ಎಂದಿನಂತೆ ಹುಲ್ಲು ಕಟಾವಿಗೆ ಹೋದ ಪೆರುಮಾಳ್‌ಗೆ ನಿಜಕ್ಕೂ ನಂಬಲಾಗಲಿಲ್ಲ. ಈ ವರ್ಷ ಹುಲ್ಲು ನೆಟ್ಟಿದ್ದ ಭಾಗದ ಗದ್ದೆಗೆ ಮಾತ್ರ ನೀರು ಗಡಿ ದಾಟಿ ಬರಲು ಬೆದರಿತ್ತು. ಹುಲ್ಲಿಗಾಗಿ ತೋಡಿದ್ದ ಗುಂಡಿಯುದ್ದಕ್ಕೂ ನೀರು ತುಂಬಿ ನಿಂತಿತ್ತು.
ಅದು ಸೇಲಂನಿಂದ 20 ಕಿ.ಮೀ. ದೂರದ ಪುಟ್ಟದೊಂದು ಗ್ರಾಮ ಕರುಮಪುರಂ. ಬಹುತೇಕ ಸಣ್ಣ ರೈತರೇ ಇರುವ ಪ್ರದೇಶ. ಬೇಸಿಗೆಯೆಂದರೆ 40 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಮಾಮೂಲು ಎನ್ನುವ ಸ್ಥಿತಿ. ಮಳೆ ಸರಾಸರಿ 800 ಮಿ. ಮೀ. ನಾಲ್ಕು ನೂರು ಅಡಿಯ ಕೆಳಗೆ ಅಂತರ್ಜಲ ಅಲ್ಲಲ್ಲಿ ಇಣುಕುತ್ತದೆ. ಜೂನ್- ಡಿಸೆಂಬರ್‌ನ ಅವಧಿಯಲ್ಲಿ ಒಂದಷ್ಟು ಬೆಳೆ ತೆಗೆದುಕೊಂಡರೆ ಮುಗಿಯಿತು. ಉಳಿದ ಅವಧಿಯಲ್ಲಿ ಅಷ್ಟೋ ಇಷ್ಟೋ ತರಕಾರಿ ಬೆಳೆದು ಜೀವನ ಸಾಗಿಸುತ್ತಾರೆ ರೈತರು.
ಗ್ರಾಮದ ಯುವ ರೈತ ಪೆರುಮಾಳ್‌ನದ್ದು ವಿಚಿತ್ರ ಸಮಸ್ಯೆ. ಕರ್ನಾಟಕದಲ್ಲಿ ಮಳೆಗಾಲ ಆರಂಭವಾಯಿತೆಂದರೆ ಸಣ್ಣಗೆ ನಡುಕ ಶುರುವಿಟ್ಟುಕೊಳ್ಳುತ್ತದೆ ಆತನಿಗೆ. ಕೃಷ್ಣಗಿರಿ, ಧರ್ಮಪುರಿಯಿಂದ ಆರಂಭವಾಗುವ ಬೆಟ್ಟಗಳ ಸರಣಿಯಲ್ಲಿ ನೂರಾರು ಪುಟ್ಟ ಪುಟ್ಟ ಅಜ್ಞಾತ ತೊರೆಗಳು ಜನಿಸಿ ಕೆಳಭಾಗಕ್ಕೆ ಹರಿಯುತ್ತವೆ. ಹಾಗೆ ಹರಿದುಬರುವ ತೊರೆಗಳಲ್ಲಿ ಚಿನ್ನಪೊಳೆಯೂ ಒಂದು. ಮಳೆಗಾಲದಲ್ಲಿ ಮಾತ್ರ ಪ್ರತ್ಯಕ್ಷಗೊಳ್ಳುವ ಇದು ಪೆರುಮಾಳ್‌ನ ಪಾಲಿಗೆ ಕಂಟಕಪ್ರಾಯ.
ಹೊಳೆಯ ಮಗ್ಗುಲಲ್ಲೇ ಇರುವ ಆತನ ಐದೂವರೆ ಎಕರೆ ಜಮೀನು ಸದಾ ಚಿನ್ನಪೊಳೆಗೆ ಆಹುತಿಯಾಗುತ್ತದೆ. ಸುತ್ತಮುತ್ತಲಿನ ಎಲ್ಲ ರೈತರಿಗಿರುವಂತೆ ಬೇಸಿಗೆಯ ನೀರಿನ ಕೊರತೆ ಒಂದೆಡೆ, ಮಳೆಗಾಲದಲ್ಲಿ ಹೊಳೆಯ ಅವಾಂತರ ಇನ್ನೊಂದೆಡೆ. ಪೆರುಮಾಳ್ ಜಮೀನಿರುವುದು ಒಂದು ದ್ವೀಪದ ಮಾದರಿಯಲ್ಲಿ.
ಜಮೀನಿನಲ್ಲಿ ಎರಡು ಬೋರ್‌ಗಳನ್ನು ಕೊರೆಸಿದ್ದರು ಅದರ ನೀರು ಗಡಸು. ಹೊಳೆಯಲ್ಲಿನ ಕ್ಲಾರಾಂಶವೆಲ್ಲ ಬೋರ್‌ಗೆ ಇಳಿದುಕೊಳ್ಳುತ್ತದೆ. ಅದು ಜಮೀನಿನ ಮಣ್ಣಿನ ಮೇಲೂ ಪರಿಣಾಮ ಬೀರಿದೆ. ಮಳೆಗಾಲದಲ್ಲಿ ಹೊಳೆ ತುಂಬಿದರೆ ನೀರು ಉಕ್ಕಿ ಜಮೀನಿಗೆ ನುಗ್ಗುತ್ತಿತ್ತು. ಮತ್ತೆ ನೀರಿಳಿದು ಹೋಗುವಾಗ ಹೊಲದಲ್ಲಿನ ಸಾರವನ್ನೆಲ್ಲ ಸೆಳೆದುಕೊಂಡು ಹೋಗಿ ಬಿಡುತ್ತಿತ್ತು. ಕಡು ಮಳೆಗಾಲದಲ್ಲಿ ಹೊಲದ ಮೇಲೆ ಹೆಚ್ಚೂ ಕಡಿಮೆ 1 ಮೀಟರ್‌ನಷ್ಟು ನೀರು ದಿನವೆಲ್ಲ ನಿಂತಿರುತ್ತದೆ. ಎಷ್ಟೇ ಗಟ್ಟಿಯಾಗಿ ಬದುಗಳನ್ನು ನಿರ್ಮಿಸಿದರೂ ಅದು ಕೊಚ್ಚಿಕೊಂಡು ಹೋಗಿ ಬಿಡುತ್ತದೆ. ಗ್ರಾಮದ 40 ಕುಟುಂಬಗಳ ಪೈಕಿ ಪೆರುಮಾಳ್ ಮಾತ್ರ ಇಂಥ ಸಮಸ್ಯೆ ಎದುರಿಸುತ್ತಿದ್ದ. ಉಳಿದವರ ಹೊಲ ಒಂದೋ ಹೊಳೆಯ ಆಚೆ ಬದಿಯಲ್ಲಿದೆ. ಇಲ್ಲವೇ ಹೊಳೆಯಿಂದ ಸಾಕಷ್ಟು ದೂರದಲ್ಲಿ, ಎತ್ತರದ ಪ್ರದೇಶದಲ್ಲಿದೆ.
ಒಂದು ವರ್ಷ ಹಾಗೆ ನೀರು ನಿಂತರೆ ಮುಂದಿನ ಎರಡು ವರ್ಷಗಳವರೆಗೆ ಆ ಪ್ರದೇಶದಲ್ಲಿ ಯಾವುದೇ ಬೆಳೆ ಸರಿಯಾಗಿ ಬರುತ್ತಿರಲಿಲ್ಲ. ಜೂನ್, ಜುಲೈನಲ್ಲಿ ಒಮ್ಮೆ ನೀರು ನಿಂತು ಇಳಿದರೆ ಮುಂದಿನ ಡಿಸೆಂಬರ್‌ವರೆಗೂ ಕೆಸರು ಹಾಗೆಯೇ ಉಳಿದು ನಂತರ ಗಟ್ಟಿಯಾಗುತ್ತಿತ್ತು. ಹೀಗಾಗಿ ಈ ಅವಧಿಯಲ್ಲಿ ಬೆಳೆ ತೆಗೆಯುವುದು ಕನಸಿನ ಮಾತೇ ಸರಿ. ನಂತರವಾದರೂ ಒಂದಷ್ಟು ತರಕಾರಿ ಬೆಳೆದುಕೊಳ್ಳೊಣವೆಂದುಕೊಂಡರೆ ರಣ ಬಿಸಿಲು ಆರಂಭವಾಗಿ ಬಿಡುತ್ತಿತ್ತು. ಉಪ್ಪಿನಂಶವೂ ಭೂಮಿಯಲ್ಲಿ ಹೆಚ್ಚಿ ಬೀಜ ಕಮರಿ ಹೋಗುತ್ತಿತ್ತು. ಒಟ್ಟಾರೆ ನೀರು ಬಂದು ನಿಂತರೂ ಪ್ರಯೋಜನವಿಲ್ಲದ ಪರಿಸ್ಥಿತಿ.
ದಿಕ್ಕುಗಾಣದೇ ಕುಳಿತಿರುವಾಗ ಹಟ್ಸನ್ ಆಗ್ರೋ ಲಿಮಿಟೆಡ್‌ನ ಹೈನುಗಾರಿಕೆ ಯೋಜನೆ ತಂಡದ ಸದಸ್ಯ ನ್ಯೂಜಿಲೆಂಡ್‌ನ ಶೇನ್ ವಿಟ್ಟೇಕರ್ ಪರಿಚಯವಾದರು. 'ಲ್ಯಾಂಡ್ ಶೇಪಿಂಗ್' ಬಗ್ಗೆ ಒಂದಷ್ಟು ಸಾಧ್ಯತೆಗಳ ಕುರಿತು ಸಂಸ್ಥೆಯ ರೈತ ತರಬೇತಿ ಶಿಬಿರದಲ್ಲಿ ಚರ್ಚಿಸಬಾರದೇಕೆ ಎಂಬ ಸಲಹೆ ಮುಂದಿಟ್ಟರು. ಒಮ್ಮೆ ಹೋಗಿ ಬರೋಣ ಎಂದು ಪೆರುಮಾಳ್‌ಗೂ ಅನ್ನಿಸಿತು.
ಸರಿ, ಮರು ತಿಂಗಳ ಮೊದಲ ಸೋಮವಾರವೇ ಸೇಲಂನಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ಪೆರುಮಾಳ್ ಹಾಜರಾದರು. ಅಲ್ಲಿ ಸಮಸ್ಯೆ ವಿಷದಪಡಿಸಿದರೂ ಹೇಳಿಕೊಳ್ಳುವಂಥ ಪರಿಹಾರ ಮಾರ್ಗವೇನೂ ದೊರೆಯಲಿಲ್ಲ. ಆದರೆ ಒಂದಷ್ಟು ಹುಲ್ಲಿನ ಬೀಜಗಳನ್ನು ಶಿಬಿರದಲ್ಲಿ ವಿತರಿಸಲಾಯಿತು. ಒಲ್ಲದ ಮನಸ್ಸಿನಿಂದಲೇ ಅದನ್ನು ತಂದು ಹೊಲದ ತುದಿಯ ಸಾಲಿಗೆ ಹಚ್ಚಿದ್ದ. ನಂತರದ ದಿನಗಳಲ್ಲಿ ಹೈನುಗಾರಿಕೆಯತ್ತಲೇ ಆಸಕ್ತಿ ಕುದುರಿ ಬ್ಯಾಂಕ್ ಸಾಲ ಪಡೆದು ಪುಟ್ಟ ಗೋ ಸಾಕಣೆ ಘಟಕವನ್ನೇ ಆರಂಭಿಸಿದ. ಮುಂದಿನ ಒಂದು ವರ್ಷದಲ್ಲಿ ಅದೇ ಜೀವನಾಧಾರವಾಗುವ ಮಟ್ಟಿಗೆ ಕೃಷಿಯಿಂದ ಪೆರುಮಾಳ್ ವಿಮುಖನಾಗಿದ್ದ.
ಈ ನಡುವೆ 2006ರಲ್ಲಿ ಮೇವಿನ ಖರೀದಿಯಲ್ಲಿ ಒಂದಷ್ಟು ವ್ಯತ್ಯಯವಾಗಿ ರೈತರು ತಾವೇ ಸ್ವತಃ ಹುಲ್ಲು ಬೆಳೆಸಲು ನಿರ್ಧರಿಸಿದರು. ಈ ಪೈಕಿ ಪೆರುಮಾಳ್ ಸಹ ಒಬ್ಬ. ಹೇಗೂ ಶಿಬಿರದಲ್ಲಿ ಕೊಟ್ಟ ಬೀಜ ಒಂದಷ್ಟು ಬೆಳೆದು ಹಿಂಡಾಗಿ ನಿಂತಿತ್ತು. ಒಂದೆರಡು ಬಾರಿ ಅದನ್ನು ಕತ್ತರಿಸಿಯೂ ಆಗಿತ್ತು. ಅದನ್ನೇ ಕಟಾವು ಮಾಡಿ, ಇನ್ನಷ್ಟು ಬೀಜಗಳನ್ನು ಸಾಲಿಗೆ ಹಚ್ಚಿದರೆ ಹೇಗೆ ಮಳೆಗಾಲದಲ್ಲಿನ ಅವಾಂತರದಿಂದ ಹೇಗೂ ಜಮೀನು ಪಾಳು ಬಿದ್ದಿದೆ. ಹೀಗಾದರೂ ಅದು ಉಪಯೋಗಕ್ಕೆ ಬರಲಿ ಎನ್ನಿಸಿತು. ಅದು ಕಾರ್ಯರೂಪಕ್ಕೂ ಬಂತು. ಹುಲ್ಲು ಬೆಳೆದಂತೆಲ್ಲ ಅದಕ್ಕೆ ಏರಿ ಮಾಡಿ ಕೊಡಲು ಪಕ್ಕದ ಮಣ್ಣು ಎತ್ತಿ ಹಾಕುತ್ತ ಬರುತ್ತಿದ್ದ ಪೆರುಮಾಳ್. ಹೀಗೆ ಮಾಡುತ್ತ ಸುಮಾರು ಒಂದೂವರೆ ಮೀಟರ್ ಆಳದ ಗುಂಡಿ ಉದ್ದಕ್ಕೂ ಹೊಳೆಯ ಬದಿಯಲ್ಲಿ ನಿರ್ಮಾಣವಾಗಿತ್ತು.
ಅಚ್ಚರಿ ಕಂಡಿದ್ದು ನಂತರದ ಮಳೆಗಾಲದಲ್ಲಿ. ಈ ಬಾರಿಯೂ ಚೆನ್ನಪೊಳೆ ತುಂಬಿತ್ತು. ಎಂದಿನಂತೆ ಹುಲ್ಲು ಕಟಾವಿಗೆ ಹೋದ ಪೆರುಮಾಳ್‌ಗೆ ನಿಜಕ್ಕೂ ನಂಬಲಾಗಲಿಲ್ಲ. ಈ ವರ್ಷ ಹುಲ್ಲು ನೆಟ್ಟಿದ್ದ ಭಾಗದ ಗದ್ದೆಗೆ ಮಾತ್ರ ನೀರು ಗಡಿ ದಾಟಿ ಬರಲು ಬೆದರಿತ್ತು. ಹುಲ್ಲಿಗಾಗಿ ತೋಡಿದ್ದ ಗುಂಡಿಯುದ್ದಕ್ಕೂ ನೀರು ತುಂಬಿ ನಿಂತಿತ್ತು. ಅದೂ ಮಿಕ್ಕಿ ಹರಿದು ಒಂದಷ್ಟು ಹೊಲದಲ್ಲಿ ಶಾಂತವಾಗಿ ತುಂಬಿಕೊಂಡಿತ್ತು. ಹಿಂದಿನ ವರ್ಷಗಳಂತೆ ಅಲೆಗಳಿರಲಿಲ್ಲ. ಆಳೆತ್ತರಕ್ಕೆ ಬೆಳೆದಿದ್ದ ಹುಲ್ಲು ಅಲೆಗಳನ್ನು ತಡೆದು ನಿಲ್ಲಿಸುತ್ತಿತ್ತು. ಮಾತ್ರವಲ್ಲ. ಅತ್ತಲಿಂದ ಹೊಳೆಯಲ್ಲಿ ತೇಲಿಬಂದ ತ್ಯಾಜ್ಯ ಹೊಲದೊಳಕ್ಕೆ ನುಗ್ಗದಂತೆ ಹುಲ್ಲಿನ ಪಂಜರದಂಥ ದಟ್ಟ ಬೇರುಗಳು ತಡೆದಿದ್ದವು. ತನ್ನ ಸಮಸ್ಯೆಗೆ ಇಷ್ಟು ಸುಲಭದಲ್ಲಿ ಪರಿಹಾರ ದೊರಕಬಹುದೆಂದು ಪೆರುಮಾಳ್ ಅಂದುಕೊಂಡಿರಲಿಲ್ಲ.
ಮುಂದಿನ ಎರಡು ದಿನದಲ್ಲಿ ಹೊಳೆಯ ನೀರಿಳಿದರೂ ಹೊಲದಲ್ಲಿನ ನೀರು ಇಳಿಯದಂತೆ ಹುಲ್ಲು ಸಾಲು ಹಾಗೂ ಗುಂಡಿಗಳು ತಡೆದಿದ್ದವು. ಹೀಗಾಗಿ ನೀರು ಹೊಲದಲ್ಲೇ ಇಂಗಿ, ಸಾರ ತೊಳೆದು ಹೋಗದಂತಾಯಿತು. ವಿಶೇಷವೆಂದರೆ ಬೋರ್‌ವೆಲ್ ಸಹ ನೀರುಕ್ಕಿಸುತ್ತಿತ್ತು.
ಅಂದೇ ವಿಟ್ಟೇಕರ್ ಅವರನ್ನು ಕರೆ ತಂದು ತೋರಿಸಿದ ಪೆರುಮಾಳ್ 'ಲ್ಯಾಂಡ್ ಶೇಪಿಂಗ್'ನ ಯೋಜನೆ ಮತ್ತೆ ಚಿಗುರೊಡೆಯಿತು. ಕೊನೆಗೆ ಎರಡು ತಿಂಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂತು. ಭೂಮಿಯ ಐದನೇ ಒಂದು ಭಾಗದಲ್ಲಿ ಹೊಂಡ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಏನಿಲ್ಲವೆಂದರೂ ಐವತ್ತು ಸಾವಿರ ವೆಚ್ಚವಾಗುವುದು ಖಚಿತ. ಪಾಳು ಬಿದ್ದ ಭೂಮಿಯನ್ನೇ ಆಧಾರವಾಗಿಟ್ಟು ಗ್ರಾಮೀಣ ಬ್ಯಾಂಕ್‌ನಲ್ಲಿ ಸಾಲ ತರಲಾಯಿತು.
2.4 ಮೀಟರ್ ಆಳದಂತೆ ಹೊಳೆಯ ಉದ್ದಕ್ಕೂ ಮೊದಲು ಟ್ರೆಂಚ್ ತೋಡಲಾಯಿತು. ಅದರ ಮಣ್ಣನ್ನು ಹೊಳೆಯ ಪಾರ್ಶ್ವಕ್ಕೆ ಬದುವಿನಂತೆ 75 ಸೆಂ.ಮೀ ಎತ್ತರಕ್ಕೆ ಪೇರಿಸಲಾಯಿತು. ಕೆಳಗಿನ ಜಮೀನಿನಲ್ಲಿ 20 ಚದರ ಅಡಿಯ ಇಂಗು ಗುಂಡಿ ನಿರ್ಮಿಸಿ ಅದರ ಮಣ್ಣನ್ನು ಮೇಲಿನ ಜಮೀನಿಗೆ ಹರವಲಾಯಿತು. ಮೇಲಿಂದ ಪ್ರತಿ ಹೊಲಕ್ಕೆ ಎತ್ತರದಲ್ಲಿ 60 ಸೆಂ.ಮೀ. ವ್ಯತ್ಯಾಸವಿರುವಂತೆ ಮಣ್ಣನ್ನು ಅಗೆದು ಮಟ್ಟಿಲು ಮಾದರಿ ನಿರ್ಮಿಸಲಾಯಿತು. ಕೆಳಗಿನ ಕೃಷಿ ಹೊಂಡಕ್ಕೂ ಮೇಲಿನ ಕಟ್ಟ ಕಡೆಯ ಹೊಲಕ್ಕೂ 2.4 ಮೀಟರ್ ಅಂತರ ಇತ್ತು.
ಒಟ್ಟಾರೆ ಹೊಲದ ಶೇ.30ರಷ್ಟು ಭಾಗ ಇದೀಗ ಅತಿ ಎತ್ತರದ ಪ್ರದೇಶವಾಗಿತ್ತು. ಅಷ್ಟೇ ಪ್ರದೇಶ ಮಧ್ಯಮ ಎತ್ತರದ ಭೂಮಿಯಾಗಿ ಪರಿವರ್ತನೆಯಾಗಿತ್ತು. ಉಳಿದ ಭಾಗ ತಗ್ಗು ಭೂಮಿಯಾಗಿ ಉಳಿಯಿತು. ಈ ರೀತಿಯ ಎತ್ತರದಲ್ಲಿನ ವ್ಯತ್ಯಾಸ ಮಣ್ಣಿನ ಕೊಚ್ಚಾಣಿಕೆಯನ್ನಷ್ಟೇ ಅಲ್ಲ ಪ್ರವಾಹದ ತೊಂದರೆಯನ್ನೂ ನೀಗಿಸಿತು ಎನ್ನುತ್ತಾನೆ ಪೆರುಮಾಳ್. ವಿಟ್ಟೇಕರ್ ಪ್ರಕಾರ 'ಲ್ಯಾಂಡ್ ಶೇಪಿಂಗ್' ಎಲ್ಲ ಕೃಷಿ ಭೂಮಿಯ ಅಗತ್ಯ, ಅನಿವಾರ್ಯ ಪ್ರಕ್ರಿಯೆ. ಜೂನ್ನಿಂದ ಡಿಸೆಂಬರ್‌ನ ಅವಧಿ ಇದಕ್ಕೆ ಹೇಳಿ ಮಾಡಿಸಿದ್ದು. ತುಸು ಜಾಣ್ಮೆ ತೋರಿದರೆ ಎಂಥ ಒಣ ಭೂಮಿಯೂ ನಿಷ್ಪ್ರಯೋಜಕವಲ್ಲ.
'ಕಳೆದ ವರ್ಷ ಎತ್ತರದ ಹಾಗೂ ಮಧ್ಯಮ ಎತ್ತರದ ಹೊಲದಲ್ಲಿ ಬತ್ತ ಬೆಳೆದಿದ್ದೆ. ಕೆಳಗಿನ ಗದ್ದೆಯಲ್ಲಿ ಕಬ್ಬನ್ನು ಹಾಕಿದೆ. ಬೇಸಿಗೆಯಲ್ಲಿ ಮೇಲಿನ ಗದ್ದೆಗಳಲ್ಲಿ ತರಕಾರಿ ಸಮೃದ್ಧವಾಗಿತ್ತು. ಕೆಳಗೆ ಮೆಣಸು, ಹಾಗಲಕಾಯಿ ಬಂದಿತ್ತು. ಏರಿಯ ಮೇಲಿನ ಹುಲ್ಲು ತಿಂಗಳಿಗೊಮ್ಮೆ ಕಟಾವಿಗೆ ಬರುತ್ತಿದೆ. ಇಂಗು ಗುಂಡಿ ಈ ವರ್ಷ ಕೆರೆಯಾಗಿ ಬಿಟ್ಟಿದೆ' ಎಂದು ಉತ್ಸಾಹದಿಂದ ಬಣ್ಣಿಸುತ್ತಾನೆ ಪೆರುಮಾಳ್. ಒಂದೆಡೆ ಹಸುಗಳೂ ಮೈದುಂಬಿಕೊಂಡಿವೆ. ಇನ್ನೊಂದೆಡೆ ಹೊಲವೂ ನಗುತ್ತಿದೆ. ಪೆರುಮಾಳ್ ಈಗ ನೆಮ್ಮದಿಯ ರಾತ್ರಿಗಳನ್ನು ಕಳೆಯುತ್ತಿದ್ದಾನೆ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in