ಹಂಡೆ ವಜೀರ..!: ಇದು ವಿಶಿಷ್ಟ ಸಮುದಾಯವೊಂದರ ಹೆಸರು. ಇಂತಹ ಹೆಸರಿನ ಜಾತಿಯೂ ಇದೆಯೇ ? ಎಂಬ ಅನುಮಾನ ಬರಬಹುದು. ಆದರೆ, ಮೂಲ ಹುಡುಕಿದಾಗ ಹಂಡೆ ವಜೀರ ಸಮಾಜದ ಹಿಂದೆ ಭಾರಿ ಇತಿಹಾಸ ಅಡಗಿರುವುದು ಗೊತ್ತಾಯಿತು.
ಹಂಡೆ ವಜೀರರು ಕುರುಬ ಸಮುದಾಯಕ್ಕೆ ಸೇರಿದವರೇ? ರೆಡ್ಡಿಗಳೇ? ಅಥವಾ ಲಿಂಗಾಯತರೇ ? ಎಂಬ ಬಗ್ಗೆ ಇತ್ತೀಚೆಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಸಮಾಜಕ್ಕೆ ಶತಶತಮಾನಗಳ ಇತಿಹಾಸವಿದೆ. ಸಿಕ್ಕಿರುವ ಶಿಲಾ ಶಾಸನಗಳು ಸಮುದಾಯದ ಇತಿಹಾಸವನ್ನು ಸಾರಿ ಹೇಳುತ್ತವೆ.
ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಕರ್ನಾಟಕ ಲಲಿತಕಲಾ ಅಕಾಡೆಮಿಯ ವಿಶೇಷಾಧಿಕಾರಿಯಾದ ಪ್ರೊ.ಎಸ್.ಸಿ. ಪಾಟೀಲ್ ಅವರು ಈ ಸಮುದಾಯದ ಬಗ್ಗೆ ಮಹತ್ವದ ಹಲವಾರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಹಂಡೆ ವಜೀರ ಎಂದರೇನು? ಈ ಸಮಾಜದ ಆರಂಭ ಎಲ್ಲಿಂದ ? ಸಮುದಾಯದ ಹಿನ್ನೆಲೆ, ರೀತಿ ರಿವಾಜುಗಳ ಬಗ್ಗೆ ಅವರು ವಿವರಿಸುವುದು ಹೀಗೆ.
ಹಂಡೆ ಎಂದರೆ ಹಿಂದಿನ ಕಾಲದಲ್ಲಿ ನಾಯಕ, ಸ್ಥಾನಮಾನ ಹೊಂದಿದವ ಎಂದರ್ಥ. ಪಾಂಡೆ, ಪಾಂಡ್ಯರು ಪದ ಹಂಡೆ ಸ್ವರೂಪ ಪಡೆದುಕೊಂಡಿರುವ ಸಾಧ್ಯತೆಯೂ ಇದೆ. ಜೊತೆಗೆ ಹಂದೆ ಎಂಬುದು ಹಂಡೆ ಆಗಿರಬಹುದು. ಏಕೆಂದರೆ, ಬಿಜಾಪುರದ ಆಲಿ ಅದಿಲ್‌ಶಾಹಿ ಕಾಲದಲ್ಲಿ ಹಂದೆ ಪಾಳೆಯಗಾರರು ಇದ್ದರಂತೆ. ಅವರಿಗೆ ಅದಿಲ್‌ಶಾಹಿ ವಜೀರರು ಎಂಬ ಬಿರುದು ಕೊಟ್ಟಿದ್ದ. ಹೀಗಾಗಿ ಹಂದೆ ವಜೀರ ಎಂಬ ಹೆಸರು ಸಮುದಾಯಕ್ಕೆ ಬಂದಿರಬಹುದು. ಕ್ರಮೇಣ ಅದು ಹಂಡೆ ವಜೀರ ಆಗಿರಬಹುದು ಎಂಬ ಅಭಿಪ್ರಾಯವೂ ಪಾಟೀಲರದ್ದಾಗಿದೆ.
ಡಾ.ಹನುಮಾಕ್ಷಿ ಬೋಗಿ ಎಂಬುವರು ಸುರಪುರ ಮತ್ತು ಗುಲ್ಬರ್ಗದಲ್ಲಿ ಹೆಮ್ಮಡಿಗೆ ಶಾಸನ ಸಂಗ್ರಹಿಸಿದ್ದಾರೆ. ಅದರಲ್ಲಿ ಹಂಡೇಶ್ವರ ದೇವಾಲಯವನ್ನು ಪಂದಿರಾಜ ಕಟ್ಟಿಸಿದ ಎಂಬ ಬರಹ ಇದೆಯಂತೆ. ಹಂಡೆ ಅರಸರು, ಪಂದೆ ಅರಸರು ಎಂಬ ಉಲ್ಲೇಖವೂ ಅದರಲ್ಲಿದೆ.
ಉನ್ನತ ಹುದ್ದೆಗಳಲ್ಲಿದ್ದರು: ಹಂಡೆ ವಜೀರರು ವರಾಹ ಲಾಂಛನದವರು, ವಸಿಷ್ಟ ಗೋತ್ರದವರು ಎಂಬುದು ಸಿಕ್ಕಿರುವ 25-30 ಶಾಸನಗಳಿಂದ ಗೊತ್ತಾಗಿದೆ. ಈ ಸಮುದಾಯದ ಇತಿಹಾಸ 10ನೇ ಶತಮಾನದ ವರೆಗೆ ಹೋಗುತ್ತದೆ. ಈ ಗೋತ್ರ, ಲಾಂಛನ ಮತ್ತು ಶಾಸನಗಳ ಬರಹ ಗಮನಿಸಿದರೆ ಹಂಡೆ ವಜೀರರು ಚಾಲುಕ್ಯರ ಪರಂಪರೆಯವರು ಎಂಬುದು ಮನದಟ್ಟಾಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಈ ಕಲ್ಯಾಣ ಚಾಲುಕ್ಯರಿಗೆ ಬದಾಮಿ ಚಾಲುಕ್ಯರೇ ಪೂರ್ವಿಕರು. ಇದು ನೂರಾರು ಶಾಸನಗಳಿಂದ ಸಾಬೀತಾಗಿದೆ. ರಾಷ್ಟ್ರಕೂಟರ ಶಾಸನವೂ ಇದನ್ನೇ ಹೇಳುತ್ತದೆ.
ಹಂದಿ ಅರಸರ ಲಾಂಛನ ವರಾಹ ಆಗಿತ್ತು. ಈ ಹಂದಿ ಅರಸರೇ ಕ್ರಮೇಣ ಹಂಡೆ ಅರಸರಾಗಿರಬಹುದು ಎನ್ನುತ್ತಾರೆ ಪಾಟೀಲರು. ಸಾಮಂತರು, ಮಹಾ ಮಂಡಲಾಧೀಶ, ದಂಡಾಧೀಶ, ಮಂತ್ರಿ, ಮಹಾಮಂತ್ರಿ ಸೇರಿದಂತೆ ರಾಜರ ಆಸ್ಥಾನಗಳಲ್ಲಿ ಅವರಿಗೆ ಹತ್ತಿರವಾದ ಮತ್ತು ಉನ್ನತ ಹುದ್ದೆಗಳನ್ನು ಇವರು ಅಲಂಕರಿಸಿದ್ದರು ಎಂಬುದಕ್ಕೂ ಶಾಸನಗಳು ಸಿಕ್ಕಿವೆಯಂತೆ.
ಇವರು ಈಶ್ವರನ ಭಕ್ತರು: ಹಂಡೆ ವಜೀರರು ಈಶ್ವರನ ಭಕ್ತರು. ಶೈವ ಸಂಪ್ರದಾಯಕ್ಕೆ ಸೇರಿದವರು. ಹೀಗಾಗಿಯೇ ಅಲ್ಲಲ್ಲಿ ಶಿವನ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಈ ಸಮುದಾಯದವರು ಬಿಜಾಪುರ, ಗುಲ್ಬರ್ಗ, ಬಾಗಲಕೋಟ, ಧಾರವಾಡ ಮತ್ತಿತರ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜನಸಂಖ್ಯೆ ಅಂದಾಜು 20 ಲಕ್ಷ ಇರಬಹುದು ಎನ್ನುತ್ತಾರೆ ಸಮುದಾಯದ ಮುಖಂಡರು.
ಇವರ ಮೂಲ ಕಸುಬು ವ್ಯವಸಾಯ. ಜೊತೆಗೆ ಊರಿನ ಮುಂದಾಳತ್ವ. ಯಾವುದೇ ಹಳ್ಳಿಯಲ್ಲಿ ಹಂಡೆ ವಜೀರರ ಒಂದೇ ಕುಟುಂಬ ಇದ್ದರೂ ಗೌಡಿಕೆಯನ್ನು ಅವರೇ ನಿರ್ವಹಿಸುತ್ತಿದ್ದರು. ಹಂಡೆ ವಜೀರ ಮತ್ತು ಹಂಡೆ ಕುರುಬ ಎಂಬುದು ಬೇರೆ ಬೇರೆ. ಅದೇ ರೀತಿ ಹಂಡೆ ವಟುಗಳು ಇದ್ದಾರೆ. ಹಂಡೆ ಮುಸ್ಲಿಂರಿದ್ದಾರೆ. ಹಂಡೆ ಕೊರವ ಎಂಬ ಸಮುದಾಯವೂ ಇದೆ. ಇವರೆಲ್ಲ ಹಂಡೆ ಅರಸರ ಸೈನ್ಯದಲ್ಲಿದ್ದರಬಹುದು. ಹೀಗಾಗಿ ಹಂಡೆ ಎಂಬ ಹೆಸರು ಸೇರಿಕೊಂಡಿದೆ. ಹಂಡೆ ಕೊರವರು ಸೈನ್ಯದಲ್ಲಿ ಕಹಳೆ ಊದುವ ಕೆಲಸ ಮಾಡುತ್ತಿದ್ದರಂತೆ. ಅದೇ ರೀತಿ ಭಟ್ಟಂಗಿ ಸಾಹಿತ್ಯ ಹೇಳುತ್ತಿದ್ದವರು ಹಂಡೆ ಜೋಯಿಸರಾಗಿದ್ದಾರೆ ಎಂಬುದು ಪಾಟೀಲರ ವಿವರಣೆ. ರಾಜರ ಆಸ್ಥಾನದಲ್ಲಿ ಉನ್ನತ ಹುದ್ದೆಗಳಲ್ಲಿದ್ದ ಕಾರಣ ಕುರುಬರಿಗೂ ಹಂಡೆ ಹೆಸರು ಬಂದಿರಬಹುದು ಎಂಬುದು ಅವರ ವಿಶ್ಲೇಷಣೆ.
ದಕ್ಷಿಣ ಕರ್ನಾಟಕದಲ್ಲಿ ಇಲ್ಲ: ದಕ್ಷಿಣ ಕರ್ನಾಟಕ ಭಾಗದಲ್ಲಿ ಹಂಡೆ ವಜೀರ ಸಮುದಾಯ ಇಲ್ಲ. ಇನ್ನು ಕೊಟ್ಟೂರು ಜಗದ್ಗುರು ಪೀಠಾಧೀಶರು 15ನೇ ಶತಮಾನದಲ್ಲಿ ಈ ಸಮುದಾಯದವರಿಗೆ ರಾಜಗುರುಗಳಾಗಿದ್ದರಂತೆ. ಹಾಗೆಯೇ ನಿಡುಮಾಮಿಡಿ ಮಠಾಧೀಶರು, ಡಂಬಳದ ಸಂತೇ ತೋಂಟೇಂದ್ರ ಸ್ವಾಮಿಗಳೂ ರಾಜಗುರು ಸ್ಥಾನದಲ್ಲಿದ್ದರು. ಇನಂತಪುರವನ್ನು ಆಳಿದ ಹಂಡೆ ಅರಸರು ಶಾಹಿಗಳು ದಂಡೆತ್ತಿ ಬಂದಾಗ ವಿಜಯನಗರ ಸಾಮ್ರಾಜ್ಯ ಕಾಪಾಡಿದರು ಎಂಬುದಕ್ಕೂ ದಾಖಲೆಗಳು ಇವೆಯಂತೆ. ರಾಮರಾಯನ ಕಾಲದಲ್ಲಿ ಬೊಕ್ಕಸದ ತಿಮ್ಮಯ್ಯ ಸಂಚು ರೂಪಿಸಿ ಸಾಮ್ರಾಜ್ಯವನ್ನು ಮುಸ್ಲಿಂ ದೊರೆಗಳಿಗೆ ಧಾರೆ ಎರೆಯಲು ಮುಂದಾದಾಗ ಹಂಡೆ ಅರಸರು ರಾಮರಾಯನ ಬೆಂಬಲಕ್ಕೆ ನಿಂತರಂತೆ.
ಹಂಡೆ ವಜೀರರು ಸಂಪೂರ್ಣವಾಗಿ ಸಸ್ಯಾಹಾರಿಗಳು. ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಇವರು ಎಡಕ್ಕೆ ಮುಸುಕು ಹಾಕುವ, ಧೋತಿ ಧರಿಸುವ ಸಂಪ್ರದಾಯವಿದೆ. ಹಿಂದಿನ ಕಾಲದಲ್ಲಿ ಇವರಲ್ಲಿ ವಿಶೇಷ ಆಚರಣೆ ಇತ್ತು. ಆದೇನೆಂದರೆ ಋತುಮತಿಯಾಗದ ಹೆಣ್ಣು ಮಕ್ಕಳನ್ನು ನೋಡಿ ಮದುವೆ ನಿಶ್ಚಯ ಮಾಡುತ್ತಿದ್ದರು. ವಿದವಾ ವಿವಾಹಕ್ಕೆ ಪ್ರೋತ್ಸಾಹ ಇರಲಿಲ್ಲ. ವೀರಭದ್ರನ ಆರಾಧಕರಾದ ಇವರಿಗೆ ಶ್ರೀಶೈಲ ಮಲ್ಲಿಕಾರ್ಜುನ ಸಹ ಆರಾಧ್ಯ ದೈವ. ಹಾಗೆಯೇ ಕೂಡಲ ಸಂಗಮದೇವ ಮನೆ ದೇವರು.
ನೂರಾರು ಎಕರೆ ಜಮೀನು: ಹಂಡೆ ವಜೀರ ಎಂಬುದು ಸಣ್ಣ ಸಮುದಾಯವಾದರೂ ಈ ಸಮಾಜದವರಿಗೆ ಕೃಷಿಯೇ ಮೂಲ ಕಸುಬು ಆಗಿದ್ದರಿಂದ ಒಬ್ಬೊಬ್ಬರೂ 200-300 ಎಕರೆ ಜಮೀನು ಹೊಂದಿದ್ದರು. ಈಗ ಕಡಿಮೆ ಆಗಿದೆ. ಕೆಲವರು ಈಗಲೂ ಜಮೀನು ಉಳಿಸಿಕೊಂಡಿದ್ದಾರೆ. ಇನ್ನೂ ಕೆಲವರು ವ್ಯವಸಾಯ ಬಿಟ್ಟು ಬೇರೆ ಬೇರೆ ಉದ್ಯೋಗಗಳ ಕಡೆ ಮುಖ ಮಾಡಿದ್ದಾರೆ. ಮದುವೆ ಸಂಬಂಧವನ್ನು ಇವರು ತಮ್ಮ ಸಮುದಾಯದವರ ಜೊತೆಗೆ ಮಾತ್ರ ಬೆಸೆಯುತ್ತಾರೆ. ಶೈವ ಪರಂಪರೆಗೆ ಸೇರಿದವರಾದ್ದರಿಂದ ಲಿಂಗಧಾರಣೆ ಮಾಡುತ್ತಾರೆ.
ಆದರೆ, ಕುರುಬ, ಪಂಚಮಸಾಲಿ ಮತ್ತು ರೆಡ್ಡಿ ಲಿಂಗಾಯತರಿಗೂ ನಮಗೂ ಸಂಬಂಧವಿಲ್ಲ. ಆದರೂ ಈ ಕುರಿತು ವಾದ, ವಿವಾದ ನಡೆದಿದೆ. ಹಂಡೆ ವಜೀರರು ಕುರುಬ, ಪಂಚಮಸಾಲಿ ಅಥವಾ ರೆಡ್ಡಿ ಲಿಂಗಾಯತ ಸಮುದಾಯ ಪಂಗಡ ಆಗಿರಬಹುದು ಎಂಬ ಚರ್ಚೆ ನಡೆದಿದೆ. ಸರ್ಕಾರದ ಜಾತಿ ಪಟ್ಟಿಯಲ್ಲಿ ನಮ್ಮನ್ನು 2ಎ ವರ್ಗಕ್ಕೆ ಸೇರಿಸಲಾಗಿದೆ ಎನ್ನುತ್ತಾರೆ ಪ್ರೊ. ಪಾಟೀಲರು.
ಇಂತಹ ಭರ್ಜರಿ ಇತಿಹಾಸ ಹೊಂದಿರುವ ಹಂಡೆ ವಜೀರ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಹೇಳುವುದಾದರೆ, ಹೊಸ ತಲೆಮಾರಿನವರು ಶಿಕ್ಷಣದಲ್ಲಿ ಮುಂದುವರಿಯುತ್ತಿದ್ದಾರೆ. ವೈದ್ಯ, ಎಂಜಿನಿಯರ್ ಸೇರಿದಂತೆ ವೃತ್ತಿ ಶಿಕ್ಷಣ ಕೋರ್ಸ್‌ಗಳತ್ತ ಗಮನ ಹರಿಸಿದ್ದಾರೆ. ಆರ್ಥಿಕ ಪರಿಸ್ಥಿತಿ ಕೊಂಚ ಪರವಾಗಿಲ್ಲ. ಶ್ರೀಮಂತರು, ಬಡವರು ಇದ್ದಾರೆ. ಆದರೆ, ರಾಜಕೀಯವಾಗಿ ಸಮುದಾಯ ಬೆಳೆದಿಲ್ಲ. ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಿಲ್ಲ. ನಿಗಮ-ಮಂಡಳಿಗಳಲ್ಲಾದರೂ ನಮ್ಮವರಿಗೆ ಸ್ಥಾನ ಸಿಗಬೇಗು ಎಂಬುದು ಹಂಡೆ ವಜೀರ ಸಮಾಜದ ರಾಜ್ಯಾಧ್ಯಕ್ಷ ಪಾಟೀಲರು.
ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ಸಕ್ರಿಯರಾಗಿರುವ ಅವರು, ಎರಡು ವರ್ಷದ ಹಿಂದೆ ರಾಜ್ಯಮಟ್ಟದ ಸಮಾವೇಶವನ್ನೂ ನಡೆಸಿದ್ದಾರೆ. ಸರ್ಕಾರದ ಮುಂದೆ ನಮ್ಮ ಯಾವುದೇ ಬೇಡಿಕೆಗಳಿಲ್ಲ. ಇನ್ನೊಬ್ಬರ ಮುಂದೆ ಬೇಡುವ ಬದಲು, ನಮಗೆ ನಾವೇ ಎದ್ದು ನಿಲ್ಲಬೇಕು. ಅಲ್ಲಿಯವರೆಗೂ ಉದ್ಧಾರ ಆಗುವುದಿಲ್ಲ ಎನ್ನುತ್ತಾರೆ ಪಾಟೀಲರು.
- ಕೆ.ವಿ.ಪ್ರಭಾಕರ
prabhukolar@yahoo.com