ಅಂಕಣಗಳು

ಕರೆಂಟ್ ಹೋಯ್ತು ಅಂದ್ರೆ ತೆಂಗಿನ ಮರ ತೆಗೆಸಿ ಅಂತಾರೆ!

ನೆಗಡಿ ಬಂತು ಅಂತ ಮೂಗು ಕತ್ತರಿಸಲು ಸಾಧ್ಯವೇ? ಖಂಡಿತಾ ಇಲ್ಲ. ಏಕೆಂದರೆ ಮೂಗಿರುವ ತನಕ ನೆಗಡಿ ತಪ್ಪಿದ್ದಲ್ಲ. ಆದರೆ ಚಾಮುಂಡೇಶ್ವರಿ ವಿದ್ಯುತ್...

ನೆಗಡಿ ಬಂತು ಅಂತ ಮೂಗು ಕತ್ತರಿಸಲು ಸಾಧ್ಯವೇ? ಖಂಡಿತಾ ಇಲ್ಲ. ಏಕೆಂದರೆ ಮೂಗಿರುವ ತನಕ ನೆಗಡಿ ತಪ್ಪಿದ್ದಲ್ಲ. ಆದರೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಸಿಬ್ಬಂದಿ ಪ್ರಕಾರ ಪದೇ ಪದೇ ಕರೆಂಟ್ ಹೋಗುವುದನ್ನು ತಪ್ಪಿಸಲು ತೆಂಗಿನ ಮರಗಳನ್ನು ತೆಗೆಯಬೇಕು! ವಿದ್ಯುತ್ ಇಲಾಖೆಯವರು ಹದಿನೈದು ದಿನಗಳಿಗೊಮ್ಮೆ ಅಥವಾ ಬಿಡುವಿದ್ದಾಗ ನಿರ್ವಹಣಾ ಕೆಲಸಗಳನ್ನು ಮಾಡಬೇಕು. ಅಂದರೆ ವಿದ್ಯುತ್ ತಂತಿ ಹಾದು ಹೋಗಿರುವ ಮಾರ್ಗದಲ್ಲಿ ಬರುವ ಮರಗಿಡಗಳ ಕೊಂಬೆಗಳನ್ನು ತೆಗೆಯುವುದು ಸೇರಿದಂತೆ ಮತ್ತಿತರ ಕಾಮಗಾರಿ ನಡೆಸಬೇಕು. ಅವರು ಸರಿಯಾಗಿ ಈ ಕೆಲಸ ಮಾಡುವುದಿಲ್ಲ. ಇದರಿಂದ ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಆಗಾಗ ವಿದ್ಯುತ್ ತಂತಿಗಳ ಮೇಲೆ ತೆಂಗಿನ ಗರಿ ಅಥವಾ ಮರಗಳ ಕೊಂಬೆ ಬಿದ್ದು ಕರೆಂಟ್ ಕೈ ಕೊಡುತ್ತಲೇ ಇರುತ್ತದೆ. ಕರೆಂಟ್ ಹೋದ ಕಾರಣ ಕೇಳಿದ ಕೂಡಲೇ ಆ ಕಡೆಯಿಂದ ಕರೆ ಸ್ವೀಕರಿಸಿದವರು, ದುರಸ್ತಿಗೆ ಸಿಬ್ಬಂದಿ ಕಳುಹಿಸುವ ಬದಲು ಎಷ್ಟು ಸಾರಿ ಅದೇ ಕಂಪ್ಲೆಂಟ್ ಹೇಳ್ತೀರಾ. ತೆಂಗಿನ ಮರ ತೆಗೆಸ್ರಿ ಅಂದ ಕೂಡಲೇ ಕರೆ ಮಾಡಿದವರು ಸುಸ್ತು.

ಇರೀ ಅಂದ್ರೆ, ಹೊರಡಿ ಅಂದ್ಹಂಗೆ..
ಈಗ ಸರ್ಕಾರಿ ನೌಕರರ ವರ್ಗಾವಣೆ ಪರ್ವ. ನೌಕರರು, ಅಧಿಕಾರಿಗಳು ಅತ್ತಿಂದಿತ್ತ ಜಿಗಿಯುವ, ಜಿಗಿಸುವ ಕಾಲ ಬಲು ಜೋರಿನಿಂದ ನಡೆದಿದೆ. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಇದು ತೀರ ವಿಭಿನ್ನ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್, ಬಾಗಲಕೋಟೆ ಶಾಸಕ ಹುಲ್ಲಪ್ಪ ಮೇಟಿ ಅವರ ವರಸೆ ಬೆಣ್ಣೆಯಲ್ಲಿನ ಕೂದಲು ತೆಗೆದಂತೆ ಇರುತ್ತದೆ. ತಾವು ಸಚಿವ, ಶಾಸಕರಾದಾಗ ತಮ್ಮನ್ನು ಅಭಿನಂದಿಸಲು ಹೂಗುಚ್ಛ ಹಿಡಿದು ಮನೆಗೆ ಬಂದಿದ್ದ ಬಹಳಷ್ಟು ಜನ ಅಧಿಕಾರಿಗಳಿಗೆ, ನೋಡ್ರೀ ಸಾಹೇಬ್ರೆ ಹಿಂದಿನ ಸರ್ಕಾರದಲ್ಲಿ ನೀವು ಭಾಳ್ ಛಲೋ ಕೆಸಲಾ ಮಾಡೀರಿ, ನಮ್ ಸರ್ಕಾರ ಜತೆಗೂ ಹೀಂಗ ಕೆಲಸಾ ಮಾಡ್ರಿ. ನಿಮ್ಮಂಥಾ ನಿಷ್ಠಾವಂತ ಅಧಿಕಾರಿಗಳು ನಮಗೆ ಬೇಕು ಎಂದು ಬೆನ್ನು ತಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಇಷ್ಟೊಂದು ಅಭಿಮಾನ, ಪ್ರೀತಿಯಿಂದ ಬೆನ್ನು ತಟ್ಟಿದ್ದನ್ನು ಕಂಡು ತಾವಿನ್ನು ಬೇರೆಡೆ ಹೋಗುವ ಪ್ರಮೇಯವಿಲ್ಲ ಎಂದು ಉಬ್ಬಿ ಹೋಗಿದ್ದ ಅಧಿಕಾರಿಗಳು ಮತ್ತು ನೌಕರರಿಗೆ ಜಿಲ್ಲಾಧಿಕಾರಿಯಾಗಿದ್ದ ಎ.ಎಂ.ಕುಂಜಪ್ಪ ಅವರನ್ನು ಇವರಿಬ್ಬರೂ ಸೇರಿ ರಾತ್ರೋರಾತ್ರಿ ವರ್ಗಾಯಿಸಿದ್ದರಿಂದ ಈಗ ಆತಂಕ ಶುರುವಾಗಿದೆ. ಸಚಿವ, ಶಾಸಕರು ಬೆನ್ನು ತಟ್ಟಿದ್ದನ್ನು 'ಇರೀ ಅಂದ್ರೆ, ಹೊರಡಿ ಅಂದ್ಹಂಗೆ' ಎಂದು ಹೊಸದಾಗಿ ವ್ಯಾಖ್ಯಾನಿಸುತ್ತಿದ್ದಾರೆ.

ಮೌನ ಮುರಿದ ಎಣ್ಣೆ ಮಂತ್ರಿ!
ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಸಾಹೇಬ್ರ ಮಾತು ಬಾಳ ಕಡಿಮೆ. ಬೆಳಗಾವಿಯಲ್ಲಿ ಮೊನ್ನೆ ಮಂತ್ರಿಗಳನ್ನು ಸನ್ಮಾನಿಸಲು ಅವರ ಮನೆಗೆ ತೆರಳಿದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮಂತ್ರಿಗಳ ಮೌನದ ಬಗ್ಗೆ ಪ್ರಶ್ನೆ ಕೇಳಿಯೇ ಬಿಟ್ಟ. ಏನ್ರೀ ಸಾಹುಕಾರ್ ನೀವು ಯಾರೊಂದಿಗೂ ಮಾತಾಡೋಲ್ಲ ಎಂದು ಎಲ್ಲಾರೂ ಮಾತಾಡ್ತಾರ್ರಿ. ನೀವ್ಯಾಕೆ ಮಾತಾಡೋದಿಲ್ಲ ಎಂದು ನೇರವಾಗಿಯೇ ಪ್ರಶ್ನಿಸಿದ. ಇದರಿಂದ ನಮ್ಮ ಎಣ್ಣೆ ಮಂತ್ರಿಗಳ ಕಣ್ಣು ಕೆಂಪಾದವು. ತಕ್ಷಣಕ್ಕೆ ಇದಕ್ಕೆ ಪ್ರತಿಕ್ರಿಯೆಯನ್ನು ನೀಡಿದ ಸತೀಶ ಅವರು, ನನ್ನನ್ನ ಭೇಟಿಯಾಗಲಿಕ್ಕೆ ಬರುವವರಿಗೆಲ್ಲ ನಾ ಏನ್ ಪುರಾಣ ಗಿರಾಣ ಕೇಳಬೇಕೇನ. ಪುರಾಣ, ಕಥೆ ಹೇಳಾಕ ನನಗೇನೂ ಬರೋದಿಲ್ಲ. ಪುರಾಣ ಗಿರಾಣ ಹೇಳ್ಕೊಂತ ಕುಂತ್ರ ಜಿಲ್ಲೆಯ ಅಭಿವೃದ್ಧಿ ಯಾರ ಮಾಡ್ತಾರ. ಯಾರ ಬೇಕಾದ್ರೂ ಏನಾರ ಹೇಳ್ಕೋಲಿ, ನಾ ಮಾತ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡ್ತೇನೆ. ಬಾಯಿ ಮಾತಲ್ಲಿ ಅಭಿವೃದ್ಧಿ ಮಾಡದೇ ಕೃತಿಯಲ್ಲಿ ಮಾಡುತ್ತೇನೆ ಎಂದು ತಮ್ಮ ಮೌನ ಮುರಿದರು! ಈ ಮಾತು ಕೇಳಿದ ಕಾರ್ಯಕರ್ತ ಸದ್ದಿಲ್ಲದೇ ಜಾಗ ಖಾಲಿ ಮಾಡಿದ್ದ!

ಕಲಿಸುವವರಿಲ್ಲದಿದ್ದರೂ ಇಂಗ್ಲಿಷ್ನಲ್ಲಿ ಪರ್ಫೆಕ್ಟ್!
ಮೈಸೂರು ವಿವಿ ಪ್ರಸಾರಾಂಗವು ನಾನೋದಿದ್ದು ಕನ್ನಡದಲ್ಲಿ ಮತ್ತು ಇಂಗ್ಲಿಷ್ ಸುಲಭವಾಗಿ ಕಲಿಯಬಹುದು, ಭಯ ಬೇಡ ಎಂಬ ವಿಶಿಷ್ಟ ಉಪನ್ಯಾಸ ಮಾಲೆ ಏರ್ಪಡಿಸಿದೆ. ಉದ್ಘಾಟನಾ ದಿನ ಭಾಷಣ ಮಾಡಿದ ಮಹಾಶಯರೊಬ್ಬರಿಗೆ ಹೈಸ್ಕೂಲ್ ಹಾಗೂ ಪಿಯು ಕಾಲೇಜಿನಲ್ಲಿ ಇಂಗ್ಲಿಷ್ ಕಲಿಸಲು ಅಧ್ಯಾಪಕರೇ ಇರಲಿಲ್ಲವಂತೆ. ಆದರೂ ಹೇಗೋ ಪಾಸಾದರಂತೆ. ಮಹಾರಾಜ ಕಾಲೇಜಿನಲ್ಲಿ ಪದವಿಗೆ ಸೇರಿದ ಕೂಡಲೇ ಲೈಬ್ರರಿ ಕಾರ್ಡ್ ಪಡೆದು, ಲಿಯೋ ಟಾಲ್ಸ್ಟಾಯ್ ಅವರ ಎರಡು ಮಹಾನ್ ಗ್ರಂಥಗಳನ್ನು ಓದಲು ಪಡೆದರಂತೆ. ಈ ಕೃತಿಗಳನ್ನು ಓದುವ ಮೂಲಕವೇ ಇಂಗ್ಲಿಷ್ ಕಲಿಕಾ ಪ್ರಪಂಚಕ್ಕೆ ಕಾಲಿಟ್ಟರಂತೆ. ನಂತರ ಮೂಲದಲ್ಲಿಯೇ ಮಹಾನ್ ಗ್ರಂಥ ಓದಲು ಆಯಾ ಭಾಷೆಗಳನ್ನು ಕಲಿತರಂತೆ. ಅಂದರೆ ವಾಲ್ಮೀಕಿ ರಾಮಾಯಣ ಓದಲು ಸಂಸ್ಕೃತ, ಲಿಯೋ ಟಾಲ್ಸ್ಟಾಯ್ರ ಕೃತಿ ಓದಲು ರಷ್ಯನ್, ಹಮ್ಮುರಬಿ ಓದಲು ಗ್ರೀಕ್ ಭಾಷೆ ಕಲಿತರಂತೆ. ಅಂದ ಹಾಗೆ ಇವ್ರು ಎಲ್ಲ ಭಾಷೆಯನ್ನು ಕಲಿತಿದ್ದು ಕೇವಲ ಎರಡೆರಡು ತಿಂಗಳಲ್ಲಂತೆ. ಹೀಗೆ ಅವ್ರು ಮಾತನಾಡುತ್ತಲೇ ಇದ್ದರು. ಆದರೆ ಹಿಂದೆ ಕುಳಿತಿದ್ದ ವಿದ್ಯಾರ್ಥಿನಿಯರು ಹೈಸ್ಕೂಲ್ ಹಾಗೂ ಪಿಯುಸಿಯಲ್ಲಿ ಇಂಗ್ಲಿಷ್ನಲ್ಲಿ ಹೇಗೆ ಪಾಸಾದ್ರು ಅಂತಾ ಗೊತ್ತಿಲ್ಲದ ವ್ಯಕ್ತಿ ತಕ್ಷಣ ಲಿಯೋ ಟಾಲ್ಸ್ಟಾಯ್ ಅವರ ಮಹಾಗ್ರಂಥಗಳನ್ನು ಓದಿ ಅರಗಿಸಿ, ಸಂಸ್ಕೃತ, ರಷ್ಯನ್, ಗ್ರೀಕ್ ಕಲಿತಿದ್ದು ಹೇಗೆ ಎಂದು ತಲೆ ಕೆರೆದು, ಅಲ್ಲಲ್ಲಾ.. ತಲೆಕೆಡಿಸಿಕೊಂಡಿದ್ದರು.

'ಜೀ' ಪದ ಕೇಳಿ ಸುಸ್ತಾದ ಶಿವಕುಮಾರ ಸ್ವಾಮಿ!

ಕಳೆದ ವಾರ ಮೈಸೂರಿನ ಮುಕ್ತ ವಿವಿಯಲ್ಲಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಹಾಗೂ ನೂತನ ಅಧ್ಯಾಪಕರಿಗೆ ಅಧ್ಯಾಪಕರ ಸಂಘದ ವತಿಯಿಂದ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ನಿರೂಪಣೆಗೆ ನಿಂತ ಸಹ ಪ್ರಾಧ್ಯಾಪಕರೊಬ್ಬರು, ಪದೇ ಪದೇ ಬಂಧುಗಳೇ ಎನ್ನತೊಡಗಿದರು. ಅಲ್ಲದೇ ಎಲ್ಲರ ಹೆಸರು ಹೇಳುವಾಗ ಕೊನೆಯಲ್ಲಿ ಜೀ ಸೇರಿಸುತ್ತಿದ್ದುದು ನಗೆಯ ಅಲೆಗೆ ಕಾರಣವಾಯಿತು. ಅವರ ಮಾತಿನ ಶೈಲಿ ನೋಡಿ, ಕುಲಪತಿಗಳು ಬಂದು ಹಲವು ತಿಂಗಳು ಕಳೆದಿವೆ. ಈಗ ಸ್ವಾಗತಿಸುತ್ತಿದ್ದೇವೆ. ನಿಧಾನ ಆದ್ರೂ ಪರವಾಗಿಲ್ಲ ಅಂದಿದ್ರು. ಇವತ್ತು ಇಲ್ಲಿ ಮದುವೆ ಮನೆಯ ಬೆರಗು ಕಂಡು ಬರುತ್ತಿದೆ. ಏಕೆಂದರೆ ನೂತನ ಅಧ್ಯಾಪಕರನ್ನು ಮನೆ ತುಂಬಿಸಿಕೊಳ್ಳುತ್ತಿದ್ದೇವೆ. ಹೊಸದಾಗಿ ಪುರುಷ ಹಾಗೂ ಮಹಿಳಾ ಅಧ್ಯಾಪಕರಲ್ಲಿ ಬಹುತೇಕರು ಅವಿವಾಹಿತರು. ಹೀಗಾಗಿ ಮನೆ ತುಂಬಿಸಿಕೊಳ್ಳುತ್ತಿದ್ದೇವೆ ಎಂಬ ಮಾತಿನಿಂದ ನಾಚಿ ನೀರಾದರು. ಅಲ್ಲದೇ ಕಾರ್ಯಕ್ರಮ ನಿರೂಪಕರು ಎಲ್ಲರಿಗೂ ಜೀ ಸೇರಿಸಿ ಹೇಳುತ್ತಿದ್ದರಿಂದ ಶಿವಕುಮಾರಸ್ವಾಮಿ ಅವರನ್ನು ಸ್ವಾಗತಿಸುವಾಗ ಶಿವಕುಮಾರ ಸ್ವಾಮೀಜಿ ಎಂದಾಗ ಜೀ ಸಾಕು ಸಾಕು ಎಂಬ ಕೂಗು ಕೇಳಿ ಬಂದಿತು!

-ನಂಬಿರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!