ಅಂಕಣಗಳು

ಬಿಜೆಪಿಯ ಚೂರುಗಳು ಒಂದುಗೂಡುವ ಹಾದಿಯಲ್ಲಿ...

ಯಾರು ಏನೇ ಹೇಳಲಿ, ಎಷ್ಟೇ ಸಬೂಬು ಕೊಡಲಿ, ಜಾತಿ ಇಲ್ಲದೇ ರಾಜಕೀಯ ಇಲ್ಲ.

ಯಾರು ಏನೇ ಹೇಳಲಿ, ಎಷ್ಟೇ ಸಬೂಬು ಕೊಡಲಿ, ಜಾತಿ ಇಲ್ಲದೇ ರಾಜಕೀಯ ಇಲ್ಲವೇ ಇಲ್ಲ. ಜಾತಿ ರಾಜಕಾರಣ ಮಾಡುವುದಿಲ್ಲ, ಜಾತಿಯಿಂದಷ್ಟೇ ರಾಜಕಾರಣ ಸಾಧ್ಯವಿಲ್ಲ ಎಂದು ರಾಜಕಾರಣಿಗಳು ಎಷ್ಟೇ ಪುಂಗಿ ಊದಿದರೂ ಅಲ್ಲಿ ಹೆಡೆ ಬಿಚ್ಚುವುದು ಮಾತ್ರ ಮತ್ತದೇ ಜಾತಿಯೇ.
ಕೆಲವೊಮ್ಮೆ ರಾಜಕಾರಣವೇ ಜಾತಿಯನ್ನು ಆಳುತ್ತದೆ. ಇನ್ನೂ ಕೆಲವೊಮ್ಮೆ ಜಾತಿಯೇ ರಾಜಕಾರಣದ ದಿಕ್ಕು-ದೆಸೆ ಬದಲಿಸುತ್ತದೆ. ಹಾಗೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ತಾನೂ ಬದಲಾಗುತ್ತಾ, ಪರಿಸ್ಥಿತಿಯನ್ನೂ ಬದಲಿಸುತ್ತಾ ಸಾಗುವ ಜಾತಿ ರಾಜಕಾರಣ ಈಗ ಕರ್ನಾಟಕ ರಾಜಕೀಯ ಸ್ವರೂಪಕ್ಕೆ ಹೊಸ ಆಯಾಮ ನೀಡುತ್ತಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯನವರ ಅಹಿಂದ ಪರ ನೀತಿ ಉಳಿದ ರಾಜಕೀಯ ಪಕ್ಷಗಳಲ್ಲಿ ಜಾತಿ ರಾಜಕಾರಣದ ಬಗ್ಗೆ ಹೊಸ ಚಿಂತನೆ, ಎಣಿಕೆಗೆ ಆಸ್ಪದ ನೀಡಿದೆ. ಅದರಲ್ಲೂ ಕಳೆದ ಚುನಾವಣೆಗೆ ಮೊದಲು ಮೂರು ಹೋಳಾಗಿ, ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಬಿಜೆಪಿಯು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜಾತಿ ಮತಗಳ ಕ್ರೋಢೀಕರಣಕ್ಕೆ ತಂತ್ರ ಎಣೆಯುವುದರಲ್ಲಿ ನಿರತವಾಗಿದೆ.
ಹೌದು, ಬಿಜೆಪಿಯ ವಿಭಜನೆಯ ಪ್ರತಿಫಲ ಈಗ ಕಣ್ಣಮುಂದೆಯೇ ಇದೆ. ಅದನ್ನು ಪ್ರತಿಫಲ ಅನ್ನುವುದಕ್ಕಿಂತ ಪ್ರತಿಕೂಲ ಎನ್ನುವುದೇ ಸರಿ. ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಆ ಪ್ರತಿಕೂಲ ಪರಿಣಾಮದ ಫಲಾನುಭವಿಗಳು. ಆಗಿದ್ದೆಲ್ಲ ಆಗಿ ಹೋಗಿದೆ. ಆಗಿ ಹೋಗಿದ್ದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿದೆ. ಹೀಗಾಗಿ ಒಂದೆಡೆ ಸಿದ್ದರಾಮಯ್ಯ ಅವರ ಸರಕಾರದ ನೀತಿ, ಇನ್ನೊಂದೆಡೆ ಅನಿವಾರ್ಯತೆ ತಂದೊಟ್ಟಿರುವ ಪರಿಸ್ಥಿತಿಗೆ ತಲೆಬಾಗಿರುವ ಬಿಜೆಪಿ, ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಮತ್ತೆ ಒಂದೇ ಸೂರಿನಡಿ ಬರಲು ಮನಸ್ಸು ಬಗ್ಗಿಸಿವೆ.
ಹೀಗಾಗಿ ಮೂರೂ ಪಕ್ಷಗಳ ಮುಖಂಡರು ಅಂತರಂಗ, ಬಹಿರಂಗದಲ್ಲಿ ತಮ್ಮ ಪ್ರತಿಷ್ಠೆ, ಅದನ್ನು ಮೀರಿದ ಅವಕಾಶವಾದಕ್ಕೆ ಅನುಗುಣವಾಗಿ ಸಮಾಲೋಚನೆ ಶುರು ಮಾಡಿದ್ದಾರೆ. ಈ ಪ್ರಕ್ರಿಯೆಯ ಮೊದಲ ಆದ್ಯತೆ ಕೆಜೆಪಿ ಮತ್ತು ಬಿಜೆಪಿ ಸಮಾಗಮ. ಇದು ಅತ್ಯಗತ್ಯ ಎಂಬುದು ಇಕ್ಕೆಲಗಳ ಹೆಬ್ಬಯಕೆ. ಎರಡೂ ಪಕ್ಷಗಳ ಮುಖಂಡರು ತಮ್ಮದೇ ಆದ ಶೈಲಿಯಲ್ಲಿ ಇದನ್ನು ಶೃತಪಡಿಸುತ್ತಿದ್ದಾರೆ.
ಜೊತೆಗೆ ರಾಜಕೀಯದಲ್ಲಿ ಯಾವ ಗಳಿಗೆಯಲ್ಲಿ ಏನಾಗುವುದೋ ಎಂಬುದನ್ನು ಹೇಳಲಿಕ್ಕಾಗದು. ಇತ್ತೀಚೆಗಂತೂ ಗಾಳಿ ಬಂದ ಕಡೆ ತೂರಿಕೋ ಎಂಬಂತಹ ಸನ್ನಿವೇಶ ನಿರ್ಮಾಣವಾಗಿದೆ. ಅಂದರೆ, ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಹೆಜ್ಜೆ ಹಾಕುವುದು. ಲೋಕಸಭೆ ಚುನಾವಣೆ ಏನಾದರೂ ಸಮೀಪದಲ್ಲೇ ಇರದೇ ಹೋಗಿದ್ದರೆ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಬಗ್ಗೆ ಚರ್ಚೆ ಮಾಡುವುದಿರಲಿ, ಅ ಪಕ್ಷಗಳತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಲೋಕಸಭೆ ಚುನಾವಣೆ ಬೆನ್ನಿಗೇ ಇರುವುದರಿಂದ ಶತ್ರುಗಳು ಮಿತ್ರರಾಗಲು ಹೊರಟಿದ್ದಾರೆ. ಪರಸ್ಪರ ಕತ್ತಿ ಮಸೆಯುತ್ತಿದ್ದವರು ಕೈ ಕುಲುಕಲು ತುದಿಗಾಲಲ್ಲಿ ನಿಂತಿದ್ದಾರೆ.
ಬಿಜೆಪಿ, ಕೆಜೆಪಿ ನಾಯಕರ ನಡವಳಿಕೆಯನ್ನೇ ನೋಡುವುದಾದರೆ, ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಆರಂಭವಾಗುತ್ತಿದ್ದಂತೆ ಚೇಳು ಕಡಿದವರಂತೆ ಎದ್ದು ನಿಂತವರು ಸಂಸದ ಅನಂತಕುಮಾರ್ ಮತ್ತು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು. ಯಡಿಯೂರಪ್ಪ ಅವರ ನೆರಳೂ ಬಿಜೆಪಿ ಮೇಲೆ ಬೀಳಬಾರದು ಎಂಬ ರೀತಿಯಲ್ಲಿ ಅವರು ಮಾತನಾಡಿದ್ದರು. ಅವಧಿಗೆ ಮೊದಲೇ ಲೋಕಸಭೆ ಚುನಾವಣೆ ಎದುರಾಗಲಿದೆ ಎಂಬುದು ತಿಳಿಯುತ್ತಿದ್ದಂತೆ ಅನಂತ್ ಮತ್ತು ಈಶ್ವರಪ್ಪ ಅವರ ಕಣ್ಣಿಗೆ ಯಡಿಯೂರಪ್ಪ ಅವರು ಮುದ್ದಿನ ಮಗುವಾಗಿ ಕಾಣಿಸುತ್ತಿದ್ದಾರೆ. ಬಾಚಿ ತಬ್ಬಿಕೊಳ್ಳಲು ಇಬ್ಬರೂ ತಯಾರಾಗಿ ನಿಂತಿದ್ದಾರೆ. ಅದರಲ್ಲೂ ಅನಂತ್ ಅವರು ಈ ವಿಚಾರದಲ್ಲಿ ಕೊಂಚ ವೇಗವಾಗಿಯೇ ಇದ್ದಾರೆ ಎಂದು ಹೇಳಬಹುದು. ಏಕೆಂದರೆ, ಬಿಜೆಪಿಗೆ ಯಡಿಯೂರಪ್ಪ ಅವರು ಎಷ್ಟು ಬೇಗ ಬಂದರೆ ಅಷ್ಟು ಒಳ್ಳೆಯದು ಎಂಬುದು ಅನಂತ್ ಅವರ ಲೆಕ್ಕಚಾರ. ಯಡಿಯೂರಪ್ಪ ಅವರ ಮೇಲೆ ಇದ್ದಕ್ಕಿದ್ದಂತೆ ಪ್ರೀತಿ, ಅಭಿಮಾನ ಉಕ್ಕಿ ಹರಿಯುತ್ತಿಲ್ಲ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಬಾರಿಸುತ್ತಿರುವ ಎಚ್ಚರಿಕೆಯ ಗಂಟೆ ಅವರು ಯಡಿಯೂರಪ್ಪ ಅವರ ಕಡೆ ವಾರೆನೋಟ ಬೀರಲು ಪ್ರೇರೇಪಿಸುತ್ತಿದೆ.
ಏಕೆಂದರೆ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಒಂದೂವರೆ ಲಕ್ಷಕ್ಕೂ ಅಧಿಕ ಇದೆ. ಲೋಕಸಭೆ ಚುನಾವಣೆಯಲ್ಲಿ ಅವರು ಪ್ರಮುಖ ಪಾತ್ರವನ್ನೂ ವಹಿಸಲಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಅವರೇನಾದರೂ ಬಿಜೆಪಿಗೆ ಬಾರದೇ ಇದ್ದರೆ ಬಹುತೇಕ ಮತಗಳು ಬಿಜೆಪಿ ಕೈ ಬಿಟ್ಟು ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆಗ ಗವಿಗಂಗಾಧರೇಶ್ವರನೇ ಅನಂತ್ ಅವರನ್ನು ಚುನಾವಣೆಯಲ್ಲಿ ಕಾಪಾಡಬೇಕಾಗುತ್ತದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೃಷ್ಣಬೈರೇಗೌಡರು ತೀವ್ರ ಪೈಪೋಟಿ ಒಡ್ಡಿದಾಗ ಇದೇ ಅನಂತಕುಮಾರ್ ಅವರಿಗೆ ಅನುಕೂಲ ಮಾಡಿಕೊಡಲು ಯಡಿಯೂರಪ್ಪ ಅವರು ಸೋಮಣ್ಣ ಅವರನ್ನು ಬಿಜೆಪಿಗೆ ಕರೆತಂದಿದ್ದರು. ಅದರಿಂದ ಪ್ರಯೋಜನವೂ ಆಯಿತು. ಸೋಮಣ್ಣ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರು. ಹೀಗಾಗಿ ಆ ಸಮುದಾಯದ ಮತಗಳು ಸುಲಭವಾಗಿ ಅನಂತಕುಮಾರ್ ಅವರ ಬುಟ್ಟಿಗೆ ಬಿದ್ದವು. ಸೋಮಣ್ಣ ಬಿಜೆಪಿಯಲ್ಲೇ ಇದ್ದಾರಾದರೂ ಯಡಿಯೂರಪ್ಪ ಅವರು ಇಲ್ಲವಲ್ಲ. ಈ ಎಲ್ಲ ಸಂಗತಿಗಳೂ ಅನಂತಕುಮಾರ್ ಅವರಿಗೆ ಮನವರಿಕೆ ಆಗಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನಕ್ಕೆ ಎಲ್ಲಿಯೂ ಅವರು ಅಡ್ಡ ಹಾಕಿಕೊಂಡು ನಿಂತಿಲ್ಲ.
ಒಂದೊಮ್ಮೆ ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡರೆ ಲಿಂಗಾಯತ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆಗ ಮತ್ತೆ ಲೋಕಸಭೆ ಪ್ರವೇಶ ಮಾಡುವುದು ಅಸಾಧ್ಯ. ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೂ ಮಂತ್ರಿ ಆಗಲು ಸಾಧ್ಯವಾಗುವುದಿಲ್ಲ. ಚುನಾವಣೆಯಲ್ಲಿ ಸೋತರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಪರಿಸ್ಥಿತಿ ತಮಗೂ ಬರುತ್ತದೆ ಎಂಬ ಭೀತಿಯೂ ಅನಂತಕುಮಾರ್ ಅವರನ್ನು ಎಡೆಬಿಡದೆ ಕಾಡುತ್ತಿದೆ. ಇನ್ನು ಈಶ್ವರಪ್ಪ. ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಕೊಟ್ಟ ಹೊಡೆತಕ್ಕೆ ಈಶ್ವರಪ್ಪ ಕಂಗಾಲಾಗಿದ್ದಾರೆ. ಬಿದ್ದಿರುವ ಏಟಿನಿಂದ ಸುಧಾರಿಸಿಕೊಳ್ಳಲು ಇನ್ನೂ ಅವರಿಗೆ ಸಾಧ್ಯವಾಗಿಲ್ಲ. ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿದ್ದವರೇ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟರು ಎಂಬುದನ್ನು ಅರಗಿಸಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ.
ಯಡಿಯೂರಪ್ಪ ಅವರಿಲ್ಲದೆ ಶಿವಮೊಗ್ಗದಲ್ಲಿ ರಾಜಕಾರಣ ಮಾಡುವುದೂ ಕಷ್ಟ ಎಂಬುದು ಅವರಿಗೆ ಮನವರಿಕೆಯಾಗಿದೆ. ಎಷ್ಟೇ ಸಿಟ್ಟು, ಸೆಡವು ಇದ್ದರೂ ಅದನ್ನು ನುಂಗಿಕೊಂಡು ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರಲು ಅವರು ತಯಾರಾಗಿ ನಿಂತಿದ್ದಾರೆ. ಸಂಘ ಪರಿವಾರದವರಂತೂ ಯಡಿಯೂರಪ್ಪ ಅವರು ಬೇಕೇ ಬೇಕು ಎನ್ನುತ್ತಿದ್ದಾರೆ. ಬೇರೆಯವರು ವೈಯಕ್ತಿಕ ಹಿತ ಸಾಧನೆಗೆ ಈ ಮಾತು ಹೇಳುತ್ತಿರಬಹುದು. ಆದರೆ, ಸಂಘ ಪರಿವಾರದವರು ಹಾಗಲ್ಲ. ಯಡಿಯೂರಪ್ಪ ಇಲ್ಲದೇ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಎತ್ತಿ ನಿಲ್ಲಿಸುವುದು ಆಸಾಧ್ಯ ಎಂಬುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಪಕ್ಷದ ಹಿತದೃಷ್ಟಿಯನ್ನು ಅವರು ಗಮನದಲ್ಲಿಟ್ಟುಕೊಂಡೇ ಮಾತನಾಡುತ್ತಿದ್ದಾರೆ.
ಯಡಿಯೂರಪ್ಪ ಅವರು ಹೋರಾಟಗಾರರು. ತಮ್ಮ ಶಕ್ತಿ ಮತ್ತು ಸಾಮರ್ಥ್ಯದಿಂದ ಮೇಲೆ ಬಂದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕಾಡುತ್ತಿದ್ದ ಕೆಲ ದೌರ್ಬಲ್ಯಗಳನ್ನು ಅವರು ಮೆಟ್ಟಿ ನಿಂತಿದ್ದರೆ ಅವರ ನಾಗಾಲೋಟಕ್ಕೆ ಕಡಿವಾಣ ಹಾಕುವವರೇ ಇರುತ್ತಿರಲಿಲ್ಲ. ಮುಖ್ಯಮಂತ್ರಿಯಾದ ಬಳಿಕ ದೌರ್ಬಲ್ಯಗಳೇ ರಾರಾಜಿಸಿದ್ದರ ಪರಿಣಾಮ ಏಕಾಏಕಿ ಕೆಳಗೆ ಬಿದ್ದರು. ಅಳಿಗೊಂದರಂತೆ ಕಲ್ಲುಗಳೂ ಅವರ ಮೇಲೆ ಬಿದ್ದವು. ಪ್ರಭಾವಿ ಲಿಂಗಾಯತ ಸಮುದಾಯವನ್ನು ಬೆನ್ನಿಗೆ ಕಟ್ಟಿಕೊಂಡು 2008ರ ವಿಧಾನಸಭೆ ಚುನಾವಣೆಯಲ್ಲಿ ಅವರು ತೋರಿಸಿದ ತಾಕತ್ತು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿತ್ತು. ರಾಜಕೀಯ ವಿರೋಧಿಗಳು ಯಡಿಯೂರಪ್ಪ ಅವರನ್ನು ನೋಡಿ ಹೊಟ್ಟೆ ಉರಿ ಪಟ್ಟುಕೊಳ್ಳುವುದನ್ನು ಬಿಟ್ಟು ಬೇರೆ ಏನೂ ಮಾಡಲಾಗಲಿಲ್ಲ.  
ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಬಂದು ಕೆಜೆಪಿ ಕಟ್ಟಿಕೊಂಡರು. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹಣೆಬರಹವೇ ಬದಲಾಗಿ ಹೋಯಿತು. ಹಾಗೆಂದು ಬಿಜೆಪಿ ಕಳೆದುಕೊಂಡ ಮತಗಳು ಎಲ್ಲಿಗೂ ಹೋಗಲಿಲ್ಲ. ಅವೆಲ್ಲಾ ಯಡಿಯೂರಪ್ಪ ಅವರ ಕೆಜೆಪಿಗೆ ಬಂದು ನಿಂತವು. ಬಿಜೆಪಿ ಮೂರು ಭಾಗವಾದರೂ ಕಾಂಗ್ರೆಸ್‌ಗೆ ಹೆಚ್ಚೇನೂ ಲಾಭವಾಗಲಿಲ್ಲ. ಹಿಂದಿನ ಚುನಾವಣೆಗಿಂತ ಕಾಂಗ್ರೆಸ್ ಶೇ.1ರಷ್ಟು ಮತಗಳನ್ನು ಮಾತ್ರ ಹೆಚ್ಚುವರಿಯಾಗಿ ಪಡೆದುಕೊಂಡಿತ್ತು. ಆದರೆ, ಬಿಜೆಪಿ ಕಳೆದುಕೊಂಡ ಮತಗಳ ಪ್ರಮಾಣ ಶೇ. 13. ಇಷ್ಟೂ ಮತಗಳು ಏನಾದರೂ ಕಾಂಗ್ರೆಸ್ ಪಾಲಾಗಿದ್ದರೆ ಆ ಪಕ್ಷದ ಸ್ಥಾನಗಳ ಸಂಖ್ಯೆ 150 ದಾಟುತ್ತಿತ್ತು. ಆದರೆ, ಆ ಮತಗಳನ್ನು ತಿಂದು ಹಾಕಿದ್ದು ಯಡಿಯೂರಪ್ಪ ಅವರ ಕೆಜೆಪಿ. ಲೋಕಸಭೆ ಚುನಾವಣೆಯಲ್ಲೂ ಪರಿಸ್ಥಿತಿ ಹೀಗೇ ಮುಂದುವರಿದರೆ ಕೆಜೆಪಿ ಶೂನ್ಯಕ್ಕಿಳಿಯುತ್ತದೆ. ಬಿಜೆಪಿ ಇನ್ನಷ್ಟು ಬಲಹೀನವಾಗುತ್ತದೆ. ಬಿಜೆಪಿ-ಕೆಜೆಪಿ ಒಂದಾದರೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎರಡಂಕಿ ದಾಟಬಹುದಾ? ಎಂಬ ಲೆಕ್ಕಾಚಾರ ಮುಖಂಡರದ್ದಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ತಾಕತ್ತು ಪರೀಕ್ಷೆಗೊಡ್ಡುತ್ತೇನೆ ಎಂದೇನಾದರೂ ಯಡಿಯೂರಪ್ಪ ಹೊರಟರೆ ಕಥೆ ಮುಗಿದಂತೆ. ಇನ್ನೈದು ವರ್ಷದಲ್ಲಿ ಯಡಿಯೂರಪ್ಪ ಅವರು ಸಂಪೂರ್ಣವಾಗಿ ಕಳೆದು ಹೋಗುತ್ತಾರೆ. ಬಿಜೆಪಿಯು ಬುಡವೂ ಆಲ್ಲಾಡಿ ಹೋಗುತ್ತದೆ. ಹೀಗಾಗಿ ಉಭಯ ಪಕ್ಷಗಳು ಮರು ಮಿಲನಕ್ಕೆ ಹಾತೊರೆಯುತ್ತಿವೆ.
ಇನ್ನು ಬಿಎಸ್‌ಆರ್ ಕಾಂಗ್ರೆಸ್. ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷದ ಶಕ್ತಿಯೂ ಸಾಬೀತಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುವ ಸ್ಥಿತಿಯಲ್ಲಿ ಪಕ್ಷದ ಅಧ್ಯಕ್ಷ ಶ್ರೀರಾಮುಲು ಅವರ ಸಹೋದರಿ ಶಾಂತಾ ಮತ್ತು ಫಕೀರಪ್ಪ ಅವರಿಲ್ಲ. 2008ರ ವಿಧಾನಸಭೆ ಚುನಾವಣೆಯಲ್ಲಿ ಇದ್ದಂತಹ ಬಲವೂ ಬಳ್ಳಾರಿಯ ಗಣಿ ಧಣಿಗಳಿಗೆ ಈಗ ಇಲ್ಲ. ಆವತ್ತು ರಾಜಕೀಯ ವಿರೋಧಿಗಳಿಗೆ ಮಾತ್ರ ಖಳನಾಯಕರಾಗಿದ್ದ ರೆಡ್ಡಿಗಳ ಬಳಗ ಈವತ್ತು ಇಡೀ ಜನರಿಗೆ ಖಳನಾಯಕ ಆಗಿದೆ. ಸ್ವಂತ ದುಡ್ಡು ತಂದರೂ ಕದ್ದು ತಂದಿದ್ದಾರೆ ಎಂದು ಜನ ಆಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬಿಎಸ್‌ಆರ್ ಕಾಂಗ್ರೆಸ್ಸಿಗೂ ಬಿಜೆಪಿ ಜೊತೆಗಿನ ಮಿಲನ ಅನಿವಾರ್ಯವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಶೇ.1ರಷ್ಟು ಮತಗಳು ಹೆಚ್ಚುವರಿಯಾಗಿ ಬಂದಿದೆ ಎಂದು ಕಾಂಗ್ರೆಸ್ ಬೀಗುವಂತಿಲ್ಲ. ಏಕೆಂದರೆ, ಬಿಜೆಪಿಯಲ್ಲಿ ಅಷ್ಟೆಲ್ಲಾ ಗೊಂದಲಗಳಿದ್ದರೂ ಅದನ್ನು ಮತಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಆ ಪಕ್ಷದ ಮುಖಂಡರಿಂದ ಸಾಧ್ಯವಾಗಲಿಲ್ಲ. ನಾಯಕರ ನಡುವಣ ಒಳ ಜಗಳ ಇದಕ್ಕೆ ಕಾರಣ. ಎಲ್ಲ ನಾಯಕರು ಒಂದಾಗಿ ಹೋರಾಟ ಮಾಡಿದ್ದರೆ ಇತರೆ ಪಕ್ಷಗಳು ಧೂಳೀಪಟ ಆಗುತ್ತಿದ್ದವು. ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗಿ ಹೋಗುತ್ತಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಪರವಾದ ಮಾತುಗಳನ್ನಾಡುತ್ತಿದ್ದಾರೆ. ಇದು ಮೇಲ್ವರ್ಗದವರಲ್ಲಿ ಸಹಜವಾಗಿಯೇ ಅಸಮಾಧಾನ ಸೃಷ್ಟಿ ಮಾಡಿದೆ. ಆ ಮತಗಳೇನಾದರೂ ಕ್ರೋಢೀಕರಣವಾದರೆ, ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದಗೌಡರೇನಾದರೂ ಒಂದಾಗಿ ಹೋದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಫಲ ಸಿಗುವುದು ಖಚಿತ.
ಆದರೆ, ಬೆಂಬಲಿಗರಾದ ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ ಮತ್ತಿತರರು ಯಡಿಯೂರಪ್ಪ ಅವರು ಬಿಜೆಪಿಗೆ ಹೋಗುವುದು ಬೇಡ ಎನ್ನುತ್ತಿದ್ದಾರೆ. ಕಾರಣ, ಮೊದಲಿನ ಮನ್ನಣೆ ತಮಗೆ ಸಿಗದೇ ಹೋಗಬಹುದು ಎಂಬುದು ಅವರ ಅನುಮಾನ. ನಿಮ್ಮನ್ನು ಬಿಟ್ಟು ಲೋಕಸಭೆ ಚುನಾವಣೆ ಎದುರಿಸುವ ಶಕ್ತಿ ಬಿಜೆಪಿಗೆ ಇಲ್ಲ. ಹೀಗಾಗಿ ಕರೆಯುತ್ತಿದ್ದಾರೆ. ಆದರೆ, ನೀವು ಹೋಗಬೇಡಿ ಎಂದು ಅವರು ಯಡಿಯೂರಪ್ಪ ಅವರ ಕಿವಿ ಊದುತ್ತಿದ್ದಾರೆ. ಯಾರು ಏನೇ ಹೇಳಿದರೂ ಬಿಜೆಪಿಗೆ ಯೂಡಿಯೂರಪ್ಪ ಅವರ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ. ದೆಹಲಿಯಲ್ಲೂ ಈ ಕುರಿತಾದ ರೂಪುರೇಷೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಯಾರ ಪ್ರತಿಷ್ಠೆಗೂ ಧಕ್ಕೆ ಆಗದ ರೀತಿಯಲ್ಲಿ ಮರು ಮಿಲನ ಆಗುವುದೊಂದೇ ಬಾಕಿ ಉಳಿದಿರುವ ಕೆಲಸವಾಗಿದೆ.

ಲಗೋರಿ : ಪರಿಸ್ಥಿತಿ ಮುಂದೆ ಯಾರೂ ದೊಡ್ಡವರಲ್ಲ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!