ಸರ್ಕಾರಿ ಕಚೇರಿಗಳಲ್ಲಿ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳನ್ನು ಯಾರಾದರೂ ಗಣ್ಯರು ಭೇಟಿಯಾದರೆ ಸೌಜನ್ಯಕ್ಕಾಗಿ ಕಾಫಿ, ಚಹಾ, ತಂಪು ಪಾನೀಯ ನೀಡುತ್ತಾರೆ. ಆದರೆ ಮೈಸೂರಿನಲ್ಲಿರುವ ಸರ್ಕಾರಿ ಕಚೇರಿಯೊಂದರ ಮಖ್ಯಸ್ಥರು ಯಾರೇ ಗಣ್ಯರು ಕಚೇರಿಗೆ ಹೋದರೂ ದೇಶಾವರಿ ನಗೆ ಬೀರುತ್ತಾ! ನಾನು ಕಾಫಿ, ಟೀ ಸ್ವೀಕರಿಸುವುದಿಲ್ಲ. ಏನಿದ್ದರೂ ಡ್ರೈಫ್ರೂಟ್ಸ್ ಮಾತ್ರ. ತೆಗೆದುಕೊಳ್ಳಿ ಪ್ರಸಾದ ಎಂದು ಬಂದವರ ಎದುರಿಗೆ ಡ್ರೈಫ್ರೂಟ್ಸ್ ಪೊಟ್ಟಣ ಇಡುತ್ತಾರೆ. ನಾವು ಕಾಫಿ, ಟೀ ಕೇಳಲಿಲ್ಲ. ಹೀಗಿದ್ದರೂ ಈ ಮನುಷ್ಯ ಪ್ರಸಾದ ಎಂದು ಹೋದವರಿಗೆಲ್ಲಾ ಡ್ರೈಫ್ರೂಟ್ಸ್ ನೀಡುತ್ತಾನಲ್ಲ ಎಂದು ಹೋದವರು ಹೊರಬಂದು ಬಿದ್ದು ಬಿದ್ದು ನಗುತ್ತಾರೆ.
ದೊಡ್ಡ ಗೌಡರ ಕಾವೇರಿ,ಮರಿ ಗೌಡರ ವರಿ..!
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮೈಸೂರು ಜಿಲ್ಲೆಯ ಮುಖಂಡರಾದ ಮಾಜಿ ಸಚಿವ ಜಿ.ಟಿ. ದೇವೇಗೌಡರನ್ನು ಬಿಜೆಪಿಗೆ ಹೋಗುವ ಮೊದಲು ನಮ್ಮ ಮರಿದೇವೇಗೌಡ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು. ಇದೀಗ ಜಿ.ಟಿ. ದೇವೇಗೌಡ ಜೆಡಿಎಸ್‌ಗೆ ಮರಳಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೋಬಳಿ ಕೇಂದ್ರವಾದ ಜಯಪುರದಲ್ಲಿ ಕಳೆದ ವಾರ ಕಾರ್ಯಕರ್ತರ ಸಮಾವೇಶ ಹಾಗೂ ಚುನಾವಣಾ ಪ್ರಚಾರ ಸಭೆ ಏರ್ಪಡಿಸಿದ್ದರು. ಸಭೆಯನ್ನು ಉದ್ಘಾಟಿಸಿದ ದೊಡ್ಡ ಗೌಡರು (ದೇವೇಗೌಡ) ಅಪ್ಪಿತಪ್ಪಿಯೂ ಪಕ್ಷದ ಪರ ಮತ ಯಾಚಿಸಲಿಲ್ಲ. ಬದಲಿಗೆ ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ತಮಗೆ ಚಾಮುಂಡೇಶ್ವರಿ ದೇವಿ ಶಕ್ತಿ ನೀಡಿದರೆ ಅನ್ಯಾಯವನ್ನು ಸರಿಪಡಿಸುವುದಾಗಿ ಹೇಳಿದರು. ಇದರಿಂದ 'ವರಿ'ಯಾಗಿದ್ದು ಮಾತ್ರ ಮರಿದೇವೇಗೌಡ(ಜಿ.ಟಿ. ದೇವೇಗೌಡ)ರಿಗೆ. ದೊಡ್ಡಗೌಡರು ನೇರವಾಗಿ ಮತ ಕೇಳಲಿಲ್ಲ. ಬದಲಿಗೆ ಶಕ್ತಿ ನೀಡಿದರೆ ಎಂದರೇ ನಮ್ಮ ಪಕ್ಷವನ್ನು ಗೆಲ್ಲಿಸಿ, ಅಧಿಕಾರಕ್ಕೆ ತಂದರೇ ಎಂಬರ್ಥ ಎಂದುಕೊಂಡು ಸಮಾಧಾನಪಟ್ಟುಕೊಂಡರಂತೆ.
ನಾಗರಾಜ ಶೆಟ್ಟರ್ ಉಸಿರು ನಿಂತೋಯ್ತಾ?
ಜೆಡಿಎಸ್ ಕಾರ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಸಹಾಯಕನಾಗಿ ಉಸಿರು ಇರುವವರೆಗೆ ಕೆಲಸ ಮಾಡುತ್ತೇನೆ. ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಎರಡು ತಿಂಗಳ ಹಿಂದೆ ಬಿ. ನಾಗರಾಜ ಶೆಟ್ಟಿ ಜೆಡಿಎಸ್ ಸೇರ್ಪಡೆ ದಿನ ಹೇಳಿದ್ದರು. ಆದರೆ, ಹಾಗೆ ಹೇಳಿ 2 ತಿಂಗಳೊಳಗೆ ಮರಳಿ ಬಿಜೆಪಿ ಗೂಡಿಗೆ ಬಂದಿದ್ದಾರೆ. ಆದರೆ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಸುಶೀಲ್ ನರೋನ್ಹಾಗೆ ಸಂಶಯ. ಉಸಿರು ಇರುವವರೆಗೆ ನಾಗರಾಜ ಶೆಟ್ಟರು ಕುಮಾರಸ್ವಾಮಿ ಪಿಎ ಕೆಲಸ ಮಾಡುತ್ತೇನೆ ಎಂದು ಹೇಳಿದವರು ಈಗ ಏಕೆ ಬಿಟ್ಟರು? ಅವರ ಉಸಿರು ನಿಂತೋಯ್ತಾ ಎಂದು ಪ್ರೆಸ್‌ಕ್ಲಬ್‌ನಲ್ಲಿ ಪ್ರಶ್ನೆ ಕೇಳಿದಾಗ ಉತ್ತರಿಸಲು ಆಗ ನಾಗರಾಜ ಶೆಟ್ಟರು ಜೆಡಿಎಸ್‌ನಲ್ಲಿ ಇರಲಿಲ್ಲ, ಬಿಜೆಪಿ ಮನೆ ಬಾಗಿಲು ತಟ್ಟುತ್ತಿದ್ದರು.
ಲಾಬಿ ಮಾಡಲ್ಲ ಎಂದವರುಪ್ರತಿಜ್ಞೆಯನ್ನೇ ಮುರಿದರು!
ಸ್ಥಳೀಯಾಡಳಿತ ಚುನಾವಣೆಯಲ್ಲಿ ಗೆದ್ದ ಹುಮ್ಮಸ್ಸಿನಲ್ಲಿ ಕಾಂಗ್ರೆಸಿಗರು ಇತ್ತೀಚೆಗೆ ಮಂಗಳೂರಲ್ಲಿ ವಿಜಯೋತ್ಸವ ಆಚರಿಸಿದ್ದರು. ಗೆಲವು ಸಾಧಿಸಿದ ಕಾಂಗ್ರೆಸ್ ಸದಸ್ಯರಿಗೆ ಸಾಮೂಹಿಕ ಪ್ರತಿಜ್ಞೆ ಬೋಧಿಸಲಾಗಿತ್ತು. ಹಾಗೆಯೇ ವಿಧಾನಸಭೆಗೆ ಟಿಕೆಟ್ ಆಕಾಂಕ್ಷಿಗಳಿಗೂ ಪ್ರತಿಜ್ಞಾ ಬೋಧನೆ ನಡೆದಿತ್ತು. 'ನಾನು ಟಿಕೆಟ್‌ಗಾಗಿ ಲಾಬಿಗೆ ಮುಂದಾಗುವುದಿಲ್ಲ, ಟಿಕೆಟ್ ಸಿಗದಿದ್ದರೆ ಪಕ್ಷ ವಿರೋಧಿ ಚಟುವಟಿಕೆ ಮಾಡುವುದಿಲ್ಲ, ಪಕ್ಷವನ್ನು ತೊರೆಯುವುದೂ ಇಲ್ಲ' ಎಂದು ಆಕಾಂಕ್ಷಿಗಳು ಕೈ ಚಾಚಿ ಪ್ರತಿಜ್ಞೆ ಉಸುರಿದ್ದರು. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಪ್ರತಿಜ್ಞೆ ಬೋಧಿಸಿದ್ದರು. ಪ್ರತಿಜ್ಞಾ ವಿಧಿಯಿಂದಾಗಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಆಟಾಟೋಪಕ್ಕೆ ಕಡಿವಾಣ ಬೀಳಬಹುದು ಎಂದು ಗ್ರಹಿಸಿದ್ದೇ ಬಂತು. ಆದರೆ ಹಾಗಾಗಲಿಲ್ಲ. ಅದರ ಬೆನ್ನಲ್ಲೇ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸುದ್ದಿಗೋಷ್ಠಿಯಲ್ಲಿ ಪ್ರತಿಜ್ಞೆಗೂ ಟಿಕೆಟ್ ಆಕಾಂಕ್ಷೆಗೂ ಯಾವುದೇ ಸಂಬಂಧ ಇಲ್ಲ ಎಂಬುದು ಗೊತ್ತಾಯ್ತು. ಪುತ್ತೂರಿನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸುಳ್ಯದ ಗೌಡ ಸಮಾಜದ ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ದೇವರಾಜ್ ಹಾಗೂ ದಿವ್ಯಪ್ರಭಾ ಕೆಪಿಸಿಸಿಗೆ ಅರ್ಜಿ ಗುಜರಾಯಿಸಿದ್ದರು. ಇದನ್ನು ಸುದ್ದಿಗೋಷ್ಠಿಯಲ್ಲಿ ಹೇಳುತ್ತಿದ್ದರು. ಆಗ ಪತ್ರಕರ್ತರೊಬ್ಬರು, ಟಿಕೆಟ್‌ಗಾಗಿ ಲಾಬಿ ಮಾಡುವುದಿಲ್ಲ ಎಂದು ಮೊನ್ನೆ ಪ್ರತಿಜ್ಞೆ ಸ್ವೀಕರಿಸಿದ್ದನ್ನು ಮರೆತಿರಾ ಎಂದು ಪ್ರಶ್ನಿಸಿದಾಗ 'ನಾವ್ಯಾರೂ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಸ್ವೀಕರಿಸಿಲ್ಲ' ಎಂದು ಬಿಟ್ಟರು!
ಯಾಮಾರಿಸಲು ಹೋಗಿ ಛೀಮಾರಿ ಹಾಕಿಸಿಕೊಂಡರು!
ಸಾಮಾನ್ಯವಾಗಿ ನ್ಯಾಯಾಲಯಗಳಿಗೆ ವಿಚಾರಣೆಗೆ ಹೋಗುವವರು ಪಾಟೀ ಸವಾಲಿನಲ್ಲಿ ಏನೇ ಪ್ರಶ್ನೆ ಕೇಳಿದರೂ ನನಗೆ ಗೊತ್ತಿಲ್ಲ. ನನಗೆ ನೆನಪಿಲ್ಲ ಎಂದೇ ಹೇಳಿ ಯಾಮಾರಿಸಲು ಯತ್ನಿಸುತ್ತಾರೆ. ಕಳೆದ ವಾರ ಮೈಸೂರಿನಲ್ಲಿಯೂ ಅದೇ ರೀತಿಯಾಯ್ತು. ಜನಪ್ರತಿನಿಧಿಯೊಬ್ಬರು ಪ್ರಕರಣವೊಂದರ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆಲ್ಲಾ ಗೊತ್ತಿಲ್ಲ, ಗೊತ್ತಿಲ್ಲ, ಗೊತ್ತಿಲ್ಲ... ಎಂದೇ ಹೇಳುತ್ತಿದ್ದರು. ಇದರಿಂದ ಕೆರಳಿದ ನ್ಯಾಯಾಧೀಶರು, 10 ವರ್ಷಗಳ ಹಿಂದೆ ಆಗಿದ್ದರೆ ಪರವಾಗಿಲ್ಲ. ನೆನಪಿರಲಿಲ್ಲ ಎಂದು ಹೇಳಬಹುದು. ಮೊನ್ನೆ ಮೊನ್ನೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಏನಿದೆ ಎಂಬುದು ಗೊತ್ತಿಲ್ಲ ಎನ್ನುತ್ತೀದ್ದೀರಿ. ಹಾಗಾದರೇ ನೀವು ಜನಪ್ರತಿನಿಧಿಯಾಗಿ ಜವಾಬ್ದಾರಿಯಿಂದ ಯಾವ ರೀತಿ ಕಾರ್ಯನಿರ್ವಹಿಸಿದ್ದೀರಿ. ಪ್ರಮಾಣಪತ್ರ ತರಿಸಲೇನು. ನ್ಯಾಯಾಲಯದ ಅಧಿಕಾರ ತೋರಿಸಲೇನು ಎಂದು ತರಾಟೆಗೆ ತೆಗೆದುಕೊಂಡಾಗ ಯಾಮಾರಿಸಲು ಹೋದ ಆ ಜನಪ್ರತಿನಿಧಿ ತಲೆಬಗ್ಗಿಸಿ ನಿಂತರು. ನ್ಯಾಯಾಲಯದಲ್ಲಿ ಎಂದಿನಂತೆ ದಿನಾಂಕ ನಿಗದಿಪಡಿಸಿ ಕಳುಹಿಸುತ್ತಾರೆ ಎಂದು ತಮ್ಮ ಜತೆಯಲ್ಲಿ ಕರೆದುಕೊಂಡು ಬಂದಿದ್ದ ಹತ್ತಾರು ಬೆಂಬಲಿಗರ ಎದುರೇ ನ್ಯಾಯಾಧೀಶರಿಂದ ತರಾಟೆಗೆ ಒಳಗಾದ ಆ ವ್ಯಕ್ತಿ ಅಯ್ಯೋ.. ಎಂಥಾ ಎಡವಟ್ಟಾಯ್ತಲ್ಲ ಎಂದು ಪೇಚಾಡಿಕೊಂಡರು.
-ನಂಬಿರಾಜ್