ಸಂತ್ರಸ್ತ ಗ್ರಾಮಗಳಲ್ಲಿ ಪರಿಹಾರ ಸಾಮಗ್ರಿಗಳಿಗೆ ಪೈಪೋಟಿ 
ಅಂಕಣಗಳು

ಮುಳುಗಿದ ಮನೆಯಿಂದ ಗಳ ಹಿರಿಯುವವರು

ಅವನು ಮೊದಲಿನಿಂದಲೂ ಹಾಗೆಯೇ. ಹೆಸರು ರಮೇಶ್ ಸಿಂಗ್. ಮನೆ, ಹೆತ್ತವರು,...

ಪ್ರವಾಹೋತ್ತರಕಾಂಡ, ಭಾಗ-3

ಅವನು ಮೊದಲಿನಿಂದಲೂ ಹಾಗೆಯೇ. ಹೆಸರು ರಮೇಶ್ ಸಿಂಗ್. ಮನೆ, ಹೆತ್ತವರು, ಒಡಹುಟ್ಟಿದವರು ಎಂದರೆ ಆತನಿಗೆ ಇನ್ನಿಲ್ಲದ ಪ್ರೀತಿ, ಕಾಳಜಿ. ಅದರಲ್ಲೂ ಸೋದರ ಎಂದರೆ ಜೀವ ಬಿಟ್ಟು ಪ್ರೀತಿಸುತ್ತಿದ್ದ. ಅವನಿಗಾಗಿ ಏನನ್ನು ಮಾಡಲೂ ಸಿದ್ಧನಿದ್ದ. ಅಣ್ಣನ ಒಳಿತಿಗಾಗಿ, ಅವನ ಏಳಿಗೆಗಾಗಿ ಪ್ರಾಣ ಬಿಡಲೂ ಸಿದ್ಧವೆಂದು ಹೇಳುತ್ತಲೇ ಇದ್ದ. ಕೊನೆಗೂ ಹಾಗೆಯೇ ಆಗಿ ಹೋದನೋ ಏನೋ? ಅಪ್ಪಿತಪ್ಪಿಯೂ ಅವನ ಅಣ್ಣ ಅರ್ಜುನ್ ಸಿಂಗ್ ಅದನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲ. 'ನನ್ನ ತಮ್ಮ ಬದುಕಿದ್ದಾನೆ. ಇಲ್ಲೇ ಎಲ್ಲೋ ಸಿಲುಕಿಕೊಂಡಿದ್ದಾನೆ. ಇವತ್ತಲ್ಲಾ ನಾಳೆ ಬಂದೇ ಬರುತ್ತಾನೆ' ಎಂಬ ವಿಶ್ವಾಸದಲ್ಲಿ ಅವನನ್ನು ಹುಡುಕುತ್ತಾ ಊರೂರು ಅಲೆಯುತ್ತಿದ್ದಾನೆ.
ರಮೇಶ್ ಮನೆಯ ಕಿರಿಯ ಮಗ. ಹಿರಿಯವ ಅರ್ಜುನ್ ಕಾನ್ಪುರದಲ್ಲಿ ಆಟೋಮೊಬೈಲ್ ಎಂಜಿನಿಯರಿಂಗ್ ಮಾಡುತ್ತಿದ್ದಾನೆ. ಒಬ್ಬಳೇ ಸೋದರಿಯನ್ನು ಸಮೀಪದ ಹಳ್ಳಿಗೆ ಮದುವೆ ಮಾಡಿಕೊಟ್ಟಿದ್ದಾನೆ. ಹಳ್ಳಿಯಲ್ಲಿರುವ ವೃದ್ಧ ಅಪ್ಪ- ಅಮ್ಮನ ದೇಖರೇಖಿ, ಕುಟುಂಬದ ನಿರ್ವಹಣೆ, ಅಣ್ಣ ಓದು, ತಂಗಿಯ ಹಿತರಕ್ಷಣೆ ಎಲ್ಲದರ ಹೊಣೆಯೂ ಕಿರಿಯವನಾಗಿದ್ದರೂ ತಾನೇ ಹೊತ್ತು ಹಿರಿತನ ಮೆರೆಯುತ್ತಿದ್ದ ರಮೇಶ್. ತನ್ನ ತಲೆಗೆ ಓದು ಹತ್ತುವುದಿಲ್ಲ. ಹೀಗಾಗಿ ಓದಿನಲ್ಲಿ ಮುಂದಿರುವ ಅಣ್ಣ ವಿದ್ಯಾಭ್ಯಾಸ ಮುಂದುವರಿಸಿ ಇಡೀ ಕುಟುಂಬಕ್ಕೆ ಬೆಳಕಾಗಲಿ ಎಂಬ ಆಶಯದೊಂದಿಗೆ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ. ಇದ್ದ ಸ್ವಲ್ಪ ಜಮೀನಿನಲ್ಲಿ ಊರಿನ ಬದುಕು ಹೇಗೋ ಸಾಗುತ್ತಿತ್ತು. ಉಳಿದದ್ದು ತನ್ನ ಜೀವನ ನಿರ್ವಹಣೆ, ಅಣ್ಣನ ಓದು. ಅದಕ್ಕಾಗಿ ಹಗಲೂ ರಾತ್ರಿ ಎನ್ನದೇ ಟ್ರಾವೆಲ್ ಏಜೆನ್ಸಿಯಲ್ಲಿ ದುಡಿಯುತ್ತಿದ್ದ. ಉತ್ತರ ಪ್ರದೇಶದ ಯಾತ್ರಾರ್ಥಿಗಳನ್ನು ಕರೆದುಕೊಂಡು ತನ್ನ ಇನ್ನೋವಾದಲ್ಲಿ ಬಂದಿದ್ದ ರಮೇಶ್ ಅವತ್ತು ಕೇದಾರದಲ್ಲಿ ದುರ್ಘಟನೆ ನಡೆದ ಜೂನ್ 16 ರಂದು ಸಂಜೆ 7.30ರ ಸುಮಾರಿಗೆ ಅಣ್ಣನಿಗೆ ದೂರವಾಣಿ ಕರೆ ಮಾಡಿ ತಾನು ಸೋನ್ ಪ್ರಯಾಗದಲ್ಲಿ ಇರುವುದಾಗಿ ಹೇಳಿದ್ದ. ಅಷ್ಟೆ, ಆ ಬಳಿಕ ಈವರೆಗೆ ಅವನ ಸುಳಿವಿಲ್ಲ. ಆತನ ಇನ್ನೋವಾ ಪ್ರವಾಹದಿಂದ ನಡುಗಡ್ಡೆಯಂತಾಗಿರುವ ಪ್ರದೇಶದಲ್ಲಿ, ಘಟನೆಗೆ ಮೊದಲು ಪಾರ್ಕಿಂಗ್ ತಾಣವಾಗಿದ್ದ ಜಾಗದಲ್ಲಿ ಪತ್ತೆಯಾಗಿದೆ. ಸೋನ್ ಪ್ರಯಾಗದಲ್ಲಿ ಸಾಮಾನ್ಯವಾಗಿ ಚಾಲಕರು ತಂಗುತ್ತಿದ್ದ ಮಧ್ಯಮ ದರ್ಜೆಯ ಹೋಟೆಲ್ ಒಂದರಲ್ಲಿ ರಮೇಶನೂ ಅಂದು ತಂಗಿದ್ದ ಎನ್ನಲಾಗಿದೆ. ಅಲ್ಲಿದ್ದ ಬಹುತೇಕ ಚಾಲಕರು ಕೊಚ್ಚಿ ಹೋಗಿದ್ದಾರೆ ಎನ್ನುತ್ತಾರೆ ಸ್ಥಳೀಯರು. ತನ್ನ ಬದುಕನ್ನು ಔನ್ನತ್ಯಕ್ಕೆ ಕೊಂಡೊಯ್ಯಬೇಕೆಂಬ ಹಂಬಲದಲ್ಲಿ ದುಡಿಯುತ್ತಿದ್ದ ತಮ್ಮ ಹೀಗೆ ಕಾಣೆಯಾದ ದೌರ್ಭಾಗ್ಯದಿಂದ ಅರ್ಜುನ್ ಹತಾಶನಾಗಿದ್ದಾನೆ. ಊರಿನಲ್ಲಿ ಇನ್ನೊಂದು ತಿಂಗಳಲ್ಲಿ ರಮೇಶ್‌ನನ್ನು ವರಿಸಲು ಸಿದ್ಧಗೊಂಡಿದ್ದ ಕನ್ಯೆ ಕಮಲಿಗೆ ದಿಕ್ಕೇ ತೋಚದಾಗಿದೆ.
ಹರಿದ್ವಾರ, ಹೃಷಿಕೇಶದ ಮುಂದಿನ ಎಲ್ಲ ಊರುಗಳೂ ಹೀಗೆ ಕಳೆದುಹೋದ ತಮ್ಮವರನ್ನು ಹುಡುಕುತ್ತಾ ಬಂದವರಿಂದ ತುಂಬಿಹೋಗಿದೆ. ರುದ್ರಪ್ರಯಾಗ ಮತ್ತು ಉತ್ತರಕಾಶಿ ಜಿಲ್ಲೆಗಳಾದ್ಯಂತ ಇವತ್ತು ಎಲ್ಲಿ ನೋಡಿದರೂ ಪ್ರವಾಹದಲ್ಲಿ ನಾಪತ್ತೆಯಾದ ತಮ್ಮವರನ್ನು ಹುಡುಕುತ್ತಾ ಬಂದವರೇ. ಅರ್ಜುನ್ ಜೊತೆ ಆಸ್ಪತ್ರೆಗಳನ್ನು ಎಡತಾಕುತ್ತಾ ಗಾಯಾಳುಗಳಲ್ಲಿ ಯಾರಾದರೂ ತಮ್ಮವರಾಗಿರಬಹುದೇ ಎಂಬ ಆಶಾಭಾವದಲ್ಲಿದ್ದವ ಇನ್ನೊಬ್ಬ ರಾಘವೇಂದ್ರ ಸಿಂಗ್. ಇತ್ತೀಚೆಗಷ್ಟೇ ಮದುವೆಯಾಗಿದ್ದ ಆತನ ಸೋದರಿ ಮತ್ತು ಆಕೆಯ ಗಂಡ ದುರಂತದಲ್ಲಿ ಕಾಣೆಯಾಗಿದ್ದಾರೆ. ನರೇಂದರ್ ಸಿಂಗ್‌ನ ಹೆತ್ತವರು ಹಿಂದಿರುಗಿ ಬಂದಿಲ್ಲ.
ಉರಿಯುತ್ತಿರುವ ಸೂರಿನಲ್ಲಿ ಬೀಡಿ ಹಚ್ಚಿಕೊಳ್ಳುವುದು ಅಂದರೆ ಬಹುಶಃ ಇದೇ ಇರಬೇಕು. ಹೌದು, ಸಾವಿನ ಮನೆಯಾದ ಉತ್ತರಾಖಂಡದಲ್ಲೀಗ ಅಕ್ಷರಶಃ ಸುಲಿಗೆ ನಡೆಯುತ್ತಿದೆ. ಅವರು ಸಂತ್ರಸ್ತರೋ, ಬಂಧುಗಳನ್ನು ಕಳಕೊಂಡವರೋ, ವರದಿ ಸಮೀಕ್ಷೆಗಳಿಗಾಗಿ ಆಗಮಿಸಿದವರೋ, ಸ್ಥಳೀಯರೋ, ದುರ್ಘಟನೆಯಲ್ಲಿ ಅನಾಥರಾದವರೋ ಯಾವುದೂ ಅಲ್ಲೀಗ ಮುಖ್ಯವಾಗುತ್ತಿಲ್ಲ. ಸುಲಿಗೆಕೋರರ ಪಾಲಿಗೆ ಎಲ್ಲರೂ ಒಂದೇ. ಆ ಮಟ್ಟಿಗೆ ದೇವನೆಲದಲ್ಲಿ ಅಪ್ರಯತ್ನಪೂರ್ವಕ ಸಮಾನತೆ (?) ಜಾರಿಗೊಂಡಿದೆ. ಪ್ರವಾಹ ಮತ್ತು ಆನಂತರದ ದಿನಗಳಲ್ಲಿ ನಡೆದ ಕೆಲ ಘಟನೆಗಳು, ಸ್ಥಳೀಯ ಕೆಲವರ ವರ್ತನೆ ನಿಜಕ್ಕೂ ಇಡೀ ಮನುಕುಲವನ್ನೇ ನಾಚುವಂತೆ ಮಾಡುತ್ತದೆ. ಮನುಷ್ಯನ ಸಣ್ಣತನಗಳು ಅರ್ಥವಾಗುವುದೇ ಸಂಕಷ್ಟದಲ್ಲಿ ಎಂಬುದು ಸಾಬೀತಾಗಿದೆ.
ಬರಗಾಲ ಪ್ರವಾಹವೆಂದರೆ ಸರಕಾರಿ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಸುಗ್ಗಿ ಎಂಬ ಸಾರ್ವತ್ರಿಕ ಆರೋಪವಿರುವಾಗ ಅದನ್ನೂ ಮೀರಿಸುವ ಅಮಾನವೀಯತೆ ಉತ್ತರಾಖಂಡದಲ್ಲಿ ಲಾಸ್ಯವಾಡುತ್ತಿದೆ. ದುರಂತ ಸ್ಥಳದ ಸುತ್ತಮುತ್ತಲಿನ ಸಣ್ಣಪುಟ್ಟ ಪಟ್ಟಣಗಳಲ್ಲಿ ಕೆಲ ಮಂದಿ ನಾಚಿಕೆ ಬಿಟ್ಟು ಮೇಯುತ್ತಿದ್ದಾರೆ. ವ್ಯಾಪಾರದ ಹೆಸರಿನಲ್ಲಿ ದರೋಡೆ ಒಂದೆಡೆಯಾದರೆ ಪರಿಹಾರದ ಹೆಸರಿನ ಪ್ರಹಸನ ಇನ್ನೊಂದೆಡೆ. ಮಯಾಲಿ, ತಿಲವಾಡಾ, ಗುಪ್ತಕಾಶಿ, ಗೌಚರ್, ಚಮೋಲಿ, ಉತ್ತರ ಕಾಶಿ ಜಿಲ್ಲೆಯ ಭಟವಾರಿ, ಮಾಲಾ ಮನೇರಿ ಮತ್ತಿತರೆಡೆಗಳಲ್ಲಿ ಒಂದೇ ಒಂದು ಬಾಟಲ್ ಖನಿಜಯುಕ್ತ ನೀರಿಗೆ ನೀವು ಕನಿಷ್ಠ ಐವತ್ತು ರು. ನೀಡಲೇಬೇಕು. ವಸತಿಗೃಹಗಳು, ಹೋಟೆಲ್‌ಗಳಲ್ಲಿ ನೀವು ಹೊರಗಿನವರೆಂಬುದು ಗೊತ್ತಾದರೆ ಮನಸ್ಸಿಗೆ ಬಂದ ಬಾಡಿಗೆ ದರವನ್ನು ಹೇಳುತ್ತಾರೆ. ಟ್ಯಾಕ್ಸಿಗಾಗಿ ದುಬಾರಿ ಬೆಲೆಯನ್ನು ನೀವು ತೆರಲೇಬೇಕು.
ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ಇಂಥ ಯಾರೊಬ್ಬರೂ ನಿಜವಾಗಿ ದುರಂತದ ತಣ್ಣನೆಯ ಕ್ರೌರ್ಯಕ್ಕೆ ಸಿಲುಕಿ ನಲುಗಿದವರೇನೂ ಅಲ್ಲ. ಹಾಗೆ ನೋಡಿದರೆ ಇಂಥ ಪ್ರದೇಶಗಳಲ್ಲಿ ಪ್ರವಾಹ ಸುಳಿಯಲೂ ಇಲ್ಲ. ಇವೆಲ್ಲವೂ ಅತ್ಯಂತ ಸುರಕ್ಷಿತವಾಗಿವೆ. ಇಲ್ಲಿನ ವ್ಯಾಪಾರ ವಹಿವಾಟು ಎಂದಿನಂತೆಯೇ ನಡೆಯುತ್ತಿದೆ. ಒಂದೇ ಒಂದು ಬಿರುಕೂ ಇಲ್ಲಿನ ಕಟ್ಟಡಗಳಲ್ಲಿ ಪ್ರವಾಹದಿಂದ ಕಾಣಿಸಿಕೊಂಡಿಲ್ಲ. ವ್ಯಾಪಾರ ವಹಿವಾಟಿಗೂ ಧಕ್ಕೆಯಾಗಿಲ್ಲ. ಹಾಗೆ ನೋಡಿದರೆ ದೈವ ಸನ್ನಿಧಿಯ ತೀರಾ ಸನಿಹದಲ್ಲಿದ್ದ ಸೋನ್ ಪ್ರಯಾಗ, ಗೌರಿ ಕುಂಡ್‌ನಂಥ ಪ್ರಮುಖ ವಾಣಿಜ್ಯ ಕೇಂದ್ರಗಳು ನಾಶವಾದ ಹಿನ್ನೆಲೆಯಲ್ಲಿ ಗುಪ್ತಕಾಶಿಯಂಥ ಪಟ್ಟಣದಲ್ಲಿ ಚಟುವಟಿಕೆ ಇಮ್ಮಡಿಗೊಂಡಿದೆ. ಅಳುದುಳಿದ ಇಂಥ ಸ್ಥಳಗಳನ್ನೇ ಎಲ್ಲದಕ್ಕೂ ಅವಲಂಬಿಸುವುದು ಎಲ್ಲರಿಗೂ ಅನಿವಾರ್ಯವಾಗಿದೆ. ಹೀಗಾಗಿ ಅವರು ಆಡಿದ್ದೇ ಆಟ.
ಇವೆಲ್ಲಕ್ಕಿಂತ ಭಯಾನಕವೆಂದರೆ ಅಲ್ಲಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳು. ಸಂತ್ರಸ್ತರ, ಸ್ಥಳೀಯರ ಹಣೆಪಟ್ಟಿ ಇಂಥ ದುಷ್ಕೃತ್ಯಕ್ಕೆ ಕಟ್ಟಲಾಗುತ್ತಿದೆ. ಇಂಥ ವಿದ್ರೋಹಿ ಚಟುವಟಿಕೆಯಲ್ಲಿ ನಿಜಕ್ಕೂ ತೊಡಗಿರುವವರು ಟಿಬೆಟ್, ನೇಪಾಳ ಗಡಿ ಪ್ರದೇಶದ ಹಳ್ಳಿಗಳಿಂದ ವಲಸೆ ಬಂದಿರುವಂಥವರು ಎಂಬ ಸತ್ಯ ಇನ್ನೂ ಸರಕಾರಕ್ಕೆ ಮನವರಿಕೆಯಾಗಿಲ್ಲ. ಅಂಥದೊಂದು ವ್ಯವಸ್ಥಿತ ತಂಡ ಅತ್ಯಂತ ಯೋಜಿತವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಹ, ಸ್ಥಳಗಳಲ್ಲಿ ಅಳಿದುಳಿದ ಅಮಗಡಿ ಮುಂಗಟ್ಟುಗಳು, ಹಳ್ಳಿಗಳ ಒಂಟಿ ಮನೆಗಳು, ಬ್ಯಾಂಕ್ ಮತ್ತಿತರ ವಹಿವಾಟು ತಾಣಗಳನ್ನು ಅವರು ದೋಚುತ್ತಿದ್ದಾರೆ. ದುರಂತ ಸ್ಥಳಕ್ಕೆ ತಮ್ಮವರನ್ನು ಹುಡುಕುತ್ತಾ ಬರುತ್ತಿರುವವರನ್ನೂ ಇವರು ಬಿಡುತ್ತಿಲ್ಲ. ಕೇದಾರದಲ್ಲಿ ಕುಸಿದು ಬಿದ್ದ ಬ್ಯಾಂಕ್ ಒಂದರ ಬಳಿ ಹದಿನೈದು ದಿನಗಳ ಹಿಂದೆ ಸಾಧುವಿನಂತೆ ಬಟ್ಟೆ ತೊಟ್ಟು ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ತಪಾಸಣೆ ನಡೆಸಿದ ಪೊಲೀಸರಿಗೆ 87 ಲಕ್ಷ ರು. ದೊರೆತಿತ್ತು ಎನ್ನುತ್ತಾರೆ ಗುಪ್ತಕಾಶಿಯ ಇನ್ಸ್‌ಪೆಕ್ಟರ್ ರಾಕೇಶ್ ಸಾಥಿ. ಕೇದಾರನಾಥೇಶ್ವರ ಇವನ್ನೆಲ್ಲ ನೋಡಿಯೂ ನೋಡದಂತೆ ಕಣ್ಮುಚ್ಚಿ ಕಲ್ಲಾಗಿ ಕೆಸರಿನ ನಡುವೆ ಕುಳಿತಿದ್ದಾನೆ.

ಯಾತ್ರಿಗಳು-ವಾಸಿಗಳು
-  2.68 ಕೋಟಿ ಯಾತ್ರಿಗಳು ಉತ್ತರಾಖಂಡಕ್ಕೆ 2011ರಲ್ಲಿ ಭೇಟಿ ಕೊಟ್ಟಿದ್ದಾರೆ
-  ಕಳೆದ ಹತ್ತು ವರ್ಷಗಳಲ್ಲಿ ಯಾತ್ರಿಗಳ ಆಗಮನ ಪ್ರಮಾಣ ಶೇ. 140ರಷ್ಟು ಹೆಚ್ಚಾಗಿದೆ.
-  3 ತಿಂಗಳಲ್ಲೇ ಹೆಚ್ಚು ನೂಕುನುಗ್ಗಲು-ಒಂದು ಬೃಹತ್ ದಂಡು ಜೂನ್- ಆಗಸ್ಟ್ ನಡುವೆ ಬರುತ್ತಿದೆ.
-  32 ಯಾತ್ರಾ ಸ್ಥಳ ರಾಜ್ಯದಲ್ಲಿದ್ದು ಚಾರ್‌ಧಾಮಗಳು ಮುಖ್ಯವಾದ ಧಾರ್ಮಿಕ ಪ್ರವಾಸಿ ಸ್ಥಳ.
-  18 ಮುಖ್ಯ ಮತ್ತು ಸಣ್ಣ ನದಿಗಳ ಉಗಮ ಸ್ಥಾನವೂ ಸೇರಿದಂತೆ ಹಲವು ಸಂಗಮ ತಾಣಗಳಿರುವುದರಿಂದ ಉತ್ತರಾಖಂಡ ಹಿಂದುಗಳ ಪಾಲಿಗೆ ಪವಿತ್ರ.
-  ಪ್ರವಾಹಗಳು ನಿರಂತರ ಮರುಕಳಿಸುತ್ತಲೇ ಇರುತ್ತವೆ. ಕನಿಷ್ಠಪಕ್ಷ 9 ಮುಖ್ಯ ಮೇಘಸ್ಫೋಟ ಮತ್ತು ಭೂ ಕುಸಿತಗಳು 1988ರಿಂದ ಸಂಭವಿಸಿವೆ.
-  2012ರಲ್ಲಿ, ರಾಜ್ಯ ಹೆದ್ದಾರಿಯ ಸಂಚಾರ ಜೂನ್- ಆಗಸ್ಟ್‌ನಲ್ಲಿ 29 ದಿನ ಸ್ಥಗಿತಗೊಂಡಿತ್ತು.
-  2012ರಲ್ಲಿ ಭೂ ಕುಸಿತ, ಪ್ರವಾಹದಿಂದ 200 ಜನರು ಸತ್ತಿದ್ದರು. 5,600 ಮನೆಗಳು ಪ್ರವಾಹದಿಂದಾಗಿ ನಾಶವಾಗಿದ್ದವು.

ಪರಿಹಾರ ಪ್ರಹಸನ
ಇನ್ನು ಪರಿಹಾರ ಸಾಮಗ್ರಿಗಳದ್ದು ಇನ್ನೊಂದು ಕಥೆ. ಯಾರಿಗೆ ನಿಜವಾಗಿ ಪರಿಹಾರ ಸಿಗಬೇಕೋ ಅವರನ್ನು ಅದು ತಲುಪುತ್ತಲೇ ಇಲ್ಲ. ಇನ್ನು ನಿಜಕ್ಕೂ ಅಲ್ಲಿ ಸಂತ್ರಸ್ತರಿಗೆ ಏನು ಬೇಕೋ ಅದು ಸಹ ಸಿಗುತ್ತಿಲ್ಲ. ರೌದ್ರ ನೆರೆಯಲ್ಲಿ ಹಳ್ಳಿಗೆ ಹಳ್ಳಿಯೇ ಕೊಚ್ಚಿ ಹೋಗಿ ಮನೆಮಠ ಕಳಕೊಂಡವರು, ಜಮೀನು ನಾಶವಾದವರೆದುರು ಈಗ ನಿಂತಿರುವುದು ಭವಿಷ್ಯದ ಪ್ರಶ್ನೆ. ಮುಂದಿನ ತಮ್ಮ ಬದುಕು ಹೇಗೆ ಕನಿಷ್ಠ ಆಘಾತದಿಂದ ಚೇತರಿಸಿಕೊಂಡು ಬದುಕನ್ನು ಪುನರ್ ಕಟ್ಟಿಕೊಳ್ಳುವವರೆಗಾದರೂ ತಮ್ಮನ್ನು ಪೊರೆಯವ ಭರವಸೆಗಾಗಿ ಅವರ ಕಣ್ಣುಗಳು ಹುಡುಕಾಡುತ್ತಿವೆ. ಆದರೆ, ನೆರವಿನ ಹೆಸರಿನಲ್ಲಿ ವಿವಿಧ ರಾಜ್ಯಗಳಿಂದ, ಪೇಟೆ ಪಟ್ಟಣಗಳ ಸಂಘ-ಸಂಸ್ಥೆಗಳಿಂದ ದೊರಕುತ್ತಿರುವುದು, ಲೇಸ್, ಕುರುಕುರೆ, ಮಿಶ್ಚರ್, ಬಿಸ್ಕೇಟ್ ಪೊಟ್ಟಣ ಪ್ರವಾಹದ ಸ್ಥಳದ, ಅಲ್ಲಿನ ಸಂತ್ರಸ್ತರ ಸ್ಥಿತಿಗತಿಯ ಕಲ್ಪನೆಯೇ ಇಲ್ಲದ ಮಂದಿ ತಮಗೆ ತೋಚಿದ್ದನ್ನೆಲ್ಲಾ ತಂದು ವಿತರಿಸಿ, ಫೋಟೋ ತೆಗೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲೀಗ ಬಿಸಿಲು ಬಾರಿಸುತ್ತಿದೆ. ಹೀಗಿರುವಾಗ ಪರಿಹಾರದ ಹೆಸರಿನಲ್ಲಿ ರಗ್ಗುಗಳನ್ನು ತಂದು ಕೊಡುತ್ತಿದ್ದಾರೆ. ಹೊತ್ತಿನ ಹೊಟ್ಟೆ ಹೊರೆದುಕೊಳ್ಳಲು ಅಕ್ಕಿ, ಹಿಟ್ಟು, ಬೇಳೆ ಬೇಕಿದೆ. ಬಿಸ್ಕೇಟ್ ತಂದು ಕೊಡುತ್ತಿದ್ದಾರೆ. ಮುಂದಿನ ಬದುಕನ್ನು, ಉದ್ಯೋಗವನ್ನು, ಆರ್ಥಿಕ ಭದ್ರತೆಯನ್ನು ನಿರೀಕ್ಷಿಸುತ್ತಿದ್ದವರೆದುರು ಸ್ಟೀಲ್ ತಟ್ಟೆ ಲೋಟ ತಂದು ಹಾಕಲಾಗುತ್ತಿದೆ. ಸೂರೇ ಇಲ್ಲದವರೆದುರು ಸೋಲಾರ್ ವಿದ್ಯುತ್ ಉಪಕರಣಗಳು ಬಂದು ನಿಲ್ಲುತ್ತಿವೆ. ಹಳೇ ಬಟ್ಟೆಗಳ ರಾಶಿಯಂತೂ ರಸ್ತೆಯ ಬದಿಯಲ್ಲಿ ಬೆಂಗಳೂರಿನ ತ್ಯಾಜ್ಯದಂತೆ ಬಂದು ಬೀಳುತ್ತಿದೆ. ಅಷ್ಟಕ್ಕೂ ಇವ್ಯಾವುದೂ ನೈಜ ಸಂತ್ರಸ್ತರನ್ನು ತಲುಪುತ್ತಿಲ್ಲ. ಅವರಿನ್ನೂ ಆಘಾತದಿಂದ ಚೇತರಿಸಿಕೊಂಡು ತಮ್ಮ ತಾಣದಿಂದ ಹೊರಬರುತ್ತಲೇ ಇಲ್ಲ. ಎಷ್ಟೋ ಹಳ್ಳಿಗಳ ಸಂಪರ್ಕವೇ ಕಡಿದು ದ್ವೀಪವಾಗಿದೆ. ಅಲ್ಲಿಗೇ ಹೋಗುವ ಸಾಹಸಕ್ಕೆ ಯಾವ ಪರಿಹಾರ ವಿತರಕರೂ ಮುಂದಾಗಿಲ್ಲ. ಅವರ ಹೆಸರಿನಲ್ಲಿ ಯಾರ್ಯಾರೋ ಇವನ್ನೆಲ್ಲಾ ಕೊಂಡೊಯ್ದು ಮಜಾ ಉಡಾಯಿಸುತ್ತಿದ್ದಾರೆ. ಇಂಥ 'ಪುಕ್ಕಟೆ' ಸಾಮಗ್ರಿಗಳಿಗಾಗಿ ಪ್ರಮುಖ ರಸ್ತೆಗಳಲ್ಲಿ ಪೈಪೋಟಿ, ಜಗಳ. ಹೊಡೆದಾಟ ನಿತ್ಯ ದೃಶ್ಯವಾಗಿದೆ. ಪರಿಹಾರ ವಿತರಣೆಯನ್ನು ಸೂಕ್ತವಾಗಿ, ವ್ಯವಸ್ಥಿತವಾಗಿ ನಿಯಂತ್ರಿಸಲು ಸರಕಾರಕ್ಕೆ ವ್ಯವಧಾನವಿಲ್ಲ.

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!