ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಟೀಕೆ ಸಹಿಸದ ಕಾಂಗ್ರೆಸ್ ಆಡಳಿತ ಇದು ಒಂದು ಬಿಲ್ಲಿನ ಮಹಾಭಾರತ!

Srinivasa Murthy VN
Updated On : 24 Jul 2013, 12:33 pm

ಬೆಲೆ ಏರಿಕೆ, ಭ್ರಷ್ಟಾಚಾರ ಇವುಗಳ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸುತ್ತಾರೆ. ಅದರ ಬೆನ್ನಿಗೇ, 'ನಾವೇನೇ ಹೇಳಿದರೂ ಸರ್ಕಾರ ಸಾಗುವುದು ಹೀಗೆಯೇ. ನಮ್ಮ ಪ್ರತಿಭಟನೆಗೆ ಯಾರೂ ಬೆಲೆ ಕೊಡುವುದಿಲ್ಲ' ಎಂದು ಅಲವತ್ತು ಮುಂದೆ ಸಾಗುವವರೇ ಬಹುತೇಕರು. ಆದರೆ ಕೆಲವರು ಮಾತ್ರ ತಮ್ಮ ಪ್ರತಿಭಟನೆಯನ್ನು ದಾಖಲಿಸುವುದು ಅಷ್ಟೇ ಮುಖ್ಯ ಎಂಬ ನಿಲುವುಳ್ಳವರು. ಫಲ ಏನು ಸಿಗುತ್ತದೊ ಆಮೇಲಿನದು. ಆದರೆ ಪ್ರತಿಭಟನೆ ದಾಖಲಿಸುವುದು ನಮ್ಮ ಹಕ್ಕು ಎಂಬ ಧೋರಣೆಯನ್ನು ಎಲ್ಲ ನಾಗರಿಕರೂ ತಾಳಿದಾಗ ಸರ್ಕಾರಕ್ಕೆ ಬಿಸಿ ತಾಗುತ್ತದೆ. ಭ್ರಷ್ಟಾಚಾರ ವಿರೋಧಿ ಆಂದೋಲನವು ಈಗ ಸದ್ದು ಮಾಡುತ್ತ ಇಲ್ಲದಿರಬಹುದು. ಆದರೆ ಅಣ್ಣಾ ಹಜಾರೆ ಕರೆಗೆ ಓಗೊಟ್ಟು ಲಕ್ಷ ಸಂಖ್ಯೆಯಲ್ಲಿ ಜನ ಸೇರಿದ್ದು ಭರವಸೆಯ ಸಣ್ಣ ಚಿಗುರು ಎಂದೇ ಪರಿಗಣಿಸಬೇಕಾಗುತ್ತದೆ.
ತನಗೆ ಅಹಿತಕರವಾದ ನೀತಿಗೆ ಪ್ರತಿಭಟಿಸುವುದು ವ್ಯಕ್ತಿಯ ಮೂಲಭೂತ ಹಕ್ಕು. ಪ್ರತಿಭಟನೆಯನ್ನು ದಾಖಲಿಸುವ ಪ್ರಕ್ರಿಯೆಯೇ ಬದಲಾವಣೆಯನ್ನು ತಂದುಬಿಡುವುದಿಲ್ಲ ಎಂಬುದು ನಿಜವಾದರೂ ಬದಲಾವಣೆಯನ್ನು ಪ್ರಚೋದಿಸುವ ಜನ ಜಾಗೃತಿಗೆ ಅದೇ ಮುನ್ನುಡಿಯಾಗುತ್ತದೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗವಾದ ಇಂಥ ಪ್ರತಿಭಟನೆಯನ್ನು ತನ್ನದೇ ಮಾರ್ಗದಲ್ಲಿ ದಾಖಲಿಸಿದ್ದಕ್ಕಾಗಿ ಮುಂಬೈನ ಅದಿತಿ ರೆಸ್ಟೊರೆಂಟ್‌ನ ಮಾಲೀಕ ಶ್ರೀನಿವಾಸ ಶೆಟ್ಟಿ ಸಂಕಟಕ್ಕೆ ಸಿಲುಕಿದ್ದಾರೆ. ಹವಾನಿಯಂತ್ರಿತ ರೆಸ್ಟೊರೆಂಟ್‌ನಲ್ಲಿ ತಿನ್ನುವುದಕ್ಕೆ ಸರ್ವೀಸ್ ಟ್ಯಾಕ್ಸ್ ವಿಧಿಸುವುದನ್ನು ವಿರೋಧಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೇ ಅವರು ಮಾಡಿದ ತಪ್ಪು ಎಂಬಂತಾಗಿದೆ. ಯುಪಿಎ ಸರ್ಕಾರದ ನೀತಿ ವಿರೋಧಿಸಿದ್ದಕ್ಕೆ ಕಾಂಗ್ರೆಸ್‌ನ ಕಾರ್ಯಕರ್ತರು ಗೂಂಡಾಗಳ ರೀತಿಯಲ್ಲಿ ಅವರ ಹೊಟೇಲ್ ಎದುರು ಜಮಾಯಿಸಿ, ದಾಂದಲೆ ನಡೆಸಿ ವ್ಯವಹಾರ ಬಂದ್ ಆಗುವಂತೆ ಮಾಡಿದ್ದಾರೆ.
ಶ್ರೀನಿವಾಸ್ ಶೆಟ್ಟಿಯವರ ಯಾವ ಕ್ರಮ ಕಾಂಗ್ರೆಸ್‌ನ ಗೂಂಡಾ ಪಡೆಯನ್ನು ಉದ್ರೇಕಕ್ಕೆ ಗುರಿಮಾಡಿದೆ ಎಂಬುದನ್ನು ಕೆದಕುವುದಕ್ಕೆ ಹೋದರೆ ಶೆಟ್ಟರ ಪ್ರತಿಭಟನೆಯ ಆಸಕ್ತಿಕರ ಮಾರ್ಗ ತೆರೆದುಕೊಳ್ಳುತ್ತದೆ. ಅದಿತಿ ರೆಸ್ಟೊರೆಂಟ್‌ನಲ್ಲಿ ಸೇವೆ ಪಡೆಯುವವರಿಗೆ ನೀಡುವ ಬಿಲ್‌ನ ತುದಿಯಲ್ಲಿ ಶೆಟ್ಟರು ಒಂದು ವಾಕ್ಯವನ್ನು ಮುದ್ರಿಸಿದ್ದಾರೆ. ಸೇವೆಗೆ ಬೆಲೆ ಹೆಚ್ಚಾಗಿರುವುದಕ್ಕೆ ಕಾರಣವನ್ನೂ ಹಾಗೂ ಆ ಬಗ್ಗೆ ತಮ್ಮ ಅಸಹಾಯಕ ಆಕ್ರೋಶವನ್ನೂ ಒಟ್ಟಿಗೆ ಹೊರಹಾಕುವ ಸಾಲುಗಳು ಇವು. 'ಯುಪಿಎ ಸರ್ಕಾರದ ಪ್ರಕಾರ 2ಜಿ, ಕಲ್ಲಿದ್ದಲು ಹಗರಣ ಮತ್ತು ಕಾಮನ್‌ವೆಲ್ತ್‌ನಂಥಹ ಹಗರಣಗಳಲ್ಲಿ ಹಣ ತಿನ್ನುವುದು ಅವಶ್ಯಕತೆ. ಆದರೆ ಏಸಿ ರೆಸ್ಟೊರೆಂಟ್‌ನಲ್ಲಿ ತಿನ್ನುವುದು ಲಕ್ಸುರಿ ಎನಿಸಿಕೊಂಡಿದೆ.' ಈ ವಾಕ್ಯವನ್ನು ಓದಿಕೊಂಡ ಯಾರಿಗೇ ಆದರೂ ವ್ಯಂಗ್ಯದ ನಗೆಯೊಂದು ಉಕ್ಕುತ್ತದೆ. ತಾವು ಲೂಟಿ ಹೊಡೆಯುವುದಕ್ಕೆ ಏನೂ ಮುಲಾಜಿರಿಸಿಕೊಳ್ಳದೆ, ಜನರಿಂದ ತೆರಿಗೆ ವಸೂಲು ಮಾಡುವುದಕ್ಕೆ ಮಾತ್ರವೇ ದಾರಿ ಹುಡುಕುತ್ತಿರುವ ಸರ್ಕಾರದ ಬಗ್ಗೆ ಜನಸಾಮಾನ್ಯರಿಗೆ ಇರುವ ಒಡಲುರಿಯ ಪ್ರತಿಬಿಂಬ ಇದು. ಈ ಮಾತನ್ನು ಕೇವಲ ಹರಟೆಕಟ್ಟೆಗೆ ಸೀಮಿತಗೊಳಿಸದೆ ತಮ್ಮ ಹೊಟೇಲ್‌ನ ಬಿಲ್‌ನಲ್ಲಿ ಅಧಿಕೃತವಾಗಿಯೇ ಸಾರುವ ಹಾದಿ ಹಿಡಿದರು ಶೆಟ್ಟರು. 'ತೆರಿಗೆ ವಿಧಿಸಿರುವುದರ ಬಗ್ಗೆ ನನ್ನದೇ ಆದ ಅಭಿಪ್ರಾಯವಿದೆ. ಈ ಸ್ವತಂತ್ರ ದೇಶದಲ್ಲಿ ಅದನ್ನು ವ್ಯಕ್ತಪಡಿಸಿದ್ದು ತಪ್ಪೇ' ಎಂದು ಸವಾಲೆಸೆಯುತ್ತಾರೆ ಶೆಟ್ಟರು.
ಆದರೆ ಕಾಂಗ್ರೆಸ್‌ಗೆ ಮಾತ್ರ ತನ್ನ ಕುರಿತ ಯಾವ ಟೀಕೆಯನ್ನೂ ಸಹಿಸಿಕೊಳ್ಳುವ ಮನಸ್ಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಹೊಟೇಲ್‌ನ ಹೊರಗೆ ಬೊಬ್ಬೆ ಹಾಕುವ ಮೂಲಕ ಭಯದ ವಾತಾವರಣ ಸೃಷ್ಟಿಸಿ, ರೆಸ್ಟೊರೆಂಟ್‌ನ ವ್ಯಾಪಾರ ಕಸಿದು ಪಾಠ ಕಲಿಸುವ ಮಾರ್ಗಕ್ಕೆ ಎಳಸಿದ್ದಾರೆ. ಆ ಮೂಲಕ ಇತರರಿಗೂ 'ಪ್ರತಿಭಟನೆ ವ್ಯಕ್ತಪಡಿಸಿದರೆ ಹುಷಾರ್‌' ಎಂಬ ಪರೋಕ್ಷ ಸಂದೇಶ ನೀಡಿದ್ದಾರೆ. 'ಅಸೋಸಿಯೇಷನ್ ಫಾರ್ ಹೊಟೇಲ್ಸ್ ಆ್ಯಂಡ್ ರೆಸ್ಟೊರೆಂಟ್‌' (ಅಹರ್) ಕೂಡ ಈ ವಿಷಯದಲ್ಲಿ ದೂರವೇ ಉಳಿದಿದೆ.
ಒಂದು ಟೀಕೆಗೆ ಪಕ್ಷದ ಕಾರ್ಯಕರ್ತರನ್ನು ಬಳಸಿಕೊಂಡು ಈ ಪರಿ ಪ್ರತಿಕ್ರಿಯಿಸುವ ಅಗತ್ಯವಿತ್ತೇ? ಒಂದು ಅಸಹಿಷ್ಣು ವ್ಯವಸ್ಥೆ ಮಾತ್ರ ಇಂಥ ದಾರಿ ಹಿಡಿಯುತ್ತದಲ್ಲವೇ?
ಇಷ್ಟಕ್ಕೂ ಶ್ರೀನಿವಾಸ್ ಶೆಟ್ಟರು ಹೇಳುವುದೇನು? 'ಮಿಡ್ ಡೆ' ಪತ್ರಿಕೆಯೊಂದಿಗೆ ಮಾತನಾಡುತ್ತ ಅವರು ಹೇಳಿದ್ದಿಷ್ಟು: 'ಸರ್ಕಾರವು ಏಸಿ ಉಪಾಹಾರಗೃಹಗಳನ್ನು ಸೇವಾ ತೆರಿಗೆ ವ್ಯಾಪ್ತಿಗೆ ಒಳಪಡಿಸಿದ್ದರಿಂದ ನನಗೆ ನಷ್ಟವಾಗಿದೆ. ಹವಾನಿಯಂತ್ರಿತ ವಿಭಾಗವನ್ನೇ ಮುಚ್ಚಬೇಕಾಯಿತು. ಎಸಿ ರೆಸ್ಟೊರೆಂಟ್‌ಗಳ ಮೇಲೆ ಸರ್ಕಾರ ತೆರಿಗೆ ವಿಧಿಸಿದಾಗಲೇ ಬಿಲ್‌ನಲ್ಲಿ ಇಂಥದೊಂದು ಒಕ್ಕಣೆಯನ್ನು ಸೇರಿಸಿ ನನ್ನ ಪ್ರತಿಭಟನೆಯನ್ನು ಸಲ್ಲಿಸಬೇಕು ಎಂಬ ಯೋಚನೆ ಹೊಳೆದಿತ್ತು. ಹದಿನೈದು ದಿನಗಳ ಹಿಂದಷ್ಟೆ ಇದನ್ನು ಕಾರ್ಯಗತಗೊಳಿಸಿ, ಬಿಲ್‌ನ ಕೊನೆಭಾಗದಲ್ಲಿ ಪ್ರತಿಭಟನೆಯ ವಾಕ್ಯಗಳನ್ನು ಮುದ್ರಿಸಿದೆ. ಬಿಲ್ ಪಡೆದ ಬಹಳಷ್ಟು ಮಂದಿ ನನ್ನ ಬಳಿ ಬಂದು ನನ್ನ ಪ್ರತಿಭಟನೆಯ ದಾಖಲಾತಿಗೆ ಪ್ರಶಂಸೆ ವ್ಯಕ್ತಪಡಿಸಿ ಹೋಗಿದ್ದಾರೆ. ಆದರೆ ಹೀಗೆಲ್ಲ ಹೊಟೇಲ್ ಹೊರಗಡೆ ಗಲಾಟೆ ನಿರೀಕ್ಷಿಸಿರಲಿಲ್ಲ. ಇಷ್ಟಕ್ಕೂ ಇದು ಸಾರ್ವಜನಿಕರೆಲ್ಲರೂ ಕೇಳುವ ಪ್ರಶ್ನೆ. 12 ರುಪಾಯಿಗಳ ಕಪ್ ಚಹಾಕ್ಕೆ ಮೇಲಿಂದ ಐದು ಶೇಕಡ ಸೇವಾ ತೆರಿಗೆ ಕೊಡುವುದಕ್ಕೆ ಯಾರು ಒಪ್ಪುತ್ತಾರೆ ಹೇಳಿ?'.
ಆದರೆ ಈ ಜನಾಭಿಪ್ರಾಯವನ್ನು ಅರಗಿಸಿಕೊಳ್ಳುವುದಕ್ಕೆ ಆಡಳಿತಾರೂಢರಿಗೆ ಆಗದಿದ್ದದ್ದೇ ಆಶ್ಚರ್ಯ. ಒಂದೆಡೆ ರಾಹುಲ್ ಗಾಂಧಿ 'ಹೇಳಿಕೆ ನೀಡುವಾಗ ಯಾರೂ ಕಠಿಣ ಭಾಷೆ ಬಳಸಬೇಡಿ' ಎಂದು ಸಂಭಾವಿತ ಚಹರೆ ಪ್ರದರ್ಶಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ವರ್ತನೆಯಲ್ಲೇ ಕಾಠಿಣ್ಯ ರೂಢಿಸಿಕೊಂಡಿದ್ದಾರೆ. ಅದಿತಿ ಹೊಟೇಲ್‌ನ ಈ ಕ್ರಮ ಮತ್ತು ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಕ್ರಿಯೆ ಬಹಳ ಚಿಕ್ಕ ವಿದ್ಯಮಾನವಾಗಿ ಕಾಣಬಹುದು. ಅದಕ್ಕೆ ಇಷ್ಟೆಲ್ಲ ಚರ್ಚೆ ಏಕೆ ಎಂಬ ಪ್ರಶ್ನೆಯೂ ಹುಟ್ಟಬಹುದು. ಆದರೆ ಇಲ್ಲಿರುವುದು ಸೇವಾ ತೆರಿಗೆ ಹಾಕಿದ್ದು ಸರಿಯೋ ತಪ್ಪೋ ಎಂಬ ಪ್ರಶ್ನೆ ಅಲ್ಲ. ಈ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ದಹನಕ್ಕೆ ಎಷ್ಟರಮಟ್ಟಿಗೆ ಉತ್ಸುಕವಾಗಿದೆ ಎಂಬ ಸಂಗತಿಯನ್ನು ಈ ವಿದ್ಯಮಾನ ಸಾರುತ್ತದೆ. ಅದಿತಿ ಹೊಟೇಲ್ ಕ್ರಮ ಕಾನೂನು ಪ್ರಕಾರ ಸರಿ ಇಲ್ಲ ಎಂದಾದರೆ ಅದಕ್ಕೆ ಕ್ರಮ ಕೈಗೊಳ್ಳಲಿ. ಬದಲಿಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಹೆಸರಲ್ಲಿ ವ್ಯಾಪಾರ ಕಸಿಯುವುದಕ್ಕೆ ಹೋದರಲ್ಲ? ಚರ್ಚೆಯಾಗಬೇಕಿರುವುದು ಇಂಥ ಗೂಂಡಾ ಪ್ರವೃತ್ತಿ ಸರಿಯೇ ಎಂಬುದರ ಬಗ್ಗೆ ತಾನೇ?
ಅದೇನೆ ಇರಲಿ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಕೆಲವನ್ನು ಗಮನಿಸುವುದಾದರೆ:

ಅದಿತಿ ಹೊಟೇಲ್ ಬಗ್ಗೆ ಯಾಕೆ ಆಕ್ರೋಶ? ಅಭಿವ್ಯಕ್ತಿ ಸ್ವಾತಂತ್ರ್ಯ ಕಾಂಗ್ರೆಸ್ ವಕ್ತಾರರಿಗೆ ಮಾತ್ರವೇ? ಸಾಮಾನ್ಯರಿಗಿಲ್ಲವೇ?
- ಗೋವಿಂದ ಕಿಣಿ

ಕಾಂಗ್ರೆಸ್‌ನ ಗೂಂಡಾಗಳು ಅದಿತಿ ರೆಸ್ಟೊರೆಂಟ್ ಮುಚ್ಚುವಂತೆ ಮಾಡಿರುವುದು ಆಶ್ಚರ್ಯವನ್ನು ತಂದಿಲ್ಲ. ಹೇಳಿಕೇಳಿ ಅವರದ್ದು ತುರ್ತು ಪರಿಸ್ಥಿತಿಯ ಪಕ್ಷ. ಅದೇ ವಂಶವಾಹಿಯೇ ಪಕ್ಷದ ಗೂಂಡಾಗಳ ರಕ್ತದಲ್ಲೂ ಇದೆ.
- ಮಿನ್ಹಾಜ್ ಮರ್ಚೆಂಟ್

ಅದಿತಿಯಂಥ ಕೋಮುವಾದಿ ಸಸ್ಯಾಹಾರಿ ಅಡ್ಡಾವನ್ನು ಬರ್ಖಾಸ್ತುಗೊಳಿಸಿ, ಅಲ್ಲಿ ಸೆಕ್ಯುಲರ್ ಪಿಜ್ಜಾ ಮತ್ತು ಪಾಸ್ತಾ ಜಾಯಿಂಟ್ ಆರಂಭಿಸಿರಿ.
- ಮಾವೋದಾಸ್ ಮೆಕಾಲೆಪತಿ

ಇದು ಕಾಂಗ್ರೆಸ್‌ನ ಫ್ಯಾಸಿಸ್ಟ್ ಧೋರಣೆ ಅಲ್ಲದೆ ಇನ್ನೇನು?
- ಸತ್ಯ ಭಾಷಣಂ

-ಶಂತನು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement