ಅಂಕಣಗಳು

ಬಫೆಟ್‌ನ ಹಣದ ಬಕೆಟ್ ತುಂಬಿಸುವ ಅಜಿತ್

ಅದೊಂದು ದಿನ ದಿಲ್ಲಿಯಲ್ಲಿದ್ದ ವೃದ್ಧ ದಂಪತಿಗೆ ದೂರದ ಅಮೆರಿಕದಿಂದ ಪತ್ರ ಬಂತು...

ಬಫೆಟ್ ಮತ್ತು ಅಜಿತ್‌ರದ್ದು ಒಂದು ರೀತಿ ಗುರು-ಶಿಷ್ಯರ ಸಂಬಂಧ. ಅಜಿತ್‌ರ ಯಾವುದೇ ನಿರ್ಧಾರದ ಬಗ್ಗೆ ಬಫೆಟ್ ಎಂದೂ ಚಕಾರ ಎತ್ತಿದ್ದಿಲ್ಲ

ಅದೊಂದು ದಿನ ದಿಲ್ಲಿಯಲ್ಲಿದ್ದ ವೃದ್ಧ ದಂಪತಿಗೆ ದೂರದ ಅಮೆರಿಕದಿಂದ ಪತ್ರ ಬಂತು. ಅದರಲ್ಲಿ ಹೀಗೆ ಬರೆದಿತ್ತು "ನಿಮ್ಮ ಮಗ ಅಜಿತ್ ನನ್ನ ಬಳಿ ಕ್ಷೇಮವಾಗಿದ್ದಾನೆ. ಅವನ ಬಗ್ಗೆ ನೀವು ಕಾಳಜಿ ಪಡಬೇಕಾದ ಅವಶ್ಯಕತೆ ಇಲ್ಲ. ಈಗ ನಾನು ನಿಮ್ಮ ಬಳಿ ಒಂದು ಸಹಾಯ ಯಾಚಿಸಲಿದ್ದೇನೆ. ನೀವು ಅದಕ್ಕೆ ಕೊಡಬಹುದಾದ ಉತ್ತರ ಏನು ಎಂಬುದು ನನಗೆ ಗೊತ್ತು. ಆದರೂ ಕೇಳಬೇಕೆನಿಸಿ ಕೇಳಲಿದ್ದೇನೆ. ನಿಮಗೆ ಅಜಿತನಂತಹ ಇನ್ನೊಬ್ಬ ಮಗನಿದ್ದರೆ ದಯವಿಟ್ಟು ಆತನನ್ನು ನನ್ನ ಬಳಿ ಕಳುಹಿಸಿಕೊಡಿ. ನನಗೆ ಅಂತಹವರ ತುರ್ತು ಅವಶ್ಯಕತೆ ಇದೆ. "ಪತ್ರ ಓದಿ ದಂಪತಿಗೆ ಸಖೇದಾಶ್ಚರ್ಯ. ಅದು ಸಾಮಾನ್ಯ ವ್ಯಕ್ತಿ ಬರೆದ ಪತ್ರವಾಗಿರಲಿಲ್ಲ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬರೆದ ಪತ್ರವಾಗಿತ್ತು. ಆತ ಬೇರಾರೂ ಅಲ್ಲ ವಾರೆನ್ ಬಫೆಟ್. ಪತ್ರದಲ್ಲಿ ಆತ ಪ್ರಸ್ತಾಪಿಸಿದ್ದ ವ್ಯಕ್ತಿ ಅಜಿತ್ ಜೈನ್! ತಮ್ಮ ಮಗ ಯಾವ ಮಟ್ಟಕ್ಕೆ ಬೆಳೆದಿದ್ದಾನೆ ಎಂಬುದು ಆ ಪತ್ರ ಓದಿ ಅಜಿತ್ ತಂದೆ-ತಾಯಿಗೆ ವೇದ್ಯವಾಯಿತು. ಅವರು ಹಿರಿಹಿರಿ ಹಿಗ್ಗಿದರು. ಆ ಪತ್ರಕ್ಕೆ ಕಟ್ಟು-ಗಾಜು ಹಾಕಿಸಿ ಜತನ ಮಾಡಿದರು. ಅಜಿತ್ ಜೈನ್ ಕುರಿತು ವಾರೆನ್ ಬಫೆಟ್‌ನ ವ್ಯಾಮೋಹ ಮೆಚ್ಚುಗೆ ಈ ಪತ್ರಕ್ಕಷ್ಟೇ ಸೀಮಿತವಾಗಿಲ್ಲ. ಪ್ರತಿ ವರ್ಷ ಬಫೆಟ್ ತನ್ನ ವ್ಯಾಪಾರ ಸಾಮ್ರಾಜ್ಯದ ಪ್ರತಿ ಕಾರ್ಮಿಕನಿಗೂ ಪತ್ರ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಾನೆ. ಬಫೆಟ್‌ನ ಹ್ಯಾತ್‌ವೇ ಬರ್ಕ್‌ಶೈರ್ ಸಮೂಹದಲ್ಲಿ ದುಡಿಯುವ ಪ್ರತಿಯೊಬ್ಬರೂ ಪ್ರತಿ ವರ್ಷ ಅವನ ಪತ್ರಕ್ಕಾಗಿ ಎದುರು ನೋಡುತ್ತಾರೆ. ಅದು ಕೊಡುವ ಸೂಚನೆ, ಸುಳಿವಿಗಾಗಿ ಕಾತರಿಸುತ್ತಾರೆ. ಅಂತಹ ಪತ್ರಗಳಲ್ಲಿ ಬಫೆಟ್ ಅಜಿತ್ ಬಗ್ಗೆ ಬರೆಯುವ ಟಿಪ್ಪಣಿಗಳ ಸ್ಯಾಂಪಲ್ ಹೀಗಿವೆ.
-  ನಾನು, ಚಾರ್ಲಿ (ಬಫೆಟ್‌ನ ಪಾರ್ಟನರ್) ಮತ್ತು ಅಜಿತ್ ದೋಣಿ ವಿಹಾರಕ್ಕೆ ಹೋಗಿದ್ದೀವಿ ಎಂದು ಕಲ್ಪಿಸಿಕೊಳ್ಳಿ. ದೋಣಿ ಮುಳುಗುವ ಸ್ಥಿತಿ ಬಂದು ನಮ್ಮ ಮೂವರಲ್ಲಿ ಒಬ್ಬರನ್ನು ಮಾತ್ರ ಬದುಕಿಸಬಹುದು ಎಂಬ ಪರಿಸ್ಥಿತಿ ಬಂದರೆ, ನೀವು ಸೀದಾ ಅಜಿತ್‌ನ ಬಳಿಗೆ ಧಾವಿಸಿ ಆತನನ್ನು ಉಳಿಸಿಕೊಳ್ಳಿ. ನಮ್ಮಿಬ್ಬರ ಬಗ್ಗೆ ಚಿಂತಿಸಲು ಹೋಗಬೇಡಿ.
-  1985ರ ಒಂದು ಶನಿವಾರ ನಮ್ಮ ಸಂಸ್ಥೆ ಎಂದೂ ಮರೆಯಲಾರದ ದಿನ. ಅಂದು -ಒಂದು ಅತ್ಯಂತ ಮಹತ್ವಪೂರ್ಣ ಘಟನೆ ನಡೆಯಿತು. ಒಮಾಹಾದಲ್ಲಿದ್ದ ನಮ್ಮ ಕಚೇರಿಗೆ ಅಜಿತ್ ಜೈನ್ ಬಂದ. ಆತನನ್ನು ನೋಡಿದ ಕೂಡಲೇ ನನಗನಿಸಿತು. ನಮಗೊಬ್ಬ ಸೂಪರ್‌ಸ್ಟಾರ್ ಸಿಕ್ಕಿದ್ದಾನೆಂದು. ಇನ್ನು ಈ ವರ್ಷ ಬಫೆಟ್ ಬರೆದದ್ದು.
-  ನಿಮ್ಮಲ್ಲಿ ಯಾರಿಗಾದರೂ ಅಜಿತ್ ಜೈನ್ ಎದುರಾದರೆ ಹಿಂದು ಮುಂದು ನೋಡಬೇಡಿ. ಮಾಮೂಲಾಗಿ ಆತನ ಕೈ ಕುಲುಕುವುದುನ್ನು ಬಿಟ್ಟು ಬೆನ್ನು ಬಾಗಿ ನಮ್ಮಸ್ಕರಿಸಿ.
ಬಫೆಟ್ ಹೀಗೆ ಕಂಡಕಂಡಲ್ಲೆಲ್ಲಾ ಅಜಿತ್ ಜೈನ್ ಗುಣಗಾನ ಮಾಡುವುದರಲ್ಲಿ ಅರ್ಥವಿದೆ. ಇಂದು ಬಫೆಟ್ ವಿಶ್ವದ ಕುಬೇರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ವ್ಯಕ್ತಿ. ನಿಗರ್ವಿ. ಅದಕ್ಕಿಂತ ಹೆಚ್ಚಾಗಿ ಸಮಾಜ ಸೇವೆಗೆ ಟೊಂಕಕಟ್ಟಿ ನಿಂತಿರುವ ವ್ಯಕ್ತಿ. ಆದರೆ ಇದು ಆತನೊಬ್ಬನದೇ ಪರಿಶ್ರಮದ ಫಲವಲ್ಲ. ಬರ್ಕ್‌ಶೈರ್ ಹ್ಯಾತ್‌ವೇ ಎಂಬುದು ಒಂದು ನಿರ್ದಿಷ್ಟ ಸಂಸ್ಥೆಯಲ್ಲ. ಅದೊಂದು ಬೃಹತ್ ಉದ್ಯಮ ಸಮೂಹ. ನಾನಾ ಉದ್ದಿಮೆಗಳು ಈ ಸಮೂಹದಲ್ಲಿ ಅಡಕವಾಗಿವೆ. ಅದರಲ್ಲೂ ಇನ್ಷೂರೆನ್ಸ್ ಕ್ಷೇತ್ರದಲ್ಲಿ ದೈತ್ಯಶಕ್ತಿಯಾಗಿ ಹೊರಹೊಮ್ಮಿದೆ. ಇಲ್ಲಿ ಅನೇಕರು ದುಡಿಯುತ್ತಾರೆ. ಹಲವು ಮಂದಿ ಈ ಸಮೂಹದ ನಾನಾ ಅಂಗಗಳ ಮುಖ್ಯಸ್ಥರಾಗಿ ದುಡಿಯುತ್ತಿದ್ದಾರೆ. ಅವರಲ್ಲಿ ಅಜಿತ್ ಜೈನ್ ಸಹ ಒಬ್ಬ. ಅವರೆಲ್ಲರನ್ನೂ ಬಿಟ್ಟು ಅಜಿತ್ ಮೇಲೇಕೆ ಬಫೆಟ್‌ಗೆ ಈ ಪರಿ ವ್ಯಾಮೋಹ? ಅದಕ್ಕೆ ಕಾರಣ ಇದೆ. 1985ರಲ್ಲಿ ಅಜಿತ್ ಬರ್ಕ್‌ಶೈರ್ ಸಂಸ್ಥೆಗೆ ಸೇರಿಕೊಂಡ ಹೊಸದರಲ್ಲಿ ಸಂಸ್ಥೆ ಇನ್ಷೂರೆನ್ಸ್ ಕ್ಷೇತ್ರ, ಅದರಲ್ಲೂ ರೀ ಇನ್ಷೂರ್ಸೇನ್ಸ್   ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಅದರ ಹೊಣೆ ಅಜಿತ್ ಕೊರಳಿಗಿತ್ತು. ಆತನ ಕೈ ಕೆಳಗೆ ದುಡಿಯಲು ಹೆಚ್ಚು ಮಂದಿ ಇರಲಿಲ್ಲ. ಅಷ್ಟೇಕೆ ಇಂದಿಗೂ ಅಜಿತ್ 20-30 ಮಂದಿಯನ್ನು ನೆಚ್ಚಿಕೊಂಡೇ ದುಡಿಯುವುದು. ರೀಇನ್ಷೂರೆನ್ಸ್  ಎಂದರೆ ದೊಡ್ಡ ಪ್ರಮಾಣದ ris ಇರುವ ವ್ಯವಹಾರ. ಇನ್ಷೂರೆನ್ಸ್  ಕಂಪನಿಗಳು ತಮ್ಮ ಮೇಲಿನ ಭಾರ ಕಡಿಮೆ ಮಾಡಿಕೊಳ್ಳಲು ಅದನ್ನು ರೀಇನ್ಷೂರೆನ್ಸ್‌ಗಳಲ್ಲಿ ತೊಡಗಿಸುತ್ತಾರೆ.  ಏನೇ ಅಪಾಯ ಎದುರಾದರೂ ಎಲ್ಲರೂ ಅದನ್ನು ಹಂಚಿಕೊಳ್ಳುತ್ತಾರೆ. ಈಗ ಅದು ಅಮೆರಿಕ, ಐರೋಪ್ಯ ದೇಶಗಳಲ್ಲಿ ಭಾರೀ ಉದ್ಯಮ. ಆದರೆ ಮೂರು ದಶಕಗಳ ಕೆಳಗೆ ಅದಿನ್ನೂ  high risk Job ಆಗಿತ್ತು. ಅಂತಹ ಸಂದರ್ಭದಲ್ಲೇ ಅಜಿತ್ ಎಂಟ್ರಿ ಕೊಟ್ಟಿದ್ದು. ಬಿಲಿಯನ್‌ಗಟ್ಟಲೆ ಡಾಲರ್‌ಗಳ ವಿಮೆಗಳಿಗೆ ಮರುವಿಮೆ ಮಾಡುವ ಅಜಿತ್ ಅದನ್ನು ಅಂದರೆ riskಅನ್ನು ತನ್ನ ಬಳಿಯೇ ಉಳಿಸಿಕೊಳ್ಳುತ್ತಾರೆಯೇ ಹೊರತು ಅದನ್ನು ಇತರ ಇನ್ಷೂರರ್‌ಗಳ ಜೊತೆ ಹಂಚಿಕೊಳ್ಳಲು ಬಯಸುವುದಿಲ್ಲ. ಆರಂಭದಲ್ಲಿ ಬಫೆಟ್ ಮತ್ತು ಬರ್ಕ್‌ಶೈರ್‌ನ ಇತರ ಅಧಿಕಾರಿಗಳು ಈ ನಡೆಯ ಹಿಂದಿರುವ ಅಪಾಯಗಳ ಬಗ್ಗೆ ಅಜಿತ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರಾದರೂ, ಆತನ ದೃಢತೆಯ ಮುಂದೆ ಅಧೀರರಾಗಿ ಸುಮ್ಮನಾದರು. ಈ ದೃಢತೆಯ ಫಲವಾಗಿ ಇಂದು ಅಜಿತ್ 3300 ಕೋಟಿ ಡಾಲರ್ ವಹಿವಾಟನ್ನು ಸಂಸ್ಥೆಗೆ ಕುದುರಿಸಿಕೊಟ್ಟಿದ್ದಾರೆ. ಬರ್ಕ್‌ಶೈರ್ ಉದ್ಯಮ ಸಮೂಹದಲ್ಲಿಯೇ ಬರ್ಕ್‌ಶೈರ್ ಇನ್ಷೂರೆನ್ಸ್ಸ್ ಸಂಸ್ಥೆ ಅತಿ ಹೆಚ್ಚು ವಹಿವಾಟು ನಡೆಸುವ, ಲಾಭ ತರುವ ಸಂಸ್ಥೆಯಾಗಿ ರೂಪುಗೊಂಡಿದೆ. ಇದು ಅಜಿತ್ ಜೈನ್ ಹೆಗ್ಗಳಿಕೆ.
ಈಗ ಮೂರು ವರ್ಷಗಳ ಹಿಂದೆ ಇಂಗ್ಲೆಂಡ್‌ನ ಲಾಯಡ್ಸ್ ಬ್ಯಾಂಕ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿತ್ತು. ಇನ್ಷೂರೆನ್ಸ್‌ನಲ್ಲಿ ಸುಮಾರು 710 ಕೋಟಿ ಡಾಲರ್ ನಷ್ಟವನ್ನು ಎದುರಿಸುತ್ತಿತ್ತು. ಬ್ಯಾಂಕಿನ ಅಧಿಕಾರಿಗಳು ಕಕ್ಕಾವಿಕ್ಕಿಯಾಗಿದ್ದರು. ದಿಕ್ಕು ತೋಚದಂಥಾ ಪರಿಸ್ಥಿತಿ. ಯಾರೂ ಬ್ಯಾಂಕಿನ ನೆರವಿಗೆ ಧಾವಿಸುವ ಧೈರ್ಯ ತೋರಲಿಲ್ಲ. ಆದರೆ ರಿಸ್ಕ್ ತೆಗೆದುಕೊಳ್ಳುವುದೇ ಹವ್ಯಾಸ ಮಾಡಿಕೊಂಡಿದ್ದ ಅಜಿತ್ ಮುನ್ನುಗ್ಗಿದರು. 27,992 ಪಾಲಿಸಿದಾರರು ಸುಸ್ತಿಯಾಗಿದ್ದರು. ಲಾಯಡ್ಸ್‌ನೊಂದಿಗೆ ಮರುವಿಮೆಗೆ ವ್ಯವಹಾರ ಕುದುರಿಸಿದ ಅಜಿತ್ ಮುಂದಿನ 50 ವರ್ಷಗಳಿಗೆ ಬರ್ಕ್‌ಲಿಗೆ 50 ಬಿಲಿಯನ್ ಡಾಲರ್ ಪ್ರೀಮಿಯಂ ಹಣ ಹರಿದು ಬರುವಂತೆ ಮರುವಿಮಾ ಒಪ್ಪಂದ ಮಾಡಿಕೊಂಡರು. ಇದು ಅಜಿತ್‌ರನ್ನು ಬಫೆಟ್‌ಗೆ ಇನ್ನಷ್ಟು ಹತ್ತಿರ ತಂದಿತು.
ಪತ್ನಿಗೆ ಋಣಿ! ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಅಜಿತ್ ವಿಷಯದಲ್ಲೂ ಇದನ್ನು ಕಾಣಬಹುದು.ಅಜಿತ್ ಈ ಪರಿ ಬೆಳೆದಿರುವುದಕ್ಕೆ ಅವರು ತಮ್ಮ ಪತ್ನಿಗೆ ಋಣಿಯಾಗಿರಬೇಕು. 1951ರಲ್ಲಿ ಒರಿಸ್ಸಾದಲ್ಲಿ ಜನಿಸಿದ ಅಜಿತ್ ತೀರಾ ಶ್ರೀಮಂತ ಅಲ್ಲದಿದ್ದರೂ ಕೈ-ಬಾಯಿಗೆ ತೊಂದರೆ ಇಲ್ಲದ ಕುಟುಂಬದ ಕುಡಿ. ಹಾಗಾಗಿ ಆರಂಭಿಕ ಜೀವನ ಅಷ್ಟೇನೂ ತ್ರಾಸದಾಯಕವಾಗಿರಲಿಲ್ಲ. ಓದೂ ಕೈ ಹಿಡಿಯಿತು.
ಹಾಗಾಗಿ ಪದವಿ ಕಷ್ಟವಾಗಲಿಲ್ಲ. ನಂತರ ರೇಲು ನಡೆದದ್ದು ಐಐಟಿ ಖರಗ್‌ಪುರ ಕ್ಯಾಂಪಸ್‌ಗೆ. ಅಲ್ಲಿ ಓದಿದ್ದು ಇಂಜಿನಿಯರಿಂಗ್. ಅಜಿತ್ ಓದನ್ನು ಎಂದೂ ತೀರಾ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹಾಗೆಂದು ಆತನ  academics  ಕಳಪೆಯಾಗಿರಲಿಲ್ಲ. ಓದುತ್ತಿದ್ದುದು ಇಂಜಿನಿಯರಿಂಗ್‌ನಂತಹ ತಾಂತ್ರಿಕ ವಿಷಯವಾದರೂ ಅಜಿತ್ ಸದಾ ತನ್ನ ಗೆಳೆಯರ ಬಳಿ ಚರ್ಚಿಸುತ್ತಿದ್ದುದು ಎಕನಾಮಿಕ್ಸ್, ಸೋಷಿಯಾಲಜಿ ಬಗ್ಗೆ. ಕೈಯಿಂದ ಡಯಾಗ್ರಮ್‌ಗಳನ್ನು ಎಳೆಯುವಷ್ಟೇ ಸರಾಗವಾಗಿ ಆರ್ಥಿಕ ವಿಷಯಗಳ ಬಗ್ಗೆ ಅಜಿತ್ ಮಾತನಾಡುತ್ತಿದ್ದರು. ಮುಂದೆ ಅದೇ ತನ್ನ ಜೀವನ ವೃತ್ತಿ ಆಗಬಹುದು ಎಂದು ಅಜಿತ್‌ಗೆ ಆಗ ಅರಿವಿರಲಿಲ್ಲ. ಖರಗ್‌ಪುರ ಕ್ಯಾಂಪಸ್‌ನಿಂದ ಹೊರ ಬಂದ ಬಳಿಕ ಅಜಿತ್ ನಡೆದದ್ದು ಐಬಿಎಂ ಕಂಪನಿಗೆ. ಒಳ್ಳೆಯ ಸಂಬಳದ ಕೆಲಸ ಕೈ ಹಿಡಿದಿತ್ತು. ಎರಡು ವರ್ಷ ಐಬಿಎಂನಲ್ಲಿ ಕಾಲ ಕಳೆದ ಬಳಿಕ ಉನ್ನತ ವ್ಯಾಸಂಗದ ಬೆನ್ನು ಬಿದ್ದು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಸೇರಲು ಅಮೆರಿಕಕ್ಕೆ ತೆರಳಿದರು. ವ್ಯವಹಾರ ಚತುರತೆಯ ಪಟ್ಟುಗಳನ್ನು ಕಲಿತ ಬಳಿಕ ಅಲ್ಲಿಯೇ ಮೆಕಿನ್ಸೆ ಆ್ಯಂಡ್ ಕೋದಲ್ಲಿ ನೌಕರಿಯೂ ದೊರೆಯಿತು. ಅಷ್ಟರಲ್ಲಿ ಮದುವೆಯಾಗುವಂತೆ ಪೋಷಕರು ಒತ್ತಡ ಹೇರಿದರು. ಎಲ್ಲಿ ಮಗ ದೂರದ ಊರಲ್ಲಿ ಕೈ ತಪ್ಪಿ ಹೋಗುತ್ತಾನೋ ಎಂಬ ಚಿಂತೆ ಅವರದ್ದಾಗಿತ್ತು. ಅಪ್ಪ-ಅಮ್ಮನ ಮಾತಿಗೆ ಕಟ್ಟು ಬಿದ್ದು ಅಜಿತ್ ಭಾರತಕ್ಕೆ ವಾಪಸ್ಸಾಗಿ ಟೆಂಕು ಜೈನ್‌ರನ್ನು ವರಿಸಿದ್ದೂ ಆಯಿತು. ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ನಂತರ ಮತ್ತೆ ಅಮೆರಿಕಕ್ಕೆ ಹಾರುವ ಉಮೇದು ಅಜಿತ್‌ಗಿರಲಿಲ್ಲ. ಆದರೆ ಪತ್ನಿಯ ನಿಲುವು ಬೇರೆಯದಾಗಿತ್ತು. ಆಗಿನ್ನೂ ಭಾರತದಲ್ಲಿ ಉದ್ಯೋಗಾವಕಾಶಗಳು ವಿಫುಲವಾಗಿರಲಿಲ್ಲ. ಇಷ್ಟೊಂದು ಉನ್ನತ ವಿದ್ಯಾಭ್ಯಾಸ ಮಾಡಿ ಇಲ್ಲಿ ಸಣ್ಣ-ಪುಟ್ಟ ನೌಕರಿ ಮಾಡಿಕೊಂಡು ಕಳೆದು ಹೋಗುವುದಕ್ಕಿಂತ ಅಮೆರಿಕಕ್ಕೆ ಹಿಂದಿರುಗಿ ಜೀವನದಲ್ಲಿ ಏನಾದರೂ ಉನ್ನತ ಸಾಧನೆ ಮಾಡಿ ಎಂದು ಗಂಡನ ಬೆನ್ನ ಹಿಂದೆ ಬಿದ್ದರು. ಪತ್ನಿಯ ಮಾತಿಗೆ ಓಗೊಟ್ಟ ಅಜಿತ್ ಕುಟುಂಬಸಮೇತ ಅಮೆರಿಕಕ್ಕೆ ಹಾರಿ ಮತ್ತೆ ಮೆಕಿನ್ಸೆಯಲ್ಲೇ ನೌಕರಿಗೆ ಶುರು ಹಚ್ಚಿಕೊಂಡರು. ಎರಡು ವರ್ಷದ ನಂತರ ಮೆಕಿನ್ಸೆ ತೊರೆದು ಬಫೆಟ್‌ನ ಇನ್ಷೂರೆನ್ಸ್ ಕಂಪನಿಗೆ ಕಾಲಿಟ್ಟರು. ಇಂದು ಅಜಿತ್ ಬರ್ಕ್‌ಲೀ ಹ್ಯಾತ್‌ವೇ ಸಂಸ್ಥೆಯ ಜೀವಾಳವಾಗಿದ್ದಾರೆ. ಅದಕ್ಕೆ ಕಾರಣ ಆತನ ಪರಿಶ್ರಮ ಮತ್ತು ಪತ್ನಿ ಟೆಂಕು ಪ್ರೇರಣೆಯೇ ಕಾರಣ. ವಿವಾಹದ ಬಳಿಕ ಭಾರತ ಬಿಟ್ಟು ಅಮೆರಿಕದಲ್ಲಿ ಹೊಸ ಜೀವನ ಅರಸಲು ಆಕೆ ಪ್ರೇರೇಪಿಸಿರದಿದ್ದರೆ ಇಂದು ಅಜಿತ್ ಈ ಮಟ್ಟಕ್ಕೆ ಬೆಳೆಯುವುದು ಕಷ್ಟವಾಗುತ್ತಿತ್ತು.
ಬಫೆಟ್ ಮತ್ತು ಅಜಿತ್‌ರದ್ದು ಒಂದು ರೀತಿ ಗುರು-ಶಿಷ್ಯರ ಸಂಬಂಧ. ಅಜಿತ್‌ರ ಯಾವುದೇ ನಿರ್ಧಾರ, ನಡೆ, ಬಗ್ಗೆ ಬಫೆಟ್ ಎಂದೂ ಚಕಾರ ಎತ್ತಿದ್ದಿಲ್ಲ. ಹಾಗೆಯೇ ಸದಾ ತನ್ನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ ಬಫೆಟ್‌ನಿಂದ ದೂರವಾಗುವ ಯೋಚನೆ ಎಂದೂ ಅಜಿತ್‌ಗೆ ಬಂದಿಲ್ಲ. "ಬರ್ಕ್‌ಶೈರ್ ಬಿಟ್ಟು ಬೇರೆಡೆ ದುಡಿಯಬೇಕೆಂಬ ಚಿಂತೆ ಎಂದೂ ನನಗೆ ಬಂದೇ ಇಲ್ಲ. ನಾನು ಇಲ್ಲಿ ಸಂತೃಪ್ತ. ಇಂತಹ ಕಂಪನಿ ಮತ್ತು ಇಂತಹ ಬಾಸ್ (ಬಫೆಟ್) ಎಲ್ಲರಿಗೂ ಸಿಗುವುದಿಲ್ಲ" ಎಂದು ಅಜಿತ್ ಸ್ವತಃ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.  ಬಫೆಟ್ ಮತ್ತು ಚಾರ್ಲಿ ಇಬ್ಬರಿಗೂ ಇಳಿವಯಸ್ಸು. ಅವರ ನಂತರ ಯಾರು ಎಂಬ ಪ್ರಶ್ನೆ ಪದೇ ಪದೆ ಏಳುತ್ತದೆ. ಬಫೆಟ್ ತನ್ನ ಪ್ರತಿ ವಾರ್ಷಿಕ ಪತ್ರದಲ್ಲೂ "ನಾನು ಮತ್ತು ಚಾರ್ಲಿ ಆರೋಗ್ಯದಿಂದಿದ್ದೇವೆ. ನಾವು ಇಷ್ಟು ಬೇಗ ಕುರ್ಚಿ ಬಿಟ್ಟುಕೊಡುವುದಿಲ್ಲ" ಎಂದು ಹೇಳುತ್ತಿದ್ದರೂ ಇಡೀ ಸಮೂಹ ಅಜಿತ್‌ರನ್ನು ತನ್ನ ಮುಂದಿನ ಸಿಇಒ ಎಂದೇ ನಂಬಿದೆ. ಅದಕ್ಕೆ ಇಂಬು ನೀಡುವುದು ಅಜಿತ್ ಕುರಿತು ಬಫೆಟ್ ಮಾಡುವ ಗುಣಗಾನ. ಈ ಎತ್ತರಕ್ಕೆ ಬೆಳೆದರೂ ಅಜಿತ್ ತವರನ್ನು ಮರೆತಿಲ್ಲ. ಬರ್ಕ್‌ಲಿ ಇನ್ಷೂರೆನ್ಸ್  ಈಗಾಗಲೇ ಮಿತ ಪ್ರಮಾಣದಲ್ಲಿ ಭಾರತದಲ್ಲಿ ಕಾರ್ಯಾರಂಭಿಸಿದೆ. ಇದು ಅಜಿತ್ ಕೂಸು. "ಇಲ್ಲಿ ವಿಮೆ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕಿದೆ. ವಿದೇಶಿ ಹೂಡಿಕೆ ಮೇಲಿನ ಮಿತಿ (26ರ್ ) ಹೆಚ್ಚಳಕ್ಕೆ ಕಾಯುತ್ತಿದ್ದೇವೆ. ಅದಾದರೆ ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ಎಂಟ್ರಿ ಕೊಡುತ್ತೇವೆ" ಎಂದು ಅಜಿತ್ ಸಾರಿದ್ದಾರೆ.
Welcome and good luck.

- ಕೆ.ಎಸ್.ಜಗನ್ನಾಥ್
jagannath.kudinoor@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಪಶ್ಚಿಮ ಬಂಗಾಳ ಉಪ ಚುನಾವಣೆ: ಪೊಲೀಸರೊಂದಿಗೆ ಮಾತಿನ ಚಕಮಕಿ: ಶಾಸಕ ಹುಮಾಯೂನ್ ಕಬೀರ್ ಬಂಧನ

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್