ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಲಂ 371 (ಜೆ) ಮಸೂದೆ ಜಾರಿ ಆಯಿತು, ಮುಂದ?

Srinivasa Murthy VN
Updated On : 30 Mar 2013, 10:19 am

ಹೈದರಾಬಾದ್ ಕರ್ನಾಟಕಕ್ಕೆ ಅದರದ್ದೇ ಆದ ಭೌಗೋಳಿಕ, ಸಾಮಾಜಿಕ, ರಾಜಕೀಯ, ಭಾಷಿಕ, ಸಾಂಸ್ಕೃತಿಕ ಅಸ್ಮಿತತೆ ಇದೆ. ಹಳೆ ಮೈಸೂರು ಪ್ರಾಂತ್ಯಕ್ಕೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ಪ್ರದೇಶವು ತೀರ ಶೋಚನೀಯ ಸ್ಥಿತಿಯಲ್ಲಿ ಹಿಂದುಳಿದಿದೆ. ಅವುಗಳಲ್ಲಿ ಇಷ್ಟನ್ನು ಪಟ್ಟಿ ಮಾಡಬಹುದೇನೋ.

ಹೈದರಾಬಾದ್ ಕರ್ನಾಟಕದ ಜನತೆಯ ಬಹು ದಿನದ ಕನಸಿಗೆ ಈಗ ರೆಕ್ಕೆ ಬೆಳೆದಿದೆ, ಕಲಂ 371 (ಜೆ) ವಿಧೇಯಕ ರೂಪ ಪಡೆದು ಹಿಂದುಳಿದ ನೆಲಕ್ಕೆ ದಕ್ಕಿದೆ. ಇಲ್ಲಿನ ಜನ ಈ ವಿಧೇಯಕ ಕಂಡು  ಸಂಭ್ರಮಿಸುತ್ತಿದ್ದಾರೆ. ಜನರ, ಹೋರಾಟಗಾರರ ಬಹು ದಶಕಗಳ ನಿರಂತರ ಹೋರಾಟದ ಪ್ರತಿಫಲವಾಗಿ ಕೊನೆಗೂ ಕೇಂದ್ರ ಸರ್ಕಾರವು ಸಂಸತ್ ಅಧಿವೇಶನದಲ್ಲಿ ಕಲಂ 371 (ಜೆ) ವಿಶೇಷ ಸ್ಥಾನಮಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಹಾಗೆ ನೋಡಿದರೆ ಈ ವಿಶೇಷ ಸ್ಥಾನಮಾನದ ಸೌಲಭ್ಯವು ಈ ಪ್ರದೇಶಕ್ಕೆ ಅಷ್ಟು ಸುಲಭದಲ್ಲಿ ದಕ್ಕಿದ್ದಲ್ಲ. ಇದರ ಹಿಂದೆ ಬಹು ದಶಕಗಳ ದೊಡ್ಡದಾದ ಹೋರಾಟದ ಇತಿಹಾಸವೇ ಇದೆ.
ಹೈದರಾಬಾದ್ ಸಂಸ್ಥಾನದಲ್ಲಿ ಮೂರು ಪ್ರಮುಖ ಪ್ರಾಂತಗಳಿದ್ದವು. ಅವುಗಳಲ್ಲಿನ ಈಗಿನ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಮರಾಠವಾಡ (ವಿದರ್ಭ), ಆಂಧ್ರ ಪ್ರದೇಶದ ತೆಲಂಗಾಣ ಹಾಗೂ ಕರ್ನಾಟಕದ ಬೀದರ, ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳು ಒಳಗೊಂಡ ಪ್ರದೇಶ. ಈ ಮೂರು ಪ್ರಾಂತಗಳ ಒಟ್ಟು 16 ಜಿಲ್ಲೆಗಳಿಂದ ಹೈದ್ರಾಬಾದ್ ಸಂಸ್ಥಾನ ರಚನೆಗೊಂಡಿತ್ತು. ಭಾರತಕ್ಕೆ 1947 ನೇ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿತಾದರೂ ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ ಈ ಮೂರು ಪ್ರಾಂತಗಳಿಗೆ ಆ ಭಾಗ್ಯ ಲಭಿಸಲಿಲ್ಲ.
ಇಲ್ಲಿನ ಜನರು ಹೈದರಾಬಾದ್ ರಾಜ್ಯದಿಂದ ವಿಮೋಚನೆ ಹೊಂದಲು ದೊಡ್ಡ ಹೋರಾಟವನ್ನೇ ನಡೆಸಬೇಕಾಗಿ ಬಂದಿತು. ಈ ಹೋರಾಟದಲ್ಲಿ ಸಾವಿರಾರು ಜನರು ಮನೆ ಮಠ, ಜೀವಗಳನ್ನೂ ಕಳೆದುಕೊಂಡರು, ಕೊನೆಗೆ ಭಾರತ ಸರ್ಕಾರದ ಅಂದಿನ ಗೃಹ ಮಂತ್ರಿ ಸರದಾರ ವಲ್ಲಭ ಭಾಯಿ ಪಟೇಲರ ದಿಟ್ಟ ನಿರ್ಧಾರದಿಂದ ಹೈದರಾಬಾದ್ ರಾಜ್ಯದ ಮೇಲೆ ಪೊಲೀಸ್ ಕಾರ್ಯಾಚರಣೆ ನಡೆಸಿ ಸಂಸ್ಥಾನದಿಂದ ಜನರಿಗೆ ಬಿಡುಗಡೆಯ ಭಾಗ್ಯ ಕಲ್ಪಿಸಿ ಅದನ್ನು ಭಾರತದ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು. ಅದನ್ನೇ ಇಂದಿಗೂ ಹೈದರಾಬಾದ್ ಕರ್ನಾಟಕ ವಿಮೋಚನೆ ಎಂದು ಕರೆಯಲಾಗಿದೆ. ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನದ ನಂತರ ಭಾಷಾವಾರು ರಾಜ್ಯಗಳು ರಚನೆಯಾದಾಗ ವಿದರ್ಭವು ಮಹಾರಾಷ್ಟ್ರ ರಾಜ್ಯಕ್ಕೆ, ತೆಲಂಗಾಣವು ಆಂಧ್ರ ಪ್ರದೇಶಕ್ಕೆ, ಹೈದ್ರಾಬಾದ್ ಕರ್ನಾಟಕವು ಆಗಿನ ಮೈಸೂರು ರಾಜ್ಯಕ್ಕೆ ಸೇರಲ್ಪಟ್ಟವು. ಅಭಿವೃದ್ಧಿಯ ದೃಷ್ಟಿಯಿಂದ ತೀರ ಹಿಂದುಳಿದಿದ್ದ ಈ ಪ್ರದೇಶಗಳ ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನ ಸೌಲಭ್ಯ ನೀಡಬೇಕೆಂಬ ಕೂಗು ಎದ್ದಿತು.
ಅದಕ್ಕಾಗಿ ವಿದರ್ಭ ಮತ್ತು ತೆಲಂಗಾಣದಲ್ಲಿ ಹೋರಾಟಗಳು ತೀವ್ರಗೊಂಡಾಗ ಅಂದಿನ ಕೇಂದ್ರ ಸರ್ಕಾರ ಎಚ್ಚೆತ್ತು ಅವುಗಳಿಗೆ ಕಲಂ 371 ವಿಶೇಷ ಸ್ಥಾನಮಾನ ಸೌಲಭ್ಯವನ್ನು ನೀಡಿ ಅಲ್ಲಿನ ಕೃಷಿ, ಉದ್ಯೋಗ, ಕೈಗಾರಿಕೆಗಳ ಸ್ಥಾಪನೆಗೆ ಸಾಕಷ್ಟು ಅನುದಾನವನ್ನು ನೀಡಿತು. ಆದರೆ ಈ ವಿಶೇಷ ಸ್ಥಾನಮಾನವನ್ನು ಹೈದರಾಬಾದ್ ಕರ್ನಾಟಕದ ಜಿಲ್ಲೆಯ ಪ್ರದೇಶಗಳಿಗೆ ಕೇಂದ್ರ ಸರ್ಕಾರ ನೀಡದೆ ತನ್ನ ಮಲತಾಯಿ ಧೋರಣೆ ಅನುಸರಿಸಿದಾಗ ಇಲ್ಲಿನ ಜನರು, ರಾಜಕಾರಣಿಗಳು, ಹೋರಾಟಗಾರರು ಎಚ್ಚೆತ್ತು ವಿದರ್ಭ ಮತ್ತು ತೆಲಂಗಾಣದ ಪರಿಸ್ಥಿತಿಗಿಂತಲೂ ಭಿನ್ನವಿಲ್ಲದ ನಮ್ಮ ಹೈದರಾಬಾದ್ ಕರ್ನಾಟಕಕ್ಕೂ ಆ ಸೌಲಭ್ಯ ನೀಡಬೇಕೆಂದು ಹೋರಾಟ ನಡೆಸುತ್ತಲೇ ಬಂದುದು ಈಗ ಇತಿಹಾಸ. ನಮ್ಮ ಹೋರಾಟಗಳಿಗೆ ಶಕ್ತಿ ತುಂಬುವ ನಾಯಕರ ಕೊರತೆಯೋ, ಇಚ್ಛಾಶಕ್ತಿಯ ಕೊರತೆಯೋ  ಅಥವಾ ಸಮರ್ಥವಾಗಿ ಕೇಂದ್ರ ಸರ್ಕಾರದ ಮುಂದೆ ತನ್ನ ಧ್ವನಿಯನ್ನು ಎತ್ತದ ಕಾರಣವೋ ಈ ಸೌಲಭ್ಯದಿಂದ ಬಹು ದೀರ್ಘಕಾಲದವರೆಗೆ ವಂಚಿತರಾದೆವು.  ಅದರಲ್ಲೂ ಬಹಳ ಮುಖ್ಯವಾಗಿ ಆಳುವ ಪಕ್ಷದ ನಮ್ಮ ನಾಯಕರು ತಮ್ಮ ಸ್ವಹಿತಾಸಕ್ತಿ, ಸರ್ಕಾರದ ಮರ್ಜಿ ಹಿಡಿಯುವ ಕಾರಣದಿಂದ ಅವರುಗಳ ಪ್ರಯತ್ನ ಅಷ್ಟಾಗಿ ಬಲಗೊಳ್ಳಲಿಲ್ಲ. ಮತ್ತೊಂದು ಕಾರಣವೆಂದರೆ ಕೇಂದ್ರದಲ್ಲಿ ಒಂದು ಪಕ್ಷದ ಸರ್ಕಾರವಿದ್ದರೆ, ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರ ಇದ್ದದ್ದು. ಇವೆಲ್ಲವುಗಳ ನಡುವೆಯೂ ಅಲ್ಲಲ್ಲಿ ಪ್ರತಿಭಟನೆಗಳು,  ನಡೆದವು.  ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ ಸಮಿತಿ, ಹೈದರಾಬಾದ್ ಕರ್ನಾಟಕ ಸಂಘರ್ಷ ಸಮಿತಿ ಕಟ್ಟಿಕೊಂಡು ಅನೇಕರು ಹೋರಾಟ ತೀವ್ರಗೊಳಿಸಿದರು. ಮಾಜಿ ಸಚಿವ ವೈಜನಾಥ ಪಾಟೀಲ ಹಾಗೂ ಅನೇಕರು ಹೋರಾಟಕ್ಕೆ ಇಳಿದರು. ನಮ್ಮ ಭಾಗದ ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಖರ್ಗೆ, ಎನ್. ಧರ್ಮಸಿಂಗ್‌ರವರ ಸತತ ಒತ್ತಡ ಹಾಗೂ ಹೋರಾಟಗಳಿಂದ ಕಳೆದ ಅಧಿವೇಶನದಲ್ಲಿ ಕಲಂ 371 (ಜೆ) ಎನ್ನುವ ಹೆಸರಿನಲ್ಲಿ ವಿಶೇಷ ಸ್ಥಾನಮಾನ ತಿದ್ದುಪಡಿ ಮಸೂದೆ ಮಂಡಿಸಿ ಸಂಸತ್ತಿನ ಎರಡೂ ಸದನದಲ್ಲಿ ಒಕ್ಕೊರಲಿಂದ ಪಾಸ್ ಮಾಡಿ ಈ ಭಾಗದ ಕನಸಿಗೆ ಬಣ್ಣದ ಸಂಭ್ರಮ ಮೂಡಿಸಿತು. ಆದರೆ ವಾಸ್ತವ ಇರುವುದು ಇಲ್ಲಿ. ಇನ್ನೇನು ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಲಭಿಸಿತು ನಮಗೆ ಬೇಕಾದ ಎಲ್ಲ ಸೌಲಭ್ಯ ದೊರೆಯುತ್ತದೆ, ನಾವಿನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುವೆವು ಎಂಬ ಭ್ರಮೆಯ ಲೋಕದಲ್ಲಿ ತೇಲಾಡುತ್ತಿರುವುದೇನು ಸುಳ್ಳಲ್ಲ. ಈಗ ನಮಗೆ ದೊರಕುವ 371(ಜೆ) ಕಲಮಿನ ಸ್ವರೂಪ ಏನು, ಅದರಲ್ಲಿ ಯಾವ ಯಾವ ಯೋಜನೆಗಳ ಸೌಲಭ್ಯಗಳು ಸೇರಿವೆ, ಕಾನೂನು ಜಾರಿಗೆ ಏನೇನು ಶಿಷ್ಟಾಚಾರಗಳನ್ನು ಅನುಸರಿಸಬೇಕು, ಈಗಿರುವ ಹೈ.ಕಕ್ಕೆ ಅಭಿವೃದ್ಧಿ ಮಂಡಳಿಯ ಪಾತ್ರವೇನು, ಅದರ ಅಸ್ತಿತ್ವ ಬೇಕೆ ಅಥವಾ ಬೇಡವೇ, ಎಲ್ಲಕ್ಕೂ ಮಿಗಿಲಾಗಿ ಅಭಿವೃದ್ಧಿ ಎಂದರೆ ಯಾವುದು, ಹೇಗೆ ಅದರ ಫಲ ತಲುಪುವುದು? ಎಂಬೆಲ್ಲ ಚಿಂತೆಗಳು  ಇಲ್ಲಿನ ಪ್ರಜ್ಞಾವಂತರಾದಿಯಾಗಿ ಅನೇಕರನ್ನು ಭೂತವಾಗಿ ಕಾಡುತ್ತಿದೆ.
ಹೈದರಾಬಾದ್ ಕರ್ನಾಟಕಕ್ಕೆ ಅದರದ್ದೇ ಆದ ಭೌಗೋಳಿಕ, ಸಾಮಾಜಿಕ, ರಾಜಕೀಯ, ಭಾಷಿಕ, ಸಾಂಸ್ಕೃತಿಕ ಅಸ್ಮಿತತೆ ಇದೆ. ಅವುಗಳ ಸಂರಕ್ಷಣೆ ಈ ಕಾನೂನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಯೋಚಿಸಬೇಕಾದುದೆ. ಹಳೆ ಮೈಸೂರು ಪ್ರಾಂತ್ಯಕ್ಕೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ಪ್ರದೇಶವು ತೀರ ಶೋಚನೀಯ ಸ್ಥಿತಿಯಲ್ಲಿ ಹಿಂದುಳಿದಿದೆ. ಅವುಗಳಲ್ಲಿ ಇಷ್ಟನ್ನು ಪಟ್ಟಿ ಮಾಡಬಹುದೇನೋ.
- ಪ್ರಮುಖವಾಗಿ ಈ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳ ಕೊರತೆ ಬಹಳ ಇದೆ.  ಪ್ರತಿ ವರ್ಷ ಹೈ.ಕ. ಭಾಗದಿಂದ ಲಕ್ಷಾಂತರ ಜನರು ದೂರದ ಊರುಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ.  
- ಇಲ್ಲಿನವರ ಮಕ್ಕಳಿಗೆ  ಉತ್ತಮ ಶಿಕ್ಷಣ, ಕಲಿಕೆಯ ಅವಕಾಶವಿಲ್ಲ. ಈ ಪ್ರದೇಶದಲ್ಲಿ ಸರ್ಕಾರಿ  ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಕೊರತೆ ಬಹಳಷ್ಟಿದೆ. ಇಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಬರಬೇಕು, ಉನ್ನತ ಶಿಕ್ಷಣ ಪಡೆದ ಮಕ್ಕಳಿಗೆ ಉದ್ಯೋಗ ಭರವಸೆ ನೀಡುವ ವ್ಯವಸ್ಥೆಯಾಗಬೇಕು.
- ಸರಿಯಾದ ರಸ್ತೆ, ವಿದ್ಯುತ್ ಸೌಕರ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಜನರ ನೆಮ್ಮದಿಯ ಬದುಕಿಗೆ  ಭರವಸೆ ಮೂಡಿಸುವುದು.
- ಮೂರು ದೊಡ್ಡ ನದಿಗಳು (ಕೃಷ್ಣಾ, ತುಂಗಭದ್ರ, ಭೀಮಾ) ಹಾಗೂ ಚಿಕ್ಕ ನದಿಗಳು ಜಿಲ್ಲೆಯಲ್ಲಿ ಹರಿದು ಹೋಗಿದ್ದರೂ ನೀರಾವರಿ ಸೌಲಭ್ಯ ಇಡೀ ಪ್ರದೇಶಕ್ಕೆ ದೊರೆತಿಲ್ಲ.  ಮುಖ್ಯವಾಗಿ ಭೀಮಾ ನದಿಗೆ ನಮ್ಮ ರಾಜ್ಯದ ಪಾತ್ರದಲ್ಲಿ ಆಣೆಕಟ್ಟು ನಿರ್ಮಾಣವಾಗಬೇಕು, ಚಿಕ್ಕ ಗಾತ್ರದ ನದಿಗಳಿಗೆ ಬ್ಯಾರೇಜ್ ನಿರ್ಮಿಸಿ ಕಿರು ನೀರಾವರಿ ಸೌಲಭ್ಯ ಒದಗಿಸಬೇಕಿದೆ.
- ಹೈ.ಕ. ಪ್ರದೇಶದ ಒಳಗೆ ಮತ್ತು ಹೊರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಕಾರ್ಯಗತಗೊಳ್ಳಬೇಕು.  ಇದರಿಂದ  ವಾಣಿಜ್ಯ ವಹಿವಾಟು ವೃದ್ಧಿಯಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
- ಉದ್ಯೋಗ ಬ್ಯಾಂಕ್ ಸ್ಥಾಪನೆಯಾಗಬೇಕು. ಇದರಿಂದ ಪ್ರತಿಭಾ ಪಲಾಯನ ತಪ್ಪಿಸಲು ಸಾಧ್ಯವಾಗುತ್ತದೆ.
- ಹೈದರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಇಲ್ಲಿನವರಿಗೆ ಉದ್ಯೋಗ (ನೌಕರಿ) ಮೀಸಲಾತಿ ಸೌಲಭ್ಯ ಕಲ್ಪಿಸುವುದಲ್ಲದೆ ಇಲ್ಲಿನವರಿಗೆ ಇತರೆ ಪ್ರದೇಶಗಳಲ್ಲಿ ನೌಕರಿಗೆ ಅರ್ಜಿ ಸಲ್ಲಿಸುವುದಕ್ಕೆ ರಿಜರ್ವೇಶನ್ ಸೌಲಭ್ಯ ನೀಡಬೇಕು.
- ಇವು ಕಾರ್ಯಗತಗೊಂಡಾಗ ಮಾತ್ರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.  ಕೇವಲ ಮಸೂದೆಯಾದ ಮಾತ್ರಕ್ಕೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಈಗ ತುರ್ತಾಗಿ ಆಗಬೇಕಾದದ್ದು ಮಸೂದೆ ಮೊದಲು ಕಾನೂನು ಆಗಬೇಕು. ರಾಜ್ಯ ಪತ್ರದಲ್ಲಿ ಪ್ರಕಟಣೆಗೊಳ್ಳಬೇಕು, ಕಾನೂನು ಜಾರಿ ಬೋರ್ಡ್ ರಚನೆಯಾಗಬೇಕು.  ಅದನ್ನು ಅನುಷ್ಠಾನಕ್ಕೆ ತರುವ ಪ್ರಕ್ರಿಯೆ ನಡೆಯಬೇಕು, ಇಷ್ಟೆಲ್ಲ ಆದಾಗ ಮಾತ್ರ ಕಲಂ 371 (ಜೆ) ವಿಶೇಷ ಸ್ಥಾನಮಾನ ತಿದ್ದುಪಡಿ ಕಾನೂನಿಗೆ ಅರ್ಥವಂತಿಕೆ ಮತ್ತು ಜೀವಂತಿಕೆ ಬರುತ್ತದೆ.

-ಬಿ.ವಿ. ಚಕ್ರವರ್ತಿ, ಸಂಪಾದಕರು
ಶೂದ್ರ ಶಕ್ತಿ ಕನ್ನಡ ಮಾಸ ಪತ್ರಿಕೆ, ಗುಲ್ಬರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement