ಅಂಕಣಗಳು

ಬದುಕು ಮೂರಾಬಟ್ಟೆ, ಅಮ್ಮ ತೋರಿದ ಸಿಟ್ಟೇ?

ಅವತ್ತು ಆಕೆ ಭೂಮಿಗಿಳಿದು ಬಂದ ದಿನ. ಒಂದು ರೀತಿಯಲ್ಲಿ ಅವಳ ಜನುಮದಿನವೂ ಹೌದು.

ಅವತ್ತು ಆಕೆ ಭೂಮಿಗಿಳಿದು ಬಂದ ದಿನ. ಒಂದು ರೀತಿಯಲ್ಲಿ ಅವಳ ಜನುಮದಿನವೂ ಹೌದು. ಅಂದೇ ಆ ಮಹಾಮಾತೆ ಮುನಿಸು ತೋರಿದ್ದಾಳೆ. ಅದು ಅಂತಿಂಥ ಮುನಿಸಲ್ಲ. ರೊಚ್ಚಿಗೆದ್ದು ಹರಿದಿದ್ದಾಳೆ. ಸೊಕ್ಕಿ ಸುಳಿದಿದ್ದಾಳೆ. ತನ್ನ ಜಟೆಯಲ್ಲಿ ಕಟ್ಟಿ ಹಾಕಿ ಭೂಮಿಗೆ ತಂದು ಬಿಟ್ಟ ಪರಶಿವನನ್ನೇ ಆವರಿಸಿ ಅವನನ್ನೇ ಮುಳುಗಿಸಿ ಪ್ರವಹಿಸಿದ್ದಾಳೆ. ತಾನು ಯಾರ ಹಿಡಿತಕ್ಕೂ ಸಿಕ್ಕುವವಳಲ್ಲ. ತನ್ನನ್ನು ಕಟ್ಟಿ ಹಾಕುತ್ತೇನೆಂಬ ಮಾನವನ ಭ್ರಮೆಗೆ ತಕ್ಕ ಉತ್ತರವನ್ನು ಹೀಗೂ ಕೊಡಬಲ್ಲೆ ಎಂಬುದನ್ನೂ ಸಾಬೀತುಪಡಿಸಿದ್ದಾಳೆ. ಇಲ್ಲದಿದ್ದರೆ ಕಳೆದ 30 ವರ್ಷಗಳಲ್ಲೇ ಕಂಡು ಕೇಳಿರಿಯದ ಪ್ರವಾಹ ಗಂಗೆಯಲ್ಲಿ ನಿರ್ಮಾಣವಾಗಿದೆ. ಮಾನವನ ಎಲ್ಲ ಪ್ರಯತ್ನಗಳನ್ನೂ ಮೀರಿಯೂ ನೂರಾರು ಜೀವಗಳು ಕೊಚ್ಚಿ ಹೋಗಿವೆ. ಮನೆ- ಮಠ, ಆಸ್ತಿ- ಪಾಸ್ತಿಗಳು ಹೇಳ ಹೆಸರಿಲ್ಲದಂತೆ ನಿರ್ನಾಮವಾಗಿದೆ. ಮೂರು ದಿನಗಳಲ್ಲಿ ಗಂಗೆಯ ಪ್ರವಾಹದ ಭರಕ್ಕೆ ಸಿಕ್ಕಿ ಅಕ್ಷರಶಃ ನಲುಗಿ ಹೋಗಿದೆ ಉತ್ತರ ಭಾರತ. ಅದರಲ್ಲೂ ಉತ್ತರಾಖಂಡ್‌ನಲ್ಲಿ ಗಂಗಾಮಾಯಿ ನಡೆಸಿದ ಹಾವಳಿಯನ್ನು ಸರಿ ಪಡಿಸಿಕೊಂಡು ಮತ್ತೆ ಬದುಕು ಕಟ್ಟಿಕೊಳ್ಳಲು ಕನಿಷ್ಠ 2 ವರ್ಷಗಳಾದರೂ ಬೇಕು.
ಹೌದು, ಮೊನ್ನೆ ಮೊನ್ನೆ (ಜುಲೈ 18) ಭಾಗೀರಥಿ ಜಯಂತಿ. ಅವತ್ತು ಭಗೀರಥನ ತಪಸ್ಸಿಗೆ ಒಲಿದ ಮಾತೆ ಗಂಗೆ ಭುವಿಗಿಳಿದು ಬಂದ ದಿನ. ಭಾರತೀಯ ನಂಬಿಕೆಯನ್ವಯ ಅದು ಅತ್ಯಂತ ಮಹತ್ವಪೂರ್ಣ ದಿನ. ವರವಾಗಿ ಒಲಿದಿಳಿದು ಬಂದ ಗಂಗೆ ಭಾರತದ ಬದುಕನ್ನು ಪಾವನವಾಗಿಸಿದ್ದಾಳೆ. ಅವತ್ತಿನಿಂದ ಇವತ್ತಿನವರೆಗೆ ಅವಳು ನಮಗೆ ಪೂಜನೀಯಳೆ, ವರಪ್ರದಳೇ. ಇಲ್ಲಿನ ಜನಕೋಟಿಯ ಪಾಪಗಳನ್ನು ತೊಳೆಯುತ್ತಲೇ ಬಂದಿರುವ ಗಂಗೆಯ ಮೇಲಿನ ನಮ್ಮ ದೌರ್ಜನ್ಯ ಮಿತಿಮೀರುವ ಹಂತದಲ್ಲಿದ್ದಾಗ ಅಮ್ಮ ಕೋಪಗೊಂಡಿದ್ದು ಸಹಜ.
ಗಂಗಾ ತಟದಲ್ಲಿರುವ 84 ಘಾಟ್‌ನಲ್ಲಿ ವರ್ಷಕ್ಕೆ 36 ಸಾವಿರ ಹೆಣಗಳಿಗೆ ಮುಕ್ತಿ ದೊರಕಿಸಿಕೊಡಲಾಗುತ್ತಲೇ ಇತ್ತು. ಗಂಗೆಯ ಒಡಲಲ್ಲಿ ಅರೆ ಬೆಂದ ಹೆಣಗಳೂ ಎಂದಿನಂತೆಯೇ ತೇಲಿ ಹೋಗುತ್ತಲೇ ಇದ್ದವು. ವಾರಾಣಾಸಿಯ ಸುತ್ತಮುತ್ತಲಿನ ತ್ಯಾಜ್ಯಗಳೆಲ್ಲವೂ ಇನ್ನಷ್ಟು ನಮ್ಮ ದೇವನದಿಯನ್ನು ಮಲಿನಗೊಳಿಸುತ್ತಲೇ ಇತ್ತು. ಅವೆಲ್ಲವು ನಾವು ಅತಿ ಪವಿತ್ರ ಎಂದು ಪೂಜಿಸಿಕೊಂಡು ಬಂದಿರುವ ಗಂಗಾ ನದಿಯನ್ನು ಮಲಿನಗೊಳಿಸಿದ್ದವು. ಆದರೆ, ನಮ್ಮ ಮಾತೆಯ ಅಸ್ತಿತ್ವಕ್ಕೆ ಧಕ್ಕೆ ಬಂದದ್ದು ತೀರಾ ಇತ್ತೀಚಿನ ಎರಡು ದಶಕಗಳಲ್ಲಿ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಗಂಗೆಯ ಉಗಮತಾಣ. ಇಲ್ಲಿಂದಲೇ ಗಂಗೆ ಮುಂದೆ ವಿವಿಧ ರಾಜ್ಯಗಳಲ್ಲೆಲ್ಲ ಹರಿಯುತ್ತಾಳೆ. ಮೂಲದಲ್ಲೇ ಆಕೆಯನ್ನು ಬತ್ತಿಸುವ ಹುನ್ನಾರ ಸರಕಾರಗಳ ಬೃಹತ್ ಅಣೆಕಟ್ಟು ಯೋಜನೆಗಳಿಂದ ನಡೆದಿವೆ. ಇದರೊಂದಿಗೆ ತೆಹರಿ ಅಣೆಕಟ್ಟಿನ ಗುಮ್ಮ, ಮನೇರಿ ಭಾಲಿ ಯೋಜನೆಯ ದುಷ್ಪರಿಣಾಮ, ಉತ್ತರಾಖಾಂಡ್‌ನ ಗಣಿಗಾರಿಕೆಯ ಅಪಾಯ ಎರಡೂ ಗಂಗೆಯನ್ನು ಇನ್ನಷ್ಟು ಆತಂಕದ ಅಂಚಿಗೆ ತಂದು ನಿಲ್ಲಿಸಿವೆ. ಗಂಗೆಯ ಮಡಿಲಲ್ಲಿ ಕೈಗೆತ್ತಿಕೊಂಡಿರುವ ಜಲ ವಿದ್ಯುತ್ ಯೋಜನೆ ಹಾಗೂ ಆಣೆಕಟ್ಟುಗಳಿಂದಾಗಿ 50 ಕಿಮೀಗೂ ಹೆಚ್ಚು ದೂರ ಗಂಗೆ ಗುಪ್ತಗಾಮಿನಿಯಾಗಿ ಹೋಗುವ ಆತಂಕ ತೀವ್ರವಾಗಿದೆ. ಅದರಲ್ಲೂ ಗಂಗೆಯ ಮೂಲ ಶ್ರೋತವೆನಿಸಿರುವ ಭಾಗೀರಥಿ ಮತ್ತು ಅಲಕಾನಂದೆಯರಿಗೆ ನಿರ್ಮಿಸಲು ಉದ್ದೇಶಿಸಿರುವ ಒಡ್ಡುಗಳು ಇಡೀ ದೇವನದಿಯನ್ನೇ ಅದೃಶ್ಯ ಮಾಡುವ ಅಪಾಯ ಇದ್ದೇ ಇದೆ. ಇದರ ವಿರುದ್ಧ ದಶಕದಿಂದ ಖ್ಯಾತ ಪರಿಸರ ತಜ್ಞ ಪ್ರೊ. ಜಿ. ಡಿ ಅಗರ್ವಾಲ್ ಅವರು ನಿರಂತರ ನಿರಶನದ ಹೋರಾಟವನ್ನು ನಡೆಸುತ್ತಲೇ ಬಂದಿದ್ದಾರೆ. ತಮ್ಮ 80ರ ಇಳಿ ವಯಸ್ಸಿನಲ್ಲಿ ಇತ್ತೀಚೆಗೆ ಸನ್ಯಾಸವನ್ನೂ ಸ್ವೀಕರಿಸಿ ಗಂಗಾ ತಪಸ್ಯವನ್ನೇ ಕೈಗೊಂಡಿದ್ದಾರೆ. ಕಾಕತಾಳೀಯವೆಂದರೆ ಗಂಗೆಯ ಮಡಿಲಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಅಕ್ರಮ ನೀರಾವರಿ, ವಿದ್ಯುತ್ ಯೋಜನೆಗಳನ್ನು ಖಂಡಿಸಿ ಮೊನ್ನೆ ಭಾಗೀರಥಿ ಜಯಂತಿಯಂದೇ ಮತ್ತೊಮ್ಮೆ ಸ್ವಾಮಿ ಸ್ವಾನಂದರು ಅನಿಶ್ಚಿತ ನಿರಶನವನ್ನು ಆರಂಭಿಸಿದ್ದಾರೆ. ಅವತ್ತೇ ಉತ್ತರಾಖಂಡ್‌ನಲ್ಲಿ ಪ್ರವಾಹ ಉಕ್ಕೇರಲಾರಂಭಿಸಿದ್ದು. ಪ್ರಗತಿ, ಅಭಿವೃದ್ಧಿಯ ಹೆಸರಿನ ಅವೈಜ್ಞಾನಿಕ ಆತುರಗಳಿಂದ ಖಂಡಿತಾ ನಿಸರ್ಗ ಮುನಿಸಿಕೊಳ್ಳುತ್ತದೆ ಎಂಬುದಕ್ಕೆ ಈ ಪ್ರವಾಹ ಸಾಕ್ಷಿ. ಏಕೆಂದರೆ ಯೋಜನೆಗಳಿಂದ ಗಂಗೆಯ ಹರಿವು ದಿಕ್ಕು ತಪ್ಪಿದೆ. ದಡದ ಗುಂಟ ಒತ್ತುವರಿ ಅವಳ ಸ್ವಾತಂತ್ರ್ಯವನ್ನು ಕಸಿದಿದೆ. ಪರಿಣಾಮ ಪ್ರವಾಹವನ್ನು ನಾವೇ ಆಹ್ವಾನಿಸಿಕೊಂಡಿದ್ದೇವೆ.
ಹಾಗೆ ನೋಡಿದರೆ ಈಗ ಉತ್ತರ ಭಾರತದಲ್ಲಿ ಮಳೆ ಹೊಸತೇನಲ್ಲ, ಬಂಗಾಳಕೊಲ್ಲಿಯಿಂದ ಉತ್ತರದ ಕಡೆ ಬೀಸುವ ನೈಋತ್ಯ ಮಾನ್ಸೂನ್ ಒಂದಷ್ಟು ಮಳೆ ಚೆಲ್ಲಿ ಹೋಗುತ್ತವೆ. ಈ ವರ್ಷ ಇದು ತುಸು ಪ್ರಬಲವಾಗಿದೆ ಎಂದಾದರೂ ಈ ಪರಿ ಪ್ರಳಯ ಸದೃಶ ಮಳೆ ಸುರಿಯಲು ಕಾರಣವಿಲ್ಲ. ವಾಯುಭಾರ ಕುಸಿತವೆಂದು ಹೇಳಿದರೂ ಬಹುದಿನಗಳವರೆಗೆ ಸ್ಥಿರವಾಗಿರುವ ಸಂಭವ ಕಡಿಮೆ. ಮುನ್ಸೂಚನೆಗೆ ಸಿಗದಷ್ಟು ಹವಾಗುಣದಲ್ಲಿ ಏರುಪೇರಾಗಿದೆ ಎಂಬುದಂತೂ ಸತ್ಯ. ಈ 'ಏರುಪೇರು' ಎನ್ನುವುದನ್ನು ಸ್ವಭಾವದ ಬದಲಾವಣೆ ಎಂದೂ ವಿಶ್ಲೇಷಿಸಬಹುದೇನೋ? ಮಾನ್ಸೂನ್‌ಗಳ ಸ್ವಭಾವ ಬದಲಾಗುವುದು ಸಾಮಾನ್ಯ ಸಂಗತಿ.
ಆದರೆ ಇದರ ಹಿಂದೆ ಅತ್ಯಂತ ನಿಖರವಾದ ಪ್ರಕೃತಿ ವಿಜ್ಞಾನವೊಂದು ಕೆಲಸ ಮಾಡುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇದು ವಾತಾವರಣದಲ್ಲಿನ ಉಷ್ಣತೆಯ ಮೇಲೆ ಪೂರ್ಣ ಅವಲಂಬಿತ. ಭೂಮಿ ಬಹುಬೇಗ ಬಿಸಿಯನ್ನು ಹೀರಿಕೊಂಡು ಕಾಯುತ್ತದೆ. ಅಷ್ಟೇ ಬೇಗ ಚಳಿಗಾಲದಲ್ಲಿ ತಣ್ಣಗೂ ಆಗುತ್ತದೆ. ಆದರೆ ಭೂಮಿಯಿಂದ ಹೊರಹೊಮ್ಮುವ ಉಷ್ಣಾಂಶ ವಾತಾವರಣದಲ್ಲಿ ಸೇರಲೇಬೇಕು. ಇದರಿಂದ ಗಾಳಿ ಬಿಸಿಯಾಗಿ ಮೇಲೆ ಸಾಗುತ್ತದೆ. ಹೀಗೆ ಸಾಗುವಾಗ ಭೂಮಿ ಹಾಗೂ ವಾತಾವರಣದಲ್ಲಿನ ತೇವಾಂಶವನ್ನು ಆವಿಯಾಗಿಸಿಕೊಂಡು ಹೊತ್ತೊಯ್ಯುತ್ತದೆ. ಇಂಥ ಆವಿ ಮೋಡವಾಗಿ ರೂಪುಗೊಳ್ಳುತ್ತದೆಂಬ ಸಾಮಾನ್ಯ ವಿಜ್ಞಾನ ಎಲ್ಲರಿಗೂ ತಿಳಿದಿರುವಂಥದೇ. ಆದರೆ, ಮೋಡದಲ್ಲಿ ನೀರಷ್ಟೇ ಇರುವುದಿಲ್ಲ. ಅದರಲ್ಲಿ ಒಂದಷ್ಟು ಹಿಮಕಣಗಳು, ಗಾಳಿ ಸಹ ತುಂಬಿಕೊಂಡಿರುತ್ತದೆ. ಇದರ ಸಾಂದ್ರತೆ ಹೆಚ್ಚಿದಂತೆಲ್ಲ ಮಳೆ ಹೆಚ್ಚುವುದು ಅನಿವಾರ್ಯ. ಏಕೆಂದರೆ ಮೋಡದೊಳಗಣ ಗಾಳಿಯೊಂದಿಗೆ ತಂಪಾದ ಗಾಳಿ ಬೆರೆತೊಡನೆ ಹನಿಗಳು ರೂಪುಗೊಳ್ಳುತ್ತವೆ. ಗುಟ್ಟೆಂದರೆ ಮೋಡದಲ್ಲಿ ಗಾಳಿಯ ಅಂಶ ಅಧಿಕಗೊಂಡಾಗ ಭಾರ ಹೆಚ್ಚುತ್ತದೆ. ಈ ಭಾರ ಇಳಿಸಿಕೊಳ್ಳಲು ಮಳೆಯಾಗಿ ಸುರಿಯುವುದು ಅನಿವಾರ್ಯ. ಆಗಲೂ ಮಳೆ ಹೆಚ್ಚುತ್ತದೆ. ಜತೆಗೆ ವಾತಾವರಣದಲ್ಲಿನ ಹೆಚ್ಚಿನ ಶಾಖದಿಂದ ಹಿಮಕಣಗಳು ಅಕಾಲದಲ್ಲಿ ದ್ರವರೂಪಕ್ಕೆ ತಿರುಗುತ್ತಿವೆ.
ಹೇಗೆ ನೋಡಿದರೂ ಉತ್ತರದ ಈಗಿನ ಮಳೆಗೆ ಕಾರಣ ಇದ್ದೇ ಇದೆ. ಇಲ್ಲಿನ ಜನವಸತಿ ಪ್ರದೇಶದಲ್ಲಿನ ಹೆಚ್ಚಳ, ಕೈಗಾರಿಕೆಗಳ ದಟ್ಟಣೆ, ವಾಹನಗಳ ವಿಪರೀತ ಓಡಾಟಗಳಿಂದ ಈ ಪ್ರದೇಶದ ಉಷ್ಣಾಂಶ ಹೆಚ್ಚುತ್ತಲಿದೆ ಎಂಬುದರಲ್ಲಂತೂ ಅನುಮಾನವೇ ಇಲ್ಲ. ಜತೆಗೆ ಹಸಿರು, ಕೆರೆಗಳೆಲ್ಲ ಮಾಯವಾಗಿ ಭೂಮಿಯಲ್ಲಿ ಉಷ್ಣಾಂಶದ ಸಮತೋಲನ ತಪ್ಪಿದೆ. ಹೀಗಾಗಿ ಈ ಪ್ರದೇಶದಲ್ಲಿನ ಆವಿಯ ಪ್ರಮಾಣ ಹೆಚ್ಚುತ್ತಿದೆ. ಮಾತ್ರವಲ್ಲ ಆಮ್ಲಜನಕದ ಸಾಂದ್ರತೆ ಕುಸಿದಿರುವುದನ್ನೂ ನಾವು ಅನುಭವಿಸಿದ್ದೇವೆ. ಇವೆಲ್ಲದರ ಪರಿಣಾಮ ಈ ಪರಿಯ ಪ್ರವಾಹ ಸದೃಶ ಮಳೆ ಕಾಡುತ್ತಿರುವುದು ಅಸಹಜವೇನಲ್ಲ.
ಇಲ್ಲಿ ಇನ್ನೊಂದು ವಿಷಯ. ನಮ್ಮ ಋತುಮಾನ ವ್ಯವಸ್ಥೆಗೆ ಭೂಮಿಯ ಸಮಭಾಜಕ ವೃತ್ತದಲ್ಲಿನ ಉಷ್ಣತೆ ಹಾಗೂ ಭೂಮಿಯ ಪರಿಭ್ರಮಣಗಳೆರಡೂ ಪ್ರಮುಖ ಕಾರಣ. ಧ್ರುವ ಪ್ರದೇಶಗಳಲ್ಲಿನ ಉಷ್ಣತೆ ಹಾಗೂ ಸಮಭಾಜಕದ ಬಳಿಯ ಉಷ್ಣತೆಯಲ್ಲಿನ ಅಂತರ ಹೆಚ್ಚಿದಂತೆಲ್ಲ ಮಳೆಯ ಗತಿ ಬದಲಾಗುತ್ತದೆ. ಸದ್ಯದ ಸನ್ನಿವೇಶದಲ್ಲಿ ಸಮಭಾಜಕ ವೃತ್ತದ ಉತ್ತರಭಾಗದಲ್ಲಿ ಉಷ್ಣಾಂಶ ತೀರಾ ಹೆಚ್ಚಾಗಿರುವುದರಿಂದ ಭಾರತದಲ್ಲಿ ಮಳೆ ಹೆಚ್ಚಿದೆ.
ಭಾರತದಲ್ಲಿ ಜನಿಸಿ ಪಾಕ್‌ನತ್ತ ಹರಿಯುವ ಜೀಲಂ, ಚಿನಾಬ್, ಸಿಂಧೂ, ಸಟ್ಲೇಜ್, ಬಿಯಾಸ್, ರಾವಿ ನದಿಗಳು, ನೇಪಾಳದಿಂದ ಭಾರತದತ್ತ ಬರುವ ಮಹಾಕಾಳಿ, ಪಂಜೇಶ್ವರ, ಕರ್ನಾಲಿ, ಕೋಶಿ, ಗಂಡಕಿಗಳಲ್ಲದೇ ಉತ್ತರ ಭಾರತದ ಜೀವ ಸೆಲೆ ಎನ್ನಿಸಿರುವ ಗಂಗಾ, ಯಮುನಾ, ಬ್ರಹ್ಮಪುತ್ರ ನದಿಗಳು ಹಿಮಗಡ್ಡೆಗಳಿಂದಲೇ ಮೈತುಂಬಿಕೊಳ್ಳುತ್ತವೆ. ಭಾರತದ ಅತೀ ಉದ್ದದ ನದಿ ಜಲಾನಯನ ಪ್ರದೇಶವನ್ನು ಹೊಂದಿರುವ ಗಂಗೋತ್ರಿಯ ಜಲ ಮೂಲವಾದ ಹಿಮಗಡ್ಡೆಗಳು ಸರಾಸರಿ ವರ್ಷಕ್ಕೆ 23 ಲೀಟರ್‌ಗಳಷ್ಟು ಕುಸಿಯುತ್ತಿವೆ ಎನ್ನುತ್ತದೆ ಅಧ್ಯಯನ. ನೇಪಾಳದಲ್ಲಿ ವಾತಾವರಣದಲ್ಲಿ ಉಷ್ಣತೆಯ ಪ್ರಮಾಣ ವರ್ಷಕ್ಕೆ 0.06 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಹೆಚ್ಚುತ್ತಿದೆ. ಆ ದೇಶದ ಮೂರು ಪ್ರಮುಖ ನದಿಗಳ ಹರಿವಿನ ಮಟ್ಟ ಗಣನೀಯ ಹೆಚ್ಚಿದೆ. ಇದೂ ಗಂಗೆಯ ಪ್ರವಾಹಕ್ಕೆ ಕಾರಣವಾಗಿರಲೂಬಹುದು.
ಇದೆಲ್ಲಕ್ಕಿಂತ ಪ್ರಮುಖ ಕಾರಣ ಗಂಗಾ ತಟದಲ್ಲಿನ ತೀರಾ ಅವೈಜ್ಞಾನಿಕ ನೀರಾವರಿ ಯೋಜನೆಗಳು ಮತ್ತು ಅಕ್ರಮ ಗಣಿಗಾರಿಕೆ. ಇದು ಒಂದೆಡೆ ನದಿಯ ಹರಿವಿನ ದಿಕ್ಕನ್ನು ತಪ್ಪಿಸಿ ಊರೊಳಗೆ ನೀರು ನುಗ್ಗುವಂತೆ ಮಾಡಿದ್ದರೆ ಮಳೆಯ ದಿಕ್ಕನ್ನೂ ತಪ್ಪಿಸುತ್ತಿದೆ. ಭೂಮಿಯ ಮೇಲೆ ಬೀಳುವ ಮಳೆಯ ನೀರು ನದಿ ಸೇರಿ ಅಲ್ಲಿಂದ ನಿಗದಿತ ದೂರದವರೆಗೆ ಸಾಗಿ ಸಮುದ್ರ ಸೇರುತ್ತದೆ. ಸಮುದ್ರದ ನೀರು ಆವಿಯಾಗಿ, ಮೋಡವಾಗಿ ಧ್ರುವ ಪ್ರದೇಶಗಳತ್ತ ಇಳಿಯುತ್ತದೆ. ಅಲ್ಲಿಂದ ಬೀಸಿ ಬರುವ ತಂಗಾಳಿ ಭೂಮಧ್ಯ ರೇಖೆಯತ್ತ ಮೊಡಗಳನ್ನು ತಳ್ಳಿ ಭೂಮಿಯ ಮೇಲೆ ಮಳೆ ಸುರಿಸುತ್ತದೆ. ಆದರೆ ಈಗ ಭೂಮಿಯ ಮೇಲೆ ಬೀಳುವ ನೀರು ನದಿಯ ಗುಂಟ ಹರಿದು ಸಮುದ್ರ ಸೇರುವುದೇ ಇಲ್ಲ. ಬದಲಾಗಿ ಒಡ್ಡು, ಕಟ್ಟೆ, ಡ್ಯಾಂಗಳ ಪರಿಣಾಮ ಅಲ್ಲಲ್ಲಿಯೇ ಆವಿಯಾಗಿ ಮೇಲೆ ಸಾಗುತ್ತಿದೆ. ಆದರೆ ಈ ಆವಿಯನ್ನು ಒಳಗೊಂಡ ಮೋಡವನ್ನು ತಳ್ಳುವ ತಂಗಾಳಿ ಎಲ್ಲಿಯೂ ಅದನ್ನು ಸಂಧಿಸುವುದೇ ಇಲ್ಲ. ಹೀಗಾಗಿ ಒಂದೇ ಕಡೆಗಳಲ್ಲಿ ಮೋಡಗಳು ದಟ್ಟೈಸುತ್ತಾ ಸಾಗಿ ತೀರಾ ಭಾರವಾದಾಗೊಮ್ಮೆ ಒಮ್ಮೆಲೆ ಕುಸಿದುಬಿಡುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಸೃಷ್ಟಿಯಾಗಿರುವ 'ಕೃತಕ ಪ್ರವಾಹ' ಮುಂದಿನ ದಿನಗಳಲ್ಲಿ ಎಲ್ಲೆಲ್ಲಿಗೆ ಬೇಕಾದರೂ ಬಂದೆರಗಬಹುದು.
ಅಮೆರಿಕ, ಕೆನಡಾ, ಫ್ರಾನ್ಸ್, ಬ್ರಿಟನ್, ಜರ್ಮನಿ, ಡೆನ್ಮಾರ್ಕ್ ಕೊನೆಗೆ ರಷ್ಯಾ ಹಾಗೂ ಚೀನಾಗಳಲ್ಲೂ ಕಟ್ಟಿದ ಅಣೆಕಟ್ಟೆಗಳನ್ನೆಲ್ಲ ಒಡೆದು ಹಾಕುವ 'ಘನಕಾರ್ಯ' ಇದೀಗ ನಡೆಯುತ್ತಿದೆ. ಅದಕ್ಕವರು 'ರಿವರ್ ರಿವೈವಲ್‌' (ನದಿಗಳ ಪುನಶ್ಚೇತನ) ಎಂಬ ಹೆಸರನ್ನು ಕೊಟ್ಟಿದ್ದಾರೆ. ಒಂದಲ್ಲ, ಎರಡಲ್ಲ. ಬರೋಬ್ಬರಿ ಐವತ್ತಕ್ಕೂ ಹೆಚ್ಚು ಇಂಥ ದುಸ್ಸಾಹಸದ ಇತಿಹಾಸ ಇಂದು ನಮ್ಮೆದುರಿಗೆ ಸಿಗುತ್ತಿರುವಾಗಲೇ ನಾಡಿನ ಜೀವನದಿಗಳನ್ನು ಇತಿಹಾಸವಾಗಿಸುವ 'ಐತಿಹಾಸಿಕ' ಯೋಜನೆಗಳಿಗೆ ಅದರಲ್ಲೂ ಗಂಗಾ ತಟದಲ್ಲಿ ನಾವು ಅಡಿ ಇಡುತ್ತಿದ್ದೇವೆ.
ಇಂದು ನದಿಗಳಿಗೆ ಕಟ್ಟಿದ ಹಲವು ಒಡ್ಡುಗಳಿಂದಾಗಿ ದೇಶದ ಶೇ. 1ರಷ್ಟು ನೆಲ ಜಲಾಶಯವಾಗಿದ್ದರೂ ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ದೇಶದ ಶೇ. 3ರಷ್ಟು ನೆಲದ ಮೇಲಿದ್ದ ಕೆರೆಗಳು, ಬೀಳುತ್ತಿದ್ದ ಮಳೆಯ ಕಾಲುಭಾಗವನ್ನು ಹಿಡಿದು ಇರಿಸಿಕೊಳ್ಳುತ್ತಿದ್ದವಂತೆ. ಹಾಗೆಂದು ಜಲಾಶಯಗಳು ಎಲ್ಲ ರೀತಿಯ ಅಗತ್ಯವನ್ನು ಪೂರೈಸಿಲ್ಲ. ಅಂದ ಮೇಲೆ ಅಭಿವೃದ್ಧಿ ಎಂಬುದಕ್ಕೆ ಏನರ್ಥ? ಹುಸಿ ಅಭಿವೃದ್ಧಿಗಿಂತ ನಿಸರ್ಗ ಸಮತೋಲನ ರಕ್ಷಣೆಯೇ ನಮ್ಮ ಆದ್ಯತೆಯಾಗುವುದೊಳಿತು. ಇಲ್ಲದಿದ್ದರೆ ನಮ್ಮ ಅಭಿವೃದ್ಧಿ(?) ಹೀಗೆಯೇ ನೀರಿನಲ್ಲಿ ಕೊಚ್ಚಿಹೋಗುವುದರಲ್ಲಿ ಸಂಶಯವಿಲ್ಲ.

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!