ಅಂಕಣಗಳು

ಭಾರತವೇ ಉತ್ತಮ ಮುಸ್ಲಿಂ ರಾಷ್ಟ್ರ!

ಒಂದೊಮ್ಮೆ ಶಾರುಖ್ ಪಾಕಿಸ್ತಾನದಲ್ಲಿ ನೆಲೆಸಲು ಹೋದರೆ ಪ್ರತಿದಿನ ಅವರು ನೋಡಬೇಕಿರುವುದೇನು? ಶಿಯಾ ಮುಸ್ಲಿಮರ ಹತ್ಯಾಕಾಂಡ, ತಾಲಿಬಾನಿ ಬಾಂಬರ್‌ಗಳು, ದಗ್ಧ ಕರಾಚಿ ಇತ್ಯಾದಿ... ಇತ್ಯಾದಿ...

ಲಷ್ಕರೆ ತಯ್ಬಾ ಎಂಬ ನಿಷೇಧಿತ ಸಂಘಟನೆಯ ಸ್ವಘೋಷಿತ ನಾಯಕ ಹಫೀಜ್ ಮೊಹಮ್ಮದ್ ಸಯೀದ್ ಪ್ರಕಾರ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅಂಥವರು ವಾಸಿಸುವುದಕ್ಕೆ ಯೋಗ್ಯವಾದ ದೇಶ ಪಾಕಿಸ್ತಾನ. ಆದರೆ ವಾಸ್ತವ ನೆಲೆಗಟ್ಟಿನಲ್ಲಿ ನೋಡಿದಾಗ ಭಾರತವೇ ಅತ್ಯುತ್ತಮ ಮುಸ್ಲಿಂ ರಾಷ್ಟ್ರವಾಗಿದೆ. ಭಾರತದಲ್ಲಿ ಮುಸ್ಲಿಮರಿಗೆ ಸಂಪೂರ್ಣ ರಾಜಕೀಯ ಹಾಗೂ ಧಾರ್ಮಿಕ ಸ್ವಾತಂತ್ರ್ಯಗಳಿವೆ. ಆರ್ಥಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಮುಕ್ತವಾಗಿ ತೊಡಗಿಕೊಳ್ಳುವುದಕ್ಕೆ ಶಾಸನಬದ್ಧ ವಾತಾವರಣವನ್ನು ಕಲ್ಪಿಸಲಾಗಿದೆ. ಬಹಳ ಚಾಲ್ತಿಯಲ್ಲಿರುವ ಟಿವಿ ಹಾಗೂ ಸಿನಿಮಾ ಮಾಧ್ಯಮಗಳು ಉದಾರ ಸಹಬಾಳ್ವೆಯನ್ನೇ ಪ್ರೋತ್ಸಾಹಿಸುತ್ತವೆ. ಆಧುನಿಕ ಶಿಕ್ಷಣವನ್ನು ಹೊಂದುವುದಕ್ಕೆ ಅಗತ್ಯವಾದ ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಅವಕಾಶದ ಬಾಗಿಲು ಇವರಿಗಾಗಿ ತೆರೆದಿದೆ. ಇಷ್ಟು ವ್ಯಾಪಕವಾದ ಸ್ವಾತಂತ್ರ್ಯವನ್ನು ಇನ್ಯಾವ ದೇಶವೂ ಕೊಟ್ಟಿಲ್ಲ.
ಇಂಥ ಸ್ವಾತಂತ್ರ್ಯಗಳನ್ನು ತನ್ನ ಪ್ರಜೆಗಳಿಗೆ ಕೊಡುವುದು ಭಾರತಕ್ಕೆ ಏಕೆ ಸಾಧ್ಯವಾಗಿದೆ ಎಂದರೆ ಇದೊಂದು ಯಶಸ್ವಿ ಪ್ರಜಾಪ್ರಭುತ್ವ ಆಗಿರುವುದರಿಂದ. 1857ರ ಸ್ವಾತಂತ್ರ್ಯ ಸಂಗ್ರಾಮವನ್ನು ಭಾರತ ಸೋತಿದ್ದು ಒಳ್ಳೆಯದೇ ಆಯಿತೋನೋ. ಆಗ ಬ್ರಿಟಿಷರು ಸೋತುಬಿಟ್ಟಿದ್ದರೆ ಭಾರತದಲ್ಲಿ ರಾಜರು ಮತ್ತು ನವಾಬರ ಆಳ್ವಿಕೆಯೇ ಮುಂದುವರಿದುಕೊಂಡಿರುತ್ತಿತ್ತು. ಮೊಘಲರ ಅವಧಿಯಲ್ಲಿದ್ದ ಶರಿಯಾ ನ್ಯಾಯಾಲಯಗಳೂ ಹಾಗೆಯೇ ಮುಂದುವರಿದುಕೊಂಡಿರುತ್ತಿದ್ದವು. ಸ್ವಾತಂತ್ರ್ಯ ದೊರೆಯುವ ವೇಳೆಗೆ ಬ್ರಿಟಿಷರು ಭಾರತದಲ್ಲೊಂದು ನ್ಯಾಯ ಪದ್ಧತಿಯನ್ನು ಬಿಟ್ಟು ಹೋಗಿದ್ದರು. ಎಲ್ಲರನ್ನೂ ಒಳಗೊಳ್ಳುವಿಕೆಯ ಪ್ರಜಾಪ್ರಭುತ್ವವು ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಿತಲ್ಲದೇ ಧಾರ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಸಮನಾಗಿ ನೀಡಿತು. ಆಂಗ್ಲಭಾಷೆಯು ಹೊಸ ಜ್ಞಾನಕ್ಕೆ ಹಾಗೂ ವೈಜ್ಞಾನಿಕ ಅಧ್ಯಯನಕ್ಕೆ ಹೆಬ್ಬಾಗಿಲಾಯಿತು. ನಾಗರಿಕ ಸೇವೆಯು ಎಲ್ಲರನ್ನೂ ಭಾರತೀಯರನ್ನಾಗಿ ನೋಡಿತಲ್ಲದೇ ಹಿಂದು, ಮುಸ್ಲಿಂ, ಕ್ರೈಸ್ತರೆಂದೆಲ್ಲಾ ಬೇಧಭಾವ ತೋರಲಿಲ್ಲ. ಭಾರತವೊಂದು ಪ್ರಜ್ವಲಿತ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದಲೇ ಇಲ್ಲಿನ ಮುಸ್ಲಿಮರಿಗೆ ಈ ಎಲ್ಲ ಸ್ವಾತಂತ್ರ್ಯಗಳು ಲಭ್ಯವಾಗುತ್ತಿವೆ. ತಾರತಮ್ಯದ ಸಂವಿಧಾನ ಹೊಂದಿರುವ ಪಾಕಿಸ್ತಾನದಲ್ಲಿ ಹಿಂದು ಅಥವಾ ಕ್ರೈಸ್ತರು ಪಾಕಿಸ್ತಾನದ ಅಧ್ಯಕ್ಷರಾಗುವ ಅವಕಾಶವಿಲ್ಲ. ಕಳೆದ ಅರ್ಧ ದಶಕದಲ್ಲಿ ಲಕ್ಷಾಂತರ ದಲಿತರು ಹಾಗೂ ಮಹಿಳೆಯರು ಭಾರತೀಯ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಬಲವನ್ನು ಪಡೆದುಕೊಳ್ಳುವುದು ಸಾಧ್ಯವಾಗಿದೆ.
ಆಧುನಿಕ ಕಾಲಘಟ್ಟದಲ್ಲಿ ಧರ್ಮವು ಆಡಳಿತದ ಮಾದರಿಯಾಗುವುದು ಸೂಕ್ತವಲ್ಲ. ಏಕೆಂದರೆ ಮುಸ್ಲಿಂ ದೇಶವನ್ನು ಮುಸ್ಲಿಮೇತರ ಪ್ರಜೆಯೂ ಆಳಬಹುದು ಎಂಬ ಕಲ್ಪನೆಯನ್ನೇ ಅದು ಇಲ್ಲವಾಗಿಸುತ್ತದೆ. ಪ್ರಜಾಪ್ರಭುತ್ವವು ತನ್ನ ನಾಗರಿಕನನ್ನು ಆತನ ಧರ್ಮದ ಹೊರತಾಗಿ ವಿಶ್ವಾಸದಿಂದ ಕಾಣುತ್ತದೆ. ಭಾರತದಲ್ಲಿ ಯಾವ ನಾಗರಿಕನಾದರೂ ಅಧಿಕಾರ ಹಿಡಿಯುವುದಕ್ಕೆ ಸ್ಪರ್ಧಿಸಬಹುದು. ಪ್ರಸ್ತುತ, ಹಮೀದ್ ಅನ್ಸಾರಿ ಅವರು ಉಪ ರಾಷ್ಟ್ರಪತಿಯಾಗಿದ್ದಾರೆ, ವಿದೇಶ ಸಚಿವರಾಗಿ ಸಲ್ಮಾನ್ ಖುರ್ಷಿದ್ ಕಾರ್ಯನಿರ್ವಹಿಸುತ್ತಿದ್ದಾರೆ, ಮುಖ್ಯ ನ್ಯಾಯಮೂರ್ತಿಗಳಾಗಿರುವವರು ಅಲ್ತಮಸ್ ಕಬೀರ್ ಹಾಗೂ ಇಂಟಲಿಜೆನ್ಸ್ ಬ್ಯೂರೋದ ಮುಖ್ಯಸ್ಥರಾಗಿ ಸಯ್ಯದ್ ಅಸೀಫ್ ಇಬ್ರಾಹಿಂ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ಒಟ್ಟಾರೆ ಬದುಕನ್ನು ದೃಷ್ಟಿಯಲ್ಲಿರಿಸಿಕೊಂಡಾಗ ಭಾರತದಲ್ಲಿ ಮುಸ್ಲಿಮರು ಹಿಂದುಳಿದಿದ್ದಾರೆ ಎಂಬುದೂ ಸತ್ಯ. ಆದರೆ ಇದಕ್ಕೆ ಕಾರಣ ಸಂಪ್ರದಾಯವಾದಿ ಉಲೇಮಾಗಳ ಪ್ರಭಾವಕ್ಕೆ ಒಳಗಾಗಿರುವ ಮುಸ್ಲಿಂ ರಾಜಕಾರಣಿಗಳು ತಮ್ಮನ್ನು ಸಮಸ್ತ ಭಾರತೀಯರ ನಾಯಕರೆಂದು ಕಲ್ಪಿಸಿಕೊಳ್ಳುತ್ತಿಲ್ಲ. ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ತಾವು ನಾಯಕರಲ್ಲ; ಸಮಸ್ತ ಭಾರತೀಯರಿಗೆ ನಾಯಕತ್ವ ಒದಗಿಸುತ್ತೇವೆ ಎಂದು ಅವರು ಮುಂದಾದ ಕ್ಷಣದಲ್ಲೇ ಪ್ರಧಾನಿ ಹುದ್ದೆ ಅವರಿಗೆ ದೊರೆತೀತು. ಬರಾಕ್ ಒಬಾಮಾ ತಾನು ಕೇವಲ ಕರಿಯರ ನಾಯಕ ಎಂದು ಬಿಂಬಿಸಿಕೊಳ್ಳಲಿಲ್ಲ, ಅಮೆರಿಕದ ನಾಯಕರಾಗಿ ಎದ್ದುನಿಂತರು.
ಪರಿಣಾಮಕಾರಿಯಾಗಿ ಹೇಳಬೇಕೆಂದರೆ ಭಾರತವೂ 'ಪಾಶ್ಚಿಮಾತ್ಯ' ದೇಶವಾಗಿದೆ. ಭೌಗೋಳಿಕವಾಗಿ ನೋಡುವುದಾದರೆ ಯುಎಸ್, ಬ್ರಿಟನ್ ಹಾಗೂ ಯುರೋಪ್‌ನ ಕೆಲಭಾಗಗಳಷ್ಟೇ ಹೀಗೆ ಕರೆಸಿಕೊಳ್ಳುತ್ತವೆ. ಆದರೆ ನೆಲಮಟ್ಟದ ವಾಸ್ತವವೇ ಬೇರೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಸೌತ್ ಕೊರಿಯಾಗಳು ಪೂರ್ವಭಾಗದಲ್ಲಿವೆ. ಆದರೆ ರಾಜಕೀಯ ಮತ್ತು ಆದರ್ಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಅವೂ ಪಶ್ಚಿಮವನ್ನೇ ಪ್ರತಿನಿಧಿಸುತ್ತವೆ. ರಷ್ಯಾ ಹಾಗೂ ಲ್ಯಾಟಿನ್ ಅಮೆರಿಕದ ಕೆಲಭಾಗಗಳು ಪಶ್ಚಿಮದಲ್ಲಿಯೇ ಇದ್ದರೂ ಅವುಗಳ ರಾಜಕೀಯ ಸ್ಥಿತಿ ಭಿನ್ನವಾಗಿದ್ದು, ಪ್ರಜೆಗಳಿಗೆ ಸ್ವಾತಂತ್ರ್ಯವಿಲ್ಲ. ಭಾರತದ ರಾಜಕೀಯ ಹಾಗೂ ಸಾಮಾಜಿಕ ತತ್ವಗಳು ಪಾಶ್ಚಿಮಾತ್ಯ ವ್ಯಾಖ್ಯಾನಕ್ಕೆ ದಕ್ಕುವಂಥವಾಗಿವೆ. ಬಹುಪಕ್ಷ ಪದ್ಧತಿ, ವೈಯಕ್ತಿಕ ಸ್ವಾತಂತ್ರ್ಯ, ಕಾಯಿದೆ ಪಾರಮ್ಯ, ಪತ್ರಿಕಾ ಸ್ವಾತಂತ್ರ್ಯ ಇವೆಲ್ಲವೂ ಭಾರತದಲ್ಲಿವೆ. ಸೌದಿ ಅರೇಬಿಯಾ ಅಥವಾ ಉತ್ತರ ಕೋರಿಯಾಗಳಲ್ಲಿ ಇದ್ದಂತೆ ಧರ್ಮವನ್ನೇ ಸಿದ್ಧಾಂತವಾಗಿಟ್ಟುಕೊಂಡ ಪಕ್ಷಗಳು ಇಲ್ಲಿಲ್ಲ.
ವರ್ಷಾರಂಭದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ತಮ್ಮ ಸುದೀರ್ಘ ಲೇಖನದಲ್ಲಿ ಸಮಾಜವು ಹೇಗೆ 'ಸ್ಟಿರಿಯೋಟೈಪ್ ಮತ್ತು ಚೌಕಟ್ಟಿನಲ್ಲಿಟ್ಟು' ನೋಡುತ್ತದೆ ಎಂಬ ಬಗ್ಗೆ ಅಳಲು ತೋಡಿಕೊಂಡಿದ್ದರು. ತಾವು ಖಾನ್ ಎಂಬ ಸರ್‌ನೇಮ್ ಇಟ್ಟುಕೊಂಡಿರುವುದರಿಂದ ಅಮೆರಿಕದಲ್ಲಿ ಉಗ್ರವಾದಿ ಚಟುವಟಿಕೆ ಶಂಕೆಯಲ್ಲಿ ಪರಿಶೀಲನೆಗೆ ಒಳಪಡಿಸುತ್ತಾರೆ ಎಂದು ಬೇಸರಿಸಿದ್ದರು. 'ನಾನು ನನ್ನ ನೆರೆರಾಷ್ಟ್ರಕ್ಕೆ ಹೆಚ್ಚು ನಿಷ್ಠನಾಗಿದ್ದೇನೆ ಎಂದು ಅನೇಕ ಸಂದರ್ಭಗಳಲ್ಲಿ ಆರೋಪಿಸಲಾಗುತ್ತದೆ' ಎಂಬ ಶಾರುಖ್ ಅಭಿಪ್ರಾಯಕ್ಕೆ ಹಫೀಜ್ ಸಯೀದ್ ಪ್ರತಿಕ್ರಿಯಿಸುತ್ತಾ, ಶಾರುಖ್‌ಗೆ ಪಾಕಿಸ್ತಾನವೇ ಸೇಫ್ ಎಂದಿದ್ದ. ಒಂದೊಮ್ಮೆ ಶಾರುಖ್ ಪಾಕಿಸ್ತಾನದಲ್ಲಿ ನೆಲೆಸಲು ಹೋದರೆ ಪ್ರತಿದಿನ ಅವರು ನೋಡಬೇಕಿರುವುದೇನು? ಶಿಯಾ ಮುಸ್ಲಿಮರ ಹತ್ಯಾಕಾಂಡ, ಹುಡುಗಿಯರನ್ನು ಮತ್ತು ಮಕ್ಕಳನ್ನು ಗುಂಡಿಕ್ಕುವ ತಾಲಿಬಾನಿ ಬಾಂಬರ್‌ಗಳು, ದಗ್ಧ ಕರಾಚಿ ಹಾಗೂ ಅಲ್ಲಿಂದ ಕಾಲ್ಕೀಳುತ್ತಿರುವ ಉದ್ಯಮಿಗಳು, ಹಿಂದು ಮತ್ತು ಕ್ರೈಸ್ತರ ಮೇಲೆ ಎಲ್ಲೆಡೆಯೂ ಆಗುತ್ತಿರುವ ದೌರ್ಜನ್ಯ...
ಸಯೀದ್ ಮತ್ತವರ ಬಿಂಬಾಲಕರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಎಂದರೆ ಪಾಕಿಸ್ತಾನದಿಂದ ಉತ್ಪಾದನೆಯಾಗುತ್ತಿರುವ ಭಯೋತ್ಪಾದನೆ ಭಾರತದ ಮುಸ್ಲಿಮರನ್ನು ಕೊಲ್ಲುತ್ತಿದೆ. ಕಾಶ್ಮೀರದಲ್ಲಿನ ಪ್ರಕ್ಷುಬ್ಧತೆಗೆ ಇಂಡಿಯನ್ ಮುಜಾಹಿದೀನ್‌ಗಳೊಂದಿಗೆ ಸೇರಿಕೊಂಡಿರುವ ಪಾಕಿಸ್ತಾನಿಯರೇ ಕಾರಣ. ಎಲ್ಲ ದೇಶಗಳಲ್ಲಿ ಇರುವಂತೆ ಭಾರತದಲ್ಲೂ ಹಿಂದೂ ತೀವ್ರವಾದಿಗಳ ಚಿಕ್ಕ ಗುಂಪು ಹಾಗೂ ಇಸ್ಲಾಮಿಕ್ ಮತ್ತು ನಕ್ಸಲೈಟ್ ಹಿಂಸೆಗಳಿವೆ. ಅವನ್ನೆಲ್ಲ ತಹಬಂದಿಗೆ ತರಲು ಅಲ್ಲಿ ನ್ಯಾಯಾಲಯ ಇದ್ದೇ ಇದೆ.
ಇಸ್ಲಾಮಿಕ್ ದೇಶಗಳಿಗೆ ಭಾರತದ ಪ್ರಜಾಪ್ರಭುತ್ವ ಮಾದರಿಯಾಗಬೇಕು. ಅರ್ಧ ದಶಕಕ್ಕೂ ಹೆಚ್ಚಿನ ಅವಧಿಗೆ ಪ್ರಜಾಪ್ರಭುತ್ವದ ಸವಿ ಸವಿಯುವುದಕ್ಕೆ ಮುಸ್ಲಿಮರಿಗೆ ಸಾಧ್ಯವಾಗಿರುವುದು ಭಾರತದಲ್ಲಿ ಮಾತ್ರ. ಇಂಡೋನೇಷ್ಯ ಮತ್ತು ಟರ್ಕಿಗಳಲ್ಲೂ ಮುಸ್ಲಿಮರು ಪ್ರಜಾಪ್ರಭುತ್ವದ ಸವಿ ಕಂಡರಾದರೂ ಅದು ಕೆಲವೇ ದಶಕಗಳಿಗೆ ಸೀಮಿತ. ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ವಿವರಿಸಿದಂತೆ ಆಹಾರ ಕೊರತೆ ಎನ್ನುವುದು ಸರ್ವಾಧಿಕಾರಿ ರಾಷ್ಟ್ರಗಳಲ್ಲಷ್ಟೇ ಕಂಡುಬಂದಿರುವಂಥದ್ದು. ಪ್ರಜಾಪ್ರಭುತ್ವ ರಾಷ್ಟ್ರಗಳು ತಮ್ಮ ಇಡೀ ಜನಸಂಖ್ಯೆಯ ಹಿತ ಕಾಯ್ದಿವೆ. ಪಾಕಿಸ್ತಾನದಲ್ಲಿರುವಷ್ಟೇ ಸಂಖ್ಯೆಯ ಮುಸ್ಲಿಮರು ಭಾರತದ ಪ್ರಜಾಪ್ರಭುತ್ವದಲ್ಲಿದ್ದಾರೆ. ಪ್ರಜಾಪ್ರಭುತ್ವ ವಿಕಸಿಸುತ್ತ ಹೋದಂತೆ ಆರ್ಥಿಕ ಹಾಗೂ ಶೈಕ್ಷಣಿಕ ಲಾಭಗಳು ಇವರಿಗೆ ಒದಗಿವೆ.
ಇಸ್ಲಾಮಿಕ್ ಸರ್ವಾಧಿಕಾರದ ದೇಶಗಳಾದ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಉತ್ತರ ಕೋರಿಯಾಗಳು ತಮ್ಮ ಜನರನ್ನೇ ನಂಬುವುದಿಲ್ಲ. ಹಫೀಜ್ ಸಯೀದ್‌ನಂಥವರು ಹಾಗೂ ತಾಲಿಬಾನಿಗಳು ತಮ್ಮ ಸಿದ್ಧಾಂತ ಮೇಲಾಗಬೇಕೆಂದು ಆಸಕ್ತಿ ವಹಿಸುತ್ತಾರೆಯೇ ಹೊರತು ಜನ ಕಲ್ಯಾಣದಲ್ಲಲ್ಲ. ಆದ್ದರಿಂದಲೇ ಪಾಕಿಸ್ತಾನದ 18 ಕೋಟಿ ಜನಸಂಖ್ಯೆ ಇಂದು ಶಿಕ್ಷಣದ ವೈಫಲ್ಯದಲ್ಲಿ, ಅರ್ಥ ವ್ಯವಸ್ಥೆಯ ಕುಸಿತದಲ್ಲಿ ಜರ್ಜರಿತವಾಗಿದೆ. ಹಫೀಜ್ ಸಯೀದ್ ಅಂಥವರಿಗೆ ಸಿದ್ಧಾಂತ ಈಡೇರಿಕೆಯಲ್ಲಿ ನೆರವಾಗುತ್ತಿರುವ ಪಾಕಿಸ್ತಾನದ ಐಎಸ್‌ಐನಂಥ ಸಂಸ್ಥೆಗಳು ಪಾಕಿಸ್ತಾನಿಯರನ್ನೇ ನಂಬಿ, ಈ ಜನ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟರೆ ಮಹದುಪಕಾರವಾಗುತ್ತದೆ.
(ಲೇಖಕರು ಬಿಬಿಸಿ ಉರ್ದುನಲ್ಲಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ, ವಾಷಿಂಗ್ಟನ್ ಡಿಸಿಯಲ್ಲಿರುವ 'ಸೌತ್ ಏಷ್ಯಾ ಸ್ಟಡೀಸ್ ಪ್ರಾಜೆಕ್ಟ್ ಅಟ್ ದಿ ಮಿಡ್ಲ್ ಈಸ್ಟ್ ಮೀಡಿಯಾ ರೀಸರ್ಚ್ ಇನ್‌ಸ್ಟಿಟ್ಯೂಟ್‌'ನ ನಿರ್ದೇಶಕ)

-ತುಫೈಲ್ ಅಹಮದ್, ಪತ್ರಕರ್ತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!