ನಾನು ರವಾಂಡಾಕ್ಕೆ ಹೋಗುವ ಮುನ್ನ ಆ ದೇಶದ ಬಗ್ಗೆ ಇದ್ದ ಅಭಿಪ್ರಾಯವೇ ಬೇರೆಯಾಗಿತ್ತು. ಕಿಗಾಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಪುಟ್ಟ 'ಕಲ್ಚರಲ್ ಷಾಕ್' ಕಾದಿತ್ತು. ತಿಳಿಯದ ಭಾಷೆ, ಅಪರಿಚಿತ ಮುಖಗಳು, ನಿಗೂಢ ಸ್ಥಳ, ಮಧ್ಯರಾತ್ರಿ, ಎಲ್ಲೆಡೆಯೂ ಕಪ್ಪು ಮುಖಗಳು... ಈ ಊರಲ್ಲಿ ಕಳೆವ ಒಂದು ವಾರ ನಿಜಕ್ಕೂ ರೋಚಕ ಎಂದು ಆಗಲೇ ಅನಿಸಿತು.
ಯಾವುದೇ ಊರಿಗೆ ಹೋಗಿ, ದೇಶಕ್ಕೆ ಹೋಗಿ ಅದು ತನ್ನ ಗುಟ್ಟನ್ನು ಬೇಗನೆ ಬಿಟ್ಟು ಕೊಡುವುದಿಲ್ಲ. ಮೇಲ್ನೋಟಕ್ಕೆ ಕಾಣುವುದೇ ಬೇರೆ, ಅಂತರಂಗವೇ ಬೇರೆ. ಚೊಂಬಿನಲ್ಲಿ ನೀರು ಹಿಡಿದು ತಂದು ಜೋಗ ಜಲಪಾತವನ್ನು ನಿರ್ಧರಿಸಲಾಗುವುದಿಲ್ಲ. ಆದರೆ ಒಂದೆರಡು ದಿನ ಆ ಊರಿನಲ್ಲಿ ಅಲೆಮಾರಿಯಂತೆ ತಿರುಗಿದ ಬಳಿಕ, ಅಲ್ಲಿನ ಜನರೊಂದಿಗೆ ಬೆರೆತು ಮಾತಾಡಿದ ಬಳಿಕ, ಸ್ಥಳೀಯ ಗೈಡ್‌ಗಳ ಜತೆ ಮುಕ್ತವಾಗಿ ಹರಟೆ ಹೊಡೆದ ನಂತರ, ಅಲ್ಲಿನ ಮಾಣಿ, ಕೂಲಿ, ಹೋಟೆಲ್ ಮ್ಯಾನೇಜರ್, ಕಾರ್ ಡ್ರೈವರ್, ಸೆಕ್ಯುರಿಟಿ ಗಾರ್ಡ್, ಹೋಟೆಲ್‌ನ ಪರಿಚಾರಿಕೆಯರು, ಸ್ನೇಹಿತರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದ ನಂತರ ಈರುಳ್ಳಿ ಸಿಪ್ಪೆ ಬಿಡಿಸಿದಂತೆ ಒಂದೊಂದೇ ಸಂಗತಿ ನಿಧಾನವಾಗಿ ಅರ್ಥವಾಗುತ್ತಾ ಹೋಗುತ್ತದೆ.
ಯಾವುದೇ ಊರಿಗೆ ಹೋದಾಗ 'ಫಸ್ಟ್ ಇಂಪ್ರೆಶನ್' ಎಂಬುದೊಂದು ಇರುತ್ತದೆ. ರವಾಂಡಾ ಅಂದ್ರೆ ಬಡತನ, ಹಸಿವು, ಗಲೀಜು, ಗಬ್ಬುನಾತ, ರೋಗರುಜಿನ, ಅನಕ್ಷರತೆ... ಮುಂತಾದ ನೆಗೆಟಿವ್ ಅಂಶಗಳನ್ನು ತುಂಬಿಕೊಂಡವರಿಗೆ ಸಖೇದಾಶ್ಚರ್ಯವಾಗುತ್ತದೆ. ಅತಿಶಯೋಕ್ತಿಯಲ್ಲ, ನಾನು ಒಂದು ವಾರದ ಅವಧಿಯಲ್ಲಿ ರಸ್ತೆ ಬದಿ, ಊರಲ್ಲಿ ಒಂದೇ ಕಸಕಡ್ಡಿ, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಸಿಗರೇಟು ಪೊಟ್ಟಣ, ಬೆಂಕಿ ಪೊಟ್ಟಣ, ಖಾಲಿ ಶೀಷೆಗಳನ್ನು ನೋಡಲಿಲ್ಲ.
ದೇಶವ್ಯಾಪಿ ಪ್ಲಾಸ್ಟಿಕ್‌ನ್ನು ನಿಷೇಧಿಸಿದ ಸಂಗತಿ ತಿಳಿದು ನಿಜಕ್ಕೂ ಅಚ್ಚರಿಯಾಯಿತು. ಅದನ್ನು ಪರೀಕ್ಷಿಸಲೆಂಬಂತೆ ಹಾಗೂ ಅನಿವಾರ್ಯದಿಂದ ನನ್ನೊಂದಿಗೆ ಒಯ್ದಿದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗನ್ನು ಕೈಯಲ್ಲಿ ಹಿಡಿದು ಹೊರಟಾಗ ಹೋಟೆಲ್ ಸ್ಟಾಫ್ ಮೊದಲು ಕ್ಯಾತೆ ತೆಗೆದಳು. ನನ್ನ ಅನಿವಾರ್ಯತೆಯನ್ನು ವಿವರಿಸಿದ ಬಳಿಕ ಕಾಗದದ ಬ್ಯಾಗ್ ಕೊಟ್ಟಳು. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಅನ್ನು ಅದರೊಳಗೆ ಹಾಕಿಕೊಳ್ಳುವ ತನಕ ಅವಳು ಬಿಡಲಿಲ್ಲ. ಅದನ್ನು ಪೋರ್ಟಿಕೋದಲ್ಲಿ ನಿಂತಿದ್ದ ನಮ್ಮ ಕಾರಿನ ಡ್ರೈವರ್ ಗಮನಿಸುತ್ತಿದ್ದ. ಆತ ಪ್ಲಾಸ್ಟಿಕ್ ಕ್ಯಾರಿಬ್ಯಾಗನ್ನು ರೂಮಿನಲ್ಲಿಯೇ ಇಡುವುದು ಲೇಸು ಎಂದ. ನಮ್ಮಲ್ಲಿ ಎಲ್ಲ ಕಾನೂನು, ನಿಯಮಗಳನ್ನು ಉಲ್ಲಂಘಿಸುವ ಮೂಲಕವೇ ಆಚರಣೆಗೆ ತರುತ್ತೇವೆ. ಆದರೆ ಪ್ಲಾಸ್ಟಿಕ್ ಹಾಗೂ ಕಸಕಡ್ಡಿ ವಿಷಯದಲ್ಲಿ ಕಠಿಣವಾಗಿ ನಡೆದುಕೊಳ್ಳುತ್ತಿದ್ದಾರೆಂಬುದು ರಾಜಧಾನಿ ಕಿಗಾಲಿಯಲ್ಲೊಂದೇ ಅಲ್ಲ, ಗ್ರಾಮೀಣ ಪ್ರದೇಶಗಳಿಗೆ ಹೋದಾಗಲೂ ಮನವರಿಕೆಯಾಯಿತು.
ಅದೇ ರವಾಂಡಾದ ಪಕ್ಕದ ದೇಶಗಳಾದ ಬುರುಂಡಿ ರಾಜಧಾನಿ ಬುಜುಂಬುರಾ ಹಾಗೂ ಕೀನ್ಯಾದ ರಾಜಧಾನಿ ನೈರೋಬಿಗೂ ಹೋಗಿದ್ದೆ. ಅಲ್ಲಿನ ಊರು, ರಸ್ತೆ ತುಂಬಾ ಪ್ಲಾಸ್ಟಿಕ್, ಕಸ, ಕಡ್ಡಿ, ಹೊಲಸು, ನಮ್ಮೂರಿನ ಹಾಗೇ.
ಗೊರಿಲ್ಲಾ ನಾಮಕರಣದ ಸಮಾರಂಭವನ್ನು ಊರ ಹೊರಗಿನ ದೊಡ್ಡ ಬಯಲಿನಲ್ಲಿ ಏರ್ಪಡಿಸಿದ್ದರು. ಅಲ್ಲಿ ಏಳೆಂಟು ಸಾವಿರ ಜನ ಸೇರಿದ್ದರು. ಹೆಚ್ಚಿನವರು ಸ್ಥಳೀಯ ಆದಿವಾಸಿಗಳೇ ಇದ್ದರು. ಎಲ್ಲರಿಗೂ ಊಟದ ವ್ಯವಸ್ಥೆಯಿತ್ತು. ಕಾರ್ಯಕ್ರಮ ಮುಗಿದ ಬಳಿಕ ಇಡೀ ಬಯಲು ಸ್ವಚ್ಛವಾಗಿತ್ತು. ಎಲ್ಲೂ ಊಟದ ಎಲೆ, ಪ್ಲೇಟು, ಖಾಲಿ ಬಾಟಲಿಗಳನ್ನು ಜನ ಎಸೆದು ಹೋಗಿರಲಿಲ್ಲ. ಸ್ವಚ್ಛತೆ ವಿಷಯದಲ್ಲಿ ಒಂದು ನಿಯಮ ದೇಶದೆಲ್ಲೆಡೆ ಜಾರಿಯಲ್ಲಿರುವಂತೆ, ಅದನ್ನು ಅಲ್ಲಿನ ಜನ ಅಕ್ಷರಶಃ ಪಾಲಿಸುತ್ತಿರುವಂತೆ ಭಾಸವಾಯಿತು. ಇದು ರವಾಂಡಾದ ಒಂದು ಸಾಧನೆಯೇ. ಶ್ರೀಮಂತಿಕೆಯ ಲಕ್ಷಣಗಳಾದ ಅಗಾಧತೆ, ಭವ್ಯತೆಯಿಲ್ಲದಿದ್ದರೂ ಅಲ್ಲಿನ ಊರುಗಳಲ್ಲಿ ಸ್ವಚ್ಛತೆ, ಅಚ್ಚುಕಟ್ಟುತನ ಢಾಳಾಗಿ ಅನುಭವಕ್ಕೆ ಬರುತ್ತದೆ.
ರವಾಂಡಾದಲ್ಲಿ ಬಡತನವಿರಬಹುದು. ಆದರೆ ಇಡೀ ದೇಶದಲ್ಲಿ ಸುತ್ತುವಾಗ ಒಬ್ಬೇ ಒಬ್ಬ ಭಿಕ್ಷುಕ ಕಣ್ಣಿಗೆ ಕಾಣಲಿಲ್ಲ. ವಿದೇಶಿಯರನ್ನು ಕಂಡ ಕೂಡಲೇ ಅವರಿಂದ ಹಣ ಕೀಳಲು ನಮ್ಮೂರಲ್ಲಿ ಜನ ಹೇಗೆ ವರ್ತಿಸುತ್ತಾರೆಂಬುದನ್ನು ನೋಡಿದ್ದೇನೆ. ಅಂಥ ಒಂದೇ ದೃಶ್ಯವನ್ನು ನೋಡಲಿಲ್ಲ. ರಸ್ತೆ ಪಕ್ಕದಲ್ಲಿನ ಅಂಗಡಿಗಳಲ್ಲಿರುವವರು ತಮ್ಮ ವಸ್ತುಗಳನ್ನು ಖರೀದಿಸಿ ಎಂದು ಮುಗಿಬಿದ್ದು ಪೀಡಿಸುವುದಿಲ್ಲ. ಯಾವ ಅಂಗಡಿಯಲ್ಲೂ ಬಾರ್ಗೇನಿಂಗ್ ಇಲ್ಲ.
ಆಫ್ರಿಕಾದ ಎಲ್ಲ ದೇಶಗಳಲ್ಲಿ ಮೋಟರ್ ಸೈಕಲ್ ಟ್ಯಾಕ್ಸಿ ಜನಪ್ರಿಯ. ಮೋಟರ್ ಸೈಕಲ್ ಸವಾರರು ನಿಮ್ಮನ್ನು ಹಿಂಬದಿ ಕುಳ್ಳಿರಿಸಿಕೊಂಡು ನೀವು ಹೇಳಿದ ಜಾಗಕ್ಕೆ ಡ್ರಾಪ್ ಕೊಡುತ್ತಾರೆ. ಸವಾರನಿಗೂ ಹಾಗೂ ಹಿಂಬದಿ ಪ್ರಯಾಣಿಕರಿಬ್ಬರಿಗೂ ಹೆಲ್ಮೆಟ್ ಕಡ್ಡಾಯ. ಹೆಲ್ಮೆಟ್ ಇಲ್ಲದ ಸವಾರರನ್ನು ನೋಡಲು ಸಾಧ್ಯವಾಗಲಿಲ್ಲ. ಹಾಗೇ ಒಂದು ವಾರದ ಅವಧಿಯಲ್ಲಿ ಒಂದು ಬಾರಿಯೂ ವಾಹನಗಳ ಹಾರ್ನ್, ಕಿರುಚಾಟ, ಭರಾಟೆ, ಗೌಜು ಗದ್ದಲವನ್ನು ಕೇಳುವ 'ಸೌಭಾಗ್ಯ'ವೂ ಸಿಗಲಿಲ್ಲ!
ಮಾನವ ಇತಿಹಾಸದಲ್ಲಿ ಕಂಡು ಕೇಳರಿಯದಂಥ ನರಮೇಧ ಕಂಡ, ನೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಜನರ ಮಾರಣಹೋಮಕ್ಕೆ ಸಾಕ್ಷಿಯಾದ ಕಿಗಾಲಿಯಲ್ಲಿ ಈಗ ಕ್ರೈಮ್ ರೇಟ್ ಹೇಗಿರಬಹುದು? ರವಾಂಡಾ ಡೆವಲಪ್‌ಮೆಂಟ್ ಬೋರ್ಡಿನ ಅಧಿಕಾರಿಯೊಬ್ಬರು ಹೇಳಿದ್ದು- 'ಕೊಲೆ, ಅತ್ಯಾಚಾರದಂಥ ಪ್ರಕರಣಗಳು ಅಪರೂಪ. ಅಲ್ಲಲ್ಲಿ ಕಳ್ಳತನದಂಥ ಕೇಸುಗಳು ದಾಖಲಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳ ಕಳ್ಳತನ ಸಾಮಾನ್ಯ. ಕಿಗಾಲಿಯಲ್ಲಿ ಮಹಿಳೆಯೊಬ್ಬಳು ಮಧ್ಯರಾತ್ರಿ ಧೈರ್ಯವಾಗಿ ನಡೆದು ಹೋಗಬಹುದು. ನೋ ಪ್ರಾಬ್ಲಮ್. ಇಲ್ಲಿನ ಪತ್ರಿಕೆಗಳನ್ನು ತೆರೆದು ನೋಡಬಹುದು ಕ್ರೈಮ್ ಸುದ್ದಿ ಎಷ್ಟು ಪ್ರಕಟವಾಗುತ್ತದೆಂಬುದು ನಿಮಗೇ ಗೊತ್ತಾಗುತ್ತದೆ.' ಅಲ್ಲಿನ ಯಾವ ಪತ್ರಿಕೆಗಳೂ ಅಪರಾಧ ಸುದ್ದಿಗಾಗಿಯೇ ಒಂದು ಇಡೀ ಪುಟವನ್ನು ಮೀಸಲಿಟ್ಟಿಲ್ಲವೆಂಬುದು ಕಂಡು ಬಂತು.
ರವಾಂಡಾದಲ್ಲಿ ಒಂದು ವಾರ ನಾನು ಏನಿಲ್ಲವೆಂದರೂ ರಸ್ತೆ ಮಾರ್ಗವಾಗಿ 700-800 ಕಿ.ಮಿ. ದೂರ ಕ್ರಮಿಸಿರಬಹುದು, ರಸ್ತೆಯಲ್ಲಿ ವಾಹನಗಳ ಅಪಘಾತ, ರಸ್ತೆ ಪಕ್ಕದಲ್ಲಿ ಮಗುಚಿದ ಟ್ರಕ್ಕು, ಕೆಟ್ಟು ನಿಂತ ಬಸ್ಸು... ನೋಡಲಿಲ್ಲ. ಅವೈಜ್ಞಾನಿಕ ರಸ್ತೆ ಉಬ್ಬು, ಹೊಂಡ (Pot holes)ಗಳೂ ಕಾಣಲಿಲ್ಲ. ರಸ್ತೆಯ ಎಲ್ಲ ತಿರುವುಗಳಲ್ಲೂ ರಾತ್ರಿಯಲ್ಲಿ ಹೊಳೆಯುವ ಪಾರದರ್ಶಕ ಎಚ್ಚರಿಕೆ ಸೂಚಕಗಳು, ನೇರ ರಸ್ತೆಯಲ್ಲಿ ಚಾಲಕ ಸ್ಟೆಯರಿಂಗ್ ಹಿಡಿದು ನಿದ್ದೆ ಮಾಡಿದಾಗ ವಾಹನ ಅಡ್ಡಾದಿಡ್ಡಿ ಚಲಿಸಿ ರಸ್ತೆ ಇಳಿದರೆ ತಕ್ಷಣ ಎಚ್ಚರಿಸಲೆಂದು ಬೇಕೆಂದೇ ನಿರ್ಮಿಸಿದ 'ರಸ್ತೆಬರೆ'ಗಳು, ಸಪಾಟ ರಸ್ತೆಗಳು ದೇಶದ ಉದ್ದಗಲಕ್ಕೂ ನಿರ್ಮಿಸಿರುವುದು ಗಮನ ಸೆಳೆಯುತ್ತವೆ. ರವಾಂಡಾ ಅಧ್ಯಕ್ಷ ಪಾಲ್ ಕಗಾಮೆ ಅವರಿಗೆ ಸಿಂಗಾಪುರ ಆದರ್ಶವಂತೆ. ದೇಶ ಅಂದ್ರೆ ಸಿಂಗಾಪುರದಂತೆ ಇರಬೇಕು ಎಂಬುದು ಕನಸಂತೆ. ರವಾಂಡಾ ಆ ನಿಟ್ಟಿನಲ್ಲಿ ಒಂದು ಪುಟ್ಟ ಆದರೆ ದಿಟ್ಟ ಹೆಜ್ಜೆಯಿಟ್ಟಿದೆ ಎಂಬ ಸೂಚನೆಯಂತೂ ಸಿಗುತ್ತದೆ.
ಆಫ್ರಿಕಾದ ಉಳಿದೆಲ್ಲ ದೇಶಗಳಲ್ಲಿ ಕಂಡು ಬರುವ ವಿಪರೀತ ಭ್ರಷ್ಟಾಚಾರ ರವಾಂಡಾದಲ್ಲಿ ಮಾತ್ರ ಇಲ್ಲ ಅಂದ್ರೆ ಅಚ್ಚರಿಯಾಗಬಹುದು. ರವಾಂಡಾದ ಅಧಿಕಾರಿಯೊಬ್ಬರ ಜತೆ ಮಾತನಾಡುವಾಗ ಅವರು ಹೇಳಿದ ಒಂದು ಸಂಗತಿ ಗಮನ ಸೆಳೆಯಿತು. ರವಾಂಡಾ ಸಂಸತ್ತಿನಲ್ಲಿ ಶೇಕಡಾ 56ರಷ್ಟು ಮಹಿಳಾ ಸದಸ್ಯೆಯರು ಇದ್ದಾರಂತೆ. ಮಹಿಳೆಯರಿಗೆ ಸಂಸತ್ತಿನಲ್ಲಿ ಹೆಚ್ಚು ಪ್ರಾತಿನಿಧ್ಯ ನೀಡಿದ ದೇಶಗಳಲ್ಲಿ ರವಾಂಡಾಕ್ಕೆ ವಿಶ್ವದಲ್ಲಿಯೇ ಅಗ್ರಸ್ಥಾನ ಹಾಗೂ ಆನಂತರದ ಸ್ಥಾನ ಸ್ವೀಡನ್‌ಗಂತೆ. ಅವರು ಹೇಳಿದ ಇನ್ನೊಂದು ಅಂಶವೆಂದರೆ ರವಾಂಡಾ ಸರ್ಕಾರ ತನ್ನ ವಾರ್ಷಿಕ ಬಜೆಟ್‌ನಲ್ಲಿ ಶೇಕಡಾ 25ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡುತ್ತಿದೆಯಂತೆ.
ಇಪ್ಪತ್ತು ವರ್ಷಗಳ ಹಿಂದೆ ನಡೆದ ಭೀಕರ ಹತ್ಯಾಕಾಂಡದಿಂದ ರವಾಂಡಾ ಪಾಠ ಕಲಿತಿದೆ. ಆ ದೇಶದಲ್ಲಿ ಎರಡು ಕೋಮುಗಳಿವೆ. ಒಂದು ಹುಟು (ಶೇ.85) ಹಾಗೂ ಇನ್ನೊಂದು ಟುಟ್ಸಿ (ಶೇ.15). ಈ ಎರಡು ಕೋಮುಗಳು ಬಡಿದಾಡಿಕೊಂಡು ಮೂರು ತಿಂಗಳ ಅವಧಿಯಲ್ಲಿ ಹತ್ತುಲಕ್ಷ ಜನರ ಹತ್ಯೆಯಾಯಿತು. ಈ ಕಹಿ ಘಟನೆಯನ್ನು ಮರೆಯುವುದು ಸುಲಭವಲ್ಲ. ಅದನ್ನು ಅಳಿಸಿ ಹಾಕಲು ಸರ್ಕಾರ ಜನರ ಸಹಯೋಗದೊಂದಿಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ, ಕೈಗೊಳ್ಳುತ್ತಿದೆ. ಶಾಲೆಗೆ ಸೇರಿಸುವಾಗ ಮಕ್ಕಳ ಜಾತಿ ನಮೂದಿಸುವುದನ್ನು ನಿಷೇಧಿಸಿದೆ. ಜಾತಿ ಆಧಾರಿತ ಪ್ರಮಾಣ ಪತ್ರವನ್ನು ಸಹ ನಿಷೇಧಿಸಿದೆ. ಜಾತಿ ಮೂಲಕ ಯಾರೂ ಪರಿಚಯಿಸಿಕೊಳ್ಳುವಂತಿಲ್ಲ.
ರವಾಂಡಾಕ್ಕೆ ಬಂಡವಾಳ ಸ್ನೇಹಿ ದೇಶವಾಗಬೇಕೆಂಬ ತುಡಿತ ಇದ್ದಂತಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಮೂಲಸೌಕರ್ಯ... ಮುಂತಾದ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸುವವರನ್ನು ಕೈ ಬೀಸಿ ಕರೆಯುತ್ತಿದೆ. ಬಂಡವಾಳದಾರರಿಗೆ ಭರವಸೆ ಮೂಡಿಸಲು ರವಾಂಡಾ ಡೆವಲಪ್‌ಮೆಂಟ್ ಬೋರ್ಡ್ ಸಹಕರಿಸುತ್ತಿದೆ. ಕರ್ನಾಟಕದ ಕೆಲವು ಉದ್ದಿಮೆದಾರರು ಈಗಾಗಲೇ ರವಾಂಡಾದತ್ತ ಮುಖ ಮಾಡಿದ್ದಾರೆ. ಸಂಪೂರ್ಣ ನೆಲಕಚ್ಚಿದ ದೇಶವೊಂದು ತನ್ನೆಲ್ಲ ಸಮಸ್ಯೆಗಳ ಸಂಕೋಲೆಗಳಿಂದ ಹಂತ ಹಂತವಾಗಿ ಕಳಚಿಕೊಂಡು ಪ್ರಗತಿ, ಅಭಿವೃದ್ಧಿ ಕಾಣುವ ಪ್ರಾಮಾಣಿಕ ಹಂಬಲದೊಂದಿಗೆ ಅರ್ಹನಿಶಿ ಹೆಣಗುತ್ತಿದೆ. ಹೊಸ ಮನೆಯನ್ನು ಕಟ್ಟಿ ಅದನ್ನು ಬೆಳಗುವ ಕಾರ್ಯ ನಡೆದಿದೆ.
ರವಾಂಡಾದ ಬಗ್ಗೆ ಅನ್ನಿಸಿದ್ದಿಷ್ಟು.
(ಮುಗಿಯಿತು)
- ವಿಶ್ವೇಶ್ವರ ಭಟ್