ಅಂಕಣಗಳು

ಮತ್ತೆ ಮತ್ತೆ ಕಾಡುವ ಎರಡು ಕಥೆಗಳು...

ಯಾವುದೋ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಅಥವಾ ಅವರಿವರಿಂದ ಕೇಳಿದ ಕಥೆಗಳು ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತವೆ. ಅಮ್ಮನ ಜೋಗುಳದ ಹಾಗೆ. ಅಂಥ ಎರಡು ಪುಟ್ಟ ಪ್ರಸಂಗಗಳ ವಿವರಣೆ ಇಲ್ಲಿದೆ.
ಎರಡನೇ ಮಹಾಯುದ್ಧ ಮುಗಿದು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಗೆಲುವಿನ ಹುಮ್ಮಸ್ಸಿನಲ್ಲಿ ನಲಿದಾಡುತ್ತಿದ್ದ ಸಂದರ್ಭ. ಯುದ್ಧದಲ್ಲಿ ಜೀವದ ಹಂಗು ತೊರೆದು ಹೋರಾಡಿದ ಯೋಧರನ್ನು ಗೌರವಿಸಬೇಕು. ಈ ವಿಶೇಷ ಸಂದರ್ಭಕ್ಕೆಂದೇ ಒಂದು ಮನರಂಜನಾ ಕಾರ್ಯಕ್ರಮ ಏರ್ಪಡಿಸಬೇಕು ಎಂಬ ಮಹದಾಸೆ ಅಮೆರಿಕದ ಹಿರಿಯರಿಗೆ ಬಂತು. ನಂತರದ ಕೆಲವೇ ದಿನಗಳಲ್ಲಿ ಅವರೆಲ್ಲಾ ಹಲವು ಸಂಘಟನೆಗಳ ಪ್ರಮುಖರನ್ನು ಕರೆದು ವಿಷಯ ತಿಳಿಸಿದರು. ಇಂಥದೊಂದು ಕಾರ್ಯಕ್ರಮವನ್ನು ಮಾಡಲೇಬೇಕಾದ ಅಗತ್ಯವಿದೆ. ದಯವಿಟ್ಟು ಮುಂದುವರೆಯಿರಿ ಎಂಬ ಒತ್ತಾಯಪೂರ್ವಕ ಸಲಹೆ ಎಲ್ಲರಿಂದ ಬಂತು. ಪರಿಣಾಮವೆಂಬಂತೆ, ಯುದ್ಧದಲ್ಲಿ ಗಾಯಗೊಂಡಿದ್ದ ಯೋಧರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಿದ್ಧತೆ ಶರವೇಗದಲ್ಲಿ ನಡೆದು ಹೋಯಿತು.
ಅವತ್ತಿನ ಸಂದರ್ಭದಲ್ಲಿ ಅಮೆರಿಕದ ಉದ್ದಕ್ಕೂ ನಂಬರ್ ಒನ್ ಕಮಿಡಿಯನ್ ಎಂದು ಹೆಸರಾಗಿದ್ದವನು ಜಿಮ್ಮಿ ಡುರಾಂಟೆ. ಅವನು ಕಾರ್ಯಕ್ರಮ ನಡೆಸಿಕೊಡುತ್ತಾನೆ ಎಂದರೆ ಸಾಕು, ಜನ ಪ್ರವಾಹದೋಪಾದಿಯಲ್ಲಿ ಬರುತ್ತಿದ್ದರು. ಇದು ವೀರ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮವಾಗಿರುವುದರಿಂದ ಡುರಾಂಟೆ ಮರುಮಾತಿಲ್ಲದೆ ಕೇಳಿದಷ್ಟು ಹೊತ್ತು ಕಾರ್ಯಕ್ರಮ ನೆಡೆಸಲು ಒಪ್ಪಿಕೊಳ್ಳುತ್ತಾನೆ ಎಂಬುದು ಸಂಘಟಕರ ಗಟ್ಟಿ ನಂಬಿಕೆಯಾಗಿತ್ತು. ಈ ಕಾರಣದಿಂದಲೇ ಅವರು ಸ್ವಲ್ಪ ತಡವಾಗಿಯೇ ಅವನನ್ನು ಸಂಪರ್ಕಿಸಿ ಒಂದು ಕಾರ್ಯಕ್ರಮ ನಡೆಸಿಕೊಡಿ ಎಂದು ವಿನಂತಿಸಿದರು.
ಆದರೆ, ಸಂಘಟಕರು ತಿಳಿಸಿದ ದಿನವೇ ಬೇರೊಂದು ಕಡೆ ಕಾರ್ಯಕ್ರಮ ನಡೆಸಲು ಡುರಾಂಟೆ ಒಪ್ಪಿಕೊಂಡಿದ್ದ. ಸಂಘಟಕರಿಗೂ ಅದನ್ನೇ ತಿಳಿಸಿ- 'ಕ್ಷಮಿಸಿ. ನಾನು ಅಸಹಾಯಕ' ಎಂದ. ಇವರು ಪಟ್ಟು ಬಿಡಲಿಲ್ಲ. ಹಾಗೆ ಹೇಳಲೇಬೇಡ. ನೀನು ಬರಲೇಬೇಕು ಎದು ಹಠ ಹಿಡಿದರು. ಇವರ ಬೇಡಿಕೆಗೆ ಕೊನೆಗೂ ಮಣಿದ ಡುರಾಂಟೆ- 'ನಾನು ಕೇವಲ 1 ನಿಮಿಷ ಮಾತ್ರ ಕಾರ್ಯಕ್ರಮ ನಡೆಸಿ ಹೋಗಿಬಿಡ್ತೇನೆ' ಎಂದ.
ಕೊನೆಗೂ ಆ ದಿನ ಬಂದೇ ಬಂತು. ಜಿಮ್ಮಿ ಡುರಾಂಟೆ ಒಂದೊಂದು ತಮಾಷೆ ಹೇಳಲು ಆರಂಭಿಸಿದ. ಅವನ ಒಂದೊಂದು ಮಾತಿಗೂ ಸಂಭಾಂಗಣವೇ ಹಾರಿ ಹೋಗುವಂಥ ಜೋರು ಸದ್ದಿನ ಚಪ್ಪಾಳೆ ಬೀಳುತ್ತಿತ್ತು. ಹತ್ತು ನಿಮಿಷ ಮಾತಾಡಿ ಹೋಗಿಬಿಡ್ತೇನೆ ಎಂದಿದ್ದ ಡೊರಾಂಟೆ ಅವತ್ತು ಭರ್ತಿ ಎರಡು ಗಂಟೆ ಮಾತಾಡಿದ. ನಂತರ ಎಲ್ಲರಿಗೂ ಶಿರಬಾಗಿ ನಮಿಸಿ, ಬೇರೊಂದು ಕಾರ್ಯಕ್ರಮಕ್ಕೆ ಹೋಗಲೇಬೇಕಾಗಿದೆ. ದಯವಿಟ್ಟು ಅವಕಾಶ ಕೊಡಿ ಎಂದು ಬೇಡಿಕೊಂಡ. ದಾಪುಗಾಲಿಡುತ್ತಾ ಹೊರಗೆ ಬಂದ.
ಅವನ ಹಿಂದೆಯೇ ಓಡೋಡಿ ಬಂದ ಪ್ರಾಯೋಜಕರು ಹೇಳಿದರು: 'ಸರ್, ಬರೀ 10 ನಿಮಿಷ ಮಾತಾಡಿ ಹೋಗಿಬಿಡ್ತೀನಿ ಅಂದಿದ್ದವರು ಭರ್ತಿ ಎರಡು ಗಂಟೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದಿರಿ. ನಿಮಗೆ ಧನ್ಯವಾದ...' ಅವರ ಮಾತನ್ನು ಅಲ್ಲಿಗೇ ತಡೆದ ಡೊರಾಂಟೆ ಹೇಳಿದ: '10 ನಿಮಿಷ ಮಾತಾಡಿ ಹೋಗಬೇಕು ಅಂದುಕೊಂಡೇ ಬಂದಿದ್ದೆ. ಆದರೆ ಮೊದಲ ಸಾಲಿನಲ್ಲಿ ಇಬ್ಬರು ಯೋಧರು ಕುಳಿತಿದ್ರು. ಒಬ್ಬರಿಗೆ ಬಲಗೈ ಇರಲಿಲ್ಲ. ಮತ್ತೊಬ್ಬರಿಗೆ ಎಡಗೈ ಇರಲಿಲ್ಲ. ಯುದ್ಧವೆಂಬುದು ಆ ಯೋಧರ ಕೈಗಳನ್ನು ಆಹುತಿ ಪಡೆದುಕೊಂಡಿತ್ತು. ನನ್ನ ಒಂದೊಂದು ಮಾತು ಮುಗಿದಾಗಲೂ ಆ ಯೋಧ ತನ್ನ ಎಡಗೈಯನ್ನು ಇತ್ತ ಚಾಚುತ್ತಿದ್ದ. ತಕ್ಷಣವೇ ಬಲಗೈ ಇದ್ದ ಯೋಧ ತನ್ನ ಕೈಯನ್ನು ಮುಂದೆ ನೀಡುತ್ತಿದ್ದ. ಪರಿಣಾಮ ಅಪರೂಪದ ಚಪ್ಪಾಳೆಯೊಂದು ನನ್ನ ಮಾತಿಗೆ ಬಹುಮಾನವಾಗಿ ಸಿಗುತ್ತಿತ್ತು. ಅದರ ಸಂಭ್ರಮವನ್ನು ನೋಡುತ್ತ ನೋಡುತ್ತ ನನಗೆ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಒಂಟಿ ಕೈ ಇದ್ದವರೂ ಸಂಭ್ರಮದಿಂದ ಚಪ್ಪಾಳೆ ಹೊಡೆಯಬಹುದು ಎಂದು ಆ ಯೋಧರು ತೋರಿಸಿಕೊಟ್ಟರು. ನೀವು ಧನ್ಯವಾದ ಹೇಳಬೇಕಿರುವುದು ಅವರಿಗೇ ಹೊರತು ನನಗಲ್ಲ...'
---
ಅದೊಂದು ದಟ್ಟ ಕಾಡು. ಅಲ್ಲಿ ಎಲ್ಲ ಬಗೆಯ ಗಿಡ ಮರ ಬಳ್ಳಿಗಳಿದ್ದವು. ಮಳೆಗಾಲದ ಒಂದು ದಿನ ಗುಲಾಬಿ ಗಿಡದಲ್ಲಿ ರಕ್ತಗೆಂಪಿನ ಒಂದು ಹೂ ಬಿಟ್ಟಿತು. 'ಘಂ' ಎನ್ನುವ ಅದರ ಪರಿಮಳ ಕಾಡಿನ ತುಂಬಾ ವ್ಯಾಪಿಸಿತು. ಅದನ್ನು ಕಂಡು ಗುಲಾಬಿಗೆ ಹಿಗ್ಗೋ ಹಿಗ್ಗು. ಅದು ನಿಂತಲ್ಲೇ ಥೈ ಥೈ ಥೈ ಕುಣಿಯುತ್ತಾ, ನನ್ನ ಸರಿಸಮಾನರು ಈ ಕಾಡಲ್ಲಿ ಯಾರಿದ್ದಾರೆ ತೋರಿಸಿ ಎಂದು ಅಹಂಕಾರದಿಂದ ಹೇಳಿತು.
 ಗುಲಾಬಿ ಗಿಡದ ಪಕ್ಕದಲ್ಲಿಯೇ ಬೆಳೆದಿದ್ದು ಸೂರ್ಯಕಾಂತಿ, ಸಂಪಿಗೆ, ಮುತ್ತುಗ ಹಾಗೂ ಮಲ್ಲಿಗೆಯ ಬಳ್ಳಿಗಳು ಈ ಮಾತನ್ನು ಒಪ್ಪಲಿಲ್ಲ. ಈ ಕಾಡಲ್ಲಿರುವ ನೂರಾರು ಗಿಡಗಳ ಪೈಕಿ ನೀನೂ ಒಂದು ಅಷ್ಟೆ. ಎಲ್ಲ ಗಿಡಗಳಿಗೂ ಒಂದೊಂದು ಟೈಂ ಅಂತ ಇರುತ್ತೆ. ಆಗ ಎಲ್ಲ ಗಿಡಗಳೂ ಚೆಂದದ ಹೂ ಬಿಡುತ್ತವೆ. ನಿನ್ನದೇನು ಹೆಚ್ಚುಗಾರಿಕೆ ಎಂದವು. ಈ ಮಾತನ್ನು ಒಪ್ಪದ ಗುಲಾಬಿ, 'ನಾನಂತೂ ಒಪ್ಪೋದಿಲ್ಲ. ನಾನು ಕಂಡಿರುವ ಗಿಡಗಳಲ್ಲಿಯೇ ಹೆಚ್ಚು ಕೊಳಕಾದ ಗಿಡ ಎಂದರೆ ಪಾಪಾಸುಕಳ್ಳಿ. ಅದರ ಮೈ ತುಂಬಾ ಮುಳ್ಳು. ಸುಮ್ಮನೇ ಒಂದು ಮುಳ್ಳಿನಿಂದ ಚುಚ್ಚಿದರೂ ಲೋಳೆಯಂಥ ದ್ರವ ಬರ್ತದೆ. ಥೂ, ಅದರದ್ದೂ ಒಂದು ಜನ್ಮವಾ' ಎಂದೆಲ್ಲಾ ಕಟುವಾದ ಶಬ್ದಗಳಲ್ಲಿ ನಿಂದಿಸಿತು. ಹೀಗೆಲ್ಲಾ ಮಾತಾಡಬಾರದೆಂದು ಎಲ್ಲ ಗಿಡಗಳೂ ಬುದ್ಧಿ ಹೇಳಿದವು. ಆದರೆ, ಗುಲಾಬಿಗೆ ಅದು ನಾಟಲೇ ಇಲ್ಲ.
 ಹೀಗೇ ಕಾಲ ಉರುಳಿ ಬಿರುಬೇಸಿಗೆ ಶುರುವಾಯಿತು. ನೆಲವೆಲ್ಲ ಬತ್ತಿಹೋಗಿ ಎಲ್ಲ ಗಿಡಗಳೂ ಒಣಗಿ ನಿಂತವು. ಆದರೆ ಪಾಪಾಸುಕಳ್ಳಿ ಮಾತ್ರ ಹಚ್ಚ ಹಸುರಾಗಿ ಕಂಗೊಳಿಸುತ್ತಿತ್ತು. ಅದರಲ್ಲಿದ್ದ ನೀರಿನ ಅಂಶವನ್ನು ಹೀರಿಕೊಂಡು ಹೋಗಿ ಬೇರೆ ಗಿಡಗಳ ಬುಡಕ್ಕೆ ಸಿಂಪಡಿಸುತ್ತಿದ್ದ ಪಕ್ಷಿಗಳು, ಆ ಮೂಲಕ ನೂರಾರು ಗಿಡಗಳಿಗೆ ಜೀವದಾನ ಮಾಡಿದ್ದವು. ಈ ವೇಳೆಗೆ ಪೂರ್ತಿ ಒಣಗಿ ಹೋಗಿ ಆಗಲೋ ಈಗಲೋ ಎಂಬಂತಿದ್ದ ಗುಲಾಬಿಯ ಬಳಿ ಹೋದ ಇತರೆ ಗಿಡಗಳು, ಈಗಾದ್ರೂ ಪಾಪಾಸುಕಳ್ಳಿಯ ಬಳಿ ಕ್ಷಮೆ ಕೇಳು ಹಾಗೆ ಮಾಡಿದರೆ ಆ ಗಿಡದಲ್ಲಿರುವ ನೀರು ಪಕ್ಷಿಗಳ ಮೂಲಕ ನಿನ್ನನ್ನು ತಲುಪುತ್ತೆ. ನಿನ್ನ ಜೀವವೂ ಉಳಿಯುತ್ತೆ ಎಂದು ಬುದ್ಧಿ ಹೇಳಿದವು.  ಆಗ, ನಾಚಿಕೆಯಿಂದಲೇ ಪಾಪಾಸುಕಳ್ಳಿಯ ಎದುರು ನಿಂತ ಗುಲಾಬಿಯು- ಗೆಳೆಯಾ, ನನ್ನ ತಪ್ಪುನ್ನು ಕ್ಷಮಿಸು, ನನಗೆ ಜೀವದಾನ ಮಾಡು ಎಂದು ಪ್ರಾರ್ಥಿಸಿತು...

- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!