ಅಂಕಣಗಳು

ಹುಲಿ ಯಾವಾಗ್ ಕಳಿಸ್ತೀರಾ?

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಯೋಜನೆ ಚಾಲ್ತಿಯಲ್ಲಿದೆ. ಇದರನ್ವಯ ದಾನಿಗಳು ಪ್ರಾಣಿ- ಪಕ್ಷಿಗಳ ನಿರ್ವಹಣೆಗೆ ತಮಗೆ ಎಷ್ಟು ಅವಧಿಗೆ ಬೇಕು ಅಷ್ಟು ಅವಧಿಗೆ ಹಣ ನೀಡಿ ದತ್ತು ಪಡೆಯಬಹುದು. ಈ ವಿವರ ಆನ್‌ಲೈನ್‌ನಲ್ಲೂ ಲಭ್ಯ. ಇದನ್ನು ಗಮನಿಸಿದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಮೃಗಾಲಯ ಸಂಪರ್ಕಿಸಿದರು. ಹುಲಿ ದತ್ತು ಪಡೆಯುವ ಬಗ್ಗೆ ವಿವರ ಪಡೆದುಕೊಂಡರು. ಹುಲಿ ದತ್ತು ಪಡೆಯಲು 1 ಲಕ್ಷ ನೀಡಬೇಕೆಂದು ಮೃಗಾಲಯ ಅಧಿಕಾರಿ ಹೇಳಿದಾಗ, ಇದಕ್ಕೆ ಸಮ್ಮತಿಸಿದ ಆತ ಎಲ್ಲಿಗೆ ಕಳುಹಿಸಬೇಕು ಎಂದೆಲ್ಲಾ ವಿಚಾರಿಸಿಕೊಂಡ. ಎಲ್ಲ ಆದ ನಂತರ ಸರಿ, ನಾನು 1 ಲಕ್ಷ ಇಂದೇ ಕಳುಹಿಸುವೆ. ನೀವ್ ಹುಲಿ ಯಾವಾಗ ಕಳಿಸ್ತೀರಾ ಎಂದು ಕೇಳಿದಾಗ ಅಧಿಕಾರಿಗಳು ಸುಸ್ತು! ಏಕೆಂದರೆ ಈ ಯೋಜನೆಯಲ್ಲಿ ಪ್ರಾಣಿ- ಪಕ್ಷಿಗಳ ನಿರ್ವಹಣೆಗೆ ಮಾತ್ರ ದಾನಿಗಳಿಂದ ಹಣ ಪಡೆಯಲಾಗುತ್ತದೆಯೇ ಹೊರತು, ದತ್ತು ಪಡೆದವರಿಗೆ ಅವುಗಳನ್ನೇನೂ ಕಳುಹಿಸುವುದಿಲ್ಲ. ಇದನ್ನು ಆತನಿಗೆ ವಿವರಿಸಿ ಹೇಳಿದ ನಂತರ ಮೃಗಾಲಯ ಅಧಿಕಾರಿಗಳು ಬಿದ್ದುಬಿದ್ದು ನಕ್ಕರಂತೆ.

ಕೆ.ಜೆ. ಜಾರ್ಜ್ 'ಫರ್ನಾಂಡಿಸ್‌'
ಇತ್ತೀಚೆಗೆ ರಾಜ್ಯ ಗೃಹ ಸಚಿವ ಕೆ.ಜೆ.ಜಾರ್ಜ್ ಮೈಸೂರಿಗೆ ಬಂದಿದ್ದರು. ಅವರನ್ನು ಸ್ವಾಗತಿಸುವ ಭರದಲ್ಲಿ ಕೆಲವರು ಅಲ್ಲಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಅದರಲ್ಲೂ ಸರ್ಕಾರಿ ಅತಿಥಿಗೃಹದ ಉತ್ತರ ದ್ವಾರದಲ್ಲಿ ಹಾಕಿದ್ದ ಫ್ಲೆಕ್ಸ್ ಎಲ್ಲರ ಗಮನ ಸೆಳೆಯಿತು. ಏಕೆಂದರೆ ಅಲ್ಲಿ ಕೆ.ಜೆ. ಜಾರ್ಜ್‌ಗೆ ಸ್ವಾಗತ ಎನ್ನುವ ಬದಲು 'ಕೆ.ಜೆ. ಜಾರ್ಜ್ ಫರ್ನಾಂಡಿಸ್‌'ಗೆ ಸ್ವಾಗತ ಎಂದು ಬರೆಯಲಾಗಿತ್ತು. ಎಲ್ಲಿಯ ಕಾಂಗ್ರೆಸ್? ಎಲ್ಲಿಯ ಜಾರ್ಜ್ ಫರ್ನಾಂಡಿಸ್? ಸದ್ಯ ಆಸ್ಕರ್ ಫರ್ನಾಂಡಿಸ್ ಎಂದು ಬರೆಯಲಿಲ್ಲವಲ್ಲ ಎಂಬುದು ಕಾಂಗ್ರೆಸ್ ವಲಯದಲ್ಲಿಯೇ ಕೇಳಿಬರುತ್ತಿರುವ ಜೋಕ್.

ನಾನಿನ್ನೂ ಟ್ರೈನಿ
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಕಳೆದ ವಾರ ಮೈಸೂರಿನಲ್ಲಿದ್ದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸುದ್ದಿಗಾರರು ಅವರನ್ನು ಭೇಟಿಯಾಗಿ, ಏನೇ ಪ್ರಶ್ನೆ ಕೇಳಿದರೂ, ನಾನಿನ್ನೂ ಟ್ರೈನಿ. ಪ್ರೊಬೇಷನರಿ ಕೂಡ ಅಲ್ಲ. ಟ್ರೈನಿ ಪಿರಿಯಡ್ ಮುಗಿದು, ಪ್ರೊಬೇಷನರಿ ಡಿಕ್ಲೇರ್ ಆಗಲಿ. ನಂತರ ನೋಡೋಣ ಎಂದು ಸಾಗ ಹಾಕಿದರು.

ಗುಟ್ಕಾ ಗುಟ್ಟು ರಟ್ಟು ಮಾಡದ ಶಾಸಕ!
ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿದೆ. ಆದರೆ ಅದಿನ್ನೂ ಸರಿಯಾಗಿ ಜಾರಿಯಾಗಿಲ್ಲ ಎಂದು ರಾಜ್ಯದ ಮೂಲೆಮೂಲೆಗಳಿಂದಲೂ ವರದಿಯಾಗುತ್ತಿದೆ. ವ್ಯಾಪಾರಿಗಳು ಕದ್ದುಮುಚ್ಚಿ ಮಾರುತ್ತಿದ್ದಾರೆ. ಗುಟ್ಕಾ ಪ್ರಿಯರೂ ಬಳಸುತ್ತಿದ್ದಾರೆ ಎಂಬುದಕ್ಕೆ ಕಳೆದ ವಾರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದು ಸಾಕ್ಷಿಯಾಯಿತು. ಇದರಲ್ಲಿ ಭಾಗವಹಿಸಿದ್ದ ಆಡಳಿತ ಪಕ್ಷದ ಶಾಸಕರೇ ಕಾರ್ಯಕ್ರಮ ಆರಂಭಕ್ಕೆ ಮೊದಲು ಗುಟ್ಕಾ ಬಾಯಿಗೆ, ಪೊಟ್ಟಣವನ್ನು ಜೇಬಿಗೆ ಹಾಕಿಕೊಂಡು 'ಗುಟ್ಕಾ ಗುಟ್ಟು ರಟ್ಟಾಗಲಿಲ್ಲ' ಎಂದು ಸಮಾಧಾನಪಟ್ಟುಕೊಂಡರು.

'ಅಕ್ಕಿ' ಎತ್ತುವ ಸ್ಪರ್ಧೆ!

ಇತ್ತೀಚೆಗೆ ಬಾಗಲಕೋಟೆಯಲ್ಲಿ ಅನ್ನಭಾಗ್ಯ ಯೋಜನೆ ಉದ್ಘಾಟನೆ ವೇಳೆ ಜನಪ್ರತಿನಿಧಿಗಳು ಅಕ್ಕಿ ಮೂಟೆ ಎತ್ತಿ ತಾಕತ್ತು ಪ್ರದರ್ಶಿಸಿದರು! ಅಷ್ಟೇ ಅಲ್ಲ, ಅವರ ತಾಕತ್ತಿಗೆ ನೆರೆದಿದ್ದ ಜನ ಶಿಳ್ಳೆ, ಚಪ್ಪಾಳೆ ಕೂಡ ತಟ್ಟಿದರು. ಮೇಲ್ಮನೆ ಸದಸ್ಯ ಎಸ್.ಆರ್.ಪಾಟೀಲ ತಮ್ಮ ವಯಸ್ಸನ್ನೂ ಮರೆತು 30 ಕೆಜಿ ಅಕ್ಕಿ ಮೂಟೆಯನ್ನು ಫಲಾನುಭವಿ ತಲೆ ಮೇಲೆ ಎತ್ತಿಟ್ಟರು. ತಾನೇನು ಕಮ್ಮಿ ಎಂಬಂತೆ ಬಿಜೆಪಿ ಹಾಲಿ ಸಂಸದ ಪಿ.ಸಿ.ಗದ್ದಿಗೌಡ್ರ ಮೂಟೆಯನ್ನು ಎತ್ತಿ ತಲೆ ಮೇಲಿಟ್ಟರು. ಆದರೆ ಅವರಿಗಾರಿರುವ ಸುಸ್ತನ್ನು ಮರೆಮಾಚಿಕೊಂಡರು. ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ.ಪಾಟೀಲ ತಮ್ಮ ಧೋತರ ಜಾರುವುದನ್ನೂ ಮರೆತು ಮೂಟೆ ಎತ್ತಿಯೇ ಬಿಟ್ಟರು. ಬಾಗಲಕೋಟೆ ಕಾಂಗ್ರೆಸ್ ಶಾಸಕ ಹುಲ್ಲಪ್ಪ ಮೇಟಿ ತಮ್ಮ ನೆರೆತ ತಲೆಗೂದಲನ್ನು ನೆನಪಿಸಿಕೊಳ್ಳುವ ಗೋಜಿಗೆ ಹೋಗದೆ 30 ಕೆಜಿ ಅಕ್ಕಿ ಮೂಟೆಯನ್ನು ಎತ್ತಿ ತಾಕತ್ತು ತೋರಿಸಿದರು. ನಂತರದ ಸರದಿ ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರದ್ದು. ಮೂಟೆ ಎತ್ತುವ ಸಚಿವ, ಶಾಸಕರ ಪೈಪೋಟಿಯ ಸಖತ್ ಮನರಂಜನೆ ಸವಿಯುತ್ತಿದ್ದ ಪ್ರೇಕ್ಷಕರು ಕಮಾನ್, ಕೀಪಿಟಪ್ ಎಂದು ಹುರುದುಂಬಿಸುತ್ತಿದ್ದರು. ಆಗ ಚಿಮ್ಮನಕಟ್ಟಿ ಕುರ್ಚಿಯಿಂದ ಮೇಲೇಳದಾದಾಗ -ಚಿಮ್ಮನಕಟ್ಟಿ ಕಮಾನ್, ಚಿಮ್ಮನಕಟ್ಟಿ ಕಮಾನ್ ಎಂದು ಕೂಗಿದರೂ ಅವರು ಮಾತ್ರ ತಮ್ಮ ಸ್ಥಾನದಿಂದ ಏಳುವ ಮನಸ್ಸು ಮಾಡಲೇ ಇಲ್ಲ. ಆಗ ಸಭಿಕರ ಮಧ್ಯ ಇದ್ದವನೊಬ್ಬ, 'ಚುನಾವಣೆಯಲ್ಲಿ ದೇವರಾಜ ಪಾಟೀಲ್ ಅವರನ್ನು ಹಿಂದೆ ಸರಿಸಿ, ಕಾಂಗ್ರೆಸ್ ಟಿಕೆಟ್ ಎತ್ತಿ ಸುಸ್ತು ಆಗ್ಯಾರ, ಸುಮ್ನ ಬಿಡ್ರೋ ಅವ್ರು ಇನ್ನಷ್ಟ ಸುಧಾರ್ಸಿಕೊಳ್ಲಿ' ಎಂದು ಕಿಚಾಯಿಸಿದಾಗ ಸಭಾಂಗಣದಲ್ಲಿ ನಗೆಬುಗ್ಗೆ ಚಿಮ್ಮಿತು.

ನೀವೇ ಧಾರಾವಾಹಿ ನೋಡೋ ಹಾಗಾತಲ್ರೀ...
ನಾವ್ ಹೇಳಿದ್ದ ಮಾತು ನಮಗೆ ಕೆಲವೊಮ್ಮೆ ಉಲ್ಟಾ ಹೊಡೆಯುತ್ತೆ! ಅದರಲ್ಲೂ ಮತ್ತೊಬ್ಬರು ಅದನ್ನು ನೆನಪಿಸಿಕೊಟ್ಟಾಗಲಂತೂ ತಲೆಮೇಲೆ ಹೊಡೆದಂತೆ ಇರುತ್ತೆ ಬಿಡಿ. ಇಂತಹ ಅಕ್ಷರಶಃ ಅನುಭವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಆಗಿದೆಯಂತೆ. ಏನಾಯಿತೆಂದರೆ, ಕಳೆದ ವರ್ಷ ಜುಲೈ 6ರಂದು ಬೆಂಗಳೂರಿನಲ್ಲಿ ಈಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಈಶ್ವರಪ್ಪನೋರು ಶಾಸಕರಿಗೆ ಚುನಾವಣೆ ಪಾಠ ಮಾಡುವಾಗ, 'ಚುನಾವಣೆಯನ್ನು ಗಂಭೀರವಾಗಿ ಎದುರಿಸಿ. ನೀವು ಗೆದ್ದು ಬರದೇ ಹೋದರೆ, ಮನೆಯಲ್ಲಿ ಟಿವಿ ಮುಂದೆ ಕುಳಿತು ಧಾರಾವಾಹಿ ನೋಡೋ ಗತಿ ಬರುತ್ತೆ' ಅಂತಾ ಹೇಳಿದ್ದರಂತೆ. ಇದಾದ ಬಳಿಕ ಮೊನ್ನೆ ಜುಲೈ 6ರಂದು ಈಶ್ವರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜತೆಗೆ ಕಳಕಪ್ಪ ಬಂಡಿ ಒಂದೆಡೆ ಸೇರಿದ್ದರು. ಈ ವೇಳೆ ಸುಮ್ಮನೆ ಕುಳಿತುಕೊಳ್ಳದ ಬಂಡಿ, ಈಶ್ವರಪ್ಪರನ್ನು ಸಂಬೋಧಿಸಿ, 'ಸಾಹೇಬ್ರ ಹೋದ ವರ್ಷ ಇದೇ ದಿನಾ ನೀವು ಭಾಷಣ ಮಾಡಿದ್ದು ನೆನಪು ಅದ ಏನು?' ಅಂತಾ ಕೇಳಿದ್ರು. ಇದಕ್ಕೆ ಪ್ರತಿಯಾಗಿ ಈಶ್ವರಪ್ಪ 'ನಿಂದೊಳ್ಳೆ ಕಥೆ ಮಾರಾಯಾ ನಿನ್ನೆ ಮಾತಾಡಿದ್ದು ನೆನಪಿರಲ್ಲ, ಕಳೆದ ವರ್ಷಾ ಮಾತಾಡಿದ್ದು ನೆನಪಿರತ್ತಾ? ಅದ್‌ಸರಿ ಏನು ಮಾತಾಡಿದ್ದೆ ನೀನೆ ಹೇಳು' ಅಂದ್ರು. ಕಳಕಪ್ಪ ಬಂಡಿ ಮಾತು ಮುಂದುವರಿಸಿ, 'ಚುನಾವಣೆಯಲ್ಲಿ ಸೋತ್ರೆ ಧಾರಾವಾಹಿ ನೋಡೋ ಗತಿ ಬರತೈತಿ ಅಂದಿದ್ರಿ. ಈಗ ನೀವೇ ಧಾರಾವಾಹಿ ನೋಡೋ ಹಾಗಾತಲ್ರೀ' ಎಂದು ಕಾಲೆಳೆದರು.

- ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!