ಕಾಳಜಿ ನಮ್ಮೊಳಗೆಷ್ಟಿದೆ ಎಂಬ ಪ್ರಶ್ನೆಯ ಬೆಂಬತ್ತಿ..
"ಕಾಳಜಿ" ಎನ್ನುವ ಪದಕ್ಕೆ ಅರ್ಥಕೋಶದಲ್ಲಿ ಕಳಕಳಿ, ಜಾಗೃತಿ, ಚಿಂತೆ, ಹಂಬಲ, ಎಚ್ಚರ, ಗೊಡವೆ ಎಂದೆಲ್ಲಾ ಅರ್ಥಗಳಿವೆ. ್ಛ್ಟಟ್ಛಿಜ್ಠಟಿ ಎಂದು ಇಂಗ್ಲಿಷಿನಲ್ಲಿ ಕರೆದರೂ ಅದರ ಗುಟ್ಟು 'ಕಾಳಜಿ' ಎಂಬ ಸೂಕ್ಷ್ಮ ಸಂವೇದನೆ ನಮ್ಮೊಳಗೆಷ್ಟಿದೆ? ಎಂದು ನಮ್ಮನ್ನು ನಾವೇ ಇಂದು ಪ್ರಶ್ನಿಸಿಕೊಳ್ಳಬೇಕಾದ ಅನಿವಾರ್ಯ ಕಾಲಘಟ್ಟದೊಳಗೆ ನಾವಿದ್ದೇವೆ.
ನಾಲಿಗೆ ಕೆಟ್ಟು ಹೋದರೆ ಏನಾದರೊಂದು ಅಡಿಗೆಯ 'ರುಚಿ' ಬದಲಿಸಿಕೊಳ್ಳಬಹುದು. ಆದರೆ "ಅಭಿರುಚಿ" ಕೆಟ್ಟು ಹೋದರೆ ಏನು ಗತಿ? ಸುಖ ಅಥವಾ ದುಃಖವಾದಾಗ ವೇದನೆಯಾಗುವುದು ಸಹಜ, ಆದರೆ 'ಸಂವೇದನೆ' ಸತ್ತು ಹೋದರೆ ಏನು ಗತಿ? ಇಂದು 'ಅಭಿರುಚಿ ಮತ್ತು ಸಂವೇದನೆಗಳು' ನಮ್ಮಿಂದ ದೂರವಾಗಿರುವುದರಿಂದ ನಾವೆಲ್ಲ ಬತ್ತಿದ ನದಿಯಂತಾಗಿದ್ದೇವೆ. ಬರಡು ಬಂಜರ ಭೂಮಿಯಂತಾಗಿದ್ದೆವೆ. ಸುಗಂಧವಿಲ್ಲದ ಪ್ಲಾಸ್ಟಿಕ್ ಹೂವಿನಂತೆ ಮೇಲೆ ಮಾತ್ರ ಚಂದಾಗಿ ಕಾಣುತ್ತ ಒಳಗೊಳಗೆ ಕಂದಿ ಕುಂದಿ ಹೋಗಿದ್ದೇವೆ.
ಹೇಳಿ ನಮಗೇನಾಗಿದೆ? ಇಲ್ಲಿ ಏನೇ ನಡೆದರೂ ಕಣ್ಣು ತೆರೆದು ನೋಡುವ ಗೋಜಿಗೆ ನಾವು ಹೋಗುತ್ತಲೇಯಿಲ್ಲ. ಎಲ್ಲದರಲ್ಲಿಯೂ ಆಸಕ್ತಿ ಕಳೆದುಕೊಂಡಿದ್ದೇವೆ. ನಾವಾಯ್ತು ನಮ್ಮ ಕೆಲಸವಾಯ್ತು ಜಗತ್ ಪ್ರಳಯವಾದರೂ ನಮಗೇನು? ಎನ್ನುವ ಸ್ವಾರ್ಥ ಬಂದಿರಲು ಕಾರಣವೇನು? ಬಹಳಷ್ಟು ಜನರು ಆಫೀಸು, ಮನೆ ಎನ್ನುವ ಮಾಯಾಮೃಗದೊಳಗೆ ಸಿಲುಕಿದ್ದರೇ, ಇನ್ನು ಕೆಲವರು ಟಿ.ವಿ., ಊಟ, ಚಟ, ಬಟ್ಟೆ, ಮಾರ್ಕೆಟಿಂಗ್, ಸಿನಿಮಾ ಎನ್ನುವ ಗುಂಗಿನೊಳಗೆ ಸಿಲುಕಿಕೊಂಡು ಅದರಿಂದ ಹೊರಬಾರದಂತೆ ವಿಲವಿಲ ಎಂದು ವದ್ದಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಕೈಗೆ ಸಿಗದಷ್ಟು ಎಲ್ಲೆಲ್ಲೋ ಕಳೆದು ಹೋಗಿದ್ದಾರೆ.
ನಮ್ಮ ಸುತ್ತ ಏನು ನಡೆಯುತ್ತಿದೆ ಎನ್ನುವ ವ್ಯವಧಾನವಾದರೂ ಇದೆಯಾ? ನಮ್ಮ ಪಾಡಿಗೆ ನಾವು ಉಂಡುಟ್ಟು ಸುಖಪಟ್ಟು ಹೋದರೆ ಏನರ್ಥವಿದೆ ಹೇಳಿ? ಹರಿವ ನೀರು, ಮೊರೆವ ಕಡಲು, ಮೂಡಿ ಮೊಳಗುವ ಸೂರ್ಯ ಚಂದ್ರರು, ಪಶುಪಕ್ಷಿ ಪ್ರಾಣಿ ಸಂಕುಲ, ಪರಿಸರದ ಅಸಮತೋಲನ, ನೀರಿನ ಹಾಹಾಕಾರ ಈ ಕುರಿತು ಒಂದಿಷ್ಟಾದರೂ ನಾವು ಆಲೋಚನೆ ಮಾಡಿರುವುದಿದೆಯಾ?
ನಿತ್ಯ ನಡೆಯುತ್ತಿರುವ ಶೋಷಣೆ, ಹೆಣ್ಣಿನ ಮೇಲಿನ ಅತ್ಯಾಚಾರ, ಬಡವರನ್ನು ಜೀವ ಹಿಂಡುತ್ತಿರುವ ಭ್ರಷ್ಟಾಚಾರ, ಧರ್ಮದ ಸೋಗಿನ ವ್ಯಭಿಚಾರ, ಗಡಿಯೊಳಗೆ ದೇಶಭಕ್ತರ ಹತ್ಯೆ, ಭಯೋತ್ಪಾದನೆ, ಮಾನವ ತಾರತಮ್ಯದಂಥ ಗಂಭೀರ ವಿಷಯಗಳು ಒಮ್ಮೆಯಾದರೂ ನಮ್ಮ ಗಮನಕ್ಕೆ ಬಂದಿದೆಯಾ? ರಾಜಕೀಯ ಕೊಳಕು ವ್ಯವಸ್ಥೆ, ಕುಸಿಯುತ್ತಿರುವ ಕುಟುಂಬಗಳ ಸಂಬಂಧ, ಆಧುನೀಕರ ತುಡಿತ ಮಿಡಿತ, ಉಡುಗೆ ತೊಡುಗೆಗಳು, ಬದಲಾಗುತ್ತಿರುವ ಜೀವನಶೈಲಿ ಹೀಗೆ ಎಷ್ಟೊಂದು ವಿಷಯಗಳು ನಮ್ಮ ಕಣ್ಮುಂದೆ ಕೇಕೇ ಹಾಕಿ ನಗುತ್ತಿರುವಾಗ, ನಾವು ಎ.ಸಿ. ರೂಮಿನಲ್ಲಿ ಹಾಯಾಗಿ ನಿದ್ರಿಸುತ್ತ, ವಿಹರಿಸುತ್ತ, ಕಾಲಹರಣ ಮಾಡುತ್ತಿದ್ದೇವೆ. ಒಂದಿಷ್ಟಾದರೂ ನಮ್ಮ ಹೃದಯ ಮರುಕ ಪಡುವುದನ್ನೇ ನಿಲ್ಲಿಸಿದಿಯಾ? ಜೀವನದ ಮೂಲದ್ರವ್ಯ 'ಕಾಳಜಿ'ನೇ ಬತ್ತಿ ಹೋದರೆ ಹೇಗೆ? ಇಂದಿನ ತುರ್ತು ಅಗತ್ಯಕ್ಕೆ ಬೇಕಿರುವುದು ಅಧಿಕಾರ, ಹಣ, ಅಂತಸ್ತುಗಳಲ್ಲ ಅಂತಿಮ ನಿತ್ಯಸತ್ಯವಾದ ಕಾಳಜಿ ಮಾತ್ರ ನಮ್ಮನ್ನು ಬದುಕಿಸಬಲ್ಲದು.
ಈ ನಾಡಿನ ಬಹಳಷ್ಟು ಮನೋವೈದ್ಯರ ಅಂಕಿ ಅಂಶದ ಪ್ರಕಾರ ಹೇಳುವುದಾದರೆ, ಬೆಂಗಳೂರು ಹಿಡಿದು ನಾಡಿನ ಪ್ರತಿಷ್ಠಿತ ಮಹಾನಗರಗಳಲ್ಲಿ ಶೇಕಡ 100/-ಕ್ಕೆ 70/-ರಷ್ಟು ಜನರು 'ಸಂವೇದನೆ ಮತ್ತು ಕಾಳಜಿಯನ್ನೇ' ಕಳೆದುಕೊಂಡಿದ್ದಾರೆ ಎಂದು ವಿಶ್ಲೇಷಿಸುತ್ತಾರೆ.
ಕಂಬನಿ ಕಂಡು ಕರುಗದ ಮನ
ಕಷ್ಟವ ಕಂಡು ಕರುಗದ ಹೃದಯ
ನೋವನು ಕಂಡು ಸ್ಪಂದಿಸದ ಭಾವ
ಸೋತಿರುವವರ ಕಂಡು ಸಾಂತ್ವನಿಸರ ಜೀವ
ಇದು ಆಧುನಿಕರ ಪ್ರಭಾವದ ಪರಿಭಾವ!
ಎಂದು ಕವಿ ಕಂಬನಿ ಮಿಡಿಯುತ್ತಾನೆ.
ತಂದೆ ತಾಯಿಗಳಿಗೆ ಬೇಕಿರುವುದು ಬಂಗಲೆ, ಬಂಗಾರವಲ್ಲ, ಒಂದಿಷ್ಟು ಸೇವೆ ಮತ್ತು ಕಳಕಳಿ. ಮಕ್ಕಳಿಗೆ ಬೇಕಿರುವುದು ಬರೀ ವಸ್ತುಗಳು, ಪಾಕೆಟ್ ಮನಿಗಳಲ್ಲ. ಆರೈಕೆ, ಪ್ರೀತಿ ಅಂತಃಕರಣದ ಕಾಳಜಿ. ಸಂಸಾರದ ಸಂವರ್ಧನೆಗೆ ಬೇಕಿರುವುದು ವೈಭೋಗದ ವೈಯ್ಯಾರವಲ್ಲ, ಒಲವಿನ ಹಂಬಲ ಪ್ರೀತಿಯ ಜೀವಜಲ. ಹೀಗೆ ಸಮಾಜ, ನಾಡುನುಡಿ, ಸಂಸ್ಕೃತಿ, ಶಿಕ್ಷಣ, ಧರ್ಮ ಹೀಗೆ ಎಲ್ಲ ಕ್ಷೇತ್ರಗಳಿಗೂ ಬೇಕಿರುವುದು ಭರವಸೆಯ ಕನಸುಗಳು. ಮಾನವೀಯ ಮನಸುಗಳು.
ಉತ್ತಮ ಬಾಂಧವ್ಯವನ್ನು ಹೊಂದದ ಬಾಳು ಹೇಗಿದ್ದರೇನು? ನಂಬಿಕೆಯನ್ನೇ ಉಳಿಸಿಕೊಳ್ಳದ ಬದುಕು ಎಷ್ಟಿದ್ದರೇನು? ನಮ್ಮ ಉನ್ನತಿ - ಅವನತಿ ಅಡಗಿರುವುದು ನಮ್ಮ ಅಪರೂಪದ ಸಂಬಂಧಗಳ ಮೇಲೆ. ನಾವು ಪರಸ್ಪರ ಒಬ್ಬರನ್ನೊಬ್ಬರು ಗೌರವಿಸಲು ಮೊದಲು ಕಲಿಯೋಣ. ಸಂಬಂಧಗಳು ತುಂಬಾ ಮುಖ್ಯ. ಅವುಗಳನ್ನು ಉಳಿಸಿಕೊಳ್ಳಲು ಪಣ ತೊಡೋಣ. ದಯವಿಟ್ಟು ಕೋಪ ಎನ್ನುವ ವೈರಿಯನ್ನು ಸುಟ್ಟು ಹಾಕೋಣ. ವ್ಯಂಗ್ಯ, ಕುಹಕ, ಅಪಹಾಸ್ಯಗಳಿಗೆ ಇತಿಶ್ರೀ ಹಾಡೋಣ. ಕೇವಲ ಮಾತು ಸಿಹಿಯಾದರೆ ಸಾಲದು. ಭಾವ-ಭಾವಗಳನ್ನು ಬೆಸೆಯೋಣ. ಒಬ್ಬರಿಗೊಬ್ಬರು ನೋವಾಗದಂತೆ ಕನಿಷ್ಠ ಪಕ್ಷ ಬೇಸರ ಮಾಡದಂತೆ ವರ್ತಿಸೋಣ. ತಪ್ಪಾದರೆ 'ಕ್ಷಮಿಸಿ' ಎಂದು ಹೇಳಿ ಬಿಡೋಣ. ಅರ್ಥವಿಲ್ಲದ ಒಣ 'ಈಸಂಗೆ' ಗೇಟ್ಪಾಸ್ ಹೇಳೋಣ. ನಾನೇ ಹೆಚ್ಚು ಎನ್ನುವ ಹುಚ್ಚು ಕಲ್ಪನೆಯನ್ನು ಕಿತ್ತೆಸೆಯೋಣ. ಆಗ ನೋಡಿ! ಬಾಳು ಎಷ್ಟೊಂದು ಸುಂದರ! ಬದುಕು ಘಮ ಘಮಿಸುವ ಮಂದಾರ!!
ಪ್ರಿಯರೇ,
ಮಾನವ ಸಂಬಂಧಗಳನ್ನು ಉಳಿಸಿ -ಬೆಳೆಸುವುದೆಂದರೆ; ಮನುಕುಲ ಮೌಲ್ಯಗಳ ಮುನ್ನಡೆ ಎಂದೆ ಭಾವಿಸಿದ್ದೇನೆ. ಅದೊಂದು ಅಪರೂಪದ ಕೌಶಲ್ಯ. ನಿಜ ಬಾಳಿನ ಸೌಶೀಲ್ಯ. ಯಾವ ಗೊಡ್ಡು ವೇದಾಂತಗಳು ನಮಗೆ ಬೇಡ. ನಾವು ನಮಗೆ ತಿಳಿದಂತೆ ಬದುಕುತ್ತೇವೆ. ನಾವು ಯಾರ ಮಾತನ್ನೂ ಕೇಳುವುದಿಲ್ಲ. ದಯವಿಟ್ಟು ನಮಗೆ ಏನೂ ಹೇಳಲು ಬರಬೇಡಿ ಎನ್ನುವ ಉಡಾಫೆ ಜಂಭದ ಮಾತುಗಳು ನಮ್ಮ ಜೀವನದಲ್ಲಿ ಇನ್ನು ಮುಂದೆ ಎಂದಿಗೂ ಬೇಡವೇ ಬೇಡ.
ಗತಿಯೊಂದಿಗೆ ಪ್ರಗತಿಯನ್ನು, ವೇದನೆಯೊಂದಿಗೆ ಸಂವೇದನೆಯನ್ನೂ, ರುಚಿಯೊಂದಿಗೆ ಅಭಿರುಚಿಯನ್ನು, ಮಾತಿನೊಂದಿಗೆ ಮಮತೆಯನ್ನು ಇಮ್ಮಡಿ ನೂರ್ ಮಡಿಗೊಳಿಸಿಕೊಳ್ಳೋಣ. "ಕಾಳಜಿ" ಎನ್ನುವ ಕೈವಾರ ಕೈಗೆಟುಕುವ ಕಲ್ಯಾಣವಾಗಲಿ! ಒಲವು ಗೆಲವಿನ ಗುರಿಯಾಗಲಿ. ಬಾಳು ನಂದನವನವಾಗಲಿ.
-ಪ್ರಭು ಚನ್ನಬಸವಸ್ವಾಮೀಜಿ, ಮೋಟಗಿಮಠ, ಅಥಣಿ
anisikeprabha@gmail.com