ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಜೂನ್ 25, ಭಾರತ ಮರೆಯಲಾಗದ ದಿನ

Srinivasa Murthy VN
Updated On : 26 Jun 2013, 11:04 am

ಜೂನ್ 25. ಭಾರತದ ಪಾಲಿಗೆ ವಿಶೇಷ ದಿನವೇ ಸರಿ. ಕ್ರಿಕೆಟ್ ಧರ್ಮ ಎಂದು ಅಪ್ಪಿಕೊಂಡಿರುವ ದೇಶಕ್ಕೆ 'ಲಾರ್ಡ್ಸ್‌'ನ ಅಮೋಘ ಆಶೀರ್ವಾದ ಸಿಕ್ಕಿದ ದಿನ.  1983ರ ಜೂನ್ 25ರಂದೆ ಕಪಿಲ್ ಬಳಗ ಪ್ರುಡೆನ್ಶಿಯಲ್ ವರ್ಲ್ಡ್‌ಕಪ್ ಎತ್ತಿ ಹಿಡಿದಿತ್ತು! ಬಹುಶಃ ಇವತ್ತಿನ ಭಾರತೀಯ ಕ್ರಿಕೆಟ್‌ನ ಎಲ್ಲ ವೈಭವ-ಪುಳಕಗಳಿಗೆ ಬರೆದ ಮಹಾಮುನ್ನುಡಿ ಆ ವಿಜಯ. ಆ ಸಮಯದಲ್ಲಿ ದೈತ್ಯರೆನಿಸಿಕೊಂಡಿದ್ದ ವೆಸ್ಟ್ ಇಂಡೀಸ್‌ನಂಥ ತಂಡಗಳ ಎದುರು, ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ 24ರ ಹರೆಯದ ಕಪಿಲ್‌ದೇವ್ ದೇಶಕ್ಕೆ ಮೊದಲ ವಿಶ್ವಕಪ್ ದೊರಕಿಸಿಕೊಡುವುದರಲ್ಲಿ ಯಶಸ್ವಿಯಾಗಿದ್ದರು.
ಈ ಮಹಾಮುನ್ನುಡಿಗೂ ಮೊದಲಿನ ಮುನ್ನುಡಿಯೊಂದನ್ನು ನೆನಪಿಸಿಕೊಳ್ಳಬೇಕು. ಅದೂ ಅನಾವರಣಗೊಂಡಿದ್ದು ಜೂನ್ 25ರಂದೆ. ಭಾರತ ತಂಡ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದು 1932ರ ಜೂನ್ 25ರಂದು. ಅದಕ್ಕೂ ವೇದಿಕೆ ಒದಗಿಸಿದ್ದು ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನವೇ. 1983ರ ವಿಶ್ವಕಪ್ ಕ್ರಿಕೆಟ್ ಆರಂಭದಲ್ಲಿ ಗೆಲ್ಲುವ ತಂಡಗಳ ಸಂಭಾವ್ಯ ಪಟ್ಟಿಯಲ್ಲಿ ಭಾರತ ಲೆಕ್ಕಕ್ಕೇ ಇರಲಿಲ್ಲ. ಬುಕ್ಕಿಗಳು ಆ ಸಮಯದಲ್ಲಿ ಭಾರತದ ಮೇಲೆ 66:1ರ ಆಧಾರದಲ್ಲಿ ಬೆಟ್ ಕಟ್ಟಿದ್ದರಂತೆ. ಆದರೆ ಎಲ್ಲರ ಲೆಕ್ಕಾಚಾರವನ್ನೂ ಬುಡಮೇಲು ಮಾಡಿದ ಭಾರತ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ಭಾರತವು ಆಗಿನ ಚಾಂಪಿಯನ್‌ಗಳಾಗಿದ್ದ ವೆಸ್ಟ್‌ಇಂಡೀಸ್ ವಿರುದ್ಧ 40 ರನ್‌ಗಳ ಜಯ ಗಳಿಸಿತು. ತಂಡದ ಬಗ್ಗೆ ಈಗಿನಷ್ಟು ಹವಾ ಸೃಷ್ಟಿಯಾಗಿರಲಿಲ್ಲವಾದ್ದರಿಂದ ಆ ಪಂದ್ಯವನ್ನು ಬಹಳ ಸೀಮಿತ ಅದೃಷ್ಟಶಾಲಿ ಭಾರತೀಯರು ವೀಕ್ಷಿಸಿದರು. ಉಳಿದವರು ಭಾರತದ ವಿಜಯದ ನಂತರ ಹುಟ್ಟಿಕೊಂಡ ಹವಾಕ್ಕೆ ಮೈಯೊಡ್ಡಿ, ವಿಡಿಯೊ ಸಂಗ್ರಹವನ್ನು ನೋಡಿ ಆಸ್ವಾದಿಸಿದರು.
1983ರ ಜೂನ್ 25ರಂದು ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಿನ ಪಂದ್ಯ ವೀಕ್ಷಣೆಗೆ ಲಾರ್ಡ್ಸ್‌ನಲ್ಲಿ ನೆರೆದಿದ್ದ ಜನ 2,32, 081. 1975ರ ಫೈನಲ್ ವೀಕ್ಷಣೆಗೆ ಸೇರಿದ್ದ 1,60,000 ಮಂದಿ ಮತ್ತು 1979ರ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಸೇರಿದ್ದ 1,32,000 ಮಂದಿಯ ಪ್ರಮಾಣಕ್ಕೆ ಇದನ್ನು ಹೋಲಿಸಿ ನೋಡಿದಾಗ ಇದರ ಅಗಾಧತೆ ಅರ್ಥವಾಗುತ್ತದೆ.
ಅಷ್ಟಾಗಿಯೂ ಆ ಸಮಯಕ್ಕೆ ಇಂಥದೊಂದು ಐತಿಹಾಸಿಕ ಪಂದ್ಯ ನಡೆಯುತ್ತಿದೆ ಎಂಬ ಖಬರಿದ್ದ ಭಾರತೀಯರು ಶೇಕಡ 20ಕ್ಕೂ ಕಡಿಮೆ ಎನ್ನುತ್ತಾರೆ ವಿಶ್ಲೇಷಕರು. ಟಾಸ್ ಗೆದ್ದ ವೆಸ್ಟ್‌ಇಂಡೀಸ್ ನಾಯಕ ಕ್ಲೈವ್ ಲಾಯ್ಡ್ ಕ್ಷೇತ್ರರಕ್ಷಣೆಯನ್ನೆ ಆಯ್ದುಕೊಂಡ. ಭಾರತದ ಬ್ಯಾಟಿಂಗ್ ಅನ್ನು ಮೊದಲಿಗೇ ಧೂಳಿಪಟ ಮಾಡಿ, ನಂತರ ಆರಾಮವಾಗಿ ಮ್ಯಾಚ್ ಗೆದ್ದರಾಯಿತು ಎಂಬ ಹವಣಿಕೆ ಅವರದ್ದಾಗಿತ್ತು. ಅವರ ಎಣಿಕೆ ಸರಿಯಾಗಿ ಹೋಯಿತು ಅಂತಲೇ ಪ್ರಾರಂಭದಲ್ಲಿ ಅನ್ನಿಸಿತು.
ಓಪನಿಂಗ್‌ಗೆ ಆಗಮಿಸಿದ್ದ ಸುನಿಲ್ ಗವಾಸ್ಕರ್ ಯಾವುದೆ ಮ್ಯಾಜಿಕ್ ಮಾಡದೆ ಕೀಪರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ ಕ್ರಿಶ್ ಶ್ರೀಕಾಂತ್ ತಮ್ಮ ಬ್ಯಾಟಿಂಗ್‌ನಲ್ಲಿ ಥರಹೇವಾರಿ ಶಾಟ್‌ಗಳನ್ನು ಹೊಡೆಯುತ್ತ ಪಂದ್ಯವನ್ನು ಕಳೆಗಟ್ಟಿಸಿದರು. ಅವರಿಗೆ ಮೋಹಿಂದರ್ ಅಮರನಾಥ್ ಸಮರ್ಥ ಸಹಭಾಗಿತ್ವ ನೀಡಿದರು. 90 ರನ್‌ಗಳಿಗೆ ಎರಡು ವಿಕೆಟ್ ಎಂಬ ಗೌರವದ ಸ್ಥಾನ ತಲುಪಿತು ಭಾರತ. ಕಪಿಲ್, ಕೀರ್ತಿ ಆಜಾದ್, ರೋಜರ್ ಬಿನ್ನಿ ಸಾವಧಾನವಾಗಿ ಆಡಿದರು. ಎಲ್ಲ ವಿಕೆಟ್‌ಗಳ ನಷ್ಟಕ್ಕೆ ಭಾರತ 183 ರನ್ ಗಳಿಸಿತ್ತು. ಬಹಳ ಮುಖ್ಯವೆಂದರೆ 60 ಓವರ್‌ಗಳ ಪಂದ್ಯದಲ್ಲಿ ಭಾರತ 54.4 ಓವರ್‌ಗಳವರೆಗೂ ನಿಂತಿತ್ತು ಎಂಬುದು! ವೆಸ್ಟ್‌ಇಂಡೀಸ್ ಕೂಡ ಪ್ರಾರಂಭದಲ್ಲಿ ಕುಸಿಯಿತಾದರೂ ವಿವಿಯನ್ ರಿಚರ್ಡ್ಸ್ 28 ಬಾಲ್‌ಗಳಿಗೆ 33 ರನ್ ಹೊಡೆದು ಆರ್ಭಟಿಸಿದರು. ಮದನ್‌ಲಾಲ್ ಬೌಲಿಂಗ್‌ನಲ್ಲಿ ಕಪಿಲ್‌ಗೆ ಕ್ಯಾಚ್ ಒಪ್ಪಿಸಿ ರಿಚರ್ಡ್ಸ್ ನಿರ್ಗಮಿಸಿದಾಗ ಭಾರತದ ಪಾಳಯದಲ್ಲಿ ಸಂತಸದ ಹೊನಲು. ನಂತರ ಬಂದ ಕ್ಲೈವ್ ಲಾಯ್ಡ್ ಸಹ ಬೇಗನೆ ನಿರ್ಗಮಿಸಿದಾಗ ವೆಸ್ಟ್‌ಇಂಡೀಸ್‌ನ ಸ್ಕೋರ್ 66 ರನ್‌ಗಳಿಗೆ 5 ವಿಕೆಟ್.
ನಂತರದ್ದು ಇತಿಹಾಸ. ಭಾರತದ ವಿಕ್ರಮ.
1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡ ಗಳಿಸಿದ ಹಣವೆಷ್ಟು? ತಂಡಕ್ಕೆ ಬಹುಮಾನವಾಗಿ 20 ಸಾವಿರ ಪೌಂಡ್‌ಗಳು ದೊರೆತವು. ಪಂದ್ಯಶ್ರೇಷ್ಠ ಮೊಹಿಂದರ್ ಅಮರನಾಥ್‌ಗೆ 600 ಪೌಂಡ್. ಉಳಿದಂತೆ ಎಲ್ಲರಿಗೂ ಮೆಡಲ್‌ಗಳು ಮತ್ತು ಪ್ರುಡೆನ್ಶಿಯಲ್ ವಿಶ್ವಕಪ್ ಟ್ರೋಫಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement