ಅರ್ಕಾವತಿ ಉದ್ಧಾರಕ್ಕೆ ತಲೆಬುಡವಿಲ್ಲದ ಥೇಮ್ಸ್ ಕನಸು
ಅರ್ಕಾವತಿಯ ಜೀವನಾಡಿಯಾದ ಕೆರೆಗಳ ಸಂಸ್ಕೃತಿ ಬ್ರಿಟಿಷರಿಗೇನು ಗೊತ್ತು ಪಾಟೀಲರೇ?
ಅರ್ಕಾವತಿಯ ಜೀವನಾಡಿಯಾದ ಕೆರೆಗಳ ಸಂಸ್ಕೃತಿ ಬ್ರಿಟಿಷರಿಗೇನು ಗೊತ್ತು ಪಾಟೀಲರೇ? ಕಾಂಕ್ರೀಟ್ ಕಟ್ಟೆ ಕಟ್ಟಿ, ಹೈಟೆಕ್ ಯಂತ್ರ ಅಳವಡಿಸಿ, ಬೋಟ್ ತೇಲುವಂತೆ ಮಾಡಿದರಾಯ್ತೆ. ಥೇಮ್ಸ್ ನದಿ ಸ್ವಚ್ಛಗೊಳಿಸಲಾಗಿತ್ತು. ಆದರೆ, ಇಲ್ಲಿ ಅರ್ಕಾವತಿ ನದಿ ಮೂಲಕ್ಕೇ ಧಕ್ಕೆಯಾಗಿದೆ.
ಮಡಕೆ ಮಾಡುವ ಕೆಲಸ ಬಡಗಿಗೆ ಕೊಟ್ರಂತೆ...
ಒಮ್ಮೆ ಊಹಿಸಿ ನೋಡಿ... ಹೀಗಾದರೆ ಏನಾಗುತ್ತೆ ಎಂದು? ಊಹೆಗೂ ನಿಲುಕದ್ದು. ಮಡಕೆ ಮಾಡುವವನಿಗೇ ಗೊತ್ತು ಅದಕ್ಕೆ ಬೇಕಿರುವ ಮಣ್ಣು ಮತ್ತು ಅದರ ಮೃದುತ್ವ ಹಾಗೂ ಅದರ ಸಂಸ್ಕೃತಿ. ಬಡಗಿಗೆ ಆತನ ಕಾರ್ಯಕ್ಕೆ ಬೇಕಿರುವ ಉಳಿ ಏಟಿನ ಶಕ್ತಿ ಗೊತ್ತು. ಅದರಂತೆ ಕೈ ಬಿರುಸಾಗಿ ಗಡಸಾಗಿ ಚಲಿಸುತ್ತದೆ. ಇವರಿಬ್ಬರ ನಡುವಿನ ವ್ಯತ್ಯಾಸ ಯಾರಿಗೆ ಬೇಕಾದರೂ ಅರಿವಾಗುತ್ತದೆ. ಆದರೆ, ಸಂಸ್ಕೃತಿ ಅಥವಾ ತಮ್ಮತನ ಎಂಬುದನ್ನು ಮರೆತರೆ ಇದ್ಯಾವುದೂ ಕಣ್ಣುಗೆ ಬೀಳುವುದಿಲ್ಲ. ಇಬ್ಬರು ಕೆಲಸಗಾರರೇ, ಎಲ್ಲ ಕೆಲಸವನ್ನೂ ಮಾಡುತ್ತಾರೆ ಎಂಬ ಕಪ್ಪುಪಟ್ಟಿ ಕಣ್ಣಿಗೆ ಕಟ್ಟಿಕೊಳ್ಳುತ್ತದೆ.
ಬೆಂಗಳೂರಿನ ಜೀವನದಿ ಅರ್ಕಾವತಿ ಪರಿಸ್ಥಿತಿ ಹೀಗೆಯೇ ಆಗಿದೆ. ರಾಜಕಾರಣಿಗಳ ಅದರಲ್ಲೂ ಪಕ್ಷಭೇದ ಇರುವ ರಾಜಕಾರಣಿಗಳ ಕೈಗೆ ಸಿಕ್ಕಿ ನಲುಗುತ್ತಿದೆ. ಸ್ಥಳೀಯರು ಸೇರಿದಂತೆ ಭೂದಾಹಿಗಳ ಕಪಿಮುಷ್ಠಿಯಲ್ಲಿ ಈಗಾಗಲೇ ತನ್ನತನವನ್ನೇ ಕಳೆದುಕೊಂಡು, ಹರಿಯಲೂ ಸಾಧ್ಯವಿಲ್ಲದಂತೆ ತನ್ನ ಹೆಜ್ಜೆ ಜಾಡನ್ನೇ ಅರ್ಕಾವತಿ ನದಿ ಹುಡುಕುತ್ತಿದೆ. ಇಂತಹ ದುಸ್ಥಿತಿಯಲ್ಲಿರುವ ಅರ್ಕಾವತಿ ನದಿ ಪುನಶ್ಚೇತನಕ್ಕೆ ಇದೀಗ ರಾಜಕಾರಣಿಗಳ ವಕ್ರದೃಷ್ಟಿ. ಒಂದು ಸರ್ಕಾರ ಯೋಜನೆ ರೂಪಿಸಿ ಚಾಲನೆ ಮಾಡಿದರೆ ಮತ್ತೊಂದು ಸರ್ಕಾರ ಬಂದು ಅದನ್ನು ರದ್ದುಮಾಡುತ್ತದೆ. ಒಬ್ಬ ಶಾಸಕರಿಗೆ ಆ ಗುತ್ತಿಗೆದಾರ ಬೇಕಾದರೆ ಇನ್ನೊಬ್ಬ ಶಾಸಕರಿಗೆ ಅವನು ಬೇಡ. ಆದರೆ, ಪ್ರಚಾರ ಮಾತ್ರ ಎಲ್ಲರಿಗೂ ಬೇಕು. ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ಅಥವಾ ಯೋಜನೆ ರೂಪಿಸಿ ಅರ್ಕಾವತಿ ನದಿ ಪುನಶ್ಚೇತನ ಮಾಡುತ್ತೇವೆ ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ.
'ಅರ್ಕಾವತಿ ನದಿಯನ್ನು ಲಂಡನ್ನ ಥೇಮ್ಸ್ ನದಿಯಂತೆ ಪುನಶ್ಚೇತನ ಮಾಡುತ್ತೇವೆ. ಬ್ರಿಟಿಷರೇ ಇಲ್ಲಿಗೆ ಬಂದು ಅದಕ್ಕಾಗಿ ಯೋಜನೆ ರೂಪಿಸಿಕೊಡುತ್ತಾರೆ. ಅದರಂತೆಯೇ ಎಲ್ಲ ಕಾಮಗಾರಿಗಳು ಆರಂಭವಾಗಲಿವೆ. ಹೀಗಾಗಿ ಈಗ ಆರಂಭವಾಗಿರುವ ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ...'
ರಾಜ್ಯದ ಜಲಸಂಪನ್ಮೂಲ ಇಲಾಖೆಯ ಹೊಸ ಮಂತ್ರಿ ಎಂ.ಬಿ. ಪಾಟೀಲ್ ಅವರ ಮಾತಿದು. ಥೇಮ್ಸ್ ನದಿ ಮೂಲಸ್ವರೂಪ, ಅರ್ಕಾವತಿ ನದಿಯ ಮೂಲಜಾಡಿನ ಬಗ್ಗೆ ಸಂಪೂರ್ಣ ಅರಿವಿದ್ದರೆ ಸಚಿವರಿಂದ ಇಂತಹ ಮಾತು ಹೊರಬರುತ್ತಿರಲಿಲ್ಲ. ಅದೂ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ಒಳಗೇ ಯಾವುದೇ ಒಂದು ಯೋಜನೆ ವರದಿಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಯಾರೋ ಕಿವಿಕಚ್ಚಿದ ಫಲವಾಗಿ ಥೇಮ್ಸ್ ನದಿ, ಬ್ರಿಟಿಷರು ಎಂಬ ಹೈಪ್ರೊಫೈಲ್ ಮಾತುಗಳು ಪುಂಖಾನುಪುಂಖವಾಗಿ ಹರಿಯುತ್ತಿವೆ.
ಇದು ಸಾಧ್ಯವೇ? ಒಂದು ಬಾರಿ ಪ್ರಶ್ನಿಸಿ ನೋಡಿ...
ಅರ್ಕಾವತಿಯ ಒಂದೇ ಒಂದು ಹರಿವಿನ ವಾಸ್ತವ ಚಿತ್ರಣ ಕಣ್ಣಾರೆ ಕಂಡರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ನಂದಿಬೆಟ್ಟದ ಮೂಲದಿಂದ ಐದು ಮೂಲದಲ್ಲಿ ಹರಿಯುವ ಕಾವೇರಿಯ ಉಪನದಿ ಅರ್ಕಾವತಿ, ಬೆಂಗಳೂರಿಗೆ ಕುಡಿಯಲು ನೀರು ಕೊಟ್ಟ ಪ್ರಥಮ ನದಿ. ಹೆಸರಘಟ್ಟ ಹಾಗೂ ತಿಪ್ಪಗೊಂಡನಹಳ್ಳಿ ಮೂಲಕ 115 ವರ್ಷಗಳ ಹಿಂದೆ ನಗರಕ್ಕೆ ಶುದ್ಧ ನೀರು ಒದಗಿಸಿದ ಜೀವನದಿ. ಆದರೆ ಇಂದು ಆ ಜೀವಜಲ ಉಳಿಸಿಕೊಳ್ಳಲು ಪರದಾಡಬೇಕಾಗಿದೆ. ನದಿ ಪುನಶ್ಚೇತನವಾದರೆ ಮುಂದೆ ಹೇಳಿಕೊಳ್ಳಲು ಏನೂ ಇರುವುದಿಲ್ಲ ಎಂಬ ದುರಾಲೋಚನೆಯಲ್ಲಿ ರಾಜಕಾರಣಿಗಳು ಅರ್ಕಾವತಿ ದುಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನಿಸ್ಸೀಮರಾಗಿದ್ದಾರೆ.
ಎಲ್ಲ ಪಕ್ಷದ ಶಾಸಕರು, ಪ್ರಮುಖ ನಾಯಕರೂ ಹೋರಾಟ ಸಮಿತಿಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ನದಿ ಪುನಶ್ಚೇತನಕ್ಕೆ ಪಕ್ಷಭೇದ ಮರೆತು ಹೋರಾಡುವ ಅಥವಾ ಕಾರ್ಯ ಮಾಡುವ ಮಾತನಾಡುತ್ತಾರೆ. ಅದಾದ ನಂತರ ತೆರೆಹಿಂದೆ ನಡೆಯುವುದೆಲ್ಲ ಭಿನ್ನ ಚಟುವಟಿಕೆಯೇ. ಅವನ ಕಾಲದಲ್ಲಿ ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿ ಆರಂಭವಾದರೆ ಅವನಿಗೇ ಹೆಸರು ಬರುತ್ತದೆ, ಅವನು ಜನರಿಗೆ ಹತ್ತಿರವಾಗುತ್ತಾನೆ ಎಂದು ಈರ್ಷ್ಯೆ ಹೆಗಲೇರುತ್ತದೆ. ಹಾಗಾಗಿ ಒಬ್ಬೊಬ್ಬರು ಒಂದೊಂದು ರೀತಿಯ ಅಡ್ಡಗಾಲು ಹಾಕಿ ಕೆಲಸವಾಗದಂತೆ ನೋಡಿಕೊಳ್ಳುತ್ತಾರೆ. ಇಂತಹ ದುಸ್ಥಿತಿಯಲ್ಲಿ ನಮ್ಮ ಅರ್ಕಾವತಿ ನದಿ ಹರಿಯುವುದಾದರೂ ಹೇಗೆ?
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅರ್ಕಾವತಿ ನದಿ ಪುನಶ್ಚೇತನದ ಬಗ್ಗೆ ದೊಡ್ಡ ಪ್ರಚಾರವಾಯಿತು. ಬಿಜೆಪಿಯ ಸಚಿವರು ಶಾಸಕರೇ ಅರ್ಕಾವತಿ ಪುನಶ್ಚೇತನಕ್ಕಾಗಿ ಪಾದಯಾತ್ರೆ ಮಾಡಿದರು. ಪರಿಸರವಾದಿಗಳೂ ಸಾಥ್ ನೀಡಿದ್ದರು. ಅದೇ ರೀತಿ ಯೋಜನೆಯೂ ರಚನೆಯಾಯಿತು. ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಕಳೆದ ವರ್ಷ ಜೂನ್ 17ರಂದು ಪುನಶ್ಚೇತನ ಕಾಮಗಾರಿಗೆ ಚಾಲನೆಯನ್ನೂ ನೀಡಲಾಯಿತು. ಇದಕ್ಕೆ ಇದೀಗ ಕಾಂಗ್ರೆಸ್ ಸರ್ಕಾರ ಕೊಕ್ಕೆ ಹಾಕಿದೆ. ಕಾಮಗಾರಿಗೆ ಹೊಸ ರೂಪುರೇಷೆ ಕೊಡುವುದು ಅಥವಾ ಇನ್ನಷ್ಟು ವೇಗ ನೀಡುವ ಕಾರ್ಯವನ್ನು ಮಾಡಿಲ್ಲ. ಬದಲಿಗೆ, ಪುನಶ್ಚೇತನ ಕಾಮಗಾರಿಯನ್ನೇ ಜಲಸಂಪನ್ಮೂಲ ಸಚಿವರು ಸ್ಥಗಿತಗೊಳಿಸಲು ಆದೇಶಿಸಿದ್ದಾರೆ.
ಇದಕ್ಕೆ ಕಾರಣ ನೀಡುವುದು ಅರ್ಕಾವತಿಯನ್ನು ಥೇಮ್ಸ್ ನದಿಯನ್ನಾಗಿಸುತ್ತೇವೆ ಎಂದು. ಸಾಧ್ಯವೇ ಎಂ.ಬಿ. ಪಾಟೀಲರೇ? ಯಾರೋ ಒಬ್ಬ ಅಧಿಕಾರಿ ಬ್ರಿಟನ್ ಪ್ರವಾಸ ಮಾಡಿದಾಗ ಥೇಮ್ಸ್ ನದಿಯ ಸೌಂದರ್ಯಕ್ಕೆ ಮರುಳಾಗಿ ಅದರ ಬಗ್ಗೆ ಒಂದು ವರದಿ ನೀಡಿದರೆ ಅದರ ಅನುಷ್ಠಾನ ಇಲ್ಲಿ ಸಾಧ್ಯವೇ? ಅರ್ಕಾವತಿಯ ನದಿ ಮೂಲವನ್ನು ಒಂದು ಬಾರಿ ಸುತ್ತಿ ನೋಡಿದ್ದಾರಾ? ಒಂದು ನದಿ ಪುನಶ್ಚೇತನ ಎಂದರೆ ಎಲ್ಲದ್ದಕ್ಕೂ ಒಂದೇ ರೀತಿಯ ಯೋಜನೆ ಅಳವಡಿಸಲು ಸಾಧ್ಯವೇ? ಅಥವಾ ಥೇಮ್ಸ್ ನದಿ ಪುನಶ್ಚೇತನಗೊಳಿಸಿದ ಬ್ರಿಟಿಷರನ್ನೇ ಅರ್ಕಾವತಿ ನದಿ ಪುನಶ್ಚೇತನಕ್ಕೆ ಕರೆತರುವ ಯೋಜನೆ ಎಷ್ಟು ಸಮಂಜಸ? ಬ್ರಿಟಿಷರಿಗೆ ನಮ್ಮ ಸಂಸ್ಕೃತಿ ಅರಿವಿದೆಯೇ? ಅವರು ರೂಪಿಸುವ ಯೋಜನೆ ಇಲ್ಲಿ ಅನುಷ್ಠಾನ ಆದೀತೇ? ಇದೆಲ್ಲ ಕೇವಲ ಕಾಲದೂಡುವ ಹಾಗೂ ಪ್ರಚಾರ ಗಿಟ್ಟಿಸುವ ತಂತ್ರವಲ್ಲವೇ?
ಅರ್ಕಾವತಿ ನದಿ ಜೀವ ಇರುವುದೇ ಕೆರೆಗಳ ಸರಣಿಯಲ್ಲಿ. ನಂದಿಬೆಟ್ಟದ ಆದಿಯಾಗಿ ಅಲ್ಲಿಂದ ಮುಂದೆ ಸಾಗುವ ಅರ್ಕಾವತಿ ನದಿಗೆ ಕೆರೆಗಳಿಂದ ಕೆರೆಗೆ ಹರಿಯುವ ಹಾದಿಯೇ ಹೊಳೆ. ಒಂದು ಕೆರೆ ತುಂಬಿದರೆ ಮತ್ತೊಂದು ಕೆರೆಗೆ ಹರಿಯಬೇಕು. ಇದು ಕೇವಲ ಒಂದೇ ಹಾದಿಯಲ್ಲ. ನಂದಿಗಿರಿ, ಚನ್ನಗಿರಿ, ಹುಲುಕುಡಿ ಬೆಟ್ಟ, ಮದುರೈ, ನಾಗದೇವನಹಳ್ಳಿ ಹೀಗೆ ಐದು ಸರಣಿ ಕೆರೆಗಳ ಹಾದಿಯಲ್ಲಿ ಅರ್ಕಾವತಿ ನದಿ ಹರಿಯುತ್ತದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಗಳ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಆನೇಕಲ್, ಬೆಂಗಳೂರು ಉತ್ತರ, ದಕ್ಷಿಣ, ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ ತಾಲೂಕುಗಳಲ್ಲಿ ಅರ್ಕಾವತಿ ಹರಿಯುತ್ತದೆ. ಸುಮಾರು 1315 ಹಳ್ಳಿಯ ಕೃಷಿಗೆ ಅರ್ಕಾವತಿಯೇ ಜೀವಸೆಲೆ. ಇಂತಹ ಅರ್ಕಾವತಿಯ ಜೀವನಾಡಿಯಾದ ಕೆರೆಗಳ ಸಂಸ್ಕೃತಿ ಬ್ರಿಟಿಷರಿಗೇನು ಗೊತ್ತು ಪಾಟೀಲರೇ? ಬಿದಲೂರು ಗಂಗಮ್ಮನಿಗೆ ಹೆಂಗಳೆಯರು ಸಲ್ಲಿಸುವ ಪೂಜೆ ಮಹತ್ವ ಗೊತ್ತೆ? ಗುಂಡುತೋಪು, ಬೆಳದಿಂಗಳ ಊಟ ಸೇರಿದಂತೆ ಕೆರೆಯಲ್ಲಿ ನಡೆಯುವ ಉತ್ಸವಗಳ ಬಗ್ಗೆ ಇಂಗ್ಲಿಷಿನವರು ಏನುತಾನೇ ತಿಳಿದುಕೊಂಡಿದ್ದಾರು? ನಮ್ಮದೇ ಸಂಸ್ಕೃತಿ ಉಳಿಸಿಕೊಂಡು ನದಿಯ ಇಕ್ಕೆಲಗಳ ಪರಿಸರದಲ್ಲಿ ಗ್ರಾಮೀಣ ಸೊಗಡಿನ ಪರಿಯನ್ನು ಆಂಗ್ಲ ಮಂದಿ ಅರಿತಾರೇ? ಕಾಂಕ್ರೀಟ್ ಕಟ್ಟೆ ಕಟ್ಟಿ, ಹೈಟೆಕ್ ಯಂತ್ರ ಅಳವಡಿಸಿ, ಬೋಟ್ ತೇಲುವಂತೆ ಮಾಡಿದರೆ ನಮ್ಮ ಅರ್ಕಾವತಿ ಹರಿದಂತಾಗುತ್ತದೆಯೇ? ಥೇಮ್ಸ್ ನದಿ ಬತ್ತಿರಲಿಲ್ಲ ಎಂಬುದು ನೆನಪಿರಲಿ. ಅದು ಮಾಲಿನ್ಯಗೊಂಡಿತ್ತು. ಅದನ್ನು ಸ್ವಚ್ಛಗೊಳಿಸಲಾಗಿತ್ತು. ಆದರೆ, ಇಲ್ಲಿ ಅರ್ಕಾವತಿ ನದಿ ಮೂಲಕ್ಕೇ ಧಕ್ಕೆಯಾಗಿದೆ. ಹರಿವು ಬಹುತೇಕ ನಿಂತಿದೆ. ಇದನ್ನು ಅರಿಯಿರಿ.
ಥೇಮ್ಸ್ಗೆ ಸೀಮಿತವಾಗಿ ನಿಮ್ಮ ಆಲೋಚನೆ ಇದ್ದರೆ ಅರ್ಕಾವತಿ ನದಿ ಹರಿಯುವ ಲಕ್ಷಣಗಳಿಲ್ಲ. ಥೇಮ್ಸ್ ಬಗ್ಗೆ ನಿಮಗೆ ವರದಿ ನೀಡಿದ ತಜ್ಞ ಅಧಿಕಾರಿಗಳು ನಿಮಗೆ ಐಟಿಐಆರ್ ಬಗ್ಗೆ ಹೇಳಿದ್ದಾರಾ? ಈ ಕಡೆ ಒಮ್ಮೆ ಗಮನಹರಿಸಿ. ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿಐಆರ್) ನಮ್ಮ ಅರ್ಕಾವತಿ ನದಿಯ ಮೂಲಕ್ಕೇ ಧಕ್ಕೆ ತರಲಿದೆ. ಅರ್ಕಾವತಿ ನದಿ ಭಾಗದ ಸುಮಾರು 29 ಹಳ್ಳಿಗಳು ಸಂಪೂರ್ಣವಾಗಿ ಐಟಿಐಆರ್ಗೆ ಸ್ವಾಧೀನವಾಗಲಿವೆ. ಇದರಲ್ಲಿ ಅರ್ಕಾವತಿಯ ಜೀವವೇ ಆಗಿರುವ ಹತ್ತಾರು ಕೆರೆಗಳು ಬತ್ತಲಿವೆ. ಅರ್ಕಾವತಿ ಮೂಲ ನದಿ ಬೆಟ್ಟದ ತಪ್ಪಲಿನಿಂದಲೇ ಐಟಿಐಆರ್ ಇರಲಿದ್ದು, ಬಹುತೇಕ ಮೂಲವೇ ಹಾಳಾಗಿಹೋಗಲಿದೆ. ಅಂದರೆ, ನೀವು ಯಾವ ನದಿಯನ್ನು ಥೇಮ್ಸ್ ಮಾಡುತ್ತೀರಿ? ಇಷ್ಟೇ ಅಲ್ಲ, ಅರ್ಕಾವತಿಯ ಉಪ ನದಿ ಕುಮುದ್ವತಿಯೂ ಈ ಐಟಿಐಆರ್ಗೆ ತನ್ನ ಹಲವು ಮೂಲಗಳನ್ನು ಕಳೆದುಕೊಳ್ಳಲಿದೆ. ಈ ಬಗ್ಗೆ ಕೊಂಚವಾದರೂ ಯೋಚಿಸಿಯಾಗಿದೆಯೇ? ನಿಮ್ಮ ಸರ್ಕಾರದ ಐಟಿ-ಬಿಟಿ ಸಚಿವ ಎಸ್.ಆರ್. ಪಾಟೀಲ್ ಐಟಿಐಆರ್ಗೆ ಭೂಮಿ ಸ್ವಾಧೀನ ಪಡಿಸಲು ಅಣಿಯಾಗಿದ್ದಾರೆ. ನೀವು ಅರ್ಕಾವತಿ ನದಿಯನ್ನು ಥೇಮ್ಸ್ ಮಾಡುತ್ತೇವೆ ಎಂದು ಪುನಶ್ಚೇತನ ಕಾಮಗಾರಿಯನ್ನೇ ನಿಲ್ಲಿಸಿದ್ದೀರಿ. ನಿಮ್ಮ ಸರ್ಕಾರದ್ದು ಇದೆಂಥ ದ್ವಂದ್ವ?
ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿ ಒಂದು ರೀತಿಯಲ್ಲಿ ಆರಂಭವಾಗಿತ್ತು. ಇದೀಗ ಮಳೆಗಾಲವಾಗಿರುವುದರಿಂದ ನದಿ ಹರಿವು ಎಲ್ಲಿರುತ್ತದೆ ಎಂಬುದನ್ನಾದರೂ ಗುರುತಿಸಬಹುದಿತ್ತು. ಕನಿಷ್ಠ ಅತಿಕ್ರಮವಾಗಿರುವ ಕಾಲುವೆಯನ್ನು ನದಿಗೆ ಬಿಡಿಸಿಕೊಡುವ ಕಾರ್ಯವನ್ನಾದರೂ ಮಾಡಿದ್ದರೆ ಭೇಷ್ ಎನ್ನಬಹುದಿತ್ತು. ಅದನ್ನು ಬಿಟ್ಟು ಇಡೀ ಕಾಮಗಾರಿಯನ್ನೇ ಸ್ಥಗಿತಗೊಳಿಸಿದರೆ ಇನ್ಯಾವುದೋ ಶಕ್ತಿಗೆ ಅರ್ಕಾವತಿ ಬಲಿ ಕೊಡಲು ಹೊರಟಿದ್ದೀರಿ ಎಂಬ ಅನುಮಾನ ಮೂಡುತ್ತದೆ. ಏಕೆಂದರೆ, ಹೊಸ ಕಾಮಗಾರಿ ಆರಂಭಕ್ಕೆ ಇನ್ನಷ್ಟು ವರ್ಷವಾಗುತ್ತದೆ. ಮುಂದೆ ಇನ್ನೊಂದು ಸರ್ಕಾರ ಬರುತ್ತದೆ. ಇನ್ನೇನೋ ಯೋಜನೆಯ ಮಾತು ಶುರುವಾಗಿ ಅರ್ಕಾವತಿ ಬಡವಾಗಿಯೇ ಉಳಿಯುವಂತಾಗುತ್ತದೆ. ಹೀಗಾಗದಿರಲಿ. ಅರ್ಕಾವತಿ ಹರಿಯಲು ಕನಿಷ್ಠ ದಾರಿಯನ್ನಾದರೂ ಮಾಡಿಕೊಡಿ...
- ಕೆರೆ ಮಂಜುನಾಥ್, ಕನ್ನಡಪ್ರಭ