ತಿರುಪತಿಗೆ ಹೋದವರು ಬರುವಾಗ ಮಂಗಾಪುರ ಹಾಗೂ ಕಾಳಹಸ್ತಿಯನ್ನು ನೋಡಿ ಬರುವಂತೆ ಮೊನ್ನೆ ರವಾಂಡಾಕ್ಕೆ ಹೋದವನು ಬರುವಾಗ ಕೀನ್ಯಾ ರಾಜಧಾನಿ ನೈರೋಬಿಯಲ್ಲಿಳಿದು ವಿಶ್ವವಿಖ್ಯಾತ ಮಸೈಮರಾ ಹಾಗೂ ಲೇಕ್ ನಕುರು ವನ್ಯಧಾಮಗಳಿಗೆ ಹೋಗಿದ್ದೆ. ರವಾಂಡಾ ರಾಜಧಾನಿ ಕಿಗಾಲಿಯಿಂದ ಪಕ್ಕದ ನೈರೋಬಿಗೆ ವಿಮಾನದಲ್ಲಿ ಬರೀ ಒಂದೂವರೆ ಗಂಟೆ ಪ್ರಯಾಣ. ನೈರೋಬಿಯಿಂದ ಮಸೈಮರಾ ವನ್ಯಧಾಮಕ್ಕೆ ಆರು ತಾಸಿನ ಪ್ರಯಾಣ. ಲ್ಯಾಂಡ್ ಕ್ರುಸರ್ ಜೀಪಿನಲ್ಲಿ ಕುಳಿತು ರಸ್ತೆಯ ಇಕ್ಕೆಲಗಳಲ್ಲಿರುವ ಗಿರಿವನರಾಜಿಗಳನ್ನು ಸವಿಯುತ್ತಾ, ಉಬ್ಬುತಗ್ಗಿನ ರಸ್ತೆಯಲ್ಲಿ ಜೀಕುತ್ತಾ ಹೋಗುತ್ತಿದ್ದರೆ ದಾರಿ ಸವೆಸಿದ್ದೇ ಗೊತ್ತಾಗುವುದಿಲ್ಲ.
ಮಸೈಮರಾ ಹಾಗೂ ಲೇಕ್ ನಕುರು ಬಗ್ಗೆ ಕೇಳಿದ್ದೆ, ಓದಿದ್ದೆ. ನ್ಯಾಶನಲ್ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್, ಡಿಸ್ಕವರಿ ಚಾನೆಲ್‌ಗಳಲ್ಲಿ ನೋಡಿದ್ದೆ. ಸಿಂಹ, ಚಿರತೆಗಳು ತಮ್ಮ ಆಹಾರಕ್ಕೆ ಜಿಂಕೆ, ಕಡವೆಯಂಥ ಪ್ರಾಣಿಗಳನ್ನು ಹತ್ತಾರು ಕಿಮಿ ದೂರ ಅಟ್ಟಾಡಿಸಿಕೊಂಡು ಹೋಗಿ ಕೊನೆಗೆ ಸಾಯಿಸುವ ದೃಶ್ಯವನ್ನು ಈ ಚಾನೆಲ್‌ಗಳಲ್ಲಿ ವೀಕ್ಷಿಸುವಾಗ, ಇಂಥ ಪ್ರದೇಶ ಎಲ್ಲಿರಬಹುದೆಂದು ನನಗೆ ನಾನೇ ಕೇಳಿಕೊಂಡಿದ್ದುಂಟು. ಮಸೈಮರಾದ ಬಗ್ಗೆ, ಕಾಡು ಹಾಗೂ ಅಲ್ಲಿನ ಪ್ರಾಣಿಗಳ ವಿಸ್ಮಯ ಲೋಕದ ಬಗ್ಗೆ ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿಯಲ್ಲಿ ಬರುವ ಪಾತ್ರಗಳನ್ನು ಬಣ್ಣಿಸುವಂತೆ ಗೆಳೆಯ ಗೋಪಿ ರಸವತ್ತಾಗಿ ಬಣ್ಣಿಸಿ ನನ್ನ ಮನಸ್ಸಿನಲ್ಲಿ ಒಂದು ನಿಗೂಢ ಪ್ರಪಂಚವನ್ನೇ ಸೃಷ್ಟಿಸಿದ್ದ.
ಇಷ್ಟಕ್ಕೆ ಸುಮ್ಮನಾಗದ ಗೋಪಿ, ಡ್ಯಾನಿಶ್ ಮಹಿಳೆ ಕರೆನ್ ಬ್ಲಿಕ್ಸೆನ್ ಮಸೈಮರಾದ ಕುರಿತು ಬರೆದಿರುವ ಪುಸ್ತಕ ಕೊಟ್ಟು ಓದಿಸಿ ಮಸೈಮರಾ ಬಗ್ಗೆ ವಿಚಿತ್ರ ಕುತೂಹಲವನ್ನು ಹುಟ್ಟಿಸಿದ್ದ. ಅಲ್ಲಿನ ಒಂದೊಂದು ಪ್ರಾಣಿಯ ಬಗ್ಗೆ ಆತ ಹೇಳುತ್ತಿದ್ದರೆ, ಚಂಬಲ್ ಕಣಿವೆಯ ಡಾಕುಗಳ ಕತೆ ಕೇಳಿದಂಥ ಅನುಭೂತಿಯನ್ನು ಮೂಡಿಸುತ್ತಿದ್ದ. ಕೊನೆಯಲ್ಲಿ ಒಂದು ಮಾತನ್ನು ಹೇಳಲು ಆತ ಮರೆಯುತ್ತಿರಲಿಲ್ಲ- 'ಮುಂದಿನ ಜನ್ಮ ಅಂತಿದ್ದರೆ, ನಾನು ಮಸೈಮರಾದಲ್ಲಿ ಪ್ರಾಣಿಯಾಗಿ ಹುಟ್ಟಬೇಕು ಕಣ್ರೋ. ನಾನು ಸತ್ತರೆ ನನ್ನನ್ನು ಅಲ್ಲಿಯೇ ಹೂತು ಹಾಕಿದರೂ ಪರವಾಗಿಲ್ಲ, ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳಿ'.
ಈ ಮಾತುಗಳನ್ನು ಕೇಳುತ್ತಿದ್ದರೆ ಗೋಪಿ ಯಾಕೋ ಅತಿಯಾಗಿ ವರ್ತಿಸುತ್ತಿದ್ದಾನೆ, ತೆಲುಗು ಸಿನಿಮಾ ನಿರ್ದೇಶಕನಂತೆ ಯೋಚಿಸುತ್ತಿದ್ದಾನೆ ಎಂದು ಅನಿಸುತ್ತಿತ್ತು. ನಾವೆಲ್ಲ ಗೆಳೆಯರು ಸೇರಿ ಅವನನ್ನು ಎಂ.ಎಂ.ಗೋಪಿ ಅರ್ಥಾತ್ 'ಮಸೈಮರಾ ಗೋಪಿ' ಎಂದು ಕೀಟಲೆ ಮಾಡುತ್ತಿದ್ದೆವು. ಆತ ನಮ್ಮ ಜತೆ ಸೇರಿದಾಗ ತಮಾಷೆಯಿಂದ ಒಂದು ಷರತ್ತು ಹಾಕುತ್ತಿದ್ದೆವು-'ಗೋಪಿ, ಮಸೈಮರಾ ಹೊರತುಪಡಿಸಿ ಮಾತಾಡುವುದಾದರೆ ಅಡ್ಡಿಯಿಲ್ಲ, ಇಲ್ಲದಿದ್ದರೆ ನಿನಗೆ ಪ್ರವೇಶವಿಲ್ಲ'.
ಆರಂಭದಲ್ಲಿ ಈ ಷರತ್ತಿಗೆ ತಲೆಯಾಡಿಸಿ, ಕೊನೆಯಲ್ಲಿ ಅದನ್ನು ಉಲ್ಲಂಘಿಸಿಯೇ ಹೋಗುತ್ತಿದ್ದ. ಶಂಕರಪುರಂ ರಂಗರಾವ್ ರಸ್ತೆಯಲ್ಲಿರುವ ಬ್ರಾಹ್ಮಣ ಕಾಫಿ ಬಾರ್‌ನ ಮಾಲೀಕ, ಸ್ನೇಹಿತ ರಾಧಾಕೃಷ್ಣ ಅಡಿಗ ಪ್ರತಿವಾರ ತಿರುಪತಿಗೆ ಹೋಗುವಂತೆ ಗೋಪಿ ಮೂರು ತಿಂಗಳಿಗೊಮ್ಮೆ ಮಸೈಮರಾಕ್ಕೆ ಹೋಗುತ್ತಾನೆ. ಪ್ರತಿಸಲ ಹೋದಾಗಲೂ 10-15 ದಿನ ಉಳಿದು ಬರುತ್ತಾನೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ, ಸುವರ್ಣನ್ಯೂಸ್‌ನಲ್ಲಿರುವ ನನ್ನ ಸಹೋದ್ಯೋಗಿ ಮಿತ್ರ ವಿನೋದ್‌ಕುಮಾರ್ ನಾಯಕ್ ಮುಂದೆ ಮಸೈಮರಾ ಅಂದ್ರೆ ಸಾಕು, ಬ್ರೇಕಿಂಗ್ ನ್ಯೂಸ್ ಸ್ತಬ್ದ. ಅದನ್ನು ಬರೆಯುವುದನ್ನು ಬಿಟ್ಟು ಮಸೈಮರಾದ ಬಣ್ಣನೆಯಲ್ಲಿ ತಲ್ಲೀನ. ಗೋಪಿಗೂ ವಿನೋದ್‌ಗೂ ಒಂದೇ ವ್ಯತ್ಯಾಸ ಅಂದ್ರೆ ಗೋಪಿ ಮಸೈಮರಾ ನೋಡಿದ್ದಾನೆ, ವಿನೋದ್ ನೋಡಿಲ್ಲ. ಆದರೆ ವಿವರಗಳಿಗೆ ವಿನೋದ್‌ನಲ್ಲಿ ಕೊರತೆಯಿಲ್ಲ. ಇವರಿಬ್ಬರು ಮಸೈಮರಾ ಬಗ್ಗೆ ಎಂಥ ಛಾಪನ್ನು ಒತ್ತಿದ್ದರೆಂದರೆ, ಇದನ್ನೇನಾದರೂ ನೋಡದೇ ಸತ್ತರೆ ಪ್ರೇತವಾಗಿ ಅಲೆಯಬೇಕಾಗುತ್ತದೇನೋ ಎಂಬ ಸಂದೇಹ ಗಟ್ಟಿಯಾಗುವಷ್ಟು.
ನಾನು ಗೋಪಿಯ ಮಾತುಗಳನ್ನು ಹಾಗೂ ಅವನನ್ನು ಗಂಭೀರವಾಗಿ ಪರಿಗಣಿಸಿದ್ದು ಕರೆನ್ ಬ್ಲಿಕ್ಸೆನ್ ಬರೆದ 'Out of Africa' ಎಂಬ ಪುಸ್ತಕವನ್ನು ಓದಿದ ನಂತರ. ಈ ಕೃತಿಗೆ ನೊಬೆಲ್ ಪ್ರಶಸ್ತಿ ದೊರಕಬೇಕಿತ್ತು ಎಂಬ ಮಾತು ಈಗಲೂ ಚರ್ಚೆಗೆ ಬರುವುದುಂಟು. ಮಸೈಮರಾ ವನ್ಯಧಾಮದ ಚಿತ್ರಣವನ್ನು ಈಕೆಯಷ್ಟು ಸೊಗಸಾಗಿ ಮತ್ತ್ಯಾರೂ ಕಟ್ಟಿಕೊಟ್ಟಿಲ್ಲ. ಈ ಕೃತಿಯನ್ನು ಓದಿದ ಬಳಿಕ ಮಸೈಮರಾ ಎಂಬ 'ಹುಳು' ನನ್ನ ತಲೆಯೊಳಗೆ ರಂಧ್ರ ಕೊರೆಯಲು ಶುರು ಮಾಡಿತು. ಅಲ್ಲಿಗೆ ಹೋಗುವ ಅವಕಾಶಕ್ಕೆ ಹೊಂಚು ಹಾಕುತ್ತಲೇ ಇದ್ದೆ.
ನಿಜ ಹೇಳುತ್ತೇನೆ, ಮಸೈಮರಾ ಇದೆಯಲ್ಲ, ಅದು ಗೋಪಿ, ವಿನೋದ್ ಹಾಗೂ ಕರೆನ್ ಬ್ಲಿಕ್ಸೆನ್ ಹೇಳಿದ್ದಕ್ಕಿಂತ ಸೊಗಸಾಗಿದೆ, ಅದ್ಭುತವಾಗಿದೆ, ರೋಚಕವಾಗಿದೆ, ರಮ್ಯವಾಗಿದೆ, ಕುತೂಹಲಕರವಾಗಿದೆ, ನಿಗೂಢವಾಗಿದೆ. ಹಾಗೆ ನೋಡಿದರೆ, ಒಂದು ಪುಸ್ತಕ, ಒಂದು ಸಿನಿಮಾದಲ್ಲಿ ಮಸೈಮರಾವನ್ನು ಬಣ್ಣಿಸಲು ಆಗುವುದಿಲ್ಲ. ನಯಾಗಾರ ಜಲಪಾತವನ್ನು ಬಿಂದಿಗೆಯಲ್ಲಿ ತೋರಿಸಿದಂತಾದೀತು. ಡೆವಿಡ್ ರೌಂಡ್ ಟರ್ನರ್ ಎಂಬಾತ 'ದಿ ಬ್ಯೂಟಿ ಆಫ್ ಮಸೈಮರಾ' ಎಂಬ ಪುಸ್ತಕ ಬರೆದಿದ್ದಾನೆ. ಅಲ್ಲಿ ಒಂದೆಡೆ ಹೇಳುತ್ತಾನೆ-'ಮಸೈಮರಾದಲ್ಲಿ ಏನಿದೆ, ಎಷ್ಟು ಪ್ರಾಣಿಗಳಿವೆ, ಎಂಥ ಜೀವವೈವಿಧ್ಯವಿದೆಯೆಂಬುದರ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ. ಆದರೆ ಅವೆಲ್ಲ ಅಪೂರ್ಣ. ಹತ್ತು ಜನ್ಮ ಹುಟ್ಟಿ ಬಂದರೂ ಅಲ್ಲಿನ ರಹಸ್ಯವನ್ನು ಅರಿಯಲಾಗುವುದಿಲ್ಲ.'
ಮಸೈಮರಾ ಎಂಬ ಅದ್ಭುತಲೋಕದ ಮಧ್ಯೆ ನಿಂತು, ಮುನ್ನೂರರವತ್ತು ಡಿಗ್ರಿ ಸುತ್ತು ಹಾಕಿ, ಆಕಾಶಕ್ಕೆ ಮುಖವೊಡ್ಡಿದಾಗ ನನಗನಿಸಿದ್ದು-'ಈ ಅದ್ಭುತಲೋಕಕ್ಕೆ ನಾನೇಕೆ ಇಷ್ಟು ತಡವಾಗಿ ಬಂದೆ? ಇಂಥದೊಂದು ತಾಣದ ಬಗ್ಗೆ ಕೇಳಿ ತಿಳಿದಿದ್ದರೂ ಆಗಲೇ ಯಾಕೆ ಬರಲಿಲ್ಲ? ಛೇ! 'I wasted my life.'
ಈ ಮಾತನ್ನು ಉತ್ಪ್ರೇಕ್ಷೆಯಿಂದ ಹೇಳುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡೇ ಹೀಗೆ ಹೇಳುತ್ತಿದ್ದೇನೆ. 'ತಡವಾದರೂ ಪರವಾಗಿಲ್ಲ, ಈಗಲಾದರೂ ಬಂದೆನಲ್ಲ' ಎಂದು ನನಗೆ ಸಮಧಾನ ಹೇಳಿಕೊಂಡೆ.
ಮಸೈಮರಾ ಒಂದು ಪ್ರಾಣಿಲೋಕ ಅಂದರೆ ಸಂಕ್ಷಿಪ್ತವಾಗಿ ಎಲ್ಲವನ್ನೂ ಹೇಳಿದಂತಾಗಬಹುದು ಅಥವಾ ಏನನ್ನೂ ಹೇಳಿದಂತೆ ಆಗುವುದಿಲ್ಲ. ಯಾಕೆಂದರೆ ಅದು ಅದೊಂದೇ ಅಲ್ಲ ಹಾಗೂ ಅದೆಲ್ಲವನ್ನೂ ಮೀರಿದ್ದು!
ಅಂದು ಮಸೈಮರಾ ವನ್ಯಧಾಮವನ್ನು ತಲುಪಿದಾಗ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ಯಾವಾಗ ನಾವು ಅದರೊಳಗೆ ಪ್ರವೇಶಿಸಿದೆವೋ ಗೊತ್ತೇ ಆಗಲಿಲ್ಲ. ಕಾರಣ ಅದಕ್ಕೆ ನಿಶ್ಚಿತ ಸರಹದ್ದಾಗಲಿ, ಗಡಿಯಾಗಲಿ, ಬೇಲಿಯಾಗಲಿ ಇರಲಿಲ್ಲ. ಮಸೈಮರಾ ಇವೆಲ್ಲವನ್ನೂ ಮೀರಿದ, ಕಣ್ಣದೃಷ್ಟಿ ಹಾಯುವ ತನಕ ಚಾಚಿಕೊಂಡ, ಅನತಿ ದೂರದಲ್ಲಿ ಭೂಮಿ-ಭಾನು ಒಂದಾಗಿ ಸೇರುವಷ್ಟು ವಿಸ್ತಾರ ಪಡೆದುಕೊಂಡಿರುವ, ಹಚ್ಚಹಸಿರು ಹುಲ್ಲಿನ ಚಾದರ ಹೊದ್ದು ಸುಮ್ಮನೆ ಮಲಗಿರುವ ಪ್ರಕೃತಿಯ ಒಂದು ಸುವ್ಯವಸ್ಥಿತ ವ್ಯವಸ್ಥೆ. ವನ್ಯಧಾಮ ಅಂದ್ರೆ ದಟ್ಟಕಾಡಿನ ದೃಶ್ಯ ಕಣ್ಮುಂದೆ ಬರಬಹುದು. ಆದರೆ ಅಲ್ಲಿ, ಇಲ್ಲಿ ಒಂದೊಂದು ಮರವನ್ನು ಬಿಟ್ಟರೆ ಆ ಬಟಾಬಯಲಿನಲ್ಲಿ ಎದೆಯೆತ್ತರಕ್ಕೆ ಬೆಳೆದ ಹುಲ್ಲಿನದೇ ಅಧಿಪತ್ಯ. ಇಡೀ ಬೆಂಗಳೂರು ಸಪಾಟಾಗಿದ್ದರೆ ಹೇಗಿರಬಹುದು ಹಾಗೂ ಆ ಸಪಾಟಿನ ಮೇಲೆ ಹುಲ್ಲು ಹಾಸಿದರೆ ಹೇಗೆ ಕಾಣಬಹುದು, ಅಲ್ಲಿ ಲಕ್ಷಾಂತರ ಪ್ರಾಣಿಗಳಿದ್ದರೆ ಹೇಗೆ ಕಾಣಬಹುದು, ಅದು ಮಸೈಮರಾ! ಮಸೈಮರಾ ವನ್ಯಧಾಮವನ್ನು ಪ್ರವೇಶಿಸುತ್ತಿದ್ದಂತೆ, ನಮ್ಮನ್ನು ಸ್ವಾಗತಿಸಿದ್ದು ಸಾವಿರಾರು ಜೀಬ್ರಾಗಳು. ಮೇಯುವುದನ್ನೇ ಕಾಯಕ ಮಾಡಿಕೊಂಡಂತಿದ್ದ ಜೀಬ್ರಾಗಳ ದಂಡನ್ನು ಕಂಡು ಅಚ್ಚರಿಪಡುವಷ್ಟರಲ್ಲಿ ಜಿರಾಫೆಗಳು ಕತ್ತು ತೂರಿಸುತ್ತಾ ಬಂದವು. ಒಂದಾ? ಎರಡಾ? ಕನಿಷ್ಠ ನಲವತ್ತು -ಐವತ್ತು ಜಿರಾಫೆಗಳು ಹೆಜ್ಜೆ ಹಾಕುತ್ತಾ ನಡೆದು ಬರುತ್ತಿದ್ದರೆ ಬಾಯಿಬಾಯಿ ಬಿಟ್ಟುಕೊಂಡು ಕತ್ತೆತ್ತಿ ನೋಡುತ್ತಾ ನಿಂತಿದ್ದೆವು.
ಯಾರ ಪುಸ್ತಕ ಓದಿ ಪ್ರಭಾವಿತನಾಗಿ ಮಸೈಮರಾವನ್ನು ನೋಡಲೇಬೇಕೆಂದು ನಿರ್ಧರಿಸಿದ್ದೆನೋ ಅವಳ ಹೆಸರಿನಲ್ಲಿರುವ ರೆಸಾರ್ಟ್ ಮುಂದೆ ನಮ್ಮ ಜೀಪ್ ನಿಂತಾಗ ಸಣ್ಣ ರೋಮಾಂಚನ. ಕರೆನ್ ಬ್ಲಿಕ್ಸೆನ್ ಕ್ಯಾಂಪ್‌ನಲ್ಲಿ ನಮಗೆ ವಸತಿ ಏರ್ಪಾಟಾಗಿತ್ತು. ಮಸೈಮರಾ ವನ್ಯಧಾಮದೊಳಗೇ ಡೇರೆ ಕ್ಯಾಂಪ್! ರಾತ್ರಿ ನಿಮ್ಮ ಡೇರೆಯ ಸಮೀಪ ನೀರಾನೆ, ಆನೆ, ಜಿರಾಫೆ, ಕಾಡೆಮ್ಮೆ ಮುಂತಾದ ಪ್ರಾಣಿಗಳು ಬಂದು ಹೋಗಬಹುದು. ಗಾಬರಿಯಾಗಬೇಡಿ. ಧೈರ್ಯವಿದ್ದರೆ ಡೇರೆಯೊಳಗೆ ಕುಳಿತು ವೀಕ್ಷಿಸಿ. ಇಲ್ಲಾಂದ್ರೆ ಚಾದರ ಎಳೆದುಕೊಂಡು ಮಲಗಿ ಎಂದು ಸ್ವಾಗತಕಾರಿಣಿ ಹೇಳಿದಾಗ ಸಣ್ಣ ನಡುಕ. ಆಕೆಯ ಮಾತುಗಳು ಕಿವಿಯಲ್ಲಿ ಗುಂಯ್‌ಗುಡುತ್ತಿತ್ತು. ದಿಂಬಿಗೆ ತಲೆಯನ್ನು ಕೊಟ್ಟು ಬಹಳ ಹೊತ್ತಾದರೂ ನಿದ್ದೆ ಮಾತ್ರ ಕಣ್ಣೊಳಗೆ ಇಳಿಯಲಿಲ್ಲ.
ಹೊಸ ಅತಿಥಿಗಳನ್ನು ವಿಚಾರಿಸಿಕೊಳ್ಳಲೆಂಬಂತೆ ನೀರಾನೆ, ಆನೆ, ಜಿರಾಫೆ, ಜೀಬ್ರಾಗಳು ರಾತ್ರಿ ಬ್ರಿಗೇಡ್ ರೋಡಿನಲ್ಲಿ ಪೋಲಿ ಅಲೆಯುವ ಪಡ್ಡೆಗಳ ಹಾಗೆ ನಮ್ಮ ಡೇರೆ ಸವರಿಕೊಂಡು ಹೋಗುತ್ತಿದ್ದರೆ ಜೀವವನ್ನು ಮುಷ್ಟಿಯೊಳಗೆ ಬಿಗಿ ಹಿಡಿದು ಕುಳಿತಿದ್ದೆ. ಅವಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಮಧ್ಯರಾತ್ರಿ ಕಳೆಯುತ್ತಿದ್ದಂತೆ, ಜಿಂಕೆ, ಕಾಡೆಮ್ಮೆ, ಕಡವೆ, ಹೈನಾ, ಕಾಡುಹಂದಿ, ಘೇಂಡಾಮೃಗಗಳು ಹಾಜರಿ ಹಾಕಿ ಹೋದವು. ಆ ಚಳಿ ರಾತ್ರಿಯಲ್ಲಿ ಡೇರೆಯೊಳಗೆ ಗುಬ್ಬಚ್ಚಿಯಂತೆ ಮುದುಡಿ ಕುಳಿತು ಪಥ ಸಂಚಲನ ನಡೆಸುತ್ತಿದ್ದ ಪ್ರಾಣಿಗಳನ್ನು ನೋಡುತ್ತಿದ್ದರೆ, ನಿದ್ದೆ ಹತ್ತಿರ ಸುಳಿಯುತ್ತಿರಲಿಲ್ಲ.
ಮರುದಿನ ಬೆಳಗ್ಗೆ ಐದು ಗಂಟೆಗೆ ಗೇಮ್ ಡ್ರೈವ್ (ಸಫಾರಿ)ಗೆ ಸಿದ್ಧರಾಗಿ ಕುಳಿತಿದ್ದೆವು. ಲ್ಯಾಂಡ್ ಕ್ರೂಸರ್ ಜೀಪ್ ನಮ್ಮ ಡೇರೆ ಮುಂದೆ ಬಂದು ನಿಂತಾಗ ಅದನ್ನು ಏರಲು ಅನುಮಾನ. ಹೊಟ್ಟೆಯೊಳಗೆ ಡುಕಡುಕಿ. ಕಾರಣ ಅದು ಓಪನ್ ಜೀಪ್! ಅದರಲ್ಲಿ ಕುಳಿತು ಸಿಂಹ, ಚಿರತೆ, ಆನೆ, ಕಾಡೆಮ್ಮೆ, ನೀರಾನೆಗಳನ್ನು ನೋಡಲು ತಲೆಕೆಟ್ಟಿದೆಯಾ? ಸಿಂಹ, ಚಿರತೆಯೇನಾದರೂ ನಮ್ಮ ಜೀಪಿನತ್ತ ಜಿಗಿದರೆ ಏನು ಗತಿ?
'ಏನೂ ಆಗೊಲ್ಲ ಸಾರ್. ಡೋಂಟ್ ವರಿ. ನೀವು ಅದೃಷ್ಟವಂತರಾದರೆ, ಸಿಂಹ ಅಥವ ಚಿರತೆ ನಮ್ಮ ಜೀಪಿನ ಬಾನೆಟ್ ಮೇಲೆ ಬಂದು ಕುಳಿತುಕೊಳ್ಳಬಹುದು, ಹೆದರಬೇಡಿ. ಇಲ್ಲಿ ತನಕ ಅಟ್ಯಾಕ್ ಮಾಡಿಲ್ಲ' ಎಂದ ನಮ್ಮ ಜೀಪಿನ ಡ್ರೈವರ್. 'ಅದ್ಸರಿ, ಪ್ರಾಣಿಗಳಿಗೆ ಹೀಗೆ ತಾನು ಅಟ್ಯಾಕ್ ಮಾಡಿದ್ದೇನೋ ಇಲ್ಲವೋ ಎಂಬುದೆಲ್ಲ ಹೇಗೆ ನೆನಪಿರುತ್ತದೆ ಹೇಳಿ. ನಾವು ಹೋದಾಗಲೇ ನಮ್ಮ ಮೇಲೆಯೇ ಅಟ್ಯಾಕ್ ಮಾಡಿದರೆ? ಆದ್ದರಿಂದ ಪೂರ್ತಿ ಕವರ್ ಆಗಿರುವ ಜೀಪ್‌ನಲ್ಲಿ ಹೋಗೋಣ' ಎಂದೆ. 'ಪ್ರಾಣಿಗಳಿಗೆ ಆಗ ಹೆದರಿಕೆಯಾಗಬಹುದು. ನಿಮ್ಮ ಮೂತಿಯನ್ನು ಅವು ನೋಡಲಿ ಬಿಡಿ. ಏನೂ ಆಗೊಲ್ಲ. ಇನ್ನು ಮಸೈಮರಾ ಪ್ರಾಣಿಗಳಿಗೇ, ನೀವು ಆಹಾರವಾಗಬೇಕು ಅಂತ ನಿಮ್ಮ ಹಣೆಯಲ್ಲಿ ಬರೆದಿದ್ದರೆ ನಾನಾದರೂ ಏನು ಮಾಡಲಿ?' ಎಂದ ಡ್ರೈವರ್. 'ಎಲಾ ಬಡ್ಡೀಮಗನೆ' ಎಂದೆ ಅವನ ತಮಾಷೆಗೆ.
ಜೀಪನ್ನು ಏರಿ ಕುಳಿತೆವು. ಮುಂದಿನ ಐದು ತಾಸು ಆ ಪ್ರಾಣಿಗಳ ಸಾಂಗತ್ಯದಲ್ಲಿ ಹೇಗೆ ಕಳೆಯಿತೋ ಗೊತ್ತಾಗಲಿಲ್ಲ. ಹುಲಿ, ಕರಡಿ ಹೊರತಾಗಿ ಮತ್ತೆಲ್ಲಾ ಪ್ರಾಣಿಗಳೂ ಇದ್ದವು. ಆ ವನ್ಯಧಾಮದಲ್ಲಿ ಸುಮಾರು ನೂರು-ನೂರಿಪ್ಪತ್ತೈದು ಕಿಮಿ ದೂರ ಕ್ರಮಿಸಿರಬಹುದು, ನೂರು- ಇನ್ನೂರು ಮೀಟರ್ ಅಂತರದಲ್ಲಿ ಪ್ರಾಣಿಗಳ ದಂಡು ಎದುರಾಗುತ್ತಿದ್ದವು. ಎಷ್ಟು ಹತ್ತಿರ ಹೋದರೂ ಏನೂ ಮಾಡದ, ನಮ್ಮನ್ನು ಕ್ಯಾರೇ ಮಾಡದ, ಆ ಪ್ರಾಣಿಗಳನ್ನು ನೋಡುವುದೇ ಒಂದು ಜೀವಮಾನದ ಅನುಭವ! ಹಾಗೆಂದು ಅವು ಪಳಗಿಸಿದ ಪ್ರಾಣಿಗಳಲ್ಲ, ವೈಲ್ಡ್ ಅನಿಮಲ್ಸ್. ನಮ್ಮ ಮೇಲೆ ಅಟ್ಯಾಕ್ ಮಾಡಲಿಕ್ಕಿಲ್ಲ ಎಂಬ ವಿಶ್ವಾಸವೊಂದೇ ಅವುಗಳ ಮುಂದೆ ನಮ್ಮನ್ನು ತಂದು ನಿಲ್ಲಿಸಿದೆ. ಆದರೆ ಏನು ಬೇಕಾದರೂ ಆಗಬಹುದು. ಕಾರಣ ಎಷ್ಟೆಂದರೂ ಮೂಕಪ್ರಾಣಿಗಳು. 'ಇವು ವೈಲ್ಡ್ ಬೀಸ್ಟ್‌ಗಳು, ಸದಾ ತಿನ್ನುತ್ತವೆ, ಓಡುತ್ತಲೇ ಇರುತ್ತವೆ. ಹಸಿವಾದಾಗ ಮಾತ್ರ ಅಟ್ಯಾಕ್ ಮಾಡಬಹುದು' ಎಂದ ನಮ್ಮ ಡ್ರೈವರ್ ಅವುಗಳ ಮುಂದೆ ನಿಲ್ಲಿಸಿದ. ಅವೆಲ್ಲ ಓಡಾಡಲಾರಂಭಿಸಿದವು. ಆದರೆ ನಾನು ಮನಸ್ಸಿನೊಳಗೆ ಅಂದುಕೊಂಡೆ. ಅವುಗಳಿಗೆ ಹಸಿವಾಗಿದೆಯೋ ಇಲ್ಲವೋ ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ?
ಆ ಹುಲ್ಲುಗಾವಲಿನಲ್ಲಿ ನಮ್ಮ ಜೀಪು ಬೆಳೆದು ನಿಂತ ಹುಲ್ಲಿನ ಬಯಲನ್ನು ಸೀಳಿಕೊಂಡು ಮುನ್ನುಗ್ಗುತ್ತಿದ್ದರೆ, ಹಠಾತ್ತನೆ ಒಂದಿಲ್ಲೊಂದು ಪ್ರಾಣಿ ಎದುರಾಗಿ ಕೆಮರಾಕ್ಕೆ ಪೋಸು ಕೊಟ್ಟು ಹೋಗುತ್ತಿತ್ತು. ಸಿಂಹ ತನ್ನ ಮರಿಗಳನ್ನು ಕಟ್ಟಿಕೊಂಡು ಹೋಗುವ ದೃಶ್ಯ ಕಂಡಾಗ ಆ ಚಳಿಯಲ್ಲೂ ಒಂದು ಕ್ಷಣ ಬೆವೆತಿದ್ದು ಸುಳ್ಳಲ್ಲ. ನಿಜಕ್ಕೂ ನಾನು ಸ್ತಂಭೀಭೂತನಾಗಿ ಕುಳಿತಿದ್ದು ನಮ್ಮ ಮುಂದಿನ ಜೀಪಿನ ಬಾನೆಟ್ ಮೇಲೆ ಚಿರತೆಯೊಂದು ಹಾರಿ ಬಂದು ಒಂದು ಕ್ಷಣ ಕುಳಿತು ಹೋದಾಗ. ತಾನು ಮಾವನ ಮನೆಗೆ ಬಂದಿದ್ದೇನೋ ಎಂಬ ಧಿಮಾಕು ಬೇರೆ. ಅದರ ಧಿಮಾಕು ಹಾಳಾಗಿ ಹೋಗಲಿ, ಜೀಪಿನಲ್ಲಿ ಕುಳಿತವರ ಕತೆ ಏನಾಗಿರಬೇಡ?!
ನಮ್ಮ ಡ್ರೈವರ್ ಕಂ ಗೈಡನ್ನು ಕೇಳಿದೆ-'ಮಸೈಮರಾದಲ್ಲಿ ಎಷ್ಟು ಪ್ರಾಣಿಗಳಿವೆ?' 'ಆತ ಬಹಳ ಕುಶಾಲಿನಿಂದ 'ಆಕಾಶದಲ್ಲಿ ನಕ್ಷತ್ರ ಎಣಿಸೋದು, ಇಲ್ಲಿ ಪ್ರಾಣಿಗಳನ್ನು ಎಣಿಸೋದು ಎರಡೂ ಒಂದೇ.' ಎಂದ. ಆತನೇ ಮುಂದುವರಿದು, 'ಎರಡು ಲಕ್ಷ ಜೀಬ್ರಾ, ಐದು ಲಕ್ಷ ಕೃಷ್ಣಮೃಗ, ಹದಿಮೂರು ಲಕ್ಷ ವೈಲ್ಡ್ ಬೀಸ್ಟ್, ಐದು ಸಾವಿರ ಹೈನಾ, ಎಂಟು ಲಕ್ಷ ಕಾಡೆಮ್ಮೆ, ಮೂರು ಲಕ್ಷ ಕಡವೆ, ಆರು ಲಕ್ಷ ಜಿಂಕೆ... ಸಾಕಾ, ಬೇಕಾ? ಎಂದು ಕೇಳಿದ. ಮಾತೇ ಹೊರಡಲಿಲ್ಲ. ಆ ಪ್ರಾಣಿಗಳ ಲೋಕದಲ್ಲಿ ನಾವು ಮನುಷ್ಯರು ಅಲ್ಪಸಂಖ್ಯಾಕರಾಗಿ ಅಲೆದಾಡುತ್ತಿದ್ದೆವು.
ಜಗತ್ತಿನಲ್ಲಿ ಒಂದೆಡೆ ಇಷ್ಟೊಂದು ಪ್ರಾಣ-ಪಕ್ಷಿಗಳು ಇರುವ ಜಾಗ ಮತ್ತೊಂದಿಲ್ಲ. ಈ ಕಾರಣದಿಂದ ವಿಶ್ವದ ಪ್ರಾಣಿಪ್ರಿಯರೆಲ್ಲ ಮಸೈಮರಾಕ್ಕೆ ಬರುತ್ತಾರೆ. ಅಲ್ಲಿನ ಜೀವವೈವಿಧ್ಯ ಕಂಡು ಬೆರಗಾಗುತ್ತಾರೆ. ಮಸೈಮರಾದ ಅಗಾಧತೆ ಎಂಥದ್ದೆಂದರೆ ಅದು ಕೀನ್ಯಾವನ್ನು ದಾಟಿ ಜಾಂಬಿಯಾಕ್ಕೂ ಹಬ್ಬಿದೆ. ಬಿಗ್‌ಫೈವ್ ಅನಿಮಲ್ಸ್
ಅಂತಾರಲ್ಲ ಆ ಐದೂ ಪ್ರಾಣಿಗಳು-ಸಿಂಹ, ಚಿರತೆ, ಆಫ್ರಿಕನ್ ಆನೆ, ಆಫ್ರಿಕನ್ ಕಾಡೆಮ್ಮೆ ಹಾಗೂ ಘೇಂಡಾಮೃಗ- ಒಂದೆಡೆ ಇರುವ ತಾಣವೆಂದರೆ ಮಸೈಮರಾ.
ಲೇಕ್ ನಕುರುದಲ್ಲಿ ಮಸೈಮರಾಕ್ಕಿಂತ ಒಂದು ಹೆಚ್ಚಿನ ಆಕರ್ಷಣೆಯೆಂದರೆ ಪಕ್ಷಿಗಳು. ಅಲ್ಲೂ ಸಹ ಮಸೈಮರಾದಲ್ಲಿರುವ ಪ್ರಾಣಿಗಳಿವೆ. ಆದರೆ ಅವುಗಳ ಸಂಖ್ಯೆ ಕಡಿಮೆ. ಈ ಎರಡೂ ವನ್ಯಧಾಮಗಳು ಒಂದು ರೀತಿಯಲ್ಲಿ ಬಯಲು ವಿಶ್ವವಿದ್ಯಾಲಯಗಳಿದ್ದಂತೆ. ಎರಡನೆ ದಿನ ಬೆಳಿಗ್ಗೆ ನಾವು ಹೊರಟು ನಿಂತಾಗ, ನಾವು ತಂಗಿದ ಡೇರೆಯ ಮೇಲ್ವಿಚಾರಕ ಹೇಳಿದ-'ನೀವು ಸಿನಿಮಾ ನೋಡಬೇಕಿತ್ತು. ಬರೀ ಟ್ರೇಲರ್‌ನಷ್ಟೇ ನೋಡಿದ ಹಾಗಾಯ್ತು. ಮುಂದಿನ ಸಲ ಬನ್ನಿ. ಆಗ ಕನಿಷ್ಠ ಒಂದು ವಾರ ಉಳಿಯುವ ಪ್ಲಾನ್ ಮಾಡಿಕೊಂಡು ಬನ್ನಿ. ಇಲ್ಲದಿದ್ದರೆ ಬರಬೇಡಿ. ಮಸೈಮರಾಕ್ಕೆ ಯಾರೂ ಒಂದೆರಡು ದಿನಗಳ ಮಟ್ಟಿಗೆ ಬರುವುದಿಲ್ಲ' ಎಂದ. ನಯಾಗರಕ್ಕೆ ಬಂದು ಜಲಪಾತ ನೋಡದೇ ಅದರ ಬೋರ್ಡ್ ನೋಡಿ ವಾಪಸ್ ಹೊರಟವನ ಮನಸ್ಥಿತಿ ನನ್ನದಾಗಿತ್ತು. ನನಗೆ ಹೇಗಾಗಿರಬೇಡ?
ಮಸೈಮರಾ ಚಿತ್ರಣ ಹಸಿಹಸಿಯಾಗಿರುವಾಗಲೇ ಹಿಂದಿನ ಭಾನುವಾರ ನಮ್ಮ ಬನ್ನೇರುಘಟ್ಟದ ನ್ಯಾಶನಲ್ ಪಾರ್ಕ್‌ಗೆ ಹೋಗಿದ್ದೆ. ಕೊಲೆಪಾತಕಿಗಳನ್ನು ಕರೆದುಕೊಂಡು ಹೋಗುತ್ತಾರಲ್ಲ, ಅಂಥ ವಾಹನದಲ್ಲಿ ಹೋಗಿ ಹುಲಿ, ಸಿಂಹ, ಕರಡಿಗಳನ್ನು ನೋಡಿ ಬಂದೆ. ಪಾಪ ಅವು ಇನ್ನೂ ಬದುಕಿದ್ದವು. ಒಳ್ಳೆಯ ಊಟ ಮಾಡಿದ ಬಳಿಕ ಹಾಗಲಕಾಯಿ ತಿಂದಂತಾಯಿತು.
ನಮ್ಮ ಹಣೆಬರಹವೇ ಇಷ್ಟು!
-ವಿಶ್ವೇಶ್ವರ ಭಟ್
vbhat@me.com