ಅಂಕಣಗಳು

ಅಸಮಾಧಾನದ ಆವಿ ಮೋಡ ಕಟ್ಟುತ್ತಿದೆ ನೋಡ!

ಮನೆಯ ಒಳಗಾಗಲಿ, ಸರ್ಕಾರದ ಒಳಗಾಗಲಿ ಪ್ರತಿಕೂಲ ಬೆಳವಣಿಗೆ ಕಾಣಿಸಿಕೊಂಡರೆ...

ಸಿದ್ದರಾಮಯ್ಯನವರ ಸುತ್ತಮುತ್ತ ಸದಾ ಠಳಾಯಿಸುವ ಕೆಲವು ಮಂತ್ರಿಗಳು ತಮ್ಮ ಮತ್ತು ಮುಖ್ಯಮಂತ್ರಿಯವರ ನಡುವೆ ಲಕ್ಷ್ಮಣರೇಖೆ ಎಳೆಯುತ್ತಿದ್ದಾರೆ

ಮನೆಯ ಒಳಗಾಗಲಿ, ಸರ್ಕಾರದ ಒಳಗಾಗಲಿ ಪ್ರತಿಕೂಲ ಬೆಳವಣಿಗೆ ಕಾಣಿಸಿಕೊಂಡರೆ, ಅದನ್ನು ಆರಂಭದಲ್ಲೇ ಹೊಸಕಿ ಹಾಕಬೇಕು. ಚಿಗುರುತ್ತಿದ್ದಂತೆ ಚಿವುಟಿ ಹಾಕಬೇಕು. ಇಲ್ಲದಿದ್ದರೆ ಶಾಂತಿ ಕದಡಿ ಹೋಗುತ್ತದೆ. ನೆಮ್ಮದಿ ಮೂರಾಬಟ್ಟೆ ಆಗುತ್ತದೆ. ಗಾಯ ಅದ ತಕ್ಷಣ ಮುಲಾಮು ಹಚ್ಚಿ ಒಣಗಿಸದಿದ್ದರೆ, ಮುಂದೆ ಅದು ವ್ರಣವಾಗಿ ನಾರುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳ ಮೇಲೆ ಮೂರು ದಿನ ಕಳೆದಿದೆ. ಒಂದು ಕಡೆ ಸರ್ಕಾರ ಲಗಾಮು ಇಲ್ಲದೇ ಓಡುತ್ತಿದ್ದರೆ, ಇನ್ನೊಂದೆಡೆ ಪಕ್ಷದ ಆಂತರಿಕ ಬೇಗುದಿ ಕಾಯಿಗಟ್ಟುತ್ತಿರುವಂತೆ ಭಾಸವಾಗುತ್ತಿದೆ. ಹಿರಿಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ, ಅದೇ ವೇಳೆಗೆ ಹಿರಿಯ ನಾಯಕರೂ ವರ್ತಿಸುತ್ತಿರುವ ಶೈಲಿ ಅನಪೇಕ್ಷಿತ ಬೆಳವಣಿಗೆಗಳಿಗೆ ಆಸ್ಪದ ನೀಡಿರುವಂತೆ ಕಾಣುತ್ತಿದೆ.
ಹಾಗೆಂದು ಸರ್ಕಾರದಲ್ಲಿ ಏನೋ ಆಗಬಾರದ್ದು ಆಗಿ ಹೋಗಿದೆ, ಬರಸಿಡಿಲು ಬಂದೆರಗಿದೆ ಎಂದು ಯಾರೂ ಆರ್ಥೈಸಬೇಕಾದ ಅಗತ್ಯವಿಲ್ಲ. ಆದರೆ ಮುಂದೆ ಅಂತಹ ಬೆಳವಣಿಗೆಗಳಿಗೆ ಕಾರಣವಾಗಬಹುದಾದ ಸನ್ನಿವೇಶಗಳು ಟಿಸಿಲೊಡೆಯುತ್ತಿವೆ. ಇವನ್ನು ಈಗಲೇ ನಿವಾರಿಸಿಕೊಳ್ಳದಿದ್ದರೆ, ಸಿದ್ದರಾಮಯ್ಯನವರು ಮುಂದೆ ಅನಗತ್ಯ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆಗಳಿವೆ. ಆಗ ಶ್ರಮ ಮತ್ತು ಸಮಯ ಎರಡೂ ಬೇಡದ ಕೆಲಸಗಳಿಗೆ ವಿನಿಯೋಗವಾಗುವ ಸಂಭವವಿದೆ.
ರಾಜಕೀಯದಲ್ಲಿ ಮಿತ್ರರ ಜತೆ ಬಡಿದಾಡುವುದಕ್ಕಿಂತ ಶತ್ರುಗಳ ಜತೆ ಸರಸವೇ ಲೇಸು. ಇದನ್ನು ಸಿದ್ದರಾಮಯ್ಯನವರು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಹಾಗಾದರೆ ಮಾತ್ರ 'ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ನಾಣ್ನುಡಿ ಅವರ ರಕ್ಷಣೆಗೆ ಬಂದು ನಿಲ್ಲುತ್ತದೆ. ಇಲ್ಲದಿದ್ದರೆ ಕದನದಲ್ಲಿ ವೀರಗೆಲುವು ಸಾಧಿಸಿದ ರಾಜ ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಪ್ರಾಣ ಬಿಟ್ಟಂತಾಗುತ್ತದೆ.
ಹೌದು, ರಾಜ್ಯ ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಮೊದಲು ಹಾಗೂ ನಂತರ ಹಿರಿಯ ನಾಯಕರು ವರ್ತಿಸುತ್ತಿರುವ ರೀತಿಯಲ್ಲಿ ಅಜಗಜಾಂತರವಿದೆ. ಚುನಾವಣೆಗೆ ಮೊದಲು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಶಾಸಕಾಂಗ ಸಭೆಯಿಂದ ಹಿಡಿದು ಪಕ್ಷದ ಪ್ರಮುಖ ಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಸಿದ್ದರಾಮಯ್ಯನವರ ಜತೆಜತೆಗೆ. ಆದರೆ ಚುನಾವಣೆ ಮುಗಿದು ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಶಾಸಕಾಂಗ ಸಭೆಗೆ ಎರಡು ಬಾರಿ ನಾಪತ್ತೆ. ಚುನಾವಣೆಯಲ್ಲಿ ಅವರು ಸೋತಿರಬಹುದು. ಆದರೆ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಸಿದ್ದರಾಮಯ್ಯನವರ ಜತೆಗೆ ಅವರೂ ಮುಂಚೂಣಿ ನಾಯಕರೇ. ಆದರೆ ಇದೀಗ ಇಬ್ಬರ ನಡುವೆ ಕಂದಕ ನಿರ್ಮಾಣ ಮತ್ತು ದಿನೇ ದಿನೇ ಅದರ ವಿಸ್ತಾರ ಪಕ್ಷದ ಅನ್ಯ ನಾಯಕರ ಬಾಯಲ್ಲಿ ವಿವಿಧ ಸ್ವರೂಪದಲ್ಲಿ ವಿಜೃಂಭಿಸುತ್ತಿದೆ.
ಇತ್ತೀಚೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರನ್ ಈ ಬಗ್ಗೆ ಬಹಿರಂಗವಾಗಿಯೇ ಪ್ರಸ್ತಾಪ ಮಾಡಿದ್ದಾರೆ. ಪರಮೇಶ್ವರ್ ಮತ್ತು ನಿಮ್ಮ ನಡುವೆ ಏಕೀ ಅಂತರ? ಅದು ಸಾರುತ್ತಿರುವ ಸಂದೇಶ, ಆ ಸಂದೇಶ ರವಾನಿಸುತ್ತಿರುವ ಪ್ರತಿಕೂಲ ಸಂಕೇತದ ಬಗ್ಗೆ ಅರಿವು ಇದೆಯೇ? ನೀವು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೇಕೆ ಎಂದು ಸಿದ್ದರಾಮಯ್ಯವನರನ್ನು ಪ್ರಶ್ನಿಸಿದ್ದಾರೆ. ಕೇಂದ್ರದಲ್ಲಿ ಮನಮೋಹನ್‌ಸಿಂಗ್ ಪ್ರಧಾನಿಯಾಗಿ ಹತ್ತು ವರ್ಷ ಪೂರೈಸಿದ್ದಾರೆ. ಅವರು ಎಂದೂ ಎಐಸಿಸಿ ಅಧ್ಯಕ್ಷರನ್ನು ಉಪೇಕ್ಷೆ ಮಾಡಿಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಎಲ್ಲ ನಿರ್ಣಯಗಳನ್ನು ಮಾಡುತ್ತಿದ್ದಾರೆ. ಅವರನ್ನು ಬಿಟ್ಟು ಯಾವ ಕೆಲಸವನ್ನೂ ಮಾಡಿಲ್ಲ. ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ನೀವೂ ಅದನ್ನೇ ಅನುಸರಿಸಿದರೆ ಉತ್ತಮ. ಐದಾರು ಬಾರಿ ಗೆದ್ದು ಸಚಿವರಾಗುವ ಅರ್ಹತೆಯಿರುವ ಇಪ್ಪತ್ತಕ್ಕೂ ಹೆಚ್ಚು ಹಿರಿಯ ಶಾಸಕರು ಪಕ್ಷದಲ್ಲಿದ್ದಾರೆ. ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ನೇರವಾಗಿಯೇ ಹೇಳಿದ್ದಾರೆ. ಇದು ಮೇಲ್ನೋಟಕ್ಕೆ ರಾಜಶೇಖರನ್ ಒಬ್ಬರ ಮಾತಿನಂತೆ ಕಂಡರೂ ಅದರಲ್ಲಿ ಅನೇಕ ಅತೃಪ್ತ ಆತ್ಮಗಳ ಆಂತರ್ಯ ಪ್ರತಿಧ್ವನಿಸುತ್ತಿದೆ. ಇದನ್ನು ಸಿದ್ದರಾಮಯ್ಯನವರು ಲಘುವಾಗಿ ಪರಿಗಣಿಸುವಂತಿಲ್ಲ.
ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‌ಕುಮಾರ್, ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್, ರೋಶನ್‌ಬೇಗ್ ಅವರನ್ನು ಕಳಂಕಿತರೆಂಬ ಕಾರಣಕ್ಕೆ ಸಂಪುಟದಿಂದ ಹೊರಗಿಡಲಾಗಿದೆ. ಆದರೆ ಅದೇ ರೀತಿ ಕಳಂಕ ಇರುವ ಬಾಬುರಾವ್ ಚಿಂಚನಸೂರ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂಥ ಈ ವರ್ತನೆ ಕಾರಣಗಳನ್ನು ಮೀರಿದ ಅಸಮಾಧಾನ ಮಡುಗಟ್ಟಲು ಕಾರಣವಾಗಿದೆ. ಡಿ.ಕೆ. ಶಿವಕುಮಾರ್ ಅವರಂತೂ ಹೊಸ ಸರ್ಕಾರದ ಚೊಚ್ಚಲ ಅಧಿವೇಶನ ಮುಗಿಯುವವರೆಗೂ ಶಾಸಕರಾಗಿ ಪ್ರಮಾಣ ಸ್ವೀಕರಿಸಲೇ ಇಲ್ಲ. ಪರಮೇಶ್ವರ್ ಅವರು ಶಿವಕುಮಾರ್ ಮನೆಗೆ ಹೋಗಿ ತಮ್ಮದೇ ಆದ ಶೈಲಿಯಲ್ಲಿ 'ಸಮಾಧಾನ' ಹೇಳಿ ಬಂದರೂ ಸಿದ್ದರಾಮಯ್ಯನವರು ಕ್ಯಾರೇ ಅನ್ನಲಿಲ್ಲ. ಕಳೆದ ವಾರ ಶಾಸಕರಾಗಿ ಪ್ರಮಾಣ ಸ್ವೀಕರಿಸಿದ ಶಿವಕುಮಾರ್ ತಮಗೆ ಮಂತ್ರಿ ಪದವಿ ತಪ್ಪಿಸಿದ ಸಮಸ್ತರನ್ನು ಅಭಿನಂದಿಸುವುದಾಗಿ ಹೇಳುವ ಮೂಲಕ ಕಾಲು ಎಳೆದಿದ್ದಾರೆ. ರಮೇಶ್‌ಕುಮಾರ್ ಅವರು ನೇರವಾಗಿ ಅಸಮಾಧಾನ ವ್ಯಕ್ತಪಡಿಸದಿದ್ದರೂ ಅಧಿವೇಶನದಲ್ಲಿ ಪರೋಕ್ಷವಾಗಿ ಆಳರಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಂತ್ರಿಗಳ ಹಾವ-ಭಾವ, ನಡತೆ, ಕಾರ್ಯವೈಖರಿಯನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಇನ್ನು ರೋಶನ್‌ಬೇಗ್ ಅವರು ಶಾಸಕರಾಗಿ ಪ್ರಮಾಣ ಸ್ವೀಕರಿಸಿದ್ದರೂ ಹಳೆಯ ಆಸ್ಥೆಯನ್ನು ಉಳಿಸಿಕೊಂಡಿಲ್ಲ. ಇವರದೆಲ್ಲ ಒಂದು ರೀತಿಯಾದರೆ ಹಿರಿಯ ಸದಸ್ಯ ಅಪ್ಪಾಜಿ ನಾಡಗೌಡ ಅವರದು ಮೌನ ನೋವು. ಸಚಿವರಾಗುವ ಎಲ್ಲ ಅರ್ಹತೆ ಇದ್ದರೂ ಅದು ದಕ್ಕದ್ದಕ್ಕೆ ಒಳಗೊಳಗೆ ರೋದಿಸುತ್ತಿದ್ದಾರೆ.
ರಾಜಕೀಯದಲ್ಲಿ ಅದರಲ್ಲೂ ಸ್ವಪಕ್ಷೀಯರಲ್ಲಿ ಶತ್ರುಗಳನ್ನು ಅಥವಾ ಶತ್ರುಗಳು ಎಂದು ಭಾವಿಸಿದರವರನ್ನು ದೂರ ಸರಿಸುವುದಕ್ಕಿಂತ ಪಕ್ಕದಲ್ಲೇ ಇರಿಸಿಕೊಂಡು ಹೆಗಲ ಮೇಲೆ ಕೈ ಹಾಕುವುದರಲ್ಲಿ ಜಾಣತನವಿದೆ. ನೋಟಕ್ಕೆ ನಿಲುಕದ ಶತ್ರುಗಳು ಹೆಣೆಯುವ ರಣತಂತ್ರಗಳನ್ನು ಅರ್ಥ ಮಾಡಿಕೊಂಡು ಪ್ರತಿತಂತ್ರ ರೂಪಿಸುವುದಕ್ಕಿಂತ ಪಕ್ಕದಲ್ಲೇ ಇರಿಸಿಕೊಂಡು, ಹದ್ದಿನ ಕಣ್ಣಿಡುವುದರಲ್ಲಿ ಶ್ರಮ ವ್ಯರ್ಥವನ್ನು ತಪ್ಪಿಸಬಹುದು. ದೇವೇಗೌಡರ ಗರಡಿಯಲ್ಲಿ ಪಳಗಿ ಬಂದಿರುವ ಸಿದ್ದರಾಮಯ್ಯವರಿಗೆ ಇದು ಗೊತ್ತಿಲ್ಲದ ವಿಚಾರವಲ್ಲ. ಆದರೆ ಎಷ್ಟೋ ಬಾರಿ ಗೊತ್ತಿರುವ ವಿಚಾರಗಳೇ ಕೈಕೊಟ್ಟು ಬಿಡುತ್ತವೆ. ಮೊದಲಿಗೆ ಸ್ಥಾನ ತಪ್ಪಿಸಿ, ನಂತರ ಅವರಿಗೆ ಅಧಿಕಾರ ಕೊಡುವುದರಲ್ಲಿ ಯಾವುದೇ ಜಾಣ್ಮೆ ಇಲ್ಲ. ಬದಲಿಗೆ ಮೊದಲೇ ಆ ಕೆಲಸ ಮಾಡಿದ್ದಿದ್ದರೆ ಅನಗತ್ಯ ವೈಷಮ್ಯವನ್ನಾದರೂ ತಪ್ಪಿಸಿಕೊಳ್ಳಬಹುದಿತ್ತು. ಆದಾಗದೆ ಹೋದಾಗ, ಇರಲಾರದೆ ಇರುವೆ ಬಿಟ್ಟುಕೊಂಡಂತಾಗುತ್ತದೆ.
ಇನ್ನು ಸಿದ್ದರಾಮಯ್ಯ ಸಂಪುಟದ ಆಯಕಟ್ಟಿನ ಆಯ್ದ ಸದಸ್ಯರ ವರ್ತನೆ ಬಗ್ಗೆ ಶಾಸಕ ಸಮುದಾಯದಲ್ಲಿ, ಅದರಲ್ಲೂ ಮೂಲ ಕಾಂಗ್ರೆಸ್ಸಿಗರಲ್ಲಿ ಆಕ್ರೋಶ ಹೆಪ್ಪುಗಟ್ಟಿಸುತ್ತಿದೆ. ಸಿಟ್ಟಿನ ಕಾವಿಗೆ ಅದು ಯಾವಾಗ ಬೇಕಾದರೂ ಬುಗ್ಗೆಯಾಗಬಹುದು. ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಎದುರಿಗೆ ಹೋದರೆ ತಲೆ ಎತ್ತಿ ಕೂಡ ನೋಡುತ್ತಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಪ್ಪನ ಅಂಗಿಚುಂಗು ಹಿಡಿದು ಸುತ್ತುವ ಸಣ್ಣ ಮಕ್ಕಳಂತೆ ಸಿದ್ದರಾಮಯ್ಯನವರ ಸುತ್ತಮುತ್ತ ಸದಾ ಠಳಾಯಿಸುವ ಕೆಲವು ಮಂತ್ರಿಗಳು ತಮ್ಮ ಮತ್ತು ಮುಖ್ಯಮಂತ್ರಿಯವರ ನಡುವೆ ಲಕ್ಷ್ಮಣರೇಖೆ ಎಳೆಯುತ್ತಿದ್ದಾರೆ. ಆ ಲಕ್ಷ್ಮಣರೇಖೆಯಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರು ಎಂಬ ಎರಡು ವಿಭಾಗ. ಮೊದಲಿನವರು ರೇಖೆ ದಾಟುವಂತಿಲ್ಲ. ಎರಡನೇಯವರಿಗೆ ರೇಖೆಯ ಗೊಡವೆ ಇಲ್ಲ. ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಕೆಲವು ಸದಸ್ಯರು ನೇರವಾಗಿಯೇ ಮಾತಾಡಿದ್ದಾರೆ. ಆ ಮಾತು, ಮಾತಿನ ಹಿಂದಿರುವ ನೋವು ಮೂಲ ಮತ್ತು ವಲಸಿಗರ ನಡುವಣ ಅಂತರ ವಿಸ್ತಾರಕ್ಕೆ ಆಸ್ಪದ ಕೊಟ್ಟಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದು ಸಿದ್ದರಾಮಯ್ಯನವರ ಹೆಸರಿಗೆ ಕಳಂಕ ತರುವ ಸಂಭವವಿದೆ. ಹೀಗಾಗಿ ಸಿದ್ದರಾಮಯ್ಯನವರು ತಮ್ಮ ಸುತ್ತ-ಮುತ್ತ ಇರುವವರನ್ನು ಒಂದು ಹಂತಕ್ಕೆ ಹದ್ದುಬಸ್ತಿನಲ್ಲಿಡಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಸರ್ವ ಬಣ್ಣವನ್ನು ಮಸಿ ನುಂಗೀತು ಎಂಬಂತೆ ಯಾರೋ ಮಾಡಿದ ತಪ್ಪಿಗೆ ಸಿದ್ದರಾಮಯ್ಯನವರು ಬಾಧ್ಯಸ್ಥರಾಗಬೇಕಾಗುತ್ತದೆ.
ಇನ್ನು ತಮ್ಮ ಸಂಪುಟದಲ್ಲಿ ಮೂಲ ಮತ್ತು ವಲಸಿಗ ಕಾಂಗ್ರೆಸಿಗರು ಎಂಬ ಭೇದವಿಲ್ಲ, ನಾನು ಕಾಂಗ್ರೆಸಿಗ ಎಂದು ಸಿದ್ದರಾಮಯ್ಯ ಪದೇ ಪದೇ ಜಪಿಸುತ್ತಿದ್ದಾರೆ. ತಮ್ಮ ಸುತ್ತ ಇಂಥದೊಂದು ವರ್ತುಲ ಸದ್ದಿಲ್ಲದೇ ಮಡುಗಟ್ಟಿದೆ ಎಂಬ ಸತ್ಯದ ಅರಿವಿನಿಂದಲೇ ತಮ್ಮ 'ಕಾಂಗ್ರೆಸಿಗತ್ವ' ಸಾಧನೆ ಪ್ರಯತ್ನ ಮಾಡುತ್ತಿದ್ದಾರೆ. ಅದು ಅವರಿಗೆ ಅನಿವಾರ್ಯವೇ ಆದರೂ ಆಗಾಗ ಹೃದಯದ ಭಾವ ಸದ್ದಿಲ್ಲದೇ ವ್ಯಕ್ತವಾಗುತ್ತಿದೆ. ಕಳೆದ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಕಾಲು ಎಳೆಯುವುದಕ್ಕೆಂದೇ ಜೆಡಿಎಸ್‌ನ ವೈ.ಎಸ್.ವಿ.ದತ್ತ
'ಕಾಂಗ್ರೆಸ್ ಸರ್ಕಾರದೊಳಗೆ
ಜನತಾ ಪರಿವಾರವ ಕಾಣದಂತೆ ತುರುಕಿದೆ
ಆಪ್ತರಿಗೆ ಆಯಕಟ್ಟಿನ ಖಾತೆಗಳ
ಸದ್ದಿಲ್ಲದೆ ನೀಡಿದೆ.
ಹಿರಿಯ ಕಾಂಗ್ರೆಸ್ಸಿಗರ ನಿರ್ಲಕ್ಷಿಸಿಯೂ
ಅಮ್ಮನ ಅಂಕಿತ ಪಡೆದೆ
ನೀ ಸರ್ಕಾರ ರಚಿಸಿದ ಪರಿಗೆ
ಬೆರಗಾದೆನೋ ಸಿದ್ದರಾಮಣ್ಣ '
ಎಂದು ಸ್ವರಚಿತ ವಚನವನ್ನು ಕಲಾಪ ಸಂದರ್ಭದಲ್ಲಿ ವಾಚಿಸಿದ್ದರು. ಇದಕ್ಕೆ ಉತ್ತರ ನೀಡುವ ಭರದಲ್ಲಿ ಸಿದ್ದರಾಮಯ್ಯ ಎಡವಿದ್ದರು. 'ಕಾಂಗ್ರೆಸ್ಸಿನವರು ನಾವು ಎಲ್ಲ ಒಂದೇ ' ಎಂದು ಹೇಳಿ ತಕ್ಷಣ ತಾವು ಮಾಡಿದ ಪ್ರಮಾದವನ್ನು ಸರಿಪಡಿಸಿಕೊಂಡರು. ಆದರೆ ಸಿದ್ದರಾಮಯ್ಯನವರ ಮಾತು-ಮನದಾಳ ಬೇರೆ ಎಂಬುದರ ದ್ಯೋತಕ ಇದು ಎಂಬ ಸಂದೇಶವನ್ನು ಅತೃಪ್ತ ಕಾಂಗ್ರೆಸ್ಸಿಗರು ಸದ್ದಿಲ್ಲದೇ ಸಾರಲಾರಂಭಿಸಿದ್ದಾರೆ.
'ಕ್ರಿಯೆಗೆ ಸಮ ಮತ್ತು ವಿರುದ್ಧವಾದ ಪ್ರತಿಕ್ರಿಯೆ' ಇದ್ದೇ ಇರುತ್ತದೆ ಎಂಬ ನಿಯಮ ಮೀರಿಸುವ ರೀತಿಯಲ್ಲಿ ವಲಸಿಗ-ಮೂಲ ಕಾಂಗ್ರೆಸ್ ತತ್ವ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಹಲವು ವಲಸಿಗರಿದ್ದರೂ ಈ ಸಂಘರ್ಷದ ಕಿಡಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಸುತ್ತಲೇ ಗಿರಕಿ ಹೊಡೆಯುವುದಕ್ಕೆ ಕಾರಣ ಅವರ ಮಾತು-ಕೃತಿಯಲ್ಲಿನ ವೈರುಧ್ಯ. ಹಿಂದೊಮ್ಮೆ ಕೆಪಿಸಿಸಿ ಸಭೆಯಲ್ಲಿ ಸಿದ್ದರಾಮಯ್ಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವಾಗ 'ಆಡಳಿತಾರೂಢ ಬಿಜೆಪಿಯನ್ನು ಬೇರು ಸಮೇತ ಕಿತ್ತು ಹಾಕುತ್ತೇನೆ' ಎನ್ನುವ ಬದಲು ' ಕಾಂಗ್ರೆಸ್‌ನ್ನು ಬೇರು ಸಮೇತ ಕಿತ್ತು ಹಾಕುವುದೇ ನನ್ನ ಗುರಿ ' ಎಂದಿದ್ದರು. ಅಂದು ಅವರಾಡಿದ ಮಾತನ್ನು ಇಂದು ಕಾಂಗ್ರೆಸ್ಸಿಗರು ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಸಂಪುಟ ರಚನೆ ಸಂದರ್ಭದಲ್ಲಿ ತೋರಿದ ಜಾಣ್ಮೆ. ಜತೆಗೆ ಆಡಳಿತ ನಿರ್ವಹಣೆ ಸಂದರ್ಭದಲ್ಲಿ ಮುಗುಮ್ಮಾಗಿ ಹಾಕಿಕೊಂಡಿರುವ ವಲಸಿಗ- ಮೂಲ ಕಾಂಗ್ರೆಸ್ ಲಕ್ಷ್ಮಣರೇಖೆ.
ಆಡಳಿತಾರಂಭದಲ್ಲೇ ಭವಿಷ್ಯದಲ್ಲಿ ಬೃಹದಾಕಾರ ತಾಳುವ ಎಲ್ಲ ಲಕ್ಷಣ ಸಾರುತ್ತಿರುವ ಈ ಸಮಸ್ಯೆ ಎಡವಿದರೆ ಸಿದ್ದರಾಮಯ್ಯನವರಿಗೆ ಮುಳುಗು ನೀರು ತರುವುದರಲ್ಲಿ ಅನುಮಾನವಿಲ್ಲ. ಅದನ್ನು ಮೀರಿ ನಿಲ್ಲುವುದು ಸಿದ್ದರಾಮಯ್ಯನವರಂಥ ಪಳಗಿದ ರಾಜಕಾರಣಿಗೆ ಕಷ್ಟವಲ್ಲ. ಅದಾಗಬೇಕಿದ್ದರೆ ಅವರು ತಮ್ಮ ಕಿವಿಯನ್ನು ಊದುವವರಿಂದ ದೂರ ಇರಿಸಿಕೊಳ್ಳಬೇಕು.
ಲಗೋರಿ: ಮಿಂಚಿ ಹೋಗುವ ಮೊದಲೇ ಚಿಂತಿಸುವುದು ಲೇಸು.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!