ಅಂಕಣಗಳು

Hmm... ಪಾಂಚ್ , ಕಲಿಯುಗದ ಕುಡುಕ

-    ಏನ್ರೀ, ನಮ್ ಚೀಫ್ ಮಿನಿಸ್ಟರ್ರು ಎಣ್ಣೆ ರೇಟ್ ಜಾಸ್ತಿ ಮಾಡ್‌ಬಿಟ್ಟಿದಾರೆ, ಇನ್ಮೇಲೆ ನಿಮ್ಮಂಥವರು ಬದುಕೋದಾದ್ರೂ ಹೆಂಗೆ?
ಎಣ್ಣೆ ರೇಟು ಜಾಸ್ತಿ ಆಗಿ, ಕುಡುಕರ ವ್ಯಾಲ್ಯೂ ಜಾಸ್ತಿ ಆಗಿದೆ ಅಂದ್ಕೊಂಡ್ರಾಯ್ತು ಬಿಡಿ. ಎಣ್ಣೆ ಏಟು ಇನ್ನೂ ಜಾಸ್ತಿ ಆಗುತ್ತೆ.

-    ಆದರೂ 100 ರುಪಾಯಿ ಬೀರು 124 ರುಪಾಯಿ ಆಗಿದೆ. ಇದು ನಿಮ್ಮ ದೈನಂದಿನ ಕಾರ್ಯಕ್ರಮದ ಮೇಲೆ ಯಾವ ರೀತಿ  ಪರಿಣಾಮ 'ಬೀರ'ಬಹುದು ಅಂತೀರಾ?
ಅಯ್ಯೋ, ಹೆಂಡ ಸಾರಾಯಿ ಸಹವಾಸ ಹೆಂಡತಿ ಮಕ್ಕಳು ಉಪವಾಸ ಅಂತ ಕೇಳಿಲ್ವಾ. ಎಣ್ಣೆ ರೇಟು ಜಾಸ್ತಿ ಆದ್ರೆ ಹೆಂಡ್ತಿ ಮಕ್ಳು ಇನ್ನೊಂದೆರ್ಡ್ ದಿನ ಜಾಸ್ತಿ ಉಪವಾಸ ಇರಬೇಕಾಯ್ತದೆ ಅಷ್ಟೆ. ಕುಡುಕರಿಗೇನೂ ಪ್ರಾಬ್ಲಂ ಇಲ್ಲ.

-    ಆದ್ರೂ ನಿಮ್ಮ ಜೀವದ್ರವದ ರೇಟು ಜಾಸ್ತಿ ಮಾಡಿದ ಚೀಫ್ ಮಿನಿಸ್ಟರ್ ಅವರ ಈ ಕ್ರಮದ ಹಿಂದೆ, ಯಾವ ಘನವಾದ ಉದ್ದೇಶ ಇರಬಹುದು ಅಂತ ನಿಮ್ಮ ಅನಿಸಿಕೆ?
ಎಲ್ಲಾನೂ ಚೀಪ್ ಆಗಿ ಕೊಟ್ರೆ 'ಚೀಪ್‌' ಮಿನಿಸ್ಟರ್ ಆಗ್‌ಬಿಡ್ತೀನಿ, ಆಲ್ಕೋಹಾಲ್ ರೇಟ್‌ನಾದ್ರೂ ಜಾಸ್ತಿ ಮಾಡೋಣ ಅನ್ನೋ ಆಲೋಚನೆ ಇರಬಹುದು.  

- ಅದೇನೋ ಸರಿ, ಕುಡಿಯೋಕ್ ಮುಂಚೆನೇ ಉಚ್ಚೆ ಹೊಯ್ಕೋಬೇಕು ಅನಿಸುವಷ್ಟು ಯಾಕ್ ರೇಟ್ ಜಾಸ್ತಿ ಮಾಡಿದ್ರಿ ಅಂತ ಚೀಫ್ ಮಿನಿಸ್ಟರ್‌ಗೇ ಒಂದ್ ಫೋನ್ ಮಾಡಿ ಕೇಳ್‌ಬಹುದಲ್ಲಾ?
ಅವರತ್ರ ಮಾತಾಡಾಣ ಅಂತನೇ, ನೆನ್ನೆ ರಾತ್ರಿ ಟೈಟ್ ಆಗುವಷ್ಟು ಕುಡಿದು 'ಅಲ್ಲಾಡ್ತಾ' ಫೋನ್ ಮಾಡಿದ್ದೆ, ಆ ಕಡೆಯಿಂದ 'ಯುವರ್ 'ಬ್ಯಾಲೆನ್ಸ್‌' ಈಸ್ ಟೂ ಲೋ, ಟು ಮೇಕ್ ಎ ಕಾಲ್‌' ಅಂತ ಬಂತು.

-    ಹೋಗ್ಲಿ, ನೀವ್ಯಾಕೆ ಈ ಕುಡಿಯೋ ಚಟನೇ ಬಿಟ್‌ಬಿಟ್ಟು, ಈ ದರ ಏರಿಕೆಯ ವಿರುದ್ಧ ಪ್ರತಿಭಟನೆ ಮಾಡಬಾರದು?
ರೀ, ಹಂಗೆಲ್ಲಾ ಮಾಡಿದ್ರೆ, ನಮ್ಮದು ಸಿದ್ದ'ರಾಮರಾಜ್ಯ' ಆಯ್ತು ಅಂತ ಖುಷಿ ಪಟ್ಕೊತಾರೆ, ಸುಮ್ನಿರ್ರಿ. ಕುಡಿಯೋದು ನಿಲ್ಲಿಸಿದರೆ ದೇಶಕ್ಕೆ ಆದಾಯ ಕಡಿಮೆ ಆಗುತ್ತೆ. ಅದಕ್ಕೆ, ನಾವು ಕುಡಿದು ಚರಂಡೀಲಿ ಬಿದ್ದಿದ್ದಾಗ್ಲೂ ದೇಶದ ಬಗ್ಗೆ ಯೋಚನೆ ಮಾಡ್ತಿರ್ತೀವಿ ಗೊತ್ತಾ?.
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಯಾವಾಗ್ಲೂ ನಗ್ ನಗ್ತಾ ಇರು ಅಂತ ದೊಡ್ಡೋರು ಆಶೀರ್ವಾದ ಮಾಡ್ತಾರೆ ನಿಜ. ಆದ್ರೆ ಯಾವಾಗ್ಲೂ ಅಲ್ಲದಿದ್ರೂ ನಗ್‌ಬೇಕಾದ್ ಕಡೆ ನಗದೇ ಇದ್ರೆ, ಯಾರನ್ನೂ ನಗಿಸೋಕೆ ನಮ್ ಕೈಲಿ ಆಗದೇ ಇದ್ರೆ ನಮ್ಮನ್ನು ನೋಡಿ ಇನ್ನೊಬ್ರು ನಗೋ ಥರ ಆಗಬಹುದು. ಅದು ನಮಗೆ ಸೆನ್ಸ್ ಆಫ್ ಹ್ಯೂಮರ್‌ನ ಕೊರತೆ ಇದೆ ಅನ್ನೋದನ್ನ ತೋರಿಸುತ್ತೆ. ಅಂಥ ಸೆನ್ಸ್ ಆಫ್ ಹ್ಯೂಮರ್ ಅನ್ನು ಬೆಳೆಸಿಕೊಳ್ಳುವ, ಉಳಿಸಿಕೊಳ್ಳುವ ಬಗ್ಗೆ ಒಂದೆರಡು ಟಿಪ್ಸ್ ಇಲ್ಲಿವೆ.
l bit.ly/18d0kiq l bit.ly/LabHdw l bit.ly/15DcIHW l bit.ly/qYLQju l bit.ly/11Lm5q6
ಹರಿ-ಕಥೆ
ನೋಡೋಕೆ ತುಂಬಾ ತೆಳ್ಳಗೆ, ಕುಳ್ಳಗೆ ಇದ್ದ ಖೇಮು ಒಂದಿನ ಕಾಲೇಜು ಹತ್ತಿರದ ಬಸ್‌ಸ್ಟಾಪ್‌ನಲ್ಲಿ ನಿಂತಿದ್ದ. ಸಡನ್ನಾಗಿ ಅಲ್ಲಿಗೆ ಬಂದು ನಿಂತ ಕಾರಿನಿಂದ ಬ್ಯೂಟಿಫುಲ್ ಹುಡುಗಿಯೊಬ್ಬಳು ಇವನ ಕಡೆ ನೋಡಿ 'ಹಾಯ್ ಖೇಮು' ಎನ್ನುತ್ತಾ ಕಾರಿನಲ್ಲಿ ಕುಳಿತುಕೊಳ್ಳೋಕೆ ಹೇಳಿದಳು. ಖೇಮುಗೆ ಸಡನ್ನಾಗಿ ಫ್ಲ್ಯಾಷ್ ಆಯ್ತು, ಅರೇ ಇವಳು ನನ್ನ ಕ್ಲಾಸ್‌ಮೆಟ್ ಜಾಸ್ಮಿನ್ ಅಲ್ವಾ ಅಂತ. ಕಾಲೇಜಲ್ಲಿ ಒಂದ್ ಸಲನೂ ನನ್ನ ಕಡೆ ಕಣ್ಣೆತ್ತಿ ನೋಡದವಳು ಇವತ್ಯಾಕೆ ಕರೀತಿದಾಳೆ ಎನ್ನುವ ಆಶ್ಚರ್ಯದಿಂದಲೇ ಹೋಗಿ ಕಾರಲ್ಲಿ ಕುಳಿತ. ಬಾಯ್ತುಂಬಾ ಮಾತಾಡಿದ ಜಾಸ್ಮಿನ್ 'ಖೇಮು, ಕಾಫಿ ಕುಡಿಯೋಣ್ವಾ?' ಅಂದ್ಳು. ಕಾಲೇಜಿನಲ್ಲಿ ನನಸಾಗದ ನನ್ನ ಕನಸು ಇಲ್ಲಿ ನನಸಾಗ್ತಿದೆ ಅಂತ ಖೇಮು ಇನ್ನೂ ಖುಷಿಯಾಗಿ ಓಕೆ ಅಂದ. ಕಾಫಿ ಡೇ ಹತ್ರ ಕಾರು ನಿಲ್ಲಿಸಿದ ಜಾಸ್ಮಿನ್ 'ಇಲ್ಲಿ ತುಂಬಾ ಜನ ಇದಾರೆ, ನಾವ್ಯಾಕೆ ನಮ್ಮ ಮನೇಗೆ ಹೋಗಿ ಕಾಫಿ ಕುಡೀಬಾರ್‌ದು?' ಅಂದ್ಳು. ಖೇಮು ಮತ್ತೆ ಖುಷ್. ಮನೆಗೆ ಹೋದಮೇಲೆ 'ಖೇಮು, ನೀನು ನನ್ನ ಬೆಡ್‌ರೂಮಲ್ಲಿ ಕೂತಿರು, ಅಲ್ಲಿ ಎಸಿ ಇದೆ, ನೀನು ತುಂಬಾ ಬೆವರ್ತಾ ಇದೀಯ, ನಿನ್ನ ಶರ್ಟ್ ತೆಗೆದುಬಿಡು, ನಾನು ಈಗ ಬಂದೆ' ಅಂತ ಒಳಗೆ ಹೋದ್ಳು ಜಾಸ್ಮಿನ್. ಈಗಂತೂ ಖೇಮು ಕಂಗಾಲಾಗುವಷ್ಟು ಖುಷಿ ಆದ. ಇವತ್ತೇನೋ ನನ್ ಲಕ್ ತಿರುಗಿದೆ ಎಂದುಕೊಂಡು ಶರ್ಟ್ ಕಳಚಿ ಜಾಸ್ಮಿನ್ ಬಗ್ಗೆ ಕನಸು ಕಾಣುತ್ತಾ ಅಲ್ಲಿಯೇ ಕಾಯ್ತಾ ಕೂತ್ಕೊಂಡ. ಐದು ನಿಮಿಷದ ನಂತರ ಸುಮಾರು ಐದು ವರ್ಷದ, ತನ್ನ ಅಕ್ಕನ ಇಬ್ಬರು ಮಕ್ಕಳನ್ನ ಕರೆದುಕೊಂಡ ಬಂದ ಜಾಸ್ಮಿನ್ ಖೇಮುವನ್ನು ತೋರಿಸಿ ಆ  ಮಕ್ಕಳಿಗೆ ಹೇಳಿದಳು 'ನೋಡಿ, ಪ್ರತಿದಿನ, ಊಟ ಮಾಡಲ್ಲ ಅಂತ ಹಠ ಮಾಡಿದ್ರೆ, ನೀವು ದಪ್ಪನೂ ಆಗದೆ, ಉದ್ದನೂ ಆಗದೆ, ದೊಡ್ಡೋರಾದ್ ಮೇಲೆ ಇವ್ರ್ ಥರಾನೇ ಕಾಣ್ತೀರಾ. ಇದರ್ ಮೇಲೆ ನೀವೇ ಡಿಸೈಡ್ ಮಾಡಿ. ಮನೆವರೆಗೂ ಬಂದಿದ್ದಕ್ಕೆ ಥ್ಯಾಂಕ್ಸ್ ಖೇಮು..'

ಸ್ಯಾಂಡಲ್‌ವುಡ್
ಟಿವಿ ಚಾನೆಲ್‌ಗಳ ಮೈಕ್ ಮುಂದೆ 'ಸೂಪರ್, 100 ಡೇಸ್ ಗ್ಯಾರಂಟಿ' ಎನ್ನುವ ಮೊದಲ ದಿನದ ಪ್ರೇಕ್ಷಕರು ಭಾರಿ ಕಿಲಾಡಿಗಳು ಎಂಬುದು ಮತ್ತೆ ವಿಜಲ್ ಚಿತ್ರದ ಮೊದಲ ದಿನ ಪ್ರೂವ್ ಆಯ್ತು. ಸಾಮಾನ್ಯವಾಗಿ ಸಿನಿಮಾ ನೋಡಿ ಹೊರಬಂದವರು, ದೃಶ್ಯ ಮಾಧ್ಯಮದವರು ಕೇಳುವ 'ಹೇಗಿದೆ ಸಿನಿಮಾ' ಎಂಬ ಪ್ರಶ್ನೆಗೆ, ಸುಮ್ನೆ 'ಚೆನ್ನಾಗಿದೆ. ಚೆನ್ನಾಗಿದೆ' ಅಂದ್ರೆ, ಮತ್ತೆ 'ಏನ್ ಚೆನ್ನಾಗಿದೆ' ಅಂತ ಕೇಳ್ತಾರೆ, ಸುಮ್ನೆ ಯಾಕ್ ಬೇಕು ಅಂತ ಮಾತೆತ್ತಿದ ತಕ್ಷಣ, 'ಸೂಪರ್, 100 ಡೇಸ್ ಗ್ಯಾರಂಟಿ, ಇದು ಇನ್ನೊಂದು ಮುಂಗಾರುಮಳೆ ಆಗುತ್ತೆ' ಅಂತ ಹೇಳಿ ಅದೃಶ್ಯರಾಗ್ತಾರೆ. ಸಿನಿಮಾದವರು ಜನಗಳನ್ನು ಯಾಮಾರಿಸ್ತಾರೆ ಅಂತಾರೆ. ಆದರೆ ಇದನ್ನೆಲ್ಲಾ ನೋಡಿದರೆ ಪ್ರೇಕ್ಷಕರೇ ಸಿನಿಮಾದವರನ್ನೇ ಯಾಮಾರಿಸ್ತಾರೆ ಎನಿಸಬಹುದು. ಮೊನ್ನೆ, ವಿಜಲ್ ಚಿತ್ರಕ್ಕೂ ಅದೇ ಆಯ್ತು. ಮೈಕ್ ಮುಂದೆ ಇಷ್ಟು ಹೇಳಿ ತಮ್ಮ ಎರಡು  ಮಾತು ಮುಗಿಸಿದ ಪ್ರೇಕ್ಷಕರು ಮೆಟ್ಟಿಲು ಇಳಿಯುತ್ತಿದ್ದಂತೆ ಹೇಳಿದ್ದು, ತತ್ತೇರಿ, ತಲೆಬುಡ ಒಂದೂ ಅರ್ಥ ಆಗಲ್ಲ. ಕ್ಲೈಮ್ಯಾಕ್ಸ್‌ನಲ್ಲೂ ಅದೇನ್ ಹೇಳ್ತಾನೋ ಅವ್ನಿಗೇ ಗೊತ್ತು. ಪಿಜ್ಜಾ ಸಿನಿಮಾ ರಿಮೇಕ್ ಮಾಡಿದ ಪ್ರಶಾಂತ್ ರಾಜ್ ಅವರದ್ದು ಕ್ಲೈಮ್ಯಾಕ್ಸ್‌ನಲ್ಲಿ 'ಲೇಟ್ ಡೆಲಿವರಿ' ಎನಿಸಿದ್ದರಿಂದಲೋ ಏನೋ ಅದು ಅರ್ಥವಾಗದ ಪ್ರೇಕ್ಷಕರಿಂದ ಬೈಗುಳ 'ಫ್ರೀ' ಎನ್ನುವ ಪರಿಸ್ಥಿತಿ. ಅದೇನೇ ಇರಲಿ, ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳನ್ನು ಓದದೇ ಲೈಕ್ ಮಾಡುವ ಸ್ನೇಹಿತರಂತೆ, ಮೈಕ್ ಮುಂದೆ ಪ್ರೇಕ್ಷಕರು ಆಡುವ ಮುತ್ತಿನಂಥ ಮಾತುಗಳನ್ನು ನಂಬಿಕೊಂಡರೆ, ಮಾಧ್ಯಮಗಳ ವಿಮರ್ಶೆಗಳಲ್ಲಿ ಕೊಡುವ ಒಂದೂವರೆ ಸ್ಟಾರುಗಳನ್ನೇ, ಮೂರೂವರೆ ವಜ್ರಗಳು ಎಂದುಕೊಂಡರೆ ಸಿನಿಮಾ ಮಾಡಿದವರಿಗೆ ನಿಜವಾದ ರಿಪೋರ್ಟ್ ಸಿಗುವುದಂತೂ ಸಾಧ್ಯವಿಲ್ಲ.

ಡಬ್ಕುಡಬಲ್ ತುದಾಂಡಲ್...
ಹೊಸ ಕಾಲದ ಸ್ಟೈಲಿಷ್ ಹುಡುಗರು ಮತ್ತು ಹಳೆ ಕಾಲದ ಲೋಕಲ್ ಹುಡುಗರ ಮಾತಿನ ನಡುವಿನ ವ್ಯತ್ಯಾಸ
- ಅವರು 'ಡ್ಯಾಡ್‌' ಅನ್ನೂ 'ಡ್ಯೂಡ್‌' ಅಂತಾರೆ. ಇವ್ರು 'ಡ್ಯೂಡ್‌' ಅನ್ನೂ 'ಅಪ್ಪಾ, ತಂದೆ' ಎಂದೇ ಕರೀತಿದ್ರು.
- ಅವರು 'ಹಾಯ್ ಬಡ್ಡೀ' ಅಂತಾರೆ. ಇವ್ರು 'ಲೇ ಬಡ್ಡೀಮಗನೆ' ಅಂತಿದ್ರು.
- ಅವರು ಸ್ವಲ್ಪ ಸಿಟ್ಟು ಬಂದಾಗ 'ಹೇ ಮ್ಯಾನ್‌' ಅಂತಾರೆ.
- ಇವ್ರು 'ಲೇ ಮಂಗ್ಯಾ' ಅಂತಿದ್ರು. (ಮಂಗನಿಂದ ಮಾನವ ಅಂದ್ರೆ ಇದೇ ಇರಬಹುದು!)

- ಸಿನಿಮಾ ಮತ್ತು ಸಂಗೀತದ ಬಗ್ಗೆ ಅತಿ ಹೆಚ್ಚು ಗೂಗಲ್ ಸರ್ಚ್ ಕಂಡಿದ್ದು ಹಿಂದಿ, ತಮಿಳು ಮತ್ತು ತೆಲುಗು ಎನ್ನುತ್ತದೆ ಒಂದು ಸರ್ವೆ. ಇದು ತಪ್ಪಲ್ವಾ? ಯಾಕಂದ್ರೆ, ಬೇರೆ ಭಾಷೆಗಳಲ್ಲಿ ಸರ್ಚ್ ಮಾಡಿದ ಕೂಡ್ಲೇ ರಿಸಲ್ಟ್ ಸಿಗುತ್ತೆ. ಕನ್ನಡದ್ದು ಸರ್ಚ್ ಮಾಡಿ ಮಾಡಿ ಸಾಕಾಗುತ್ತೇ ಹೊರತು ಯಾವ ಮಾಹಿತಿಯೂ ಸಿಗೊಲ್ಲ. ಹಾಗಾಗಿ, ಕನ್ನಡದ್ದೇ ಜಾಸ್ತಿ ಸರ್ಚ್ ಇರಬೇಕಲ್ವಾ?
- ಮದ್ಯಪಾನದಿಂದ ಸಾವು ಸಂಭವಿಸುತ್ತದೆ ಎಂದು ಗೊತ್ತಿದ್ದವರು, ಸ್ನೇಹಿತರು ಕುಡಿ ಅಂತ ಬಲವಂತ ಮಾಡಿದರೆ ಏನು ಹೇಳಬಹುದು?
ಮಕ್ಳಾ, ಜಾಸ್ತಿ ಫೋರ್ಸ್ ಮಾಡಿದ್ರೆ ಅಟೆಂಪ್ಟ್ ಟು ಮರ್ಡರ್ ಕೇಸ್ ಹಾಕ್‌ಬಿಡ್ತೀನಿ ಅಷ್ಟೆ.
- ಬಲಗೈಯಲ್ಲಿ ಪಂಚಲೋಹದ ಬಳೆ ಹಾಕಿಕೊಂಡಿದ್ದ ಖೇಮುವನ್ನು ನೋಡಿ ಗೆಳೆಯ ಕೇಳಿದ
'ಏನೋ ಇದು, ಕೈಯಲ್ಲಿ ಬಳೆ, ದೇವರ್‌ದಾ?'
'ಅಲ್ಲ, ನಂದು'

   ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!