ನಾನು ರವಾಂಡಾಕ್ಕೆ ಹೋಗಿದ್ದು, ಅಲ್ಲಿ ಗೊರಿಲ್ಲಾ ನೋಡಲೆಂದು ಕಾಡಿನೊಳಗೆ ಅಲೆದಾಡಿದ್ದು, ಅಲ್ಲಿ ಗೊರಿಲ್ಲಾಗಳ ಬಗ್ಗೆ ಜೀವಮಾನದ ಅಧ್ಯಯನ ಮಾಡಿದ ಬಿಲ್ ವೆಬರ್ ಹಾಗೂ ಅವರ ಪತ್ನಿ ಎಮಿವೆಬರ್ ಭೇಟಿ ಮಾಡಿದ ಸಂಗತಿಗಳನ್ನೆಲ್ಲ ಸ್ನೇಹಿತರಾದ ಉಲ್ಲಾಸ ಕಾರಂತ ಅವರಿಗೆ ವಿವರಿಸುವಾಗ, ಮಾತಿನ ಮಧ್ಯೆ 'ನೀವು ಜಾರ್ಜ್ ಬಿ. ಷಲ್ಲರ್ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಅವರು ನನಗೆ ಗುರುಗಳು. ಅವರು ಸಹ ಗೊರಿಲ್ಲಾಗಳ ಬಗ್ಗೆ ಅಧ್ಯಯನ, ಸಂಶೋಧನೆ ಮಾಡಿದ್ದಾರೆ. ಅನಂತರ ಹಲವರು ಗೊರಿಲ್ಲಾಗಳ ಬಗ್ಗೆ ಸಂಶೋಧನೆ ಮಾಡಿದರೂ, ಜಾರ್ಜ್ ಷಲ್ಲರ್ ಅವರದ್ದೇ ತಳಹದಿ. ಸಾಧ್ಯವಾದರೆ ಅವರ ಕೃತಿಗಳನ್ನು ಓದಿ' ಎಂದರು.
ನಾನು ಅಮೆಜಾನ್ ಡಾಟ್‌ಕಾಮ್‌ಗೆ ಹೋಗಿ ಜಾರ್ಜ್‌ಷಲ್ಲರ್ ಕೃತಿಗಳಿಗೆ ತಡಕಾಡಿದೆ. ಅವರು ಗೊರಿಲ್ಲಾ ಒಂದೇ ಅಲ್ಲ, ಹುಲಿ, ಸಿಂಹ, ಕೃಷ್ಣಮೃಗ, ಪಾಂಡಾ ಸೇರಿದಂತೆ ಹಲವಾರು ಪ್ರಾಣಿಗಳ ಬಗ್ಗೆ ಗಂಭೀರ ಅಧ್ಯಯನ ನಡೆಸಿ ಪುಸ್ತಕ ಬರೆದಿರುವುದು ಗೊತ್ತಾಯಿತು. ನನಗೆ ಬೇಕಾದ The year of the Gorilla ಪುಸ್ತಕಕ್ಕೆ ಆರ್ಡರ್ ಮಾಡಿದೆ. ಹತ್ತು ದಿನಗಳ ಹಿಂದೆ ಆ ಪುಸ್ತಕ ಬಂದಿತು. ಈಗ ನನ್ನ ಕೈಯಲ್ಲಿ ಆ ಕೃತಿಯಿದೆ.
ಜಾರ್ಜ್‌ಷಲ್ಲರ್ ಈ ಪುಸ್ತಕವನ್ನು ಬರೆದಾಗ ನಾನು ಹುಟ್ಟಿಯೇ ಇರಲಿಲ್ಲ. ಗೊರಿಲ್ಲಾಗಳ ಬಗ್ಗೆ ವಿಪರೀತ ಹುಚ್ಚು ಹತ್ತಿಸಿಕೊಂಡ ಷಲ್ಲರ್‌ಗೆ, ರವಾಂಡಾದ ಕಾಡನ್ನು ಪ್ರವೇಶಿಸುವಾಗ (1959ರಲ್ಲಿ) ಇಪ್ಪತ್ತಾರು ವಯಸ್ಸು. ಆಗ ಗೊರಿಲ್ಲಾಗಳ ಬಗ್ಗೆ ಹೊರಜಗತ್ತಿಗೆ ಅಷ್ಟೇನೂ ಹೆಚ್ಚಿನ ಸಂಗತಿಗಳು ಗೊತ್ತಿರಲಿಲ್ಲ. ಮನುಷ್ಯನಿಗೂ, ಗೊರಿಲ್ಲಾಗಳಿಗೂ ಶೇ. 97ರಷ್ಟು ಸಾಮ್ಯತೆಯಿದೆಯೆಂಬುದನ್ನು ಮೊದಲು ಹೇಳಿದವನೇ ಷಲ್ಲರ್. ಅಲ್ಲಿತನಕ ಗೊರಿಲ್ಲಾಗಳ ಬಗ್ಗೆ ಅಭಿಪ್ರಾಯ, ನಂಬಿಕೆಗಳೇ ಬೇರೆ. ಆ ಪೈಕಿ ಮೂಢನಂಬಿಕೆಗಳೇ ಜಾಸ್ತಿ. (ರವಾಂಡಾದ ಆದಿವಾಸಿ ಜನ ಹುಣ್ಣಿಮೆ ರಾತ್ರಿಯಲ್ಲಿ ಗೊರಿಲ್ಲಾಗಳನ್ನು ಬೇಟೆಯಾಡಿ ಆ ಮಾಂಸದೂಟ ಮಾಡಿ ಸಂಭ್ರಮಿಸುವ ಆಚರಣೆಯನ್ನು ಜಾರಿಯಲ್ಲಿಟ್ಟಿದ್ದರು. ಹುಣ್ಣಿಮೆ ದಿನ ಗೊರಿಲ್ಲಾಗಳನ್ನು ಸಾಯಿಸಿದರೆ, ಸುಭಿಕ್ಷೆ ನೆಲೆಸುತ್ತದೆಂಬುದು ಅವರ ನಂಬಿಕೆಯಾಗಿತ್ತು.)
ಮೌಂಟನ್ ಗೊರಿಲ್ಲಾಗಳ ಬಗ್ಗೆ ಯಾರಿಗೂ ಗೊತ್ತಿಲ್ಲದ ಮಾಹಿತಿಯನ್ನು ಷಲ್ಲರ್ ಬಹಿರಂಗಪಡಿಸಿದಾಗ ಅವುಗಳನ್ನು ಇನ್ನಷ್ಟು ಅರಿಯುವ ಕುತೂಹಲ ಬೆಳೆಯಿತು. ಗೊರಿಲ್ಲಾಗಳೆಂದರೆ ಕ್ರೂರ ಪ್ರಾಣಿ, ಮನುಷ್ಯರನ್ನು ಕಂಡರೆ ಅಟ್ಯಾಕ್ ಮಾಡುತ್ತವೆ ಎಂಬ ಭಾವನೆ ಅಲ್ಲಿತನಕ ಇತ್ತು. ಆದರೆ ಷಲ್ಲರ್ ಸಂಶೋಧನೆ ಅವೆಲ್ಲವನ್ನೂ ಸುಳ್ಳು ಎಂದು ಸಾಬೀತುಪಡಿಸಿತು.
ಈ ಕೃತಿಯಲ್ಲಿ ಗೊರಿಲ್ಲಾಗಳ ಬಗ್ಗೆ ಅತ್ಯಂತ ಕುತೂಹಲಕರ ಸಂಗತಿಗಳಿವೆ. ಸಾಮಾನ್ಯವಾಗಿ ಗೊರಿಲ್ಲಾಗಳು ತಮ್ಮ ಕುಟುಂಬವನ್ನು ಒಳಗೊಂಡ ಗುಂಪಿನಲ್ಲಿ ಜೀವಿಸುತ್ತವೆ. ಅಂದರೆ ಗಂಡ-ಹೆಂಡತಿ ಹಾಗೂ ಐದಾರು ಮರಿಗಳನ್ನೊಳಗೊಂಡ ಗುಂಪಿನಲ್ಲಿರುತ್ತವೆ. ಇಂಥ ಐವತ್ತು-ಅರವತ್ತು ಪ್ರತ್ಯೇಕ ಕುಟುಂಬಗಳು ರವಾಂಡಾದ ಕಾಡಿನಲ್ಲಿವೆ. ಒಂದು ವೇಳೆ ಗಂಡು (ಯಜಮಾನ) ಗೊರಿಲ್ಲಾವೇನಾದರೂ ಸತ್ತು ಹೋಯಿತೆಂದು ಭಾವಿಸಿ, ಹೆಣ್ಣು ಗೊರಿಲ್ಲಾವೇ ಇಡೀ ಕುಟುಂಬವನ್ನು ಸಾಕಿ ಸಲಹುತ್ತದೆ. ಹೆಣ್ಣು ಗೊರಿಲ್ಲಾ ಅಷ್ಟು ಸುಲಭವಾಗಿ ತನ್ನ ಯಜಮಾನನೆಂದು ಗಂಡು ಗೊರಿಲ್ಲಾವನ್ನು ಸ್ವೀಕರಿಸುವುದಿಲ್ಲ. ಇದಕ್ಕೆ ಕಾರಣವಿದೆ. ಹೊಸತಾಗಿ ಬರುವ ಗಂಡು ಗೊರಿಲ್ಲಾ, ಹೆಣ್ಣನ್ನು ಮಾತ್ರ ತನ್ನ ಪತ್ನಿಯೆಂದು ಸ್ವೀಕರಿಸುತ್ತದೆಯೇ ಹೊರತು ಅದರ ಮಕ್ಕಳನ್ನಲ್ಲ. ಎಲ್ಲ ಮಕ್ಕಳನ್ನು ಸಾಯಿಸಿದ ನಂತರವೇ ಹೆಣ್ಣಿನ ಜತೆ ಹೊಸ ಸಂಸಾರ ಆರಂಭಿಸುತ್ತದೆ. ಬೇರೆ ಗೊರಿಲ್ಲಾಕ್ಕೆ ಹುಟ್ಟಿದ ಮರಿಗಳನ್ನು ತನ್ನದೆಂದು ಸ್ವೀಕರಿಸುವುದಿಲ್ಲ. ಹೀಗಾಗಿ ಗೊರಿಲ್ಲಾ ಕುಟುಂಬದಲ್ಲಿ ಆಕಸ್ಮಿಕವಾಗಿ ಗಂಡು ಗೊರಿಲ್ಲಾ ಸತ್ತರೆ ಇಡೀ ಸಂಸಾರವೇ ಛಿದ್ರವಾಗುತ್ತದೆ. ಗೊರಿಲ್ಲಾಗಳ ಸಂಖ್ಯೆ ಇಳಿಮುಖವಾಗಲು ಇದೂ ಒಂದು ಮುಖ್ಯ ಕಾರಣ. ಹೆಣ್ಣು ಗೊರಿಲ್ಲಾ ಸತ್ತರೆ ಗಂಡು ಗೊರಿಲ್ಲಾ ಬೇರೆ ಕುಟುಂಬಗಳಲ್ಲಿರುವ ಹೆಣ್ಣು ಗೊರಿಲ್ಲಾವನ್ನು ಕರೆದುಕೊಂಡು ಬಂದು ಸಂಸಾರ ಹೂಡುತ್ತದೆ.
ಷಲ್ಲರ್ ಬರೆಯುತ್ತಾರೆ-'ಮನುಷ್ಯನದೇ ಬುದ್ಧಿ ಥೇಟಾನುಥೇಟು. ಅವುಗಳಲ್ಲೂ ಗಂಡಿನದೇ ಅಧಿಪತ್ಯ. ಹೆಣ್ಣು ಗೊರಿಲ್ಲಾ ಕುಟುಂಬವನ್ನು ಬಿಟ್ಟು ಆಚೆಗೆ ಹೋಗುವುದನ್ನು ಗಂಡು ಇಷ್ಟಪಡುವುದಿಲ್ಲ. ಸದಾ ಹೆಣ್ಣು ತನ್ನ ಜತೆಯಲ್ಲೇ ಇರಬೇಕೆಂದು ಗಂಡು ಗೊರಿಲ್ಲಾ ಬಯಸುತ್ತದೆ. ಮರಿಗಳು ಬೆಳೆದು ದೊಡ್ಡದಾದ ಬಳಿಕವೇ ಸ್ವತಂತ್ರವಾಗಿ ಅಡ್ಡಾಡಲು ಬಿಡುತ್ತವೆ. ಗೊರಿಲ್ಲಾಗಳ ವರ್ತನೆ ಸಹ ಮನುಷ್ಯರಂತೆ. ಅವುಗಳ ಜತೆ ಆರು ತಿಂಗಳ ಕಾಲ ಇದ್ದರೆ, ನಿಮಗೆ ಅವುಗಳ ಹಾವಭಾವ, ಭಾಷೆ, ನಡತೆ ಗೊತ್ತಾಗುತ್ತದೆ. ಅವೂ ಸಹ ನಿಮ್ಮನ್ನು ಅಷ್ಟೇ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತವೆ.'
ಹೆಣ್ಣು ಅಳುವುದೇಕೆ?
'ಯಾಕೆ ಅಳ್ತಾ ಇದೀಯಾ ಅಮ್ಮ?' ಎಂದು ಚಿಕ್ಕ ಹುಡುಗನೊಬ್ಬ ತನ್ನ ತಾಯಿಗೆ ಕೇಳಿದ. 'ಯಾಕಂದ್ರೆ ನಾನು ಹೆಣ್ಣು' ಎಂದುತ್ತರಿಸಿದಳು ಅವನ ತಾಯಿ.'ಅರ್ಥ ಆಗಲಿಲ್ಲ' ಎಂದ ಆ ಹುಡುಗ. ಅವನನ್ನು ತಬ್ಬಿಕೊಂಡು ಮುತ್ತುಕೊಟ್ಟು ಅವನ ತಾಯಿ ಹೇಳಿದಳು, 'ನಿನಗೆ ಎಂದಿಗೂ ಅರ್ಥ ಆಗುವುದಿಲ್ಲ!'
ನಂತರ ತಂದೆ ಬಳಿ ಓಡಿದ ಹುಡುಗ 'ಅಪ್ಪ, ಕಾರಣವಿಲ್ಲದೆ ಹೆಂಗಸರು ಏಕೆ ಅಳುತ್ತಾರೆ?' ಎಂದು ಕೇಳಿದ. 'ಅಳುವುದಕ್ಕೆ ಅವರಿಗೆ ಕಾರಣ ಬೇಕಿಲ್ಲ' ಎಂದು ಅವರಪ್ಪ ನಕ್ಕ!
ಕಾಲ ಸರಿಯಿತು. ಆ ಹುಡುಗ ಯುವಕನಾಗಿದ್ದ. ಆದರೂ ಹೆಂಗಸರೇಕೆ ಅಳುತ್ತಾರೆ ಎನ್ನುವ ಪ್ರಶ್ನೆಗೆ ಮಾತ್ರ ಆತನಿಗೆ ಉತ್ತರ ಸಿಕ್ಕಿರಲಿಲ್ಲ. ಕೊನೆಗೊಂದು ದಿನ ಈ ಪ್ರಶ್ನೆಗೆ ಉತ್ತರಿಸುವಂತೆ ದೇವರಿಗೆ ಮೊರೆಯಿಟ್ಟ! ಪ್ರತ್ಯಕ್ಷನಾದ ದೇವರು ಹೇಳಿದ-"ಮಗು... ನಾನು ಹೆಣ್ಣನ್ನು ಎಲ್ಲರಿಗಿಂತ, ಎಲ್ಲದಕ್ಕಿಂತ ಭಿನ್ನವಾಗಿ ಸೃಷ್ಟಿಸಿದೆ. ಹಾಗಾಗೇ ಪ್ರಪಂಚದ ಭಾರವನ್ನೆಲ್ಲ ಹೊರುವ ಶಕ್ತಿ ಆಕೆಯ ಗಟ್ಟಿ ಭುಜಗಳಿಗಿದೆ, ಜೊತೆಗೆ ಒಬ್ಬರಿಗೆ ಆಸರೆಯಾಗಬಲ್ಲಷ್ಟೂ ಅವು ಮೃದುವಾಗಿವೆ. ಮಕ್ಕಳನ್ನು ಹಡೆಯುವಾಗ ಆಗುವ ತೀವ್ರ ನೋವನ್ನು ಆಕೆ ಸಹಿಸಿಕೊಳ್ಳಬಲ್ಲಳು, ಜೊತೆಗೆ ತನ್ನ ಮಕ್ಕಳು ದೊಡ್ಡವರಾದ ಮೇಲೆ ಕೊಡುವ ನೋವನ್ನೂ ಕೂಡ. ಕುಟುಂಬದಲ್ಲಿ ಎಲ್ಲರೂ ಕೈಚೆಲ್ಲಿ ಕುಳಿತಾಗ ತಾನೊಬ್ಬಳೇ ಎದ್ದು ಎಲ್ಲರ ಸಹಾಯಕ್ಕೂ ಧಾವಿಸುವ ಶಕ್ತಿಯನ್ನು, ತನಗೆ ಸುಸ್ತಾದರೂ ಮನೆಯವರ ಶುಶ್ರೂಶೆ ಮಾಡುವ ದೊಡ್ಡ ಮನಸ್ಸನ್ನು ನಾನು ಆಕೆಗೆ ಕೊಟ್ಟಿದ್ದೇನೆ. ಮಕ್ಕಳು ಎಷ್ಟೇ ಹಿಂಸೆ ಕೊಟ್ಟರೂ ಅವರ ಮೇಲೆ ಆಕೆಗೆ ಎಂದಿಗೂ ಪ್ರೀತಿ ಕಡಿಮೆ ಆಗುವುದಿಲ್ಲ. ಪತಿ ಮಾಡಿದ ತಪ್ಪನ್ನೆಲ್ಲ ಕ್ಷಮಿಸುವ, ಕಷ್ಟಕಾಲದಲ್ಲಿ ಆತನಿಗೆ ಬೆನ್ನೆಲುಬಾಗಿ ನಿಲ್ಲುವ ಶಕ್ತಿ ಆಕೆಗಿದೆ.
ಕೊನೆಯದಾಗಿ ನಾನಾಕೆಗೆ ಕಣ್ಣೀರು ಹರಿಸುವ ಶಕ್ತಿಯನ್ನೂ ಕೊಟ್ಟೆ. ಭಾರ ಹೆಚ್ಚಾದಾಗ, ನೋವು ತೀವ್ರವಾದಾಗ, ಸಂತೋಷವಾದಾಗ ಆ ಭಾವನೆಗಳನ್ನೆಲ್ಲ ಕಣ್ಣೀರ ಮೂಲಕ ವ್ಯಕ್ತಪಡಿಸಲಿ ಎಂಬ ಕಾರಣಕ್ಕೆ.
ನೋಡು ಮಗು, ಹೆಣ್ಣಿನ ಸೌಂದರ್ಯ ಆಕೆಯ ಉಡುಗೆಯಲ್ಲಿಲ್ಲ. ಆಕೆಯ ದೇಹಸಿರಿಯಲ್ಲಿಲ್ಲ. ಆಕೆಯ ಕಣ್ಣಿನಲ್ಲಿದೆ. ಏಕೆಂದರೆ ಆಕೆಯ ಹೃದಯವೆಂಬ ಪ್ರೀತಿಯ ನೆಲೆಗೆ ಆಕೆಯ ಕಣ್ಣುಗಳೇ ಬಾಗಿಲು. ಹೆಣ್ಣನ್ನು ಅರ್ಥ ಮಾಡಿಕೊ, ಆಗ ಆಕೆಯ ಕಣ್ಣೀರು ಅರ್ಥವಾಗುತ್ತದೆ!" ದೇವರು ಮಾತು ಮುಗಿಸಿದ...
ಯಾರೂ ಪರಿಪೂರ್ಣರಲ್ಲ...
ಫೇಸ್‌ಬುಕ್‌ನಲ್ಲಿ ಕಂಡ ಕಥೆ: ನಾನು ಚಿಕ್ಕವನಿದ್ದಾಗ ಅಪ್ಪ-ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು.
ಆದರೆ ಆಫೀಸಿನ ಕೆಲಸ ಮುಗಿಸಿ ಬಂದ ಮೇಲೆಯೂ ಅಮ್ಮನ ಕೆಲಸ ಮುಗಿಯುತ್ತಿರಲಿಲ್ಲ. ನೇರವಾಗಿ ಅಡುಗೆ ಮನೆಗೇ ಹೋಗುತ್ತಿದ್ದಳು.
ಒಂದು ದಿನ ತುಂಬಾ ದಣಿದಿದ್ದಳೆಂದು ಕಾಣುತ್ತದೆ. ಅಡುಗೆಮನೆಯಲ್ಲಿ ನಿಂತಲ್ಲಿಯೇ ನಿದ್ದೆ ಹೋದಳು. ಆಗ ಗ್ಯಾಸ್ ಮೇಲಿಟ್ಟ ಅನ್ನವೆಲ್ಲ ಹೊತ್ತಿಹೋಯಿತು. ಅಷ್ಟರಲ್ಲಿ ಅಪ್ಪ ಮನೆಗೆ ಬಂದ. ಅದೇಕೋ ಆತನಿಗೆ ಅಂದು ತುಂಬಾ ಹಸಿವಾಗಿತ್ತಂತೆ! ಬಂದ ತಕ್ಷಣ ಊಟಕ್ಕೆ ಕುಳಿತುಬಿಟ್ಟ. ಏನೂ ಆಗೇ ಇಲ್ಲವೇನೋ ಎನ್ನುವಂತೆ ಸುಮ್ಮನೆ ನಗುತ್ತಾ ಊಟ ಮಾಡಿ ಎದ್ದ!
ಅಮ್ಮನಿಗೋ ಪೇಚಾಟ ಶುರುವಾಯಿತು. ಅಡುಗೆ ಸರಿಯಾಗಲಿಲ್ಲ ಎಂಬ ಕಾರಣಕ್ಕೆ ಅಪ್ಪನಿಗೆ ಕ್ಷಮೆ ಕೇಳಿದಳು. ಆದರೆ ಅಪ್ಪ 'ಚೆನ್ನಾಗೇ ಇತ್ತಲ್ಲ?' ಎಂದು ಆಕೆಯ ಹಣೆಗೆ ಮುತ್ತಿಟ್ಟ.
'ಅಪ್ಪ ನಿಜಕ್ಕೂ ಊಟ ರುಚಿಯಾಗಿತ್ತಾ ಎಂದು' ನಾನು ರಾತ್ರಿ ಆತನನ್ನು ಕೇಳಿದೆ. ಅದಕ್ಕಾತ ನಕ್ಕು ಹೇಳಿದ: 'ನಿಮ್ಮಮ್ಮ ಇವತ್ತು ತುಂಬಾ ದಣಿದಿದ್ದಾಳೆ. ನಮಗಾಗಿ ಇಷ್ಟೆಲ್ಲಾ ಕಷ್ಟಪಡುತ್ತಿದ್ದಾಳೆ. ಒಂದಿಷ್ಟು ಹೊತ್ತಿದ ಅನ್ನ ತಿಂದರೆ ಯಾರಿಗೂ ತೊಂದರೆಯಾಗುವುದಿಲ್ಲವಲ್ಲ!?'
- ವಿಶ್ವೇಶ್ವರ ಭಟ್