ಅಂಕಣಗಳು

ಕಾಲು ಮತ್ತು ಬಾಯಿ ರೋಗಕ್ಕೆ ಆಧುನಿಕ ತಂತ್ರಜ್ಞಾನದ ಲಸಿಕೆ

"ಕಾಲು ಮತ್ತು ಬಾಯಿ" ರೋಗ ಮುಖ್ಯವಾಗಿ ಹಸುಗಳಿಗೆ, ಕುರಿ ಮತ್ತು ಹಂದಿಗಳಿಗೆ ಅತ್ಯಂತ ವೇಗ ಗತಿಯಲ್ಲಿ ತಗುಲುವ ಅಂಟು ರೋಗ. ಈ ರೋಗಕ್ಕೆ ಮುಖ್ಯ ಕಾರಣ  FMDV ಎಂಬ ವೈರಾಣು. ಈ ರೋಗ ಅತ್ಯಂತ ಹಾನಿಕಾರಕ ರೋಗವಾದ್ದರಿಂದ, ಪ್ರಪಂಚದಲ್ಲಿ ವರ್ಷಂಪ್ರತಿ, ಸರಾಸರಿ 20ರಿಂದ 25 ಬಿಲಿಯನ್ ಡಾಲರ್‌ನಷ್ಟು ನಷ್ಟ ಉಂಟು ಮಾಡುತ್ತಿದೆ. ಭಾರತದಲ್ಲೇ ವರ್ಷಕ್ಕೆ ಸುಮಾರು ಒಂದು ಬಿಲಿಯನ್ ಡಾಲರ್‌ನಷ್ಟು ಹಾನಿ ಮಾಡುತ್ತಿದೆ.
ಭಾರತದಲ್ಲಿ ಈ ರೋಗ ತಳ ಊರಿ ದಶಕಗಳೇ ಕಳೆದಿವೆ. ಕಾಲು ಮತ್ತು ಬಾಯಿ ರೋಗಕ್ಕೆ ಇರುವ ಒಂದೇ ಒಂದು ಸಿದ್ಧೌಷಧ ಎಂದರೆ ಸಜೀವ ವೈರಾಣುಗಳಿಂದ ತಯಾರಿಸಿದ ಲಸಿಕೆ. ಭಾರತದಲ್ಲಿ ಸುಮಾರು 600ರಿಂದ 800 ಮಿಲಿಯನ್ ಲಸಿಕೆಗಳ ಅವಶ್ಯಕತೆಯಿದ್ದು, ಕೇವಲ 300 ಮಿಲಿಯನ್ ಲಸಿಕೆಗಳನ್ನು ಮಾತ್ರ ತಯಾರು ಮಾಡುವಷ್ಟು ಶಕ್ತಿಯುತವಾಗಿದೆ. ಮತ್ತೊಂದು ಅತಿ ಮುಖ್ಯವಾದ ಕಷ್ಟಕರ ಸಂಗತಿಯೆಂದರೆ, ಈ ಲಸಿಕೆಗಳನ್ನು ತಯಾರಿಕಾ ಘಟಕಗಳಿಂದ ಹಿಡಿದು ಪ್ರಾಣಿಗಳಿಗೆ ಚುಚ್ಚು ಮದ್ದು ಕೊಡುವ ತನಕ, ಸಂಪೂರ್ಣವಾಗಿ ಶೈತ್ಯೀಕರಣವಾದ ಸರಕು-ಸಾಗಣೆಯ ಉಪಕರಣಗಳಿಂದ ಸಾಗಿಸಬೇಕು. ಭಾರತದಂಥ ದೇಶಗಳಲ್ಲಿ ಇದು ಸಾಧ್ಯವೇ ಇಲ್ಲ. ಹೀಗಾಗಿ ದೇಶದ ಅತ್ಯಂತ ಹಳ್ಳಿಗಾಡು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಹೈನುಗಾರಿಕೆ ನಡೆಸುತ್ತಿರುವ ರೈತಾಪಿಗಳಿಗೆ ಈ ಲಸಿಕೆಗಳು ಲಭ್ಯವಾಗದೆ, ಕೈ ಕೈ ಹಿಸುಕಿಕೊಂಡು ಕೂರಬೇಕಾದ ಸ್ಥಿತಿ ಇದೆ. ಅದೂ ಅಲ್ಲದೇ ಲಸಿಕಾ ತಯಾರಿಕಾ ಘಟಕಗಳನ್ನೂ ಸಹ ಅತ್ಯಂತ ಜಾಗರೂಕತೆಯಿಂದ ನಡೆಸಬೇಕಾಗುತ್ತದೆ. ಭಾರತದಲ್ಲಿ ಸುಮಾರು 550 ಮಿಲಿಯನ್ ಪ್ರಾಣಿಗಳು ದೇಶದ ಹೈನುಗಾರಿಕೆಯಲ್ಲಿವೆ ಎಂದು ಅಂದಾಜು ಮಾಡಲಾಗಿದೆ. ಒಂದು ರೀತಿಯಲ್ಲಿ ಈ ಪ್ರಾಣಿಗಳು ದೇಶದ ಬಡ ರೈತನ ಸಂಪತ್ತು. ಈ ಸಂಪತ್ತನ್ನು ಕಾಪಾಡುವುದಲ್ಲದೆ, ಸದಾಕಾಲ ಅಭಿವೃದ್ಧಿ ಪಡಿಸಿಕೊಂಡು ಬರಬೇಕು. ಕಾಲು ಮತ್ತು ಬಾಯಿ ಜ್ವರವನ್ನು ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ಮಾಡುವಂತಿಲ್ಲ. ಹಳೆ ತಂತ್ರಜ್ಞಾನದಿಂದ ತಯಾರಿಸಿದ ಲಸಿಕೆಗಳನ್ನು ಸಂಪೂರ್ಣವಾಗಿ ಹಾಗೂ ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮೇಲೆ ತಿಳಿಸಿರುವ ಕಾರಣಗಳಿಂದಾಗಿ, ಕಾಲು ಮತ್ತು ಬಾಯಿ ಜ್ವರದ ಲಸಿಕೆಗಳನ್ನು ಉಪಯುಕ್ತವಾಗಿ ತಯಾರಿಸಬೇಕಾಗಿದೆ. ಈ ಕಾರಣಕ್ಕಾಗಿಯೇ ಆಧುನಿಕ ತಂತ್ರಜ್ಞಾನದ ಮೊರೆ ಹೋಗಬೇಕಿದೆ. ಈ ಆಧುನಿಕ ತಂತ್ರಜ್ಞಾನ ಮತ್ತೆ ಬೇರಾವುದೂ ಅಲ್ಲ. ಅದೇ ಜೈವಿಕ ತಂತ್ರಜ್ಞಾನ. ಹಾಗೆಂದ ಮಾತ್ರಕ್ಕೆ ಇದು ಕುಲಾಂತರಿ ತಂತ್ರಜ್ಞಾನವೂ ಅಲ್ಲ. ಜೈವಿಕ ತಂತ್ರಜ್ಞಾನದಲ್ಲಿ ಕುಲಾಂತರಿ ತಂತ್ರಜ್ಞಾನ ಕೇವಲ ಒಂದು ಸಣ್ಣ ಭಾಗವಷ್ಟೇ. ಕಾಲು ಮತ್ತು ಬಾಯಿ ಜ್ವರದ ವೈರಾಣುವಿನ ಲಸಿಕೆ ಸಜೀವ ವೈರಾಣುವಿನಿಂದ ತಯಾರಿಸಿದ ಲಸಿಕೆಯಲ್ಲ. ಅದರ ಬದಲಾಗಿ, ಇದು ಕೃತಕ ಸಂಯೋಗದಿಂದ (Synthetic) ಆವಿಷ್ಕರಿಸುವಂತಾದ್ದು. ಇಲ್ಲಿ ಮುಖ್ಯವಾಗಿ ರಾಸಾಯನಶಾಸ್ತ್ರ, ಭೌತಿಕ ಜೀವಶಾಸ್ತ್ರ ಮತ್ತು ಗಣಕ ಶಾಸ್ತ್ರದಿಂದ ಆವಿಷ್ಕರಿಸಿದ ಲಸಿಕೆ. ಆಧುನಿಕ ಜೈವಿಕ ತಂತ್ರಜ್ಞಾನ ಪರಿಪಕ್ವವಾಗಿ ಹುಟ್ಟುವುದಕ್ಕೆ ಜೀವಶಾಸ್ತ್ರಕ್ಕೆ ಬೇರೆ, ಬೇರೆ ವಿಜ್ಞಾನಗಳು ಪೂರಕವಾಗಿ ಸಹಾಯ ಮಾಡಿವೆ. ಆಧುನಿಕ ಜೈವಿಕ ತಂತ್ರಜ್ಞರಿಗೆ ಜೀವಶಾಸ್ತ್ರದೊಂದಿಗೆ, ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಗಣಕ ತಂತ್ರಜ್ಞಾನವೆಲ್ಲವನ್ನೂ ತಿಳಿದಿರಬೇಕು. ಕ್ಷ-ಕಿರಣದ ಹರಳು ಶಾಸ್ತ್ರ ಮತ್ತು ಗಣಕ ಯಂತ್ರ ಆಧಾರಿತ ರಚಿಸಿದ ವೈರಾಣುವಿನ ಪ್ರೋಟೀನ್ ಕವಚವನ್ನು ಅಣು ಅಣುವಾಗಿ ಬದಲಾವಣೆ ಮಾಡಿ ತಯಾರಿಸಿದ್ದಾಗಿದೆ. ಇದರಿಂದ ವೈರಾಣು ಲಸಿಕೆಯನ್ನು ಭದ್ರ ಮಾಡಿದ್ದಾಗಿದೆ. ಇದರಿಂದ ಈ ಆಧುನಿಕ ಲಸಿಕೆಗೆ ಶೀತಲೀಕರಣ ಉಪಕರಣಗಳು ಬೇಕಾಗುವುದಿಲ್ಲ. ಹಾಗಾಗಿ, ಈ ಆಧುನಿಕ ಕಾಲು ಮತ್ತು ಬಾಯಿ ಜ್ವರವನ್ನು ಯಾವ ತೊಂದರೆಯಿಲ್ಲದೆ ದೇಶದ ಎಲ್ಲ ಮೂಲೆಗಳಿಗೆ ಸಾಗಿಸಬಹುದು ಮತ್ತು ಬಹಳಷ್ಟು ಕಾಲ ದಾಸ್ತಾನು ಮಾಡಬಹುದು. ಈ ಲಸಿಕೆ ಇನ್ನು ನಾಲ್ಕು ಅಥವಾ ಐದು ವರ್ಷಗಳಲ್ಲಿ ಮಾರುಕಟ್ಟೆಗೆ ಲಭ್ಯವಾಗಬಹುದು.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲಸಿಕೆ ಸ್ಥಿರವಾಗಿ ಇಲ್ಲದಿರುವುದಕ್ಕೆ ಕಾರಣವೆಂದರೆ, ತನ್ನ ಪ್ರೋಟೀನ್ ಕವಚ ಅತಿ ಉಷ್ಣಾಂಶ ಅಥವಾ ಆಮ್ಲಾಂಕ 7ಕ್ಕಿಂತ ಕಡಿಮೆಯಾದರೆ, ತನ್ನ ಕವಚವನ್ನು ಬೇರ್ಪಡಿಸುತ್ತದೆ. ಅದರೊಳಗಿರುವ RNA ಅಣುವನ್ನು ಹೊರಸೂಸಿ ತನ್ನ ಸ್ಥಿರತೆಗೆ ಧಕ್ಕೆ ತಂದುಕೊಳ್ಳುತ್ತದೆ. ಇದರಿಂದಾಗಿ ಹೆಚ್ಚು ದಿನಗಳ ಕಾಲ ಹೊರಗಿಡಲಾಗದು. ಕುಲಾಂತರಿ ತಂತ್ರಜ್ಞಾನದಿಂದ ಸ್ಥಿರತೆ ಇರುವ ಪ್ರೋಟೀನ್ ಕೋಟ್‌ನ್ನು ತಯಾರಿಸಬಹುದಾಗಿದ್ದರೂ ಅದು ಸರಿಯಾದ ಪ್ರಮಾಣದಲ್ಲಿ ತನಗೆ, ತಾನೆ ಸರಿಯಾದ ಅಣುಸೂತ್ರದಲ್ಲಿ ಮಿಶ್ರಿತವಾಗದೆ, ಆ ಲಸಿಕೆ ವಿಷಕಾರಕವಾಗುತ್ತದೆ. ಹಾಗಾಗಿ, ಈ ಸಿಂಥೆಟಿಕ್ ಲಸಿಕೆಯನ್ನು ಸಿದ್ಧಪಡಿಸಲಾಗಿದೆ. ಈ ಕಾಲು-ಬಾಯಿ ಜ್ವರದ ಲಸಿಕೆಯನ್ನು ಇಂಗ್ಲೆಂಡಿನ ಕ್ಲಾಡೀನ್ ಪೋರ್ಟ್ ಮತ್ತು ಸಂಗಡಿಗರು ತಯಾರಿಸಿದ್ದಾರೆ. ಈ ತರಹದ ಲಸಿಕೆಗೆ ಯಾವುದೇ ತರಹದ ಅತಿ ಸೂಕ್ಷ್ಮವಾದ ಮತ್ತು ಅತಿ ಸುರಕ್ಷಿತವಾದ ತಯಾರಿಕಾ ಘಟಕಗಳು ಬೇಕಾಗಿಲ್ಲ. ಈ ಲಸಿಕೆಯನ್ನು ನೂರು ಮತ್ತು ನೂರೈವತ್ತು ಕೆಜಿ ತೂಕದ ಹಾಲ್‌ಸ್ವೀನ್ ಹಸುಗಳ ಮೇಲೆ ಪ್ರಯೋಗ ಕೂಡ ಮೂರು ವಾರದಿಂದ ಐದು ವಾರದೊಳಗೆ ಮಾಡಿಯಾಗಿದೆ.
ಭಾರತ ಸರ್ಕಾರ ಎಂಟನೂರರಿಂದ ಸಾವಿರ ಮಿಲಿಯನ್ ತಯಾರಿಸುವುದಕ್ಕೆ ಖಾಸಗಿ ಕಂಪನಿಗಳ ಸಹಯೋಗದಿಂದ ಹೊಸ ಲಸಿಕೆ ತಯಾರಿಕಾ ಘಟಕಗಳನ್ನು ಆರಂಭಿಸಲು ಚಿಂತಿಸುತ್ತಿದೆ. ಅದರ ಬದಲಾಗಿ, ಈ ಕೃತಕ ಲಸಿಕೆ ತಯಾರು ಮಾಡುವ ತಂತ್ರಜ್ಞಾನವನ್ನು ಪಡೆದುಕೊಂಡು ಕಡಿಮೆ ವೆಚ್ಚದಲ್ಲಿ ಕಾಲು ಮತ್ತು ಬಾಯಿ ಜ್ವರ ನಿಯಂತ್ರಣ ಲಸಿಕೆಯನ್ನು ತಯಾರು ಮಾಡುವ ತ್ವರಿತ ಯತ್ನ ಮಾಡಬೇಕು. ಈ ತರಹದ ಜೈವಿಕ ತಂತ್ರಜ್ಞಾನಕ್ಕೆ ಯಾವ ವಿರೋಧವೂ ಇರುವುದಿಲ್ಲವೆಂದು ನನ್ನ ನಂಬಿಕೆ. ಭಾರತ ದೇಶದಲ್ಲಿ ಖಾಸಗಿ ಕಂಪನಿಗಳಲ್ಲಿ ಲಸಿಕೆ ತಯಾರು ಮಾಡುವ ಶಕ್ತಿ ಬೇಕಾದಷ್ಟಿದೆ. ಅವುಗಳನ್ನು ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಸಹಯೋಗದಲ್ಲಿ ಅತ್ಯಂತ ವೇಗ ಗತಿಯಲ್ಲಿ ಲಸಿಕೆಗಳನ್ನು ಬೇಕಾದ ರೈತರಿಗೆಲ್ಲಾ ಅತ್ಯಂತ ಕಡಿಮೆ ದರದಲ್ಲಿ ನೀಡಬಹುದು ಮತ್ತು ಪರಿಣಾಮಕಾರಿಯಾಗಿ ಕಾಲು ಮತ್ತು ಬಾಯಿ ಜ್ವರವನ್ನು ನಿಯಂತ್ರಿಸಬಹುದಾಗಿದೆ.

- ಪ್ರೊ. ಶಾಂತು ಶಾಂತಾರಾಮ್,
ಐಯೋವ ರಾಜ್ಯ ಕೃಷಿ ವಿವಿ
Shanthus@iastate.edu

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!