ಸೈನ್ಯಕ್ಕೆ ಸೇರಲು ಈ ನಾಡಿನಲ್ಲಿ ಎಷ್ಟಿದೆ ಉತ್ಸಾಹ?
ದೇಶ ರಕ್ಷಿಸುವ ಧೀರ ಯೋಧರು ಎಂದರೆ ನೆನಪಿಗೆ ಬರುವ ಜಿಲ್ಲೆಯಾಗಿರುವ ಕೊಡಗು, ಪಂಜಾಬ್ ಹೊರತು ಪಡಿಸಿದಂತೆ ದೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಸುಮಾರು 8 ಸಾವಿರದಷ್ಟು ಯೋಧರನ್ನು ನೀಡಿದೆ.
ಕೊಡಗಿನಲ್ಲಿಲ್ಲ ಗತವೈಭವ
ದೇಶ ರಕ್ಷಿಸುವ ಧೀರ ಯೋಧರು ಎಂದರೆ ನೆನಪಿಗೆ ಬರುವ ಜಿಲ್ಲೆಯಾಗಿರುವ ಕೊಡಗು, ಪಂಜಾಬ್ ಹೊರತು ಪಡಿಸಿದಂತೆ ದೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಸುಮಾರು 8 ಸಾವಿರದಷ್ಟು ಯೋಧರನ್ನು ನೀಡಿದೆ. ಕೊಡಗು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಮೂಲಕ ಮಹಾನ್ ಯೋಧರನ್ನು ಕೊಡುಗೆಯಾಗಿ ನೀಡಿದ ವೀರರ ಜಿಲ್ಲೆ. ಕಳೆದ ದಶಕದವರೆಗೂ ಕೊಡಗಿನಲ್ಲಿ ಸೈನ್ಯಕ್ಕೆ ಮಕ್ಕಳನ್ನು ಕಳುಹಿಸುವುದೆಂದರೇ ಅದೊಂದು ಪ್ರತಿಷ್ಠೆ, ಹೆಮ್ಮೆಯಾಗಿತ್ತು. ಹೀಗಾಗಿ ಕೊಡಗಿನ ಪ್ರತಿ ಮನೆಯ ಒಬ್ಬರಾದರೂ ಸೇನೆಯಲ್ಲಿ ದೇಶ ರಕ್ಷಣೆಯ ಕರ್ತವ್ಯದಲ್ಲಿದ್ದವರು ಕಂಡುಬರುತ್ತಿದ್ದರು. ಕೊಡಗಿನವರ ಮನೆಗಳಲ್ಲಿ ದೇಶ ರಕ್ಷಣೆಯ ಬಗ್ಗೆ ಒಂದಿಲ್ಲೊಂದು ವೀರತೆಯ ಕಥೆಗಳಿರುತ್ತಿದ್ದವು. ಆದರೀಗ, ಕಾಲ ಬದಲಾದಂತೆ ಆಧುನೀಕತೆಯ ಗಾಳಿಯೊಂದಿಗೆ ಜಾಗತೀಕರಣದ ಪ್ರಭಾವವೂ ಹೆಚ್ಚಿದ ಪರಿಣಾಮ ಕೊಡಗಿನಲ್ಲಿಯೇ ಯೋಧರ ಸಂಖ್ಯೆ ಕಡಿಮೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸೇನೆಗೆ ಆಯ್ಕೆ ಪ್ರಕ್ರಿಯೆ ನಡೆದಾಗಲೆಲ್ಲಾ ಕೊಡಗಿನ ಮಕ್ಕಳು ಸೇನಾ ಆಯ್ಕೆ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿಲ್ಲ. ಹಾಜರಾದವರಲ್ಲಿಯೂ ಬಹುತೇಕರು ಸೇನೆಗೆ ಆಯ್ಕೆಯಾಗುತ್ತಿಲ್ಲ.
ಮಾಜಿ ಸೈನಿಕರ ಸಂಘ: ಕೊಡಗು ಜಿಲ್ಲೆಯಲ್ಲಿನ ಮಾಜಿ ಸೈನಿಕರ ಸಂಘ 13 ವರ್ಷಗಳಿಂದ ಜಿಲ್ಲೆಯ ಮಾಜಿ ಸೈನಿಕರು, ಕುಟುಂಬ ವರ್ಗದವರ ಶ್ರೇಯೋಭಿವೃದ್ಧಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಾದ್ಯಂತ ಸುಮಾರು 2 ಸಾವಿರ ಸದಸ್ಯರು ಈ ಸಂಘದಲ್ಲಿದ್ದಾರೆ. ಮಾಜಿ ಸೈನಿಕರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಸೈನಿಕರ ಕುಟುಂಬ ವರ್ಗಕ್ಕೆ ಆರೋಗ್ಯ, ಶಿಕ್ಷಣದಂಥ ಅಗತ್ಯತೆಗಳ ಬಗ್ಗೆಯೂ ಸಂಘ ಗಮನ ಹರಿಸಿದೆ.ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನಾ ಚಿಕಿತ್ಸಾಲಯದೊಂದಿಗೆ ಕಳೆದೊಂದು ವರ್ಷದಿಂದ ವಿರಾಜಪೇಟೆಯಲ್ಲಿಯೂ ಮಾಜಿ ಸೈನಿಕರಿಗಾಗಿ ಚಿಕಿತ್ಸಾಲಯ ಆರಂಭಗೊಂಡಿದೆ ಎಂದು ಮಾಜಿ ಸೈನಿಕ ಕಲ್ಯಾಣ ಸಂಘದ ಕಾರ್ಯದರ್ಶಿ ಅಯ್ಯುಡ ಗಣಪತಿ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು.
ಶೇ.1ರಲ್ಲಿ ದಕ್ಷಿಣ ಕನ್ನಡ
ದೇಶದ ರಕ್ಷಣೆಗಾಗಿ ಸೈನಿಕನಾಗಿ ಸೇವೆ ಮಾಡುತ್ತಿರುವ ಮಗನ ಬಗ್ಗೆ ಹೆಮ್ಮೆ ಪಡುತ್ತಿದ್ದ ಹೆತ್ತವರು ಒಂದು ಕಾಲದಲ್ಲಿ ಇದ್ದರೆ, ಇಂದು ಎಂಜಿನಿಯರಿಂಗ್, ಡಾಕ್ಟರ್, ಸಾಫ್ಟ್ವೇರ್ ಹುದ್ದೆಗಳನ್ನು ಆರಿಸುವಂತೆ ಉತ್ತೇಜಿಸುವ ಹೆತ್ತವರು ಹೆಚ್ಚಾಗಿದ್ದಾರೆ. ರಾಜ್ಯದ ರಾಯಚೂರು, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಿಂದ ಹೆಚ್ಚು ಮಂದಿ ಸೇನೆ ಸೇರ್ಪಗೊಳ್ಳುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಸೇನೆಗೆ ಸೇರುವವರು ಸಂಖ್ಯೆ ಶೇ.1ರಷ್ಟು ಮಾತ್ರ. ಇದಕ್ಕೆ ಕಾರಣ ಹೆತ್ತವರು ಒಂದೆಡೆಯಾದರೆ, ಜನರಲ್ಲಿ ಸೈನಿಕ ಹುದ್ದೆಯ ಬಗ್ಗೆ ಜಾಗೃತಿ ಕಡಿಮೆ ಇರುವುದು. ೆಸೈನಿಕ ಹುದ್ದೆ ಎಂದರೆ ಕೇವಲ ಗಡಿ ಪ್ರದೇಶಕ್ಕೆ ಹೋಗಿ ಶತ್ರು ಸೈನ್ಯದೊಡನೆ ಕಾದಾಡುವುದು ಎಂಬ ಭಾವನೆಯಿದೆ. ಆದರೆ, ದೇಶದ ರಕ್ಷಣೆಯಲ್ಲಿ ತೊಡಗಿಕೊಳ್ಳಲು ಬೇರೆ ಬೇರೆ ಕ್ಷೇತ್ರಗಳಿವೆ ಎಂಬ ಮಾಹಿತಿ ಹೆಚ್ಚಿನವರಿಗೆ ಇಲ್ಲವಾಗಿದೆ ಎನ್ನುತ್ತಾರೆ ನೌಕಾದಳದ ನಿವೃತ್ತ ಎಲೆಕ್ಟ್ರಿಕಲ್ ಮುಖ್ಯ ಅಧಿಕಾರಿ ವಿಕ್ರಮ್ ದತ್ತ.
ಜಪಾನ್, ಚೀನಾ, ಅಮೆರಿಕದಲ್ಲಿ ಕಡ್ಡಾಯವಾಗಿ ಒಂದು ಮನೆಯ ಒಬ್ಬ ಸದಸ್ಯ ಸೈನಿಕ ಹುದ್ದೆಗೆ ಸೇರ್ಪಡೆಗೊಳ್ಳಬೇಕು ಎಂಬ ನಿಯಮವಿದೆ. ಆದ್ದರಿಂದ ಅಲ್ಲಿನ ಸೈನಿಕರ ಸಂಖ್ಯೆ ಜಾಸ್ತಿ ಇದೆ. ಪದವಿ, ಪಿಯುಸಿಯಲ್ಲಿ ಎನ್ಸಿಸಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸೈನಿಕ ರ್ಯಾಲಿಯಲ್ಲಿ ಮೊದಲ ಪ್ರಾಶಸ್ತ್ಯವಿರುತ್ತದೆ. ಸೇನೆಯಲ್ಲಿ ಕೇವಲ 15 ವರ್ಷ ದುಡಿದರೆ ಸಾಕು ನಂತರ ನಿವೃತ್ತಿ ಪಡೆದು, ಬ್ಯಾಂಕ್, ಸರ್ಕಾರಿ ಕೆಲಸಗಳಲ್ಲಿ ಸೇರಿಕೊಳ್ಳಬಹುದು. 'ಶತ್ರುಗಳು ದೇಶಕ್ಕೆ ನುಗ್ಗುತ್ತಿರುವ ಕುರಿತು ತಿಳಿದುಕೊಳ್ಳಲು ಹಾಗೂ ದಾಳಿ ನಡೆಸಲು ಅನೇಕ ತಂತ್ರಜ್ಞಾನದ ವ್ಯವಸ್ಥೆಯಿದೆ. ಸೈನಿಕ ಎಂದರೆ ಕೇವಲ ಬಂದೂಕು ಹಿಡಿದು ಶತ್ರು ಸಂಹಾರ ನಡೆಸುವುದಲ್ಲ ದೇಶದ ಭದ್ರತೆಗೆ ಅನುಗುಣವಾಗಿರುವ ಅನೇಕ ಕ್ಷೇತ್ರದಲ್ಲಿ ಹುದ್ದೆ ಪಡೆಯಲು ಅವಕಾಶವಿದೆ' ಎನ್ನುತ್ತಾರೆ ವಿಕ್ರಮ್ ದತ್ತ. ನಿವೃತ್ತ ಬ್ರಿಗೇಡಿಯರ್ ಐ.ಎನ್. ರೈ ಅವರ ಪ್ರಕಾರ 'ಇತ್ತೀಚಿನ ಶಿಕ್ಷಣದಲ್ಲಿ ದೇಶದ ರಕ್ಷಣೆ, ಸೈನಿಕ ಹುದ್ದೆಯ ಬಗ್ಗೆ ಸರಿಯಾದ ಜಾಗೃತಿ ಮತ್ತು ಮಾಹಿತಿ ಮಕ್ಕಳಿಗೆ ಸಿಗುತ್ತಿಲ್ಲ. ಹೆತ್ತವರು ಮಕ್ಕಳಿಗೆ ಇಷ್ಟವಿರಲಿ ಇಲ್ಲದಿರಲಿ ಎಂಜಿನಿಯರಿಂಗ್, ಡಾಕ್ಟರ್ ಹುದ್ದೆಗೆ ಕಳುಹಿಸುತ್ತಾರೆ. ಸೈನ್ಯದಲ್ಲಿ ದೇಶದ ಎಲ್ಲ ಭಾಗದ ಜನರು ಕಾರ್ಯನಿರ್ವಹಿಸುತ್ತಾರೆ. ಆದರೆ ಮಂಗಳೂರಿನಿಂದ ಯಾರೊಬ್ಬರು ಇರುವುದಿಲ್ಲ' ಎಂದು 'ಕನ್ನಡಪ್ರಭ' ಕ್ಕೆ ತಿಳಿಸಿದರು.
ಸೊರಗಿದ ಉಡುಪಿ
ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸೈನ್ಯಕ್ಕೆ ಸೇರುವುದಕ್ಕೆ ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕರ್ನಾಟಕ ನಿಗದಿ ಮಾಡಿದ ಕೋಟಾ ಕಳೆದ ಅನೇಕ ವರ್ಷಗಳಿಂದ ಭರ್ತಿಯಾಗುತ್ತಲೇ ಇಲ್ಲ. ಅದರಲ್ಲೂ ಉಡುಪಿ ಜಿಲ್ಲೆಯಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಬಹಳ ಕಡಿಮೆಯಾಗಿಬಿಟ್ಟಿದೆ. ಅಂದ ಹಾಗೇ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ದೇಶದ 30,000 ಸೈನಿಕರಲ್ಲಿ ಕರ್ನಾಟಕದ ಕೆಲವೇ ಮಂದಿ ಇದ್ದರು, ಉಡುಪಿ ಜಿಲ್ಲೆಯ ಒಬ್ಬನೇ ಒಬ್ಬ ಇದ್ದಿರಲಿಲ್ಲ.
ಸರ್ಕಾರ ಹೇಳಿದ್ದು ಸುಳ್ಳು: 2006ಕ್ಕೆ ಮೊದಲು ನಿವೃತ್ತರಾದ ಮತ್ತು ನಂತರ ನಿವೃತ್ತರಾದ ಸಮಾನ ಹುದ್ದೆಯ ಸೈನಿಕರ ನಿವೃತ್ತಿ ವೇತನದಲ್ಲಿ ಶೇ.40ರಷ್ಟು ವ್ಯತ್ಯಾಸ ಇದೆ. ಇದನ್ನು ಸರಿಪಡಿಸುವಂತೆ ಮಾಜಿ ಸೈನಿಕರು ಅನೇಕ ಬಾರಿ ಪ್ರತಿಭಟನೆ ಧರಣಿಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಈ ತಾರತಮ್ಯವನ್ನು ನಿವಾರಿಸಿರುವುದಾಗಿ ಘೋಷಿಸಿತು. ಮಾಜಿ ಸೈನಿಕರು ಖುಷಿಪಟ್ಟರು. ಆದರೆ, ವಾಸ್ತವದಲ್ಲಿ ಶೇ.8ರಷ್ಟು ನಿವೃತ್ತಿ ವೇತನದಲ್ಲಿ ಹೆಚ್ಚಳ ಮಾಡಿದ್ದು ಬಿಟ್ಟರೇ ಶೇ. 40ರಷ್ಟಿರುವ ವ್ಯತ್ಯಾಸವನ್ನು ಸರಿಪಡಿಸಿರಲಿಲ್ಲ. ಸರ್ಕಾರ ಸುಳ್ಳು ಹೇಳಿದೆ. ದೇಶಕ್ಕಾಗಿ ನಮ್ಮ ಜೀವಮಾನದ ಅಮೂಲ್ಯ ಅವಧಿಯನ್ನು ಮೀಸಲಿಟ್ಟಿದ್ದಕ್ಕೆ ಕೇಂದ್ರ ಸರ್ಕಾರ ನೀಡಿರುವ ಕೊಡಗೆ ಇದು ಎಂದು ಬೇಸರಿಸುತ್ತಾರೆ ಇನ್ನೊಬ್ಬ ನಿವೃತ್ತ ಸೈನ್ಯಾಧಿಕಾರಿ ಆರ್.ಎಲ್. ಡಯಾಸ್.
ಪಡಿತರ ಸಾಕಾಗುವುದಿಲ್ಲ: ಮಾಜಿ ಸೈನಿಕರಿಗೆಂದೆ ತೆರಿಗೆ ರಹಿತ ಮದ್ಯ, ದಿನ ಬಳಕೆಯ ವಸ್ತು, ಆಹಾರ ಪದಾರ್ಥ ಇತ್ಯಾದಿಗಳಿಗೆ ಪ್ರತ್ಯೇಕ ಪಡಿತರ ವ್ಯವಸ್ಥೆ ಇದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 2000 ಮಂದಿ ಮಾಜಿ ಸೈನಿಕರಿದ್ದಾರೆ. ಪ್ರತಿಯೊಬ್ಬ ಸೈನಿಕರಿಗೆ 3500 ರಷ್ಟು ಮೊತ್ತದ ಪಡಿತರ ಪಡೆಯುವುದಕ್ಕೆ ಅವಕಾಶ ಇದೆ. ಆದರೆ, ಉಡುಪಿಯ ಎಲ್ಲಾ ಮಾಜಿ ಸೈನಿಕರಿಗೆ ಬೇಕಾದಷ್ಟು ಪಡಿತರ ಪ್ರತಿ ತಿಂಗಳು ಲಭ್ಯವಾಗುತ್ತಿಲ್ಲ. ಕಾರಣ ಸರ್ಕಾರದಿಂದ ಪೂರೈಕೆಯೇ ಇಲ್ಲ. ಉಡುಪಿ ಜಿಲ್ಲೆಗೆ ಪ್ರತ್ಯೇಕ ಸೈನ್ಯಾಧಿಕಾರಿಗಳ ಕಲ್ಯಾಣ ಇಲಾಖೆಯೂ ಇಲ್ಲ, ಪ್ರಸ್ತುತ ಉಡುಪಿ ಮತ್ತು ದ.ಕ. ಜಿಲ್ಲೆಗೆ ಒಂದೇ ಇಲಾಖೆ ಇದೆ. ಇನ್ನು ಸುಮಾರು # 60,000 ರಷ್ಟು ತೆರಿಗೆ ರಹಿತ ಟಿ.ವಿ., ಫ್ರಿಜ್ ಮೊದಲಾದವುಗಳನ್ನು ಕೊಳ್ಳುವುದಕ್ಕೆ ಅವಕಾಶ ಇದೆ. ಆದರೆ, ಅದನ್ನು ಖರೀದಿಸುವುದಕ್ಕೆ ಬೆಂಗಳೂರಿಗೆ ಹೋಗಬೇಕು. ಅಲ್ಲಿಂದ ಅವುಗಳನ್ನು ಉಡುಪಿಗೆ ತರುವಾಗ ತೆರಿಗೆ ನೀಡಿ ತಂದದ್ದಕಿಂತಲೂ ಹೆಚ್ಚು ದುಬಾರಿಯಾಗುತ್ತದೆ. ಉಡುಪಿ ಮಟ್ಟಿಗೆ ಈ ವ್ಯವಸ್ಥೆ ಇದ್ದೂ ಪ್ರಯೋಜನವಿಲ್ಲವಾಗಿದೆ.
ಮಾದರಿ ವೇದಿಕೆ ಇದೆ: ಉಡುಪಿಯಲ್ಲಿ ಮಾಜಿ ಸೈನಿಕರ ವೇದಿಕೆ ಇದೆ. ಇದಕ್ಕೀಗ 25 ವರ್ಷಗಳಾಗಿದ್ದು, ಬೆಳ್ಳಿ ಹಬ್ಬದ ಆಚರಣೆಯ ಸಿದ್ಧತೆಯಲ್ಲಿದೆ. ಸುಮಾರು 2000 ಮಂದಿ ಸದಸ್ಯರಿದ್ದಾರೆ.
ತುಮಕೂರಲಿಲ್ಲ ಸೈನಿಕ ಕಲ್ಯಾಣ
ಕಾರ್ಗಿಲ್ ಯುದ್ಧದಲ್ಲಿ ತುಮಕೂರು ಜಿಲ್ಲೆಯ ಯಾವೊಬ್ಬ ಯೋಧನೂ ಮೃತಪಟ್ಟಿಲ್ಲ. ಆದರೆ ಯುದ್ಧದಲ್ಲಿ ತುಮಕೂರಿನ ಸರಸ್ವತಿಪುರಂನ ಪರಮೇಶ್ ಎಂಬುವರು ಪಾಲ್ಗೊಂಡಿದ್ದರು. ತುಮಕೂರು ಜಿಲ್ಲೆಯಲ್ಲಿ ಸುಮಾರು 2500 ನಿವೃತ್ತ ಸೈನಿಕರಾಗಿದ್ದಾರೆ. ಆದರೆ ಪ್ರತಿ ಜಿಲ್ಲೆಯಲ್ಲಿಯೂ ಇರುವಂತೆ ತುಮಕೂರಿನಲ್ಲಿ ಸೈನಿಕ ಕಲ್ಯಾಣ ಇಲಾಖೆಯೇ ಇಲ್ಲ. ಮೂಲ ಸೌಕರ್ಯದ ಕೊರತೆಯನ್ನು ನೆಪವಾಗಿಟ್ಟುಕೊಂಡು, ತುಮಕೂರಿನ ಸೈನಿಕ ಕಲ್ಯಾಣ ಇಲಾಖೆಯನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಹೀಗಾಗಿ ಸೈನಿಕರು ಹಾಗೂ ಮಾಜಿ ಸೈನಿಕರು ತಮ್ಮ ಸವಲತ್ತು ಮತ್ತಿತರ ಕಾರಣಕ್ಕಾಗಿ ಬೆಂಗಳೂರಿಗೆ ಎಡತಾಕಬೇಕಾಗಿದೆ. ಅಲ್ಲದೇ ತುಮಕೂರಿನಲ್ಲಿ ಸೇನಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವೂ ಇಲ್ಲ. ಇದೂ ಬೆಂಗಳೂರಿಗೆ ವರ್ಗಾವಣೆಗೊಂಡಿದೆ. ಸೈನಿಕರು ಅಥವಾ ಮಾಜಿ ಸೈನಿಕರು ತಮ್ಮ ಅಹವಾಲುಗಳನ್ನು ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿಯಿಂದ ಬೆಂಗಳೂರಿನ ಸೈನಿಕ ಕಲ್ಯಾಣ ಇಲಾಖೆಗೆ ಪತ್ರ ತಲುಪಿಸುವ ವ್ಯವಸ್ಥೆ ಮಾತ್ರ ಇದೆ. ಸೈನಿಕರ ಕಲ್ಯಾಣಕ್ಕಾಗಿ ಯಾವೊಂದು ಕಾರ್ಯಕ್ರಮಗಳು ತುಮಕೂರಿನಲ್ಲಿ ನಡೆಯದಿದ್ದರೂ ಸೇನೆಗೆ ಸೇರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಒಂದು ಕಡೆ ದೇಶಾಭಿಮಾನ ಕಾರಣವಾದರೆ ಮತೊಂದೆಡೆ 6ನೇ ವೇತನ ಆಯೋಗ ಜಾರಿಯಾಗಿರುವುದರಿಂದ ಸಾಕಷ್ಟು ಸೌಕರ್ಯಗಳು ಸೈನಿಕರಿಗೆಸಿಗುತ್ತಿದೆ. ಕಳೆದ ವರ್ಷ ತುಮಕೂರಿನಲ್ಲಿ ನಡೆದ ಸೇನಾ ಆಯ್ಕೆ ಪ್ರಕ್ರಿಯೆ ರ್ಯಾಲಿಯಲ್ಲಿ ಭಾಗವಹಿಸದ್ದ 1500 ಮಂದಿಯಲ್ಲಿ 100 ಮಂದಿ ಆಯ್ಕೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ, ಕುಣಿಗಲ್ ಮುಂತಾದ ಕಡೆಯಿಂದ ಅತಿ ಹೆಚ್ಚು ಯುವಕರು ಸೇನೆಗೆ ಸೇರಲು ಉತ್ಸಾಹ ತೋರುತ್ತಿದ್ದಾರೆ.
ಸೇನೆಗಿಲ್ಲ ಹೈ-ಕ ಮಂದಿ
ಅದ್ಯಾಕೋ ಏನೋ ಗುಲ್ಬರ್ಗ ಸೇರಿದಂತೆ ಹೈ-ಕ ಪಂಚ ಜಿಲ್ಲೆಗಳಲ್ಲಿ ಭಾರತೀಯ ಸೇನೆ ಸೇರಬಯಸುವ ಆಸಕ್ತರ ಸಂಖ್ಯಾ ಬಲವೇ ಕಡಿಮೆ. ಸೇನಾ ಭರ್ತಿ ಎಂದರೇನೆ ಮೈಮೇಲೆ ಬಂದವರ್ಹಂಗೆ ಆಡುತ್ತಾರೆ ಇಲ್ಲಿನ ಮಂದಿ. ಕೆಲಸವಿಲ್ಲದ ಯುವಕರು ಅಲ್ಲಿ ಇಲ್ಲಿ ಕಟ್ಟೆಪುರಾಣ ಮಾಡುತ್ತ ಕಾಲಹರಣ ಮಾಡುತ್ತಾರೆಯೇ ಹೊರತು ಸೈನಿಕ ನೇಮಕಾತಿ, ಮಿಲಿಟರಿ ಭರ್ತಿ ತಮಗೆ ಬೇಡವೇ ಬೇಡ ಎಂದು ನೇರವಾಗಿಯೇ ಹೇಳುತ್ತಾರೆ!
ಕಳೆದ ಜೂನ್ನಲ್ಲಿ ಗುಲ್ಬರ್ಗದಲ್ಲಿ ಬೆಳಗಾವಿ ರಿಕ್ರೂಟ್ಮೆಂಟ್ ಸೆಲ್ ಹೈ- ಕ ಪಂಚ ಜಿಲ್ಲೆಗಳ ಯುವಕರಿಗೆಂದೇ ಪ್ರತ್ಯೇಕವಾಗಿ ವಾರ ಕಾಲ ಸೇನೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಜರುಗಿತ್ತು. ಈ ಹುದ್ದೆಗೆ ಎಸ್ಎಸ್ಎಲ್ಸಿಯಲ್ಲಿ ಶೇ.45 ಅಂಕಗಳಿಸಿ ಉತ್ತೀರ್ಣರಾಗಿರಬೇಕಿತ್ತು. 21 ವರ್ಷದೊಳಗಿನ ಸುಮಾರು ಸಾವಿರಕ್ಕೂ ಹೆಚ್ಚು ಯುವಕರು ಮೊದಲ ದಿನದ ನೇಮಕಾತಿಯಲ್ಲಿ ಭಾಗವಹಿಸಿದ್ದರು. ಅವರಲ್ಲಿ 200 ಮಂದಿ ಓಟದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇವರಲ್ಲಿ ನೇಮಕಾತಿ ಆಸಕ್ತಿ ತೋರಿದವರು ನೂರರ ಆಚೀಚೆ ಮಾತ್ರ.
ಏಕೆ ಹೀಗೆ?: ನಿಜಾಂ ಅರಸರ ಆಳ್ವಿಕೆ ಕಂಡ ಈ ನೆಲದಲ್ಲಿ ಸೋಮಾರಿತನ ಹಾಸುಹೊಕ್ಕು, ದೇಹಧಾರ್ಡ್ಯತೆ ಸಹ ಸರಿಯಾಗಿ ಕಾಪಾಡಿಕೊಳ್ಳದ ಯುವಕರ ಪಡೆಯೇ ಇಲ್ಲಿದೆ. ಇವೆಲ್ಲ ಮಿಲಿಟರಿ ಪ್ರತಿ ನಿರಾಸಕ್ತಿಗೆ ಕಾರಣವಾಗಿರಬಹುದು. ತಂಬಾಕು, ಮದ್ಯಪಾನದಂಥ ದುಶ್ಚಟಗಳ ದಾಸರಾಗಿರುವವರ ಸಂಖ್ಯೆ ಅಧಿಕವಾಗಿರುವ ಇಲ್ಲಿ ಸೈನಿಕ ನೇಮಕಾತಿಯಂಥ ಶಿಸ್ತಿನ ನೇಮಕಾತಿಗೆ ಹೆಚ್ಚಿನ ಒಲವು ಕಂಡು ಬರುತ್ತಿಲ್ಲ. ಬಾಲ್ಯದಿಂದಲೇ ದೇಶಸೇವೆ, ಮಿಲಿಟರಿ ಕುರಿತಂತೆ ಯೋಗ್ಯ ಮಾರ್ಗದರ್ಶನದ ಕೊರತೆಯೂ ಇಲ್ಲಿದೆ. ಯಾವುದೋ ಖಾಸಗಿ ಕಚೇರಿಯಲ್ಲಿ ಕಾರಕೂನಕಿಯಾದ್ರೂ ಮಾಡ್ತೀವಿ, ಮಿಲಿಟರಿ ಸಂಗ ಬೇಡ ಎಂಬ ಮನೋಭೂಮಿಕೆ ಇಲ್ಲಿನವರದ್ದಾಗಿದೆ. ಇಲ್ಲಿನ ಯುವಕರು ಪ್ರತಿಭೆ- ಜಾಣ್ಮೆಯಿಂದ, ದೇಶಸೇವೆ ಮಾಡಲು ಮುಂದಾದಲ್ಲಿ ಇಲ್ಲಿನ ನಿರುದ್ಯೋಗವೂ ಕರಗುತ್ತದೆ, ಜೊತೆಗೇ ದೇಶ ಕಾಯುವ ಉದ್ಯೋಗವೂ ಕಾಯಂ ಆಗುತ್ತದೆ.
ಮಲೆನಾಡಿನ ಮಿಲಿಟರಿ ನಿರಾಸಕ್ತಿ
ಇಡೀ ಕರ್ನಾಟಕ ರಾಜ್ಯದ ಯುವಕರೇ ಸೇನೆ ಸೇರುವ ಆಸಕ್ತಿ ತೊರೆಯುತ್ತಿದ್ದಾರೆ. ಉತ್ತರ ಕರ್ನಾಟಕದ ಕೆಲವು ಬಡ ಕುಟುಂಬಗಳ ಯುವಕರನ್ನು ಹೊರತುಪಡಿಸಿದರೆ ಉಳಿದವರು ಮನಸ್ಸು ಮಾಡುತ್ತಿಲ್ಲ. ಇದಕ್ಕೆ ಮಲೆನಾಡ ಜಿಲ್ಲೆಯೂ ಹೊರತಲ್ಲ. ಸೇನೆ ಸೇರ್ಪಡೆ ರ್ಯಾಲಿಗಳು ಆಗಾಗ್ಗೆ ಶಿವಮೊಗ್ಗ ಹಾಗೂ ಸಮೀಪದ ಇತರೆ ಜಿಲ್ಲೆಗಳಲ್ಲಿ ನಡೆಯುತ್ತಿರುತ್ತವೆ. ಆದರೆ ಆಸಕ್ತಿಯಿಂದ ಭಾಗವಹಿಸಿದ ಜಿಲ್ಲೆಯ ಯುವಕರ ಸಂಖ್ಯೆ ಬಹಳ ಕಡಿಮೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯಿಂದ ಸೇನೆಗೆ ಆಯ್ಕೆಯಾಗಿರುವವ ಸಂಖ್ಯೆ 10ಕ್ಕೂ ಕಡಿಮೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮೂಲಗಳು ತಿಳಿಸುತ್ತವೆ. ಉತ್ತರ ಕರ್ನಾಟಕದ ಯುವಕರೇ ಜಿಲ್ಲೆಯಲ್ಲಿ ನಡೆದ ಸೇನಾ ಭರ್ತಿ ರ್ಯಾಲಿಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಆಗಾಗ ಭೇಟಿ ನೀಡಿ ಸೇನೆಯಲ್ಲಿ ಲಭ್ಯವಿರುವ ಹುದ್ದೆಗಳು, ಅಲ್ಲಿ ದೊರೆಯುವ ಸೌಲಭ್ಯ ಇತ್ಯಾದಿ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಕಾರ್ಯಾಗಾರವನ್ನು ಆಗಾಗ್ಗೆ ಮಾಡುತ್ತಿರುತ್ತದೆ.
ಮಾಹಿತಿ :
- ಅನಿಲ್ ಎಚ್.ಟಿ., ಮಡಿಕೇರಿ
- ವಜ್ರಾಕ್ಷಿ ಬಂಟ್ವಾಳ, ಮಂಗಳೂರು
- ಸುಭಾಶ್ಚಂದ್ರ ವಾಗ್ಳೆ, ಉಡುಪಿ
- ಶೇಷಮೂರ್ತಿ ಅವಧಾನಿ, ಗುಲ್ಬರ್ಗ