ಪ್ರವಾಹೋತ್ತರಕಾಂಡ, ಭಾಗ-4
ನಿಜವಾದ ಹೀರೋ ಅಂದರೆ ಅವನಪ್ಪಾ! ಸಾವಿನ ದಾರಿಯಲ್ಲೇ ನಡೆಯುತ್ತಾ ಆ ಬಗ್ಗೆ ಕಿಂಚಿತ್ತೂ ಅಂಜಿಕೆಯಿಲ್ಲದೇ, ಇನ್ನೊಬ್ಬರ ಜೀವದ ರಕ್ಷಣೆಗಾಗಿ ತಿಂಗಳಿಂದ ಅನ್ನ- ನೀರು ಮರೆತು ಸಮಸ್ಯೆಗಳೊಂದಿಗೆ ಸೆಣೆಸುತ್ತಿದ್ದಾನಲ್ಲಾ, ವ್ಹಾವ್ ಆತನಿಗೊಂದು ಬಿಗ್ ಸಲಾಂ!
ಉತ್ತರಾಖಂಡದಲ್ಲಿ ಪ್ರವಾಹದ ಭೀಕರತೆ ತನ್ನ ಕಬಂಧ ಬಾಹುವನ್ನು ಚಾಚಿದ ಮರುದಿನವೇ ಕೇದಾರಕ್ಕೆ ಬಂದಿಳಿದ ಭಾರತೀಯ ಸೇನಾಪಡೆಯ ಯೋಧರು ಇವತ್ತಿಗೂ ಅಲ್ಲಿಂದ ಕದಲಿಲ್ಲ. ಹಗಲೂ ರಾತ್ರಿಗಳನ್ನು ಮರೆತು ದುಡಿಯುತ್ತಿದ್ದಾರೆ. ಸಂತ್ರಸ್ತರಿಗೆ ಆಹಾರ ನೀರು, ಸೂರನ್ನು ಒದಗಿಸಲು ಹೆಣಗಾಡುತ್ತಿರುವ ಸೇನಾನಿಗಳು ಸ್ವತಃ ದಿನಗಟ್ಟಲೇ ಉಪವಾಸ ದುಡಿಯಬೇಕಾದ ಸ್ಥಿತಿ. ಕನಿಷ್ಠ ಕುಡಿಯಲು ಶುದ್ಧ ನೀರೂ ಇಲ್ಲದ ಸನ್ನಿವೇಶ. ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಿಸಲೋಸುಗ ತೀರಾ ಅಪಾಯಕಾರಿ ಗಿರಿಕಂದರಗಳ ನಡುವಿನಲ್ಲಿ ತಾವು ಸಿಲುಕಿಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಉಸಿರು ಉಳಿದಿರುವವರನ್ನು ಸುರಕ್ಷಿತ ಜಾಗಕ್ಕೆ ತಲುಪಿಸುವುದು ಮೊದಲ ಆದ್ಯತೆ. ಗಾಯಗೊಂಡವರು, ರೋಗಿಗಳಿಗೆ ಚಿಕಿತ್ಸೆ, ಉಪಚಾರ ದೊರಕಿಸಿಕೊಡುವುದು ತಕ್ಷಣದ ಕರ್ತವ್ಯ. ಬದುಕಿರುವ ಕೊಟ್ಟ ಕೊನೆಯ ವ್ಯಕ್ತಿಯನ್ನೂ ಅಪಾಯದಿಂದ ಪಾರು ಮಾಡುವುದು ಕಾರ್ಯಾಚರಣೆಯ ಗುರಿ. ಮಳೆ ಸುರಿಯಲಿ, ಪ್ರವಾಹ ಉಕ್ಕೇರಲಿ. ಗುಡ್ಡವೇ ಕುಸಿಯಲಿ, ನಿಂತ ನೆಲವೇ ಮುಳುಗಲಿ, ಈತ ಎದೆಗುಂದುವ ಪ್ರಶ್ನೆಯೇ ಇಲ್ಲ. ಸತತ ಹತ್ತು ದಿನಗಳ ಕಾಲ ವಿಶ್ರಾಂತಿ, ಹಸಿವು, ನೀರಡಿಕೆ, ನಿದ್ರೆ ಎಂಬ ಪದಗಳನ್ನೇ ಮರೆತು ಭಾರತೀಯ ಯೋಧ ಉತ್ತರಾಖಂಡದಲ್ಲಿ ಸೇವೆ ಸಲ್ಲಿಸಿದ. ಅಲ್ಲಿದ್ದ ಎಲ್ಲ ಜೀವಗಳನ್ನೂ ಸುರಕ್ಷಿತವಾಗಿ ದಡ ತಲುಪಿಸಿದ. ಗುರಿಯನ್ನು ಬಿಟ್ಟು ಬೇರೇನೂ ಗೋಚರಿಸದ ಅರ್ಜುನನ ಏಕಾಗ್ರತೆ ಅವನದ್ದು.
12 ಸುದೀರ್ಘ ದಿನಗಳು ಕಳೆದವು, ಅಂದಿನ ದುರ್ಘಟನೆಯ ದಿನ ಬಂದಿತು, ಉತ್ತರಾಖಂಡದ ಆಕಾಶವು ತೆರೆದುಕೊಂಡು ಗುಡುಗುತ್ತಿತ್ತು. ಅಲ್ಲಿನ ಜನರ ಎದೆಯಲ್ಲಿ ಸಣ್ಣದೊಂದು ಕಂಪನ ಮೂಡಿಸಿತ್ತು. ಹಿಂದೂ ವಾರ್ಷಿಕ ಯಾತ್ರಾಸ್ಥಳವಾದ ಕೇದಾರ್‌ನಾಥ್, ಬದ್ರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ- ಅದರ ಉಚ್ಚ ದಿನಗಳಲ್ಲೇ ಹಲವಾರು ಜನರು ತಮ್ಮ ಮುಕ್ತಿಯ ಧ್ಯಾನ ಮಾಡುವಾಗಲೇ, ಭಕ್ತರು ಬಯಸಿದ್ದೇನು? ನಡೆದದ್ದೇನು? ಅಪಾಯದಲ್ಲಿ ಸಿಕ್ಕು ನಲುಗಿದವರು, ಜೀವಂತ ಇದ್ದವರನ್ನು ರಕ್ಷಿಸಲಾಯಿತು. ಕಾಣದಾದ ನೂರಾರು ಜನರು, ಅಲೆಗಳಲ್ಲಿ ಭೂಗತರಾದವರು, ಮಲಗಿದಾಗಲೇ ತೊಳೆದು ಹೋದ ಹಳ್ಳಿಗಳು, ಮನೆಗಳು, ಜನರು, ಪ್ರಾಣಿಗಳು, ಇನ್ನು ಏನೇನೋ ಹರಿದು ಹೋದದ್ದು.... ಮಾಸಲಾಗದ ದುರಂತವದು.
ಇನ್ನಾರೂ ಬದುಕಿದ್ದವರು ಅಪಾಯದ ಸ್ಥಳದಲ್ಲಿ ಉಳಿದಿಲ್ಲ ಎಂಬುದು ಖಚಿತವಾದ ಬಳಿಕ ಅವನ ಕಣ್ಣಿಗೆ ಕಂಡಿದ್ದು, ಕೊಳೆಯುತ್ತಾ ಬಿದ್ದಿದ್ದ ಹೆಣಗಳ ರಾಶಿ. ಅವು ಬೀರುತ್ತಿರುವ ದುರ್ವಾಸನೆ. ಅಲ್ಲಿ ಮೊಳೆಯುತ್ತಿರುವ, ಕ್ಷಣಕ್ಷಣಕ್ಕೂ ನೂರ್ಮಡಿಸುತ್ತಿದ್ದ ಕೊಳೆತ ಹೆಣಗಳಲ್ಲಿನ ಕೋಟ್ಯಂತರ ಬ್ಯಾಕ್ಟೀರಿಯಾಗಳು. ಅವು ಹೊತ್ತು ತರುತ್ತಿರುವ ವೈರಸ್‌ಗಳು. ಒಂದು ದಿನ ಹೆಚ್ಚಿಗೆ ಹೆಣಗಳು ಅಲ್ಲುಳಿದರೂ ಇನ್ನಷ್ಟು ಕೊಳೆತು, ಅವು ನೀರು, ಮಣ್ಣಿನಲ್ಲಿ ಬೆರೆತು ರೋಗಗಳು, ಸಾಂಕ್ರಾಮಿಕಗಳ ಸರಣಿಯೇ ಉತ್ತರಾಖಂಡವನ್ನು ವ್ಯಾಪಿಸಿಬಿಡುವ ಅಪಾಯಗಳು ಇದ್ದವು. ಹೀಗಾಗಿ ಬದುಕಿದ್ದವರನ್ನಷ್ಟೇ ಅಲ್ಲಿಂದ ದಾಟಿಸಿದರೆ ಮುಗಿದಿರಲಿಲ್ಲ ಸೇನಾ ಕರ್ತವ್ಯ, ಸತ್ತವರಿಗೂ ಒಂದು ಗತಿ ಕಾಣಿಸಬೇಕಿತ್ತು. ಅಲ್ಲಿ ಅನಾಥವಾಗಿ ಬಿದ್ದಿದ್ದ ಹೆಣಗಳ ರಾಶಿಯಲ್ಲಿ ಬಹುತೇಕ ಗುರುತೇ ಹತ್ತದಂಥ ಪರಿಸ್ಥಿತಿಯಲ್ಲಿದ್ದವು. ಹೀಗಾಗಿ ಅವರ ಗುರುತು ಪತ್ತೆ ಹಚ್ಚಿ, ಅದರ ಪಂಚನಾಮೆ ನಡೆಸಿ, ವಾರಸುದಾರರಿದ್ದರೆ ಅವರಿಗೊಪ್ಪಿಸಬೇಕು. ಇನ್ನು ವಾರಸುದಾರರೇ ಇಲ್ಲದ ಅನಾಥ ಶವಗಳನ್ನು ವ್ಯವಸ್ಥಿತವಾಗಿ ಸಂಸ್ಕಾರಕ್ಕೆ ಒಳಪಡಿಸಬೇಕು. ಒಂದೆರಡು ಶವಗಳಾಗಿದ್ದರೆ ದೊಡ್ಡದಾಗಿರಲಿಲ್ಲ. ನೂರಿನ್ನೂರಾಗಿದ್ದರೂ ಹೇಗೋ ನಡೆಯುತ್ತಿತ್ತು. ರಾಶಿ ಬಿದ್ದದ್ದು ಸಾವಿರ, ಸಾವಿರ ಮಂದಿಗಳ ಕಳೇಬರ. ಅದೂ ಒಂದೇ ಕಡೆ ಇರಲಿಲ್ಲ. ನದಿಯಲ್ಲಿ ತೇಲಿ ಇನ್ನೆಲ್ಲಿಗೋ ಹೋಗಿ ಬಿದ್ದಿದ್ದವು. ಮರ ಮಟ್ಟುಗಳಲ್ಲಿ ಸಿಲುಕಿಕೊಂಡಿದ್ದವು. ಕಟ್ಟಡಗಳ ಅವಶೇಷಗಳಡಿ ಕೊಳೆಯುತ್ತಿದ್ದವು. ಅವನ್ನು ಹುಡುಕಿ ತೆಗೆಯುವುದೇ ಪ್ರತ್ಯೇಕ ಟಾಸ್ಕ್ ಆಗಿತ್ತು. ಅಂತೂ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಕಣ್ಣಿಗೆ ಕಂಡಷ್ಟು ಹೆಣಗಳಿಗೆ ಕಾನೂನು ಪ್ರಕ್ರಿಯೆ ನಡೆಸಿ, ಅಲ್ಲಲ್ಲಿಯೇ ಕಟ್ಟಿಗೆಯನ್ನು ಹೊಂದಿಸಿ, ಕೊನೆಯ ನಮನದೊಂದಿಗೆ ಸೂಕ್ತ ಸಂಸ್ಕಾರವನ್ನು ತೋರಿಸಿದ್ದ ನಮ್ಮ ವೀರ ಯೋಧ. ಆ ಕ್ಷಣದಲ್ಲಿ ಅವನಿಗಿಂತ ಬಂಧು ಬೇರೆ ಯಾರಿರಲಿಕ್ಕೆ ಸಾಧ್ಯ ಹೇಳಿ? ಸಂತ್ರಸ್ತರ ಪಾಲಿಗೆ, ಮೃತರ ಭಾಗಕ್ಕೆ ಏನೂ ಅಲ್ಲದವನಾಗಿಯೂ ಎಲ್ಲವೂ ಆಗಿ ನಿಂತ ಭಾರತೀಯ ವೀರ ಸೇನಾನಿಯೇ ತುಸಿ ಗ್ರೇಟ್ ಹೋ!
ಇವತ್ತು ಕೇದಾರನಾಥ, ಬದರಿ, ಉತ್ತರಕಾಶಿಯ ಸುತ್ತಮುತ್ತಲಿನ ಹಳ್ಳಿಹಳ್ಳಿಗಳಲ್ಲಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಸ್ಥಳೀಯ ಸಂಕಷ್ಟಗಳ ಜೊತೆ ಮಹಾನ್ ಯುದ್ಧ ನಡೆಸಿ ಪ್ರತಿದಿನದ ಜಯವನ್ನು ಪಡೆಯುತ್ತಿರುವ ಭಾರತೀಯ ಸೇನಾಪಡೆಯ ಯೋಧರು, ಇಂಡೋ ಟಿಬೇಟಿಯನ್ ಗಡಿ ರಕ್ಷಣಾಪಡೆಯ ಸದಸ್ಯರು, ಆಪತ್‌ಸ್ಥಿತಿ ನಿರ್ವಹಣಾ ತಂಡದವರು, ಸ್ಥಳೀಯ ಪೊಲೀಸ್ ಸಿಬ್ಬಂದಿ... ಇವರುಗಳ ಸೇವೆಗೆ ಬೆಲೆ ಕಟ್ಟಲಾಗುವುದೇ ಇಲ್ಲ. ಜೂನ್ 16ರ ಸಮಯದ ಹತ್ತು ದಿನಗಳಂತೂ ಅವರದ್ದು ಅಕ್ಷರಶಃ ಸಮರವೇ. ಕೈಲಾಗದವರನ್ನು, ಮಕ್ಕಳನ್ನು, ವೃದ್ಧರನ್ನು ಎತ್ತಿಕೊಂಡು ನದಿ ದಾಟಿಸಿದ್ದಾರೆ. ಲಗೇಜುಗಳನ್ನು ತಲೆ ಮೇಲೆ ಹೊತ್ತು ನಡೆದಿದ್ದಾರೆ. ಮಹಿಳೆಯರ ಮಾನ ರಕ್ಷಣೆ ಮಾಡಿದ್ದಾರೆ. ಯಾತ್ರಾರ್ಥಿಗಳ ಪ್ರಾಣದ ಜತೆಗೆ ಅವರ ಬಳಿಯಿದ್ದ ಹಣ, ಅಮೂಲ್ಯ ವಸ್ತುಗಳನ್ನು ಜತನ ಮಾಡಿದ್ದಾರೆ. ಕೊಳೆತ ಹೆಣಗಳನ್ನು ಬರಗಿ ತೆಗೆದು ಅದಕ್ಕೆ ಗೌರವ ಸಂಸ್ಕಾರ ಕಲ್ಪಿಸಿದ್ದಾರೆ. ಮುಳುಗುತ್ತಿರುವ ಮನೆಗಳಿಗೆ ನುಗ್ಗಿ ಅಲ್ಲಿದ್ದವರನ್ನು ಹೊರತಂದು ದೇವರೆನಿಸಿಕೊಂಡಿದ್ದಾರೆ. ಮುರಿದು ಬಿದ್ದ ಸೇತುವೆಗಳನ್ನು ಬಲಿದಿದ್ದಾರೆ. ಕುಸಿದು ಕುಳಿತ ಗುಡ್ಡವನ್ನು ಅಗೆದು ದಾರಿ ಮಾಡಿಕೊಟ್ಟಿದ್ದಾರೆ. ಕೊಚ್ಚಿ ಹೋದ ರಸ್ತೆಗಳನ್ನು ನಿರ್ಮಿಸಿದ್ದಾರೆ. ಓಹ್ ಒಂದೇ, ಎರಡೇ? ಇಂಥ ಕೆಲಸವನ್ನು ಅವರು ಮಾಡಿಲ್ಲ ಎನ್ನುವದೇ ಇಲ್ಲ. ಒಂದೊಮ್ಮೆ ಯೋಧರ ಪಡೆಯೊಂದು ಇಲ್ಲದೇ ಹೋಗಿದ್ದಿದ್ದರೆ ಉತ್ತರಾಖಂಡ ಇವತ್ತು ಈಗ ಆಗಿರುವ ಹತ್ತು ಪಾಲು ದೊಡ್ಡ ನರಕಕೂಪವಾಗಿ ಮಾರ್ಪಟ್ಟಿರುತ್ತಿತ್ತು. ಅದನ್ನು ಕಲ್ಪನೆ ಸಹ ಮಾಡಿಕೊಳ್ಳಲಾಗುವುದಿಲ್ಲ.
ಬದರಿ ಸಮೀಪ ಜೋಶಿಮಠದಲ್ಲಿ ಬೀಡು ಬಿಟ್ಟಿರುವ ಕನ್ನಡಿಗ, ಉತ್ತರ ಕನ್ನಡ ಜಿಲ್ಲೆಯ ಚಂದು ನಾಯಕ್ ಹೇಳುವ ಪ್ರಕಾರ, ಕಣ್ಣೆದುರೇ ಪ್ರವಾಹದಿಂದ ಉಕ್ಕಿ ನದಿ ಹರಿಯುತ್ತಿದ್ದರೂ ಕುಡಿಯಲು ನೀರು ಸಿಗುತ್ತಿರಲಿಲ್ಲ. ನದಿಗೆ ಬೊಗಸೆ ಅದ್ದಿದರೆ ಯಾವುದೋ ಮೃತ ಶರೀರ ತೇಲಿ ಬರುತ್ತಿತ್ತು. ಕೊನೆಗೆ ಕೆಲವರು ಗುಡ್ಡದ ಮಣ್ಣನ್ನು ಹಿಂಡಿ ತೆಗೆದು, ಆ ನೀರನ್ನೇ ಸೋಸಿ ಕುಡಿದಿದ್ದಾರೆ. ಕಾಡುಗಳಲ್ಲಿ ಸಿಕ್ಕುವ ಅಂಜೂರ, ಆಡು (ಸ್ಥಳೀಯವಾಗಿ ಜನಪ್ರಿಯವಾಗಿರುವ ಒಂದು ಜಾತಿಯ ಹಣ್ಣು) ಮತ್ತಿತರ ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದಿದೆ. ಬಟ್ಟೆ ಬದಲಿಸುವುದು, ಸ್ನಾನ ಮರೆತೇ ಹತ್ತು ದಿನಗಳಾಗಿತ್ತು. ಸಾಲದ್ದಕ್ಕೆ ಆ ಅರಣ್ಯದಲ್ಲಿ ಮಳೆಯ ನಡುವೆ ಸಾಮೂಹಿಕ ಶವ ಸಂಸ್ಕಾರಕ್ಕೆ ಕಟ್ಟಿಗೆ ಒಟ್ಟು ಮಾಡುವುದೇ ಒಂದು ಸಾಹಸವಾಗಿತ್ತು. ಎಷ್ಟೋ ಹಳ್ಳಿಗಳಿಗೆ ಆಹಾರ ಮತ್ತು ಕುಡಿಯುವ ನೀರಿನ ಸರಬರಾಜು ಇಲ್ಲದೇ ಹೋಯಿತು. ಮತ್ತು ಪ್ರಸಕ್ತ ಸನ್ನಿವೇಶದ ನೋವಿನೊಂದಿಗೆ ಅವರು ವ್ಯವಹರಿಸಬೇಕಾಗಿತ್ತು. ಭವಿಷ್ಯವು ಭಾರವಾದಂತೆ ಅವರಿಗೆ ಧೈರ್ಯ ಸಾಂತ್ವನ ನೀಡಬೇಕಿತ್ತು.
ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಗಡಿ ಭದ್ರತಾಪಡೆಯ ಸದಸ್ಯನೊಬ್ಬನ ಪ್ರಕಾರ ಆಗಿನ ಸ್ಥಿತಿಯಲ್ಲಿ ಅದೆಷ್ಟೋ ಯೋಧರು ಮೂರ್ನಾಲ್ಕು ದಿನ ಆಹಾರವನ್ನೇ ಕಾಣಲಿಲ್ಲ. ಸಂತ್ರಸ್ತರಿಗೆ ಆಹಾರ ಪೊಟ್ಟಣಗಳನ್ನು ಹೊತ್ತು ತರುತ್ತಿದ್ದ ಯೋಧರಿಗೆ ನಾನಾ ಕಾರಣಗಳಿಂದ ಎರಡು ದಿನ ಸೂಕ್ತ ಆಹಾರವೇ ಪೂರೈಕೆಯಾಗಲಿಲ್ಲ. ಇಂದೂ ಸಹ, ಗೌರಿ ಕುಂಡದ ಮೇಲ್ಭಾಗದ ದಟ್ಟ ಅರಣ್ಯ ಭಾಗದ ಕ್ಯಾಂಪ್‌ಗಳಲ್ಲಿ ಉಳಿದಿರುವ ಯೋಧರಿಗೆ ಸೂಕ್ತ ಅಹಾರ, ನೀರು ಸಿಗದ ಸ್ಥಿತಿಯಿದೆ. ಮಳೆ ಬಂದರೆ ಕನಿಷ್ಠ ಆಶ್ರಯವೂ ಇಲ್ಲವಾಗಿದೆ. ಪಾಲಿಥೀನ್ ಹಾಳೆಗಳಿಂದ ಮುಚ್ಚಿದ ಡೇರೆಯೇ ಅವರಿಗೆ ಚಳಿ, ಮಳೆಯಿಂದ ರಕ್ಷಿಸುವ ಆಸರೆಯಾಗಿದೆ. ಇನ್ನೂ ಪ್ರವಾಹ ಪ್ರದೇಶದಲ್ಲಿ ಕನಿಷ್ಠ 5 ಸಾವಿರ ಯೋಧರು, ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.
'ಸೈನ್ಯದ ಆಜ್ಞೆಯ ಪ್ರಕಾರ ಯಾತ್ರಾರ್ಥಿಗಳ ನಿರ್ಗಮನ ಮಾಡಿಸುವುದು ನಮ್ಮ ಗುರಿಯಾಗಿತ್ತು. ಮೊದಲಿಗೆ ರೋಗಿಗಳು, ದೈಹಿಕವಾಗಿ ಗಾಯಗೊಂಡವರು, ಹಿರಿಯರು. ನಂತರ ಮಕ್ಕಳು, ಹೆಂಗಸರು' ಎಂದು ಇನ್ನೊಬ್ಬ ಯೋಧ ನಾಯರ್ ಹೇಳುತ್ತಾರೆ.
ಕನ್ನಡಿಗ ಯೋಧ ಕಿರಣ್ ಪ್ರಕಾರ 'ಜೂನ್ 16ರಂದು ಮೊದಲ ಬಾರಿಗೆ ಬೆಳಗ್ಗಿನ ಏಳು ಗಂಟೆಗೆ ಪ್ರವಾಹ ಬಂದಾಗ, ಅದು ಭೂಕಂಪ ಎಂದೇ ಎಲ್ಲರೂ ಪರಿಗಣಿಸಿದ್ದರು. ಜನ ಎಣಿಕೆ ಮಾಡುವಷ್ಟರಲ್ಲಿ ಪ್ರವಾಹದ ನೀರು ಬಂದು ಕೋಣೆ, ಮನೆ, ಊರು, ಕೇರಿ ಎಲ್ಲವನ್ನು ನುಂಗಿ ಹಾಕಿತ್ತು. ಅದೊಂದು ರಾತ್ರಿಯ ಕೆಟ್ಟ ಕನಸಾ ಎನ್ನುವಂತೆ ನಡೆದು ಹೋಗಿತ್ತು. ಉತ್ತರಾಖಂಡದ ಪ್ರತಿಯೊಂದು ಮೂಲೆಯಲ್ಲೂ ಎಲ್ಲ ಕಳೆದುಕೊಂಡ, ಸಹಿಸಲಾರದ ನೋವಿನ ಕಥೆಗಳಿವೆ. ಬದುಕಿದವರ ಸುತ್ತ ಮುತ್ತಲೂ ಹೆಣಗಳ ರಾಶಿ ಹುದುಗಿದೆ. ಅಲ್ಲಲ್ಲಿ ಬಿದ್ದು ಹೋದ ಅಳಿದುಳಿದ ಪದಾರ್ಥಗಳನ್ನೇ ಸೇವಿಸಿ, ಕಲುಷಿತ ನೀರು ಕುಡಿದು ಯೋಧರು ಬದುಕಬೇಕಾಯ್ತು. ಗಾಯಗೊಂಡ ಕುಟುಂಬದ ಸದಸ್ಯರನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗಬೇಕಾಯ್ತು. ಕೆಲವರು ನೂರಾರು ಜನರ ಗುಂಪಿನಲ್ಲಿ ಬಂದವರಿದ್ದರು. ದುರ್ದಿನದ ನಂತರ ಎಲ್ಲರ ಮುಖಗಳನ್ನು ಹುಡುಕುತ್ತಲೇ ಕಳೆಯುತ್ತಿದ್ದಾರೆ'.
ದುರಂತ ಕತೆಯ ಇನ್ನೊಂದು ಮುಖವೆಂದರೆ, ಸ್ಥಳೀಯ ಮಟ್ಟದಲ್ಲಿ ನಡೆದಿರುವಂತಹ ಅನಾಹುತ. ಸ್ಪಿಯರ್ ಇಂಡಿಯಾ (ಎನ್‌ಜಿಓ) ಸಮೀಕ್ಷೆ ಪ್ರಕಾರ 700 ಮನೆಗಳು ರುದ್ರಪ್ರಯಾಗ ಜಿಲ್ಲೆಯಲ್ಲಿ ನಾಶವಾಗಿವೆ. ಆದರೆ ಸರ್ಕಾರವು ಸಾವಿರ ಪ್ರಾಣಿಗಳು ಮಾತ್ರ ಸತ್ತುಹೋಗಿವೆ ಎಂದು ಹೇಳಿದೆ. ಆದರೆ ಸರ್ಕಾರೇತರ ವರದಿಗಳು ಐದು ಸಾವಿರದಿಂದ ಆರು ಸಾವಿರದವರೆಗೆ ಎನ್ನುತ್ತಾರೆ. ಜನರು ತಮ್ಮ ಮನೆ, ಹೊಲ, ಪ್ರಾಣಿಗಳನ್ನು ಕಳೆದುಕೊಂಡರು. ಅವರ ಹೊಲಗಳಿಗೆ ಇದ್ದ ನೀರಾವರಿ ಚಾನೆಲ್‌ಗಳು ಕಡಿದುಹೋಗಿವೆ' ಎನ್ನುತ್ತಾರೆ ಡೆಹ್ರಾಡೂನ್‌ನ ಪೀಪಲ್ಸ್ ಸೈನ್ಸ್ ಇನ್‌ಸ್ಟಿಟ್ಯೂಟ್ ನಿರ್ದೇಶಕ ರವಿ ಚೋಪ್ರಾ. ಅವರೆಲ್ಲರಿಗೆ ಈಗ ಏಕೈಕ ಆಸರೆ, ಭರವಸೆ ಭಾರತೀಯ ಸೇನೆ.
ಸೈನಿಕರ ಎದೆಯಾಳದಿಂದ ಮೊದಲು ಬರುವ ಮಾತು 'ಸುರಕ್ಷೆ, ಗೌರವ ಮತ್ತು ದೇಶದ ಯೋಗಕ್ಷೇವು. ಇದು ಯಾವಾಗಲೂ ಮತ್ತು ಪ್ರತಿಬಾರಿಯೂ', ದುರಂತದ ಸಂದರ್ಭದಲ್ಲಿಯೂ ಇದೇ ಮೊದಲಿಗೆ ಬರುತ್ತದೆ. ಅಲ್ಲಿ ಸೈನಿಕರು ಸ್ವಾರ್ಥರಹಿತರಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಿರುವುದು ನೋಡಿದರೆ ಇದು ನಿಜ ಎನಿಸುತ್ತದೆ. ಅಲ್ಲೀಗ ಯೋಧರು ತಮ್ಮ ಜೀವನದ ಬಗ್ಗೆ ಯೋಚಿಸುತ್ತಿಲ್ಲ. ಅಲ್ಲಿ ಸಾಂಕ್ರಾಮಿಕ ರೋಗಗಳು ಹರಡಬಹುದೆಂಬ ಎಚ್ಚರಿಕೆಗೂ ತಲೆ ಕೆಡಿಸಿಕೊಳ್ಳದೇ ದುಡಿಯುತ್ತಿದ್ದಾರೆ ಎನ್ನುತ್ತಾರೆ ಸ್ಕ್ವಾಡ್ರನ್ ಲೀಡರ್ ಮನೋಜ್ ಗೌತಮ್.
ಅಲ್ಪ ನಿದ್ದೆ, ತುಸು ವಿರಾಮ ತೆಗೆದುಕೊಂಡು ನಮ್ಮ ಸೈನಿಕರು ಸಂತ್ರಸ್ತರಿಗೆ ನೀರು, ಆಹಾರ, ಕ್ಷೇಮ ನೋಡಿಕೊಂಡರು, ದೇವರನ್ನು ನೋಡಲು ಬಂದಿದ್ದ ಎಷ್ಟೋ ನೊಂದವರಿಗೆ ಸೈನಿಕರೇ ನಿಜವಾದ ದೇವರಾಗಿ ಕಂಡು ಬಂದದ್ದು ಆಚ್ಚರಿಯೇನಲ್ಲ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in