ಅಂಕಣಗಳು

ಅಜ್ಞಾತವಾಸದಲ್ಲೇ ಅನಾಥರಾಗುವ ಬೇಹುಗಾರರು

ಗೂಢಚರ್ಯೆ! ಇದು ಎಲ್ಲ ದೇಶಗಳಿಗೂ ಅತಿ ಮುಖ್ಯ. ನೆರೆಯ ರಾಷ್ಟ್ರದಲ್ಲಿ ಏನು...

Covert operation.
ಗೂಢಚರ್ಯೆ! ಇದು ಎಲ್ಲ ದೇಶಗಳಿಗೂ ಅತಿ ಮುಖ್ಯ. ನೆರೆಯ ರಾಷ್ಟ್ರದಲ್ಲಿ ಏನು ನಡೆಯುತ್ತಿದೆ, ನಮ್ಮ ವಿರುದ್ಧ ಯಾವ ಮಸಲತ್ತು ನಡೆಸಲಾಗುತ್ತಿದೆ ಎಂಬುದನ್ನು ತಿಳಿಯಲು ಇದು ಅಗತ್ಯ. ಅಷ್ಟೇ ಅಲ್ಲ ಅತ್ಯಂತ ಸೂಕ್ಷ್ಮ , ರಹಸ್ಯ ಮಿಲಿಟರಿ ಮಾಹಿತಿಯನ್ನು ತಿಳಿಯಬೇಕಾದರೂ ಈ ರೀತಿಯ ತಂತ್ರವನ್ನು ಎಲ್ಲ ದೇಶಗಳೂ ಹೂಡುತ್ತವೆ. ಇನ್ನು ಸುತ್ತಮುತ್ತ ಪಾಕಿಸ್ತಾನ, ಬಾಂಗ್ಲಾಗಳಂತಹ ಬಗಲಿನ ಕೆಂಡ ಹೊಂದಿರುವ ಭಾರತಕ್ಕಂತೂ ಇಂತಹ ವ್ಯೂಹ ರಚನೆ ಅನಿವಾರ್ಯ. ಇದಕ್ಕೆ ಬೇಹುಗಾರರು ಬೇಕೇಬೇಕು. ಈ ಬೇಹುಗಾರರ ಬದುಕೇ ಒಂದು ರೀತಿ ಅತಂತ್ರ. ಪರದೇಶದಲ್ಲಿ ಪರಕೀಯರ ನಡುವೆ ಇದ್ದು ಸ್ಥಳೀಯರಂತೆಯೇ ಅಲ್ಲಿನ ವಾತಾವರಣಕ್ಕೆ ತಮ್ಮನ್ನು ಬದಲಿಸಿಕೊಂಡು, ತಮ್ಮತನವಿಲ್ಲದ ಪರಕೀಯ ಬದುಕು ಸಾಗಿಸುವುದು ಈ ಬೇಹುಗಾರರ ಕರ್ಮ. ಛದ್ಮ ಬದುಕೇ ಇವರ ಜೀವನ. ದೇಶಕ್ಕಾಗಿ ದುಡಿಯುತ್ತಿದ್ದೇನೆಂಬ ಹೆಮ್ಮೆ ಮತ್ತು ಆ ಹೆಮ್ಮೆಗಾಗಿಯೇ ಅವರು ಬದುಕುತ್ತಾರೆ. ಇಂದಿಗೂ ಪಾಕಿಸ್ತಾನ ಜೈಲುಗಳಲ್ಲಿ ಭಾರತದ ಎಷ್ಟೋ ಮಂದಿ ಬೇಹುಗಾರರಿದ್ದಾರೆ. ದೇಶಕ್ಕಾಗಿ ಗಡಿದಾಟಿ ಹೋಗುವ ಇವರಿಗೆ ಮತ್ತೆ ದೇಶಕ್ಕೆ ವಾಪಸ್ಸಾಗುವ ಅಥವಾ ಕುಟುಂಬದವರನ್ನು ಸೇರಿಕೊಳ್ಳುವ ಖಚಿತ ಭರವಸೆಯೇ ಇರುವುದಿಲ್ಲ. ಆದರೂ ಅವರು ಧೃತಿಗೆಡುವುದಿಲ್ಲ. ತಾವಿಲ್ಲದಾಗ ತಮ್ಮ ಕುಟುಂಬಕ್ಕೆ ಸರ್ಕಾರ ನೆರವಾಗುತ್ತದೆ ಎಂಬ ನಂಬಿಕೆಯಲ್ಲಿಯೇ ಮುಂದೆ ಸಾಗುತ್ತಾರೆ. ಎಷ್ಟೋ ಬಾರಿ ಬೇಹುಗಾರಿಕೆ ನಡೆಸುವಾಗ ಸಿಕ್ಕಿ ಬಿದ್ದು ಅಲ್ಲಿನ ಜೈಲುಗಳಲ್ಲಿ ಜೀವನ ಸಾಗಿಸುತ್ತಾರೆ. ಅವರನ್ನು ಅಧಿಕೃತವಾಗಿ ಬೇಹುಗಾರರೆಂದು ಒಪ್ಪಿಕೊಳ್ಳಲು ಸರ್ಕಾರಗಳಿಗೆ ಸಾಧ್ಯವಿಲ್ಲ. ಆದರೆ ಕನಿಷ್ಠ ಸಿಕ್ಕಿ ಹಾಕಿಕೊಂಡ ಬೇಹುಗಾರರಿಗೆ ದೂತಾವಾಸದ ನೆರವು, ಕಾನೂನಿನ ಹೋರಾಟಕ್ಕೆ ಬೆಂಬಲ ನೀಡುವಂತಹ ಕೆಲಸವನ್ನು ಭಾರತ ಸರ್ಕಾರ ಮಾಡಬೇಕಿದೆ. ಅಲ್ಲದೆ, ಅವರ ಕುಟುಂಬಗಳಿಗೆ ಸಕಲ ರೀತಿಯ ಸಹಾಯ, ಸುರಕ್ಷೆ ನೀಡುವುದು ಸಹ ಸರ್ಕಾರದ ಕರ್ತವ್ಯವಾಗಿದೆ. ಆದರೆ ಈ ವಿಷಯದಲ್ಲಿ ಭಾರತವು ಒಂದು ರೀತಿಯಲ್ಲಿ ಕೃತಘ್ನ ರಾಷ್ಟ್ರವಾಗಿದೆಯೇ? ಈ ಬೇಹುಗಾರರನ್ನು ಟಿಶ್ಯೂ ಪೇಪರಿನಂತೆ ಬಳಸಿಕೊಳ್ಳುತ್ತಿದೆಯೇ? ಇಲ್ಲದಿದ್ದರೆ ಸರಬ್ಜಿತ್ ಸಿಂಗ್ ಹೆಣವಾಗಿ ಭಾರತಕ್ಕೆ ವಾಪಸ್ಸಾಗುತ್ತಿದ್ದನೇ?
ರವೀಂದ್ರ ಕೌಶಿಕ್. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಆಡಾಡುತ ಬಾಲ್ಯ ಕಳೆದು ಪದವೀಧರನಾಗಿ ಪಗಾರಕ್ಕೆ ನೌಕರಿ ಹುಡುಕುತ್ತಿದ್ದ ಯುವಕ. ಕಟ್ಟುಮಸ್ತು ದೇಹ. ಸೇನೆಗೆ ಹೇಳಿ ಮಾಡಿಸಿದಂತಹ ಶರೀರ. ನೌಕರಿ ಹುಡುಕುವುದರಲ್ಲಿಯೇ ಯೌವನ ಕಳೆದು ಹೋಗುವ ಭೀತಿ ಇತ್ತು. ಅವನ ತಂದೆ ವಾಯುಸೇನೆಯಲ್ಲಿದ್ದವರು. ಹಾಗಾಗಿ ದೇಶಭಕ್ತಿ ರವೀಂದ್ರನ ಅಣು ಅಣುವಿನಲ್ಲಿಯೂ ಮೇಳೈಸಿತ್ತು. ಅದೊಂದು ದಿನ ರವೀಂದ್ರ ಜಿಗಿಜಿಗಿಯುತ್ತ ಅಪ್ಪನ ಬಳಿ ಬಂದ 'ಅಪ್ಪ ನನಗೆ ದಿಲ್ಲಿಯಲ್ಲಿ ನೌಕರಿ ಸಿಕ್ಕಿದೆ. ತಡ ಮಾಡುವಂತಿಲ್ಲ. ಕೂಡಲೇ ಹೊರಡಬೇಕು. ಇಗೊ ನಾ ಹೊರಟೆ' ಎನ್ನುತ್ತ ನಡೆದೇ ಬಿಟ್ಟ. ಆದರೆ ಅಸಲಿಗೆ ಆತನಿಗೆ ದಿಲ್ಲಿಯಲ್ಲಿ ನೌಕರಿ ಸಿಕ್ಕಿರಲಿಲ್ಲ. ಗೂಢಚರ ಸಂಸ್ಥೆ ಅಧಿಕಾರಿಗಳ ಕಣ್ಣಿಗೆ ಬಿದ್ದ ರವೀಂದ್ರ ಬೇಹುಗಾರನಾಗಲು ಹೊರಟಿದ್ದ. ದಿಲ್ಲಿಗೆ ಬರುವಂತೆ ಆ ಅಧಿಕಾರಿಗಳೇ ಹೇಳಿದ್ದರು. ಅಲ್ಲಿ ಅವನಿಗೆ ಬೇಹು ಬದುಕಿನ ಆರಂಭಿಕ ಪಾಠ ಕಲಿಸುವುದಿತ್ತು. ವೇಷ-ಭೂಷಣ, ಹಾವ-ಭಾವ, ಗೌಪ್ಯತೆ ಕಾಪಾಡಿಕೊಳ್ಳುವ ಕಲೆ, ಹೀಗೆ ನಾನಾ ವಿದ್ಯೆಗಳಲ್ಲಿ ಆತನಿಗೆ ತರಬೇತಿ ನೀಡಬೇಕಿತ್ತು. ರವೀಂದ್ರಗೆ ಒಂದು ಅಲಿಯಾಸ್ ಹೆಸರು ನೀಡಲಾಯಿತು. ಆತ ಬೇಹುಗಾರಿಕೆ ನಡೆಸಬೇಕಿದ್ದುದು ಪಾಕಿಸ್ತಾನದಲ್ಲಿ. ಹಾಗಾಗಿ ಸಕಲ ರೀತಿಯ ಪೂರ್ವ ತಯಾರಿ ಅಗತ್ಯವಿತ್ತು. ಹಿಂದಿ ಹುಡುಗನನ್ನು ಉರ್ದು ಪಾರಂಗತನನ್ನಾಗಿ ಮಾಡಲಾಯಿತು. ಅಷ್ಟೇಕೆ ಆತನನ್ನು ಕಟ್ಟರ್ ಮುಸ್ಲಿಮನಂತೆ ರೂಪಾಂತರ ಮಾಡುವ ಸಲುವಾಗಿ ಸುನ್ನತ್ ಮಾಡಲಾಯಿತು. ಪಾಕಿಸ್ತಾನದಲ್ಲಿ ಹೇಗೆ ಅಲ್ಲಿಯ ಪ್ರಜೆಯಂತೆ ಬದುಕಬೇಕು ಎಂಬುದನ್ನು ಮನದಟ್ಟು ಮಾಡಿಕೊಡಲಾಯಿತು. ಇಷ್ಟೆಲ್ಲ ಪೂರ್ವ ತಯಾರಿಯ ನಂತರ 1974ರಲ್ಲಿ ರವೀಂದ್ರ ದೇಶದ ಗಡಿ ದಾಟಿದ. ತಾನು ದೇಶಕ್ಕಾಗಿ ದುಡಿಯುತ್ತಿರುವ ಹೀರೊ ಎಂಬ ಉಮೇದು ಆತನಲ್ಲಿತ್ತು. ಪಾಕಿಸ್ತಾನದ ಗಡಿ ದಾಟುತ್ತಲೇ ರವೀಂದ್ರ ನಬಿ ಅಹ್ಮದ್ ಆದ. ಸಂಪೂರ್ಣ ಹೊಸ ವಾತಾವರಣದಲ್ಲಿ ಹೆಜ್ಜೆ ಗುರುತು ಕಂಡುಕೊಳ್ಳಲು ಆರಂಭದಲ್ಲಿ ಪರದಾಡಿದ. ಆದರೆ ಅದು ತನ್ನ ಕೆಲಸದ ಅವಿಭಾಜ್ಯ ಅಂಗ ಎಂಬುದು ಆತನಿಗೆ ತಿಳಿದಿತ್ತು. ಹೀಗಾಗಿ ಕೊಸರಾಡಲಿಲ್ಲ. ಲಾಹೋರಿನ ಕಾಲೇಜಿನಲ್ಲಿ ಕಾನೂನು ಪದವಿ ಕಲಿಯಲು ಅರ್ಜಿ ಹಾಕಿದ. ಕಾಲಾನುಕ್ರಮದಲ್ಲಿ ಕಾನೂನು ಪದವಿಯೂ ಪ್ರಾಪ್ತವಾಯಿತು. ಈ ನಡುವೆಯೇ ಅಲ್ಲಿನ ಮಿಲಿಟರಿ ವರ್ಕ್ಶಾಪ್ನಲ್ಲಿ ಸಂಪರ್ಕ ಬೆಳೆಸಿಕೊಂಡ. ಈ ಸಂಪರ್ಕ ಮತ್ತು ರವೀಂದ್ರನ ಛಾತಿ ಅವನಿಗೆ ಪಾಕ್ ಸೇನೆಯಲ್ಲಿ ಪ್ರವೇಶ ದೊರಕಿಸಿಕೊಟ್ಟಿತು. ಆ ವೇಳೆಗೆ ಪಾಕಿಸ್ತಾನಿಯರ ಪಾಲಿಗೆ ನಬಿ 'ನಮ್ಮವ'ನಾಗಿದ್ದ. ಅಷ್ಟರಮಟ್ಟಿಗೆ ತನ್ನ ಅಸಲಿ ಗುರುತು ಅಳಿಸಿಕೊಂಡು ಅಪ್ಪಟ ಪಾಕಿಸ್ತಾನಿಯಾಗಿ ಬಿಟ್ಟಿದ್ದ. ಪಾಕಿಸ್ತಾನದ ಸೇನೆಯಲ್ಲೂ ಈತನ ಪರಿಶ್ರಮ ಕಂಡು ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದರು. ಸೇನೆಯಲ್ಲಿ ಭಡ್ತಿಯೂ ಸಿಕ್ಕಿತು. ಇದೆಲ್ಲದರ ನಡುವೆ ಭಾರತಕ್ಕೆ ಅತಿ ಸೂಕ್ಷ್ಮವಾದ ಸೇನಾ ಮಾಹಿತಿ ಅವ್ಯಾಹತವಾಗಿ ರವಾನೆಯಾಗುತ್ತಿತ್ತು. ಅಂತಹ ಒಂದು ಸಂದೇಶದ ಜಾಡು ಹಿಡಿದು ಭಾರತೀಯ ಸೇನೆಯು ಕಾಶ್ಮೀರದ ಪಹಲ್ಗಾಮ್ನಲ್ಲಿ ಒಳನುಸುಳುವ ಸಂಚು ಹೂಡಿದ್ದ 50 ಮಂದಿ ಪಾಕ್ ಸೈನಿಕರನ್ನು ಸದೆ ಬಡಿಯಿತು. ಇದಾದ ಬಳಿಕ ರವೀಂದ್ರಗೆ 'ಬ್ಲ್ಯಾಕ್ ಟೈಗರ್' ಎಂಬ ಬಿರುದು ಸಹ ನೀಡಲಾಯಿತು. ಇದೆಲ್ಲದರ ನಡುವೆ ರವೀಂದ್ರ ಅಲ್ಲಿಯೇ ಸಂಸಾರಿಯೂ ಆದ. ಜೊತೆಗೆ ಪಾಕ್ ಸೇನೆಯಲ್ಲಿ ಮೇಜರ್ ಹುದ್ದೆಗೂ ಏರಿದ. ತನ್ನ ಛದ್ಮ ಜೀವನ ಯಾರ ಕಣ್ಣಿಗೂ ಬೀಳದಂತೆ ಎಚ್ಚರ ವಹಿಸಿದ್ದ. ಎಲ್ಲವೂ ಸುಸೂತ್ರವಾಗಿ ಸಾಗಿತ್ತು ಎನ್ನುವಾಗಲೇ ಅಪಾಯವೂ ಹೊಂಚುಹಾಕಿತ್ತು. 1983ರಲ್ಲಿ ರವೀಂದ್ರನಿಗೆ ರಹಸ್ಯ ಸಂದೇಶ ರವಾನಿಸಲು ಭಾರತದಿಂದ ಮತ್ತೊಬ್ಬ ಬೇಹುಗಾರ ಹೊರಟು ನಿಂತ. ಆದರೆ ಆತ ತನ್ನ ಕೆಲಸ ಪೂರೈಸುವ ಮೊದಲೇ ಪಾಕಿಸ್ತಾನದ ಬೇಹು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ. ಸಾಕಷ್ಟು ಕಿರುಕುಳ ಅನುಭವಿಸಿದ ಮೇಲೆ ತಾಳಲಾರದೆ ಆತ ಬಾಯಿ ಬಿಟ್ಟ. ರವೀಂದ್ರನ ಛದ್ಮವೇಷ ಕಳಚಿ ಬಿತ್ತು. ಬದುಕು ದುರ್ಭರವಾಯಿತು. ಪಾಕಿಸ್ತಾನದ ಜೈಲುಗಳಲ್ಲಿ ಮೂಕ ವೇದನೆ ಅನುಭವಿಸಬೇಕಾಯಿತು. ವಿಚಾರಣೆಯ ನಂತರ ಆತನಿಗೆ ಮರಣದಂಡನೆ ವಿಧಿಸಲಾಯಿತು. ಆದರೆ ಕುಟುಂಬದ ಮೇಲ್ಮನವಿ ಫಲಪ್ರದವಾಗಿ ಮರಣದಂಡನೆ ಆಜೀವ ಸೆರೆಮನೆಗೆ ಇಳಿಯಿತು. ರವೀಂದ್ರ ಎಲ್ಲವನ್ನೂ ಸಹಿಸಿಕೊಂಡ. ಯಾರ ವಿರುದ್ಧವೂ ಸೊಲ್ಲೆತ್ತಲಿಲ್ಲ. ಆದರೆ ಸೆರೆ ಮನೆಯಲ್ಲಿ ಆತನಿಗೆ ಇನ್ನಿಲ್ಲದಂತೆ ಕಿರುಕುಳ ನೀಡಲಾಯಿತು. ಅದನ್ನು ಆತ ಭಾರತಕ್ಕೆ ಬರೆದ ಪತ್ರಗಳಲ್ಲಿ ಹೇಳಿಕೊಂಡ. ಯಮಯಾತನೆಯ ಬದುಕು ಆತನನ್ನು ಹೈರಾಣಾಗಿಸಿತ್ತು. ಜೈಲಾಧಿಕಾರಿಗಳ ವರ್ತನೆಯಂತೂ ಬದಲಾಗಲಿಲ್ಲ. ಪಾಕಿಸ್ತಾನದ ಪಾಲಿಗೆ ರವೀಂದ್ರ ಕಾಲ ಕಸವಾಗಿದ್ದ. ಭಾರತ ಆತನ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಆತನಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನೆರವಾಗುವ ಮನಸ್ಸು ಮಾಡಲೇ ಇಲ್ಲ. ಪಾಕಿಗಳ ಕಿರುಕುಳದಿಂದ ರವೀಂದ್ರನ ದೇಹ ಸೊರಗಿತು. ಮಿಯಾವಾಲಿ ಜೈಲಿನಲ್ಲಿರುವಾಗ ಆವರಿಸಿದ ಕ್ಷಯ ಆತನನ್ನು ಕ್ಷೀಣವಾಗಿಸಿತು. ಕನಿಷ್ಠ ಕಾಯಿಲೆಗೆ ಚಿಕಿತ್ಸೆ ಕೊಡಿಸುವ ದೊಡ್ಡ ಗುಣವನ್ನು ಪಾಕಿಸ್ತಾನ ತೋರಲಿಲ್ಲ. 2001ರ ನವೆಂಬರ್ 21 ರಂದು ಕ್ಷಯದಿಂದ ಕೃಶನಾಗಿದ್ದ ರವೀಂದ್ರ ಲಯನಾದ. ಅದೇ ಜೈಲ್ಲಿನಲ್ಲಿಯೇ ಆತನನ್ನು ಹೂಳಿದರೆ ಹೊರತು ಭಾರತಕ್ಕೆ ದೇಹವನ್ನು ಹಸ್ತಾಂತರ ಮಾಡಲಿಲ್ಲ. ಭಾರತದ ಜಾಗೃತದಳದ ಮಾಜಿ ಜಂಟಿ ನಿರ್ದೇಶಕ ಎಂ.ಕೆ. ಧರ್ ರವೀಂದ್ರನ ವೃತ್ತಾಂತವನ್ನೇ ವಸ್ತುವಾಗಿಸಿಕೊಂಡು ಬರೆದಿರುವ 'ಮಿಷನ್ ಪಾಕಿಸ್ತಾನ' ಪುಸ್ತಕದಲ್ಲಿ ಇದೆಲ್ಲವನ್ನು ವ್ಯಾಖ್ಯಾನಿಸಿದ್ದಾರೆ. ಇಂದಿಗೂ ಭಾರತದಲ್ಲಿರುವ ರವೀಂದ್ರನ ಕುಟುಂಬ ಕನಿಷ್ಠ ಆತನನ್ನು ದೇಶದ ಹುತಾತ್ಮ ಎಂದು ಗುರುತಿಸುವಂತೆ ಸರ್ಕಾರಗಳಿಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಸೂಕ್ತ ಸ್ಪಂದನೆ ಮಾತ್ರ ಸಿಕ್ಕಿಲ್ಲ.
ಸುರ್ಜಿತ್ ಸಿಂಗ್. ರವೀಂದ್ರನ ಛದ್ಮವೇಷ ಕಳಚುವ ಮುನ್ನ ಭಾರತದ ಬೇಹು ಸಂಸ್ಥೆಯ ಪರವಾಗಿ ಪಾಕಿಸ್ತಾನಕ್ಕೆ ನುಸುಳಿದ್ದ. ಅದೂ ತಿಂಗಳಿಗೆ 150 ರೂ. ಪಗಾರದ ಆಮಿಷದಿಂದ 1980ರಲ್ಲಿ ಪಾಕಿಸ್ತಾನಿಯಾಗಿ ಅಲ್ಲಿ ಸೇರಿಕೊಂಡ ಸುರ್ಜಿತ್, ಎರಡು ವರ್ಷ ನಿರಾತಂಕವಾಗಿ ತನ್ನ ಕಾಯಕ ಮಾಡಿದ. ಆದರೆ ರವೀಂದ್ರ ಕೌಶಿಕ್ ಸಿಕ್ಕಿಬಿದ್ದ ಸಂದರ್ಭದಲ್ಲಿಯೇ ಸುರ್ಜಿತ್ ಸಹ ಜೈಲು ಪಾಲಾದ. ಅಲ್ಲಿನ ನ್ಯಾಯಾಲಯ ಆತನಿಗೂ ಗಲ್ಲು ಶಿಕ್ಷೆ ನೀಡಿತು. ಅಲ್ಲಿಂದ ಆರಂಭವಾಯಿತು ಕಿರುಕುಳದ ಅಧ್ಯಾಯ. ಸುರ್ಜಿತ್ ಮಾತಿನಲ್ಲಿಯೇ ಹೇಳುವುದಾದರೆ 'ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿರುವ ಭಾರತೀಯ ಬೇಹುಗಾರರ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ನರಕ ಎಂದರೆ ಪರವಾಗಿಲ್ಲ ಎನ್ನುವಂತಹ ಸ್ಥಳಗಳವು. ಒಂದೇ ಏಟಿಗೆ ಗುಂಡು ತಗುಲಿಯೂ ಇಲ್ಲ. ಕುತ್ತಿಗೆಗೆ ನೇಣು ಬಿಗಿದು ಪ್ರಾಣ ತೆಗೆದುಬಿಡಬಾರದೆ ಎನಿಸುತ್ತದೆ. ಅಲ್ಲಿ ನಾವುಗಳು ಹೆಸರಿಗೆ ಮಾತ್ರ ಜೀವಂತವಿರುತ್ತೇವೆ. ಉಸಿರಾಡುತ್ತಿರುತ್ತೇವೆ ಎನ್ನುವುದು ಬಿಟ್ಟರೆ ಜೀವಂತ ಇದ್ದೇವೆ ಎಂದೇ ಅನಿಸುವುದಿಲ್ಲ. ಚಿತ್ತಬಾಧಕ ವಸ್ತುಗಳನ್ನು ಬಲವಂತವಾಗಿ ನಮ್ಮ ಗಂಟಲಲ್ಲಿ ತುರುಕುತ್ತಾರೆ. ಅನ್ನಾಹಾರ ಇಲ್ಲದೆ ಸೊರಗುವಂತೆ ಮಾಡುತ್ತಾರೆ. ಬೆಳಕನ್ನು ಮರೆತೇ ಬಿಡುವಂತಹ ಕತ್ತಲ ಕೋಣೆಗಳಲ್ಲಿ ದೂಡಿ ದಿನಗಟ್ಟಲೇ ಜೀವಚ್ಛವವಾಗುವಂತೆ ಮಾಡುತ್ತಾರೆ. ವಿದ್ಯುತ್ ಶಾಕ್ ಕೊಡುವುದಂತೂ ನಿರಂತರವಾಗಿ ಸಾಗುತ್ತದೆ. ಕೈಕಾಲುಗಳಿಂದ ಉಗುರುಗಳನ್ನು ಕಿತ್ತು ಬಿಸಾಡುತ್ತಾರೆ. ಇಷ್ಟಾದರೂ ನಾವು ಬದುಕುತ್ತೇವೆ. ಇಂದಲ್ಲ ನಾಳೆ ತಾಯ್ನೆಲದ ಬಾಹುಗಳನ್ನು ಅಪ್ಪಿಕೊಳ್ಳುವ ಹಂಬಲದಿಂದ, ಕುಟುಂಬದೊಂದಿಗೆ ಬೆರೆಯಬಹುದು ಎಂಬ ಆಸೆಯಿಂದ, ಸರ್ಕಾರ (ಭಾರತ) ನಮಗೆ ಬಿಡುಗಡೆಯ ಬೆಳಕು ತೋರಿಸುತ್ತದೆ ಎಂಬ ಆಶಾಭಾವದಿಂದ ಈ ಎಲ್ಲ ಕಿರುಕುಳವನ್ನು ಸಹಿಸಿಕೊಳ್ಳುತ್ತೇವೆ. ಎಷ್ಟೋ ಮಂದಿ ಆಸೆಯಲ್ಲಿಯೇ ಅಸು ನೀಗುತ್ತಾರೆ...' ಇವು 30 ವರ್ಷ ಪಾಕಿಸ್ತಾನದ ಜೈಲುಗಳಲ್ಲಿ ನೊಂದು, ಬೆಂದು, ಸೊರಗಿದ ಸುರ್ಜಿತ್ ಮಾತು. ಮರಣದಂಡನೆಗೆ ಗುರಿಯಾಗಿ ಸಾವು ಎದುರು ನೋಡುತ್ತಿದ್ದ ಸುರ್ಜಿತ್ಗೆ 1989ರಲ್ಲಿ ಅಂದಿನ ಪಾಕ್ ಅಧ್ಯಕ್ಷ ಗುಲಾಂ ಇಶಾಕ್ ಖಾನ್ ಕ್ಷಮಾದಾನ ನೀಡಿ ಆಜೀವ ಸೆರೆವಾಸ ವಿಧಿಸಿದ್ದರು. 2005ರಲ್ಲಿಯೇ ಸೆರೆವಾಸ ಮುಗಿದರೂ ಸುರ್ಜಿತ್ ಬಿಡುಗಡೆ ಆಗಲಿಲ್ಲ. ಕಳೆದ ವರ್ಷವಷ್ಟೇ ಪಾಕ್ ಸರ್ಕಾರ ಸುರ್ಜಿತ್ನನ್ನು ಬಿಡುಗಡೆಗೊಳಿಸಿತು. ಆದರೆ ಗಡಿದಾಟಿ ಭಾರತಕ್ಕೆ ಬಂದ ಮೇಲೆ ಸುರ್ಜಿತ್ನನ್ನು ಸರ್ಕಾರ ಗುರುತಿಸಲೇ ಇಲ್ಲ. ಆತನಿಗೂ ನಮಗೂ ಸಂಬಂಧವೇ ಇಲ್ಲ ಎಂದು ಬೇಹು ಸಂಸ್ಥೆಗಳೂ ಆತನನ್ನು ದೂರ ಮಾಡಿವೆ. ಈ ಕೊರಗು ಇಂದಿಗೂ ಸುರ್ಜಿತ್ರಲ್ಲಿದೆ. ಮೊನ್ನೆಯಷ್ಟೇ ಮೃತ ದೇಹವಾಗಿ  ಭಾರತಕ್ಕೆ ಮರಳಿ ಇಲ್ಲಿ ಮಣ್ಣಾದ ಸರಬ್ಜಿತ್ ಸಿಂಗ್ ಬೇಹುಗಾರನೊ, ಅಲ್ಲವೊ ಎಂಬುದು ಖಾತ್ರಿಯಾಗಿಲ್ಲ. ಆದರೆ ಸುರ್ಜಿತ್ ಮತ್ತು ಸರಬ್ಜಿತ್ನನ್ನು ಬಲ್ಲವರ ಪ್ರಕಾರ ಆತನೂ ಬೇಹುಗಾರನೇ. ಸುರ್ಜಿತ್ ಮತ್ತು ಸರಬ್ಜಿತ್ ಒಂದೇ ಜೈಲಿನಲ್ಲಿದ್ದರು. ಸುರ್ಜಿತ್ ಬದುಕಿ ಬಂದರೆ, ಸರಬ್ಜಿತ್ ಶವವಾಗಿ ಬಂದ. ಬೇಹು ವೃತ್ತಿಯಲ್ಲಿ ದಯೆ, ದಾಕ್ಷಿಣ್ಯ, ಕರುಣೆ ಯಾವುದೂ ಇಲ್ಲ. ಅಸಲಿಗೆ ಇದು ವೃತ್ತಿಯೇ ಅಲ್ಲ. ಇವರನ್ನು ಬೇಹು ಸಂಸ್ಥೆಗಳು ಅಧಿಕೃತವಾಗಿ ದಾಖಲು ಮಾಡಿಕೊಳ್ಳುವುದಿಲ್ಲ. ಆದರೆ ಇವರಿಲ್ಲದೆ ರಹಸ್ಯ ಮಾಹಿತಿ ಸಂಗ್ರಹ ಸಾಧ್ಯವೇ ಇಲ್ಲ. ಇಂದಿಗೂ ಪಾಕಿಸ್ತಾನ ಜೈಲುಗಳಲ್ಲಿ ಇಂತಹ ಅದೆಷ್ಟೋ ಮಂದಿ ಭಾರತೀಯರು ಕೊಳೆಯುತ್ತಿದ್ದಾರೆ. ಅಜ್ಞಾತವಾಸದಲ್ಲೇ ಇವರ ಬದುಕು ಅನಾಥವಾಗಿದೆ.

-ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ