ನಗ್ರಿ ನಗುನಗುತ್ತಾ ಇರ್ರಿ
ನಗುವಿಗೂ ಏಪ್ರಿಲ್‌ಗೂ ನಿಕಟ ಸಂಬಂಧವಿದೆ. ಏಪ್ರಿಲ್ 1 ಬಂತೆಂದರೆ ಗಂಟು ಮುಖಗಳು ಅರಳುತ್ತವೆ, ಸಡಿಲಗೊಂಡು ನಗು ಬಿರಿಯುತ್ತದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಏಪ್ರಿಲ್ ಒಂದರಂದೇ ನಕ್ಕು, ನಗುವುದನ್ನು ಅವತ್ತೇ ಮರೆಯುತ್ತಿದ್ದಾರೆ. ಮತ್ತೆ ಹನ್ನೊಂದು ತಿಂಗಳು ಅದರತ್ತ ತಿರುಗಿಯೂ ನೋಡುವುದಿಲ್ಲ. ಅದೇ..ನಮ್ಮ ಕನ್ನಡ ರಾಜ್ಯೋತ್ಸವವನ್ನು ನವೆಂಬರ್‌ನಲ್ಲಿ ಧಾಂ ಧೂಂ ಎಂದು ಮಾಡಿ ಮರೆತುಬಿಡುವಂತೆ.
'ನಗು' ಯಾರಲ್ಲಿ ಇದೆ? ಎಲ್ಲಿ ಇಲ್ಲ? ಏನೆಲ್ಲ ಆಗಿದೆ ಎಂದು ವೀಕ್ಷಿಸಿದರೆ ಕೆಲವು ಸಂಗತಿಗಳು ರೀಲ್‌ನಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ನಗರದಲ್ಲಿರೋ ನಗರಿಗರಿಗೆ 'ನಗು' ಅಂದ್ರೆ ಏನು? ಅದು ಹೇಗಿರುತ್ತೆ? ನಗುವುದು ಹೇಗೆ? ಹೇಗೆ ನಗಬೇಕು? ಯಾವುದಕ್ಕೆ ಎಷ್ಟು ನಗಬಹುದು? ಹೇಗೆ ಹೇಗೆಲ್ಲಾ ನಕ್ಕು ಆರೋಗ್ಯ ಕಾಪಾಡಿಕೊಳ್ಳಬಹುದು? ಎಂದು ನಗೆಬುಗ್ಗೆಯ ಶಿಬಿರ ಏರ್ಪಡಿಸಿ ನಂತರ ಸಮಾರೋಪದ ದಿನ ಅಂದ್ರೆ ಏಪ್ರಿಲ್ ಒಂದರಂದು ಪ್ರಾಕ್ಟಿಕಲ್ಲೋ ಎಂಬಂತೆ ನಗಿಸಿ, ಕರೆಕ್ಟಾಗಿ ನಗುವುದು ಕಲಿತಿದ್ದಾರೆ ಅಂತ ಖಾತ್ರಿ ಪಡಿಸಿಕೊಂಡು ಕಳಿಸಬೇಕಾಗುತ್ತೇನೋ?
ನಗ್ರೀ ಸ್ವಾಮೀ, ನಗೋದರಿಂದ ಎಲ್ಲಾ ನರಗಳೂ ಹಿಗ್ಗಿ 'ನರ'ನ ಆರೋಗ್ಯ ಸುಧಾರಿಸುತ್ತೆ. ನಗಬೇಕು ಆದ್ರೆ ನಗೆಪಾಟಲಾಗಬಾರದು, ಮತ್ತೊಬ್ಬರನ್ನ ಚುಚ್ಚಿ, ನೋಯಿಸಿ ನಾವು ನಗಬಾರದು. ಕೆಲವರೋ ಹಾಸ್ಯ ಮಾಡಲು ಹೋಗಿ ತಾವೇ ಹಾಸ್ಯಕ್ಕೆ ಗುರಿಯಾಗ್ತಾರೆ. ಇನ್ನು ಸಂಸಾರದಲ್ಲಿ ನಗುವಿಗೆ ಯಾವ ಸ್ಥಾನ ಇರುತ್ತೆ ಅಂದ್ರೆ, ಗಂಡ ಅನ್ನೋ ಪ್ರಾಣಿ ಮನೇಲಿ ಹೆಂಡತಿ ಮಕ್ಕಳಿಗೆ ಎಲ್ಲಿ ಸದರ ಆಗ್ತೀನೋ ಅಂತ ಹೊರಗಷ್ಟೇ ನಗೋಣ ಅಂತ ಇರ್ತಾನೆ.
ಆಫೀಸ್ನಲ್ಲೋ ಬಾಸ್ ಮುಂದೆ ನಗೋಹಾಗಿಲ್ಲ, ಹಲ್ಲು ಗಿಂಜಬೇಕಷ್ಟೆ. ಆ ಬಾಸೋ ನಗುನಗುತಾ ಇದ್ರೆ ಸ್ಟಾಫ್ ಜೊತೆ ಎಲ್ಲಿ ಸದರ ಆಗ್ತೀನೋ ಬೋನಸ್ ಎಲ್ಲಿ ಕೇಳ್ಬಿಡ್ತಾರೋ ಅನ್ನೋ ಭಯದಲ್ಲಿ ಬಿಗುವಿನ, ಸಿಡುಕಿನ ಮುಖ ಹೊತ್ತೇ ಇರ್ತಾನೆ. ಇನ್ನು ಫ್ರೆಂಡ್ಸ್‌ಗಳೋ ಒಬ್ಬರಿಗೊಬ್ಬರು ಹಾಸ್ಯ ಮಾಡ್ಕೊಳೋ ಅಷ್ಟು ಪುರುಸೊತ್ತೂ ಇರೊಲ್ಲ. ಇದ್ರೂ ಅದೇ ಮನೆ ವಿಚಾರ. ಇನ್ನು ಮಕ್ಕಳಿಗೆ ಮನೆಯಲ್ಲಿ ಅಪ್ಪ - ಅಮ್ಮನ ಭಯ, ಸ್ಕೂಲಲ್ಲಿ ಟೀಚರ ಹೆಡ್‌ಮೇಡಂ ಭಯ. ಟ್ಯೂಷನ್‌ನಲ್ಲಿ ಮತ್ತದೇ ಮಿಸ್ಸು, ಎಲ್ಲೆಡೆ ಸೈಲೆನ್ಸ್. ಗಪ್‌ಚುಪ್. ಹಾಗೂ ಯಾವಾಗಲಾದ್ರೂ ನಗಲೇಬೇಕು ಅಂದ್ರೆ ಕಿಸಕ್ ಎಂದು ಕಿಸೀಬಹುದು ಅಷ್ಟೆ. ಒಂದರೆಕ್ಷಣದಲ್ಲೇ ಮಿಂಚಿ ಮಾಯ ಆಗಬೇಕು.
ಹಾಗಾದರೆ ನಗು ಎಲ್ಲಿದೆ? ಯಾಕ್ ಹೀಗೆಲ್ಲಾ ಬಿಗುಮಾನದಲ್ಲಿ, ಸೆಡುವಲ್ಲಿ ಜೀವನ ಸಾಗಿಸಬೇಕಾಗಿದೆ ಅನ್ನೋದೇ ತಿಳಿಯುತ್ತಿಲ್ಲ. ಸಾಹಿತ್ಯ ಭಂಡಾರದಲ್ಲಿ 'ಹಲ್ಮಡಿ ಶಾಸನ' ಅನ್ನೋ ಪದ ಕೇಳಿದ ನೆನಪು. ಆ ಪದದಂತೆ ಇನ್ನೊಂದು ಪದ ಹೊಳೆಯುತ್ತೆ ಅದೇ 'ಹಲ್ಬಿಡಿ ಶಾಸನ'. ಹೀಗಂತ ಸರ್ಕಾರದಿಂದ ಶಾಸನ ಹೊರಡಿಸಬೇಕು. ಹಲ್ಲು ಬಿಡೋದು ಅಂದ್ರೆ ಕುದುರೆ ಹಲ್ಲು ಬಿಟ್ಟು ಕೆನೆಯೋ ಥರ ಅಲ್ಲ!
ಎನಿ ಹೌ 'ಫೂಲ್ಸ್ ಡೇ'ಯಲ್ಲಿ ಒಮ್ಮೆಯಾದರೂ ಫೂಲ್ ಆಗಿ ಪರವಾಗಿಲ್ಲ. ಇಯರ್ ಫುಲ್ ಫೂಲ್ ಆಗಬಾದು. ಚಾಪ್ಲಿನ್ ಹೇಳೋ ಥರ ತನ್ನನ್ನೇ ತಾನು ವ್ಯಂಗ್ಯ ಮಾಡಿಕೊಂಡು ಇತರರಿಗೆ ಹಾಸ್ಯರಸಾಯನ ಉಣಿಸಬೇಕು. ಅದರಿಂದ ತಾನು ಹರ್ಷಿಸಬೇಕು.
ನಗ್ರಿ, ನಗಿಸ್ರಿ, ನಗ್ತಾನೇ ಇರ್ರಿ, ಕಷ್ಟಗಳು ಎಲ್ಲರಿಗೂ ಎಂದೆಂದಿಗೂ ಇದ್ದೇ ಇರುತ್ತೆ. ಬಂದೇ ಬರುತ್ತೆ. ಇದರ ಮಧ್ಯೆಯೂ ನಗುವನ್ನು ಹಾಸು ಹೊಕ್ಕಾಗಿಸಿಕೊಂಡು ಸುಖ ಕಂಡುಕೊಳ್ಳಿ.
-ಸಂಕೇಶ್ ಗುರುದತ್ತ, ಕನ್ನಡಪ್ರಭ