ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಶಿಕ್ಷಣದ ಹೆಸರಲ್ಲಿ ಸುಲಿಗೆ, ಇವರಿಗಿಲ್ಲವೇ ತೆರಿಗೆ?

Srinivasa Murthy VN
Updated On : 26 Mar 2013, 11:48 am

ನಲ್ಮೆಯ ವಿತ್ತ ಸಚಿವರೇ,
ಈ ಲೇಖನ ನಿಮ್ಮ ಬಜೆಟ್‌ಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಇದು ತೆರಿಗೆ ವಂಚನೆಯ ದೊಡ್ಡ 'ಹಗರಣ'ದ ಬಗ್ಗೆ. ಆದರೆ ಇದನ್ನು 'ಹಗರಣ' ಅನ್ನಲೂ ಆಗದು. ಏಕೆಂದರೆ ನಮ್ಮ ನೆಲದ ಕಾನೂನು ಇಂತಹ ಕೆಲಸಕ್ಕೆ ಅನುಮತಿ ನೀಡುತ್ತದೆ! ತೆರಿಗೆ ವಂಚಕರಿಗೆ ನೋಟಿಸ್ ಕಳಿಸಿ, ಅವರು ತಮ್ಮ ಆದಾಯವನ್ನು ಘೋಷಿಸುವಂತೆ ಹಾಗೂ ತೆರಿಗೆ ಪಾವತಿಸುವಂತೆ ಮಾಡುತ್ತೇವೆ ಎಂದು ಸ್ಪಷ್ಟವಾಗಿ ನೀವು ಹೇಳಿದ್ದೀರಿ. ಆದರೆ, ತೆರಿಗೆ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಕಾನೂನನ್ನೇನು ಮಾಡಬೇಕು? ಒಟ್ಟಿನಲ್ಲಿ ದೇಶಕ್ಕೆ ಈ ಕಾನೂನಿನಿಂದಾಗಿ ದೇಶಕ್ಕೇ ಅನ್ಯಾಯವಾಗುತ್ತಿದೆ ಎನ್ನುವುದಂತೂ ಸುಳ್ಳಲ್ಲ.
ನಮ್ಮ ದೇಶದ ಬಹುತೇಕ ಶಿಕ್ಷಣ ಸಂಸ್ಥೆಗಳು 'ಧರ್ಮಾರ್ಥ ಸಂಸ್ಥೆಗಳೆಂದು' ನೋಂದಣಿ ಮಾಡಿಸಿಕೊಂಡಿವೆ. ಇದರಿಂದಾಗಿ ಅವು ತೆರಿಗೆ ಪಾವತಿಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿವೆ. ಎಂಥ ಅದ್ಭುತ ಐಡಿಯಾ ಅಲ್ಲವಾ ಗುರುಗಳೇ!? ಬಹುಶಃ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇದನ್ನು ಒಪ್ಪಬಹುದಾಗಿತ್ತೇನೋ. ಏಕೆಂದರೆ
ಆ ಸಮಯದಲ್ಲಿ ಕೆಲವರು ದೇಶಭಕ್ತಿಯ ರೂಪವಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು.
ಆದರೆ ಅದಾಗಲೇ ಹಳೆಯ ವಿಷಯವಾಯಿತು. ಇಷ್ಟು ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ಈಗ ಶಿಕ್ಷಣ ಎನ್ನುವುದು ವ್ಯಾಪಾರವಾಗಿಬಿಟ್ಟಿದೆ. ಪುಕ್ಕಟೆ ಜಾಗವೂ ಸಿಗುತ್ತದೆ, ಹಣವನ್ನೂ ಬೇಕಾಬಿಟ್ಟಿಯಾಗಿ ಬಾಚಬಹುದು ಎನ್ನುವ ಕಾರಣದಿಂದ ಬಹುತೇಕ ರಾಜಕಾರಣಿಗಳು ಈಗ ಈ ವ್ಯಾಪಾರದಲ್ಲಿ ಧುಮುಕಿದ್ದಾರೆ. ಇನ್ನು ಖಾಸಗಿ ಶಾಲೆಗಳ ಜೊತೆಗೆ, ಖಾಸಗಿ ವಿಶ್ವವಿದ್ಯಾಲಯಗಳೂ ತಲೆಯೆತ್ತಿವೆ. ಅವುಗಳಿಗೆ ರಹಸ್ಯವಾಗಿ ಅಥವಾ ಬಹಿರಂಗವಾಗಿಯೇ ರಾಜಕಾರಣಿಗಳು ನೀರೆರೆಯುತ್ತಿದ್ದಾರೆ. ರಾಜಕಾರಣಿಗಳ ವಿಶೇಷತೆಯೇ ಇದು. ದೇಶಕ್ಕಾಗಿ, ನಮ್ಮಂತಹ ನತದೃಷ್ಟ ದೇಶವಾಸಿಗಳ ಏಳ್ಗೆಗಾಗಿ ಪರಸ್ಪರ ಕಚ್ಚಾಡಿಕೊಂಡೇ ಇರುತ್ತೀರಿ, ಆದರೆ ಕಾಸು ಮಾಡುವ ವಿಷಯ ಬಂದಾಗ ಮಾತ್ರ ಅಮೋಘ ಒಗ್ಗಟ್ಟು!
ಒಂದು ಸಂಸ್ಥೆ ತನ್ನನ್ನು ತಾನು ಧರ್ಮಾರ್ಥ ಸಂಸ್ಥೆಯೆಂದು ಕರೆದುಕೊಳ್ಳುವುದು, ಅದು ಯಾವುದೇ ರೀತಿಯ ದಾನ ಕಾರ್ಯಗಳಲ್ಲಿ ತೊಡಗಿಕೊಂಡಾಗ ಮಾತ್ರ.  ಬರೀ ಹಣ ಸಂಪಾದಿಸುವುದನ್ನೊಂದೇ ಮೂಲ ತತ್ವವಾಗಿಸಿಕೊಂಡು ದುಬಾರಿ ಶುಲ್ಕ ಕೀಳುತ್ತಾ ಮತ್ತು ಪ್ರೊಫೆಷನಲ್ ಕೋರ್ಸುಗಳನ್ನು ನಡೆಸುವ ಶಿಕ್ಷಣ ಸಂಸ್ಥೆಗಳಿಗೂ 'ಧರ್ಮಾರ್ಥ'ಕ್ಕೂ ಎತ್ತಣ ಸಂಬಂಧ? ಕೇವಲ ಪ್ರವೇಶ ಪರೀಕ್ಷೆಗಳ ಮತ್ತು ಅರ್ಜಿಗಳ ಮೂಲಕ ಕೋಟ್ಯಂತರ ರುಪಾಯಿ ಸಂಪಾದಿಸುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಕಡಿಮೆಯೇ? ಇವನ್ನು ಧರ್ಮಾರ್ಥ ಸಂಸ್ಥೆಗಳೆನ್ನುತ್ತೀರಾ? ಇವರ ಅದಾಯಕ್ಕೆ ತೆರಿಗೆ ವಿಧಿಸಬೇಕೋ ಇಲ್ಲವೋ?
ಇನ್ನು ವಿದ್ಯಾರ್ಥಿಗಳಿಂದ ಶುಲ್ಕವೆಂದು ಪಡೆದ ಹಣದಲ್ಲಿ ಎಷ್ಟು ಪ್ರಮಾಣವನ್ನು ಶಿಕ್ಷಣಕ್ಕಾಗಿ ಬಳಸಲಾಗುತ್ತದೆ ಎನ್ನುವ ವಿಚಾರ ಕುತೂಹಲಕರವಾಗಿದೆ. ಒಂದು ಸಂಸ್ಥೆಯಲ್ಲಿ ನಾನೂ ಈ ಬಗ್ಗೆ ವಿಚಾರಿಸಿದಾಗ, ಸಂಸ್ಥೆಗೆ ಬರುವ ಹಣದಲ್ಲಿ ಕೇವಲ 2 ಪ್ರತಿಶತದಷ್ಟು ಮಾತ್ರ ಶಿಕ್ಷಕರ ಕೈ ಸೇರುತ್ತದಂತೆ! ಹಾಗಿದ್ದರೆ ಉಳಿದ ಹಣ? ಯಾವ ಚಾರಿಟಿಯಲ್ಲಿ ಇವು ತಮ್ಮನ್ನು ತಾವು ತೊಡಗಿಸಿಕೊಂಡಿವೆ? ಯಾವ ವಿದ್ಯಾರ್ಥಿಗೂ ಶುಲ್ಕದಲ್ಲಿ ರಿಯಾಯಿತಿ ದೊರೆಯುವುದಿಲ್ಲ, ಇನ್ನು ಬಡವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುವ ಮಾತೇ ಇಲ್ಲ. ಅಲ್ಲದೆ ಸಾಲ ಪಡೆಯುವುದರಲ್ಲೂ ಇವುಗಳದ್ದು ಎತ್ತಿದ ಕೈ. ಎಐಸಿಟಿಇಎ ಹೇಳುತ್ತದೆ ಎನ್ನುವ ಕಾರಣಕ್ಕಾಗಿ ಬ್ಯಾಂಕ್‌ಗಳಿಂದ ಬೃಹತ್ ಮೊತ್ತದ ಹಣ ಪಡೆದು ದೊಡ್ಡ ಬಿಲ್ಡಿಂಗುಗಳನ್ನು, ನೂರಾರು ಕಂಪ್ಯೂಟರ್‌ಗಳನ್ನು ಆ ಸಂಸ್ಥೆಗಳು ಖರೀದಿಸುತ್ತವೆ.
ಈ ಶೈಕ್ಷಣಿಕ ದೇಗುಲಗಳು ತಮ್ಮ ನೌಕರರಿಗೆ ಸರಿಯಾದ ಸಮದಲ್ಲಿ ಸಂಬಳ ಕೊಡುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ! ಪುಣೆಯ ಸಿಂಘಾಡ್ ಮತ್ತು ಇಂದಿರಾ ಶಿಕ್ಷಣ ಸಂಸ್ಥೆಗಳು ಈ ಸಾಲಿನಲ್ಲಿ ಬರುತ್ತವೆ ಎನ್ನುವುದನ್ನು ನಾನು ಕೇಳಿದ್ದೇನೆ. ಇನ್ನು ಐಐಪಿಎಮ್‌ನ ವಿಷಯವಂತೂ ಕೇಳಲೇಬೇಡಿ. ಮೊದಲಿಗೆ ಅದು ತನ್ನ ನೌಕರರಿಗೆ ಸರಿಯಾಗಿ ಸಂಬಳ ಕೊಡುವುದಿಲ್ಲ, ಅಷ್ಟಕ್ಕೇ ನಿಲ್ಲದೇ 1 ವರ್ಷದಿಂದ ಬಾಕಿಯಿದ್ದ ಸಂಬಳ ಪಡೆಯಲು ಬಂದ ಅತಿಥಿ ಅಧ್ಯಾಪಕರಿಗೆ ಅವಧಿ ಮುಗಿದ 11 ಚೆಕ್‌ಗಳನ್ನು ಕೊಡುವ ಧೈರ್ಯವನ್ನೂ ತೋರುತ್ತದೆ! ದುರದೃಷ್ಟವಶಾತ್ ಇಂತಹ ಮುಜುಗರವನ್ನೂ ಸಹಿಸಿಕೊಳ್ಳುವ ಅಧ್ಯಾಪಕರುಗಳು ನಮ್ಮಲ್ಲಿ ಇದ್ದಾರೆ! ಅಧ್ಯಾಪಕರುಗಳೇ ಆಗಲಿ, ಅಥವಾ ಉಳಿದ ನೌಕರರೇ ಆಗಲಿ, ಧ್ವನಿಯೆತ್ತಿದ್ದರೆ ಎಲ್ಲಿ ತಮಗೆ ಬರಬೇಕಿರುವ ಬಾಕಿ ಹಣದ ಜೊತೆಗೆ, ನೌಕರಿಯೂ ಹೋಗುತ್ತದೋ ಎನ್ನುವ ಭಯದಿಂದ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಕುಳಿತಿದ್ದಾರೆ. ಇದನ್ನೇ ಅಲ್ಲವೇ ಶೋಷಣೆ ಅನ್ನುವುದು? ಮಿ. ವಿತ್ತಸಚಿವರೇ ಆ ನೌಕರರಲ್ಲಿ ಬಹುತೇಕರು ಮಹಿಳೆಯರೇ! ಹಾಗಾಗಿ ನಿಮ್ಮ 'ನಿರ್ಭಯ ಫಂಡ್‌'ನ ವಿಷಯ ತುಸುಕಾಲ ಬದಿಗಿಟ್ಟು, ಶಿಕ್ಷಣ ಎಂಬ ಯೋಜಿತ ವ್ಯಾಪಾರದಲ್ಲಿ ಕಿರುಕುಳ ಅನುಭವಿಸುತ್ತಿರುವ ಹೆಣ್ಣುಮಕ್ಕಳನ್ನು ರಕ್ಷಿಸುವುದು ಹೇಗೆನ್ನುವುದರ ಬಗ್ಗೆ ಯೋಚನೆ ಮಾಡಿ?
ಇಂತಹ ಸಂಸ್ಥೆಗಳು ಈ ಪರಿ ಬೆಳೆಯುವುದಕ್ಕೆ ಮುಖ್ಯ ಕಾರಣ, ಭಾರತೀಯರಿಗಿರುವ ಪದವಿ ಮೇಲಿನ ಹುಚ್ಚು. ಡಿಗ್ರಿ ಇದ್ದರೆ ಮದುವೆಯ ಸಮಯದಲ್ಲಿ ವರನ 'ಮೌಲ್ಯ' ಹೆಚ್ಚುವುದು ಸುಳ್ಳಲ್ಲವಲ್ಲ! ನಿಜ ಹೇಳಬೇಕೆಂದರೆ ಇಂತಹ ಮನಸ್ಥಿತಿಯ ಅನೇಕ ವಿದ್ಯಾರ್ಥಿಗಳನ್ನು ನಾನು ನೊಡಿದ್ದೇನೆ. 'ನಾವು ಅಷ್ಟು ದೂರದಿಂದ ಪುಣೆಗೆ ಬಂದು, ಇಷ್ಟೊಂದು ಖರ್ಚು ಮಾಡಿಕೊಳ್ಳುತ್ತಿರುವುದಕ್ಕೆ ಕಾರಣವೇನೆಂದರೆ, ಇದು ಬಂಡವಾಳವಿದ್ದಂತೆ.
ಈ ಬಂಡವಾಳ ಮದುವೆಯ ಮಾರುಕಟ್ಟೆಯಲ್ಲಿ ಬಹಳ ಲಾಭ ತಂದುಕೊಡುತ್ತದೆ' ಎಂದವರು ಹೇಳುತ್ತಾರೆ!
ಸರ್, ಇದು ಲಾಭ ಮಾಡಿಕೊಳ್ಳುವ ಬ್ಯುಸಿನೆಸ್ ಅಲ್ಲದೆ ಮತ್ತೇನೂ ಅಲ್ಲ. ಇನ್ನು ಶಾಲೆಗಳೂ ಕೂಡ ಈ ವಂಚನೆಯಿಂದ ಹೊರತಾಗಿಲ್ಲ. 2-3 ವರ್ಷದ ಕಂದಮ್ಮಗಳಿಗೆ ಮೂರ್ನಾಲ್ಕು ಗಂಟೆ ಆಟವಾಡಿಸುವ ಪ್ಲೇಗ್ರೂಪ್‌ಗಳು ವರ್ಷಕ್ಕೆ ಕನಿಷ್ಟ 30,000 ರುಪಾಯಿ ಶುಲ್ಕ ಕೀಳುತ್ತವೆ! ಇನ್ನೊಂದೆಡೆ ಕಳೆದ 25 ವರ್ಷ ಅಥವಾ ಅದಕ್ಕಿಂತ ಹಿಂದಿನಿಂದಲೂ ಶುಲ್ಕದಲ್ಲಿ ಹೆಚ್ಚಳ ಕಾಣದ ಸರ್ಕಾರಿ ಶಾಲೆಗಳಿವೆ! ಮಹಾರಾಷ್ಟ್ರದಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುತ್ತದೆ(ಪೋಷಕರ ಆದಾಯ ಪರಿಗಣಿಸದೆ). ಈ ಹೆಣ್ಣುಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರವೇ ಅತ್ಯುತ್ತಮ ಕಾರುಗಳ ವ್ಯವಸ್ಥೆ ಮಾಡಿದೆ. ಇನ್ನು ಪದವಿಪೂರ್ವ ಅನುದಾನಿತ ಕಾಲೇಜುಗಳು ಪಡೆಯುವ ಅತ್ಯಲ್ಪ ಶುಲ್ಕ ನೋಡಿದರೆ ನಗು ಬರದೇ ಇರದು. ಇವುಗಳ ವಿದ್ಯಾರ್ಥಿಗಳು ತರಗತಿಗಳಿಗೆ ಹೆಚ್ಚಾಗಿ ಬರುವುದೇ ಇಲ್ಲ...ತಮ್ಮ ಪ್ರೊಫೆಸರ್‌ಗಳಂತೆ! ಈ ಪ್ರೊಫೆಸರ್‌ಗಳು 6ನೇ ವೇತನ ಆಯೋಗ ಕೊಟ್ಟ ಬಂಪರ್ ಆಫರ್‌ನಿಂದ ಅರ್ಹತೆಗಿಂತಲೂ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. ಇವರ ಕೆಲಸ ನಿರ್ವಹಣೆಯನ್ನು ಪರೀಕ್ಷಿಸುವವರೇ ಇಲ್ಲ, ಹಾಗಾಗೇ  ಕೆಲಸ ಮಾಡದಿರುವುದಕ್ಕಾಗಿ ಶಿಕ್ಷೆಗೆ ಒಳಪಡುವ ಭಯವಿಲ್ಲದೇ ನಿಶ್ಚಿಂತೆಯಿಂದಿದ್ದಾರೆ. ಇನ್ನು ತರಗತಿ ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳು, ಕಾಲೇಜಿಗಿಂತಲೂ ಹತ್ತು ಪಟ್ಟು ಹೆಚ್ಚು ಹಣ ತೆತ್ತು ಖಾಸಗಿ ತರಬೇತಿ ಕೇಂದ್ರಗಳಿಗೆ ಹೋಗುತ್ತಾರೆ! ಅನುದಾನಿತ ಕಾಲೇಜುಗಳ ಪ್ರೊಫೆಸರುಗಳು ಅತಿಥಿ ಉಪನ್ಯಾಸಕರಾಗಿ ಹೆಚ್ಚು ಗಂಟೆಗಳ ಕಾಲ ದುಡಿದು, ಸರ್ಕಾರ ತಮಗೆ ಕೊಡುತ್ತಿರುವ ಸಂಬಳಕ್ಕಿಂತ ಹೆಚ್ಚಿನ ಹಣ ಸಂಪಾದಿಸುತ್ತಿದ್ದಾರೆ. ಇದೊಂಥರ 'ಓಪನ್ ಸೀಕ್ರೆಟ್‌'. ಅವರು ಹೀಗೆ ಮಾಡುವುದು ತಪ್ಪು. ಆದರೆ ಅದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳುವವರ್ಯಾರು?
ಹಾಗಾಗೆ ಸರ್, ಶಿಕ್ಷಣ ಸಂಸ್ಥೆಗಳು ಈಗ ಧರ್ಮಾರ್ಥ ಸಂಸ್ಥೆಗಳಾಗಿ ಉಳಿದಿಲ್ಲ. ಶಿಕ್ಷಣ ಎಂಬುದು ರಾಜಕೀಯ ಪೋಷಣೆಯ ಮೇಲೆ ಬೆಳೆಯುವ ವ್ಯಾಪಾರವಷ್ಟೆ. ನಿಮ್ಮ ತೆರಿಗೆ ನೀತಿಯಲ್ಲಿರುವ ಈ ಹುಳುಕನ್ನು ಮೊದಲು ಸರಿಪಡಿಸಿ. ಮತ್ತು ಕಾಲಕಾಲಕ್ಕೆ ಇಂಥ ಸಂಸ್ಥೆಗಳ ಮೇಲೆ ತೆರಿಗೆ 'ಹೇರುವ' ಕೆಲಸವೂ ಆಗಲಿ! ನಿಮಗೆ ಇದು ಇಷ್ಟವೇ ಅಲ್ಲವೇ?! ಆ ಕೆಲಸ ಮಾಡುವುದಕ್ಕೆ ಒಳ್ಳೆಯ ಅವಕಾಶ ನಿಮಗೆ ಸಿಕ್ಕಿದೆ, ಅಲ್ಲದೆ ಈ ನಡೆಯಿಂದಾಗಿ ಹಲವಾರು ವರ್ಷಗಳಿಂದ ಶಿಕ್ಷಣ ಸಂಸ್ಥೆಗಳಿಂದ ತೊಂದರೆ ಅನುಭವಿಸುತ್ತಿರುವ ಜನತೆಗೂ ನಿಮ್ಮ ಮೇಲೆ ಒಲವು ಹೆಚ್ಚುತ್ತದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಇದೇ ಗೆಲುವಿನ ಮೆಟ್ಟಿಲಾಗಲೂಬಹುದು!
(ಮೂಲತಃ www.moneylife.in ನಲ್ಲಿ ಪ್ರಕಟಿತ)

-ಅನಿಲ್ ಅಘಾಸೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement