ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಶಾಂತಿಯುತ ಹೋರಾಟಗಳಿಂದ ಉಗ್ರವಾದಿಗಳು ಶಾಂತರಾಗುವುದಿಲ್ಲ!

Parashurama
Updated On : 2 Mar 2013, 10:22 am

ಉಗ್ರವಾದಿಗಳ ಬಾಂಬ್ ಸ್ಫೋಟಗಳಿಂದ ಅಮಾಯಕರ ರಕ್ತ ವರ್ಷಗಳಿಂದ ನಿರಂತರವಾಗಿ ಹರಿಯುತ್ತಲೇ ಇದೆ. ಹರಿಯುತ್ತಾ ಅದು ದೇಶದ ಎಲ್ಲಾ ಭಾಗಗಳಿಗೂ ವ್ಯಾಪಿಸುತ್ತಿದೆ. ಅದಕ್ಕಿರುವುದು ಒಂದೇ ಬಣ್ಣ. ಆದರೆ ಓಟ್ ಬ್ಯಾಂಕ್ ರಾಜಕಾರಣಿಗಳು, ಪೈಶಾಚಿಕ ಮನಸ್ಥಿತಿಯ ಉಗ್ರರಿಗೆ ವಿವಿಧ ವರ್ಣಗಳನ್ನು ಕೊಡಲು ಹಿಂದೆ ಮುಂದೆ ನೋಡುವುದಿಲ್ಲ. ಉಗ್ರ ಕೃತ್ಯಗಳನ್ನು ಅವರು ಖಂಡಿಸುತ್ತಾರಾದರೂ, ಉಗ್ರವಾದದ ಬೇರುಗಳನ್ನು ಪತ್ತೆಹಚ್ಚಿ ಅವುಗಳನ್ನು ಕಡಿದು ಹಾಕುವ ವಿಷಯದಲ್ಲಿ ಮಾತ್ರ ನಾಯಿ ಬೆಕ್ಕುಗಳಂತೆ ಕಿತ್ತಾಡುತ್ತಾರೆ. 16 ಮಂದಿಯನ್ನು ಬಲಿತೆಗೆದುಕೊಂಡು, 119 ಜನರನ್ನು ಗಾಯಗೊಳಿಸಿದ ಹೈದ್ರಾಬಾದ್ ಸ್ಫೋಟದ ಬಗ್ಗೆ ಸಂಸತ್ತಿನಲ್ಲಿ ನಡೆದ ಚರ್ಚೆ ರಾಜಕೀಯ ವ್ಯವಸ್ಥೆಯಲ್ಲಿನ ಸೈದ್ಧಾಂತಿಕ ಮತ್ತು ಆಡಳಿತಾತ್ಮಕ ಭಿನ್ನಾಭಿಪ್ರಾಯವನ್ನು ಸ್ಪಷ್ಟವಾಗಿ ಅನಾವರಣಗೊಳಿಸಿತು. ಪರಿಹಾರ ಕಂಡುಕೊಳ್ಳುವ ಬದಲು, ರಾಜಕಾರಣಿಗಳೆಲ್ಲರೂ ಪರಸ್ಪರ ಕತ್ತಿಮಸೆಯುತ್ತಾ 'ರಕ್ತ'ದ ಹೆಸರಿನಲ್ಲಿ ಲಾಭಮಾಡಿಕೊಳ್ಳಲು ಪ್ರಯತ್ನಿಸಿದರು. ಆದರೆ ಯಾರೂ ಕೂಡ ಉಗ್ರವಾದವನ್ನು ಹರಡುತ್ತಿರುವ ಮೂಲಗಳ ಹೆಸರನ್ನು ಹೇಳಲು ಮಾತ್ರ ಹೋಗಲಿಲ್ಲ.
ಸ್ಫೋಟ ನಡೆದ ಸಂಜೆ ಮಾತ್ರ 'ಸದಾ ಹಸನ್ಮುಖಿ' ಶಿಂದೆ ಚಿಂತೆಗೊಳಗಾಗಿದ್ದರು. ದಾಳಿಯಾಯಿತು ಎಂಬ ಕಾರಣಕ್ಕಲ್ಲ. ಬದಲಾಗಿ, ಸ್ಫೋಟದ ಕುರಿತು ಮರುದಿನ ಸಂಸತ್ತಿನಲ್ಲಿ ಏನು ಮಾತನಾಡಿದರೆ ತಮ್ಮ ಮೇಲೆ ದಾಳಿಯಾಗುವುದಿಲ್ಲ ಎಂಬುದಕ್ಕಾಗಿ. ಮುಂಚಿತವಾಗಿಯೇ ಮಾಹಿತಿಯಿದ್ದರೂ ದಾಳಿಯನ್ನು ತಪ್ಪಿಸಲು ವಿಫಲವಾದ ರಾಜ್ಯ ಸರ್ಕಾರದ ವಿಚಾರಣೆ ನಡೆಸುವ ಬದಲು ಇಡೀ ರಾತ್ರಿ ಅವರು ಸ್ಫೋಟದ ಕುರಿತಾದ ನೇರಪ್ರಸಾರದ ವರದಿಗಳನ್ನು ನೋಡುತ್ತಾ ಕುಳಿತರು. ಇನ್ನು ಅವರ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವಂತೂ ಇಂಟೆಲಿಜೆನ್ಸ್ ಫೇಲ್ಯೂರ್‌ಗೆ ನೆಪ ಹುಡುಕುವುದರಲ್ಲೇ ಬ್ಯುಸಿ ಆಗಿದ್ದರು. ಮರುದಿನ ಚರ್ಚೆಯಲ್ಲಿ ಎಣಿಕೆಯಂತೆ ಶಿಂದೆಯ ಮೇಲೆ ವಿರೋಧ ಪಕ್ಷಗಳು ಮತ್ತು ಮಿತ್ರಪಕ್ಷಗಳು ಒಟ್ಟಾಗಿ ಎರಗಿದವು. ಎಲ್ಲರೂ ಗೃಹ ಸಚಿವರ ವಿರುದ್ಧ ಕಟುಮಾತುಗಳನ್ನಾಡಿದರು. ಆದರೆ ಯಾರೂ ಕೂಡ ಭಾರತವನ್ನು ಬಿಡದೇ ಕಾಡುತ್ತಿರುವ ಧಾರ್ಮಿಕ ಮೂಲಭೂತವಾದದ ಬಗ್ಗೆ ತುಟಿಪಿಟಕ್ ಎನ್ನಲಿಲ್ಲ. ಚರ್ಚೆಯಲ್ಲಿ ವೀರಾವೇಶ ಮೆರೆದ ವಿವಿಧ ಪಕ್ಷಗಳ 40 ರಾಜಕಾರಣಿಗಳು ಉಗ್ರ ಸಂಘಟನೆಗಳನ್ನು ಹೇಗೆ ಹತ್ತಿಕ್ಕಬೇಕು ಎನ್ನುವ ವಿಷಯವನ್ನು ಮಾತ್ರ ಚಾಲಾಕುತನದಿಂದ ಮರೆತುಬಿಟ್ಟರು. ಇವರೆಲ್ಲರಿಗೂ ಉಗ್ರವಾದವೆಂಬುದು ಓಟು ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಳ್ಳಲು ಉಪಯೋಗಕ್ಕೆ ಬರುವ ಸಾಧನವೇ ಸರಿ. ಅಷ್ಟೊಂದು ಜನರ ಸಾವಿಗೆ ಕಾರಣರಾದವರ ಮಗ್ಗಲು ಮುರಿಯಲು ಸರ್ಕಾರ ವಿಫಲವಾದದ್ದನ್ನು ಯಾವ ನಾಯಕನೂ ಅಂದು ಪ್ರಶ್ನಿಸಲಿಲ್ಲ.
ಹೈದ್ರಾಬಾದ್ ಸ್ಫೋಟ ಪ್ರಕರಣವನ್ನು ಕೈಗೆತ್ತಿಕೊಂಡ ರೀತಿಯೇ ನಮ್ಮ ವ್ಯವಸ್ಥೆಯ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆಗಾಗ ದೇಶದಲ್ಲಿ ನಡೆಯುವ ಸ್ಫೋಟಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಬದುಕಬೇಕು ಎನ್ನುವ ಮಟ್ಟಕ್ಕೆ ಆ ಮನಸ್ಥಿತಿ ತಲುಪಿದೆ. ಸದೃಢ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವದ ಮೂಲಕ್ಕೇ ದುಷ್ಟಶಕ್ತಿಗಳು ಬಾಂಬಿಡುತ್ತಿದ್ದರೂ, ನಮ್ಮ ರಾಜಕೀಯ ಪಕ್ಷಗಳು ಮಾತ್ರ ಭಾರತದ 'ಅಭಿವೃದ್ಧಿಯ ಕತೆಯ' ಕನಸಿನಲ್ಲೇ ಕಳೆದುಹೋಗುತ್ತಿವೆ. ಮತ್ತೊಮ್ಮೆ ಆ ಕಟುಕರು ದಾಳಿ ಮಾಡುವವರೆಗೂ ಯಾರೂ ಎಚ್ಚೆತ್ತುಕೊಳ್ಳುವುದಿಲ್ಲ. ಎಂದಿನಂತೆ ಎದ್ದುಕುಳಿತು ಸಾಂಪ್ರದಾಯಿಕ ಭಾಷಣವನ್ನು ಮಾಡಿ, ಹೈದ್ರಾಬಾದ್‌ನಲ್ಲಿ ರಕ್ತದ ಕಲೆಗಳು ಆರಿದಾಕ್ಷಣ ಕದನ ವಿರಾಮ ಘೋಷಿಸಿ ಎಂದಿನ ಕನಸಿಗೆ ಹಿಂದಿರುಗಿವೆ. ಕಳೆದ 2 ದಶಕದಲ್ಲಿ ಭಯೋತ್ಪಾದನೆಯಿಂದಾಗಿ ಸುಮಾರು 500 ಜನರು ಸಾವನ್ನಪ್ಪಿದ್ದಾರೆ. ಆದರೂ ನಾವು ಕಠಿಣ ಉಗ್ರವಿರೋಧಿ ಕಾನೂನನ್ನು ಜಾರಿಗೆ ತರುವ ಹಾದಿಯಲ್ಲಿ ಒಂದಡಿಯೂ ಮುಂದಿಟ್ಟಿಲ್ಲ. 'ಧಾರ್ಮಿಕ ಸಂವೇದನೆಯನ್ನು ಗಮನದಲ್ಲಿಟ್ಟುಕೊಂಡೇ ಕಾನೂನು ರೂಪಿಸಿ ಎಂದು ಸರ್ಕಾರ ತಮಗೆ ಆಜ್ಞೆ ಮಾಡುತ್ತದೆ' ಎಂದು ಕೆಲವು ಕಾನೂನು ನಿರೂಪಕರು ಖಾಸಗಿಯಲ್ಲಿ ಗೊಣಗುತ್ತಾರೆ. ಭಯೋತ್ಪಾದನೆಯನ್ನು ತಡೆಯುವಲ್ಲಿ ಯುಪಿಎ ಸರ್ಕಾರ ಮತ್ತೊಮ್ಮೆ ಮೈಮರೆತಿದೆಯಾದರೂ, ರಾಜ್ಯ ಸರ್ಕಾರಗಳ ಮೇಲೆ ಕೇಂದ್ರದ ಸಂಸ್ಥೆಗಳನ್ನು ಹೇರುವ ಕೆಲಸವನ್ನು ಮಾತ್ರ ಅಚ್ಚುಕಟ್ಟಾಗಿ ಮಾಡಲು ಮುಂದಾಗುತ್ತಿದೆ. ಸಂಶಯಾಸ್ಪದ ವ್ಯಕ್ತಿಗಳನ್ನು ಬಂಧಿಸುವ ಶಕ್ತಿಯಿರುವ ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್(ಎನ್‌ಸಿಟಿಸಿ) ಅನ್ನು ಎಲ್ಲಾ ರಾಜ್ಯಗಳಲ್ಲೂ ತರುವ ತನ್ನ ಇಂಗಿತವನ್ನು ಅದು ಈ ಬಾರಿ ಗಟ್ಟಿಯಾಗಿ ಹೇಳುತ್ತಿದೆ. ಹೈದ್ರಾಬಾದ್ ಸ್ಫೋಟದ ವಿಷಯವಾಗಿ ಗುಪ್ತಚರ ಇಲಾಖೆಯ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನವಲ್ಲವೇ ಇದು? ಅದಾಗಲೇ ಭಾರತದಲ್ಲಿ ಹಾದಿಗೊಂದರಂತೆ ಇಂತಹ ಸಂಸ್ಥೆಗಳು ಹುಟ್ಟಿಕೊಂಡಿವೆ. ಮೊದಲು ಅವುಗಳನ್ನು ಬಲಪಡಿಸುವ, ಉತ್ತರದಾಯಿಯನ್ನಾಗಿ ಮಾಡುವ ಕೆಲಸವಾಗಬೇಕಲ್ಲವೇ? ದುರದೃಷ್ಟವಶಾತ್, ಕಾಂಗ್ರೆಸ್ಸೇತರ ರಾಜ್ಯಸರ್ಕಾರಗಳು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಿದ ಉಗ್ರ ವಿರೋಧಿ ಕರಡುಗಳತ್ತ ಕಾಂಗ್ರೆಸ್ ಕಣ್ಣುಹಾಯಿಸುವುದೂ ಇಲ್ಲ. ಅದರ ಬದಲಾಗಿ ಅತ್ಯುತ್ತಮ ಸಲಹೆಗಳನ್ನೆಲ್ಲ ಕೇಂದ್ರ ಶಾಸನದಲ್ಲಿ ಅದು ಅಳವಡಿಸಿಕೊಳ್ಳುತ್ತದೆ.
ಇನ್ನು ಉಗ್ರಗಾಮಿಯೊಬ್ಬನನ್ನು ನೇಣಿಗೇರಿಸಿದ್ದಕ್ಕೆ ಕೋಪ ನೆತ್ತಿಗೇರಿಸಿಕೊಂಡ ಚರ್ಚೆಗಳು ನಡೆಯುವುದು ಬಹುಶಃ ಭಾರತದಲ್ಲಷ್ಟೇ ಸಾಧ್ಯವೇನೋ? ಇದಷ್ಟೇ ಅಲ್ಲ, ತನ್ನ ಶತ್ರುಗಳನ್ನು ತುಳಿದುಹಾಕುವ 'ಅಮೆರಿಕದ ಸಂಸ್ಕೃತಿ'ಯನ್ನು ಮೆಚ್ಚಿಕೊಳ್ಳುವ ಎಷ್ಟೋ ಜನ, ಅಫ್ಜಲ್‌ನ ನೇಣನ್ನು ವಿರೋಧಿಸುವ ಪಾಳಯದಲ್ಲಿ ಸೇರಿ ಕೂಗು ಹಾಕುತ್ತಿದ್ದಾರೆ.
ಆಘಾತಕಾರಿ ವಿಷಯವೆಂದರೆ, ಹೈದ್ರಾಬಾದ್ ಸ್ಫೋಟದ ರೂವಾರಿಗಳ ಹೆಸರನ್ನು ಬಹಿರಂಗ ಪಡಿಸುವಲ್ಲಿ ರಾಜಕೀಯ ವರ್ಗ ಒಂದೇ ಗುಣವನ್ನು ತೋರಿಸುತ್ತಿರುವುದು. ಪಾಕಿಸ್ತಾನವೇ ಉಗ್ರವಾದಿಗಳ ಕೇಂದ್ರ ಸ್ಥಾನ, ಅಲ್ಲಿನ ಮಿಲಿಟರಿಯೇ ಅವರ ಪೋಷಕ ಎನ್ನುವುದು ಪ್ರಪಂಚದ ಎಲ್ಲಾ ದೇಶಗಳಿಗೂ ಗೊತ್ತು. ಆದರೆ ಪಾಕಿಸ್ತಾನದ ಹೆಸರೆತ್ತುವುದೂ ಘೋರ ಪಾಪ ಎನ್ನುವಂತೆ ನಮ್ಮ ವ್ಯವಸ್ಥೆ ವರ್ತಿಸುತ್ತಿದೆ. ಉಗ್ರವಾದದ ಬಗ್ಗೆ ಸಂಸತ್ತಿನಲ್ಲಿ ಗುಡುಗಿದ ಬಿಜೆಪಿ ನಾಯಕರೂ ಕೂಡ ಪಾಕಿಸ್ತಾನದ ಹೆಸರು ತಮ್ಮ ಮಾತಿನಲ್ಲಿ ನುಸುಳದಂತೆ ಎಚ್ಚರಿಕೆ ವಹಿಸಿದರು. ಆ ಕೆಲಸ 80 ವರ್ಷ ದಾಟಿದ ತಮ್ಮ ನಾಯಕ ಎಲ್.ಕೆ. ಆಡ್ವಾಣಿಯವರಿಗೇ ಅವರು ಬಿಟ್ಟುಬಿಟ್ಟರು. ಕಳೆದ ಕೆಲವು ದಿನಗಳಿಂದ ಪಾಕಿಸ್ತಾನದ ಗಲ್ಲಿಗಲ್ಲಿಗಳಿಂದ ಹಲವಾರು ಉಗ್ರ ಗುಂಪುಗಳು ಭಾರತದತ್ತ ವಿಷ ಉಗುಳುತ್ತಿವೆ. ಇನ್ನಷ್ಟು ಭೀಕರ ದಾಳಿ ನಡೆಸುವುದಾಗಿ ಕೇಕೆ ಹಾಕುತ್ತಿವೆ. ಆದರೆ ಪಾಕಿಸ್ತಾನವೇ ಸ್ಫೋಟಕ್ಕೆ ಮೂಲ ಕಾರಣ ಎನ್ನುವ ವಿಷಯವನ್ನು ನಮ್ಮಲ್ಲಿ ಕಡೆಗಣಿಸಲಾಗುತ್ತಿದೆ. ವೈಭವೋಪೇತ ಶಾಂತಿಯುತ ಹೋರಾಟಗಳನ್ನೇ ತಮ್ಮ ಕಸುಬಾಗಿಸಿಕೊಂಡಿರುವವರು, ಪ್ರತಿ ಮಾತಿಗೂ ಮಾನವೀಯತೆಯ ಸ್ಪರ್ಷ ನೀಡುವವರಿಗೆ ಒಂದು ವಿಷಯ ಗೊತ್ತಿಲ್ಲ; ಉಗ್ರವಾದವನ್ನು ತಡೆಯಲು 'ಏಟಿಗೆ ಎದುರೇಟು' ಎನ್ನುವ ಒಂದೇ ಅಸ್ತ್ರದಿಂದ ಮಾತ್ರ ಸಾಧ್ಯ ಎಂಬುದು.

-  ಪ್ರಭು ಚಾವ್ಲಾ
ಸಂಪಾದಕರು,
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments