ಅಂಕಣಗಳು

ಮತ್ತೆ ಹೊರಟಿದೆ ವೇಗದ ಕಾರುಗಳ ದಿಬ್ಬಣ

ನಿಮ್ಮನ್ನು ಯಾರೂ ಮುಟ್ಟಲಾಗದ ಎತ್ತರದಲ್ಲಿರುತ್ತೀರಿ ಒಂದು ಕ್ಷಣದಲ್ಲಿ ...

You are doing something that nobody else is able to do. But the same moment that you are seem as the best, the fastest and somebody that cannot be touched, you are enormously fragile. Because in a split second, it's gone. These two extremes are feelings that you do not get everyday. These are the things that keep me going  (ಯಾರೂ ಮಾಡಲಾಗದ್ದನ್ನು ನೀವು ಮಾಡುತ್ತಿರುತ್ತೀರಿ. ಒಂದು ಕ್ಷಣದಲ್ಲಿ ನೀವು ಶ್ರೇಷ್ಠತೆಯ ಗಗನ ಏರುತ್ತೀರಿ. ನಿಮ್ಮನ್ನು ಯಾರೂ ಮುಟ್ಟಲಾಗದ ಎತ್ತರದಲ್ಲಿರುತ್ತೀರಿ. ಆದರೆ ಕ್ಷಣಾರ್ಧದಲ್ಲಿ ನೆಲ ಕಚ್ಚುತ್ತೀರಿ. ಈ ಶ್ರೇಷ್ಠತೆ ಕ್ಷಣಿಕ ಎನಿಸುತ್ತದೆ. ಇವೆರಡೂ ಒಂದಕ್ಕೊಂದು ತಾಳೆಯಾಗದ ತದ್ವಿರುದ್ಧ ಭಾವನೆಗಳು. ಈ ವೈರುದ್ಧ್ಯಗಳೇ ನನ್ನನ್ನು ಕೈ ಹಿಡಿದು ನಡೆಸುತ್ತಿರುವುದು).
ಇದು ಎಫ್-1 ರೇಸಿಂಗ್‌ನ ದಂತಕತೆ ಮತ್ತು ದುರಂತ ನಾಯಕ ಆಯರ್ಟನ್ ಸೆನ್ನಾ ಮಾತು. ಈ ಮಾತುಗಳಲ್ಲಿ ಒಂದಿನಿತೂ ಉತ್ಪ್ರೇಕ್ಷೆ ಇಲ್ಲ. ಬದುಕಿನ ಕ್ಷಣಿಕತೆ ಮತ್ತು ಕೌತುಕ ಎರಡನ್ನೂ ಮೈಗೂಡಿಸಿಕೊಂಡಿರುವ ಕ್ರೀಡೆ ಎಂದರೆ ಈ ಎಫ್-1 ರೇಸಿಂಗ್. ಇದರಲ್ಲಿ ರೋಮಾಂಚನ ಇದೆ, ಕುತೂಹಲ ಇದೆ,  ವೇಗ ಇದೆ ಮತ್ತು ಇವೆಲ್ಲವನ್ನೂ ಮೀರಿಸುವ ಕೌಶಲ್ಯ ಚಾಕಚಕ್ಯತೆ ಮತ್ತು ಎದೆಗಾರಿಕೆ ಇದೆ. ಹಾಗೆಯೇ ಇದೊಂದು ದೊಡ್ಡ ಉದ್ಯಮವೂ ಹೌದು. ಸುಮಾರು ಆರು ದಶಕಗಳ ಇತಿಹಾಸ ಹೊಂದಿರುವ ಎಫ್-1 ಹಲವಾರು ರೋಚಕ ಕ್ಷಣಗಳಿಗೆ, ಚಾಲಕರ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಒಂದೇ ತಂಡದ ಇಬ್ಬರು ಚಾಲಕರು ಪೈಪೋಟಿಗೆ ಬಿದ್ದವರಂತೆ ತಮ್ಮಲ್ಲಿಯೇ ಕಾದಾಡಿದ್ದೂ ಇದೆ. ಮ್ಯಾನ್ಯುಯಲ್ ಫಾಂಜಿಯೊ ಮತ್ತು ಮೈಕೆಲ್ ಶುಮಾಕರ್‌ನ ಸಾರ್ವಭೌಮತ್ವದ ಕೆಲ ವರ್ಷಗಳನ್ನು ಹೊರತುಪಡಿಸಿದರೆ ಪ್ರತಿ ಬಾರಿಯೂ ಹೊಸ ಚಾಂಪಿಯನ್‌ಗಳು ಆಗಿ ಹೋಗಿದ್ದಾರೆ. ಟೆನಿಸ್‌ನಲ್ಲಿ ಬೋರ್ಗ್ -ಮೆಕೆನ್ರೊ, ಬೆಕರ್-ಎಡ್ಬರ್ಗ್, ಫೆಡರರ್-ನಡಾಲ್, ಸಾಂಪ್ರಾಸ್-ಅಗಾಸಿ ನಡುವಿನ ರೋಚಕ ಸಂಘರ್ಷಗಳಂತೆ ಎಫ್-1 ರೇಸಿಂಗ್‌ನಲ್ಲಿ ಸಹ ರೋಚಕ rivalryಗಳಿಗೇನೂ  ಕೊರತೆ ಇಲ್ಲ.
ಆಯರ್ಟನ್ ಸೆನ್ನಾ ಮತ್ತು ಅಲನ್ ಪ್ರಾಸ್ಟ್
ಬಹುಶಃ ಎಫ್-1 ರೇಸಿಂಗ್ ಅತ್ಯಂತ ಕೌತುಕತ, ರೋಚಕತೆಗೆ ಅನ್ವರ್ಥವಾಗಿರುವ rivalry ಎಂದರೆ ಈ ಇಬ್ಬರದು. ಬ್ರೆಜಿಲ್‌ನ ಸಾವೊ ಪೌಲೊದ ಅಷ್ಟೇನೂ ಸಮೃದ್ಧಿ ಇರದ ಪರಿಸರದಿಂದ ಬಂದ ಸೆನ್ನಾ ಮತ್ತು ಫ್ರಾನ್ಸ್‌ನ ಸುಭಿಕ್ಷ ಪರಿಸರದಿಂದ ಬಂದ ಪ್ರಾಸ್ಟ್ ಎಫ್-1ನಲ್ಲಿ ಪೈಪೋಟಿ, ಜಿದ್ದಿನ ಸ್ಪರ್ಧೆಗೆ ಹೊಸ ವ್ಯಾಖ್ಯಾನ ನೀಡಿದರು.
ಇವರಿಬ್ಬರ ಪೈಪೋಟಿ ಸಾಮಾನ್ಯದ್ದಾಗಿರಲಿಲ್ಲ. ಇಬ್ಬರೂ ಉತ್ತಮ ಚಾಲಕರೆ. ವೇಗ, ಕೌಶಲ ಇಬ್ಬರಲ್ಲೂ ಇತ್ತು. ಆದರೆ daring approach (ಎದೆಗಾರಿಕೆ), ಪ್ರಾಸ್ಟ್‌ನಲ್ಲಿರಲಿಲ್ಲ. 1988ರಿಂದ ಎರಡು ವರ್ಷ ಇಬ್ಬರೂ ಒಂದೇ ತಂಡ (ಮೆಕ್ಲಾರೆನ್)ನಲ್ಲಿದ್ದರು. ಇಬ್ಬರೂ ಮಹತ್ವಾಕಾಂಕ್ಷಿಗಳೆ. ಹಾಗಾಗಿ ಇಬ್ಬರಲ್ಲೂ ನಾನೇ ಎಂಬ ಭಾವನೆ ಧಂಡಿಯಾಗಿತ್ತು. ಆ ವರ್ಷದ ಪೋರ್ಚುಗಲ್ ರೇಸ್‌ನಲ್ಲೇ ಇವರಿಬ್ಬರ ನಡುವಿನ ಮೇಲಾಟದ ಝಳಕು ಕಂಡಿತು. ರೇಸ್ ಆರಂಭದ ಗ್ರಿಡ್‌ನಲ್ಲಿ ಪ್ರಾಸ್ಟ್ ಮೊದಲಿಗನಾಗಿದ್ದರೆ ಎರಡನೇ ಸ್ಥಾನದಲ್ಲಿ ಸೆನ್ನಾ ಇದ್ದ. ರೇಸ್ ಆರಂಭವಾಗಿ ಮೊದಲ ತಿರುವು ಬರುವ ಮೊದಲೇ ಪ್ರಾಸ್ಟ್ ತನ್ನದೇ ತಂಡದ ಸಹ ಚಾಲಕ ಸೆನ್ನಾ ಕಾರನ್ನು ಟ್ರ್ಯಾಕ್‌ನಿಂದ ಹೊರ ಹೋಗುವಂತೆ ಮಾಡಿದ. ಇಷ್ಟಾಗಿಯೂ ಪ್ರಾಸ್ಟ್ ಆ ರೇಸ್ ಗೆದ್ದ. ಆದರೆ ಇಬ್ಬರ ನಡುವೆ ಅಸಹನೆಯ ಬೀಜ ಮೊಳಕೆಯೊಡೆದಿತ್ತು. ಇದಾದ ಬಳಿಕ ನಡೆದ ಜಪಾನ್ ಜಿಪಿಯಲ್ಲಿ ಚಾಂಪಿಯನ್‌ಶಿಪ್‌ನ ನಿರ್ಣಾಯಕ ರೇಸ್ ಆಗಿತ್ತು. ಪ್ರಾಸ್ಟ್ ಐದು ಅಂಕಗಳಿಂದ ಸೆನ್ನಾಗಿಂತ ಮುಂದಿದ್ದ. ಪ್ರಾಸ್ಟ್ ಆರಂಭಿಕ ಗ್ರಿಡ್‌ನ ಎರಡನೇ ಸ್ಥಾನದಲ್ಲಿದ್ದರೆ ಸೆನ್ನಾ ಆತನಿಗಿಂತ ತೀರಾ ಹಿಂದಿದ್ದ. ಆದರೆ ಪ್ರತಿ ಲ್ಯಾಪ್‌ನಲ್ಲೂ ವೇಗ ವೃದ್ಧಿಸಿಕೊಂಡ ಸೆನ್ನಾ 20ನೇ ಲ್ಯಾಪ್‌ನಲ್ಲಿ ಪ್ರಾಸ್ಟ್ ಸನಿಹ ಬಂದ. 27ನೇ ಲ್ಯಾಪ್‌ನಲ್ಲಿ ಪ್ರಾಸ್ಟ್ ಕಾರಿನ ವೇಗ ಕುಂಠಿತಗೊಂಡಿತು. ಇದರ ಲಾಭ ಪಡೆದು ಆತನನ್ನು ಹಿಂದಿಕ್ಕಿದ ಚಾಂಪಿಯನ್ ಸಂಭ್ರಮಾಚರಣೆ ವೀಕ್ಷಿಸಿದ. 1990ರಲ್ಲಿ ಪ್ರಾಸ್ಟ್ ಮೆಕ್ಲಾರೆನ್ ತ್ಯಜಿಸಿ ಫರಾರಿಗೆ ಹೋದ ಮೇಲೆಯೂ ಟ್ರ್ಯಾಕ್‌ನಲ್ಲಿ ಇವರಿಬ್ಬರ ಪೈಪೋಟಿ ಮುಂದುವರಿಯಿತು. 1994ರಲ್ಲಿ ಸೆನ್ನಾ ದುರಂತ ಸಾವಿಗೀಡಾದಾಗ ಆತನ ತಂಡದ ಕಾಕ್‌ಪಿಟ್‌ನಲ್ಲಿ ಪ್ರಾಸ್ಟ್ ಇದ್ದ. ಟ್ರ್ಯಾಕ್ ಮೇಲೆ ಎಷ್ಟೇ ವೈರತ್ವ ಮೆರೆದರೂ ಕಾಲಕ್ರಮೇಣ ಇಬ್ಬರೂ ಸ್ನೇಹಿತರಾಗಿದ್ದರು. ಬ್ರೆಜಿಲ್ ಜಿಪಿಯಲ್ಲಿ ಸೆನ್ನಾ ಸಾವಿಗೀಡಾಗುವ ಮುನ್ನ ಪ್ರಾಸ್ಟ್ ಆತನ ಕುರಿತು ಹೇಳಿದ್ದು. "ಆತನಿಗೆ (ಸೆನ್ನಾ) ಒಂದು ಸಣ್ಣ ಸಮಸ್ಯೆ ಇದೆ. ನಾನು ದೇವರನ್ನು ನಂಬುತ್ತೇನೆ. ಹಾಗಾಗಿ ನಾನು ನನ್ನನ್ನು ಕೊಂದುಕೊಳ್ಳಲು ಸಾಧ್ಯವಿಲ್ಲ ಎಂದು ಆತ ಭಾವಿಸಿದ್ದಾನೆ. ಅದಕ್ಕೆ  ಆ ಪರಿ ವೇಗದ ಚಾಲನೆ ಮಾಡುತ್ತಾನೆ. ಆದರೆ ಅದು ತೀರಾ ಅಪಾಯಕಾರಿ ಎಂದು ಹೇಳಬಯಸುತ್ತೇನೆ"  ಎಂದು ಇದಾಗಿ 19 ವರ್ಷಗಳೇ ಕಳೆದಿದ್ದರೂ ಇಂದಿಗೂ ಇವರಿಬ್ಬರ ನಡುವಿನ ಹಾವು-ಏಣಿ ಆಟ ಎಫ್-1 ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ.
ಮೈಕೆಲ್ ಶುಮಾಕರ್-ಡ್ಯಾಮನ್ ಹಿಲ್ (1994-96) 1994 ಸೆನ್ನಾನ ಸಾವಿನಿಂದ ಎಫ್-1 ರೇಸಿಂಗ್ ಇತಿಹಾಸದಲ್ಲಿಯೇ ಕಹಿ ಅಧ್ಯಾಯವಾಗಿತ್ತು. ಆದರೆ ಅಲ್ಲಿ ಕೂಡ ಪೈಪೋಟಿಗೆ ಕೊರತೆ ಇರಲಿಲ್ಲ. ಶುಮಾಕರ್ ಮತ್ತು ಹಿಲ್ ಪ್ರತಿ ರೇಸ್‌ನ್ನೂ ಸ್ಮರಣೀಯವಾಗಿಸಿದ್ದರು. ಕಡೆಯ ರೇಸ್‌ಗೆ ಮುನ್ನ ಇಬ್ಬರ ನಡುವೆ ಒಂದು ಅಂಕದ ವ್ಯತ್ಯಾಸವಿತ್ತು. ಅಂತಿಮ ರೇಸ್‌ನಲ್ಲಿ  ಮುನ್ನಡೆಯಲ್ಲಿದ್ದ ಶುಮಾಕರ್‌ನನ್ನು ಹಿಂದಿಕ್ಕಲು ಹಿಲ್ ಪ್ರಯತ್ನಿಸಿದ. ಅದಕ್ಕೆ ಆಸ್ಪದ ನೀಡದ ಶುಮಾಕರ್ ಆಕ್ರಮಣಕಾರಿ ಚಾಲನೆ ಮಾಡಿದ. ಇಬ್ಬರು ಸಮಾನಾಂತರವಾದಾಗ ಶುಮಾಕರ್ ಕಾರನ್ನು ಪಕ್ಕಕ್ಕೆ ತಿರುಗಿಸಿದ. ಉದ್ದೇಶ ಹಿಲ್‌ನನ್ನು ದೂಡುವುದೇ ಆಗಿತ್ತು. ಆದರೆ ಎರಡು ಕಾರುಗಳೂ ಡಿಕ್ಕಿಯಾಗಿ ಇಬ್ಬರೂ ರೇಸ್‌ನಿಂದ ಹೊರಬೀಳಬೇಕಾಯಿತು. ಫಲವಾಗಿ ಶುಮಾಕರ್ ಅದೇ ಒಂದು ಅಂಕದ ಆಧಾರದಿಂದ ಚಾಂಪಿಯನ್ ಪಟ್ಟ ಅಲಂಕರಿಸಿದ.
ಹಕ್ಕಿನನ್- ಶುಮಾಕರ್ (1998-2001)
ಅದು ಶುಮಾಕರ್ ಯುಗ. ಆತ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಕಾಲ. ಆತನಿಗೆ ಯಾರೂ ಪ್ರತಿಸ್ಪರ್ಧಿಯೇ ಇಲ್ಲವೇನೊ ಎನ್ನುವಾಗ ಮಿಕಾ ಹಕ್ಕಿನನ್ ಸವಾಲೆಸೆದ. ಯಾರು ಕೊಂಚ ಆಯ ತಪ್ಪಿದರೂ ಅವರ ಮೇಲೆ ಹರಿಹಾಯಲು ಇಬ್ಬರೂ ಹೊಂಚು ಹಾಕುತ್ತಿದ್ದರು. ಅದರಲ್ಲೂ 2000ದ ಬೆಲ್ಜಿಯನ್ ಜಿಪಿ ಅತ್ಯಂತ ಸ್ಮರಣೀಯ. ಆರಂಭಿಕ ಗ್ರಿಡ್‌ನ ಹಿಂದಿನ ಸಾಲುಗಳಲ್ಲಿದ್ದ ಹಕ್ಕಿನನ್ ಅಲ್ಲಿಂದ ಮುಂದೋಡಿದ್ದೂ ಅಲ್ಲದೆ ಶುಮಿಯನ್ನು ಹಿಂದಿಕ್ಕಿದ ವೈಖರಿ ಪ್ರಾಯಶಃ ಎಫ್-1 ಇತಿಹಾಸದಲ್ಲಿಯೇ ಅತ್ಯಂತ daring overtake ಎಂದು ಪರಿಗಣಿತವಾಗಿದೆ.
ನಿಕಿಲೌಡಾ-ಜೇಮ್ಸ್ ಹಂಟ್ (1976)
ಅತ್ಯಂತ ನಾಟಕೀಯ ತಿರುವುಗಳನ್ನೂ ಕಂಡ ರೇಸಿಂಗ್ ವರ್ಷ. ಮೊದಲಾರ್ಧದ ರೇಸುಗಳಲ್ಲಿ ನಿಕಿ ಲೌಡಾ ಇತರರ ಪಾಲಿಗೆ ಅತೀತನಾಗಿದ್ದ. ಉಳಿದ ಚಾಲಕರಿಗಿಂತ ಗಾವುದ ದೂರ ಮುಂದಿದ್ದ. ಆದರೆ ಜರ್ಮನಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮುಖಸುಟ್ಟು ಅರ್ಧಕ್ಕೇ ಹಿಂತಿರುಗಬೇಕಾಯಿತು. ಆದರೆ ಕೇವಲ ಎರಡು ರೇಸ್‌ಗಳ ವಿಶ್ರಾಂತಿ ನಂತರ ಸುಟ್ಟು ಮುಖದ ಲೌಡಾ ಮತ್ತೆ ಮರಳಿದ. ಆ ವೇಳೆಗೆ ಜೇಮ್ಸ್ ಹಂಟ್ ಮುಂಚೂಣಿಗೆ ಬಂದಾಗಿತ್ತು. ಇನ್ನೇನು ತಾನೇ ಚಾಂಪಿಯನ್ ಎಂದು ಆತ ಭಾವಿಸಿದ್ದ. ಆದರೆ ಲೌಡಾ ಅಷ್ಟು ಸುಲಭಕ್ಕೆ ಸೋಲೊಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಉಳಿದ ನಾಲ್ಕೆ ೈದು ರೇಸ್‌ಗಳಲ್ಲಿ ಫಲಿತಾಂಶ ಚಂಚಲವಾಗಿತ್ತು. ಅಂತಿಮವಾಗಿ ಲೌಡಾ ಚಾಂಪಿಯನ್ ಶಿಪ್ ಗೆದ್ದಾಗ ಅದು ಕೇವಲ ಒಂದು ಅಂಕದ ಮುನ್ನಡೆಯಿಂದ ಪ್ರಾಪ್ತವಾದ ಜಯವಾಗಿತ್ತು.
ಇದಿಷ್ಟು nostalgia. ಈಗ ಪ್ರಸಕ್ತ  ಸಾಲಿನ ಎಫ್-1 ಭಾನುವಾರದಿಂದ ಆರಂಭವಾಗಲಿದೆ. ಕಳೆದ ಕೆಲವು ವರ್ಷಗಳಿಂದ ಎಫ್-1ನಲ್ಲಿ ಚಾಲಕರ ಕೌಶಲ್ಯಕ್ಕಿಂತ ಕಾರುಗಳ ತಾಂತ್ರಿಕತೆಯೇ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. 2014ಕ್ಕೆ ಎಲ್ಲ ಕಾರುಗಳೂ ತಮ್ಮ ಎಂಜಿನ್‌ಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಅದಕ್ಕೆ ಮುಂಚೆ ಹಳೆಯ ವಿನ್ಯಾಸದ ಎಂಜಿನ್‌ಗಳಲ್ಲಿ  ಕೊನೆಯ ರೇಸ್ ಇದಾಗಿದೆ. ಕಳೆದ ವರ್ಷದ ಮೊದಲಾರ್ಧದಲ್ಲಿ ಏಳು ರೇಸ್‌ಗಳಲ್ಲಿ ಏಳು ಮಂದಿ ಗೆದ್ದು ಯಾರು ಅಂತಿಮವಾಗಿ ಚಾಂಪಿಯನ್ ಆಗುತ್ತಾರೆ ಎಂಬ ಲೆಕ್ಕಾಚಾರವೇ ಗೊಂದಲಗಳಿಂದ ಕೂಡಿತ್ತು. ಫರ್ನಾಂಡೊ ಅಲೊನ್ಸೊ ಮುಂಚೂಣಿಯಲ್ಲಿದ್ದ. ಆದರೆ ರೆಡ್‌ಬುಲ್‌ನ ಸೆಬಾಸ್ಟಿಯನ್ ವೆಟಲ್ ಅಚ್ಚರಿಯ ರೀತಿಯಲ್ಲಿ ಚಾಂಪಿಯನ್ ಪಟ್ಟ ಗೆದ್ದರೂ ಅದು ಕೇವಲ ಮೂರು ಅಂಕಗಳ ಮುನ್ನಡೆಯಿಂದ ಗಳಿಸಿದ ಕಿರೀಟವಾಗಿತ್ತು. ಕಳೆದ ಸಾಲಿಗಿಂತ ಈ ಬಾರಿ ತಂಡಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೆಕ್ಲಾರೆನ್‌ನಲ್ಲಿದ್ದ ಹ್ಯಾಮಿಲ್ಟನ್, ಮರ್ಸಿಡೆಸ್ ತಂಡಕ್ಕೆ ಜಿಗಿದಾಗಿದೆ. ಅಲೊನ್ಸೊನ ಫೆರಾರಿ ಕಾರಿಗೆ ಅಗತ್ಯ ತಾಂತ್ರಿಕ tinkerin ಆಗಿದೆ. ರೆಡ್‌ಬುಲ್ ಸಹ ಎಂಜಿನ್ ಉನ್ನತೀಕರಿಸಿದ್ದರೂ ಟೆಸ್ಟಿಂಗ್‌ನಲ್ಲಿ  ನಿರೀಕ್ಷಿತ ಪ್ರತಿಫಲ ಪಡೆಯಲಾಗಿಲ್ಲ.  ಕಳೆದ ವರ್ಷ ತಾಂತ್ರಿಕ ದೋಷಗಳ ಹೊರತಾಗಿಯೂ ಅಲೊನ್ಸೊ ಕಾರನ್ನು ಮುನ್ನಡೆಸಿದ ರೀತಿ, ನೀಡಿದ ಪ್ರದರ್ಶನ ಮತ್ತು ಕೊಟ್ಟ ಫೀಡ್‌ಬ್ಯಾಕ್ ಫೆರಾರಿಗೆ ವರವಾಗಿ ಪರಿಣಮಿಸಿದೆ. ಕಳೆದ ಸಾಲಿನ ಹಿನ್ನಡೆಗಾಗಿ ವೆಟಲ್ ವಿರುದ್ಧ ಅಲೋನ್ಸೊ ಕತ್ತಿ ಮಸೆಯುತ್ತಿದ್ದರೆ, ಹೊಸ ತಂಡದ ಹೊಸ ಹುರುಪಿನಲ್ಲಿ ಹ್ಯಾಮಿಲ್ಟನ್ ಗರಿಗೆದರಿ ನಿಂತಿದ್ದಾರೆ. ಇದಲ್ಲದೆ ಈ ಬಾರಿ ಐವರು ಹೊಸ ಚಾಲಕರು ತಮ್ಮ ವರಸೆ ತೋರಲು ಸಿದ್ಧವಾಗಿದ್ದಾರೆ. ಇವರ ಪೈಕಿ ವಿಲಿಯಮ್ಸ್ ತಂಡದಲ್ಲಿರುವ ಫಿನ್‌ಲೆಂಡ್‌ನ ವಾಲ್ಬೇರಿ ಬೊಟಾಸ್‌ಗೆ ಬಗ್ಗೆ ಅಪಾರವಾದ ನಿರೀಕ್ಷೆಗಳಿವೆ. ಕಳೆದ ಸಾಲಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ವಿಜಯ್ ಮಲ್ಯ ಒಡೆತನದ ಫೋರ್ಸ್ ಇಂಡಿಯಾ ತನ್ನ ಹಳೆಯ ಚಾಲಕ ಆ್ಯಡ್ರಿಯನ್ ಸುಟಿಲ್‌ರನ್ನು ಮರಳಿ  ಪಡೆದಿದೆ. ಒಟ್ಟಿನಲ್ಲಿ ಈಗ ರೇಸ್ ಪ್ರಿಯರಿಗೆ ಸುಗ್ಗಿ. Speed, thrill ಗಳ ಹುಗ್ಗಿ.

- ಕೆ.ಎಸ್.ಜಗನ್ನಾಥ್
jagannath.kudinoor@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ