ನಾನೇನು ಮಾಡ್ಲಿ ಸ್ವಾಮಿ, ಕಚ್‌ಬುಡ್ತು ದಾರಿನಾಗೆ ನಂಗೆ ಟಾಮಿ...ಅಂತೇಳಿ ಕೈ ಪಕ್ಸದ ಲೀಡ್ರು ಸಿವಕುಮಾರು ಆಸ್ಪತ್ರೆಗೆ ಅಂತ ವೋಡ್ತಾಯಿದ್ರು.
'ನಿಂತ್ಕಳಿ ಸಾ, ವಸಿ ನಿಂತ್ಕಳಿ, ಇದೇನು ವೊಳ್ಳೆ ವೋಲ್ವೋ ಬಸ್‌ನಂಗೆ ವೋಡ್ತಾಯಿದ್ದೀರಿ ?' ಅಂತೇಳಿ ಮೈಲಾರಿ ವೋಡ್ಕಂಡು ಬಂದ. 'ನನ್ ಬಾಧೆ ನಂಗೆ, ನಿಂದೊಳ್ಳೆ ವೋಗತ್ತಗೆ' ಅಂತೇಳಿ ಸಿವಕುಮಾರು ಬೈದ್ರು. ನಿಮ್ಗೆ ಬಾಧೆನಾ ? ಅದೇನು ಸಿವನೇ ?' ಅಂತ ಮೈಲಾರಿ ಕೇಳ್ದೆ.
'ಲೇ ಮೈಲಾರಿ ವತ್ತಾರೆ ವತ್ತಾರೆ ನಾಯಿ ಕಚ್‌ಬುಡ್ತು ಕಣ್ಲಾ, ನನ್ಮಗಂದು ಬ್ಯಾರೆ ಯಾರೂ ಸಿಕ್ಲಿಲ್ವಾ ಅದುಕ್ಕೆ ಬಂದೂ ಬಂದೂ ನಂಗೆ ಬಾಯಿ ಹಾಕದೆ ಮುಂಡೇದು' ಅಂದ್ರು ಸಿವಕುಮಾರ್.
'ಅರೆ, ಬುಡ್ತು ಅನ್ನಿ. ನಾಯಿ ನಿಮ್ಗೆ ಯಾಕ್ಸಾ ನಾಯಿ ಕಚ್ತದೆ. ವೋಗೋಗಿ, ತಮಾಸಿ ಮಾಡಕ್ಕೂ ಲಿಮಿಟ್ಟು ಇರ್ಬೇಕು' ಅಂತಂದ ಮೈಲಾರಿ. 'ನಾನೇನರ ಹಾಸ್ಯದ ಪ್ರೋಗ್ರಾಮ್ನಾಗೆ ಬರೋ ಪ್ರಾಣೇಸು, ಲೂಯಿಸ್ಸು ಅಂದ್ಕಂಡ್ಯ ತಮಾಸಿ ಮಾಡಕ್ಕೆ. ಲೇ ನೋಡಲೇ ಇಲ್ಲಿ ಹೆಂಗೆ ಕಚ್ಚದೆ ಅಂತ, ಮೂರು ಹಲ್ಲು ಬಿದ್ದೋಗದೆ' ಅಂತೇಳಿ ಸಿವಕುಮಾರು ಕಾಲು ತೋರ್ಸುದ್ರು. 'ಕಾಲ್ಗೆ ಕಚ್ಚುದ್ರೆ ಬಾಯಾಗಿರೋ ಹಲ್ಲು ಯಾಕೆ ಬಿದ್ದೋಯ್ತದೆ ಸಾ' ಅಂದ ಮೈಲಾರಿ.
'ಲೇ ಬೇವಾರ್ಸಿ ಕಾಲ್ನಾಗೆ ನಾಯಿ ಹಲ್ಲು ಮಾರ್ಕು ಬಿದ್ದದೆ ಅಂತೇಳಿದ್ದು' ಅಂದ್ರು ಸಿವಕುಮಾರು. 'ಅದ್ಸರಿ ಸಾ, ನೀವು ಆ ನಾಯಿ ತಂಟೆಗೆ ಯಾಕೋದ್ರಿ. ಕಚ್ಚಿದ್ದು ಗಂಡೋ ಹೆಣ್ಣೋ?' ಅಂತೇಳಿ ಮೈಲಾರಿ ಕೇಳ್ದ.
'ತಲೆ ನೆಟ್ಗೆ ಐತೇನಲಾ ನಿಂಗೆ ? ಕಚ್ಚುಸ್ಕಂಡಿದ್ದೂ ಅಲ್ದೆ, ನಾಯಿ ಗಂಡೋ ಹೆಣ್ಣೋ ಅಂತ ನೋಡಕ್ಕೆ ಬ್ಯಾರೆ ವೋಯ್ತರೇನ್ಲಾ? ನಾನ್ಯಾಕ್ಲ ಅದ್ರು ತಂಟೆಗೆ ವೋಗ್ಲಿ. ಮುನ್ಸಿಪಾಲ್ಟಿ ಎಲೆಕ್ಸನ್ಗೆ ಕ್ಯಾನ್ವಾಸು ಮಾಡ್ತಾಯಿದ್ದೆ. ಆವಾಗ ಎಲ್ಲಾರ್ನೂವೆ ಬುಟ್ಟು ಬಡ್ಡಿ ಮಗಂದು ನನ್ ಕಾಲ್ತಾವ ಬಂತು. ನಾನು ಕೈ ಪಕ್ಸುದಾಗೆ ಪೇಮಸ್ಸು ಲೀಡ್ರು ಅಂತೇಳಿ ನಾಯಿಗೂ ಗೊತ್ತಾಗೋಗದೆ. ಅದುಕ್ಕೆ ಕಾಲು ನೆಕ್ಕಕ್ಕೆ ಬಂದದೆ ಅಂತಂದು ಸುಮ್ಕೆ ಇದ್ದೆ. ಕಳ್ ನನ್ಮಗಂದು ಕಚ್ಚೇಬುಡ್ತು ಕಣ್ಲಾ' ಅಂತೇಳುದ್ರು ಸಿವಕುಮಾರು.
'ಕೈ ಪಕ್ಸದ ಲೀಡ್ರುಗೆ ಕಾಲು ಕಚ್ಚಾಕ್ತು ಅಂತ ಬ್ಯಾಸ್ರ ಮಾಡ್ಕಂಡಿದ್ದೀರ? ವೋಗ್ಲಿ ವತ್ತಾರೆ ಎದ್ದು ಯಾರ್ ಮಖ ನೋಡುದ್ರಿ ?' ಅಂತ ಮೈಲಾರಿ ಕೇಳ್ದ.
'ಇನ್ಯಾರು ಆ ನನ್ನ ಪರಮ ವೈರಿ ಟೇಜಮ್ಮ ಕಣಲೇ' ಅಂದ್ರು ಸಿವಕುಮಾರು. 'ನಿಮ್ಗೂ ಅಯಮ್ಮಂಗೂ ಆಗಾಕಿಲ್ಲ. ಮತ್ತೆ ಯಾಕೆ ನೋಡಕ್ಕೆ ವೋದ್ರಿ ?' ಅಂತ ಮೈಲಾರಿ ಕೇಳ್ದ.
'ನಾನೇನೂ ಆಯಮ್ಮುನ್ನ ನೋಡಕ್ಕೆ ಅಂತ ವೋಗಿರಿಲ್ಲ. ನ್ಯೂಸು ನೋಡಾಣ ಅಂತೇಳಿ ವತ್ತಾರೆ ಎದ್ದು ಟೀವಿ ಹಾಕ್ದೆ. ಬಂದೇಬುಡೋದ. 'ನಂಗೆ ವೊಂದು ಡೌಟು ಕಣ್ಲಾ, ಆವಮ್ನೇ ನಾಯಿ ಬುಟ್ಟಿರೋದು ಅಂತ' ಅಂದ್ರು ಸಿವಕುಮಾರು.
'ನಿಮ್ಗೆ ಯಾವಾಗ್ಲೂ ಇದೊಂದೇ ಡೌಟು, ವೋಗೋಗ್ಲಿ ಬುಟ್ಟಾಕಿ. ಡಾಕ್ಟ್ರುತವ ವೋಗಿ ವೊಟ್ಟೆಗೆ ಇಂಜೆಕ್ಷನ್ ಬುಟ್ಕಳಿ ಸರಿ ವೋಯ್ತದೆ' ಅಂದ ಮೈಲಾರಿ. 'ಬುಡಕಿಲ್ಲ ಕಣ್ಲಾ ಬುಡಕಿಲ್ಲ. ಏನೇ ಆದ್ರೂ ನಮ್ಮೂರ್ನಾಗೆ ವೊಂದೇ ವೊಂದು ನಾಯಿ ಇರಕ್ಕೆ ಬುಡಕಿಲ್ಲ. ಹೆಂಗೂ ಈಕಿತ ನಮ್ ಪಕ್ಸಾನೇ ಪವರ್ಗೆ ಬತ್ತದೆ. ನಾನು ಹೋಂ ಮಿನಿಸ್ಟ್ರು ಆಗೋಬುಟ್ಟು ಎಲ್ಲಾರ ನಾಯಿ ಕಂಡ್ರೆ ಗುಂಡಿಕ್ಕಿ ಕೊಂದಾಕಿ ಅಂತ ಪೊಲೀಸ್ನೋರ್ಗೆ ಆಡ್ರು ಮಾಡುಸ್ಬುಡ್ತೀನಿ' ಅಂತೇಳಿ ಸಿವಕುಮಾರು ಕೂಗಾಡುದ್ರು.
'ವೊಳ್ಳೇ ಕಥೆ ಆಯ್ತು ನಿಮ್ದು, ಹಂಗೇನರ ಮಾಡುತ್ರೆ ಮೇನಕಾ ಗಾಂಧಿ ಸುಮ್ಕೆ ಇರ್ತರ. ಅಮ್ಯಾಲೆ ಬೌಬೌ ಬಿರಿಯಾನಿನೂ ಜಾಸ್ತಿ ಆಗೋಯ್ತದೆ. ನಾಯಿ ವೊಡ್ಯಕ್ಕೆ ಇಂಥ ಸೀನು ಬೇಕಾ. ವೋಗೋಗಿ ಮನ್ಯಾಗೆ ರೆಸ್ಟು ತಕ್ಕಳಿ ಎಲ್ಲ ಸರಿವೋಯ್ತದೆ' ಅಂದ ಮೈಲಾರಿ. 'ಅಲ್ಲಲೇ, ನಾನ್ಯಾರು, ಕೈ ಪಕ್ಸದ ಫೇಮಸ್ ಲೀಡ್ರು. ಎಸ್.ಎಂ.ಕೃಷ್ಣ ಅವ್ರು ಸಿಎಂ ಆಗಿದ್ದಾಗ ನಂದೇ ದರ್ಬಾರು. ಜನ ನನ್ನುಂದೆ ನಿಂತ್ಕಳಕ್ಕೂ ಹೆದ್ರೋರು. ಹುಲೀನೋ, ಸಿಂಹಾನೋ ಕಚ್ಚಿದ್ರೆ ಹೆಂಗೋ ಇರ್ದೋದಾಗಿತ್ತು. ಯಕಶ್ಚಿತ್ ಒಂದು ನಾಯಿ ನನ್ನನ್ನು ಕಚ್ಚಿತು ಎಂದರೆ ಇದೆಂಥ ದುರ್ವಿಧಿ ಇದೆಂಥಾ ದುರ್ವಿಧಿ' ಅಂತೇಳ್ಕಂಡು ಸಿವಕುಮಾರು ವೋದ್ರು. 'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ ?' ಅಂತ ಅದೇ ಟೇಮ್ಗೆ ಟೇಜಮ್ಮ ಬಂದ್ರು. ಮೈಲಾರಿ ಎಸ್ಕೇಪು ಆಬುಟ್ಟ.
- ಕೆ.ವಿ.ಪ್ರಭಾಕರ್
prabhukolar@yahoo.com