ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಾವು ಬೆಳೆಯುವುದಾದರೂ ಯಾವಾಗ?

Parashurama
Updated On : 30 Jan 2013, 11:52 am

ನಾನು ಬಹಳಷ್ಟು ಜನರನ್ನು ನೋಡಿದ್ದೇನೆ, ವರ್ಷಗಳು ಕಳೆದರೂ ಅವರಲ್ಲಿ ಪ್ರಬುದ್ಧತೆ ಎನ್ನುವುದೇ ಕಾಣಿಸುವುದಿಲ್ಲ. ಇನ್ನೂ ಕೆಲವರಂತೂ ವರ್ಷ ವರ್ಷಕ್ಕೂ ಹುಡುಗಾಟಿಕೆಯ ಗುಣವನ್ನೇ ಹೆಚ್ಚು ಬೆಳೆಸಿಕೊಳ್ಳುತ್ತಾ ಹೋಗುವವರಿದ್ದಾರೆ.
ಆದರೆ ಈ ಪ್ರಶ್ನೆಗೆ ಕಾನೂನಿನ ಚೌಕಟ್ಟಿನಲ್ಲಿ ಉತ್ತರ ಹುಡುಕಲು ನೋಡಿದಾಗ ಜಟಿಲತೆ ಹೆಚ್ಚುತ್ತಾ ಹೋಗುತ್ತದೆ. ಗ್ಯಾಂಗ್ ರೇಪ್ ಪ್ರಕರಣದ 6ನೇ ಆರೋಪಿಯನ್ನು ಬಾಲಕ ಎಂದು ಪರಿಗಣಿಸಿರುವುದರಿಂದ ಆತ ಮರಣದಂಡನೆ ಶಿಕ್ಷೆಯ ಸಂಭಾವ್ಯತೆಯಿಂದ ಬಚಾವಾಗಿದ್ದಾನೆ. ಈ ತೀರ್ಪು ಕೆಲವರು ಹೇಳುವಂತೆ 'ಸಾಫ್ಟ್ ಟಚ್ ಜಸ್ಟಿಸ್‌' ಅನ್ನಿಸಿಕೊಳ್ಳತೊಡಗಿದೆ.   
ಪ್ರತಿದೇಶಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಂಡಿವೆ. ಅಮೆರಿಕದಲ್ಲಿ ಮದ್ಯಪಾನ ಮಾಡುವ ಕಾನೂನುಬದ್ಧ ವಯಸ್ಸು 21. ಈ ವಯಸ್ಸು ಕೆನಡಾದಲ್ಲಿ 19 ಇದ್ದರೆ, ಬ್ರಿಟನ್ನಿನಲ್ಲಿ 18ರಷ್ಟಿದೆ. ಹಲವಾರು ರಾಷ್ಟ್ರಗಳಲ್ಲಿ ಬಾಲಕರು 16 ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಅವರಿಗೆ ಲೈಂಗಿಕ ಸಂಬಂಧಕ್ಕೆ ಸಮ್ಮತಿ ಸಿಗುತ್ತದೆ. ಇನ್ನೂ ಕೆಲವು ರಾಷ್ಟ್ರಗಳಲ್ಲಿ ಆ ವಯಸ್ಸನ್ನು 14 ವರ್ಷಕ್ಕೆ ಇಳಿಸಬೇಕೆಂಬ ವಾದ ಕೇಳಿಬರುತ್ತಿದೆ. ಆ ವಯಸ್ಸಿನಲ್ಲೇ ಬಾಲಕರು ಲೈಂಗಿಕವಾಗಿ ಸಕ್ರಿಯರಾಗಿರುತ್ತಾರಾದ್ದರಿಂದ ವಯಸ್ಸಿನ ಇಳಿಕೆಯಾಗಬೇಕು ಎನ್ನುವುದು ಅವರುಗಳ ವಾದ.
  14 ವರ್ಷಗಳಿಗಿಂತ ಕಡಿಮೆ ವಯೋವಾನದ ಬಹಳಷ್ಟು ಮಕ್ಕಳು ಇಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿರಬಹುದು. ಹಾಗಂತ ತಾವೇನು ಮಾಡುತ್ತಿದ್ದೇವೆನ್ನುವುದರ ಅರಿವು ಅವರುಗಳಿಗಿರುತ್ತದೆಯೇ? 'ಇದು ಸೆಕ್ಸ್‌' ಎನ್ನುವುದಷ್ಟೇ ಅವರಿಗೆ ತಿಳಿದಿರಬಹುದು. ಆದರೆ ಅದರ ಸಂಭಾವ್ಯ ಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ಅವರುಗಳಲ್ಲಿ ಇರುವುದಿಲ್ಲ.
ಅದೇ ರೀತಿಯಲ್ಲೇ, ಯಾವ ವಯಸ್ಸಿಗೆ ತಾವು ಅಪರಾಧ ಎಸಗುತ್ತಿದ್ದೇವೆ ಎನ್ನುವುದರ ಬಗ್ಗೆ ಆತನಿಗೆ ಅಥವಾ ಆಕೆಗೆ ಅರ್ಥವಾಗುತ್ತದೆ? ಅಪರಾಧವೆಸಗುವುದಕ್ಕೆ ಈ ವಿಷಯ ನೆಪವಾಗಬಾರದಾದರೂ, ಇದನ್ನೂ ಕೂಡ ಮಾನಸಿಕ ರೋಗದಿಂದ ಬಳಲುತ್ತಿರುವ ಅಥವಾ ಮಾದಕವಸ್ತುವಿನ ಪ್ರಭಾವದಲ್ಲಿರುವ ವ್ಯಕ್ತಿಯ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಂತೆಯೇ ಪರಿಗಣಿಸಬೇಕು. ಏಕೆಂದರೆ ಈ ವಿಷಯಗಳೇ ಅಪರಾಧಕ್ಕೆ ಮೂಲ ಕಾರಣವಾಗಿರುತ್ತವೆ.
ಬಹಳಷ್ಟು ರಾಷ್ಟ್ರಗಳು 18 ಕ್ಕಿಂತ ಕೆಳಗಿನ/ 16 ವಯಸ್ಸಿನವರಿಗೆ ಯುವಕರಂತೆ ವರ್ತಿಸಲು ಅನುವುಮಾಡಿಕೊಡುತ್ತವೆ. ಸಾಮಾನ್ಯವಾಗಿ ನಾವು ಪ್ರಾಪ್ತವಯಸ್ಕ ಎಂದು ಪರಿಗಣಿಸುವ ವಯಸ್ಸಿಗಿಂತ ಇದು ಕಡಿಮೆಯೇ! ಆದರೆ ಇಲ್ಲೊಂದು ಪ್ರಶ್ನೆ ನಿಸ್ಸಂಷಯವಾಗಿಯೂ ಉದ್ಭವವಾಗಲೇಬೇಕು. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲೇ ಶೋಷಣೆಗೆ ಅಥವಾ ಗುಲಾಮಗಿರಿಗೆ ಒಳಗಾದ ಮಕ್ಕಳು ವಯಸ್ಕರಂತೆ ಬದುಕುವ ಪ್ರಬುದ್ಧತೆಯನ್ನು ಬೆಳಸಿಕೊಂಡುಬಿಡುತ್ತಾರೆ. ಹಾಗಂತ ಅವರನ್ನೂ ಪ್ರಾಪ್ತ ವಯಸ್ಕರು ಎಂದು ಪರಿಗಣಿಸುತ್ತೇವೆಯೇ?
'ದಿ ವೈರ್‌' ಎನ್ನುವ ಟಿವಿ ಸರಣಿಯನ್ನು ನಾನು ಕೆಲವು ದಿನಗಳಿಂದ ವೀಕ್ಷಿಸುತ್ತಿದ್ದೇನೆ. ಬಾಲ್ಟಿಮೋರ್ ನಗರದ ವಿಭಿನ್ನ ಪಾರ್ಶ್ವಗಳ ಮೇಲೆ 'ದಿ ವೈರ್‌' ಅನ್ನು ಚಿತ್ರೀಕರಿಸಲಾಗಿದೆ. ಕಾನೂನು ಬಾಹಿರ ಮಾದಕವಸ್ತು ವ್ಯಾಪಾರ,ಬಂದರು ವ್ಯವಸ್ಥೆಯಲ್ಲಿ ನಡೆಯುವ ವಿವಿಧ ಗುನ್ಹೆಗಳ ಬಗ್ಗೆ ಇದರಲ್ಲಿ ಚರ್ಚಿಸಲಾಗಿದೆ. ನಿಜಕ್ಕೂ ಆಘಾತ ಮೂಡಿಸುವ ಸಂಗತಿಯೆಂದರೆ ಇದರಲ್ಲಿ ಬರುವ ಬಹುತೇಕ ಅಪರಾಧಗಳು ಅಪ್ರಾಪ್ತ ವಯಸ್ಕರ ಸುತ್ತಲೇ ಹೆಣೆದುಕೊಂಡಿವೆ. ಬಾಲಕರಾದರೂ ವಯಸ್ಕರಂತೆ ವರ್ತಿಸುವ, ಅವರಿಗಿಂತ ಭೀಕರ ಅಪರಾಧಗಳನ್ನು ಎಸಗುವುದನ್ನೆಲ್ಲ ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ಆದರೆ ಅದನ್ನು ನೋಡಿದಮೇಲೆ ಕಾಡುವ ಮತ್ತೊಂದು ಪ್ರಶ್ನೆಯೆಂದರೆ, ಅಂತಹ ಮಕ್ಕಳನ್ನು ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವ ರೀತಿ ನಡೆಸಿಕೊಳ್ಳಬೇಕು ಎಂಬುದು. ಅವರು ಎಷ್ಟೇ ಕಠೋರವಾಗಿ ವರ್ತಿಸಿರಲಿ, ನಿಸ್ಸಂಶಯವಾಗಿಯೂ ಅವರುಗಳು ಮಕ್ಕಳೇ; ಅರಿವಿಲ್ಲದೆ ಅವರು ಅಪರಾಧವೆಸಗಿದ್ದಾರೆ.
ಆದರೆ ದೆಹಲಿ ಗ್ಯಾಂಗ್‌ರೇಪ್ ಪ್ರಕರಣದ 6ನೇ ಆರೋಪಿ ಅತ್ಯಾಚಾರದ ಸಮಯದಲ್ಲಿ ವಯಸ್ಕನಂತೆ ವರ್ತಿಸಿದನೆ ಅಥವಾ ಬಾಲಕನಂತೆ ವರ್ತಿಸಿದನೆ? ಇದಕ್ಕೆ ಉತ್ತರ ನಮ್ಮ ಬಳಿಯೂ ಇಲ್ಲ. ಆದರೆ ಅಪರಾಧದ ತೀವ್ರತೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಆ ಪ್ರಶ್ನೆಯನ್ನೇ ಎತ್ತದೆ ಸುಮ್ಮನಿರುವುದು ಸರಿಯಲ್ಲ ಅಲ್ಲವೇ?
ಜಸ್ಟಿಸ್ ವರ್ಮಾ ವರದಿ ಜುವೆನೈಲ್ ಜಸ್ಟಿಸ್ ಆ್ಯಕ್ಟ್ 2000ದ ಅಡಿ, ಬಾಲಪರಾಧ ಆರೋಪಕ್ಕೊಳಗಾಗುವವರ
ವಯೋವಾನವನ್ನು 16ಕ್ಕೆ ಇಳಿಸಬೇಕು ಎನ್ನುವ ಕೂಗನ್ನು ತಿರಸ್ಕರಿಸಿದೆ. ಆದರೆ ಈ ವಿಷಯದಲ್ಲಿ ಫ್ಲೆಕ್ಸಿಬಿಲಿಟಿಯನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯೂ ಎದ್ದು ಕಾಣುತ್ತಿದೆ. 14ಕ್ಕಿಂತ ಮೇಲ್ಪಟ್ಟ ಮತ್ತು 18ಕ್ಕಿಂತ ಕೆಳಗಿನವರ ಅಪರಾಧದ ಪರಿಯನ್ನು, ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಿ ಅವರು ವಯಸ್ಕರಂತೆ ವರ್ತಿಸಿದ್ದರೆ, ವಿಚಾರಣೆಯ ವೇಳೆ ಅವರನ್ನು ವಯಸ್ಕರೆಂದೇ ಪರಿಗಣಿಸಬೇಕು.
ಹಾಗೊಂದು ವೇಳೆ ಆ ವಯಸ್ಸಿನವರನ್ನು ವಯಸ್ಕರ ವಿಚಾರಣಾ ನ್ಯಾಯಾಲಯಕ್ಕೆ ಕಳುಹಿಸಿದರೂ, ಶಿಕ್ಷೆ ಅನುಭವಿಸುವಾಗ ಮಾತ್ರ ಅವರನ್ನು ವಯಸ್ಕರೊಂದಿಗೆ ಬಿಡಬಾರದು. ಏಕೆಂದರೆ ವಯಸ್ಕ ಅಪರಾಧಿಗಳ ಗುಂಪಿನಲ್ಲಿ ಒಂದು ವೇಳೆ ಬಾಲಕನೇನಾದರೂ ಸಿಕ್ಕಿಬಿದ್ದನೆಂದರೆ, ಬಹಳ ಕಠೋರ ಸನ್ನಿವೇಶಗಳನ್ನು ಆತ ಎದುರಿಸಬಹುದು. ಮತ್ತೆ ಅಲ್ಲಿ ದೌರ್ಜನ್ಯಕ್ಕೆ ಒಳಗಾದನೆಂದರೆ ಹೊರಬರುವ ವೇಳೆಗೆ ಮಾನಸಿಕವಾಗಿ ಇನ್ನಷ್ಟು ಮೃಗೀಯ ಗುಣಗಳನ್ನಾತ ಬೆಳೆಸಿಕೊಂಡುಬಿಡುತ್ತಾನೆ.
ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎನ್ನುವುದೇ ನಿಮ್ಮ ಬಯಕೆಯಾಗಿದ್ದರೂ ಮತ್ತು ಆ ಅಪರಾಧ ಅತ್ಯಂತ ಹೇಯ ರೀತಿಯದ್ದಾಗಿದ್ದರೂ, 18 ವರ್ಷಕ್ಕಿಂತ ಕಡಿಮೆ ಮಯೋವಾನದವರಿಗೂ ನೇಣಿಗೇರಿಸಬೇಕೆಂದು ನೀವು ವಾದಿಸುತ್ತಿರಾ? ಹಾಗಿದ್ದರೆ ಮರಣದಂಡನೆ ಶಿಕ್ಷೆಯನ್ನು ಯಾವ ವಯಸ್ಸಿನವರಿಗೆ ನೀಡಬಾರದು? ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿದೆಯೇ?
ಜಸ್ಟಿಸ್ ವರ್ಮಾ ಅವರ ವರದಿಯನ್ನು ಸಂವೇದನಾಶೀಲ ಸುಧಾರಣೆಯ ರೂಪದಲ್ಲಿ ನಾವು ಒಪ್ಪಿಕೊಳ್ಳಬೇಕು. ಆದರೂ 18 ಕ್ಕಿಂತ ಕಡಿಮೆ ವಯೋವಾನದವರ ಮೇಲೆ ಹೇಗೆ ಕಾನೂನು ಕ್ರಮ ಜರುಗಿಸಬೇಕು, ಶಿಕ್ಷಿಸಬೇಕು ಎನ್ನುವುದರ ಬಗ್ಗೆಯಂತೂ ನಾವು ಚರ್ಚಿಸಬಹುದು.
ಪರಿಸ್ಥಿತಿ, ಅಪರಾಧಿ ಮತ್ತು ಪುರಾವೆಗಳನ್ನೆಲ್ಲ ಪರಿಗಣಿಸಿ ನ್ಯಾಯ ನಿರ್ಣಯದಲ್ಲಿಯೂ ಫ್ಲೆಕ್ಸಿಬಿಲಿಟಿ ತರಬೇಕಾದ ಅವಶ್ಯಕತೆಯಿದೆ. ಕ್ರಿಮಿನಲ್ ನ್ಯಾಯಾಂಗ ವ್ಯವಸ್ಥೆ ಎಲ್ಲಿಯವರೆಗೂ ವ್ಯತ್ಯಾಸ ಬಯಸದೆ ಮೊದಲಿನಂತೆಯೇ ಜಡವಾಗಿರುತ್ತದೆಯೋ ಅಲ್ಲಿಯವರೆಗೂ ಕಾನೂನಿನ ದುರ್ಬಳಕೆಯಾಗುವ ಮತ್ತು ಅಪರಾಧಕ್ಕೆ ಸೂಕ್ತವಲ್ಲದ ಶಿಕ್ಷೆಯನ್ನು ಅನುಭವಿಸುವ ಅಪಾಯ ಇದ್ದೇ ಇರುತ್ತದೆ. ವ್ಯಕ್ತಿ ಯಾವುದೇ ವಯಸ್ಸಿನವನಾಗಿರಲಿ, ಕಾನೂನು ವ್ಯವಸ್ಥೆಯ ಜಟಿಲತೆಯನ್ನು ಆತ ಅರ್ಥಮಾಡಿಕೊಂಡರೆ ಆತ ಪ್ರಬುದ್ಧನಾಗಿದ್ದಾನೆ ಎಂದರ್ಥ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments