ಅಂಕಣಗಳು

ಗ್ರಾಮ ಜೀತ ಪದ್ಧತಿಯಲ್ಲಿ ಬದುಕು ಸವೆಸಿದ ಹಡಪದರು

ವೃತ್ತಿಯಲ್ಲಿ ಇವರು ಕ್ಷೌರಿಕರು. ಪಾಲಿಸುವುದು ಲಿಂಗಾಯತ ಸಂಪ್ರದಾಯ. ಕಾರಣ,...

ವೃತ್ತಿಯಲ್ಲಿ ಇವರು ಕ್ಷೌರಿಕರು. ಪಾಲಿಸುವುದು ಲಿಂಗಾಯತ ಸಂಪ್ರದಾಯ. ಕಾರಣ, ಜಗಜ್ಯೋತಿ ಬಸವೇಶ್ವರರ ಆಪ್ತಮಿತ್ರ ಈ ಸಮುದಾಯದವರ ಮೂಲ ಪುರುಷ.
ದಿನಕ್ಕೆ ಎರಡು ಬಾರಿ ಸ್ನಾನ. ಹಣೆಯಲ್ಲಿ ವಿಭೂತಿ ಧಾರಣೆ, ಶಿವಪೂಜೆ, ಜಂಗಮ ಆರಾಧನೆ, ದೇವರ ಭಜನೆ, ಈ ಸಮುದಾಯದ ಸ್ಪೆಷಾಲಿಟಿ. ಆಂದಹಾಗೆ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರು ಈ ಜನ. ಅವರೇ 'ಹಡಪದ'ರು.
ಈ ಸಮುದಾಯದವರ ಮೂಲ ಪುರುಷ ಹಡಪದ ಅಪ್ಪಣ್ಣ. ಆತ ಬಸವಣ್ಣನವರ ಖಾಸಾ ಸ್ನೇಹಿತ. ಎಂಥ ಮಿತ್ರ ಎಂದರೆ ಬಸವಣ್ಣನವರ ಮನೆಯ ವ್ಯವಹಾರಗಳು ಮತ್ತು ಅನುಭವ ಮಂಟಪದ ಕಾರುಬಾರು ನೋಡಿಕೊಳ್ಳುತ್ತಿದ್ದುದು ಅಪ್ಪಣ್ಣನೇ.
ಇದಕ್ಕಿಂತ ಮುಖ್ಯವಾಗಿ ಬಸವಣ್ಣನವರ ತಾಂಬೂಲದ ಚೀಲ ಸದಾ ಇರುತ್ತಿದ್ದುದು ಅಪ್ಪಣ್ಣ ಬಳಿ. ಹಡಪದ ಎಂದರೆ ಅಡಕೆ ಚೀಲ. ಅದನ್ನು ಇಟ್ಟುಕೊಳ್ಳುತ್ತಿದ್ದುದರಿಂದ ಹಡಪದ ಅಪ್ಪಣ್ಣ ಎಂಬ ಹೆಸರು ಬಂತು. ಅದು ಸಮುದಾಯವೊಂದರ ಉಗಮಕ್ಕೂ ಕಾರಣ ಆಯಿತು. ಅಂದಹಾಗೆ ಕ್ಷೌರ ಮಾಡುವುದು ಸಮುದಾಯದ ಕಸುಬು.
ಗ್ರಾಮ ಜೀತ ಪದ್ಧತಿ : ಹಿಂದಿನಿಂದಲೂ ಗ್ರಾಮ ಜೀತ ಪದ್ಧತಿಯಲ್ಲಿ ಬದುಕು ಸವೆಸಿದವರು ಈ ಮಂದಿ. ಈಗಲೂ ಅದೇ ಸ್ಥಿತಿ ಅವರನ್ನು ಸುತ್ತಿಕೊಂಡಿದೆ. ಇಡೀ ಜಗತ್ತು ಅಧುನಿಕತೆಯತ್ತ ಮುಖ ಮಾಡಿದ್ದರೂ ಹಳ್ಳಿಗಳಲ್ಲಿರುವ ಈ ಸಮುದಾಯದ ಜನರ ಮೇಲೆ ಅದರ ನೆರಳು ಅಷ್ಟಾಗಿ ಬಿದ್ದಿಲ್ಲ. ಇದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸೇವಾ ಸಂಘದ ಕಾರ್ಯಾಧ್ಯಕ್ಷ ಹನುಮಂತಪ್ಪ ದ್ಯಾವಪ್ಪ ವೈದ್ಯ ಅವರ ಅಭಿಪ್ರಾಯವೂ ಹೌದು. ಸಮುದಾಯ ಕುರಿತು ಅವರು ಹೇಳುವುದು ಹೀಗೆ...
ಉತ್ತರ ಕರ್ನಾಟಕದ 17 ಜಿಲ್ಲೆಗಳಲ್ಲಿ ಹಡಪದ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಯಚೂರು, ಬೀದರ್, ಗುಲ್ಬರ್ಗ, ಬಳ್ಳಾರಿ, ಬಾಗಲಕೋಟ, ಬಿಜಾಪುರ, ಬೆಳಗಾವಿ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದಾರೆ. ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಮೈಸೂರು ಜಿಲ್ಲೆಯಲ್ಲೂ ಸ್ವಲ್ಪ ಮಂದಿ ಇದ್ದಾರೆ. ಹಾಸನ, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಮಾತ್ರ ಇಲ್ಲ. ಇನ್ನು ಆಂಧ್ರ, ಮಹಾರಾಷ್ಟ್ರದ ಕೆಲ ಜಿಲ್ಲೆಗಳು ಮತ್ತು ಗೋವಾದಲ್ಲಿದ್ದಾರೆ.
ನಾಟಿ ವೈದ್ಯರ ಕೆಲಸ : ಕ್ಷೌರಿಕ ವೃತ್ತಿ ಜೊತೆಗೆ ನಾಟಿ ವೈದ್ಯರ ಕೆಲಸವನ್ನೂ ಹಡಪದರು ಮಾಡುತ್ತಾರೆ. ಅಂದರೆ, ಚರ್ಮ ರೋಗಗಳಿಗೆ ಔಷಧ ನೀಡುತ್ತಾರೆ. ಗಜ್ಜಿ, ಗಜಕರ್ಣ, ತೊನ್ನು ಮತ್ತಿತರ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಇವರು ಔಷಧ ಸಿದ್ಧ ಮಾಡಿಕೊಡುತ್ತಾರಂತೆ. ಚರ್ಮ ರೋಗಗಳಿಗೆ ಮೂಲ ಔಷಧ ಕಂಡು ಹಿಡಿದವರು ಇವರೇ ಎಂಬ ಮಾತೂ ಇದೆ. ಇದಲ್ಲದೆ ಮೂಳೆ ಮುರಿದರೆ ಜೋಡಿಸುವ ಕೆಲಸವನ್ನೂ ಮಾಡುತ್ತಾರಂತೆ.
ಇನ್ನು ಸಮಾಜದ ಮೂಲ ಪುರುಷ ಅಪ್ಪಣ್ಣನ ಕುರಿತು ಹೇಳುವುದಾದರೆ, ಬಸವೇಶ್ವರರ ಹುಟ್ಟೂರು ಇಂಗಳೇಶ್ವರ, ಅಲ್ಲಿಂದ ನಾಲ್ಕು ಕಿ.ಮೀ.ದೂರದಲ್ಲಿನ ಮಸೀಬನಾಳ ಅಪ್ಪಣ್ಣನ ಊರು. ಅಪ್ಪಣ್ಣ ಮತ್ತು ಬಸವೇಶ್ವರರ ನಡುವೆ ಗಾಢವಾದ ಸ್ನೇಹವಿತ್ತು. ಬಸವೇಶ್ವರರು ಕೂಡಲಸಂಗಮಕ್ಕೆ ಬಂದಾಗ ಕಲ್ಯಾಣದಲ್ಲಿ ಯುದ್ಧ ಪ್ರಾರಂಭವಾಗುತ್ತದೆ.
ಅಪ್ಪಣ್ಣ ಮಲ್ಲವಿದ್ಯೆ ಬಲ್ಲವ. ಆಗ ಬಸವೇಶ್ವರರು ತಮ್ಮ ಶ್ವೇತವರ್ಣದ ಕುದುರೆಯನ್ನು ಕೊಟ್ಟು ಪತ್ನಿಯನ್ನು ಜೋಪಾನವಾಗಿ ಕರೆತರುವಂತೆ ಅಪ್ಪಣ್ಣನಿಗೆ ಸೂಚಿಸುತ್ತಾರೆ. ಆದರೆ, ಅಪ್ಪಣ್ಣ ವಾಪಸ್ ಬರುವ ವೇಳೆಗೆ ಬಸವೇಶ್ವರರು ಲಿಂಗ್ಯೆಕ್ಯರಾಗಿರುತ್ತಾರೆ. ಜೊತೆಗೆ ಅಪ್ಪಣ್ಣ ಸಹ ಲಿಂಗ್ಯೆಕ್ಯರಾಗುತ್ತಾರೆ. ಅವರ ಗದ್ದುಗೆ ಮುದ್ದೇಬಿಹಾಳ ತಾಲೂಕಿನ ತಂಗಡಗಿಯಲ್ಲಿದೆ. ಅದರ ಜೀರ್ಣೋದ್ಧಾರ ಕಾಮಗಾರಿ ಎರಡು ಕೋಟಿ ರಾಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಇದಕ್ಕೆ ಮುಖ್ಯಮಂತ್ರಿಯಾಗಿದ್ದಾಗ ನೆರವಾದವರು ಬಿ.ಎಸ್.ಯಡಿಯೂರಪ್ಪ. ಈ ಗದ್ದುಗೆ ಬಸವಸಾಗರದ ಹಿನ್ನೀರಿನಲ್ಲಿ ಮುಳುಗಡೆ ಆಗಿತ್ತು. ಸಮಾಜದವರ ಹೋರಾಟದ ಫಲವಾಗಿ ಜೀರ್ಣೋದ್ಧಾರ ಆಗಿದೆ. ಹಡಪದರ ಸಂಸ್ಥಾನ ಮಠವೂ ಇದ್ದು, ಆದಕ್ಕೆ ಬಸವಪ್ರಿಯ ಅನ್ನದಾನ ಅಪ್ಪಣ್ಣ ಸ್ವಾಮಿಗಳು ಪೀಠಾಧ್ಯಕ್ಷರು.
ಕುಸ್ತಿಪಟುವಾಗಿದ್ದ ಅಪ್ಪಣ್ಣ : ಅಂದಹಾಗೆ ಸಮಾಜದ ಮೂಲಪುರುಷ ಅಪ್ಪಣ್ಣ ಕ್ಷೌರಿಕ ವೃತ್ತಿ ಮಾಡುತ್ತಿರಲಿಲ್ಲ. ಗರಡಿ ಮನೆಗಳನ್ನು ಕಟ್ಟಿ ಕುಸ್ತಿ ಹೇಳಿಕೊಡುತ್ತಿದ್ದವರು ಅವರು. ದೊಡ್ಡಾಟದ ವಿದ್ಯೆ ಕಲಿತಿದ್ದ ಅವರು, ಶಾಸ್ತ್ರೋಕ್ತವಾಗಿದ್ದರು. ಹಡಪದ ರೇಸಯ್ಯ ಎಂಬುವರು ಈ ಸಮಾಜದ ಮತ್ತೊಬ್ಬ ಪ್ರಮುಖರು. ಅವರು ಅಡವಿ ಸಿದ್ದ ಎಂಬ ಹೆಸರಿನಲ್ಲಿ ತುಮಕೂರಿನ ಸಿದ್ದಗಂಗಾ ಮಠಕ್ಕೂ ಹೋಗಿದ್ದರಂತೆ. ರೇಸಯ್ಯ ಅವರಿಂದಾಗಿ ಸಾವಿರಾರು ಮಠಗಳೂ ಸ್ಥಾಪನೆಯಾಗಿವೆಯಂತೆ. ಶಿವಶರಣೆರೆಂಬೆಮ್ಮ ಸಹ ಇದೇ ಸಮುದಾಯದವರು. ಅವರೂ ಕ್ಷೌರಿಕ ವೃತ್ತಿ ಮಾಡುತ್ತಿದ್ದರಂತೆ.
ಹಡಪದರಲ್ಲಿ ಕೆಲವರು ಸರ್ಕಾರದ ಜಾತಿ ಪಟ್ಟಿಯಲ್ಲಿ 2ಎನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಕೆಲವರು 3ಬಿಯಲ್ಲಿದ್ದಾರೆ. ಹಡಪದರ ಮನೆಗಳಿಗೆ ಜಂಗಮರು ಪಾದಪೂಜೆಗೆ ಬರುವುದು ಮತ್ತೊಂದು ವಿಶೇಷ. ಜೊತೆಗೆ ಶ್ರಾವಣ ಮಾಸದಲ್ಲಿ ಮನೆಗಳಲ್ಲಿ ಜಂಗಮರ ಆರಾಧನೆಯೂ ನಡೆಯುತ್ತದೆ.
ಈ ಸಂದರ್ಭದಲ್ಲಿ ಜಂಗಮರನ್ನು ಮನೆಗೆ ಕರೆಯಿಸಿ ಅವರ ಪಾದಪೂಜೆ ಮಾಡಿ ದಕ್ಷಿಣೆ ಕೊಟ್ಟು ಕಳುಹಿಸುವುದುಂಟು. ಬೆಳಗ್ಗೆ ಕಾಯಕಕ್ಕೆ ಹೊರಡುವ ಮುನ್ನ ಹಡಪದರು ಸ್ನಾನ ಮಾಡಿ ಹಣೆಗೆ ವಿಭೂತಿ ಧರಿಸುತ್ತಾರೆ. ಲಿಂಗಪೂಜೆಯನ್ನೂ ಮಾಡುತ್ತಾರೆ. ಬಳಿಕ ಮಧ್ಯಾಹ್ನವೂ ಸ್ನಾನ ಮಾಡಿ ಪೂಜೆ ನೆರವೇರಿಸುವ ಪದ್ಧತಿ ಇವರಲ್ಲಿದೆ. ಕೊರಳಲ್ಲಿ ಲಿಂಗ ಕಟ್ಟಿಕೊಳ್ಳುವ ಸಂಪ್ರದಾಯವೂ ಸಮುದಾಯದವರಲ್ಲಿದೆ.
ಶುದ್ಧ ಸಸ್ಯಾಹಾರಿಗಳು : ಹಡಪದರು ಶುದ್ಧ ಸಸ್ಯಾಹಾರಿಗಳು. ಶಿವನನ್ನು ಬಿಟ್ಟು ಇವರು ಬೇರೆ ಯಾವ ದೇವರನ್ನೂ ಪೂಜಿಸುವುದಿಲ್ಲವಾದರೂ ಎಲ್ಲ ದೇಗುಲಗಳಿಗೆ ಹೋಗಿ ಬರುತ್ತಾರೆ. ಒಂದಷ್ಟು ಗ್ರಾಮ ದೇವತೆಗಳ ದೇವಾಲಯ ಇದ್ದು, ಅಲ್ಲಿ ಹಡಪದರೇ ಅರ್ಚಕರು.ಇವರು ಕಡ್ಲಿಗೇರ ಹುಣ್ಣಿಮೆಯನ್ನು ಅಪ್ಪಣ್ಣನ ಜಯಂತಿಯಾಗಿ ಆಚರಿಸುತ್ತಾರೆ ಎಂಬುದು ವೈದ್ಯ ಅವರ ವಿವರಣೆ.
ಈ ಹಿಂದೆ ಹಡಪದರು ಊರೂರು ತಿರುಗಿ ಕ್ಷೌರಿಕ ಕೆಲಸ ಮಾಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಧವಸ, ಧಾನ್ಯವನ್ನು ಪಡೆದುಕೊಳ್ಳುತ್ತಿದ್ದರು. ಇತ್ತೀಚೆಗೆ ಶೈಕ್ಷಣಿಕವಾಗಿ ಈ ಸಮುದಾಯದಲ್ಲಿ ಕೊಂಚಮಟ್ಟಿಗೆ ಸುಧಾರಣೆ ಕಂಡು ಬರುತ್ತಿದೆ. ಆದರೂ ಹೇಳಿಕೊಳ್ಳುವ ಮಟ್ಟಿಗೆ ಇಲ್ಲ. ಈ ಜಾತಿಯಲ್ಲಿ ಒಬ್ಬರೂ ಐಎಎಸ್,ಐಪಿಎಸ್ ಅಥವಾ ಕೆಎಎಸ್ ಮಾಡಿದವರಿಲ್ಲ.
ಆದರೆ, ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವೈದ್ಯರು ಇದ್ದಾರೆ. ಅದೂ 20-25ರ ಸಂಖ್ಯೆಯಲ್ಲಿ. ಇನ್ನೂ ರಾಜಕೀಯ ವಿಚಾರದ ಬಗ್ಗೆ ಹೇಳುವುದಾದರೆ 47 ಮಂದಿ ಗ್ರಾಮ ಪಂಚಾಯಿತಿ ಮತ್ತು ಒಂದಿಬ್ಬರು ತಾಲೂಕು ಪಂಚಾಯಿತಿ ಸದಸ್ಯರಿದ್ದಾರೆ. 8 ಮಂದಿ ನಗರಸಭೆ ಸದಸ್ಯರಾಗಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕೆನ್ ಕಲಾ ಶಾಲೆಯ ಸಂಸ್ಥಾಪಕ ಆರ್.ಎಂ.ಹಡಪದ ಇದೇ ಸಮಾಜದವರು. ಚಿತ್ರ ನಿರ್ದೇಶಕ ಶಂಕರಲಿಂಗ ಸುಗ್ಗನಹಳ್ಳಿ ಅವರೂ ಇದೇ ಸಮುದಾಯಕ್ಕೆ ಸೇರಿದವರು.
ಭಜನಾ ಪ್ರಿಯರು :  ಮೊದಲೇ ಹೇಳಿದಂತೆ ದೇವರ ಭಜನೆ ಬಗ್ಗೆ ಹಡಪದರ ಒಲವು ಹೆಚ್ಚು. ಹೀಗಾಗಿ ಅನೇಕ ಕಡೆ ಭಜನಾ ಮಂದಿರಗಳಿವೆ. ಅದರಲ್ಲೂ ದಾವಣಗೆರೆಯಲ್ಲಿರುವ ಬಸವೇಶ್ವರ ಭಜನಾ ಸಂಘ ರಾಷ್ಟ್ರಪ್ರಶಸ್ತಿಗೂ ಪಾತ್ರವಾಗಿದೆ. ಎಲ್ಲಿಯೇ ಭಜನೆ ನಡೆದರೂ ಆದರ ಉಸ್ತುವಾರಿಯನ್ನು ವಹಿಸಿಕೊಳ್ಳುವವರು ಈ ಸಮುದಾಯದವರು. ಸಮಾಜದ ಮುಖಂಡರ ಹೋರಾಟದ ಫಲವಾಗಿ ಗುಲ್ಬರ್ಗ ವಿವಿಯಲ್ಲಿ ಹಡಪದ ಅಪ್ಪಣ್ಣ ವಚನ ಅಧ್ಯಯನ ಪೀಠವೂ ಸ್ಥಾಪನೆಯಾಗಿದೆ.
ಹಡಪದರನ್ನು ಗಂಭೀರವಾಗಿ ಕಾಡುತ್ತಿರುವ ಸಮಸ್ಯೆ ಒಂದಿದೆ. ಇವರು ಕ್ಷೌರಿಕ ವೃತ್ತಿ ಮಾಡುವುದರಿಂದ ಚರ್ಮ ರೋಗಗಳಿಗೆ ಬಹುಬೇಗ ಗುರಿಯಾಗುತ್ತಾರೆ. ಉಸಿರಿನಿಂದ ಬರುವ ಕಾಯಿಲೆಗಳೂ ಅಂಟಿಕೊಳ್ಳುತ್ತಿವೆ. ಆದರೆ, ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಯೋಜನೆಯ ಸೌಲಭ್ಯ ಇವರಿಗೆ ಸಿಗುತ್ತಿಲ್ಲ. ಉಂಬಳಿ ರೂಪದಲ್ಲಿ ಎಂದೋ ಬಂದಿರುವ ಕೃಷಿ ಜಮೀನುಗಳು ಸಹ ಇಲ್ಲವಾಗಿದೆ. ಹೀಗಾಗಿ ಆರ್ಥಿಕವಾಗಿಯೂ ಹಡಪದರು ಸಮಸ್ಯೆ ಎದುರಿಸುತ್ತಿದ್ದಾರೆ.

- ಕೆ.ವಿ.ಪ್ರಭಾಕರ 
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ