ಅಂಕಣಗಳು

ರಾಮಾನುಜಾಚಾರ್ಯರ ಅನುಯಾಯಿಗಳಾಗಿ ನಾಮಧಾರಿಗಳಾದ ಗೌಡರು

ನಾಮಧಾರಿ ಗೌಡ ಎಂಬ ಸಮುದಾಯವಿದೆ. ಹಣೆಯಲ್ಲಿ ನಾಮ ಹಾಕಿಕೊಳ್ಳುತ್ತಾರೆ ಎಂಬ...

ಜಾತಿಗಳಿಗೆ ಹೆಸರುಗಳನ್ನಿಟ್ಟವರು ಯಾರು ಎಂಬುದು ಗೊತ್ತಿಲ್ಲ. ಮಾಡುವ ಕೆಲಸದಿಂದ, ಆಚರಿಸುವ ಸಂಪ್ರದಾಯ, ಉಡುಗೆ, ತೊಡುಗೆಗಳ ಮೂಲಕವೂ ಜಾತಿಗಳಿಗೆ ಹೆಸರುಗಳು ಬಂದಿರಬಹುದು ಎನ್ನುತ್ತಾರೆ ನಮ್ಮ ಹಿರಿಯರು.
ಉದಾಹರಣೆಗೆ ನಾಮಧಾರಿ ಗೌಡ ಎಂಬ ಸಮುದಾಯವಿದೆ. ಹಣೆಯಲ್ಲಿ ನಾಮ ಹಾಕಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಈ ಹೆಸರು ಬಂದಿದೆ.
'ಹೌದು, ನಿಮ್ಮ ಸಮುದಾಯಕ್ಕೆ ಈ ಹೆಸರು ಏಕೆ ಬಂತು ? ನೀವು ನಾಮಧಾರಿಗಳಾಗಿರುವುದು ಏಕೆ ?' ಎಂದು ನಾಮಧಾರಿ ಸಮಾಜದ ರಾಜ್ಯಾಧ್ಯಕ್ಷ ಸಿ.ಜಿ.ನಾಗರಾಜ್ ಅವರನ್ನು ಕೇಳಿದಾಗ, 'ಬಹಳ ವರ್ಷಗಳ ಹಿಂದೆ ಅಂದರೆ, 1810ರ ಸುಮಾರಿನಲ್ಲಿ ನಮ್ಮ ಸಮುದಾಯ ಅಸ್ತಿತ್ವದಲ್ಲಿತ್ತು. ನಮ್ಮ ಸಮಾಜದ ಜನ ಆಗ ಶ್ರೀ ರಾಮಾನುಜಾಚಾರ್ಯರ ಅನುಯಾಯಿಗಳಾಗಿದ್ದರು. ಹೀಗಾಗಿ ನಮ್ಮವರು ಅವರಂತೆಯೇ ನಾಮ ಧರಿಸಲು ಶುರು ಮಾಡಿದರು. ಅಂದಿನಿಂದ ನಾಮಧಾರಿಗಳೆಂಬ ಹೆಸರು ಬಂತು' ಎಂದು ವಿವರಿಸಿದರು. ನಮ್ಮ ಮೂಲ ಮಂಡ್ಯ ಜಿಲ್ಲೆ ಮೇಲುಕೋಟೆ ಇದ್ದಿರಬಹುದು. ಏಕೆಂದರೆ, ರಾಮಾನುಜಾಚಾರ್ಯರು ಅಲ್ಲಿದ್ದರು ಎಂಬುದು ಹಿರಿಯರ ಅನಿಸಿಕೆ.

ಹಳ್ಳಿಗಳಲ್ಲಿ ಯಜಮಾನಿಕೆ : ನಾಮಧಾರಿ ಎಂಬುದೇನೋ ಸರಿ, ಗೌಡ ಎಂಬುದು ಜೊತೆಗೇಕೆ ಬಂತು ಎಂದು ಕೇಳಿದರೆ, ಅದಕ್ಕೆ ಹೀಗೆ ಉತ್ತರಿಸಿದರು ನಾಗರಾಜ್. 'ಈ ಹಿಂದೆ ಹಳ್ಳಿಗಳಲ್ಲಿ ಊರಿನ ಯಜಮಾನಿಕೆಯನ್ನು ಬಹುತೇಕ ನಮ್ಮವರೇ ನಿರ್ವಹಿಸುತ್ತಿದ್ದರು. ಗೌಡರಾಗಿ, ಪಟೇಲರು ಮತ್ತು ಶಾನುಭೋಗರಾಗಿ ಕೆಲಸ ಮಾಡುತ್ದಿದ್ದರು. ಹೀಗಾಗಿ ನಾಮಧಾರಿ ಗೌಡ ಆಗಿರಬಹುದು'.

ನಾಮಧಾರಿ ಗೌಡರು ಮೂಲತ: ಕೃಷಿಕರು. ವ್ಯವಸಾಯವೇ ಅವರ ಕುಲ ಕಸುಬು. ಸಮಾಜದ ಶೇ.95ರಷ್ಟು ಮಂದಿ ಬೇಸಾಯದಿಂದಲೇ ಜೀವನ ನಡೆಸುತ್ತಿದ್ದವರು. ಈಗಲೂ ಬಹುತೇಕ ಕುಟುಂಬಗಳು ಕೃಷಿಯನ್ನೇ ಜೀವನೋಪಾಯಕ್ಕೆ ಅವಲಂಬಿಸಿವೆ. ಶೈಕ್ಷಣಿಕವಾಗಿ ಮುಂದುವರಿದಿರುವ ಹೊಸ ತಲೆಮಾರಿನವರು ಮಾತ್ರ ಉದ್ಯೋಗಸ್ಥರಾಗಿದ್ದಾರೆ.
ನಾಮಧಾರಿ ಗೌಡರು ಶುದ್ಧ ಸಸ್ಯಾಹಾರಿಗಳು. ಮೈಸೂರು, ಕೊಡಗು, ಹಾಸನ ಮತ್ತು ಮಂಡ್ಯ, ತುಮಕೂರು ಮತ್ತು ಬೆಂಗಳೂರು ಭಾಗದಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಚಿಕ್ಕಮಗಳೂರು, ತುಮಕೂರು ಭಾಗದಲ್ಲಿ ಈ ಸಮುದಾಯದ ಮಂದಿ ಮಾಂಸ ಸೇವಿಸುತ್ತಾರೆ. ಇನ್ನು ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ಚೋಳ ಗೌಡರು ಎಂಬ ಹೆಸರಿನ ಸಮುದಾಯವಿದೆ. ಅವರಿಗೂ ನಾಮಧಾರಿ ಗೌಡರಿಗೂ ಸಂಬಂಧವಿದೆ. ಆಚಾರ ವಿಚಾರಗಳು ಇಬ್ಬರದ್ದೂ ಒಂದೇ ಆಗಿವೆ ಎನ್ನುತ್ತಾರೆ ನಾಗರಾಜ್ ಅವರು.

ವೈಷ್ಣವ ಪಂಥದವರು : ನಾಮಧಾರಿ ಗೌಡರದ್ದು ವೈಷ್ಣವ ಪಂಥ. ರಾಮಾನುಜಚಾರ್ಯರ ಅನುಯಾಯಿಗಳಾಗಿದ್ದರಿಂದ ವೈಷ್ಣವ ಸಂಪ್ರದಾಯ ಅನುಸರಿಸುತ್ತಿರಬಹುದು. 1945-1947ರಲ್ಲಿ ಈ ಸಮಾಜ ಬೆಳಕಿಗೆ ಬಂತಾದರೂ ಸರ್ಕಾರದ ಮಟ್ಟದಲ್ಲಿ ಗುರುತಿಸಿಕೊಂಡಿರಲಿಲ್ಲ. ಸಮುದಾಯವನ್ನು ಸಂಘಟಿಸುವ ಕೆಲಸ ಕಳೆದ ಹತ್ತಾರು ವರ್ಷಗಳಿಂದ ಆರಂಭ ಆಗಿದೆ. ಈ ಹಿಂದೆ ನಾಮಧಾರಿ ಗೌಡ ಸಮುದಾಯ ಇಲ್ಲದ ಊರುಗಳೇ ಇರಲಿಲ್ಲ. ಹಳ್ಳಿಗೆ ಒಂದು ಮನೆಯಾದರೂ ಅವರದ್ದು ಇರುತ್ತಿತ್ತು. ನಾಮಧಾರಿಗಳ ಒಂದೇ ಕುಟುಂಬ ಇದ್ದು, ಲಿಂಗಾಯತ ಅಥವಾ ಇತರರ ಸಾವಿರಾರು ಮನೆಗಳಿದ್ದರೂ ಆ ಹಳ್ಳಿಯ ಯಜಮಾನಿಕೆಯನ್ನು ನಾಮಧಾರಿ ಗೌಡರೇ ವಹಿಸಿಕೊಳ್ಳುತ್ತಿದ್ದರು. ಪಟೇಲಗಿರಿ, ಗೌಡಿಕೆ ಅವರದ್ದೇ ಆಗಿತ್ತು.

ಪ್ರಾಮಾಣಿಕ ಜೀವನ : ಏಕೆಂದರೆ, ನಡೆ ಮತ್ತು ನುಡಿಯಲ್ಲಿ ನಾಮಧಾರಿಗಳು ಶುದ್ಧರು. ಪ್ರಾಮಾಣಿಕವಾಗಿ ಜೀವನ ನಡೆಸುತ್ತಿದ್ದವರು. ಹೀಗಾಗಿ ಊರುಗಳ ಮುಂದಾಳತ್ವವನ್ನು ಜನ ಅವರಿಗೆ ನೀಡುತ್ತಿದ್ದರು. ಇನ್ನು ಹಳ್ಳಿಗಳಲ್ಲಿ ಯಾವುದೇ ರೀತಿಯ ತಂಟೆ,ತಕರಾರು ಎದುರಾದರೂ ನಾಮಧಾರಿ ಗೌಡರೇ ಮುಂದೆ ನಿಂತು ಎಲ್ಲವನ್ನೂ ಬಗೆಹರಿಸುತ್ತಿದ್ದರು. ಅವರ ಮಾತು ಎಂದರೆ ಯಾರೂ ಎದುರಾಡದ ಸನ್ನಿವೇಶ ಇತ್ತು. ಅನ್ಯಾಯ, ಮೋಸ, ವಂಚನೆ, ಈ ಯಾವುದೂ ನಾಮಧಾರಿ ಗೌಡರ ಬಳಿ ಸುಳಿಯುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇವರು ಜಗಳಗಂಟರು ಅಲ್ಲವೇ ಅಲ್ಲ ಎಂಬ ಮಾತೂ ಇದೆ.
ನಾಮಧಾರಿ ಗೌಡರು ವಾರಗಳ ಆಚರಣೆ ಮಾಡುವುದುಂಟು. ಅಂದರೆ, ಸೋಮವಾರ ಅಥವಾ ಶನಿವಾರ ಮನೆಯನ್ನು ಸ್ವಚ್ಛ ಮಾಡಿ, ನಾಮಧಾರಿಗಳಾಗಿ ದೇವರ ಪೂಜೆ ನೆರವೇರಿಸುವುದು ವಾಡಿಕೆ. 260ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಸಮುದಾಯದ ಜನರಿದ್ದಾರಂತೆ. ಕುಲ ಕಸುಬು ಕಡಿಮೆಯಾಗುತ್ತಿದ್ದರೂ ಮೊದಲಿನಿಂದಲೂ ಅನುಸರಿಕೊಂಡು ಬಂದಿರುವ ಆಚಾರ, ವಿಚಾರಗಳನ್ನು ಇವರು ಬಿಟ್ಟಿಲ್ಲ. ವಿವಾಹ ಸಂಬಂಧದ ಸಮಯದಲ್ಲಿ ನಾಮಧಾರಿ ಗೌಡರು ವಯನಾಡು ವೈಷ್ಣವರ ಜೊತೆ ಹೊಂದಿಕೊಳ್ಳುತ್ತಾರೆ. ಅವರಿಗೆ ಹೆಣ್ಣು ಕೊಡುವ ಮತ್ತು ತೆಗೆದುಕೊಳ್ಳುವ ಪದ್ಧತಿ ಇದೆ. ಅದರಲ್ಲೂ ಸಸ್ಯಹಾರಿಗಳಾಗಿದ್ದರೆ ಮಾತ್ರ. ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಇವರಿಗೆ ಪುರೋಹಿತರು ಬರಬೇಕು ಎಂದೇನಿಲ್ಲ. ಶಾಸ್ತ್ರ ಸಂಪ್ರದಾಯವನ್ನು ಬಲ್ಲವರಿಂದ ಆ ಕಾರ್ಯ ಮಾಡಿ ಮುಗಿಸುತ್ತಿದ್ದರು.

ಶೈಕ್ಷಣಿಕವಾಗಿ ಸುಧಾರಣೆ : ಈ ಸಮುದಾಯ ಇತ್ತೀಚೆಗೆ ಶೈಕ್ಷಣಿಕವಾಗಿ ಮುಂದುವರಿಯುತ್ತಿದೆ. ಈ ಹಿಂದೆ ಅಕ್ಷರಸ್ಥರ ಸಂಖ್ಯೆ ತೀರಾ ಕಡಿಮೆ ಇತ್ತು. ಅದರಲ್ಲೂ ಓದಿಕೊಂಡ ಹೆಣ್ಣು ಮಕ್ಕಳು ಹುಡುಕಿದರೂ ಸಿಗುತ್ತಿರಲಿಲ್ಲ. ಕಾರಣ, ಯಾರೂ ಶಾಲೆ ಮೆಟ್ಟಿಲು ತುಳಿಯುತ್ತಿರಲಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದೆ. ಐಎಎಸ್,ಐಪಿಎಸ್ ಮತ್ತು ಕೆಎಎಸ್‌ನಂಥ ಉನ್ನತ ಹುದ್ದೆಗಳಲ್ಲಿ ಯಾರೂ ಇಲ್ಲದಿದ್ದರೂ ವೈದ್ಯರು ಮತ್ತು ಎಂಜಿನಿಯರುಗಳಾದವರು ಇದ್ದಾರೆ. ಇನ್ನು ರಾಜಕೀಯ ಪ್ರಾತಿನಿಧ್ಯವಂತೂ ಇವರಿಗೆ ಇಲ್ಲವೇ ಇಲ್ಲ. ರಾಜಕೀಯವಾಗಿ ಮೇಲೆ ಬಂದವರು ಹುಡುಕಿದರೂ ಸಿಗದು. ಆದರೆ, ಇತ್ತೀಚೆಗೆ ನಟೇಶ್‌ಗೌಡ ಮತ್ತಿತರರು ರಾಜ್ಯಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಯಾವುದೇ ಸ್ಥಾನಮಾನ ಇಲ್ಲ. ಈ ಹಿಂದೆ ಕೊಡಗು ಜಿಲ್ಲಾ ಪಂಚಾಯಿತಿಗೆ ಒಬ್ಬರು ಅಧ್ಯಕ್ಷರಾಗಿದ್ದರು. ಅವರನ್ನು ಹೊರತುಪಡಿಸಿದರೆ ಬೇರೆಯವರು ತಾಲೂಕು ಮಟ್ಟದಿಂದ ಮೇಲೆ ಬಂದಿಲ್ಲ. ಇದಕ್ಕೂ ಮೊದಲು ಅಂದರೆ, 1950ರ ದಶಕದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಿದ್ದಾಗ ಲಿಂಗಯ್ಯ ಎಂಬುವರು ಶಾಸಕರಾಗಿದ್ದರು. ಕರ್ನಾಟಕದ ಏಕೀಕರಣದ ಬಳಿಕ ಅವರು ಸೋಮವಾರಪೇಟೆ ಕ್ಷೇತ್ರದಿಂದ ವಿಧಾನಸಭೆಗೆ ಪ್ರವೇಶ ಮಾಡಿದ್ದರು ಎಂದು ನಟೇಶ್‌ಗೌಡ ವಿವರಿಸುತ್ತಾರೆ.

ಒಕ್ಕಲಿಗ ಉಪ ಪಂಗಡವಲ್ಲ: ನಾಮಧಾರಿ ಗೌಡ ಎಂಬ ಹೆಸರಿರುವ ಕಾರಣ ಇವರು ಒಕ್ಕಲಿಗ ಸಮುದಾಯದ ಉಪ ಪಂಗಡ ಇರಬಹುದು ಎಂಬುದು ಕೆಲವರ ಅನಿಸಿಕೆ. ಆದರೆ, ನಮಗೂ ಒಕ್ಕಲಿಗರಿಗೂ ಸಂಬಂಧವಿಲ್ಲ. ಹೀಗಾಗಿ ನಮ್ಮನ್ನು ಒಕ್ಕಲಿಗ ಗುಂಪಿಗೆ ಸೇರಿಸುವುದು ಬೇಡ ಎನ್ನುತ್ತಾರೆ.
ಪ್ರೊ.ರವಿವರ್ಮ ಕುಮಾರ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಸಮುದಾಯವನ್ನು 2ಎ ವರ್ಗಕ್ಕೇ ಸೇರಿಸುವುದು ಸೂಕ್ತ ಎಂದು ಶಿಫಾರಸು ಮಾಡಿದ್ದರು. ಆದರೆ, ಸರ್ಕಾರದ ಜಾತಿ ಪಟ್ಟಿಯಲ್ಲಿ 3ಎಗೆ ಸೇರಿಸಲಾಗಿದೆ. ಇದು ತಪ್ಪು ಎಂಬುದು ಸಮಾಜದ ಮುಖಂಡರ ಸ್ಪಷ್ಟ ಅಭಿಪ್ರಾಯ.
ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲದಿದ್ದರೂ ನಾಮಧಾರಿ ಗೌಡ ಸಮುದಾಯದ ಬಹುತೇಕ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ. ಆದರೆ, ವ್ಯವಸಾಯ ಮಾತ್ರ ಹಿಂದಿನಂತೆ ಸುಲಭವಾಗಿಲ್ಲ. ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಆದರೂ ನಿತ್ಯ ಜೀವನಕ್ಕೆ ತೊಂದರೆ ಆಗದಂತೆ ಬೇಸಾಯ ಮಾಡಿಕೊಂಡಿದ್ದಾರೆ. ಇವರು ಬಹುತೇಕ ಮಧ್ಯಮ ವರ್ಗದ ಜನ.
ಒಟ್ಟಿನಲಿ ಹತ್ತು ಹಲವು ವಿಶೇಷಗಳನ್ನು ಒಳಗೊಂಡಿರುವ ನಾಮಧಾರಿ ಸಮುದಾಯ ಆಧುನಿಕತೆಯ ಹೊಡೆತಕ್ಕೆ ಸಿಲುಕದೆ ತನ್ನ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬಂದಿರುವುದು ಗಮನಾರ್ಹ.

- ಕೆ.ವಿ.ಪ್ರಭಾಕರ  
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ