ದಾನ, ಧರ್ಮ ಮಾಡೋರಿಗೆ, ಗುಡಿ ಗೋಪುರಗಳನ್ನು ಕಟ್ಟಿದವರಿಗೆ ಕರೆದು ಸನ್ಮಾನ ಮಾಡುವುದು ಕಾಮನ್. ನಮ್ಮ ಕನ್ನಡ ಚಿತ್ರರಂಗದಲ್ಲೂ ಇಂಥದೊಂದು ಸನ್ಮಾನ ಬಯಸಿದ ಪ್ರಸಂಗವೊಂದು ನಡೆದಿದೆ. ಪಾಪ ಯಾಕೋ ಈ ಹಳೆ ಸಂಪ್ರದಾಯವನ್ನು ನಡು ರಾತ್ರಿ ಕನಸಿನಲ್ಲಿ ಕಂಡವರಂತೆ ಎದ್ದು ಕೂತು ಸನ್ಮಾನದ ಮಾಲೆಯನ್ನು ಕನವರಿಸುತ್ತಿರುವ 'ಸಾಯಿ' ಭಕ್ತ ಹೆಣ್ಣು ಮಕ್ಕಳ ಪಾಲಿಗೆ ಆರಾಧ್ಯಧೈವ. ಹೀಗಾಗಿ ಸಾರ್ವಜನಿಕ ಸನ್ಮಾನ ಬಯಸಿದ್ದರಲ್ಲಿ ಏನೂ ತಪ್ಪಿಲ್ಲ ಬಿಡಿ. ಯಾಕೆಂದರೆ ಜನ ಸಿನಿಮಾ ನೋಡಿ ಅಳುವುದನ್ನೇ ಮರೆತಿರುವಾಗ 'ದೇವರು ಕೊಟ್ಟ ತಂಗಿ'ಯನ್ನು ಒಪ್ಪಿಸಿಕೊಳ್ಳಿ ಎಂದವರು. ಅಲ್ಲದೆ ತಾನು 'ನೂರು' ಚಿತ್ರಗಳ ಸರದಾರನಾಗುತ್ತಿರುವ ಈ ಸಂದರ್ಭದಲ್ಲಿ ಯಾಕೆ ಯಾರೂ ಒಂದು ಸನ್ಮಾನ ಮಾಡುತ್ತಿಲ್ಲ? ಎಂದು ಅತ್ತು, ಕಣ್ಣೀರು ಹಾಕಿದ್ದಾರೆ. ಯಾರೋ ಪಾಪ 'ಅಯ್ಯೋ ಸುಮ್ನೆ ಅವರ ಬಳಿ ಹೋಗಿ ಕೇಳಿ. ನಿಮ್ಗೆ ಸನ್ಮಾನ ಗ್ಯಾರಂಟಿ' ಅಂತ ಊದಿದ್ದೇ ತಡ, ಸೀದಾ ರಾಜ್‌ಕುಮಾರ್ ರಸ್ತೆಗೆ ಬಂದು ಆ ಮನೆ ನೋಡಿ ಎಂಥ 'ಪ್ರೇಮಲೋಕ'ವಯ್ಯ ಎಂದು ತಮ್ಮದೇ ಸ್ಟೈಲಿನಲ್ಲಿ ಹೊಗಳುತ್ತಲೇ 'ಸಾರ್ ನನ್ದು ನೂರ್ ಸಿನಿಮಾ ಆಗಿದೆ. ಒಂದ್ ಸನ್ಮಾನ ಮಾಡಿ' ಅಂತ ಕೇಳಿದರಂತೆ. ಅಲ್ಲಿರುವವರು 'ಮಂಜಿನ ಹನಿ'ಗಳಲ್ಲಿ ನೆನೆಯುತ್ತಲೇ ಯಾವ ಸಿನ್ಮಾ ಮಾಡದೆ 'ಏಕಾಂಗಿ'ಯಾಗಿ ಕೂತಿರುವಾಗ ಇವರ ಸನ್ಮಾನ ವಿಷ್ಯ ಕಿವಿಗೆ ಬಿಟ್ಟುಕೊಂಡು ಸುಮ್ಮನಾದರಂತೆ. 'ನೋಡಿ ನಮ್ ಉದ್ಯಮದ ಸ್ಥಿತಿ ಎಲ್ಲಿಗೆ ಬಂತು. ಸಾಧನೆ ಮಾಡಿದವರೇ ಬಂದು ನನ್ಗೊಂದು ಸನ್ಮಾನ ಮಾಡಿ ಅಂತ ಕೇಳಂಗಾಗಿದೆ' ಎಂದು ಜೋಕ್ ಕಟ್ ಮಾಡಿದ್ದು ಸದ್ಯಕ್ಕೆ ಇನ್ನು 'ಗರ್ಭದ ಗುಡಿ' ಮುಟ್ಟಿಲ್ಲವಂತೆ. ಈ ಸನ್ಮಾನ ವಿಷ್ಯ ಕೇಳಿ ಸುಮ್ಮನೆ ಏನ್ 'ಕಲಿಕಾಲ' ಬಂತಪ್ಪಾ... ಅನ್ನಬೇಡಿ. ಯಾಕೆಂದರೆ ಸಾಯಿ ಭಕ್ತರು ಸಿಟ್ಟಾಗುತ್ತಾರೆ.
ಸಿದ್ದರಾಮಯ್ಯ ಇನ್ನೂ ಪ್ರತಿಪಕ್ಷ ನಾಯಕ!
ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಸುಮಾರು ವರ್ಷ ಅಜ್ಞಾತವಾಸ ಅನುಭವಿಸಿದ ಕಾಂಗ್ರೆಸ್ಸಿಗರಿಗೆ ಇನ್ನೂ ತಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಂಬಲೇ ಆಗುತ್ತಿಲ್ಲ! ಏಕೆ ಗೊತ್ತೆ? ಮೈಸೂರು ನಗರ ಕಾಂಗ್ರೆಸ್ ವತಿಯಿಂದ ನೀಡಲಾಗುತ್ತಿರುವ ಪದಾಧಿಕಾರಿಗಳ ನೇಮಕಾತಿ ಪತ್ರದಲ್ಲಿ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ನಿಮ್ಮನ್ನು ನೇಮಕ ಮಾಡಲಾಗಿದೆ ಎಂಬ ಒಕ್ಕಣೆ ಇರುವ ಪತ್ರ ನೀಡಲಾಗುತ್ತಿದೆ! ಕಚೇರಿಯಲ್ಲಿರುವ ರೆಡಿಮೇಡ್ ಪತ್ರಕ್ಕೆ ಪದಾಧಿಕಾರಿಯ ಹೆಸರು ಹಾಕಿ ನೀಡುತ್ತಿದ್ದರೋ ಇಲ್ಲವೋ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಇನ್ನೂ ನಗರ ಘಟಕದ ಗಮನಕ್ಕೆ ಬಂದಿಲ್ಲವೋ ಎಂಬುದು ಗೊತ್ತಾಗಿಲ್ಲ.
ಸುಳ್ಳು ಹೇಳಿ ಮದುವೆ ಮಾಡಲಾಗ್ತಿಲ್ಲ!
ಛತ್ರಗಳಲ್ಲಿ ಅಡ್ವಾನ್ಸ್ ಬದಲು ಬರ್ತ್ ಸರ್ಟಿಫಿಕೇಟ್ ಕೇಳ್ತಾರೆ. ಹಿಂದೆಲ್ಲಾ ಛತ್ರಗಳಿಗೆ ಅರ್ಥಾತ್ ಕಲ್ಯಾಣ ಮಂಟಪಗಳನ್ನು ಬುಕ್ ಮಾಡಲು ಹೋದರೆ ಮುಂಗಡ ಕೇಳೋರು. ಈಗ ಹೋದ ತಕ್ಷಣ ವಧು- ವರರ ಜನ್ಮ ದಿನಾಂಕ ಪ್ರಮಾಣಪತ್ರ ಕೇಳುತ್ತಾರೆ. ಬಾಲ್ಯ ವಿವಾಹ ಅಪರಾಧವಾಗಿರುವುದರಿಂದ ಕಲ್ಯಾಣ ಮಂಟಪದ ಮೇಲೆ ಕೇಸ್ ಆಗಬಾರದು ಎಂಬ ಉದ್ದೇಶದಿಂದ ಯಾರೇ ಛತ್ರ ಬುಕ್ ಮಾಡಲು ಹೋದರೂ ಗಂಡು- ಹೆಣ್ಣಿನ ಜನ್ಮದಿನಾಂಕಕ್ಕೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಅಥವಾ ಪರ್ಯಾಯವಾದ ದಾಖಲೆ ಒದಗಿಸಬೇಕಾಗಿದೆ. ಹಿಂದೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋರು. ಈಗ ಒಂದು ಸುಳ್ಳು ಹೇಳಿ ಮದುವೆ ಮಾಡಲು ಆಗುತ್ತಿಲ್ಲವಲ್ಲ. ಅಕಟಕಟಾ.
6 ತಿಂಗಳ್ಯಾಕೆ? 9 ತಿಂಗಳಾದ್ಮಲೇ ಹೇಳಿ!
ಸಿದ್ದು ಸರ್ಕಾರಕ್ಕೆ ಇನ್ನು 6 ತಿಂಗಳು ಹನಿಮೂನ್ ಪಿರಿಯಡ್ ಅಂತಾ ಪ್ರತಿಪಕ್ಷ ನಾಯಕರು ಹೇಳುತ್ತಿದ್ದಾರೆ. ಇದೇ ಮಾತನ್ನು ಆರ್.ವಿ.ದೇಶಪಾಂಡೆ ಅವರೂ ಮೊನ್ನೆ ಬೆಳಗಾವಿಗೆ ಬಂದಾಗ ಹೇಳಿದರು. ಅಷ್ಟೇ ಅಲ್ಲ ಏನೇನೋ ಪ್ರಶ್ನೆ ಕೇಳಿ ನಮ್ಮ ರಸಭಂಗ ಮಾಡಬೇಡಿ ಎಂದು ಲೈಟಾಗಿ ಪತ್ರಕರ್ತರಿಗೆ ತಾಕಿತೂ ಮಾಡಿದರೂ ಅನ್ನಿ. ಅಷ್ಟರಲ್ಲೇ ಆರ್‌ವಿ ಅವರ ಪತ್ನಿಯೂ ಬೆಳಗಾವಿಗೆ ಬಂದಿದ್ದಾರೆ. ಅವರ ಸರ್ಕಾರಾನೂ ಹನಿಮೂನ್ ಮೂಡಲ್ಲಿದೆ. ದೇಶಪಾಂಡೆ ಅವರೂ ಅದೇ ಮೂಡಲಿದ್ದಾರೆ ಎಂದು ಪತ್ರಕರ್ತರೊಬ್ಬರು ಮೆಲ್ಲಗೆ ಉಸುರಿದರು. ಇದನ್ನು ಕೇಳಿಸಿಕೊಂಡಿದ್ದ್ದೆ ತಡ, ಆರ್‌ವಿ ಸೇರಿ ಎಲ್ಲರೂ ಗೊಳ್ಳನೆ ನಕ್ಕರು. 'ಈಗಲೇ ಸಾಧನೆ ಬಗ್ಗೆ ಕೇಳಿದರೆ ಹೇಗೆ? ಈಗ ನಾವು ಹನಿಮೂನ್ ಮೂಡಿನಲ್ಲಿದ್ದೇವೆ. ಇನ್ನು ಆರು ತಿಂಗಳು ಕಾಲ ಕಳೆಯಲಿ. ಆಗ ಬೇಕಾದರೆ ಸಾಧನೆ ಬಗ್ಗೆ ಕೇಳಿ ಹೇಳುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದರಿಂದ ಆರು ತಿಂಗಳ್ಯಾಕೆ, ಒಂಬತ್ತು ತಿಂಗಳ ಪೂರ್ಣಗೊಳ್ಳಲಿ ಬಿಡಿ ಸರ್' ಎಂದು ಇನ್ನೊಬ್ಬ ಪತ್ರಕರ್ತ ಹೇಳಿದಾಗ ಎಲ್ಲರೂ ನಗುನಗುತ್ತಲೇ ಪತ್ರಿಕಾಗೋಷ್ಠಿ ಮುಗಿಸಿ ಹೊರಬಂದರು.
ಗುರು-ಶಿಷ್ಯರು ಹಿಮಾಲಯಕ್ಕೆಏನಾದರೂ ಹೋದ್ರಾ?!
ಬಿಜಾಪುರದ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತು ಮಾಜಿ ಬಸವರಾಜ್ ಪಾಟೀಲ್ ಯತ್ನಾಳ ಅವರು ಎಲ್ಲಿದ್ದಾರೆ ಹುಡುಕಿಕೊಡಿ ಎಂದು ಅವರ ಪಕ್ಷಗಳ ಕಾರ್ಯಕರ್ತರು ಗೋಲ್‌ಗುಂಬಜ್‌ನಲ್ಲಿ ಕೂಗುತ್ತಿದ್ದಾರಂತೆ! ಚುನಾವಣೆಯಲ್ಲಿ ಗುರು ಶಿಷ್ಯನನ್ನು ಮಣಿಸಲು, ಶಿಷ್ಯ ಗುರುವನ್ನು ಮಣಿಸಲು ಹೋಗಿ ಇಬ್ಬರೂ ಸೋತು ಸುಣ್ಣವಾದರು. 'ಅಪ್ಪಾಸಾಹೇಬ ಪಟ್ಟಣಶೆಟ್ಟಿ ನಾನು ಬೆಳೆಸಿದ ಹುಡುಗ. ಆತನಿಗೆ ರಾಜಕೀಯ ದೀಕ್ಷೆ ನೀಡಿದವನು ನಾನೇ. ಇಂದು ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲುವ ಕನಸು ಕಾಣುತ್ತಿದ್ದಾನೆ' ಎಂದು ಗುರು ಬಸನಗೌಡ ಪಾಟೀಲ ಯತ್ನಾಳ ಬಹಿರಂಗವಾಗಿಯೇ ಹೇಳಿದ್ದರು. 'ನಾನು ಬಸನಗೌಡ ಪಾಟೀಲ ಯತ್ನಾಳ ಶಿಷ್ಯನಲ್ಲ. ಮೊದಲು ವಿಧಾನಸಭೆಗೆ ಗೆದ್ದು ಬಂದು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲಿ' ಎಂದು ಶಿಷ್ಯ ಪಟ್ಟಣಶೆಟ್ಟಿ ಗುರುವಿಗೆ ಸವಾಲು ಹಾಕಿದ್ದರು. ಆದರೆ, ಇವರಿಬ್ಬರ ಸವಾಲ್‌ಗಳಿಗೆ ಮತದಾರ ತಕ್ಕ ಜಾವಾಬು ಕೊಟ್ಟಿದ್ದಾನೆ ಬಿಡಿ. ಸೋತರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎನ್ನುತ್ತಿದ್ದ ಇಬ್ಬರ ಮೊಬೈಲ್ ಈಗ ಸ್ವಿಚ್ ಆಫ್. ಬಹುಶಃ ಇಬ್ಬರು ಹಿಮಾಲಯದಲ್ಲಿರಬೇಕು. ಹಾಗಾಗಿ, ಅವರ ಮೊಬೈಲ್ ಸ್ವಿಚ್ ಆಫ್ ಬರ್ತಿತರಬೇಕು ಎನ್ನುತ್ತಿದ್ದಾರೆ ಜನರು.
ವಿಶ್ವನಾಥ್‌ಗೆ ಹೈಟ್ ಸಮಸ್ಯೆ!
ಎಚ್. ವಿಶ್ವನಾಥ್ ಎಂದರೇ ಎಲ್ಲರಿಗೂ ಗೊತ್ತು. ಹಾಲಿ ಕಾಂಗ್ರೆಸ್ ಸಂಸದ, ಮಾಜಿ ಸಚಿವ. ಕಳೆದ ವಾರ ಪಿರಿಯಾಪಟ್ಟಣದಲ್ಲಿ ವಿಧಾನಸಭಾ ಚುನಾವಣಾ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ, ಪಕ್ಷದ ವಿಜೇತ ಅಭ್ಯರ್ಥಿ ಕೆ. ವೆಂಕಟೇಶ್ ಅವರಿಗೆ ಕಾಯುತ್ತಿದ್ದರು. ಸ್ವಲ್ಪ ಸಮಯದ ನಂತರ ವೆಂಕಟೇಶ್ ಆಗಮಿಸಿದರು. ಅದೇ ವೇಳೆಗೆ ಕಾರ್ಯಕರ್ತನೊಬ್ಬ ಭಾರಿ ಗಾತ್ರದ ಹೂವಿನ ಹಾರ ಹಿಡಿದು ಅತ್ತ ಬಂದ. ಇದನ್ನು ಗಮನಿಸಿದ ವಿಶ್ವನಾಥ್, ಹಾರವೂ ಭಾರಿ ಗಾತ್ರ, ವೆಂಕಟೇಶೂ ಭಾರಿ ಗಾತ್ರ ಮತ್ತು ಎತ್ತರ. ನಮ್ಮಿಬ್ಬರನ್ನು ಸೇರಿಸಿ ಹೆಂಗಪ್ಪ ಹಾಕ್ತೀರಾ ಹಾರಾ ಎಂದು ರಾಗ ಎಳೆದರು. ಕ್ಷಣಾರ್ಧದಲ್ಲಿಯೇ ಅವರೇ ಐಡಿಯಾ ಕೂಡ ನೀಡಿದರು. ನಾನು ಎರಡು ಮೆಟ್ಟಿಲು ಮೇಲ್ ನಿಲ್ತೀನಿ. ವೆಂಕಟೇಶ್ ಎರಡು ಮೆಟ್ಟಿಲು ಕೆಳಗೆ ನಿಲ್ಲಲಿ. ಆಗ ಹೈಟೂ ಸರಿ ಹೋಯ್ತದೆ ಎಂದರು. ಅದೇ ರೀತಿ ಪುಷ್ಪಾ ಕಾನ್ವೆಂಟ್ ಮೆಟ್ಟಿಲುಗಳ ಮೇಲೆ ನಿಲ್ಲಿಸಿ, ಹಾರ ಹಾಕಿದಾಗ ಕಾರ್ಯಕರ್ತರಿಗೆ ನಗುವಿನ ಜೊತೆಗೆ ಖುಷಿಯೋ ಖುಷಿ.
- ನಂಬಿರಾಜ್