ಅಲ್ಲಿ ಡ್ಯುಯೆಟ್‌ನಲ್ಲಿ, ಹಾಗವಳು ಅಚ್ಚ ಬಿಳಿಯ ಉಡುಗೆಯಲ್ಲಿ ನೆನೆಯುತ್ತಿದ್ದರೆ ಪ್ರೇಕ್ಷಕನ ಕಣ್ಣು ಇನ್ನೇನನ್ನೋ ಹುಡುಕುತ್ತಿರುತ್ತದೆ. ಅದು ಚಿಮ್ಮುವ ಕಾರಂಜಿ, ಕೃತಕ ಝರಿ, ನದಿಯ ದಂಡೆ, ಸಾಗರದ ತಟ ಯಾವುದೂ ಆದೀತು, ಸಿನೆಮಾಗಳಲ್ಲಿ ನಾಯಕಿ ಒಮ್ಮೆಯಾದರೂ ನೀರಲ್ಲಿ ನೆನೆಯದೇ ಇದ್ದರೆ ನಿರ್ಮಾಪಕನಿಗೆ ತಾನು ಚಿತ್ರಕ್ಕೆ ಹೂಡಿದ ಹಣ ವಾಪಸು ಬರುವ ಭರವಸೆ ಇರುವುದಿಲ್ಲವೇನೊ? ಸನ್ನಿವೇಶಕ್ಕೆ, ಕಥೆಗೆ ಅರ್ಥಾತ್ ಸಂಬಂಧವಿಲ್ಲದಿದ್ದರೂ ಕೊನೆಪಕ್ಷ ಹಾಡಿನ ದೃಶ್ಯವೊಂದರಲ್ಲಾದರೂ ಮೈಗಂಟಿದ ಬಟ್ಟೆಯೊಡನೆ ಹೀರೋಯಿನ್‌ಗಳನ್ನು ನೆನೆಸದಿದ್ದರಾದೀತೆ?
ಅಂಥದ್ದೊಂದು ದೃಶ್ಯವನ್ನು ಜೊಲ್ಲು ಸುರಿಸಿ ನೋಡಿ ಬಂದ ನಮಗೆ ಕಿಲೋಮೀಟರ್‌ಗಟ್ಟಲೆ ದೂರದಿಂದ ಕೊಡ ನೀರಿಗಾಗಿ ನಡೆದು ನಲುಗಿ ಬೆವರಲ್ಲಿ ತೊಪ್ಪೆಯಾದ ಹೆಣ್ಣಿನ ಮತ್ತೊಂದು ದಯನೀಯ ಮುಖ ತಕ್ಷಣಕ್ಕೆ ನೆನಪಾಗುವುದೇ ಇಲ್ಲವೇನೋ? ಊರಿಗೆ ಬಂದವಳು ನೀರಿಗೆ ಬಾರದೇ ಉಳಿದಾಳೆ- ಗಾದೆ ಎಂದಿಗೂ ಹಳೆಯದಾಗುವುದೇ ಇಲ್ಲ. ನಮ್ಮ ನಗರಗಳು ಪ್ರಖಾಂಡ ಬೆಳವಣಿಗೆಯನ್ನು ಕಂಡಿವೆ. ತಾಂತ್ರಿಕತೆಯ ತುತ್ತ ತುದಿಯನ್ನು ತಲುಪಿ ತಂತ್ರಜ್ಞಾನದಲ್ಲಿ ಸಾಧಿಸಿದನ್ನು ಹೇಳಿಕೊಳ್ಳಲು ಸಂಪುಟಗಳೇ ಸಾಲಲಿಕ್ಕಿಲ್ಲ. ಗ್ರಾಮೀಣಾಭಿವೃದ್ಧಿಗೆಂದು, ಗ್ರಾಮೀಣ- ನಗರ ನೀರುಪೂರೈಕೆಗೆಂದು, ಸಣ್ಣ- ದೊಡ್ಡ ನೀರಾವರಿಗೊಂದು... ಹೀಗೆ ಸರಕಾರದ ಮಟ್ಟದಲ್ಲಿ ಖಾತೆಗಳ ಮೇಲೆ ಖಾತೆಗಳು ಹುಟ್ಟಿಕೊಂಡು ಒಬ್ಬೊಬ್ಬ ಸಚಿವರೂ ತಾವೇ ವಾರಸುದಾರರೆಂಬಂತೆ ಗೂಟದ ಕಾರಿನಲ್ಲಿ ಓಡಾಡಿಕೊಂಡಿರುವುದಕ್ಕೇನೂ ಬರವಿಲ್ಲ. ಇಷ್ಟು ಸಾಲದೆಂಬಂತೆ ಗ್ರಾಮ, ತಾಲೂಕು, ಜಿಲ್ಲೆಗಳ ಮಟ್ಟದಲ್ಲಿ ಪಂಚಾಯಿತಿ ಆಡಳಿತದ ನಿಗಾ. ಅಭಿವೃದ್ಧಿಯ ಅಂಕಿ-ಅಂಶಗಳು ಕಡತದಲ್ಲಿ ಭರಪೂರ. ಬಜೆಟ್‌ನಲ್ಲಿ ಬಿದ್ದ ಅಕ್ಷರಗಳನ್ನು ಎಣಿಸುವಷ್ಟರಲ್ಲಿ ಮತ್ತೊಂದು ಮುಂಗಡಕ್ಕೆ ಸಿದ್ಧತೆ ಮುಗಿದಿರುತ್ತದೆ. ಎಲ್ಲ ಸರಕಾರಗಳದ್ದೂ ಒಂದೇ ಗುರಿ; ಮೂಲ ಸೌಕರ್ಯ ಪೂರೈಕೆಗೆ ಆದ್ಯತೆಯೇ ಅವರ ಆಗಮ ಮಂತ್ರ. ಇಷ್ಟೆಲ್ಲದರ ನಡುವೆ ಈ ನೆಲದ ಸೋದರಿ, ಮಗಳು, ಹೆಂಡತಿ, ತಾಯಿ ನಡೆಯುತಾ ಇದ್ದಾಳೆ ಹನಿ ನೀರಿಗಾಗಿ ಮೈಲುಗಟ್ಟಲೆ, ನೆನೆಯುತ್ತಲೇ ಇದ್ದಾಳೆ ಬೆವರ ಬೇಗೆಯಲ್ಲಿ. ಹೀಗಾಗಿ ಹೆಣ್ಣು ಯಾವುದೇ ಊರಿಗೆ ಬಂದರೂ ನೀರಿಗಾಗಿ ಬಳಲುವವಳೇ ಎಂಬ ನಿತ್ಯ ಸತ್ಯವನ್ನು ಗಾದೆ ಜೀವಂತವಾಗಿಟ್ಟಿದೆ.
ನೀರು- ನೀರೆಯ ಸಂಬಂಧ ಇಂದಿನದೇನಲ್ಲ. ಹಾಗೆ ನೋಡಿದರೆ ಅವು ಪರಸ್ಪರ ಜೋಡಿ ಪದಗಳಷ್ಟೇ ಅಲ್ಲ, ಸಮಾನಾಂತರವೂ, ವಿರುದ್ಧಾರ್ಥಕವೂ, ಸಂಕೇತಾರ್ಥಕವೂ ಆಗಿ ರೂಪಾಂತರಗೊಳ್ಳುತ್ತಲೇ ಇವೆ. ಕೆಲವೊಮ್ಮೆ ಅವೆರಡೂ ಒಂದೇ ಪದಗಳೇನೋ ಅನ್ನುವಷ್ಟರಮಟ್ಟಿಗೆ ಗುಣ ಸಾಮ್ಯವನ್ನು ಹೊಂದಿದ್ದರೆ ಅದು ನಿರಂತರ ಶೋಷಣೆಯನ್ನವು ಅನುಭವಿಸುತ್ತಿರುವುದಕ್ಕಿರಬಹುದು. ಹಾಗಾಗಿ ನೀರು-ನೀರೆಯರ ನಡುವಿನ ಸಂಬಂಧ, ಸ್ಥಿತಿಗತಿಯಲ್ಲಿ ಯಾವುದೇ ಹೇಳಿಕೊಳ್ಳುವಂಥ ಬದಲಾವಣೆ ಕಾಣದೇ ಉಳಿದಿದೆ.
ಹಾಗೆ ನೋಡಿದರೆ ಇವೆರಡೂ ಸಕಾರಾತ್ಮಕ ಸಂಕೇತ. ದುರದೃಷ್ಟ, ಸೃಷ್ಟಿಯ ಈ ಎರಡೂ ಪುಳಕಗಳೂ ಸರಕಾಗಿ ಪರಿಗಣಿಸಲ್ಪಟ್ಟಿವೆ. ಎಲ್ಲ ಮಿತಿ, ಸ್ವಾಮ್ಯಗಳೂ ಸಮಾಜದ ಉನ್ನತ ಸ್ಥರದಲ್ಲಿ ಬಂಧನಕ್ಕೊಳಪಟ್ಟಿರುವ ನೀರು- ನೀರೆಯರು ಇಂಥ ಕಾರಣಗಳಿಂದಲೇ ದೌರ್ಜನ್ಯಕ್ಕೊಳಗಾಗಿವೆ ಎಂಬುದು ಸ್ಪಷ್ಟ ಸತ್ಯ. ಇವೆರಡೂ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮನೆಯೆಂದರೆ ಅಲ್ಲಿ ಈ ಎರಡೂ ಸಂಪತ್ತು ಸಮೃದ್ಧವಾಗಿರುವುದರ ಜತೆಗೆ ಶಾಂತ ಸ್ಥಿತಿಯಲ್ಲಿ ನೆಲೆಗೊಂಡಿರಬೇಕಿತ್ತು. ಸದ್ಗತಿಯ ಸಾಕಾರಕ್ಕೆ ಮಾರ್ಗ ತೋರುವ ಇವನ್ನು ನಾವು ಬಳಸಿಕೊಳ್ಳುತ್ತಿರುವ ರೀತಿ ನಾಗರಿಕ ಸಮಾಜಕ್ಕೆ ಖಂಡಿತಾ ಶೋಭೆ ತರುವಂತಿಲ್ಲ. ಎರಡರ ದುಂದು ನಮ್ಮ ಕಣ್ಣಮುಂದೆಯೇ ನಡೆಯುತ್ತಿದ್ದರೂ ವ್ಯವಸ್ಥೆಯಲ್ಲಿ ದನಿ ಎತ್ತುವವರ ಸಂಖ್ಯೆ ನಗಣ್ಯ.
ಎಲ್ಲದರಿಂದ ಆಚೆ ನೋಡಿದರೆ ನೀರಿನ ಕೊರತೆಯ ಮೊದಲ ಸಂತ್ರಸ್ತೆ ನೀರೆಯೇ. ಮನೆಯಲ್ಲಿ ನೀರಿನ ನಿರ್ವಹಣೆಯೆಂದರೆ ಮಿತ ಸಂಬಳದಲ್ಲಿ ಹಿತವಾಗಿ ಸಂಸಾರವನ್ನು ತೂಗಿಸಿಕೊಂಡು ಹೋಗುವ ಜಾಣ್ಮೆಯಿದ್ದಂತೆ. ಮನೆಯ ಹೆಣ್ಣು ಮಾತ್ರ ಇದರಲ್ಲಿ ಸಮರ್ಥಳಿರಲು ಸಾಧ್ಯ. ಅಂಥ ಬುದ್ಧಿವಂತಿಕೆ ಹೆಣ್ಣಿಗಲ್ಲದೇ ಪುರುಷರಿಂದ ಸಾಧ್ಯವೇ ಇಲ್ಲ. ಮಿತಬಳಕೆ, ಚೌಕಾಸಿ, ಅಚ್ಚುಕಟ್ಟುತನದ ಜತೆಗೇ ಸಂದರ್ಭಕ್ಕೆ ಒದಗಿಸಿಕೊಡುವುದು ಸಣ್ಣ ಮಾತೇನಲ್ಲ. ದುಡಿಯುವ ಗಂಡಸಿಗೆ ಅದಷ್ಟೇ ಯೋಚನೆಯಾದರೆ ಅತ ತಂದು ಹಾಕಿದ್ದರಲ್ಲಿ ಯಾರಿಗೂ ಕೊರತೆಯಾಗದಂತೆ, ಕೊರತೆಯಾದಲ್ಲಿ ಅದನ್ನು ಸರಿದೂಗಿಸಿಕೊಂಡು ಹೋಗುವ ಸವಾಲು ಹೆಣ್ಣಿಗಿರುತ್ತದೆ. ಒಂದೊಮ್ಮೆ ಗಂಡು ಬೇಜವಾಬ್ದಾರಿಯಾದಲ್ಲಿ ಮನೆಯೊಡತಿಯ ಸ್ಥಿತಿ ಅಯೋವುಯ. ಹೊಂಚುವ, ಹಂಚುವ ಎರಡೂ ಕರ್ಮವನ್ನು ಅವಳೇ ನಿಭಾಯಿಸಬೇಕು. ನೀರಿನ ವಿಚಾರದಲ್ಲೂ ಇಂಥದ್ದೇ ಸವಾಲು ಹೆಣ್ಣಿಗೆ. ಮನೆಯಲ್ಲಿ ಸಮೃದ್ಧಿಯಿದ್ದರೆ ಅದನ್ನು ಕಾಪಿಟ್ಟುಕೊಳ್ಳಬೇಕು. ಕೊರತೆಯಾದರೆ ತುಂಬಿಸಿಕೊಳ್ಳಬೇಕು. ಅಗತ್ಯಕ್ಕಷ್ಟೇ ಇದ್ದರೆ ಸರಿಯಾಗಿ ಎಲ್ಲದಕ್ಕೂ ಹೊಂದಿಸಿಕೊಳ್ಳಬೇಕು. ನೀರಿನ ತಲೆಬಿಸಿ ಇಂದಿಗೂ ಎಂದಿಗೂ ಗಂಡಿಗೆ ಇಲ್ಲವೇ ಇಲ್ಲ ಎಂಬ ಅಲಿಖಿತ ಸಂವಿಧಾನ ನಮ್ಮ ಸಮಾಜದಲ್ಲಿ. ಹಾಗಾಗಿ ಅದರ ಸದ್ಬಳಕೆ- ದುರ್ಬಳಕೆ, ಹಿತ- ಮಿತ ಎಲ್ಲದರ ಹೊಣೆ ಹೆಣ್ಣಿನದ್ದು.
ವ್ಯಾಪಾರೀಕರಣದ ಕರಾಳ ಬಾಹು ಎಲ್ಲೆಡೆ ಚಾಚಿರುವ ಇಂದಿನ ಸನ್ನಿವೇಶದಲ್ಲಿ ನೀರು ನಿಜಕ್ಕೂ ನೀರೆಯ ಪಾಲಿಗೆ ಸವಾಲಾಗಿದೆ. ಬಾಟಲಿಗಳಲ್ಲಿ ಅಲಂಕರಿತಗೊಂಡು, ಬೆಲೆಪಟ್ಟಿ ಹಚ್ಚಿಸಿಕೊಂಡು ಅಂಗಡಿ ಮುಂಗಟ್ಟುಗಳಲ್ಲಿ ರಾರಾಜಿಸುತ್ತಿರುವ ಬಾಟಲಿ ನೀರಿನ ದರಬಾರಿನ ದಿನಗಳಲ್ಲಿ ಬಹುತೇಕ ಜಲ ಸಂಪತ್ತು ಉಳ್ಳವರ ಪಾಲಾಗುತ್ತಿದೆ. ಸಮುದಾಯದ ಆಸ್ತಿಯಾಗಿ ಎಲ್ಲರ ದಾಹ ತಣಿಸಬೇಕಿದ್ದ ನೀರು ಈಗ ಮಹಿಳೆಯರನ್ನು ಹಿಂದೆಂದಿಗಿಂತಲೂ ಹೆಚ್ಚು ದಣಿಸುತ್ತಿದೆ. ದೂರದೃಷ್ಟಿಯ ಕೊರತೆ, ಮಿತಿಮೀರಿದ ವಾಣಿಜ್ಜಿಕ ದಾಹ, ಅವೈಜ್ಞಾನಿಕ ಬಳಕೆ, ನಿರ್ವಹಣೆಯಲ್ಲಿನ ಕೊರತೆ, ಸಂಪನ್ಮೂಲದ ಬಗೆಗಿನ ಅಜ್ಞಾನ ಇತ್ಯಾದಿ ಕಾರಣಕ್ಕೆ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆಳಕ್ಕೆ ಇಳಿದಿರುವ ನೀರಿನ ಮೌಲ್ಯ ಮತ್ತು ಭೌತಿಕ ಮಟ್ಟಗಳು ಸಹಜವಾಗಿ ಹೆಣ್ಣುಮಕ್ಕಳ ಅದರಲ್ಲೂ ಗ್ರಾಮೀಣ- ಬಡವರ್ಗದವರ ನೆಮ್ಮದಿಯನ್ನು ಆಳ ಕಂದಕಕ್ಕೆ ತಳ್ಳಿದೆ. ನಗರದಲ್ಲೂ ಸ್ಥಿತಿ ಭಿನ್ನವಾಗೇನೂ ಇಲ್ಲವೆಂಬುದು ಬೆಂಗಳೂರಿನ ಹೊರವಲಯದ ಬಡಾವಣೆಗಳಲ್ಲಿ ಶ್ರುತಗೊಳ್ಳುತ್ತದೆ. ಸಣ್ಣಪುಟ್ಟ ನಗರಗಳಲ್ಲಿ ಬೆಳಗಿನ ಜಾವಕ್ಕೆಲ್ಲಾ ನಲ್ಲಿಗಳೆದುರು, ಟ್ಯಾಂಕರ್‌ಗಳ ಮುಂದೆ ನಿರ್ಮಾಣವಾಗುವ ಜಮಾವಣೆ, ಪೈಪೋಟಿ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.
ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಶೇ.70ರಷ್ಟು ಕುಟುಂಬದವರಿಗೆ ನೀರು ಮನೆ ಹತ್ತಿರದಲ್ಲೇ ಸಿಗುತ್ತದೆ. ಹಾಗೆಂದು ಹೇಳುವುದು ಸರಕಾರಿ ಅಂಕಿ-ಅಂಶಗಳು. ಅದರ ವಿಶ್ವಾಸಾರ್ಹತೆ ಓದಗರಿಗೆ ಬಿಟ್ಟದ್ದು. ಉಳಿದ 30ರಷ್ಟು ಕುಟುಂಬ ವರ್ಗದ ಹೆಣ್ಣುಮಕ್ಕಳ ಸ್ಥಿತಿ ನಿಜಕ್ಕೂ ಶೋಚನೀಯ. ಬಹಳಷ್ಟು ಕುಟುಂಬದವರು ಕನಿಷ್ಠ ನೀರು ತರಲು ಸುಮಾರು 45 ರಿಂದ 60 ನಿಮಿಷ ತೆಗೆದುಕೊಳ್ಳುವ ಸ್ಥಿತಿ. ದೇಶದಲ್ಲಿ ಬರಪೀಡಿತ ಗ್ರಾಮೀಣ ಮಹಿಳೆ ವರ್ಷಕ್ಕೆ ಸರಾಸರಿ 14 ಸಾವಿರ ಕಿ.ಮೀ.ನಷ್ಟು ನೀರಿಗಾಗಿಯೇ ಅಲೆದಾಟ ನಡೆಸುತ್ತಾಳೆ ಎಂದರೆ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು. ದಿನದ 6 ರಿಂದ 9 ಗಂಟೆಯನ್ನು ಆಕೆ ನೀರು ಹೊರುವುದರಲ್ಲೇ ವ್ಯಯಿಸುತ್ತಾಳೆ. ವಿಶ್ವಸಂಸ್ಥೆಯ ಮಾನದಂಡದ ಪ್ರಕಾರ ಯಾವುದೇ ಜನವಸತಿಯ 2.5 ಕಿ.ಮೀ. ಸುತ್ತಳತೆಯಲ್ಲಿ ನೀರಿನ ಅಗರವಿಲ್ಲದಿದ್ದಲ್ಲಿ ಅದನ್ನು ಸಮಸ್ಯೆಪೀಡಿತ ಪ್ರದೇಶವೆಂದು ಪರಿಗಣಿಸಬೇಕಿದೆ. ನಮ್ಮ ರಾಜ್ಯದಲ್ಲೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಬಹುಭಾಗ ಹಳ್ಳಿಗಳು ಈ ದೃಷ್ಟಿಯಿಂದ ಸಮಸ್ಯೆ ಪೀಡಿತವೇ. ನೀರಿದ್ದರೂ ಶೇ23ರಷ್ಟು ಕುಟುಂಬಗಳು ಒಂದಕ್ಕಿಂತ ಹೆಚ್ಚು ಜಲಮೂಲಗಳ ಅವಲಂಬನೆ ಹೊಂದಿದೆ.
ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಶೇ.61 ಗ್ರಾಮಗಳಲ್ಲಿ ಸಕ್ರಿಯ ನೀರು ಮತ್ತು ನೈರ್ಮಲ್ಯ ಸಮಿತಿಗಳ ಅಸ್ತಿತ್ವವಿದೆ. ಆದರೆ ಅದರಲ್ಲಿ ಕೆಲವೊಂದು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇನ್ನು ಜಿಲ್ಲೆಗಳಲ್ಲಿ ಶೇ.10 ರಷ್ಟು ಗ್ರಾಮ ಪಂಚಾಯತಿಗಳಿಗೆ ನೀರಿನ ಪರೀಕ್ಷೆಯ ಉಪಕರಣಗಳನ್ನು ಹಂಚಿದ್ದಾರೆ. ಆದರೆ ಒಂದನ್ನು ಕೂಡ ಉಪಯೋಗಿಸಿಲ್ಲ. ಅಂದರೆ ನೀರಿನ ಗುಣಮಟ್ಟದ ಖಾತ್ರಿಯನ್ನಂತೂ ಕೇಳುವಂತೆಯೇ ಇಲ್ಲ ಎಂದ ಹಾಗಾಯಿತು. ನೀರಿನ ಕೊರತೆಯ ಜತೆಗೆ ಅಶುದ್ಧ ನೀರಿನಿಂದುಂಟಾಗುತ್ತಿರುವ ಸಮಸ್ಯೆ ತೀರಾ ಅಪಾಯಕಾರಿ. ಹೆಣ್ಣಿನ ಬದುಕಿನ ಬಹುಭಾಗವನ್ನು ನೀರಿನ ಹುಡುಕಾಟವೇ ತಿಂದು ಹಾಕುತ್ತಿದ್ದಾಗಲೂ ಲಭ್ಯ ನೀರಿನ ಗುಣಮಟ್ಟ ಭಯ ಹುಟ್ಟಿಸುವಂತಿದೆ. ಹೀಗಾಗಿ ಗ್ರಾಮೀಣ ಬದುಕು ರೋಗಗಳ ಹಂದರವಾಗುತ್ತಿದೆ. ಭಾರತದಲ್ಲಿ ಪ್ರತಿ ವರ್ಷ, 50ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು ತಮ್ಮ 5ನೆಯ ವರ್ಷವನ್ನು ನೋಡುವುದೇ ಇಲ್ಲ! ಕಾರಣ, ನೀರಿನಿಂದ ಉಂಟಾಗುವ ರೋಗಗಳಾದ ಭೇದಿ, ಜಠರ-ಕರುಳುಗಳ ಉರಿಯೂತ, ಹೆಪಟೈಟಿಸ್‌ನಂತಹ ರೋಗಗಳಿಗೆ ಅವರು ತುತ್ತಾಗುತ್ತಾರೆ. ದೇಶದ 300 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಶೌಚಾಲಯದ ಸೌಲಭ್ಯ ಇಲ್ಲ. ಈಗಾಗಲೇ, ನದಿ ತಪ್ಪಲುಗಳಲ್ಲಿ ವಾಸಿಸುವ ದೇಶದ 224 ದಶಲಕ್ಷ ಜನರು ನೀರಿನ ಅಭಾವವನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಶೇ.33 ಜನಸಂಖ್ಯೆಗೆ ಸಾಲುವ ನವೀಕರಣಗೊಳ್ಳುವ ನೀರಿನ ಮೂಲಗಳು, ದೇಶದ ಶೇ.67 ಭಾಗದಲ್ಲಿ ಮಾತ್ರ ಕಾಣಬಹುದು. ನೀರಾವರಿಗೆ ಬೇಕಾದ ಶೇ.70 ನೀರು ಹಾಗೂ ನೀರಿನ ಪೌರಸರಬರಾಜಿನ ಮೂಲವು ಅಂತರ್ಜಲದಿಂದ ದೊರೆಯುತ್ತದೆ. ಆದರೆ, ಬರಿದಾದ ಜಲಾಧಾರಗಳು ಹಾಗೂ ಕುಗ್ಗಿದ ಅಂತರ್ಜಲದ ಮಟ್ಟಗಳಿಂದಾಗಿ ಇದರ ಮೇಲಿನ ಅವಲಂಬನೆ ಸುಸ್ಥಿರತೆಯನ್ನು ಕಳೆದುಕೊಂಡಿದೆ. 2020ರ ವೇಳೆಗೆ, ಸರಬರಾಜಿನ ಮೂಲಗಳಿಗಿಂತ ನೀರಿನ ಬೇಡಿಕೆ ಹೆಚ್ಚುವುದೆಂದು ಅಂದಾಜು ಮಾಡಲಾಗಿದೆ.
ಪರಿಸರವನ್ನು ಸುಸ್ಥಿಯಲ್ಲಿಡಲು ಅವಶ್ಯಕತೆಯಿರುವ ಕನಿಷ್ಠ ನೀರಿನ ಬಳಕೆಯನ್ನು ಪರಿಸರ ದ್ರವ್ಯವೆನ್ನುತ್ತೇವೆ. 1972ರ ಸ್ಟಾಕ್ ಹೋಮ್‌ನ ಸಮಾವೇಶದಲ್ಲಿ ಇದು ಕನಿಷ್ಠ ನೀರಿನ ಬೇಡಿಕೆಯೆಂದು ನಿರ್ಧರಿಸಿತ್ತು. ಆದರೆ, ಇತ್ತೀಚಿನ ಸಂಶೋಧನೆಯ ಪ್ರಕಾರ ಕೇವಲ ಕನಿಷ್ಠ ನೀರನ್ನು ಪರಿಸರ ದ್ರವ್ಯವೆನ್ನಲಾಗುವುದಿಲ್ಲ. ಪರಿಸರವನ್ನು ಸುಸ್ಥಿಯಲ್ಲಿಡಲು ಅವಶ್ಯಕತೆಯಿರುವ ಅಷ್ಟೂ ನೀರನ್ನು ಪರಿಸರ ದ್ರವ್ಯವೆನ್ನಬಹುದೆಂದು ತೀರ್ಮಾನಿಸಲಾಗಿದೆ. 70ರ ದಶಕದಲ್ಲಿ ಕೇವಲ, ಒಳಹರಿವು ಮತ್ತು ಹೊರಹರಿವನ್ನು ಮುಂದಿಟ್ಟುಕೊಂಡು ನಿರ್ಧರಿಸುತ್ತಿದ್ದರು, ನಂತರ 80ರ ದಶಕದಲ್ಲಿ ಅದನ್ನು ಮಾರ್ಪಾಡು ಮಾಡಿ, ಭೌಗೋಳಿಕ ಅಂಶಗಳನ್ನು ಮತ್ತು ಜೀವ ಸಂಕುಲವನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸತೊಡಗಿದರು. 90ರ ದಶಕದಲ್ಲಿ ಅದು ಇನ್ನೂ ಮುಂದುವರೆದು, ಕೇವಲ ಒಂದು ಜೀವಸಂಕುಲದಿಂದ ನಿರ್ಧರಿಸಲಾಗುವುದಿಲ್ಲವೆಂದು ತೀರ್ಮಾನಿಸಿ, ಅಲ್ಲಿನ ಅಷ್ಟೂ ಜೀವ ಸಂಕುಲವನ್ನು ಪರೀಕ್ಷಿಸಿ ನಿರ್ಧರಿಸಲು ತೀರ್ಮಾನಿಸಲಾಯಿತು. 2000ದಿಂದ ಈಚೆಗೆ ಸಮಗ್ರ ಪರಿಸರವನ್ನು ಮತ್ತು ಮಾನವ ಸಂಕುಲವನ್ನು ಒಗ್ಗೂಡಿಸಿ ತೀರ್ಮಾನಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಪರಿಸರ ದ್ರವ್ಯದ ಮಾನದಂಡವೇ ಅಸ್ಥಿರವಾಗುತ್ತಿರುವಾಗ ಇನ್ನು ಜೀವದ್ರವ್ಯದ ಸ್ಥಿತಿ ಕೇಳುವಂತೆಯೇ ಇಲ್ಲ. ಅದರ ನಡುವೆ ನಲುಗುತ್ತಿದ್ದಾಳೆ ನೀರೆ.
ಬಹುತೇಕ ನಗರಗಳಲ್ಲಿ ಕನಿಷ್ಠ ದರಕ್ಕೆ ನೀರು ಸಿಕ್ಕುತ್ತಿಲ್ಲ. ಟ್ಯಾಂಕರ್‌ಗಳ ಪಾರಮ್ಯದಡಿಯಲ್ಲಿ ಮಧ್ಯಮ, ಕೆಳಮಧ್ಯಮ ವರ್ಗದ ಹೆಣ್ಣು ನೀರಿಗಾಗಿನ ಅಲೆದಾಟದಲ್ಲಿ ಬೆಂಡಾಗಿದ್ದಾಳೆ. ಮೈಲುಗಟ್ಟಲೆ ಕ್ಯೂನಲ್ಲಿ ಗಂಟೆಗಳವರೆಗೆ ನಿಂತರೂ ಕೊಡ ನೀರಿಗಾಗಿನ ಆಕೆಯ ಪರದಾಟಕ್ಕೆ ಕೊನೆ ಇಲ್ಲದಾಗಿದೆ. ನಡುರಾತ್ರಿ, ಬೆಳಗಿನಜಾವ ಎನ್ನದೇ ಅಲೆದಾಡುವ ಮಹಿಳೆಯ ಬದುಕಿನ ಭದ್ರತೆಗೆ ಯಾರು ಹೊಣೆ. ಗ್ರಾಮೀಣ ಭಾಗದಲ್ಲಿ ದಿನವೆಲ್ಲಾ ಅಲೆದಾಡಿದರೂ ಹೊತ್ತು ಮುಳಗುವ ಸಮಯಕ್ಕೆ ಮನೆಗೆ ಬರುವ ಗಂಡ ಮಕ್ಕಳ ಅಗತ್ಯಕ್ಕೆ ಸರಿಗಟ್ಟುವಷ್ಟು ನೀರು ಹೊಂದಿಸುವುದು ಆಕೆಗೆ ಹರಸಾಹಸ. ಅಡುಗೆ, ಕುಡಿಯುವ ಅಗತ್ಯಕ್ಕೇ ಈ ತೆರನಾದರೆ ಇನ್ನು ಗೃಹಕೃತ್ಯ, ತೊಳೆಯುವುದು, ಬಳಿಯುವುದು ಇತ್ಯಾದಿ ಕೆಲಸಕ್ಕೆ ಎಲ್ಲಿಂದ ನೀರು ತಂದಾಳವಳು? ಬೆಳಗ್ಗೆ ಒಂದು ಹಂತದ ಕೆಲಸ ಮುಗಿಸಿ ನೀರು ತುಂಬಿಸಿಟ್ಟರೆ ಸಂಜೆಯಾಗುವ ಹೊತ್ತಿಗೆ ಮತ್ತದೇ ತಳಕಂಡ ಬರಿದೇ ಬಕೀಟು, ಕೊಡಗಳು.
ಮಹಿಳೆಯರ ಆರೋಗ್ಯ, ಶಿಕ್ಷಣ, ಮಾನಸಿಕ ಸ್ಥಿತಿ, ಕೌಟುಂಬಿಕ ನೆಮ್ಮದಿ ಈ ಎಲ್ಲದರ ಮೇಲೆ ನೀರು ಪರಿಣಾಮ ಬೀರುತ್ತಿದೆ. ಬಡ ಹೆಣ್ಣುಮಕ್ಕಳಂತೂ ಮೊದಲೇ ಅನಾರೋಗ್ಯದ ಸಮಸ್ಯೆಯಲ್ಲಿ ನರಳುತ್ತಿದ್ದಾರೆ. ಅದರಲ್ಲೂ ನೀರಿಗಾಗಿನ ಸುತ್ತಾಟ ಅವಳನ್ನು ಇನ್ನಷ್ಟು ದುಃಸ್ಥಿತಿಗೆ ತಳ್ಳಿದೆ. ನೀರು ಸಂಗ್ರಹ, ಮನೆಗೆಲಸ, ಮಕ್ಕಳ ಲಾಲನೆ ಪಾಲನೆ, ಕುಟುಂಬದ ಪೋಷಣೆ ಈ ಎಲ್ಲವನ್ನೂ ಅವಳು ಒತ್ತೊಟ್ಟಿಗೆ ನಿರ್ವಹಿಸಲಾರದ ಸ್ಥಿತಿ. ಹೀಗಾಗಿ ತಾನು ನೀರಿಗೆ ಹೊರಟರೆ ಉಳಿದ ಹೊಣೆಯನ್ನು ಹೊರಬೇಕಾದದ್ದು ಮತ್ತೆ ಮನೆಯ ಹೆಣ್ಣು ಮಗು. ಇಲ್ಲವೇ ಮನೆಗೆಲಸದಲ್ಲಿ ಅಮ್ಮ ನಿಂತರೆ ಹೆಣ್ಣು ಮಗುವನ್ನು ನೀರಿಗೆ ಅಟ್ಟಲಾಗುತ್ತಿದೆ. ಹೀಗಾಗಿ ಶಿಕ್ಷಣ ಮತ್ತೆ ಬಡ ಹೆಣ್ಣುಮಕ್ಕಳಿಗೆ ಮರೀಚಿಕೆಯಾಗುತ್ತಿದ್ದರೆ ಅದಕ್ಕೆ ನೇರ ಕಾರಣ ನೀರಿನ ಕೊರತೆ. ಮನೆಯ ಗಂಡಸು ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಲಾರ. ಆತ ಮನೆಯ ಯಜಮಾನ ಕೆಲಸವಿದ್ದರೆ ಕೆಲಸ, ಇಲ್ಲದಿದ್ದರೆ ಊರ ಹರಟೆ ಆತನ ಪೌರುಷಕ್ಕೆ ಶೋಭೆ! ಇನ್ನು ಗಂಡು ಮಗ ಶಾಲಾ- ಕಾಲೇಜು, ಬಿಟ್ಟರೆ ಗೆಳೆಯರೊಂದಿಗಿನ ಆಟ ಅಲೆದಾಟಕ್ಕೆ ಮೀಸಲು. ಹೆಣ್ಣುಮಗುವಿಗೆ ಶಿಕ್ಷಣ, ಮನೊರಂಜನೆಯಿಂದ ವಂಚಿತಳಾಗಿ ನೀರ ಬೇಗೆಯಲ್ಲಿ ಬೇಯಬೇಕು. ಹೆಣ್ಣು ಮಗು ಮನೆಯ ಹೊಸ್ತಿಲನ್ನು ದಾಟುವ ಸ್ವಾತಂತ್ರ್ಯ ಪಡೆದಿದ್ದರೆ ಅದು ನೀರಿನ ಸಂಕಷ್ಟದಿಂದ ಮಾತ್ರವೇ. ಅಷ್ಟರ ಮಟ್ಟಿಗೆ ಅವಳು ಸಂತಸಪಡಬೇಕೇ? ಮತ್ತೊಂದು ಮಹಿಳಾ ದಿನ ಇಂದು ಆಚರಣೆಗೊಳ್ಳುತ್ತಿರುವ ಸಂದರ್ಭದಲ್ಲಿ ನೀರು-ನೀರೆಯರ ಈ ಸಂಕಷ್ಟ ವ್ಯವಸ್ಥೆಗೆ ಗೋಚರಿಸುತ್ತಿದೆಯೇ?
-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in