ಮೊನ್ನೆ ಹುಬ್ಬಳ್ಳಿಗೆ ಹೋಗಿದ್ದೆ. ಸಪ್ನಾ ಬುಕ್ ಹೌಸ್ ಹುಬ್ಬಳ್ಳಿ ಮಳಿಗೆ ಉದ್ಘಾಟನಾ ಕಾರ್ಯಕ್ರಮವಿತ್ತು. ಎಂಟು ವರ್ಷ ಆ ಅವಳಿ ನಗರದಲ್ಲಿ ಓದಿ ಬೆಳೆದಿದ್ದಕ್ಕೋ ಗೊತ್ತಿಲ್ಲ, ಹುಬ್ಬಳ್ಳಿ-ಧಾರವಾಡದಿಂದ ಕಾರ್ಯಕ್ರಮಕ್ಕೆ ಆಮಂತ್ರಣ ಬಂದರೆ ಅಲ್ಲಿಗೆ ಹೋಗಲು ಒಂದು ನೆಪ ಸಿಕ್ಕಿದಂತೆ. ಮನಸ್ಸು ಕೈ ಹಿಡಿದು ಎಳೆದುಕೊಂಡು ಹೋಗುತ್ತದೆ.
ಮೊನ್ನೆಯ ಸಪ್ನಾ ಬುಕ್ ಹೌಸ್ ಕಾರ್ಯಕ್ರಮ ಒಂದು ಪುಟ್ಟ ಸಾಹಿತ್ಯ ಸಮ್ಮೇಳನದಂತಿತ್ತು. ಹಿರಿ-ಕಿರಿಯ ನೂರಕ್ಕೂ ಹೆಚ್ಚು ಸಾಹಿತಿಗಳು, ಬರಹಗಾರರು, ಚಿಂತಕರು ಸೇರಿದ್ದರು. ಜಿ.ಎಸ್. ಆಮೂರರನ್ನು ನೋಡಿ ಬಹಳ ವರ್ಷಗಳಾಗಿದ್ದವು. ಕಲಬುರ್ಗಿ, ಚಂಪಾ, ಗಿರಡ್ಡಿ, ಪಟ್ಟಣಶೆಟ್ಟಿ, ಕಾಪಸೆ, ಕುಂವಿ, ಸನದಿ, ಕಣವಿ, ಎಚ್‌ಎಸ್‌ವಿ, ಹಂಪನಾ, ಕಮಲಾ ಹಂಪನಾ, ಪಂಚಾಕ್ಷರಿ ಹಿರೇಮಠ, ಹೇಮಾ ಪಟ್ಟಣಶೆಟ್ಟಿ, ಜಿ.ಎಂ.ಹೆಗಡೆ, ನಾಯ್ಕರ್, ರಮಾಕಾಂತ ಜೋಶಿ, ಸಾಹಿತ್ಯ ಭಂಡಾರದ ಸುಬ್ಬಣ್ಣ, ನಿರಂಜನ ವಾಲಿಶೆಟ್ಟರ್...ಹೀಗೆ ಹಲವಾರು ಜನ ಸೇರಿದ ಅಪರೂಪದ ಕಾರ್ಯಕ್ರಮ.
ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ನನ್ನ ನಡುವೆ ಸಣ್ಣ ಜಟಾಪಟಿ, ಮುನಿಸು ಇತ್ತು. ಆದರೆ ಅವರನ್ನು ಹಾಗೂ ಹೇಮಕ್ಕನನ್ನು ಕಂಡ ಕೂಡಲೇ ಮಾಯವಾಗಿ ಬಿಟ್ಟಿತು. ಬಹಳ ವರ್ಷಗಳ ಸ್ನೇಹ, ಪ್ರೀತಿ, ಆತ್ಮೀಯತೆಯ ನಡುವೆ ಸಣ್ಣ ಪುಟ್ಟ ಅಪಸ್ವರಗಳು ನೆಲೆ ನಿಲ್ಲುವುದಿಲ್ಲ. ಇದು ಮತ್ತೊಮ್ಮೆ ಸಾಬೀತಾಯಿತು.
ಈ ಎಲ್ಲ ಸಾಹಿತಿಗಳ ನಡುವೆ ಅಕ್ಷರ ಲೋಕದ ಅನೇಕ ಪ್ರಸಂಗಗಳು, ಹಾಸ್ಯ ಪ್ರಸಂಗಗಳು ಹಾದು ಹೋದವು. ಡಾ. ಎಂ.ಎಂ. ಕಲಬುರ್ಗಿಯವರು ಹೇಳಿದ ಗಳಗನಾಥರ ಪ್ರಸಂಗ ಸಂದರ್ಭೋಚಿತವಾಗಿತ್ತು. ಗಳಗನಾಥರು ಪುಸ್ತಕ ಬರೆದು, ಮುದ್ರಿಸಿ, ಅವನ್ನೆಲ್ಲ ತಲೆ ಮೇಲೆ ಹೊತ್ತುಕೊಂಡು ಮನೆಮನೆಗೆ ಹೋಗಿ ಮಾರುತ್ತಿದ್ದರಂತೆ. ಬೀದಿಗಳಲ್ಲಿ ತರಕಾರಿಗಳನ್ನು ಹರಡಿ ಮಾರುವಂತೆ ಮಾರಾಟ ಮಾಡುತ್ತಿದ್ದರಂತೆ. ಅಂಥ ಸ್ಥಿತಿಯಲ್ಲಿದ್ದ ಕನ್ನಡ ಪುಸ್ತಕಗಳಿಗೆ ಇಂದು ಹವಾನಿಯಂತ್ರಿತ ಮಳಿಗೆ (ಮಾಲ್)ಗಳಲ್ಲಿ ಸ್ಥಾನ ಸಿಗುತ್ತಿರುವುದು ಸಮಾಧಾನದ ಸಂಗತಿ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಬಿ. ವಾಲೀಕಾರ್‌ರು ಸಾಕಷ್ಟು ಮಾತನಾಡಿದರು. ಆದರೆ ಅದರ ಸಾರಾಂಶವೇನೆಂಬುದು ಗೊತ್ತಾಗಲಿಲ್ಲ. ಹುಬ್ಬಳ್ಳಿಗೆ ನಾನು ಹೋದದ್ದು ಗೊತ್ತಾದರೆ ಡಾ. ಜಿ.ಬಿ. ಸತ್ತೂರರು ಫೋನ್ ಮಾಡದೇ ಹೋಗುವುದಿಲ್ಲ. ಸಾಯಂಕಾಲ ಅವರ ಮನೆಗೆ ಭೇಟಿ. ವಿಜಯ ಸಂಕೇಶ್ವರರೂ ಅಲ್ಲಿಗೆ ಬಂದಿದ್ದರು. ಟೈಮ್ ವಿಷಯದಲ್ಲಿ ಅವರು ಯಮನಷ್ಟೇ ಖಂಡಿತವಾದಿ. ನಾನು ಐದು ನಿಮಿಷ ಮೊದಲೇ ಇದ್ದೆ. ಸಂಕೇಶ್ವರರು ತಮ್ಮ ಟೈಮ್‌ಸೆನ್ಸ್‌ನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಸಪ್ನಾ ಬುಕ್ ಹೌಸ್ ಮಳಿಗೆ ಉದ್ಘಾಟನೆ ಬೆಳಗ್ಗೆ ಹನ್ನೊಂದು ಗಂಟೆಗಿತ್ತು. ಬೆಳಗ್ಗೆ ಎಂಟು ಗಂಟೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲರು ಫೋನ್ ಮಾಡಿ, 'ಒಂದು ಗಂಟೆ ಪುರುಸೊತ್ತು ಮಾಡಿಕೊಳ್ಳಿ. ನಿಮಗೆ ಶುದ್ಧ ನೀರಿನ ಘಟಕ ತೋರಿಸುತ್ತೇನೆ' ಅಂದರು. ಒಂದು ವರ್ಷದ ಹಿಂದೆಯೇ ಅವರು ತಮ್ಮ ಊರಾದ ಹುಲಕೋಟಿಯಲ್ಲಿ ಈ ಘಟಕ ಸ್ಥಾಪಿಸಿದಾಗ ಆಮಂತ್ರಿಸಿದ್ದರು. ಕಾರಣಾಂತರಗಳಿಂದ ಹೋಗಲು ಆಗಿರಲಿಲ್ಲ. ಪತ್ರಿಕೆಗಳಲ್ಲಿ ಅವರ ಶುದ್ಧ ನೀರಿನ ಘಟಕಗಳ ಬಗ್ಗೆ ಪ್ರಶಂಸನಾತ್ಮಕ ವರದಿಗಳನ್ನು ಓದಿದ್ದೆ. ನೀರಿನ ಬಗ್ಗೆ ಧಾರೆಯಾಗಿ ಬರೆಯುತ್ತಿರುವ ನನ್ನ ಸಹೋದ್ಯೋಗಿ ರಾಧಾಕೃಷ್ಣ ಭಡ್ತಿ ಈ ಘಟಕವನ್ನು ನೋಡಿ ಬಂದು ವಿವರಿಸಿದ್ದರು. ಎಚ್.ಕೆ. ಪಾಟೀಲರ ದೂರಗಾಮಿ, ಜನಸ್ನೇಹಿ ಯೋಜನೆ ಸದ್ದಿಲ್ಲದೇ ಕಾರ್ಯಾರಂಭ ಮಾಡಿತ್ತು. ಆಗ ಅವರು ಅಧಿಕಾರದಲ್ಲಿ ಇರಲಿಲ್ಲ. ಗ್ರಾಮೀಣ ಜನರಿಗೆ ಪರಿಶುದ್ಧ ಕುಡಿಯುವ ನೀರನ್ನು ಪೂರೈಸುವ ಈ ಯೋಜನೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದರು.
ಮೊನ್ನೆ ಅವರು ಕರೆದಾಗ ತಕ್ಷಣ ಒಪ್ಪಿದೆ. ನನಗೂ ಅದನ್ನು ನೋಡಬೇಕೆಂಬ ಆಸೆಯಿತ್ತು.
'ನಮ್ಮ ದೇಶದ ಪ್ರಧಾನಿ ಎಂಥ ಪರಿಶುದ್ಧ ನೀರನ್ನು ಕುಡಿಯುತ್ತಾರೋ, ಈ ದೇಶದ ಕಟ್ಟಕಡೆಯ ವ್ಯಕ್ತಿ ಸಹ ಅಷ್ಟೇ ಶುದ್ಧವಾದ ನೀರನ್ನು ಕುಡಿಯುವಂತಾಗಬೇಕು. ಅದರ ಆಶಯದ ಫಲವೇ ಈ ಶುದ್ಧ ನೀರಿನ ಘಟಕ' ಎಂದರು ಪಾಟೀಲರು. ತೀರಾ ಸರಳ ಹಾಗೂ ತಾಂತ್ರಿಕವಾಗಿ ಸುಲಭವಾದ ಆ ಘಟಕವನ್ನು ಕೇವಲ ಐದು ನಿಮಿಷದಲ್ಲಿ ವಿವರಿಸಿದರು. ಹಾಗೆ ನೋಡಿದರೆ ಅದು ನೀರಿನಷ್ಟೇ ಸರಳ ಟೆಕ್ನಾಲಜಿ. ಈಗಾಗಲೇ ಒಂದು ನೂರಾ ಹತ್ತು ಗ್ರಾಮಗಳಲ್ಲಿ ಆ ಫಟಕ ಸ್ಥಾಪಿಸಿದ್ದಾರೆ.
ನಾವು ಕುಡಿಯುವ ಬಿಸ್ಲೇರಿ, ಕಿನ್ಲೆ ಮುಂತಾದ ಮಿನರಲ್ ವಾಟರ್‌ಗೆ ಲೀಟರ್‌ಗೆ ಹದಿನೈದು ರುಪಾಯಿ ಕೊಡುತ್ತೇವೆ. ಪಾಟೀಲರು ಸ್ಥಾಪಿಸಿರುವ ಶುದ್ಧ ನೀರು ಘಟಕದಲ್ಲಿನ ನೀರು ಸಹ ಅದೇ ಗುಣಮಟ್ಟವನ್ನು ಹೊಂದಿದೆ. ಅವರಿಗೆ ತಗಲುವ ವೆಚ್ಚ ಹತ್ತು ಪೈಸೆ. ಒಂದು ರುಪಾಯಿಗೆ ಹತ್ತು ಲೀಟರ್ ನೀರನ್ನು ಅವರು ಕೊಡುತ್ತಾರೆ. ಮಿನರಲ್ ವಾಟರ್ ಕಂಪನಿಗಳು ಯಾವ ರೀತಿ ಸುಲಿಯುತ್ತವೆ ಗಮನಿಸಿ. 'ಈ ವರ್ಷದ ಅಂತ್ಯದೊಳಗೆ ಸರ್ಕಾರದ ವತಿಯಿಂದ ಒಂದು ಸಾವಿರ ಗ್ರಾಮಗಳಲ್ಲಿ ಈ ಘಟಕ ಸ್ಥಾಪಿಸುತ್ತೇನೆ' ಎಂದರು. ನಿಜಕ್ಕೂ ಅವರ ಬಗ್ಗೆ ಮೆಚ್ಚುಗೆಯಾಯಿತು.
ಈ ಘಟಕ ಸ್ಥಾಪನೆಯಿಂದ ಏನಾಗಿದೆ?
ಪಾಟೀಲರು ಒಂದು ಪ್ರಸಂಗ ಹೇಳಿದರು. ಚುನಾವಣಾ ಸಂದರ್ಭದಲ್ಲಿ ಸುಮಾರು ಇನ್ನೂರು ವೈದ್ಯರು ಅವರನ್ನು ಭೇಟಿ ಮಾಡಿದ್ದರಂತೆ. ಆ ಸಂದರ್ಭದಲ್ಲಿ ಅವರೊಂದಿಗೆ ಮಾತಾಡುವಾಗ, ಅವರೆಲ್ಲರೂ ಹೇಳಿದ ಸಂಗತಿಯೇನೆಂದರೆ ಗ್ರಾಮೀಣ ಪ್ರದೇಶಗಳಲ್ಲಿ, ಶುದ್ಧ ನೀರಿನ ಘಟಕ ಸ್ಥಾಪಿಸಿದ ಹಳ್ಳಿಗಳಲ್ಲಿ ಅಲ್ಲಿನ ಡಾಕ್ಟರ್‌ಗಳಿಗೆ ಶೇ. ನಲವತ್ತರಷ್ಟು ರೋಗಿಗಳು ದವಾಖಾನೆಗೆ ಬರುವುದು ಕಡಿಮೆಯಾಗಿದೆ! ಗ್ರಾಮೀಣ ಪ್ರದೇಶಗಳಲ್ಲಿ ಜಲಜನ್ಯ ರೋಗಗಳಿಗೆ ತುತ್ತಾಗುವವರೇ ಹೆಚ್ಚು. ಶುದ್ಧ ನೀರನ್ನು ಪೂರೈಸಿದರೆ ಎಂಥ ಅದ್ಭುತ ಬದಲಾವಣೆ ತರಬಹುದೆಂಬುದಕ್ಕೆ ಇದೊಂದು ನಿದರ್ಶನ.
ಇದಾದ ಬಳಿಕ ಪಾಟೀಲರು ಶೌಚಾಲಯದ ನಿರ್ಮಾಣದ ಪ್ರಸ್ತಾಪ ಮಾಡಿದರು. ತಡೆದುಕೊಳ್ಳಲಾಗಲಿಲ್ಲ, ನಾನೇ ನಡುವೆ ಬಾಯಿ ಹಾಕಿ ಅವರಿಗೊಂದು ಪ್ರಶಂಸೆ ಸಲ್ಲಿಸಿದೆ. 'ಒಂದೆಡೆ ದೇಶ ನಿರ್ಮಾಣ, ಅಭಿವೃದ್ಧಿ ಮಾತಾಡ್ತೇವೆ ಆದರೆ ಹಳ್ಳಿಗಳಲ್ಲಿ ಶೌಚಾಲಯವೇ ಇಲ್ಲವಲ್ಲ. ಮಾನವ ನಾಗರಿಕತೆ ಆರಂಭವಾಗಿದ್ದೇ ಶೌಚಾಲಯದಿಂದ. ಆದರೆ ಅದೇ ಇಲ್ಲ. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಬಹಿರ್ದೆಸೆಗೆ ಒಂದೆರಡು ಕಿ.ಮಿ. ನಡೆದು ಹೋಗಬೇಕು. ಮಹಿಳೆಯರು ಅದರಲ್ಲೂ ಗರ್ಭಿಣಿಯರ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಪ್ರತಿ ವರ್ಷ ಬಹಿರ್ದೆಸೆಗೆ ಹೋದಾಗ ನೂರಕ್ಕೂ ಹೆಚ್ಚು ಮಹಿಳೆಯರು ಹಾವು ಕಚ್ಚಿ ಸಾಯುತ್ತಾರೆ. ಪೊಲೀಸ್ ಠಾಣೆಗಳಲ್ಲಿ ಅಸ್ವಾಭಾವಿಕ ಸಾವು ಅಂತ ದಾಖಲಾಗುತ್ತಿವೆ. ಶೌಚಾಲಯವನ್ನೇ ಕಟ್ಟದವರು ದೇಶವನ್ನು ಕಟ್ಟುವುದೆಂತು? ದೇಶ ನಿರ್ಮಾಣದ ಕಾರ್ಯ ಅಲ್ಲಿಂದಲೇ ಆರಂಭವಾಗಬೇಕು. ನೀವು ಆ ನಿಟ್ಟಿನಲ್ಲಿ ಯೋಚಿಸಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೀರಲ್ಲಾ, ಅದಕ್ಕೇ ಪ್ರಶಂಸೆ' ಎಂದೆ.
'ಈ ಆರ್ಥಿಕ ವರ್ಷದೊಳಗೆ ರಾಜ್ಯದಲ್ಲಿ ಆರು ಲಕ್ಷ ಶೌಚಾಲಯ ನಿರ್ಮಿಸಲು ತೀರ್ಮಾನಿಸಿದ್ದೇವೆ. ಪ್ರತಿ ಹಳ್ಳಿಯಲ್ಲಿಯೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಎರಡು ಕಮೋಡ್‌ಗಳುಳ್ಳ ಶೌಚಾಲಯ ನಿರ್ಮಿಸಲಾಗುವುದು' ಎಂದರು ಪಾಟೀಲರು.
ಎಚ್ಕೆ ಪಾಟೀಲರ ಬಗ್ಗೆ ಹೆಚ್ಗೆ ಹೇಳುವ ಅಗತ್ಯವಿಲ್ಲ. ಅವರು ಎಲ್ಲರಿಗೂ ಗೊತ್ತು. ಅವರ ಸಜ್ಜನಿಕೆ, ಕರ್ತೃತ್ವಶೀಲತೆ, ಸಂವೇದನೆ, ಸೂಕ್ಷ್ಮ ಮನಸ್ಸು ಅನೇಕರಿಗೆ ಗೊತ್ತಿದೆ. ಅವರ ಸಾಮರ್ಥ್ಯದ ಬಗ್ಗೆ ಸಂದೇಹವಿಲ್ಲ. ಅವರು ಅಂದುಕೊಂಡಿದ್ದನ್ನು ನೆರವೇರಿಸಿದರೆ ನಮ್ಮ ಹಳ್ಳಿಗಳ ಚಿತ್ರಣವಾದರೂ ಬದಲಾದೀತು. ಅದರ ಪುಣ್ಯ ಬೇಕಾದರೆ ಪಾಟೀಲರಿಗೆ ಸಿಗಲಿ.
***
ರವಾಂಡಾದಲ್ಲಿ ಕೇಳಿದ ಜೋಕುಗಳು
ರವಾಂಡಾದಲ್ಲಿ ನಾನು ಉಳಿದುಕೊಂಡ ಸೆರಿನಾ ಕಿಗಾಲಿ ಹೋಟೆಲಿನ ಮ್ಯಾನೇಜರ್ ಜತೆ ಹರಟುವಾಗ, 'ಪಕ್ಕಾ ರವಾಂಡಾದ ಜೋಕುಗಳಿದ್ದರೆ ಹೇಳಿ' ಅಂದೆ. 'ನೀವು ನಗ್ತೀರಾ ಅಂದ್ರೆ ಎಷ್ಟು ಬೇಕಾದರೂ ಹೇಳ್ತೇನೆ' ಅಂದ. ಆತ ಹೇಳಿದ ಹತ್ತಾರು ಜೋಕುಗಳ ಪೈಕಿ ಕೆಲವು.
- 'ರವಾಂಡಾದ ಜನ ಒಂದು ಜೋಕಿಗೆ ಮೂರು ಸಲ ನಗುತ್ತಾರೆ ಗೊತ್ತಾ?' ಅಂತ ಹೇಳಿದ. 'ಯಾಕೆ?' ಅಂದೆ. ಅದಕ್ಕೆ ಆತ ಹೇಳಿದ-'ಹೇಳಿದ ತಕ್ಷಣ ಮೊದಲ ಬಾರಿಗೆ ನಗುತ್ತಾರೆ. ಅದೇ ಜೋಕನ್ನು ವಿವರಿಸಿ ಹೇಳಿದಾಗ ಎರಡನೇ ಬಾರಿಗೆ ನಗುತ್ತಾರೆ ಹಾಗೂ ಮೂರನೇ ಬಾರಿಗೆ ನಗೋದು ಜೋಕು ಅರ್ಥವಾದಾಗ.'
- 'ನಿಮಗೆ ಗೊತ್ತಾ, ರವಾಂಡಾದ ಮಂದಿ ಮನೆ ಪೇಂಟ್ ಮಾಡುವಾಗ ಎರಡೆರಡು ಕೋಟ್ ಧರಿಸಿರುತ್ತಾರೆ! ಕಾರಣ ಗೊತ್ತಾ? ಅಂತ ಕೇಳಿದ. 'ಯಾಕೆ?' ಅಂದೆ. 'ಪೇಂಟ್ ಡಬ್ಬಾ ಮೇಲೆ ಸೂಚನೆ ಬರೆದಿರುತ್ತಾರೆ- Put on two coats.ಅದಕ್ಕೇ' ಅಂದ.
- ಒಮ್ಮೆ ತಪ್ಪು ಮಾಡಿದ ಮೂವರನ್ನು ಮರುಭೂಮಿಗೆ ಅಟ್ಟಿದ ಬೇತಾಳ ಬರುವಾಗ ಜತೆಯಲ್ಲಿ ಏನಾದರೂ ಒಂದು ವಸ್ತುವನ್ನು ತರುವಂತೆ ಹೇಳಿದ. ಉಗಾಂಡಾದಿಂದ ಹೋದವ, ಬರುವಾಗ ಒಂದು ಪ್ಲೇಟನ್ನು ತಂದ. ಬೇತಾಳ 'ಪ್ಲೇಟನ್ನು ಯಾಕೆ ತಂದಿದ್ದೀಯಾ?' ಎಂದು ಕೇಳಿತು. ಅದಕ್ಕೆ ಉಗಾಂಡಾದವ 'ಹಸಿವಾದಾಗ ತಿನ್ನಲು' ಅಂದ.
ಎರಡನೆಯವನು ತಾಂಜಾನಿಯದವ. ಆತ ಬರುವಾಗ ಕಪ್ಪು ಟವಲ್ ತಂದಿದ್ದ. 'ಕಪ್ಪು ಟವಲ್ ಯಾಕೆ?' ಬೇತಾಳ ಪ್ರಶ್ನಿಸಿತು. 'ಬಿಳಿ ಟವಲ್‌ನಲ್ಲಿ ಮುಖ ಒರೆಸಿಕೊಂಡರೆ ಟವಲ್ಲು ಕಪ್ಪಾದೀತು' ಎಂದ ತಾಂಜಾನಿಯದವ.
ಮೂರನೆಯವನು ರವಾಂಡಾದವ. ಆತ ಬರುವಾಗ ಕಾರಿನ ಡೋರ್ ಅನ್ನು ತಂದಿದ್ದ. ಬೇತಾಳ ಕೇಳಿತು-' ಹೋಗಿ ಹೋಗಿ ಕಾರಿನ ಡೋರನ್ನು ಕಿತ್ತು ತಂದಿದ್ದೀಯಲ್ಲ ಯಾಕೆ?' ರವಾಂಡಾದ ಪ್ರಜೆ ಹೇಳಿದ-'ತೀರಾ ಸೆಖೆಯಾದಾಗ ಕಾರಿನ ಗ್ಲಾಸನ್ನು ಇಳಿಸಿಕೊಳ್ಳಬಹುದಲ್ಲ.'
- ಕೊಬಾನಿಗೆ ವಿಪರೀತ ಹಲ್ಲು ನೋವು ಬಂತು. ಏನು ಮಾಡಬೇಕೆಂದು ತೋಚದೇ ಪಕ್ಕದ ಮನೆಯವನ ಬಾಗಿಲು ಬಡಿದ. 'ಅಸಾಧ್ಯ ಹಲ್ಲು ನೋವು. ತಡೆದುಕೊಳ್ಳಲಾಗುತ್ತಿಲ್ಲ' ಎಂದು ಅಂಗಲಾಚಿದ. ಕೊಬಾನನ್ನು ಸಂತೈಸುತ್ತಾ ಪಕ್ಕದ ಮನೆಯವ ಹೇಳಿದ-'ನಿನ್ನ ನೋವು ಏನೂ ಇಲ್ಲ. ನನಗೂ ನಾಲ್ಕು ದಿನಗಳ ಹಿಂದೆ ವಿಪರೀತ ಹಲ್ಲು ನೋವು ಬಂದಿತ್ತು. ನಾನು ನನ್ನ ಹೆಂಡತಿಯನ್ನು ಚುಂಬಿಸಿದೆ. ತಕ್ಷಣ ಹಲ್ಲು ನೋವು ಮಾಯವಾಯ್ತು.' ಅದಕ್ಕೆ ತಕ್ಷಣ ಕೊಬಾ ಕೇಳಿದ-
'ಎಲ್ಲಿದ್ದಾಳೆ ನಿನ್ನ ಹೆಂಡತಿ, ಅವಳನ್ನು ಬರಲು ಹೇಳು.'
- ವಿಶ್ವೇಶ್ವರ ಭಟ್