ಅಂಕಣಗಳು

ಒಂದು ಬಾಟಲ್ ಒಲವು...

'ದೇವರೇ, ಎಮರ್ಜೆನ್ಸಿ! ನನಗೆ ನಿನ್ನ ಸಹಾಯ ಬೇಕು, ಪ್ಲೀಸ್ ಹೆಲ್ಪ್ ಮಿ...

'ದೇವರೇ, ಎಮರ್ಜೆನ್ಸಿ! ನನಗೆ ನಿನ್ನ ಸಹಾಯ ಬೇಕು, ಪ್ಲೀಸ್ ಹೆಲ್ಪ್ ಮಿ...' ಅವನು ಪ್ರಾರ್ಥನೆ ಮುಗಿಸಿ ಕಣ್ಣು ತೆರೆದು ನೋಡುತ್ತಾನೆ, ಟೀಚರ್ ಅವನತ್ತಲೇ ಅನುಮಾನದ ದೃಷ್ಟಿಯಿಂದ ಹೆಜ್ಜೆ ಇಡುತ್ತಿದ್ದಾರೆ!


ತರಗತಿಯ ವೇಳೆ 9 ವರ್ಷದ ಹುಡುಗನೊಬ್ಬನಿಗೆ ಅಚಾನಕ್ಕಾಗಿ ತನ್ನ ಪ್ಯಾಂಟ್ ಒದ್ದೆಯಾಗಿರುವುದರ ಅರಿವಾಯಿತು. ಇದೆಲ್ಲ ಹೇಗಾಯಿತು ಅಂತ ಅವನಿಗೆ ತಿಳಿಯಲೇ ಇಲ್ಲ. ಹಿಂದೆ ಅವನೆಂದೂ ಹೀಗೆ ಮೂತ್ರ ಮಾಡಿಕೊಂಡಿರಲಿಲ್ಲ. ಗೆಳೆಯರಿಗೆಲ್ಲ ಈ ವಿಷಯ ಗೊತ್ತಾದರೆ ತುಂಬಾ ತಮಾಷೆ ಮಾಡ್ತಾರೆ, ಅದರಲ್ಲೂ ಹುಡುಗಿಯರಿಗೆ ಗೊತ್ತಾದರಂತೂ ಜೀವನ ಪರ್ಯಂತ ತನ್ನೊಂದಿಗೆ ಮಾತನಾಡುವುದನ್ನೇ ಬಿಟ್ಟುಬಿಡ್ತಾರೆ ಎಂಬ ಭಯ ಅವನಿಗೆ ಕಾಡತೊಡಗಿತು. ಇನ್ನೇನು ಹೃದಯಾಘಾತವೇ ಆಗುತ್ತದೇನೋ ಎನ್ನುವಷ್ಟು ಪುಕುಪುಕು ಅವನೆದೆಯಲ್ಲಿ! ಏನು ಮಾಡಬೇಕೋ ತೋಚದೆ ಕಡೆಗೆ ತಲೆ ಕೆಳಗೆ ಹಾಕಿ, ಕೈ ಜೋಡಿಸಿ ದೇವರನ್ನು ಪ್ರಾರ್ಥಿಸತೊಡಗಿದ-'ದೇವರೇ, ಎಮರ್ಜೆನ್ಸಿ! ನನಗೆ ನಿನ್ನ ಸಹಾಯ ಬೇಕು. ನಾನು ಸುಸು ಮಾಡ್ಕೊಂಡಿರೋದು ಎಲ್ಲರಿಗೂ ಗೊತ್ತಾದ್ರೆ ನಾಚಿಕೆಯಿಂದ ಸತ್ತೇ ಹೋಗ್ತೀನಿ. ಪ್ಲೀಸ್ ಹೆಲ್ಪ್ ಮಿ...' ಅವನು ಪ್ರಾರ್ಥನೆ ಮುಗಿಸಿಕಣ್ಣು ತೆರೆದು ನೋಡುತ್ತಾನೆ, ಟೀಚರ್ ಅವನತ್ತಲೇ ಅನುಮಾನದ ದೃಷ್ಟಿಯಿಂದ ಹೆಜ್ಜೆ ಇಡುತ್ತಿದ್ದಾರೆ! ಅವರು ಹತ್ತಿರಾಗುತ್ತಿದ್ದಂತೆಯೇ ಅವನ ಹೃದಯ ಬಡಿತವೂ ಹೆಚ್ಚಾಯಿತು. ಅಷ್ಟರಲ್ಲೆ ಆ ಹುಡುಗನ ಪಕ್ಕದಲ್ಲಿ ಕುಳಿತವನು ವಾಟರ್‌ಬಾಟಲ್ ಎತ್ತಿಹಿಡಿದು ನೀರು ಕುಡಿಯತೊಡಗಿದ. ಆದರೆ ಅಚಾನಕ್ಕಾಗಿ ಬಾಟಲಿ ಅವನ ಕೈಯಿಂದ ಜಾರಿಬಿಟ್ಟಿತು. ಅವನ ಕೈಯಿಂದ ಜಾರಿದ ಬಾಟಲ್ ನೇರವಾಗಿ ಸುಸು ಮಾಡಿಕೊಂಡವನ ಚೆಡ್ಡಿಯ ಮೇಲೆ ಬಿದ್ದುಬಿಟ್ಟಿತು.
ಸುಸು ಮಾಡಿಕೊಂಡವನಿಗೆ ಒಳಗೊಳಗೇ ಖುಷಿ. 'ದೇವರೇ ಸಹಾಯ ಮಾಡಿದ್ದಕ್ಕೆ ಥ್ಯಾಂಕ್ಸ್ ಅಪ್ಪ!' ಎಂದು ಅಂದುಕೊಳ್ಳುತ್ತಲೇ ಪಕ್ಕದಲ್ಲಿ ಕುಳಿತವನ ಮೇಲೆ ರೇಗಿದಂತೆ ನಟಿಸಿದ. ಟೀಚರ್ ನೀರು ಚೆಲ್ಲಿದ ಹುಡುಗನನ್ನು ಚೆನ್ನಾಗಿ ಬೈದು, ಸುಸು ಮಾಡಿಕೊಂಡ ಹುಡುಗನನ್ನು ಬಟ್ಟೆ ಬದಲಾಯಿಸಲು ಬಾತ್‌ರೂಮ್‌ಗೆ ಕಳುಹಿಸಿದರು.
ಶಾಲೆ ಮುಗಿದು ಮನೆಗೆ ಹೋಗುತ್ತಿರುವಾಗ ಆ ಹುಡುಗ ತನ್ನ ಮೇಲೆ ನೀರು ಚೆಲ್ಲಿದ ಗೆಳೆಯನನ್ನು ಕೇಳಿದ:
'ನಾನು ಸುಸು ಮಾಡಿಕೊಂಡಿದ್ದು ನಿನಗೆ ಗೊತ್ತಿತ್ತಲ್ವಾ?'
'ಹೂಂ! ನಾನು ನಿನ್ನಂತೆ ಒಂದೊಂದು ಸರ್ತಿ ಗೊತ್ತಿಲ್ದೇ ಮಾಡ್ಕೊಂಬಿಟ್ಟಿರ್ತೀನಿ. ಅದಕ್ಕೆ ನಿನಗೆ ಸಹಾಯ ಮಾಡ್ಬೇಕು ಅನ್ನಿಸಿ ಹಾಗೆ ಮಾಡಿದೆ...' ಎಂದು ಅವನು ನಕ್ಕ.
ನೀತಿ: ನಮಗೆಲ್ಲರಿಗೂ ಜೀವನದಲ್ಲಿ ಕಷ್ಟಗಳು ಎದುರಾಗಿರುತ್ತವೆ. ಎದುರಿನ ವ್ಯಕ್ತಿ ಕಷ್ಟಕ್ಕೆ ಸಿಲುಕಿದಾಗ, ಅವನನ್ನು ಅಣುಕಿಸುವುದನ್ನು ಬಿಟ್ಟು...ನಾವು ಆ ಪರಿಸ್ಥಿತಿಯಲ್ಲಿದ್ದಾಗ ಅನುಭವಿಸಿದ ಕಷ್ಟವನ್ನು ನೆನಪಿಸಿಕೊಳ್ಳಬೇಕು. ಸಾಧ್ಯವಾದರೆ ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದವನ ಸಹಾಯಕ್ಕೆ ಮುಂದಾಗಬೇಕು. ನಿಮಗೆ ಸಹಾಯ ಮಾಡುವಂತಹ ಶಕ್ತಿಯನ್ನು ಕರುಣಿಸಿದ್ದಕ್ಕಾಗಿ ದೇವರಿಗೆ ಕೃತಜ್ಞರಾಗಿರಿ.
ಟೈಮು ಯಾವಾಗ್ಲೂ ಒಂದೇ ಥರ ಇರಲ್ಲ!
ಎಂಜಾಯ್ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಕಾಲೇಜಿಗೆ ಬಂದಿದ್ದವನು ಪರಮೇಶ್ವರ. ಪಿತ್ರಾರ್ಜಿತವಾಗಿ ಬಂದಿದ್ದ ಸಂಪತ್ತು ಮತ್ತು ಆಸ್ತಿ ಮೂರು ತಲೆಮಾರಿಗೆ ಆಗುವಷ್ಟಿತ್ತು. ಹಾಗಾಗಿ ಅವನು ಭವಿಷ್ಯದ ಬಗ್ಗೆ ಯೋಚಿಸುತ್ತಿರಲಿಲ್ಲ, ಶ್ರದ್ಧೆಯಿಂದ ಓದುತ್ತಲೂ ಇರಲಿಲ್ಲ. ಇದೇ ಕಾರಣಕ್ಕೆ ಡಿಗ್ರಿ ಮೊದಲ ವರ್ಷದಲ್ಲಿಯೇ ಎರಡು ಬಾರಿ ಡುಮ್ಕಿ ಹೊಡೆದಿದ್ದ. ಇಷ್ಟಾದರೂ, ಆತ ಬುದ್ಧಿ ಕಲಿತಿರಲಿಲ್ಲ. ತನ್ನಂತೆಯೇ ಶೋಕಿ ಮಾಡಲು ಬಂದಿದ್ದ ಹುಡುಗರ ಹಿಂಡಿನೊಂದಿಗೆ ಅಡ್ಡಾಡಿಕೊಂಡು ಆರಾಮಾಗಿದ್ದ.
ಓದಿನಲ್ಲಿ ಹಿಂದಿದ್ದರೇನಂತೆ? ಪರಮೇಶ್ವರ ಯಾವ ಹೀರೋಗೂ ಕಡಿಮೆ ಇಲ್ಲದಂಥ ಪರ್ಸನಾಲಿಟಿ ಹೊಂದಿದ್ದ. ಜೊತೆಗೆ ಅವನ ಬಳಿ ಹೇರಳ ಹಣವಿತ್ತು. ಈ ಕಾರಣದಿಂದ ಅವನ ಹಿಂದೆ ಹುಡುಗಿಯರು ಇದ್ದೇ ಇರುತ್ತಿದ್ದರು. 'ನಾನು ಲವ್ ಮಾಡುವುದು ನಿಜ. ಆದರೆ ನನ್ನದೇನಿದ್ರೂ ಟೈಂಪಾಸ್ ಲವ್. ಇಷ್ಟವಿದ್ದಷ್ಟು ದಿನ ಜೊತೆಗಿರೋಣ, ಆದ್ರೆ ಮದುವೆಯಾಗೋಣ' ಎಂಬರ್ಥದ ಮಾತುಗಳು. ದಯವಿಟ್ಟು ಬೇಡ. ಅಂಥ ಮನೋಭಾವ ಹೊಂದಿರುವವರು ನನ್ನನ್ನು ಮಾತಾಡಿಸುವುದೇ ಬೇಡ ಎಂದು ಪರಮೇಶ್ವರ ನೇರವಾಗಿ ಹೇಳಿಬಿಟ್ಟಿದ್ದ. ಹಾಗಾಗಿ, ಅವನಂಥದೇ ಮನೋಭಾವದಲ್ಲಿ ಬದುಕುವ ಹುಡುಗಿಯರು ಅವನ ಫ್ರೆಂಡ್ಸ್ ಆಗುತ್ತಿದ್ದರು. ಆದರೆ, ಅವರು ಸೀರಿಯಸ್ಸಾಗಿ ಓದುತ್ತಿದ್ದುದರಿಂದ ಪ್ರತಿವರ್ಷವೂ ಪಾಸ್ ಆಗುತ್ತಿದ್ದರು. ಒಮ್ಮೆ ಸೀನಿಯರ್ ಅನ್ನಿಸಿಕೊಂಡ ಮೇಲೆ ಒಂಥರಾ ಆಟೊಮ್ಯಾಟಿಕ್ ಆಗಿ ಆ ಹುಡುಗಿಯರು ಸಂಬಂಧವನ್ನು ಕಡಿದುಕೊಳ್ಳುತ್ತಿದ್ದರು. ಇದರಿಂದ ಪರಮೇಶ್ವರನಿಗೆ ಬೇಜಾರಾಗುತ್ತಿರಲಿಲ್ಲ. ಅವಳು ಹೋದ್ರೆ ಹೋಗ್ಲಿ, ಅವಳಿಗಿಂತ ಚೆಂದದ ಹುಡುಗಿ ಸಿಕ್ತಾಳೆ ಬಿಡಿ ಎಂದು ಲಘುವಾಗಿ ಮಾತಾಡುತ್ತಿದ್ದ.
ಹೀಗಿದ್ದಾಗಲೇ ಡಿಗ್ರಿ ಮೊದಲ ವರ್ಷಕ್ಕೆ ಸೇರಿಕೊಂಡವಳು ಸುನಂದಾ. ಈಕೆಗೆ, ವಿಪರೀತ ಎಂಬಂಥ ಒಳ್ಳೆಯತನವಿತ್ತು. ಎಂಥವರನ್ನೂ ಬದಲಿಸಬಲ್ಲೆ ಎಂಬಂಥ ಆತ್ಮವಿಶ್ವಾಸವಿತ್ತು. ಕಾಲೇಜಿಗೆ ಬಂದ ಕೆಲವೇ ದಿನಗಳಲ್ಲಿ ಇವಳಿಗೆ ಪರಮೇಶ್ವರನ ವಿಷಯ ಕಿವಿಗೆ ಬಿತ್ತು. ಜೊತೆಗಿದ್ದ ಹುಡುಗಿಯರೆಲ್ಲ- 'ಅವನು ವಿಪರೀತ ಫ್ಲರ್ಟ್ ಅಂತೆ . ಅಕಸ್ಮಾತ್ ಮಾತಾಡಿಸಲು ಬರಬಹುದು. ಹುಷಾರಾಗಿರು' ಎಂದು ಎಚ್ಚರಿಸಿದ್ದರು. ನನ್ನ ಒಳ್ಳೆಯತನದಿಂದ ಈ ಜಗತ್ತಿನ ಎಲ್ಲರನ್ನೂ ಬದಲಿಸಬಲ್ಲೆ ಎಂಬ ನಂಬಿಕೆಯಿತ್ತಲ್ಲ; ಅದೇ ಕಾರಣದಿಂದ ಸುನಂದಾ ತಾನೇ ಮುಂದಾಗಿ ಪರಮೇಶ್ವರನನ್ನು ಪರಿಚಯ ಮಾಡಿಕೊಂಡಳು. ಕೆಲವೇ ದಿನಗಳಲ್ಲಿ ಈ ಸ್ನೇಹ ಪ್ರೇಮವಾಗಿ ಬದಲಾಯಿತು.
ಫ್ಲರ್ಟ್ ಮಾಡುವುದು ತಪ್ಪು, ಮಜಾ ಮಾಡುವುದೇ ಜೀವನ ಎಂಬ ನಂಬಿಕೆ ಕೂಡ ತಪ್ಪು. ಮನುಷ್ಯ ಬದುಕಬೇಕಿರುವುದು ಖಂಡಿತ ಹೀಗಲ್ಲ ಎಂದು ಸುನಂದಾ ಪರಮೇಶ್ವರನಿಗೆ ಮೇಲಿಂದ ಮೇಲೆ ಹೇಳಿದ್ದೇ ಬಂತು. ಆದರೆ ಈ ಹುಡುಗ ಬದಲಾಗಲಿಲ್ಲ. ನೋಡುವಷ್ಟು ದಿನ ನೋಡಿ, ನೀನು ಬದಲಾಗುವುದೇ ಇಲ್ಲ ಅನ್ನುವುದಾದರೆ, ಇನ್ನು ಮುಂದೆ ನನ್ನ ದಾರಿ ನಾನು ನೋಡ್ಕೋತೇನೆ ಅಂದುಬಿಟ್ಟಳು ಸುನಂದಾ. ಈ ಭೂಪ, ಅದಕ್ಕೆ ಕಾಯುತ್ತಿದ್ದವನಂತೆ - 'ಅಷ್ಟು ಮಾಡು' ಎಂದುಬಿಟ್ಟ. ಆ ನಂತರದ ದಿನಗಳಲ್ಲಿ ಗೆಳೆಯರ ಜೊತೆ ಮಾತಾಡುತ್ತ - 'ಅವಳು ಹೋದ್ರೆ ಏನಾಯ್ತು? ಅವಳಿಗಿಂತ ಮುದ್ದಾಗಿರುವ ಹುಡುಗಿ ಸಿಕ್ತಾಳೆ ಬಿಟ್ಟಾಕ್ರೋ' ಎಂಬಂಥ ಮಾತುಗಳನ್ನಾಡಿದ.
ಟೈಮು ಎಂಬುದು ಯಾವಾಗ್ಲೂ ಒಂದೇ ಥರ ಇರಲ್ಲ ತಾನೆ? ಪರಮೇಶ್ವರನ ವಿಷಯದಲ್ಲೂ ಹಾಗೇ ಆಯಿತು. ಅವನ ಬದುಕಿಂದ ಸುನಂದಾ ಎದ್ದು ಹೋದ ನಂತರ, ಯಾವ ಹುಡುಗಿಯೂ ಅವನತ್ತ ಸುಳಿಯಲಿಲ್ಲ. ಎದುರಾದವರ ಕಂಗಳಲ್ಲಿ ತೀವ್ರ ಅಸಹನೆಯಿರುತ್ತಿತ್ತು. ದಿವ್ಯ ನಿರ್ಲಕ್ಷ್ಯವಿರುತ್ತಿತ್ತು. ಈ ಮಧ್ಯೆ ಹಳೆಯದನ್ನೆಲ್ಲ ಮರೆತವಳಂತೆ ಓದಲು ಆರಂಭಿಸಿದ ಸುನಂದಾ, ನಂತರದ ಎರಡು ವರ್ಷಗಳಲ್ಲಿ ಡಿಗ್ರಿ ಮುಗಿಸಿ ಕೆಲಸಕ್ಕೂ ಸೇರಿಕೊಂಡಳು. ಪರಮೇಶ್ವರ, ಆಗಲೂ ಅದೇ ಹಳೆಯ ಕಾಲೇಜಿನಲ್ಲಿ ಡಿಗ್ರಿ ಸ್ಟೂಡೆಂಟ್ ಎನ್ನಿಸಿಕೊಂಡೇ ಇದ್ದ.
ಹೀಗಿರುವಾಗಲೇ ಅದೊಂದು ದಿನ ಮದುವೆ ಪಾರ್ಟಿಯೊಂದರಲ್ಲಿ ಸುನಂದಾಗೆ ಪರಮೇಶ್ವರ ಎದುರಾಗಿಬಿಟ್ಟ. ಈಕೆ ಯಾವುದೇ ಅಸಮಾಧಾನವಿಲ್ಲದೆ ಕೇಳಿದಳು: 'ಇದೇನು ಒಬ್ಬನೇ ಬಂದಿದ್ದೀಯ? ಯಾರೂ ಹೊಸಾ ಗರ್ಲ್‌ಫ್ರೆಂಡ್ ಸಿಕ್ಕಿಲ್ವಾ?' ಹೀಗೆ ಪ್ರಶ್ನಿಸುವಾಗ ಅವಳ ಧ್ವನಿಯಲ್ಲಿ ಸಂಕಟವಿದ್ದಂತೆ ಭಾಸವಾಯಿತು. 'ಹೀಗೇ ಚೇಂಜ್ ಬೇಕು ಅನ್ನಿಸ್ತು. ಹಾಗಾಗಿ ಒಬ್ಬನೇ ಬಂದಿದೀನಿ' ಎಂದುಬಿಟ್ಟ. ನಂತರ ಮನೆಗೆ ಬಂದವನಿಗೆ ಪದೇ ಪದೇ ಸುನಂದಾಳ ಮಾತು ಮತ್ತು ತಾನು ಅವಳೊಂದಿಗೆ ಕಳೆದ ದಿನಗಳು ಬಿಟ್ಟೂ ಬಿಡದೆ ನೆನಪಾದವು. ಆಕೆಯೊಂದಿಗೆ ಒರಟಾಗಿ ನಡ್ಕೋಬಾರದಿತ್ತು ಎಂದು ಅದೇ ಮೊದಲ ಬಾರಿಗೆ ಅನ್ನಿಸಿತು. ನಂತರದ ದಿನಗಳಲ್ಲಿ ಸುನಂದಾಳನ್ನು ನೋಡಲೇಬೇಕು ಎಂಬ ಭಾವ ಮತ್ತಷ್ಟು ತೀವ್ರವಾಯಿತು. ಈ ವೇಳೆಗೆ ಸುನಂದಾಳನ್ನು ಭೇಟಿ ಮಾಡಿ ತಿಂಗಳು ಕಳೆಯುತ್ತಾ ಬಂದಿತ್ತು. ಪ್ರತಿದಿನವೂ ಆಕೆಯ ಫೋನ್ ನಂಬರ್, ವಿಳಾಸ ಪತ್ತೆ ಹಚ್ಚುವ ನಿರ್ಧಾರದೊಂದಿಗೇ ದಿನಚರಿಯನ್ನು ಆರಂಭಿಸುತ್ತಿದ್ದ ನಿಜ. ಆದರೆ, ಇನ್ನಾವುದೋ ಕೆಲಸ ಗಂಟು ಬೀಳುತ್ತಿತ್ತು. ಇರಲಿ, ನಾಳೆ ನೋಡೋಣ ಎನ್ನುತ್ತಾ ಅವಳು ಸಿಗದಿದ್ರೆ ಇನ್ನೊಬ್ಬಳು ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಾ ಪರಮೇಶ್ವರ ದಿನಗಳನ್ನು ದೂಡುತ್ತಲೇ ಇದ್ದ.
ಕಡೆಗೊಮ್ಮೆ ಅವರಿವರ ನೆರವಿನಿಂದ ಸುನಂದಾಳ ಹೊಸ ಮನೆಯ ವಿಳಾಸ ಸಂಪಾದಿಸಿದ ಪರಮೇಶ್ವರ. ತಾನೇ ಮೊದಲು ಹೋಗಿ ಆಕೆಯಲ್ಲಿ ಕ್ಷಮೆ ಕೇಳಲು ನಿರ್ಧರಿಸಿದ. ಇವತ್ತು, ನಾಳೆ ಎಂದು ಇವನು ಲೆಕ್ಕ ಹಾಕುತ್ತಿದ್ದಾಗಲೇ ಅದೊಂದು ಮಧ್ಯಾಹ್ನ ಫೋನ್ ಬಂತು. ಇವನು 'ಹಲೋ' ಎಂದಾಕ್ಷಣ, ಆ ತುದಿಯಲ್ಲಿದ್ದ ವ್ಯಕ್ತಿ ಹೇಳಿತು: 'ನಾನು ಸುನಂದಾಳ ತಂದೆ ಮಾತಾಡ್ತಾ ಇರೋದು. ಇವತ್ತು ಬೆಳಗ್ಗೆ ಆಫೀಸಿಗೆ ಹೋಗುವಾಗ ಸುನಂದಾಳ ಸ್ಕೂಟಿಗೆ ಲಾರಿ ಡಿಕ್ಕಿ ಹೊಡೆದುಬಿಡ್ತು. ಆಸ್ಪತ್ರೆಗೆ ಸೇರಿಸಿದ್ವಿ, ನನ್ನ ಮಗಳು ಸಾಯೋಕೆ ಮುಂಚೆ ನಿನ್ನ ಹೆಸರು ಹೇಳಿದ್ಲು ಕಣಪ್ಪಾ... ಬಂದು ಹೋಗಪ್ಪಾ'... ಪರಮೇಶ್ವರ, ಏನು ಮಾತಾಡಲೂ ತೋಚದೆ ಗೊಂಬೆಯ ಹಾಗೆ ನಿಂತುಬಿಟ್ಟ.
----
ಪ್ರತಿ ಕೆಲಸದಲ್ಲೂ ಆಲಸ್ಯ ತೋರುವ, ಎದುರಿಗೆ ಸಿಕ್ಕವರನ್ನು ವಿನಾಕಾರಣ ಹಂಗಿಸಿ, ಬೇಕೆಂದೇ ನಿರ್ಲಕ್ಷಿಸಿ, ಅವರ ಪ್ರೀತಿ ಹಾಗೂ ಒಳ್ಳೆಯತನವನ್ನು ಅರ್ಥ ಮಾಡಿಕೊಳ್ಳದ ಪರಮೇಶ್ವರನಂಥವರು ನಮ್ಮ ಸುತ್ತಲೂ ಇದ್ದಾರೆ. ಅಂಥವರಿಗೆಲ್ಲ ಒಂದು ಕಿವಿಮಾತು; ಟೈಮು ಯಾವಾಗ್ಲೂ ಒಂದೇ ಥರ ಇರಲ್ಲ, ಇವನಿ(ಳಿ)ಲ್ಲದಿದ್ರೆ ಇನ್ನೊಬ್ಬ(ಳು) ಎಂಬಂಥ ಉಡಾಫೆಯ ಮಾತೂ ಸರಿಯಲ್ಲ....
ರಜನಿಕಾಂತ್ ಮತ್ತೊಂದು ರೌಂಡ್...
ಓದುಗ ಮಿತ್ರ ಅಭಿಷೇಕ ಪ್ರಭಾಕರ ಬಳೆ ಒಂದಷ್ಟು ರಜನಿಕಾಂತ್ ಜೋಕುಗಳನ್ನು ಕಳುಹಿಸಿಕೊಟ್ಟಿದ್ದಾರೆ-
- ಅಮಿತಾಭ್‌ಬಚ್ಚನ್ ತಮ್ಮ ಮೊಮ್ಮಗಳಿಗೆ 'ನಿನಗೆ ಆಟ ಆಡಲು ಏನು ಬೇಕು?' ಅಂತ ಕೇಳಿದರೆ ಅವಳು- (ರಜನಿಕಾಂತ್) 'ರೋಬೊ' ಬೇಕು ಅಂತ ಕೇಳಿದಳಂತೆ.
- ಮೊನ್ನೆ ರಾಯಚೂರಲ್ಲಿ ಮಳೆ ಆಯಿತು. ಯಾಕೆ ಗೊತ್ತಾ? ಅವತ್ತು ರಜನಿಕಾಂತ್ ಅವರ ಮನೆಯಲ್ಲಿ ಬೋರ್‌ವೆಲ್ ಆನ್ ಇತ್ತು!
- ಐಪಿಎಲ್-7ರಲ್ಲಿ ರಜನಿಕಾಂತ್ ಮತ್ತು ಕ್ರಿಸ್‌ಗೇಲ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆ.
- ಆಯಸ್ಕಾಂತ ಕಬ್ಬಿಣವನ್ನು ಆಕರ್ಷಿಸುತ್ತದೆ. ಆದರೆ ರಜನಿಕಾಂತ್ ಕಬ್ಬಿಣವನ್ನೇ ಆಕರ್ಷಿಸುತ್ತಾರೆ.
- ಮಾರ್ಕೋನಿ ರೇಡಿಯೋ ಕಂಡುಹಿಡಿದಾಗ ಅದರಲ್ಲಿ ಪ್ರಸಾರವಾದ ಮೊದಲ ಕಾರ್ಯಕ್ರಮ ರಜನಿಕಾಂತ್ ಅವರದ್ದಂತೆ.
- ಐನ್‌ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತಕ್ಕೆ ಸಹಾಯ ಮಾಡಿದವರು ರಜನಿಕಾಂತ್!
- ರಜನಿಕಾಂತ್ ಅವರು ರಾತ್ರಿ ಎಲ್ಲ ಎದ್ದು ಕುಳಿತಿರುತ್ತಾರಾದ್ದರಿಂದ, ಇಡೀ ಭಾರತ ದೇಶ ಹಾಯಾಗಿ ನಿದ್ದೆ ಮಾಡುತ್ತದೆ.


- ವಿಶ್ವೇಶ್ವರ ಭಟ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!