ಅಂಕಣಗಳು

ಸ್ಟಾರ್ ವೋಟ್ಲು ಫುಡ್ಡು, ಮಲ್ಗಕ್ಕೆ ಕುರ್ಲಾನ್ ಬೆಡ್ಡು

ಮೈಲಾರಿ, ಅಮಾಸೆನೂವೆ ವತ್ತಾರೆ ವತ್ತಾರೆ ಖಾಲಿ ಚೀಲ ಹಿಡ್ಕಂಡು ಸಿಯೆಮ್ಮು ...

ಮೈಲಾರಿ, ಅಮಾಸೆನೂವೆ ವತ್ತಾರೆ ವತ್ತಾರೆ ಖಾಲಿ ಚೀಲ ಹಿಡ್ಕಂಡು ಸಿಯೆಮ್ಮು ಸಿದ್ರಾಮಣ್ಣೋರು ಮನೆ ಮುಂದ್ಲಾಗಡೆ ನಿಂತ್ಕಂಬುಟ್ಟಿದ್ರು. 'ಸಿದ್ರಾಮಣ್ಣ, ಬಾರಣ್ಣೋ' ಅಂತ ಕೂಗಕ್ಕೆ ಸುರು ಹಚ್ಕಂಡ್ರು.
ಸಿದ್ರಾಮಣ್ಣ ಕಣ್ಣುಜ್ಕಂಡು ಎದ್ದು ಬಂದ್ರು. 'ಮೂದೇವಿ ಮುಂಡೇವಾ, ಇದ್ಯಾಕಲೇ, ಚೀಲ ಹಿಡ್ಕಂಡು ಹಿಂಗೆ ನಿಂತ್ಕಂಡಿದ್ದೀರ?' ಅಂತ ಕೇಳುದ್ರು.
'ಬರೇ ಚೀಲ ಅಲ್ಲ ಕಣಣ್ಣೋ, ಮೂವತ್ತು ರೂಪಾಯಿ ಜೇಬ್ನಾಗೆ ಅದೆ. ಅದುನ್ನ ತಕ್ಕೋ, ಕೊಡು 30 ಕೆಜಿ ಅಕ್ಕಿ' ಅಂದ ಮೈಲಾರಿ. 'ನೋಡ್ದಾ ಬಡ್ಡಿ ಹೈದನ್ನ, ಅಲ್ಲಲೇ ಇದೇನು ರೇಸನ್ ಅಂಗ್ಡಿ ಅಂತ ತಿಳ್ಕಂಡಾ? ಡಿಪೋತವ ವೋಗಲೆ ಅಕ್ಕಿ ಕೊಟ್ಟಾರು' ಅಂದ್ರು ಸಿದ್ರಾಮಣ್ಣ. 'ಸಂದಾಕದೆ ಈ ಯಾವಾರ, ಅಲ್ಲೋದ್ರೆ ಡಿಪೋದೋನು ಇನ್ನಾ ಅಕ್ಕಿ ಬಂದಿಲ್ಲ. ಅಕ್ಕಿ ಮ್ಯಾಗಿನ ಧೂಳೂ ಬಂದಿಲ್ಲ ಅಂತಾನೆ. ನಿಂತಾವ ಬಂದ್ರೆ ತಿರ್ಗೆ ಅಲ್ಲೇ ವೋಗು ಅಂತಾಯಿದ್ದೀಯ. ನಂಗೆ ಅದೆಲ್ಲ ಗೊತ್ತಿಲ್ಲ ಕಣಣ್ಣೋ. ಅಕ್ಕಿ ಏನರ ತಕ್ಕಂಡು ಬರ್ದೆವೋದ್ರೆ ವೊಟ್ಗೆ ಹಿಟ್ಟು ಹಾಕಕಿಲ್ಲ ಅಂತೇಳಿ ನನ್ನೆಂಡ್ರು ಯೋಳಿ ಕಳ್ಸವ್ಳೆ. ಸುಮ್ಕೆ ಅಕ್ಕಿ ಕೊಡಣ್ಣೋ' ಅಂದ ಮೈಲಾರಿ.
'ನಮ್ ಮನ್ಯಾಗೂ ಅಕ್ಕಿ ಸ್ಟಾಕು ಇಲ್ಲ. ಬಂದ್ಮೇಕೆ ಕೊಡ್ತೀನಿ. ಈವಾಗ ಸುಮ್ಕೆ ವೋಗ್ರಪ್ಪ' ಅಂತೇಳುದ್ರು ಸಿದ್ರಾಮಣ್ಣ. 'ಅಯ್ತು ಬುಡಣ್ಣ, ನಂತಾವ ವೊಂದು ಮನವಿ ಪತ್ರ ಐತೆ. ಅದುನ್ನಾದ್ರೂ ತಕ್ಕಂಬುಡಣ್ಣೋ' ಅಂದ ಮೈಲಾರಿ. 'ಏನ್ಲಾ ಅದು ಪತ್ರ. ನಾನು ಇನ್ನೂವೆ ಜನ್ತಾ ದರ್ಸನ ಸುರು ಹಚ್ಕಂಡಿಲ್ಲ. ಎಲ್ಲಾರ ವೋಗ್ಲಿ ಕೊಡ್ಲಾ' ಅಂದ್ರು ಸಿದ್ರಾಮಣ್ಣ.
'ಏನಿಲ್ಲ, ಹೆಂಗೂ ಮೂವತ್ತು ಕೆಜಿ ಅಕ್ಕಿ ಕೊಡೋದು ಅಂತ ಆಗದೆ. ಕಮ್ಮಿ ರೇಟ್ಗೆ ವಿಸ್ಕೀನೂವೆ ಕೊಡ್ತೀವಿ ಅಂತ ಯೋಳ್ಬುಟ್ಟಿದ್ದೀರಿ. ಹಂಗೇ ವಾರುಕ್ಕೆ ಒಂದಪ ಕೆಜಿ ಚಿಕನ್ನು, ಕೆಜಿ ಮಟ್ಟನ್ನು ಕೊಡುಸ್ಬುಟ್ರೆ ಬೋ ಸಂದಾಕಿರ್ತದೆ ಅಲ್ವಾ ?' ಅಂದ ಮೈಲಾರಿ.
'ಲೇ ಚಿಕನ್ನು, ಮಟನ್ನು ಕೊಟ್ಬುಟ್ರೆ ಅದುಕ್ಕೆ ಮಸಾಲೆ ನಿನ್ ಮಾವ ತಂದಾಕ್ತನೇನ್ಲಾ ? ಅದುಕ್ಕೂ ಯವಸ್ಥೆ ಮಾಡ್ಬುಣಣ್ಣೋ' ಅಂತ ಅಮಾಸೆ ಕೇಳ್ಕಂಡ. ಮಸಾಲೆ ಬರೀ ಕೈನಾಗೆ ಹೆಂಗಲಾ ರುಬ್ಬಾದು. ಹಂಗೆ ವೊಂದು ಮಿಕ್ಸಿಗೂ ಏರ್ಪಾಟು ಮಾಡ್ಬುಣ್ಣೋ' ಅಂದ ಮೈಲಾರಿ.  'ಹೌದು ಕಣಲೇ, ಈ ಐಡಿಯಾನೇ ನಂಗೆ ಬರಿಲ್ವೇ ?' ಅಂದ್ರು ಸಿದ್ರಾಮಣ್ಣ. 'ನಿನ್ ಜತ್ಯಾಗಿರೋರು ಮನೆಹಾಳು ಮಾಡೋ ಐಡಿಯಾ ಕೊಡೋರು. ನಮ್ಮುನ್ನ ಜತ್ಯಾಗೆ ಮಡಿಕ್ಕಂಡ್ರೆ ಇಂಥ ಐಡಿಯಾಗಳ್ನ ನಾವೇ ಕೊಡ್ತೀವೇಳು. ಅಕ್ಕಿ ಕೊಡೋವಾಗಿ ವಸಿ ನೋಡ್ಕಂಡು ಕೊಡಕ್ಕೆ ಯೋಳಣ್ಣೋ. ಸೋನಾ ಮಸೂರಿ ಕೊಟ್ರೆ ಬಿರ್ಯಾನಿ ಬೋ ಪಸಂದಾಗಿ ಆಯ್ತದೆ. ವೊಲೆ ಮ್ಯಾಲೆ ಅಕ್ಕಿ ಬೇಯ್ತಾ ಇದ್ರೆ ಘಮ್ಲು ಮೂರು ವೂರು ಸುತ್ಕಂಡು ಬರ್ಬೇಕು ತಿಳೀತಾ ?' ಅಂದ ಮೈಲಾರಿ.
'ಚಿಕನ್ನು, ಮಟನ್ನು ಗಡದ್ದಾಗಿ ತಿಂದ್ಬುಟ್ಟು ಮಲಿಕ್ಕಂಡ್ರೆ ಕೈಕಾಲು ವೊತ್ತಕ್ಕೆ ಆಳುಕಾಳು ಬ್ಯಾಡ್ವಾ ? ಯೋಳುದ್ರೆ ಅದುನ್ನೂ ಯವಸ್ಥೆ ಮಾಡಾವ' ಅಂದ್ರು ಸಿದ್ರಾಮಣ್ಣ. 'ಬ್ಯಾಡ ಬುಡಣ್ಣ ಅದುನ್ನೆಲ್ಲಾ ಯೋಳುದ್ರೆ ವಸಿ ಓವರ್ ಆಗೋಯ್ತದೆ. ಹಂಗೂ ಏನರ ಬೇಕು ಅಂತಂದ್ರೆ ಎಣ್ಣೆ ಸಾಪು ವೋನರ್ರು ಮಲ್ಯಪ್ನೋರ್ಗೆ ಪೋನಾಕುದ್ರೆ ಕ್ರಿಕೆಟ್ಟು ನಡ್ಯೋವಾಗ ಮೈದಾನ್ದಾಗೆ ಕುಣೀತರಲ್ಲ ಹೆಣ್ ಹೈಕ್ಳು ಅವ್ರುನ್ನೇ ಕಳುಸ್ತರೆ' ಅಂದ ಮೈಲಾರಿ.
'ವೋ, ಇವ್ನು ದೊರೆ ಮಗ, ಕಳುಸ್ತರೆ ಕಳುಸ್ತರೆ ನಡೀರಲೇ ಅಚ್ಗೆ' ಅಂತೇಳಿ ಸಿದ್ರಾಮಣ್ಣ ಅವಾಜು ಬುಟ್ರು. ಪಾಪ, ಮೈಲಾರಿ, ಅಮಾಸೆ ಖಾಲಿ ಚೀಲ ನೇತಾಕ್ಕಂಡು ಅಚ್ಗೆ ಬತ್ತಾಯಿದ್ದಂಗೆ ಅಪೋಜಿಸನ್ ಲೀಡ್ರು ಕುಮಾರಣ್ಣ ಸಿಕ್ಕುದ್ರು.
'ಏನ್ರಲೇ ಇಲ್ಲಿ, ಯಾರು ಪವರ್ಗೆ ಬಂದ್ರೆ ಅವ್ರು ಮನೆಗೆ ವೊಂಟೋಯ್ತಿರ ಅಲ್ವಾ ?' ಅಂದ್ರು ಕುಮಾರಣ್ಣ. 'ಏನಿಲ್ಲಣ್ಣೋ, ಸಿದ್ರಾಮಣ್ಣೋರ್ನ ಅಕ್ಕಿ ಕೇಳಕ್ಕೆ ಅಂತ ಬಂದ್ವಿ ಅಷ್ಟೇಯಾ' ಅಂದ ಮೈಲಾರಿ. 'ಕೈ ಪಕ್ಸುದೋರು ಎಲ್ರು ಬಾಯ್ಗೆ ಅಕ್ಕಿಕಾಳು ಹಾಕೋ ಪ್ಲಾನು ಮಾಡ್ಕಂಬುಟ್ಟವ್ರೆ. ನಮ್ ಪಕ್ಸ ಏನರ ಸರ್ಕಾರ ಮಾಡಿದ್ರೆ ಜನ್ರು ಲೈಫೇ ಚೇಂಜು ಆಗೋಯ್ತಾ ಇತ್ತು' ಅಂದ್ರು ಕುಮಾರಣ್ಣ.
'ಅಂದೆಂಗೆ ?'ಅಂತ ಅಮಾಸೆ ಕೇಳ್ದ. 'ಬರೇ ಅಕ್ಕಿ ಏನ್ಲಾ ಬಂತು. ದಡ್‌ಮುಂಡೇವಾ, ಇರಕ್ಕೆ ಡೂಪ್ಲೆಕ್ಸ್ ಹೌಸು,  ವುಣ್ಣಕ್ಕೆ ಫೈವ್‌ಸ್ಟಾರ್ ವೋಟ್ಲು ಫುಡ್ಡು, ಮಲ್ಗಕ್ಕೆ ಕುರ್ಲಾನ್ ಬೆಡ್ಡು, ವೋಡಾಡಕ್ಕೆ ಗಾಡಿ, ಇನ್ನ ಏನೇನೂ' ಅಂತೇಳುದ್ರು ಕುಮಾರಣ್ಣ. ತಲೆಸುತ್ತು ಬಂದು ಮೈಲಾರಿ, ಅಮಾಸೆದು ಕೆಳುಕ್ಕೆ ಬಿತ್ತು ಬಾಡಿ.


- ಕೆ.ವಿ.ಪ್ರಭಾಕರ್

prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ