ಅಂಕಣಗಳು

ಪೊಲೀಸ್ ಠಾಣೆಗೆ ವಾಸ್ತು ಕಾಟ

ಮೈಸೂರಿನ ನಜರ್‌ಬಾದ್, ಕೃಷ್ಣರಾಜ, ದೇವರಾಜ, ಕೊಳ್ಳೇಗಾಲ ತಾಲೂಕು ಹನೂರು ಪೊಲೀಸ್ ಠಾಣೆಗಳಲ್ಲಿ ವಾಸ್ತು ದೋಷ ನಿವಾರಣೆಗೆ ಅಲ್ಲಿನ ಇನ್ಸ್‌ಪೆಕ್ಟರ್‌ಗಳು ಹಿಂದೆ ಪೂಜೆ ಮಾಡಿಸಿದ್ದರು. ಒಂದು ಠಾಣೆಯಲ್ಲಿ ಕೇಸುಗಳು ಹೆಚ್ಚು ಬರುತ್ತಿವೆ, ಕಡಿಮೆಯಾಗಲಿ ಎಂದು ಮಾಡಿಸಿದರೆ ಮತ್ತೊಂದು ಠಾಣೆಯಲ್ಲಿ ಕಾಗೆ ಒಳಗೆ ಬಂದಿತ್ತು ಎಂಬ ಕಾರಣಕ್ಕೆ ಪೂಜೆ ಮಾಡಿಸಲಾಗಿತ್ತು. ನಜರ್‌ಬಾದ್ ಠಾಣೆಯಲ್ಲಿ ಪ್ರಕರಣಗಳು ಹೆಚ್ಚು ಬರುತ್ತಿವೆ. ಬಂದವರೆಲ್ಲಾ ಸಸ್ಪೆಂಡ್ ಆಗುತ್ತಿರುವುದಕ್ಕೆ ವಾಸ್ತುದೋಷ ಕಾರಣ ಎಂದು ಮುಖ್ಯ ದ್ವಾರದ ದೊಡ್ಡ ಗೇಟ್ ಬಂದ್ ಮಾಡಿ ಸಣ್ಣ ಗೇಟ್ ಮೂಲಕ ಪ್ರವೇಶ ನೀಡಲಾಗಿತ್ತು. ಆದರೂ ಹಿಂದಿನ ಇನ್ಸ್‌ಪೆಕ್ಟರ್ ಜಿ.ಎನ್. ಮೋಹನ್ ಅವರು ಸಿಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಮತ್ತಿತರರ ವಿರುದ್ಧ ಚುನಾವಣಾ ಪೂರ್ವದಲ್ಲಿ ಪ್ರಕರಣ ದಾಖಲಿಸಿದ್ದಕ್ಕೆ ಚುನಾವಣೋತ್ತರದಲ್ಲಿ ಅಮಾನತುಗೊಂಡರು. ಇದೀಗ ಮೈಸೂರಿಗೆ ಪೊಲೀಸ್ ಆಯುಕ್ತರಾಗಿ ಬಂದಿರುವ ಡಾ.ಎಂ.ಎ. ಸಲೀಂ ಅವರು ನಜರ್‌ಬಾದ್ ಠಾಣೆಗೆ ಭೇಟಿ ನೀಡಿ, ವಾಸ್ತು ಕಾರಣ ನಂಬದೆ ಸಣ್ಣ ಗೇಟ್ ಮುಚ್ಚಿಸಿ, ದೊಡ್ಡ ಗೇಟ್ ತೆರೆಸಿದ್ದಾರೆ. ಮುಂದೇನಾಗುತ್ತೋ ಕಾದು ನೋಡಬೇಕು.

ಹೇಳುವುದು ಒಂದು ಮಾಡುವುದು ಇನ್ನೊಂದು...

ಮೈಸೂರಿನಲ್ಲಿರುವ 'ಫಲ'ವತ್ತಾದ ಇಲಾಖೆಯಲ್ಲಿ ಕೆಎಎಸ್ ಹಿರಿಯ ಅಧಿಕಾರಿಯೊಬ್ಬರು ಮುಖ್ಯಸ್ಥರಾಗಿ ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಹಿಳೆಯರು ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದ್ದರು. ಆದರೆ ಇದಕ್ಕೆ ಅದೇ ಕಚೇರಿಯ ಮಹಿಳಾ ನೌಕರರಿಂದ ಆಕ್ಷೇಪ ವ್ಯಕ್ತವಾಗಿದೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದ್ದಂತೆ.  ಏಕೆಂದರೆ ಅವರು ಹೇಳುವುದು ಒಂದು, ಮಾಡುವುದು ಮತ್ತೊಂದು. ವೇದಿಕೆಯ ಮೇಲೆ ಒಣ ಮಾತುಗಳನ್ನಾಡುವ ಇವರು ನಿಜವಾಗಿಯೂ ಅದರಂತೆ ನಡೆದುಕೊಳ್ಳುವುದಿಲ್ಲ. ಕಚೇರಿಯಲ್ಲಿ ಮಹಿಳೆಯರಿಗೆ ಗೌರವವೇ ಸಿಗುತ್ತಿಲ್ಲ ಎನ್ನುತ್ತಾರೆ. ಅದಕ್ಕೇ ಅಲ್ಲವೇ ಮಾತಿಗಿಂತ ಕೃತಿ ಲೇಸು ಎನ್ನುವುದು. ಯಾರೇ ಆದರೂ ಮನೆ ಗೆದ್ದು, ಮಾರು ಗೆಲ್ಲಬೇಕು. ಹೇಳುವುದು ವೇದ, ತಿನ್ನುವುದು ಬದನೆಕಾಯಿ ಎಂಬಂತೆ ಆಗಬಾರದು ಅಲ್ಲವೆ?

ಬಂಡಿ, ಪಾಟೀಲ್ ಕೋಳಿ ಪುರಾಣ!

ಗುಂಡೇಟಿನಿಂದ ಗಾಯಗೊಂಡಿರುವ ಮಾಜಿ ಸಚಿವ ಸಿ.ಸಿ. ಪಾಟೀಲ್ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಬೆಂಗಳೂರಿನ ನಿವಾಸದಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ವಿಚಾರಿಸಲು ಬಂಧು ಮಿತ್ರರು ಆಗಮಿಸುತ್ತಲೇ ಇದ್ದಾರೆ. ಹೀಗಿರುವಾಗ ಇತ್ತೀಚೆಗೆ ಪಾಟೀಲರನ್ನು ಕಾಣಲು ಮಾಜಿ ಸಚಿವ ಕಳಕಪ್ಪ ಬಂಡಿ ತೆರಳಿದ್ದರು. ಬಂಡಿ ಅವರು ಗಜೇಂದ್ರಗಡದವರಾದರೆ ಪಾಟೀಲ್ ಅವರು ಪಕ್ಕದ ನರಗುಂದದವರು. ಸಹಜವಾಗಿ ಪರಸ್ಪರ ಆತ್ಮೀಯರು. ಆರೋಗ್ಯ ವಿಚಾರಿಸಲು ಬಂದಿರುವುದನ್ನು ಕಂಡು ಪಾಟೀಲರು ಎಂದಿನಂತೆ 'ಬಾರಪ್ಪಾ ಕಳಕಪ್ಪಾ' ಎಂದು ಬರ ಮಾಡಿಕೊಂಡರು. ಆರೋಗ್ಯ ವಿಚಾರಿಸಲು ಬಂದ ಬಂಡಿ ಅವರು, ಸಿ.ಸಿ. ಪಾಟೀಲರನ್ನು ಕುರಿತು ಹೇಗಿದ್ದೀಯಾ ಎಂದು ಮೊದಲು ಕೇಳುವುದನ್ನು ಬಿಟ್ಟು, ಯಾಕೋ ಸಿ.ಸಿ. ನರಗುಂದನ್ಯಾಗ ಕೋಳಿ ಭಾಳ ಆಗ್ಯಾವಂತ. ಅವು ಕೋ.. ಕೋ.. ಕ್ಕೋ ಅನ್ನೋದನ್ನ ಬಿಟ್ಟು ಸಿ.ಸಿ... ಸಿ. ಸಿ... ಅನ್ನಾಕತ್ತಾವಂತಲ್ಲೋ ಅಂದು ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ, ಅಲ್ಲಾಪ್ಪಾ ಗುಂಡು ತಿಂದಿರೋ ನಾನು ಚುನಾವಣ್ಯಾಗ ಸೋತೆ, ನೀನಾರ ಗಟ್ಟಿ ಆಳ, ಚುನಾವಣ್ಯಾಗ ಗೆದ್ದು ನರಗುಂದಕ್ಕೂ ಹೋಗಿ ಅಲ್ಲಿನ ಕೋಳಿಗಳಿಗೆ ಒಂದು ಗತಿ ಕಾಣಸ್ತಿ ಅಂತಾ ಅನ್ಕೋಂಡಿದ್ದೆ. ನಮ್ಮಿಬ್ರ ಹಣೆಬಾರ್ದಾಗ ಕೋಳಿ ಇಲ್ದಾಂಗಾತು, ಅದು ಬಿ.ಆರ್.ಯಾವಗಲ್ (ಹಾಲಿ ಶಾಸಕ) ಪಾಲಾಯ್ತಲ್ಲೋ ಮಾರಾಯಾ ಎಂದ್ರು. ಬಂಡಿ ಮಾತು ಮುಂದುವರಿಸಿ, ಯಾವಗಲ್‌ಗೆ ವಯಸ್ಸಾಗೈತಿ ನಮ್ಮಂಗ ಎಲುಬು ಪುಡಿ ಮಾಡಾಕ್ ಎಲ್ಲಿ ಆಗಬೇಕ ಬಿಡೋ ಅಂತಾ ಹಾಸ್ಯ ಚಟಾಕಿ ಹಾರಿಸಿದರು!

ಕಾಂಗ್ರೆಸ್ ಕಾರು ಬಂಗ್ಲೆ ಮಾಲೀಕರು
ಬೆಳಗಾವಿ ಕ್ಲಬ್ ರಸ್ತೆಯ ಭವ್ಯ ಬಂಗ್ಲೆ ಮುಂದೆ (ಕಾಂಪೌಂಡ್ ಹೊರಗೆ) ಅದ್ಯಾರ್ಯಾರೋ ಕಾರ್ ನಿಲ್ಲಿಸಿ ಹೋಗಿದ್ದರು. ಮನೆಯಲ್ಲಿದ್ದ ಒಡತಿ ಹೊರಗೆ ಬಂದು, ಅಯ್ಯೋ ಇದೇನು ಕಾರ್ ಪಾರ್ಕಿಂಗ್ ಅಂತಾ ಬುಸುಗುಡತ್ತ ಎಲ್ಲ ಗಾಡಿ ಗಾಲಿ ಹವೆ ತೆಗೆದು ಒಳಗ ಹೋಗಿ ಕುಳಿತರು. ಕಾರು ಬಿಟ್ಟು ಹೋದವರು ಮರಳಿ ಬಂದು ನೋಡಿದ್ರ ಅಯ್ಯೋ ನನ್ನ ಕಾರ್ ಪಂಕ್ಚರ್ ಆಗೇತಿ, ನಿನ್ನ ಕಾರ ಪಂಕ್ಚರ್ ಆಗೇತಿ ಎಂದುಕೊಳ್ಳುತ್ತಿದ್ದಂತೆ ಒಳಗಿದ್ದ ಅಮ್ಮನವರು ಹೊರಗ ಬಂದು ಆವಾಜ್ ಹಾಕಿದ್ರು. ಇದೊಂದು ಸಲ ಹೇಳಿದ್ರ ಮುಂದಿನ ಸಲ ನಿಲ್ಲಿಸುತ್ತಿರಲಿಲ್ರಿ ಎನ್ನುತ್ತ ಪರಸ್ಪರ ವಾಗ್ವಾದ ನಡೆಯಿತು. ಗುಂಪಿನಲ್ಲಿದ್ದವನೊಬ್ಬ, ಅಯ್ಯೋ ಶಂಕರಾನಂದ ಸಾಹೇಬ್ರ ಇದ್ದಾಗ ಈ ಮನೆ ಮುಂದೆ ಜಾಸ್ತಿ ಕಾರು ನಿಲ್ಲೋದು ಅಂದ್ರನ ಸಂಭ್ರಮ. ಜಿಲ್ಲಾ ಕಾಂಗ್ರೆಸ್ ಕಚೇರಿ ಬೇರೆ ಕಡೆ ಇದ್ರೂ ಈ ಬಂಗ್ಲೇನ ಕಾಂಗ್ರೆಸ್ ಕಚೇರಿ ಹಾಂಗ ಇತ್ತು. ಶಂಕರಾನಂದ ಸಾಹೇಬ್ರ ಮನೆ ಮುಂದೆ ಕಾರು ಭಾಳ ನಿಂತಾವು ಅಂದ್ರ ಹೊರಗ ಬಂದ ನೋಡಿ ಆನಂದ ಪಡುತ್ತಿದ್ದರು. ಆದರೆ ಅವರ ಮಗಳಾದ ನೀವು ಈಗ ಕಾರು ನಿಂತ್ರ ಹಾರ್ಯಾಡ್ತಿರಲ್ಲ ಎಂದು ಗೋಣಗುತ್ತ ಹವಾ ಹಾಕಿಸಿಕೊಳ್ಳಲು ಹೊರಟ!

ನನ್ನದು, ನಿನ್ನದು, ಏನದು?
ಇತ್ತೀಚೆಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಮ್ಮಿಕೊಂಡಿದ್ದ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಏರ್ಪಾಡಾಗಿತ್ತು. ಕಾರ್ಯಕ್ರಮದಲ್ಲಿ ಉತ್ತರಾಖಂಡ ಸಂತ್ರಸ್ತರಿಗೆ ಸಂಗ್ರಹಿಸಿದ ನಿಧಿ ಸ್ವೀಕರಿಸಲು ಸಹಕಾರಿ ಸಚಿವ ಮಹದೇವ ಪ್ರಸಾದ್ ಕೂಡ ಆಗಮಿಸಿದ್ದರು. ಮಹದೇವ ಪ್ರಸಾದ್ ಭಾಷಣ ಬಳಿಕ ರಮಾನಾಥ ರೈ ಸರದಿ. ಮಹದೇವಪ್ಪ ಹಾಗೂ ನಾನು ಹಿಂದೆ ಶಾಸಕರಾಗಿದ್ದಾಗ ಬೆಂಗಳೂರಲ್ಲಿ ಅಕ್ಕಪಕ್ಕದ ಬಂಗಲೆ ಸಿಕ್ಕಿತ್ತು. ಅವರು ನನ್ನಂತೆಯೇ ನೇರ, ನಿಷ್ಠುರ ನಡೆನುಡಿಯ ವ್ಯಕ್ತಿ. ಇಬ್ಬರೂ ಶನಿವಾರ, ಭಾನುವಾರ ಮನೆಯಲ್ಲಿ ಇರುವುದನ್ನು ತಪ್ಪಿಸುವುದಿಲ್ಲ. ಅನಿವಾರ್ಯವಾದರೆ ಮಾತ್ರ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ ಎನ್ನುತ್ತ ಕವನವನ್ನೇ ಸ್ಫುರಿಸತೊಡಗಿದರು. ಹೇಳುವ ಭರದಲ್ಲಿ 'ನಿಮ್ಮದು-ನಮ್ಮದು' ಅದಲು ಬದಲಾಗಿ ಅವಾಂತರ ಸೃಷ್ಟಿಯಾಯಿತು. 'ನನ್ನದು-ನಿನ್ನದು-ಏನದು?' ಎಂದು ನಕ್ಕಿದ್ದೇ ನಕ್ಕಿದ್ದು. ರೈ ಕವನ ಇದು,
    ನನ್ನದು-ನನ್ನದು, ನಿನ್ನದು-ನಿನ್ನದು
    ನಿನ್ನದು-ನನ್ನದು, ನಿನ್ನದು-ನನ್ನದಲ್ಲ
    ಬೇಕಾದ್ದು ನನ್ನದು-ನಿನ್ನದು ಆಗಬೇಕು!

- ನಂಬೀರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!