ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕೌಂಟ್‌ಡೌನ್ 2014 ಅಲ್ಲಲ್ಲ...2013!

Srinivasa Murthy VN
Updated On : 26 Mar 2013, 11:48 am

2014ರಲ್ಲಿ ನಡೆಯಬೇಕಿರುವ ಲೋಕಸಭೆ ಚುನಾವಣೆಯನ್ನು  2013ರ ಅಕ್ಟೋಬರ್ ನವೆಂಬರ್‌ನಲ್ಲೇ ಆಗುವಂತೆ ನೋಡಿಕೊಳ್ಳುವ ಇರಾದೆ ಯುಪಿಎ ಸರ್ಕಾರಕ್ಕೆ ಇದೆ. ಈ ಮೂಲಕ ಮೂರು ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಆಸೆ ಅದರದ್ದು. ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳಿಗೆ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುವ ಭೀತಿ ಎದುರಿಸುತ್ತಿದ್ದು, ಅದಕ್ಕೂ ಪೂರ್ವದಲ್ಲೇ ಲೋಕಸಭೆ ಚುನಾವಣೆ ನಡೆದರೆ ಅಲ್ಲಿನ ಸಂಭಾವ್ಯ ಸೋಲುಗಳ ನೆರಳಲ್ಲಿ ಕುಗ್ಗಿಕೊಂಡು ಚುನಾವಣೆ ಎದುರಿಸುವ ಪ್ರಮೇಯವಿರುವುದಿಲ್ಲ. ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೇ ಬೇಡವೇ ಎಂಬ ಬಗ್ಗೆ ಬಿಜೆಪಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇರುವ ಸಮಯವನ್ನು ಕುಗ್ಗಿಸಿದಂತಾಗುತ್ತದೆ. ಮೂರನೆಯದಾಗಿ ಮುಲಾಯಂ ಸಿಂಗ್ ಅವರ ತೃತೀಯ ರಂಗದ ಕನಸನ್ನು ಚಿಗುರಿನಲ್ಲೇ ಹಿಸುಕಿದಂತಾಗುತ್ತದೆ.
ಆದರೆ ಯುಪಿಎಗೆ ಕಾಲ ಒಳ್ಳೆಯದಿಲ್ಲ. ಭ್ರಷ್ಟಾಚಾರ, ಕೋಮುವಾದಿತನ ಹಾಗೂ ಜಾತೀಯತೆಗಳಲ್ಲೇ ಹುದುಗಿಹೋಗಿರುವ ಎಸ್‌ಪಿ, ಬಿಎಸ್‌ಪಿಗಳು ಆಯಾ ದಿನದ ಬೆಂಬಲವನ್ನಷ್ಟೇ ತಮ್ಮ ಲೆಕ್ಕಾಚಾರಕ್ಕೆ ಅನುಗುಣವಾಗಿ ಯುಪಿಎಗೆ ನೀಡಬಲ್ಲವು ಅಷ್ಟೇ. ತನ್ನ ನೇರ ನಗದು ವರ್ಗಾವಣೆ ಹಾಗೂ ಆಹಾರ ಭದ್ರತೆ ಯೋಜನೆಗಳು ಮತದಾರರ ನಡುವೆ ಹೋಗಿ ಮತಸೆಳೆಯುವಂತಾಗುವುದಕ್ಕೆ ಯುಪಿಎ ಇನ್ನೂ ಕಾಯಬೇಕಿದೆ.
ಕರ್ನಾಟಕಕ್ಕೆ ಮೇನಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇರುವುದಾದರೂ ಬಹುಮತ ಸಾಬೀತಾಗುವುದಕ್ಕೆ ಜೆಡಿಎಸ್‌ನ ಬೆಂಬಲ ಪಡೆಯಬೇಕಾಗಬಹುದು. ದುರಾಡಳಿತವನ್ನು ಅಪ್ಪಿಕೊಂಡ ಬಿಜೆಪಿಗೆ ಕರ್ನಾಟಕದಲ್ಲಿ ಸೋಲುವ ಎಲ್ಲ ಅರ್ಹತೆಗಳೂ ಇವೆ. ಯಡಿಯೂರಪ್ಪನವರ ಕೆಜೆಪಿಯು ಮಾರಕ ಪಾತ್ರವನ್ನು ನಿಭಾಯಿಸಬಹುದಾಗಲೀ ಗಳಿಸಬಹುದಾದ ಸ್ಥಾನಗಳ ಸಾಧ್ಯತೆ ಕೆಲವೇ.
ಮಧ್ಯಪ್ರದೇಶ ಹಾಗೂ ಛತ್ತೀಸಗಢಗಳಲ್ಲಿ ಉತ್ತಮ ಆಡಳಿತವು ಆಡಳಿತಾರೂಢ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ರಮಣ್ ಸಿಂಗ್ ಅವರಿಗೆ ಬಹುಮತ ದೊರಕಿಸಿಕೊಡಬಲ್ಲದು ಎಂಬ ನಿರೀಕ್ಷೆ ಇದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರ ಕೆಟ್ಟ ಆಡಳಿತವನ್ನು ಜನ ತಿರಸ್ಕರಿಸಿಯಾರು. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ತನ್ನ ಮಾರ್ಗವನ್ನು ರೂಪಿಸಿಕೊಂಡಿರುವುದು ಹೌದಾದರೂ ವಿಜಯ ಬಿಜೆಪಿಗೆ ಒಲಿದು 4-0 ಸಾಧನೆಗೆ ನೆರವಾಗಬಹುದು ಎಂಬ ನಿರೀಕ್ಷೆ. ಇವೆಲ್ಲ ನವೆಂಬರ್ ವೇಳೆಗೆ ಮುಕ್ತಾಯವಾಗಿಬಿಡುತ್ತವೆ.
ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಇರುವಾಗಲೇ ಲೋಕಸಭೆಗೂ ಚುನಾವಣೆಯನ್ನು ನಡೆಸುವುದು ವ್ಯವಸ್ಥೆಯ ದೃಷ್ಟಿಯಿಂದ ಕಷ್ಟಕರವಾಗಿ ಪರಿಣಮಿಸಬಹುದು. ಬಿಸಿಲಿನ ಝಳ ಮತ್ತು ಮಳೆಗಾಲ ಇವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡು ಲೋಕಸಭೆ ಚುನಾವಣೆಯನ್ನು ಡಿಸೆಂಬರ್ 2013 ಮತ್ತು ಏಪ್ರಿಲ್ 2014ರ ನಡುವೆ ಯಾವಾಗಲಾದರೂ ನಡೆಸಬಹುದು. ಆಗ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶಗಳ ಪೆಟ್ಟಿನಿಂದ ಕಾಂಗ್ರೆಸ್ ತಪ್ಪಿಸಿಕೊಳ್ಳಲಾಗದು.
2014ರ ಚುನಾವಣೆ ಸಾಧ್ಯತೆಯ ಗಣಿತವನ್ನು ಹೀಗೆ ಹರವಿ ಇಡಬಹುದೇನೋ. ಕಾಂಗ್ರೆಸ್ ಪ್ಲಸ್ ಬಿಜೆಪಿಗಳ ಸ್ಥಾನ ಗಳಿಕೆ ಒಟ್ಟೂ ಸ್ಥಾನಗಳಿಗೆ ಹೊಂದಿಕೆಯಾಗದಾಗ ಉದ್ಭವಿಸುವ ಸಂಭಾವ್ಯ ಸಮತೋಲನ ಹೀಗೆ ಇರಬಹುದು.
ಎನ್‌ಡಿಎ ಕೂಟದ ಮಿತ್ರರ ಸಂಖ್ಯೆ- ಶಿವಸೇನೆ: 16, ಶಿರೋಮಣಿ ಅಕಾಲಿದಳ: 7, ಅಸ್ಸಾಂ ಗಣ ಪರಿಷತ್:2, ಸ್ವತಂತ್ರರು/ಇತರರು 5. ಒಟ್ಟೂ 30.
ಯುಪಿಎ ಮಿತ್ರರ ಸಂಖ್ಯೆ- ಎನ್‌ಸಿಪಿ: 8, ಎನ್‌ಸಿ:2, ಸ್ವತಂತ್ರರು/ ಇತರರು12. ಒಟ್ಟೂ 22.
ಬಿಜೆಪಿ ಬಗ್ಗೆ ಒಲವಿರುವವರು- ಎಐಎಡಿಎಂಕೆ 22, ಟಿಆರ್‌ಎಸ್ 13, ಬಿಜೆಡಿ 18, ಇತರರು 12. ಒಟ್ಟೂ 65.
ಕಾಂಗ್ರೆಸ್ ಬಗ್ಗೆ ಒಲವಿರುವವರು- ವೈಎಸ್‌ಆರ್ 19, ಡಿಎಂಕೆ 14, ಆರ್‌ಜೆಡಿ 5, ಇತರರು 10, ಒಟ್ಟೂ 48.
ತಟಸ್ಥ ಪ್ರಾದೇಶಿಕ ಬಲ- ಜೆಡಿಯು 15, ಟಿಎಂಸಿ 25, ಟಿಡಿಪಿ5, ಬಿಎಸ್‌ಪಿ 22, ಎಸ್‌ಪಿ 26, ಎಡರಂಗ 24, ಒಟ್ಟೂ 117.
ಇವುಗಳ ಸಾರಾಂಶ:
ಬಿಜೆಪಿ 156 ಮಿತ್ರರು 30  ಬಿಜೆಪಿ ಒಲವಿರುವವರು 65 = 251
ಕಾಂಗ್ರೆಸ್ 107 ಮಿತ್ರರು 22  ಕಾಂಗ್ರೆಸ್ ಒಲವಿರುವವರು 48 = 177
ತಟಸ್ಥ ಪ್ರಾದೇಶಿಕ ಬಲ = 117
ಈ ಆಧಾರದಲ್ಲಿ ಮಾಡಬಹುದಾದ ಊಹೆ: ಬಿಜೆಪಿ ನರೇಂದ್ರ ಮೋದಿಯವರನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದೇನೂ ಘೋಷಿಸುವುದಿಲ್ಲ. ಆದರೆ ಎನ್‌ಡಿಎ ತನ್ನ ಸ್ವಂತಬಲದಿಂದ ಸರ್ಕಾರ ರಚಿಸುವುದು ಸಾಧ್ಯವಾದರೆ ಅವರದ್ದೇ ನಾಯಕತ್ವ ಎಂಬ ಬಗ್ಗೆ ಸೂಚನೆ ಕೊಟ್ಟೀತು. ಮೋದಿ ನಾಯಕತ್ವದ ಬಗ್ಗೆ ಸ್ಪಷ್ಟತೆ ಇರಲಿ ಇಲ್ಲದಿರಲಿ ಜೆಡಿಯುನ ನಿತೀಶ್ ಕುಮಾರ್ ಅವರು ಎನ್‌ಡಿಎದಿಂದ ಅಂತರದಲ್ಲೇ ಇರುತ್ತಾರೆ. ಆ ಮೂಲಕ ತಮ್ಮನ್ನು ತಟಸ್ಥ ಬಲದ ಜತೆ ಗುರುತಿಸಿಕೊಳ್ಳುತ್ತಾರೆ.
ಇನ್ನು, ರಾಹುಲ್ ಗಾಂಧಿಯನ್ನೂ ಯುಪಿಎದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗುವುದಿಲ್ಲ. ಚುನಾವಣಾ ಅಭಿಯಾನದ ಮುಂಚೂಣಿಯಲ್ಲೇ ಅವರನ್ನು ನಿಲ್ಲಿಸಲಾಗುವುದಾದರೂ ಯುಪಿಎ 3ರ ಚುಕ್ಕಾಣಿ ಅವರದ್ದು ಎಂದು ಬಿಂಬಿಸಲಾಗುವುದಿಲ್ಲ.
ಹಾಗಾದರೆ ಪರಿಣಾಮ ಏನಾಗಲಿದೆ?
ಮೇಲೆ ಮಾಡಲಾದ ಸಂಭಾವ್ಯ ಲೆಕ್ಕಾಚಾರದಂತೆ ತನ್ನೆಲ್ಲ ಮಿತ್ರರನ್ನೊಳಗೊಂಡು ಬಿಜೆಪಿಯ ಗಳಿಕೆ 251 ಸ್ಥಾನಗಳಿಗೆ ಹೋದರೆ ಅಷ್ಟೇನೂ ಹಿತಕರವಲ್ಲದ ಬಹುಮತಕ್ಕೆ ಅದಕ್ಕೆ 21 ಸ್ಥಾನಗಳು ಬೇಕಾಗುತ್ತವೆ. ಮೋದಿಯವರ ಪ್ರಧಾನಿ ಅಭ್ಯರ್ಥಿ ಉಮೇದುವಾರಿಕೆಯ ಅಸ್ಪಷ್ಟತೆಗೆ ಬಿಜೆಪಿ 30 ಸ್ಥಾನಗಳನ್ನು ತೆರಬೇಕಾಗಿ ಬರಬಹುದು. ಆದಾಗ್ಯೂ ಜೆಡಿಯುವನ್ನು ಕಳೆದುಕೊಳ್ಳುತ್ತದೆ.
ಕಾಂಗ್ರೆಸ್ ಸ್ಥಿತಿ ಕೆಟ್ಟದ್ದೇ ಆಗಬಹುದು. ಮೇಲೆ ಹೇಳಿದಂತೆ 177 ಸ್ಥಾನಗಳಿಗೆ ಸೀಮಿತಗೊಂಡರೆ ಸರ್ಕಾರ ರಚಿಸುವ ಉಮೇದುವಾರಿಕೆ ತೋರಲಾಗುವುದಿಲ್ಲ. ತಟಸ್ಥವಾಗಿ ಉಳಿದ ಮೂರನೇ ಬಣವೂ ತಾನೇ ಒಟ್ಟುಗೂಡಿ ಸರ್ಕಾರ ರಚಿಸುವ ಸ್ಥಿತಿಯಲ್ಲಿರುವುದರಲ್ಲಿ. ಏಕೆಂದರೆ ಅದರ ಮೊತ್ತ ಕಾಂಗ್ರೆಸ್‌ಗಿಂತ ಕಿರಿದು.
ಇವೆಲ್ಲದರ ನಡುವೆ ಸರ್ಕಾರವೊಂದು ರಚನೆಯಾಗಬೇಕಾದರೆ ಈ ಕೆಳಗಿನ ಸಾಧ್ಯತೆಗಳಿವೆ. ಸಂಭಾವ್ಯತೆ ಆಧಾರದಲ್ಲಿಯೇ ಅವನ್ನು ಅನುಕ್ರಮವಾಗಿ ಇಡಲಾಗಿದೆ.   
ಮೊದಲ ಸಾಧ್ಯತೆ: 251ರ ಗಳಿಕೆ ಮುಟ್ಟಿದ ಬಿಜೆಪಿ ಉಳಿದೆಲ್ಲ ಸ್ವತಂತ್ರ ಅಭ್ಯರ್ಥಿಗಳನ್ನು ತನ್ನತ್ತ ಸೆಳೆದುಕೊಳ್ಳುವುದು ಇಲ್ಲವೇ ಇನ್ನೊಂದು ಮೈತ್ರಿಯನ್ನು ಸಂಪಾದಿಸಿಕೊಳ್ಳುವುದು.
ಎರಡನೇ ಸಾಧ್ಯತೆ: 117 ಸ್ಥಾನಗಳನ್ನು ಗಳಿಸಿದ ತಟಸ್ಥ ಪ್ರಾದೇಶಿಕ ಬಲವು ಅತ್ತಿತ್ತ ಒಲವಿರುವವರನ್ನು- ಟಿಆರ್‌ಎಸ್ 13, ಬಿಜೆಡಿ 18, ಎಐಎಡಿಎಂಕೆ 22- ಸೇರಿಸಿಕೊಂಡು 170ರ ಸ್ಕೋರ್ ತಲುಪುವುದು. ನವೆಂಬರ್ 1990- ಮೇ 1991ರ ನಡುವೆ ನಡೆದ ಚಂದ್ರಶೇಖರ್ ಸರ್ಕಾರದಂತೆ ಅಥವಾ ದೇವೇಗೌಡ/ಗುಜ್ರಾಲ್ 1996-98ರಲ್ಲಿ ನಡೆಸಿದಂತೆ 'ತೃತೀಯರಂಗ' ರಚನೆ. ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟ ಪಕ್ಷಗಳ 129ರ ಬಲದ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆ. ಎಸ್‌ಪಿ- ಬಿಎಸ್‌ಪಿ, ಡಿಎಂಕೆ-ಎಐಎಡಿಎಂಕೆ ಹಾಗೂ ಟಿಎಂಸಿ-ಎಡರಂಗಗಳ ಕಂದಕಗಳನ್ನು ಗಮನದಲ್ಲಿ ಇಟ್ಟುಕೊಂಡಾಗ ಇಂಥ ವ್ಯವಸ್ಥೆ ಹೆಚ್ಚು ಕಾಲ ಬಾಳದು.
ಮೂರನೇ ಸಾಧ್ಯತೆ: ಮೈತ್ರಿ ಮತ್ತು ಒಲವುಳ್ಳವರ ಬೆಂಬಲದೊಂದಿಗೆ 177ರಲ್ಲಿ ನಿಲ್ಲುವ ಕಾಂಗ್ರೆಸ್, ತಟಸ್ಥ ಪ್ರಾದೇಶಿಕ ಬಲದೊಂದಿಗೆ (ಜೆಡಿಯು, ಟಿಡಿಪಿ, ಎಸ್‌ಪಿ) 223 ಸ್ಥಾನಗಳಿಗೆ ತಲುಪುವುದು. ಈ ವ್ಯವಸ್ಥೆಯೂ ಪ್ರಾರಂಭದಿಂದಲೇ ಅಸ್ಥಿರತೆಯನ್ನು ಅನುಭವಿಸುತ್ತದೆ.
ಕಾಂಗ್ರೆಸ್ ಮತ್ತು ಬಿಜೆಪಿಗಳು ಒಟ್ಟೂ ಟ್ಯಾಲಿ ಲೋಕಸಭೆಯ ಅರ್ಧದಷ್ಟಿದ್ದಾಗ ಯಾವುದೇ ರಚನೆ ಅಸ್ಥಿರವೇ ಆಗಿರುತ್ತದೆ. ಹಾಗಾದರೆ ಇದು ಕೊನೆಗೆ ಎಲ್ಲಿಗೆ ಕರೆದೊಯ್ಯುತ್ತದೆ? 2015-16ರಲ್ಲಿ ಮಧ್ಯಾವಧಿ ಚುನಾವಣೆ! 1996 ಮತ್ತು 1999ರ ನಡುವೆ ಭಾರತ ಮೂರು ಲೋಕಸಭೆ ಚುನಾವಣೆಗಳನ್ನು ಕಂಡಿದೆ ಎಂಬುದನ್ನು ನೆನಪಿಸಿಕೊಳ್ಳಿ! ಆ ವೇಳೆಗೆ ಆಂತರಂಗಿಕವಾಗಿ ಪಾಠ ಕಲಿವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಕುರಿತಂತೆ ತನ್ನ ಅಸ್ಪಷ್ಟತೆಯಿಂದ ಹೊರಬಂದಿರುತ್ತದೆ. ಕಾಂಗ್ರೆಸ್ ಸಹ ಚಿದಂಬರಂ ಅವರನ್ನೋ, ಆ್ಯಂಟನಿಯವರನ್ನೋ ಆಯ್ದುಕೊಂಡು ರಾಹುಲ್ ಮುಖ್ಯ ಭೂಮಿಕೆಯಲ್ಲಿರುವಂತೆ ನೋಡಿಕೊಳ್ಳುತ್ತದೆ.
ಹಾಗೆ ಏರ್ಪಡುವ ನೇರ ಹಣಾಹಣಿಯಲ್ಲಿ ಗೆದ್ದು ಬರುವವರಷ್ಟೇ ಸ್ಥಿರ ಸರ್ಕಾರ ನೀಡುತ್ತಾರೆ.
(ಲೇಖಕರ ಅನುಮತಿಯೊಂದಿಗೆ ಟೈಮ್ಸ್ ಬ್ಲಾಗ್‌ನಿಂದ)

-ಮಿನಾಜ್ ಮರ್ಚೆಂಟ್, ಅಂಕಣಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement