನಿಜವಾಗಿದ್ದರೆ?
ಒಂದೊಮ್ಮೆ ಆ ಎಲ್ಲ ಚಿತ್ರಣಗಳು ನಿಜವಾಗಿದ್ದರೆ ಅದು ಸ್ಪೀಕರ್ ಕಚೇರಿಗೆ ಗೌರವ ತರುವಂಥದ್ದಲ್ಲ. ಮುಖ್ಯ ಅಂಶವೆಂದರೆ ವಿಧಾನಮಂಡಲದ ಜಂಟಿ ಅಧಿವೇಶನ ಜನವರಿ ಮೊದಲ ವಾರದಲ್ಲಿ ಆರಂಭವಾಗುತ್ತದೆ. ನಮ್ಮ ನಿಯಮದ ಪ್ರಕಾರ ಶಾಸನಸಭೆಯಲ್ಲಿ ಕ್ಯಾಲೆಂಡರ್ ವರ್ಷ ಆರಂಭವಾಗುವುದು ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದೊಂದಿಗೆ. ಅದು ಕ್ಯಾಬಿನೆಟ್‌ನ ಮೊದಲ ಕಾರ್ಯಕ್ರಮ. ಅಧಿವೇಶನವನ್ನು ಕರೆಯುವ ಅಧಿಕಾರ ಇರುವುದು ಸಂಪುಟ ಸಭೆಗೆ ಮಾತ್ರ. ಮತ್ತು ಈ ನಿರ್ಧಾರವನ್ನು ಸರ್ಕಾರ ಮೊಟ್ಟಮೊದಲು ಸ್ಪೀಕರ್‌ಗೆ ತಿಳಿಸಬೇಕು. ನಂತರ ವಿಧಾನ ಪರಿಷತ್ ಸಭಾಪತಿಗಳಿಗೆ ನೀಡಬೇಕು. ಇವರಿಬ್ಬರೂ ಜತೆಯಾಗಿ ಹೋಗಿ ರಾಜ್ಯಪಾಲರನ್ನು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಹ್ವಾನಿಸಬೇಕು. ಇದು ಪದ್ಧತಿ. ಇಲ್ಲಿ ಜ.4ಕ್ಕೆ ರಾಜ್ಯಪಾಲರ ಜಂಟಿ ಅಧಿವೇಶನವಿದೆ, ಜ.8ಕ್ಕೆ ಬಜೆಟ್ ಮಂಡನೆಯಾಗುತ್ತದೆ ಎಂಬುದು ಸ್ಪೀಕರ್‌ಗೆ ಗೊತ್ತು. ಮಾತ್ರವಲ್ಲ, ಆಡಳಿತ ಪಕ್ಷದಲ್ಲಿ ಬಿಕ್ಕಟ್ಟಿದೆ ಎಂಬುದು ಇಡೀ ಜಗತ್ತಿಗೇ ಗೊತ್ತು. ಹೀಗಿರುವಾಗ ಸ್ಪೀಕರ್ ನನಗೇನೂ ಗೊತ್ತಿಲ್ಲ ಎಂದು ಹೇಳುವುದಾಗಲಿ, ಯಾರ ಕೈಗೂ ಸಿಗದೇ ಹೋಗುವುದನ್ನು ಸರಿ ಎಂದು ಹೇಳಲು ಸಾಧ್ಯವೇ? ಪ್ರತಿಯೊಬ್ಬ ಮನುಷ್ಯನೂ ಒಂದು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾನೆ. ಉದಾಹರಣೆಗೆ ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕ. ಆತ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಕೆಲಸ ಮಾಡಬೇಕು. ಹೊರ ಹೋಗಬೇಕಿದ್ದರೆ ರಜೆ ಹಾಕಬೇಕು. ಆದರೆ ಇಲ್ಲಿ ಆ ರೀತಿ ಆಗಿಲ್ಲ. ಮನೆಗೆ ಹೋದರೆ ಗೊತ್ತಿಲ್ಲ ಅಂತಾರೆ.
ಕಚೇರಿಗೆ ಬಂದರೆ ಇಲ್ಲ ಅಂತಾರೆ. ಇಂಥ ಪರಿಸ್ಥಿತಿಯನ್ನು ನಾವು ಏನೆಂದು ಅರ್ಥೈಸಬೇಕು ?
 ಅಂದರೆ ಸ್ಪೀಕರ್ ವರ್ತನೆ ಈ ಪ್ರಕರಣದಲ್ಲಿ ಗೌರವಯುತವಾಗಿರಲಿಲ್ಲ ಎಂಬುದು ನಿಮ್ಮ ಭಾವನೆ ಅಲ್ವಾ ?
ಸ್ಪೀಕರ್‌ಗೆ, ವಿಧಾನ ಪರಿಷತ್ ಸಭಾಪತಿಗಳಿಗೆ, ಹೈಕೋರ್ಟ್ ನ್ಯಾಯಾಧೀಶರಿಗೆ, ರಾಜ್ಯಪಾಲರಿಗೆ ನೀಡುವ ಸಂಬಳ, ಸಾರಿಗೆ ಇತ್ಯಾದಿ ವೆಚ್ಚವನ್ನು ನಾವು ಸದನದಲ್ಲಿ ಚರ್ಚೆ ಮಾಡುವುದಿಲ್ಲ. ಆದರೆ ಮುಖ್ಯಮಂತ್ರಿಗಳಿಗೆ ಈ ಗೌರವ ಇಲ್ಲ. ಮುಖ್ಯಮಂತ್ರಿ ವಿಮಾನದಲ್ಲಿ ಏಕೆ ಹೋದರು, ಕಾರಿನಲ್ಲಿ ಯಾಕೆ ಪ್ರಯಾಣಿಸಿದರು ಇತ್ಯಾದಿ ವಿವರವನ್ನು ನಾವು ಪ್ರಶ್ನೆ ಮಾಡುತ್ತೇವೆ. ಅಂದರೆ ಸ್ಪೀಕರ್ ಸ್ಥಾನಕ್ಕೆ ಅಷ್ಟು ಗೌರವ ನೀಡುತ್ತೇವೆ. ಬಹಳ ಗೌರವಾನ್ವಿತ ವ್ಯಕ್ತಿಗಳು ಆ ಸ್ಥಾನ ಅಲಂಕರಿಸಿರುವುದರಿಂದ ಅಂಥ ವ್ಯಕ್ತಿಗಳು ಅನಗತ್ಯವಾಗಿ ಖರ್ಚು ಮಾಡುವುದಿಲ್ಲ ಎಂಬ ದೃಢ ನಂಬಿಕೆಯೇ ಇದಕ್ಕೆ ಆಧಾರ. ಒಂದು ಅಪರಾಧ ಸಂಭವಿಸಿದೆ ಎಂದು ಇಟ್ಟುಕೊಳ್ಳಿ. ಪೊಲೀಸರು ನಿಮ್ಮ ಮನೆಗೆ ಬಂದಾಗ ನೀವು ಇರುವುದಿಲ್ಲ. ಕಚೇರಿಯಲ್ಲೂ ಇರುವುದಿಲ್ಲ. ಆಗ ಪೊಲೀಸರು ನಿಮ್ಮನ್ನು ಏನೆಂದು ಕರೆಯುತ್ತಾರೆ? ಸಾಮಾನ್ಯವಾಗಿ ಅಬ್‌ಸ್ಕಾಂಡಿಂಗ್ ಎನ್ನುತ್ತಾರೆ. ದಯಮಾಡಿ ಪದಕೋಶ ತೆಗೆದು ನೋಡಿ ಆ ಪದ ಕ್ರಿಮಿನಾಲಿಟಿಯೊಂದಿಗೆ ಅಟ್ಯಾಚ್ಡ್ ಆಗಿದೆ. ಮಾಧ್ಯಮಗಳಲ್ಲಿ ಸ್ಪೀಕರ್ ಬಗ್ಗೆ ಇಂಥದೊಂದು ವಿಮರ್ಶೆ ವ್ಯಕ್ತವಾಗುತ್ತಿರುವಾಗ ಸಾಮಾನ್ಯ ಜನರಿಗೆ ಈ ಸದನದಲ್ಲಿ, ಸಭಾಧ್ಯಕ್ಷರ ಪೀಠದಲ್ಲಿ ಏನು ಗೌರವ ಉಳಿಯುತ್ತದೆ.

 ಇಷ್ಟರ ಮಧ್ಯೆಯೂ ಬೋಪಯ್ಯನವರು ಎಡವಿದರು ಎಂದು ನಿಮಗೆ ಸ್ಪಷ್ಟವಾಗಿ ಅನ್ನಿಸುತ್ತಿಲ್ಲವಾ?
ಸ್ಪೀಕರ್ ಸ್ಥಾನ ಬಹಳ ಗೌರವಯುತವಾದದ್ದು. ಇಲ್ಲಿ ಕುಳಿತವರು ಸಾಧ್ಯವಾದರೆ ಹುದ್ದೆ ಗೌರವವನ್ನು ಹೆಚ್ಚಿಸಬೇಕೇ ಹೊರತು, ಕೆಡಿಸಬಾರದು. ಅದರ ಪಾವಿತ್ರ್ಯಕ್ಕೆ, ಘನತೆಗೆ ಕುಂದುಂಟು ಮಾಡಬಾರದು. ಅದೆಷ್ಟೋ ಜನ ಕಷ್ಟಪಟ್ಟು ನಮ್ಮ ಜನತಂತ್ರ ವ್ಯವಸ್ಥೆಯನ್ನು ಬಿಲ್ಡ್ ಅಪ್ ಮಾಡಿದ್ದಾರೆ. ನಾನು ಯಾವುದೇ ಒಂದು ಪಕ್ಷಕ್ಕೆ ಸಂಬಂಧಿಸಿ ಈ ಮಾತು ಹೇಳುತ್ತಿಲ್ಲ. ಎಲ್ಲ ಪಕ್ಷದವರೂ ಸ್ಪೀಕರ್ ಕಚೇರಿಯನ್ನು ರಬ್ಬರ್ ಸ್ಟ್ಯಾಂಪ್ ಥರ ಬಳಸಿಕೊಳ್ಳುತ್ತಿದ್ದಾರೆ. ಸ್ಪೀಕರ್ ಹುದ್ದೆಗೆ ಬಂದವನಿಗೂ ಒಂದು ಮನಸ್ಥಿತಿ ಇರಬೇಕು. ಮಂತ್ರಿ ಸ್ಥಾನ ಕೊಟ್ಟಿಲ್ಲ. ಅದಕ್ಕೆ ಈ ಹುದ್ದೆ ಒಂದು ಅಕಮಡೇಷನ್ ಎಂದು ಭಾವಿಸಿಕೊಳ್ಳಬಾರದು. ಸ್ಪೀಕರ್ ಆದಂಥವರಿಗೆ ಅವರದೇ ಆದ ಸ್ಥಾನವಿದೆ. ವೈಕುಂಠಬಾಳಿಗ, ಎಸ್.ಎಂ.ಕೃಷ್ಣ, ಕೆ.ಎಚ್.ರಂಗನಾಥ್‌ರಂಥವರು ಈ ಹುದ್ದೆಗೆ ಘನತೆ ತಂದುಕೊಟ್ಟಿದ್ದಾರೆ. ಆದರೆ ಪ್ರಸ್ತುತ ಬೆಳವಣಿಗೆ ಹಾಗೂ ಅದರ ಬಗ್ಗೆ ಮಾಧ್ಯಮದಲ್ಲಿ ಪ್ರಕಟವಾಗುತ್ತಿರುವ ವರದಿಗಳನ್ನು ನೋಡಿದಾಗ ಮಾನ್ಯ ಬೋಪಯ್ಯನವರು ಎಡವಿದರೇನೋ ಎಂದು ನನಗೆ ಅನ್ನಿಸುತ್ತಿದೆ. ಜತೆಗೆ ನಾವು ಆತುರ ಬಿದ್ದು ತಪ್ಪು ಮಾಡಿದರೆ ಜನರೆದರು ಆಜನ್ಮ ಅಪರಾಧಿಗಳಾಗಿ ಬಿಡುತ್ತೇವೆ. ಹೀಗಾಗಿ ಬೋಪಯ್ಯನವರು ಇನ್ನೂ ಹೆಚ್ಚಿನ ಜಾಗೃತಿ ವಹಿಸಬೇಕಾಗಿತ್ತೇನೋ ಎಂಬುದು ನನ್ನ ವೈಯಕ್ತಿಕ ಭಾವನೆ.
 ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸ್ಪೀಕರ್ ಹುದ್ದೆ ಪವಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಸಂವಿಧಾನ ಮತ್ತು ಶಾಸನಾತ್ಮಕ ಅಧಿಕಾರವಿದೆ. ಇಷ್ಟರ ಮಧ್ಯೆಯೂ ತಪ್ಪುಗಳಾಗುವುದನ್ನು ತಡೆಯುವುದಕ್ಕೆ ಆತ್ಮಸಾಕ್ಷಿಯೊಂದೇ ಪರಿಹಾರವೇ ಅಥವಾ ಬೇರೆ ಕಾನೂನೂ ಬೇಕಾ ?
ಆತ್ಮಸಾಕ್ಷಿಯೊಂದೇ ಪರಿಹಾರ. ಈಗ ನಮ್ಮಲ್ಲಿ ಪಕ್ಷಾಂತರ ವಿರೋಧಿ ಕಾನೂನಿದೆ. ಇಟ್ಸ್ ಎ ಯೂಸ್‌ಲೆಸ್ ಲಾ. ಈ ಸೋ ಕಾಲ್ಡ್ ಶಾಸಕರಿದ್ದಾರಲ್ಲ, ಅವರು ಯಾವ ಪಕ್ಷದಿಂದ ಗೆದ್ದಿದ್ದಾರೆ ಹೇಳಿ? ಬಿಜೆಪಿಯಿಂದ ತಾನೇ? ಈಗ ಬಿಜೆಪಿ ವಿರುದ್ಧ ಹೋಗುತ್ತಿದ್ದಾರೆ. ನಾಳೆ ಅಧಿವೇಶನ ಆರಂಭವಾಗತ್ತೆ. ಆಗ ಬಿಜೆಪಿಯವರು ವಿಪ್ಹ್ ಕೊಡುತ್ತಾರೆ. ಇವರು ಉಲ್ಲಂಘಿಸುತ್ತಾರೆ. ನೀವು ಪಕ್ಷಾಂತರ ಕಾಯಿದೆಯನ್ನು ಜಾರಿ ಮಾಡುವುದು ಯಾವಾಗ? ಅವರು ನಿಮ್ಮ ಸರ್ಕಾರವನ್ನು ಕೆಡವಿದ ಮೇಲೆ ಅಲ್ಲವಾ? ಆಗ ಅನರ್ಹತೆ ಅರ್ಜಿ ಸಲ್ಲಿಸಬೇಕಲ್ಲವೇ? ಆದರೆ ವಿಧಾನಸಭೆ ಅವಧಿ ಇರುವುದೇ ಮುಂದಿನ 2 ತಿಂಗಳಿಗೆ. ಇವರನ್ನು 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಸಾಧ್ಯವೇ? ಆ ಅಧಿಕಾರ ಇರುವುದು ಚುನಾವಣಾ ಆಯೋಗಕ್ಕೆ ಮತ್ತು ಸುಪ್ರೀಂ ಕೋರ್ಟ್‌ಗೆ ಮಾತ್ರ. ಹೀಗಿರುವಾಗ ಪಕ್ಷಾಂತರ ಕಾಯಿದೆ ಇದ್ದು ಪ್ರಯೋಜನವೇನು? ಅತ್ಯಾಚಾರಕ್ಕೊಳಗಾದ ಮಹಿಳೆಯ ಎದುರೇ ಆರೋಪಿಯನ್ನು ಪಾಟಿ ಸವಾಲಿಗೆ ಒಳಪಡಿಸಿದಾಗ, ಅವಳನ್ನು ಮತ್ತೆ ಅವಮಾನಗೊಳಿಸಿದಂತಾಗುವುದಿಲ್ಲವೇ ಹೇಳಿ. ಸ್ಪೀಕರ್‌ಗೆ ತಮ್ಮ ಪೂರ್ವಾಶ್ರಮದ ನೆನಪಿರಬಾರದು, ಸರ್ಕಾರ ಸ್ಪೀಕರ್ ಕಚೇರಿ ಬಳಸಿಕೊಂಡು ಅಧಿಕಾರ ಉಳಿಸಿಕೊಳ್ಳಬಾರದು.

- ರಾಘವೇಂದ್ರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ