'ಥೂತ್ತೇರಿಕೆ, ವೊಳ್ಳೆ ಸಾವಾಸ ಆಯ್ತು ಕಣ್ರಲೇ ಇದು. ವೊಡ್ಸಾಕಿದ್ದು ಸಣ್ ಗ್ವಾಡೆ. ಏನೋ ತಾಜ್ ಮಹಲ್ಲು ಉರುಳ್ಸಾಕ್ದಂಗೆ ಆಡ್ತವೆ. ತಲೆ ಬಿಸಿ ಮಾಡ್ಬುಟ್ರಪ್ಪ' ಅಂತ ಬೈಯ್ಕಂಡು ಕಾಡು ಮಂತ್ರಿ ರಮಾನಾಥು ನಿಧಾನವಾಗಿ ನಡ್ಕಂಡು ವಿಧಾನಸೌಧ ಕಾರಿಡಾರ್ನಾಗೆ ವೋಯ್ತಾಯಿದ್ರು.
'ಸಾ ವಸಿ ನಿಂತ್ಕಳಿ ನಿಂತ್ಕಳಿ...ಅಂತ ಕೂಕ್ಕಂಡು ಮೈಲಾರಿ ವೋಡೋಡಿ ಬಂದ. 'ಸಾ, ನಿಮ್ಮುನ್ನೇ ನೋಡ್ಬೇಕು ಅಂತ ವೋಡಾಡ್ತಾಯಿದ್ದೀನಿ. ಇಡೀ ಕಾಡೇಲ್ಲಾ ವುಡುಕ್ದೆ. ವಿಧಾನಸೌಧುದಾಗೆ ಅವ್ರೆ ಅಂತಂದ್ರು. ಅದುಕ್ಕೆ ಇಲ್ಲೀಗಂಟ ಬಂದೆ' ಅಂದ ಮೈಲಾರಿ. 'ಲೇ ಬಿಕ್ನಾಸಿ ನನ್ನುನ್ನ ಕಾಡ್ನಾಗೆ ಯಾಕ್ಲಾ ವುಡ್ಕಕ್ಕೆ ವೋಗಿದ್ದೆ ?' ಅಂತೇಳಿ ರಮಾನಾಥು ಕೇಳುದ್ರು. 'ಕಾಡು ಮಂತ್ರಿ ಅಲ್ವಾ, ಅದುಕ್ಕೆ ಆಲ್ಲೋಗಿದ್ದೆ' ಅಂದ ಮೈಲಾರಿ.
'ನನ್ನುನ್ನ ಕಾಡುಪ್ರಾಣಿ ಅಂತೇನರ ತಿಳ್ಕಂಬುಟ್ಟ? ಕಾಡು ಮಂತ್ರಿ ಅಂದ್ರೆ ಕಾಡ್ನಾಗೆ ಟೆಂಟು ಹಾಕ್ಕಂಡು ಕೂತ್ಕತರೇನ್ಲಾ ಬಡ್ಡಿ ಹೈದ್ನೆ. ನಂತಾವೇ ಜೋಕು ಮಾಡ್ತಾಯಿದ್ದೀಯ' ಅಂತೇಳಿ ರಮಾನಾಥು ವಸಿ ಸಿಟ್ಟಾಬುಟ್ಟು ರೇಗ್ಬುಟ್ರು. 'ಸಮಾಧಾನ, ಸಮಾಧಾನ. ಯಾಕೆ ಆವತ್ತು ಪುಲ್ಲು ರಾಂಗು ಆಬುಟ್ಟಿದ್ದೀರಿ. ಕಾಡು ಕ್ವಾಣ ಏನರ ಬಂದು ತಿವೀತಾ ಹೆಂಗೆ ? ತಿವುದ್ರೆ ಅದ್ರುದು ಕೊಂಬೇ ಮುರ್ದೋಗದು ಅಲ್ವಾ ? ಇರ್ಲಿ ಬುಟ್ಟಾಕಿ. ಈವತ್ತು ಪೇಪ್ರಾಗೆ ಏನೋ ಇಸ್ಯ ವೋದ್ಕಂಡೆ. ನಿಮ್ ಆಪೀಸ್ನಾಗೆ ಗ್ವಾಡೆ ತಳ್ಬುಟ್ರಂತೆ. ವಸಿ ನೋಡ್ಕಂಡು ವೋಡೋಡದು ತಾನೆ' ಅಂದ ಮೈಲಾರಿ. 'ಈವಾಗ ಸುಮ್ಕೆ ಇರ್ತೀಯ. ನಂಗೆ ಕ್ವಾಪ ಬರಂಗೆ ಮಾಡ್ಬೇಡ. ನನ್ ತಲೆ ಕೆಟ್ಟು ಗೊಬ್ರ ಆಗೋಗದೆ. ಇದ್ರಾಗೆ ನಿಂದು ಬ್ಯಾರೆ ನಡೀ ಅಚ್ಗೆ' ಅಂದ್ರು ರಮಾನಾಥು. 'ವಸಿ ಮೆತ್ಗೆ ಮೆತ್ಗೆ, ಮಂತ್ರಿಗ್ಳು ಹಿಂಗೆಲ್ಲಾ ಕ್ವಾಪ ಮಾಡ್ಕಬಾರ್ದು ಕಣೇಳಿ. ತಲೆ ಕೆಡಂಥದ್ದು ಏನಾಗದೆ. ನಿಮ್ ತಲೆ ಕೆಡ್ಸೋ ತಾಕತ್ತು ಯಾರ್ಗದೆ ಅಂತೀನಿ' ಅಂದ ಮೈಲಾರಿ.
'ಅಲ್ಲಲೇ, ನಂಗೆ ವಿಧಾನಸೌಧದಾಗೆ ವೊಂದು ರೂಮು ಕೊಟ್ಟವ್ರೆ ಅಪೀಸ್ಗೆ ಅಂತ. ನಾನು ಇರೋ ಸೈಜ್ಗೆ 10-20 ರೂಮು ಕೊಡೋದಾ? ನೂರುಕ್ಕೆ ನೂರು ಇರೋ ರೂಮು ಕೊಟ್ಟಿದ್ರೆ ಯಾರ್ದರ ಗಂಟು ವೋಯ್ತಾ ಇತ್ತ. ಕೊಟ್ಟಿರೋ ರೂಮು ವೊಳಿಕ್ಕೆ ನಾನೇನರ ವೋದ್ರೆ ವೊಳ್ಗೆ ಇರೋರು ಆಚ್ಗೆ ಬರ್ಬೇಕಾಯ್ತದೆ. ಅದುಕ್ಕೆ ಗ್ವಾಡೆ ವಡ್ಕಂಡು ವಸಿ ದೊಡ್ದು ಮಾಡ್ಕಂಡೆ. ಅದುಕ್ಕೆ ಅಪೋಜಿಸನ್ನೋರು ಅಶೆಂಬ್ಲಿ ವೊಳ್ಗೆ ನಿಂತ್ಕಂಡು ಇಡೀ ವಿಧಾನಸೌಧವೇ ಬಿದ್ದೋದಂಗೆ ಆಡ್ಬುಟ್ರು ಅಂತೀನಿ. ವುರೀತದೋ ಇಲ್ವೋ?' ಅಂತ ರಮಾನಥು ಕೇಳುದ್ರು.
'ಅಲ್ಲ, ನಿಮ್ಗೆ ದೊಡ್ ರೂಮು ಯಾಕೆ ಬೇಕು ಅಂತೀನಿ? ಅಲ್ಲಿ ನೀವೇನರ ಸಂಸಾರ ನಡುಸ್ಬೇಕಾ? ಇಲ್ಲ, ಕಾಡ್ನಾಗೆ ಇರೋ ಅನೇ, ಹುಲಿ, ಜಿಂಕೆನಾ ತಂದು ಕಟ್ಟಾಕಬೇಕಾ? ಆಪೀಸು ಕೆಲ್ಸ ಮಾಡಕ್ಕೆ ತಾನೆ? ರೂಮು ಚಿಕ್ದು ಅಂತೇಳಿ ಗ್ವಾಡೆ ವೋಡುದ್ರೆ ಹೆಂಗೆ? ಕೆಂಗಲ್ ಹನ್ಮಂತಪ್ಪ ಸ್ಯಾನೆ ಕಷ್ಟಪಟ್ಟು ವಿಧಾನಸೌಧಾನ ಕಟ್ಟುಸುದ್ರು. ಆವಯ್ಯನೇ ವೊಳಿಕ್ಕೆ ವೋಗಿ ರಾಜ್ಯಭಾರ ನಡುಸ್ಲಿಲ್ಲ. ಹಿಂಗಿರ್ವಾಗ ಇರೋ ಮೂರು ಮುಕ್ಕಾಲು ದಿನುಕ್ಕೆ ಗ್ವಾಡೆ ವೊಡ್ಸಿ, ಇರೋ ಬಾಗ್ಲುನ್ನ ಅಲ್ಲಿ ಕಿತ್ತು ಇಲ್ಲಿ ಮಡ್ಗಿ, ಇರೋ ಬರೋ ಪೋಟೋಗಳನ್ನು ತಂದು ನೇತಾಕಿ ಐರಾಣ ಮಾಡ್ಬುಟ್ರೆ ಹೆಂಗೆ? ಕೆಂಗಲ್ ಹನ್ಮಂತಪ್ಪ ಏನರ ಇದ್ದಿದ್ರೆ ಈ ಮಂತ್ರಿಗಳ ಆವ್ತಾರ ನೋಡಿ ಕಣ್ಣೀರು ಹಾಕ್ಕಂಬುಡೋರು' ಅಂದ ಮೈಲಾರಿ.
'ಅಲ್ಲ, ಇರೋ ಐದು ವರ್ಸುದಾಗಿ ಕೊಟ್ಟಿರೋ ಪೋಸ್ಟು ಯಾವಾಗ ಕಿತ್ಕಂಡು ವೋಯ್ತದೋ ಏನೋ? ಸಾಯೋಗಂಟ ಇಲ್ಲೇ ಗೂಟ ವೊಡ್ಕಂಡು ಇರೋಹಂಗೆ ಗ್ವಾಡೆ, ಬಾಗ್ಲು ವೊಡ್ಕಂಡು ವೋಯ್ತಾಯಿದ್ರೆ ಕೊನ್ಗೆ ವುಳಿಯಾದು ವಿಧಾನಸೌಧದ ಕಲ್ಲು ಅಷ್ಟೇಯಾ. ಹಿಂಗೆ ಬುಟ್ರೆ ವಿಧಾನಸೌಧಾನೇ ಇಲ್ಲಿ ಕಿತ್ತು ಅಲ್ಲಿ ಮಡುಗ್ತೀರಪ್ಪ' ಅಂದ ಮೈಲಾರಿ.
'ಏನಲೇ ಅಪೋಜಿಸನ್ ಪಾರ್ಟಿನೋರಂಗೆ ನೀನೂವೆ ಭಾಸ್ನ ಸುರು ಹಚ್ಕಂಬುಟ್ಟೆ. ನಾನು ಸೀನಿಯರ್ರು ಮಂತ್ರಿ ಕಣಲೇ. ನನ್ ಸೀನಿಯಾರಿಟಿ, ಸೈಜುಗೆ ತಕ್ಕಂಗೆ ಆಪೀಸು ದೊಡ್ದಾಗಿ ಇರ್ದೇಯಿದ್ರೆ ಹೆಂಗೆ ?' ಅಂತ ರಮಾನಾಥು ಕೇಳುದ್ರು. 'ವೋ ಇನ್ಮೆಕೆ ಮಂತ್ರಿಗಳು ಸೈಜು ನೋಡ್ಕಂಡು ಅಪೀಸು ಕೊಡಿ ಅಂತೇಳಿ ಸಿದ್ರಾಮಣ್ಣೋರ್ಗೆ ಯೋಳ್ಬುಡಿ' ಅಂತೇಳಿ ಮೈಲಾರಿ ಸಜೆಸನ್ನು ಕೊಟ್ಟ. 'ವೂ ಕಣಲೇ, ವೊಳ್ಳೇ ಐಡಿಯಾ ಕೊಟ್ಟಿದ್ದೀಯ. ಇರು ಸಿದ್ರಾಮಣ್ಣುಂಗೆ ಮನವಿ ಪತ್ರ ಕೊಟ್ಟು ಬತ್ತೀನಿರು' ಅಂತೇಳಿ ರಮಾನಾಥು ರೈಟ್ ಯೋಳುದ್ರು.
- ಕೆ.ವಿ.ಪ್ರಭಾಕರ್
prabhukolar@yahoo.com