ಅಂಕಣಗಳು

ಜೋಕ್ ಅಲ್ವಂತೆ, ಇದು ಫುಲ್ ಸೀರಿಯಸ್ಸಂತೆ

ಯಾಕೋ ಏನೋ ನಮ್ ಮೈಲಾರಿ ವತ್ತಾರೆ ಎದ್ದೋನೆ ಸ್ಯಾನೆ ಟೆನ್ಸನ್ ಮಾಡ್ಕಂಬುಟ್ಟಿದ್ದ...

ಯಾಕೋ ಏನೋ ನಮ್ ಮೈಲಾರಿ ವತ್ತಾರೆ ಎದ್ದೋನೆ ಸ್ಯಾನೆ ಟೆನ್ಸನ್ ಮಾಡ್ಕಂಬುಟ್ಟಿದ್ದ. ಅದೇ ಟೆನ್ಸನ್ನಾಗೆ ಮನೆ ವಠಾರ್ದಾಗೆ ಅತ್ಲಾಗಿಂದ ಇತ್ಲಾಗೆ, ಇತ್ಲಾಗಿಂದ ಅತ್ಲಾಗೆ ವೋಡಾಡ್ತಾಯಿದ್ದ.
ಅಮಾಸೆ ನೋಡ್ಬುಟ್ಟು ವೋಡೋಡಿ ಬಂದ. 'ಅದ್ಯಾಕಲಾ, ವೊಳ್ಳೆ ಹೆಗ್ಣ ವೋಡಾಡಂಗೆ ವೋಡಾಡ್ತಾಯಿದ್ದೀಯ. ಮೈನಾಗೆ ಅರಾಮಿಲ್ವಾ ?' ಅಂತ ಕೇಳ್ದ.
'ಏನಿಲ್ಲ ಬಡ್ಡೆತ್ತದೆ, ನಮ್ ಯಡೂರಪ್ನೋರು ಮನೆ ಆಡ್ರಸ್ಸು ವುಡುಕ್ತಾಯಿದ್ದೀನಿ ಸಿಕ್ತಾನೇ ಇಲ್ಲ. ನಿಂತಾವ ಏನರ ಐತಾ?' ಅಂತ ಮೈಲಾರಿ ಕೇಳ್ದ.
'ಅವ್ರು ಮನೆ ಅಡ್ರಸ್ಸು ತಕ್ಕಂಡು ನಾನು ಏನು ಮಾಡಂಗದೆ? ಅವ್ರು ಏನರ ನಂಗೆ ನೆಂಟ್ರಾ?' ಅಂತೇಳಿ ಅಮಾಸೆ ಯೋಳ್ದ. 'ಲೇ, ದಡ್‌ಮುಂಡೇದೆ, ಲೀಡ್ರು ಕಣಲೇ ಅವ್ರು ಲೀಡ್ರು. ಅವ್ರು ಮನೆ ಆಡ್ರಸ್ಸು ತಕ್ಕಂಡು ಏನು ಮಾಡಂಗದೆ ಅಂತಾಯಿದ್ದೀಯಲ್ಲ. ನಿನ್ ತಲೆವೊಳ್ಗೆ ಸಗ್ಣಿ ತಂಬುದಲೇ' ಅಂತ ಮೈಲಾರಿ ಬೈದ. 'ವೋಗ್ಲಿ ಬುಟ್ಟಾಕು, ನಿಂಗೆ ಯಾಕೆ ಬೇಕು ಅಡ್ರಸ್ಸು?' ಅಂತೇಳಿ ಅಮಾಸೆ ಕೇಳ್ದ. 'ಎಲೆಕ್ಸನ್ನಾಗೆ ಗೆಲ್ಲಾದು ನಮ್ ಪಾರ್ಟಿ, ಸರ್ಕಾರ ಮಾಡೋದೂ ನಾವೇಯಾ. ಪೇಪರ್ನೋರು ನಮ್ ಪಕ್ಸ ಆಟುಕ್ಕುಂಟು ಲೆಕ್ಕುಕ್ಕೆ ಇಲ್ಲ ಅಂತ ಬರೀತಾವ್ರೆ. ರಿಜಲ್ಟು ಬಂದ್ಮೇಕೆ ಎಲ್ಲಾರೂವೆ ನಮ್ ಮನೆ ಅಡ್ರಸ್ಸು ವುಡಿಕ್ಕಂಡು ಬರ್ಬೇಕಾಯ್ತದೆ. ನಾನೇ ಸಿಯೆಮ್ಮು, ನಮ್ದೇ ಸರ್ಕಾರ ಅಂತ ಯೋಳವ್ರೆ. ಹೆಂಗಾರ ಇರ್ಲಿ ಅಂತೇಳಿ ಅಡ್ರಸ್ಸು ವುಡುಕ್ತಾಯಿದ್ದೀನಿ' ಅಂದ ಮೈಲಾರಿ.
'ಲೇ, ಸುಮ್ಕೆ ಯೋಳಿರ್ತರೆ, ಯಾರ್ತಾವಾದ್ರೂ ಜೋಕು ಮಾಡಿರ್ತರೆ, ಎಷ್ಟು ವರ್ಸದಿಂದ ಅವ್ರು ರಾಜ್ಕೀಯ ಮಾಡ್ತಾವ್ರೆ. ಪಕ್ಸುಕ್ಕೆ ಎಷ್ಟು ಸೀಟು ಬತ್ತದೆ ಅಂತ ಗೊತ್ತಿರಕ್ಕಿಲ್ವಾ? ಸುಮ್ಕೆ ವೋಗು ತಲೆ ಕೆಡುಸ್ಕಾಬ್ಯಾಡ' ಅಂತಂದ ಅಮಾಸೆ.
'ಹಂಗಂತೀಯ, ಲೇ ಅವ್ರು ಜೋಕು ಮಾಡಾಕಿಲ್ಲ. ಸೀರಿಯಸ್ಸಾಗೇ ಯೋಳಿರಾದು. ಯಾವ್ದುಕ್ಕಾರ ಇರ್ಲಿ ಅಡ್ರಸ್ಸು ಇದ್ರೆ ಕೊಡಪ್ಪ' ಅಂದ ಮೈಲಾರಿ. 'ನಂತಾವ ಇಲ್ಲಲೇ, ಯಾವ್ದಾರ ಕಾಯಿ ಅಂಗ್ಡೀತವ ವೋಗಿ ಕೇಳು ಕೊಡ್ತರೆ' ಅಂದ ಅಮಾಸೆ.
'ಯಾವ್ ಕಾಯಿ ಕಣ್ಲಾ ಅದು?' ಅಂತ ಮೈಲಾರಿ ಕೇಳ್ದ. 'ಅದೇನಲೇ ಹಿಂಗೆ ಕೇಳ್ತೀಯ. ತೆಂಗಿನ ಕಾಯಿ ಯಡೂರಪ್ನೋರು ಸಿಂಬಲ್ಲು. ಆ ಕಾಯಿ ಮಾರೋರ್ನ ಕೇಳುದ್ರೆ ಕೊಟ್ಟಾರು. ಯಡೂರಪ್ನೋರು ಆ ಸಿಂಬಲ್ಲು ತಕ್ಕಂಡ್ಮೇಲೆ ಕಾಯಿ ಅಂಗ್ಡಿಯೋರ್ಗೆ ಯಾಪಾರ ಸಂದಾಕಿ ಅಬುಟ್ಟದೆ. ಎಲ್ಲಾರೂವೆ ಯಡೂರಪ್ನೋರು ಪೋಟೋ ಅಂಟಾಕ್ಕಂಬುಟ್ಟವ್ರೆ ತೀಳೀತಾ?' ಅಂದ ಅಮಾಸೆ.
'ಸರಿ ಬುಡಪ್ಪ ಕಾಯಿ ಅಂಗ್ಡೀತವ ವೋಬತ್ತೀನಿ' ಅಂತೇಳಿ ಮೈಲಾರಿ ವೋತಾಯಿದ್ದಂಗೆ, ಕೈ ಪಕ್ಸದ ಲೀಡ್ರು ಸಿವಕುಮಾರು ಕೈನಾಗೆ ನಿಂಬೆ ಹಣ್ಣು, ಕುಂಕುಮ ಮಡಿಕ್ಕಂಡು ಬಂದ್ರು. 'ಕನಕಪುರ ಕಿಂಗು ಸಿವಕುಮಾರಪ್ನೋರು ಇತ್ಲಾಗೆ ಲೆಗ್ಗು ಮಡ್ಗಿದ್ದೀರಿ. ಯಾರ್ಗರ ಮುಹೂರ್ತ ಫಿಕ್ಸ್ ಮಾಡಿದ್ದೀರಾ ಹೆಂಗೆ ?' ಅಂತ ಮೈಲಾರಿ ಕೇಳ್ದ. 'ನಾನು ಲೆಗ್ಗು ಮಡ್ಗೋ ಇಚಾರ ಅತ್ಲಾಗಿರ್ಲಿ. ಆ ಶಿಂಧ್ಯಾ ಕನಕಪುರ ಕ್ಸೇತ್ರುದಾಗೆ ಲೆಗ್ಗು ಮಡ್ಗಿದ್ಮೇಕೆ ನನ್ ತಲೆ ಹಾಳಾಗೋಗದೆ' ಅಂದ್ರು ಸಿವಕುಮಾರು. 'ಸಂದಾಕದೆ ನಿವೇಳಾದು, ಕನಕಪುರುಕ್ಕೆ ಬರೋದು ಬ್ಯಾಡ, ಎಲೆಕ್ಸನ್ಗೆ ನಿಂತ್ಕಳಾದು ಬ್ಯಾಡ ಅಂತ ಶಿಂಧ್ಯಾ ಅವ್ರುಗೆ ಯೋಳಕ್ಕೆ ಆಯ್ತದಾ?' ಅಂತ ಮೈಲಾರಿ ಕೇಳ್ದ.
'ನಿಂತ್ಕಳ್ಳಿ ಕಣ್ಲಾ ಯಾರು ಬ್ಯಾಡ ಅಂದೋರು. ಆವಯ್ಯ ನನ್‌ಮ್ಯಾಲೆ ಮಾಟ,ಮಂತ್ರ ಮಾಡುಸ್ತಾವ್ರಂತೆ. ಅದ್ರುದ್ದು ಎಫೆಕ್ಟು ನಂಗೇನರ ತಟ್ಬುಟ್ರೆ ಹೆಂಗಲಾ ? ಸತ್ರು ಸಂಹಾರ ಯಾಗ ಬ್ಯಾರೆ ಮಾಡುಸ್ತಾವ್ರಂತೆ. ಅದುಕ್ಕೆ ಟೆನ್ಸನ್ನು ಸುರು ಆಗೋಗದೆ' ಅಂದ್ರು ಸಿವಕುಮಾರು. 'ವೋ ಹಂಗೈತಾ ಇಸ್ಯ, ಮಾಟ, ಮಂತ್ರುಕ್ಕೆ ನೀವು ತಡೆ ವೊಡ್ಸೋದು ತಾನೆ' ಅಂತ ಮೈಲಾರಿ ಯೋಳ್ದ. 'ಬುಡ್ತೀನಾ ? ಮಾಟ, ಮಂತ್ರದ ಇಸ್ಯದಾಗೆ ನಂತಾವ ಆಟ ತೋರ್ಸುದ್ರೆ ಸುಮ್ಕೆ ಇರಕ್ಕೆ ಆಯ್ತದಾ? ಇಲ್ಲಿ ಐತೆ ನೋಡು ನಿಂಬೆಹಣ್ಣು' ಅಂದ್ರು ಸಿವಕುಮಾರು.
'ಏನದೆ ಅದ್ರಾಗೆ ಅಂತ ಮೈಲಾರಿ ಕೇಳ್ದ. ಎಲೆಕ್ಸನ್ ಮುಗೀಲಿ ನಿಂಗೆ ತಿಳೀತದೆ' ಅಂತೇಳಿ ಸಿವಕುಮಾರು, 'ಓಂ, ಬೀಮ್, ಚೂ ಮಂತ್ರ ಕಾಳಿ' ಅಂತ ಯೋಳ್ಕಂಡು ಸಾತನೂರು ಕಡೀಕೆ ವೊಂಟ್ರು. ಹೆಂಗಾರ ಮಾಡಿ ಯಡೂರಪ್ನೋರು ಮನೆ ಅಡ್ರಸ್ಸು ವುಡುಕ್ಕಾಬೇಕು ಅಂತೇಳಿ ಮೈಲಾರಿನೂ ವೋಡೋಡಿ ವೋದ.

-ಕೆ.ವಿ.ಪ್ರಭಾಕರ್
prabhukolar@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವುದಿಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!