- ಆವಾಗವಾಗ ಈ 'ಸಂದೇಶ ಕೊಡುವ' ಮಲ್ಲು' ಸ್ಟೈಲ್‌ನ ರೊಮ್ಯಾಂಟಿಕ್ ಸಿನಿಮಾಗಳನ್ನೇ ಮಾಡ್ತೀರಲ್ಲ, 'ಮದನ್' ಅನ್ನೋ ನಿಮ್ಮ ಹೆಸರು ಅಪ್ಪ ಅಮ್ಮ ಇಟ್ಟಿದ್ದಾ, ನೀವೇ ಇಟ್ಕೊಂಡಿದ್ದಾ?
ಜನ ಇಟ್ಟಿದ್ದಂತೂ ಅಲ್ಲ ಬಿಡಿ!
- ಸರಿ ಈ ವಾರ, 'ಟೋಪಿವಾಲ'ನ ಸಿನಿಮಾ ಗೆಲ್ಲುತ್ತಾ ಇಲ್ಲ, ನಿಮ್ಮ 'ಪೇಟಾವಾಲಾ'ನ ಸಿನಿಮಾ ಗೆಲ್ಲುತ್ತಾ?
ನಮ್ಮ ಪ್ರೇಕ್ಷಕ ದಿಲ್‌ವಾಲಾ, ಎರಡನ್ನೂ ಗೆಲ್ಲಿಸ್ತಾನೆ.
- ನಿಮ್ಮ 'ಯಾರಿವನು?' ಸಿನಿಮಾ ನೋಡಿ, ನಿತ್ಯಾನಂದ ಸ್ವಾಮೀಜಿ 'ನಾನವನಲ್ಲ' ಅಂತ ಸಿನಿಮಾ ಮಾಡಿಕೊಡಿ ಅಂತ ನಿಮ್ಮನ್ನೇ ಕೇಳಿದ್ರಂತೆ?
ಮಾಡಬಹುದಿತ್ತು, ಶೂಟಿಂಗ್ ಪೂರ್ತಿ ಬಿಡದಿ ಆಶ್ರಮದೊಳಗೇ ಆಗಬೇಕು ಅಂದ್ರು, ಅದಕ್ಕೆ ಆಗಲ್ಲ ಅಂದ್‌ಬಿಟ್ಟೆ.
- ನಿಮ್ಮ 'ಯಾರಿವನು?' ಸಿನಿಮಾಕ್ಕೆ ಯಾವ ವಿಭಾಗದಲ್ಲಿ ಪ್ರಶಸ್ತಿ ನಿರೀಕ್ಷೆ ಮಾಡ್ತೀರಿ?
ಇದು ಪ್ರಶಸ್ತಿಗಾಗಿ ಮಾಡಿದ ಸಿನಿಮಾ ಅಲ್ಲ, ಕೆಲವರಿಗೆ ಶಾಸ್ತಿ ಮಾಡಬೇಕು ಅಂತ ಮಾಡಿದ ಸಿನಿಮಾ!
- ನಿಮ್ಮ ಚಿತ್ರಕ್ಕೆ ಯಾರ ಕಡೆಯಿಂದ ಬರೋ ಪ್ರತಿಕ್ರಿಯೆ ನಿಮಗೆ ಮುಖ್ಯ. ಪ್ರೇಕ್ಷಕರದ್ದೋ ಅಥವಾ ನಿತ್ಯಾನಂದನದ್ದೋ?
ನಿತ್ಯಾನಂದನ 'ಕ್ರಿಯೆ'ಗಳಿಗೆ ಪ್ರೇಕ್ಷಕನ ಪ್ರತಿಕ್ರಿಯೆ ಮುಖ್ಯ!
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ನಿಸರ್ಗದಲ್ಲಿ ಯಾವುದೂ ಮಾಲಿನ್ಯಕ್ಕೆ ಹೊರತಾಗಿಲ್ಲ ಎನ್ನುವಂಥ ಇಂದಿನ ದಿನಗಳಲ್ಲಿ ಗಾಳಿ, ನೀರು, ಶಬ್ದ ಮಾಲಿನ್ಯದ ಬಗ್ಗೆ ನಾವು ಸಾಕಷ್ಟು ಕೇಳಿರುತ್ತೇವೆ. ಆದರೆ ಬೆಳಕಿನ ಮಾಲಿನ್ಯ ಸದ್ಯಕ್ಕೆ ಅಷ್ಟೊಂದು ಚರ್ಚೆಗೆಗ್ರಾಸವಾಗಿರುವ ವಿಷಯ ಆಗಿಲ್ಲ. ಇಲ್ಲಿ ಈ ಲೈಟ್ ಪೊಲ್ಯೂಷನ್ ಮೇಲೆ ಹೈ ವೋಲ್ಟೇಜ್ ಅಲ್ಲದಿದ್ದರೂ, ಲೈಟಾಗಿ ಒಂದಿಷ್ಟು ಬೆಳಕು ಚೆಲ್ಲುವ ಕೆಲವು ಲೇಖನಗಳಿವೆ. ಓದಿ ನೋಡಿ.
http://bit.ly/Z5vP6n
http://bit.ly/GL5Jyf
http://bit.ly/SqhYqm
http://bit.ly/i1FAR6
http://bit.ly/S1UwzA
ಹರಿ-ಕಥೆ
ರಾಮು, ಸೋಮು, ಖೇಮು ದೊಡ್ಡ ಕಟ್ಟಡವೊಂದರ ಟಾಪ್ ಫ್ಲೋರ್‌ನ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಆಫೀಸಿಗೆ ಬಂದ ಮೂರೂ ಸ್ನೇಹಿತರೂ ಮನೆಯಿಂದ ತಂದಿದ್ದ ತಮ್ಮ ಲಂಚ್ ಬಾಕ್ಸ್ ತೆಗೆದು ಮಧ್ಯಾಹ್ನ ಒಟ್ಟಿಗೇ ಊಟಕ್ಕೆ ಕೂತರು. ಬಾಕ್ಸ್ ತೆಗೆದ ರಾಮು 'ಛೇ ಇವತ್ತೂ ಉಪ್ಪಿಟ್ಟಾ? ಇವತ್ತೇ ಲಾಸ್ಟ್, ನಾಳೆನೂ ನನ್ನ ಲಂಚ್ ಬಾಕ್ಸ್‌ನಲ್ಲಿ ಉಪ್ಪಿಟ್ಟೇ ಇದ್ರೆ, ಈ ಬಿಲ್ಡಿಂಗ್‌ನಿಂದ ಬಿದ್ದು ಆತ್ಮಹತ್ಯೆ ಮಾಡ್ಕೊತೀನಿ' ಎನ್ನುತ್ತಾ ಕಷ್ಟಪಟ್ಟು ಉಪ್ಪಿಟ್ಟು ತಿಂದು ಮುಗಿಸಿದ. ಸೋಮು ಲಂಚ್ ಬಾಕ್ಸ್ ತೆಗೆದ. ಚಿತ್ರಾನ್ನ ಇತ್ತು. 'ಛೇ ಇವತ್ತೂ ಚಿತ್ರಾನ್ನವಾ?, ಇವತ್ತೇ ಲಾಸ್ಟ್, ನಾಳೆನೂನನ್ನ ಲಂಚ್ ಬಾಕ್ಸ್‌ನಲ್ಲಿ ಚಿತ್ರಾನ್ನವೇ ಇದ್ರೆ, ಈ ಬಿಲ್ಡಿಂಗ್‌ನಿಂದ ಬಿದ್ದು ಆತ್ಮಹತ್ಯೆ ಮಾಡ್ಕೊತೀನಿ' ಎನ್ನುತ್ತಾ ಕಷ್ಟಪಟ್ಟು ಚಿತ್ರಾನ್ನ ತಿಂದು ಮುಗಿಸಿದ. ತನ್ನ ಬಾಕ್ಸ್ ತೆಗೆದ ಖೇಮುಗೆ ಚಪಾತಿ ಕಾ ಣಿಸಿತು. 'ಛೇ ಇವತ್ತೂ ಚಪಾತಿನಾ? ಇವತ್ತೇ ಲಾಸ್ಟ್, ನಾಳೆನೂ ನನ್ನ ಲಂಚ್ ಬಾಕ್ಸ್‌ನಲ್ಲಿ ಚಪಾತಿನೇ ಇದ್ರೆ, ಈ ಬಿಲ್ಡಿಂಗ್‌ನಿಂದ ಬಿದ್ದು ಆತ್ಮಹತ್ಯೆ ಮಾಡ್ಕೊತೀನಿ' ಎನ್ನುತ್ತಾ ಕಷ್ಟಪಟ್ಟು ಚಪಾತಿ ತಿಂದು ಮುಗಿಸಿದ. ಮರುದಿನ ಎಲ್ಲರೂ ಮತ್ತೆ ಲಂಚ್ ಟೈಮ್‌ನಲ್ಲಿ ಸೇರಿದರು. ರಾಮು ಬಾಕ್ಸ್‌ನಲ್ಲಿ ಉಪ್ಪಿಟ್ಟೇ ಇತ್ತು. ಬಿಲ್ಡಿಂಗ್‌ನಿಂದ ಹಾರಿ ಸೂಸೈಡ್ ಮಾಡಿಕೊಂಡ. ಸೋಮು ಬಾಕ್ಸ್‌ನಲ್ಲಿ ಚಿತ್ರಾನ್ನವೇ ಇತ್ತು. ಅವನೂ ಸೂಸೈಡ್ ಮಾಡಿಕೊಂಡ. ಖೇಮು ಬಾಕ್ಸ್‌ನಲ್ಲೂ ಚಪಾತಿ ಇತ್ತು. ಅವನೂ ಸೂಸೈಡ್ ಮಾಡಿಕೊಂಡ. ಈ ಮೂವರೂ ಸ್ನೇಹಿತರ ಅಂತ್ಯಕ್ರಿಯೆ ವೇಳೆ, ರಾಮು ಹೆಂಡ್ತಿ 'ಅಯ್ಯೋ ನಿಮಗೆ ಉಪ್ಪಿಟ್ಟು ಇಷ್ಟ ಇಲ್ಲ ಅಂತ ಒಂದ್ಸಲ ಹೇಳಿದ್ದಿದ್ರೆ ನಾನು ನಿಮ್ಮನ್ನ ಕಳಕೋತಿರಲಿಲ್ಲ' ಎಂದು ಅಳುತ್ತಿದ್ದಳು. ಸೋಮು ಹೆಂಡತಿ 'ಅಯ್ಯೋ ಚಿತ್ರಾನ್ನದ ಬಗ್ಗೆ ನಿಮಗೆ ಇಷ್ಟು ದ್ವೇಷ ಇದೆ ಅಂತ ನಂಗೆ ಗೊತ್ತೇ ಆಗಲಿಲ್ಲ' ಅಂತ ಅಳ್ತಾ ಇದ್ಳು. ಆದರೆ ಸುಮ್ಮನೇ ನಿಂತಿದ್ದ ಖೇಮುವಿನ ಹೆಂಡತಿ ತನ್ನತ್ತಲೇ ನೋಡುತ್ತಿದ್ದವರ ಕಡೆ ತಿರುಗಿ ಹೇಳಿದಳು 'ಹೇ ಹಲೋ, ನನ್ ಕಡೆ ಹಂಗೆಲ್ಲಾ ನೋಡ್‌ಬೇಡಿ, ನಂದೇನೂ ತಪ್ಪಿಲ್ಲ, ದಡ್ಡ ಶಿಖಾಮಣಿ ನನ್ ಗಂಡ, ಪ್ರತಿದಿನ ನಮ್ಮನೇಲಿ ಅಡಿಗೆ ಮಾಡ್ತಿದ್ದಿದ್ದು ಅವನೇ'!
ಸ್ಯಾಂಡಲ್‌ವುಡ್
'ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ' ಅನ್ನೋ ಅರ್ಜುನ್ ಸರ್ಜಾ ಅವರಿಗೆ ಅತ್ಯುತ್ತಮ ನಟ ಎನ್ನುವ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಇಲ್ಲಿ, ಅರ್ಜುನ್ ಸರ್ಜಾ ಅತ್ಯುತ್ತಮ ನಟ ಹೌದೋ ಅಲ್ಲವೋ ಎಂಬುದು ಇಂಟರೆಸ್ಟಿಂಗ್ ವಿಷಯ ಅಲ್ಲ. ಆದರೆ ಅದನ್ನು ಅವರಿಗೆ ಕೊಡುವ ಅಗತ್ಯವೇನಿತ್ತು ಎನ್ನುವುದು ಮಾತ್ರ ಗಾಂಧಿನಗರದ ಗಂಭೀರ ಪ್ರಶ್ನೆ. ಕರ್ನಾಟಕ ಮೂಲದವರಾದರೂ ಹೇಳಿ ಕೇಳಿ ಅರ್ಜುನ್ ಕನ್ನಡ ಚಿತ್ರಗಳ ಖಾಯಂ ನಟ ಅಲ್ಲ. ಇಲ್ಲಿನಚಿತ್ರರಂಗದಲ್ಲಿ ಅವರ ಭಾಗವಹಿಸುವಿಕೆ, ನಮ್ಮ ಸಿನಿಮಾಗಳಲ್ಲಿನ, ಬಂದು ಹೋಗುವ ಅತಿಥಿ ಪಾತ್ರಗಳಂಥದ್ದು. ಅದರ ಬದಲು ಹೊಸ ರೀತಿಯ ಚಿತ್ರಗಳನ್ನು ಮಾಡಬೇಕೆನ್ನುವ ತುಡಿತದೊಂದಿಗೆ ನಮ್ಮ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರತಿಭೆಗಳಿಗೆ ಈ ಪ್ರಶಸ್ತಿ ಕೊಟ್ಟಿದ್ದಿದ್ದರೆ ಅದು ಅವರ ಆಸಕ್ತಿಗೆ, ಶ್ರಮಕ್ಕೆ ತಕ್ಕ ಪ್ರತಿಫಲವಾಗುತ್ತಿತ್ತು. ಎಲ್ಲಿಂದಲೋ ಬಂದ ರಿಮೇಕ್ ಚಿತ್ರಗಳಿಗೆ ಪ್ರಶಸ್ತಿ ಕೊಡುವುದಿಲ್ಲ ಎಂಬಂತೆ ಎಷ್ಟೋ ವರ್ಷಕ್ಕೊಮ್ಮೆ ಇಲ್ಲಿ ನಟಿಸುವವರಿಗೆ ಪ್ರಶಸ್ತಿ ಇಲ್ಲ ಎಂಬ ಪಾಲಿಸಿ ಅಥವಾ ಕನಿಷ್ಠ ಇಷ್ಟು ಮ್ಯಾಚುಗಳನ್ನಾಡಿದವರ ರೆಕಾರ್ಡ್ ಅನ್ನು ಮಾತ್ರ ಪರಿಗಣಿಸುವ ಕ್ರಿಕೆಟ್‌ನ ಲೆಕ್ಕಾಚಾರ ಇಲ್ಲೂ ಇದ್ದಿದ್ದರೆ, ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂದು ಬದುಕುತ್ತಿರುವ ಅನೇಕ ಪ್ರತಿಭೆಗಳಿಗೆ ನ್ಯಾಯ ಸಿಕ್ಕಂತಾಗುತ್ತಿತ್ತು.
ಡಬ್ಕುಡಬಲ್ ತುದಾಂಡಲ್...
'ಪ್ರಸಾದ್'ಗೆ ರಾಜ್ಯಪ್ರಶಸ್ತಿ ಬಂದಿದ್ದಕ್ಕೆ ಗಾಂಧಿನಗರದ ಗಾಂಪನ ಪ್ರತಿಕ್ರಿಯೆ
ಓ ಹೌದಾ, ಒಳ್ಳೇದಾಯ್ತು ಬಿಡಿ, ನಮ್ಮ ವಿತರಕ ಪ್ರಸಾದ್ ಕಷ್ಟದಲ್ಲಿದ್ರು ಪಾಪ, ಇದರಿಂದಲಾದ್ರೂ ಅವರಿಗೆ ಖುಷಿ ಆಗ್ಲಿ!
ಹೌಸ್‌ವೈಫ್ ಆಗಿರುವಂಥ ಹುಡುಗಿ ಬೇಕು ಅನ್ನೋ ಹುಡುಗರ ಹಾಡು
ಮನೆಯಲಿ ಇದ್ದರೆ 'ಚಿನ್ನಾ', ಚಿಂತೆಯು ಏತಕೆ ಇನ್ನ..
ಟೆಲಿಕಾಮ್ ಗಾದೆ
ಮೊಬೈಲ್‌ನಲ್ಲಿ 3ಜಿ ಸಿಮ್ ಇಟ್ಕೊಂಡು ಸೈಬರ್ ಕೆಫೆಗಾಗಿ ಊರೆಲ್ಲಾ ಅಲೆದ್ನಂತೆ
ಸಿನಿಮಾ ಹಿಟ್ ಆದಮೇಲೆ 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ' ಚಿತ್ರದ ಹೊಸ ಡೈಲಾಗ್
ಟ್ರೈಲರ್ ನೋಡಿದವನು, ಸಿನಿಮಾ ನೋಡ್ದೇ ಇರ್ತಾನಾ?
ಟೋಪಿವಾಲಾ ಚಿತ್ರದ ಡೈಲಾಗ್
ಟ್ರೈಲರ್ 'ನೋಡದವನು' ಸಿನಿಮಾ ನೋಡೋಕ್ ಬರ್ತಾನಾ!
ಈ ವಾರ ಬಿಡುಗಡೆಯಾದ ಯಾರಿವನು ಮತ್ತು ಟೋಪಿವಾಲಾ ಚಿತ್ರಗಳ ಹೋಲಿಕೆ.
ಒಂದು ರತಿ ಮತ್ತೊಂದು ಆತ್ಮರತಿ!
- ಹರಿ
harikannadaprabha@gmail.com