ಒಬ್ಬ ವ್ಯಕ್ತಿಯನ್ನು ಕುರುಡಾಗಿ ಪ್ರೀತಿಸು, ಆದರೆ ಪ್ರೀತಿಯನ್ನು ಕುರುಡು ಎಂದು ಭಾವಿಸಬೇಡ ಎಂಬ ಮಾತಿದೆ. ಹಾಗೆಯೇ ಬೇರೆ ಆಯ್ಕೆ ಇಲ್ಲದೇ ಜನ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಆದರೆ ಈ ಪ್ರೀತಿಯನ್ನು ಕುರುಡು ಎಂದು ಭಾವಿಸಬಾರದು.
ಕೋಟೆ ಕಟ್ಟಿ ಮೆರೆದವರನ್ನೆಲ್ಲ ಮನೆಗಟ್ಟಿ, ಅಧಿಕಾರ ಬಂದಾಗ ಮೆರೆದಾಡಿದವರನ್ನು ವಿರೋಧ ಪಕ್ಷದಲ್ಲಿ ಕೂರಿಸಿ, ಪಕ್ಷದಿಂದ ಪಕ್ಷಕ್ಕೆ, ಕ್ಷೇತ್ರದಿಂದ ಕ್ಷೇತ್ರಕ್ಕೆ ಹಾರುವವರನ್ನು ಬದಿಗೆ ಸರಿಸಿದ ಮತದಾರರು, 'ಪ್ರಜೆಗಳೇ ಪ್ರಭುಗಳು' ಎಂಬುದನ್ನು ಸಾಬೀತು ಮಾಡಿದ್ದಾರೆ. ಮತದಾರ ಪ್ರಭುಗಳ ತೀರ್ಪಿಗೆ ತಲೆಬಾಗಲೇ ಬೇಕು.
ಜನ ದುಡ್ಡು ತೆಗೆದುಕೊಂಡು ಮತ ಹಾಕುತ್ತಾರೆ. ದುಡ್ಡೊಂದಿದ್ದರೆ ಗೆದ್ದುಬಿಡಬಹುದು ಎಂಬ ಭ್ರಮೆಯಲ್ಲಿದ್ದ ರಾಜಕಾರಣಿಗಳ ಭ್ರಮೆ ಕಳಚಿದೆ. ಚುನಾವಣಾ ಆಯೋಗದ ಕಟ್ಟೆಚ್ಚರದ ನಡುವೆಯೂ ಚುನಾವಣೆಯಲ್ಲಿ ಕಾಂಚಾಣದ ಸದ್ದು ಜೋರಾಗಿಯೇ ಇತ್ತು. ಕಾಂಚಾಣದ ಕುಣಿತದ ನಡುವೆಯೂ ಮತದಾರರು ಅತ್ಯುತ್ತಮ ಎನ್ನಬಹುದಾದ ತೀರ್ಪನ್ನೇ ನೀಡಿದ್ದಾರೆ. ಇದರರ್ಥ ಕೇವಲ ದುಡ್ಡಿನ ಮುಖವನ್ನಷ್ಟೇ ಮತದಾರರು ನೋಡಿಲ್ಲ. ದುಡ್ಡು ತೆಗೆದುಕೊಂಡರೂ, ಯಾರಿಗೆ ಮತ ಹಾಕಬೇಕೋ ಅವರಿಗೇ ಮತ ಹಾಕಿದ್ದಾರೆ! ಯಾರನ್ನು ಎಲ್ಲಿಡಬೇಕೋ ಅಲ್ಲಿಟ್ಟಿದ್ದಾರೆ.
ಅಧಿಕಾರ ಬಂದಾಗ ಅದನ್ನು ಸದುಪಯೋಗಪಡಿಸಿಕೊಂಡು, ಉತ್ತಮ ಆಡಳಿತ ನೀಡುವ ಬದಲು ಸ್ವಾರ್ಥ ರಾಜಕಾರಣ ಮತ್ತು ಕಿತ್ತಾಟದಲ್ಲೇ ಕಾಲ ಕಳೆದ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಹಾಗೆಯೇ ಬಿಜೆಪಿಯನ್ನು ಈ ಸ್ಥಿತಿಗೆ ತಳ್ಳಿದವರನ್ನೂ ಮತದಾರ ಮೂಲೆಗೆ ತಳ್ಳದೇ ಬಿಟ್ಟಿಲ್ಲ. ಹಾಗಂತ ಕಣ್ಮುಚ್ಚಿ ಕಾಂಗ್ರೆಸ್‌ಗೂ ಮತಹಾಕಿಲ್ಲ. ಅಲ್ಲೂ ಕೆಲವರನ್ನು ಸೋಲಿಸಿದ್ದಾರೆ. ಆದರೆ ಮತದಾರರ ಮುಂದೆ ಹೆಚ್ಚಿನ ಆಯ್ಕೆಯೇನೂ ಇರಲಿಲ್ಲ. ಆದರೂ ಇದ್ದುದರಲ್ಲಿ ಉತ್ತಮ ಆಯ್ಕೆ ಮಾಡಲು ಮತದಾರರು ಯತ್ನಿಸಿರುವುದು ಸ್ಪಷ್ಟವಾಗಿದೆ.
ಮತದಾರರು ಪ್ರಬುದ್ಧರಾಗಿದ್ದಾರೆ. ಪೊಳ್ಳು ಭರವಸೆಗೆ, ಟೊಳ್ಳು ಭಾಷಣಕ್ಕೆ ಮರುಳಾಗುವುದಿಲ್ಲ. ಕಣ್ಕಟ್ಟು ಮತದಾರರ ಮುಂದೆ ನಡೆಯುವುದಿಲ್ಲ. ರಾಜಕಾರಣಿಗಳ ನಿಜಬಣ್ಣವನ್ನು ಅವರು ಚೆನ್ನಾಗಿ ಅರಿತಿದ್ದಾರೆ. 2008ರಲ್ಲಿ ಅಧಿಕಾರ ಹಸ್ತಾಂತರ ಮಾಡದಿರುವುದು ಸರಿಯಲ್ಲ ಎಂಬ ಭಾವನೆ ರಾಜ್ಯಾದ್ಯಂತ ಇತ್ತು. ಅದಕ್ಕೇ ಮತದಾರ ಬಿಜೆಪಿಗೆ ಒಲಿದಿದ್ದ. ಅಲ್ಲದೇ ಇಷ್ಟು ವರ್ಷದಿಂದ ಬಿಜೆಪಿ ವಿರೋಧ ಪಕ್ಷದಲ್ಲಿತ್ತು. ಒಮ್ಮೆ ಆಡಳಿತ ಕೊಟ್ಟು ನೋಡೋಣ ಎಂಬ ಇರಾದೆಯೂ ಸಂತಿಗಿತ್ತು.
ಆದರೆ ಬಿಜೆಪಿ ಮತದಾರರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಮತದಾರರ ವಿಶ್ವಾಸ ಹಾಳಾಗಿಹೋಗಲಿ, ಐದು ವರ್ಷ ಸರ್ಕಾರ ಉಳಿಸಿಕೊಂಡಿದ್ದೇ ಬಿಜೆಪಿಯ ಮಹತ್ ಸಾಧನೆ ಎಂಬಂತಾಯಿತು. ಹೆಸರಿಗೆ ಒಳಜಗಳವಾದರೂ ಅದೆಲ್ಲ ನಡೆಯುತ್ತಿದ್ದುದು ಬೀದಿಯಲ್ಲೇ. ಜಗಳದ ಜತೆಗೆ ಪಕ್ಷದ ಮರ್ಯಾದೆಯನ್ನೂ ಬೀದಿಗೆ ಎಳೆದುತಂದರು. ಶಿಸ್ತಿನ ಪಕ್ಷ ಬಿಜೆಪಿ ಎಂಬ ಹೆಸರನ್ನು ತೊಳೆದು ಒಣಹಾಕಿದರು. ಬಿಜೆಪಿಯ ಕಟ್ಟಾ ಬೆಂಬಲಿಗರೇ ಬಿಜೆಪಿಯ ವಿರುದ್ಧ ಮಾತನಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಶಿಸ್ತು ಕಾಪಾಡಬೇಕಾದ ರಾಷ್ಟ್ರೀಯ ನಾಯಕರು ಅಧಿಕಾರ ಉಳಿದರೆ ಸಾಕು ಎಂಬ ತಾವೇ ಸೃಷ್ಟಿಸಿಕೊಂಡ ಅನಿವಾರ್ಯ ಕರ್ಮಕ್ಕೆ ಗಂಟುಬಿದ್ದು ಪಕ್ಷದ ವರ್ಚಸ್ಸು, ಶಿಸ್ತು ಇನ್ನಷ್ಟು ಹಾಳಾಗಲು ಬಿಟ್ಟರು.
ಈ ಹುಚ್ಚಾಟಗಳಿಂದಾಗಿ ಬಿಜೆಪಿಯ ಶಕ್ತಿಯಾಗಿದ್ದ ಕಾರ್ಯಕರ್ತರೇ ಉತ್ಸಾಹ ಕಳೆದುಕೊಂಡು ನಿಶ್ಶಕ್ತರಾದರು. ಬಿಜೆಪಿಯ ಐದು ವರ್ಷದ ಆಡಳಿತ, ಪಕ್ಷದ ಆತ್ಮವಾಗಿದ್ದ ಕಾರ್ಯಕರ್ತರ ಸ್ಥೈರ್ಯ ಕುಸಿಯುವಂತೆ ಮಾಡಿತು. ಆತ್ಮವಿಲ್ಲದೇ ಚುನಾವಣೆ ಗೆಲ್ಲಲಾದೀತೇ?
ಅದರ ಫಲಿತಾಂಶ ನಿಮ್ಮ ಮುಂದಿದೆ.
ಜನ ವಿಶ್ವಾಸವಿಟ್ಟು ಮತ ಹಾಕಿದ್ದಕ್ಕೆ, ಬಿಜೆಪಿ ಕೊಟ್ಟ ಆಡಳಿತವೂ ಒಂದರ್ಥದಲ್ಲಿ ವಿಶ್ವಾಸದ್ರೋಹವೇ. ಹಿಂದಿನ ಚುನಾವಣೆಯಲ್ಲಿ ವಿಶ್ವಾಸದ್ರೋಹದ ಅನುಕಂಪದ ಆಧಾರದಲ್ಲಿ ಮತ ಹಾಕಿದ್ದ ಜನರು, ವಿಶ್ವಾಸದ್ರೋಹ ಮಾಡಿದ ಕಾರಣಕ್ಕೇ ಅವರನ್ನು ಅಧಿಕಾರದಿಂದ ಕೆಳಗೂ ಇಳಿಸಿದ್ದಾರೆ ಎಂದು ಚುನಾವಣೆ ಫಲಿತಾಂಶವನ್ನು ವ್ಯಾಖ್ಯಾನಿಸಬಹುದೇನೊ?
ಒಳಜಗಳ, ಭಿನ್ನಮತಗಳು ರಾಜಕೀಯ ಪಕ್ಷಗಳಿಗೆ ಹೊಸದಲ್ಲ. ಯಾವ ಪಕ್ಷವೂ ಅದಕ್ಕೆ ಹೊರತೂ ಅಲ್ಲ. ಸತತ ಮೂರನೇ ಅವಧಿಗೆ ಬಿಜೆಪಿ ಗೆಲುವು ಸಾಧಿಸಿದ ಗುಜರಾತ್ ರಾಜ್ಯದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಶಂಕರಸಿಂಗ್ ವಾಘೇಲಾ, ಕೇಶುಭಾಯ್ ಪಟೇಲ್ ಮುಂತಾದ ಘಟಾನುಘಟಿಗಳನ್ನು ಬಿಜೆಪಿಯಿಂದ ಹೊರಹಾಕಲಾಗಿತ್ತು. ಇಬ್ಬರು ಪ್ರಭಾವಿ ನಾಯಕರನ್ನು ಹೊರಹಾಕುವಾಗ ಮತ್ತು ಅದಕ್ಕೂ ಮೊದಲು ನಡೆದ ಒಳಜಗಳ, ತಿಕ್ಕಾಟಗಳೇನು ಕಡಿಮೆಯೇ? ಅದರಿಂದ ಆಗಬಹುದಾಗಿದ್ದ ಹಾನಿ ಅಷ್ಟಿಷ್ಟಲ್ಲ. ಆದರೆ ಅದರಿಂದ ಪಕ್ಷಕ್ಕಾಗಬಹುದಾಗಿದ್ದ ಹಾನಿಯನ್ನು ಮೀರಿನಿಂತಿದ್ದು ಉತ್ತಮ ಆಡಳಿತ.
ಹಾಗೆಯೇ ಮಧ್ಯಪ್ರದೇಶದಲ್ಲಿ ಉಮಾಭಾರತಿಯಂತಹ ಪ್ರಭಾವಿ ನಾಯಕಿ, ಪಕ್ಷದಿಂದ ಸಿಡಿದು ಹೋಗಿ ಪಕ್ಷ ಕಟ್ಟಿದ್ದರು. ಆದರೂ ಅಲ್ಲಿ ಬಿಜೆಪಿ ಮತ್ತೆ ಆಡಳಿತಕ್ಕೆ ಬಂತು. ಕೊನೆಗೆ ಉಮಾಭಾರತಿ ಅವರೇ ಬಿಜೆಪಿಗೆ ಮರಳಿದರು. ಉತ್ತಮ ಆಡಳಿತ ನೀಡಿದರೆ, ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ರೂಪಿಸಿದರೆ, ಜನಪರ ಆಡಳಿತ ನೀಡಿದರೆ ಒಳಜಗಳ, ಭಿನ್ನಾಭಿಪ್ರಾಯ, ವ್ಯಕ್ತಿ, ಜಾತಿಗಳನ್ನೂ ಮೀರಿ ನಿಲ್ಲಬಹುದು ಎಂಬುದಕ್ಕೆ ಈ ರೀತಿಯ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
ಗುಜರಾತ್‌ನಲ್ಲಿ, ಛತ್ತೀಸ್‌ಗಢದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಾಲಿ ಶಾಸಕರ ಬದಲಿಗೆ ಹೊಸಬರನ್ನು ಸ್ಪರ್ಧಿಗಳಾಗಿ ಕಣಕ್ಕಿಳಿಸಲಾಗಿತ್ತು. ಇದನ್ನು ರಣನೀತಿ ಎಂದು ಕರೆದರೂ, ಅಷ್ಟು ಸುಲಭದ ಕೆಲಸವಲ್ಲ. ಟಿಕೆಟ್ ತಪ್ಪಿಸಿಕೊಂಡವರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಾರೆ. ಪಕ್ಷದೊಳಗೇ ಇದ್ದುಕೊಂಡು ಗುಮ್ಮನಗುಸುಕರಂತೆ ಒಳಗೊಳಗೇ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಾರೆ. ಪಕ್ಷದ ಅಭ್ಯರ್ಥಿಗಳು ಸೋಲುವಂತೆ ಮಾಡುತ್ತಾರೆ. ಇವೆಲ್ಲವನ್ನೂ ಮೀರಿ ಬಿಜೆಪಿ ಅಲ್ಲಿ ಮರಳಿ ಅಧಿಕಾರಕ್ಕೆ ಬಂದಿದೆ. ಒಳಜಗಳ, ಭಿನ್ನಾಭಿಪ್ರಾಯ ಮತ್ತು ಇತರ ಅಡೆತಡೆಗಳನ್ನೂ ಮೀರಿ ನಿಲ್ಲುವ ಶಕ್ತಿ ಉತ್ತಮ ಮತ್ತು ಸ್ವಚ್ಛ ಆಡಳಿತಕ್ಕಿದೆ.
ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ರಾಜ್ಯ ಬಿಜೆಪಿ ವಿಫಲವಾಗಿದೆ. ಆರಂಭದಲ್ಲಿ ಯಡಿಯೂರಪ್ಪ ಅವರ ನೆಪದಲ್ಲಿ ಹೆಸರು ಕೆಡಿಸಿಕೊಂಡ ಬಿಜೆಪಿ, ಯಡಿಯೂರಪ್ಪ ಅವರ ನಿರ್ಗಮನದ ನಂತರವೂ ಒಗ್ಗಟ್ಟು ಪ್ರದರ್ಶಿಸಲು ವಿಫವಾಯಿತು. ಆದಿಯಿಂದ ಅಂತ್ಯದವರೆಗೆ ಗೊಂದಲವೇ ಮೂಲಮಂತ್ರವಾಗಿತ್ತು. ಜೇಡರ ಬಲೆಯಲ್ಲಿ ಸಿಕ್ಕಿ ಹೊರಬರಲಾರದೇ ಒದ್ದಾಡುವ ನೊಣದಂತೆ ಗೊಂದಲಗೂಡಿನಿಂದ ಹೊರಬರಲಾರದೇ ಬಿಜೆಪಿ ಚಡಪಡಿಸಿತು.
ಜನ ಮತದಾನದ ಮೂಲಕ ತಕ್ಕ ಉತ್ತರ ನೀಡಿದ್ದಾರೆ.
ಜನತೆ ಬಿಜೆಪಿಗೆ ಕಲಿಸಿದ ಪಾಠಕ್ಕೆ ಕಾಂಗ್ರೆಸ್ ಪಾಳಯ ಫುಲ್ ಖುಷ್. ಅದರಲ್ಲೂ ಕೇಂದ್ರದಲ್ಲಿ ಹಗರಣಗಳಿಂದ ಮುಳುಗುವ ಹಡಗಿನಂತಾಗಿದ್ದ ಕಾಂಗ್ರೆಸ್‌ಗೆ ರಾಜ್ಯದಲ್ಲಿನ ಗೆಲುವು ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿದೆ. ಸಿಕ್ಕಿರುವ ಒಂದು ಗೆಲುವನ್ನು ತನ್ನೆಲ್ಲ ಸಮಸ್ಯೆಗಳ ಪರಿಹಾರದ ಬ್ರಹ್ಮಾಸ್ತ್ರವನ್ನಾಗಿ ಬಳಸಲು ಅದು ಮುಂದಾಗಿದೆ.
ಕೇಂದ್ರ ಸಚಿವ ಕಮಲ್‌ನಾಥ್ ಅವರು, "ಕರ್ನಾಟಕದ ಚುನಾವಣಾ ಫಲಿತಾಂಶ ಯಾರು ಭ್ರಷ್ಟರು ಎಂಬುದನ್ನು ತೀರ್ಮಾನಿಸಲಿದೆ"ಎಂದಿದ್ದರು. ಬಹುತೇಕ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಅಕ್ರಮಗಳನ್ನು ರಾಜ್ಯದ ಗೆಲುವಿನ ಅಬ್ಬರದಲ್ಲಿ ಮುಚ್ಚಿಹಾಕುವ ಆತುರದಲ್ಲಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ರಾಜ್ಯದ ಮತದಾರರು ಮತ ಚಲಾಯಿಸಿದ್ದಾರೆ ಎಂದು ಹೇಳುತ್ತ, ಕೇಂದ್ರದ ಭ್ರಷ್ಟಾಚಾರವನ್ನು ಸಮರ್ಥಿಸಿದ್ದಾರೆ ಎಂಬ ಸಂದೇಶ ರವಾನಿಸುವ ಹವಣಿಕೆಯಲ್ಲಿದ್ದಾರೆ.
ಆದರೆ ಕಾಂಗ್ರೆಸ್ ತುಂಬ ಸಂತೋಷಪಡುವ ಅಗತ್ಯವೇನೂ ಇಲ್ಲ. ಯಾಕೆಂದರೆ ರಾಜ್ಯದ ಚುನಾವಣೆ ಗೆಲುವಿನಲ್ಲಿ ಕಾಂಗ್ರೆಸ್ ಪ್ರಯತ್ನಕ್ಕಿಂತ ಬಿಜೆಪಿ ಕೊಡುಗೆಯೇ ಹೆಚ್ಚಿದೆ. ಕಾಂಗ್ರೆಸ್ ಪರವಾದ ಅಲೆಗಿಂತ ಬಿಜೆಪಿ ವಿರೋಧಿ ಅಲೆಯೇ ದೊಡ್ಡದಾಗಿತ್ತು. ಹೀಗಾಗಿ ರಾಜ್ಯದ ಜನರು ಪರಮ ಪ್ರೀತಿಯಿಂದ, ಮುಕ್ತ ಮನಸ್ಸಿನಿಂದ, ಅಪಾರ ಅಭಿಮಾನದಿಂದ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ ಎಂದು ಭಾವಿಸಿದರೆ ಅದು ಪರಾಮಶಿಯಾದೀತು.
ಒಬ್ಬ ವ್ಯಕ್ತಿಯನ್ನು ಕುರುಡಾಗಿ ಪ್ರೀತಿಸು, ಆದರೆ ಪ್ರೀತಿಯನ್ನು ಕುರುಡು ಎಂದು ಭಾವಿಸಬೇಡ ಎಂಬ ಮಾತಿದೆ. ಹಾಗೆಯೇ ಬೇರೆ ಆಯ್ಕೆ ಇಲ್ಲದೇ ಜನ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಆದರೆ ಈ ಪ್ರೀತಿಯನ್ನು ಕುರುಡು ಎಂದು ಭಾವಿಸಬಾರದು. ಗೆಲುವಿನ ಅಮಲಿನಲ್ಲಿ ಮತ್ತದೇ ತಪ್ಪುಗಳನ್ನು ಮಾಡಬಾರದು.
ಸುದೀರ್ಘ ಕಾಲ ವಿರೋಧ ಪಕ್ಷದಲ್ಲಿದ್ದ ಬಿಜೆಪಿ, ಆಡಳಿತಾವಧಿಯಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮಾಡಿದ ತಪ್ಪುಗಳಿಂದ ಪಾಠ ಕಲಿಯಲು ವಿಫಲವಾಯಿತು. ಕಾಂಗ್ರೆಸ್ ಕೂಡ ತನ್ನ ದೀರ್ಘಾವಧಿಯ ಆಡಳಿತದಲ್ಲಿ ತಪ್ಪುಗಳನ್ನು ಮರುಕಳಿಸುತ್ತ ಬಂದಿದೆ. ಕಾಂಗ್ರೆಸ್‌ನ ತಪ್ಪುಗಳಿಂದ ಬೇಸರಗೊಂಡೇ ಜನರು ಪರ್ಯಾಯ ಪಕ್ಷಗಳತ್ತ ಹೊರಳಿದ್ದು. ಅದರಿಂದಾಗಿಯೇ ಜನ ಕಾಂಗ್ರೆಸ್-ಜೆಡಿಎಸ್, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರಗಳ ಪ್ರಯೋಗಕ್ಕೆ ಅವಕಾಶ ಮಾಡಿಕೊಟ್ಟರು. ಅದರ ನಂತರ ಬಿಜೆಪಿಗೂ ಒಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಜೆಪಿಗೂ ಮತ ಹಾಕಿದರು. ಆದರೆ ಈ ಸರ್ಕಾರಗಳು ಕೂಡ ಜನರ ನಿರೀಕ್ಷೆಗೆ ತಕ್ಕಂತೆಆಡಳಿತ ನೀಡಲು ವಿಫಲವಾದವು. ಅನಿವಾರ್ಯವಾಗಿ ಜನ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.
ಬಿಜೆಪಿ ಮಾಡಿದ ತಪ್ಪುಗಳನ್ನೇ ಕಾಂಗ್ರೆಸ್ ಮತ್ತೆ ಮಾಡದಿರಲಿ. ಮುಖ್ಯಮಂತ್ರಿ ಹುದ್ದೆ, ಸಚಿವ ಸ್ಥಾನದ ನೆಪದಲ್ಲಿ ರಾಜ್ಯದ ಜನತೆಗೆ ಮತ್ತೆ ರಾಜಕೀಯದ ಕರಾಳಮುಖ ತೋರದಿರಲಿ. ರಾಜಕೀಯ ಎಂದರೆ ಹೇಸಿಗೆ ಪಡುವಂತಹ ಸ್ಥಿತಿ ಮುಂದುವರಿಯದಿರಲಿ. ಒಳಜಗಳ, ಭಿನ್ನಮತ, ಸ್ವಾರ್ಥ ರಾಜಕಾರಣಕ್ಕೆ ರಾಜ್ಯದ ಹಿತ ಬಲಿಯಾಗದಿರಲಿ. ಮುಂದಿನ ಐದು ವರ್ಷಗಳ ಕಾಲ ರಾಜ್ಯಕ್ಕೊಂದು ಸುಭದ್ರ, ಸುಸ್ಥಿರ ಸರ್ಕಾರ ಸಿಗಲಿ.
ನಮ್ಮ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲುವುದಕ್ಕೆ ನೀಡುವಷ್ಟು ಮಹತ್ವವನ್ನು ಗೆಲುವು ಉಳಿಸಿಕೊಳ್ಳಲು ನೀಡುವುದಿಲ್ಲ. ಅಧಿಕಾರಕ್ಕೆ ಬರುತ್ತಿದ್ದಂತೆ ಮುಂದೆಂದೂ ಗೆಲ್ಲುವುದಿಲ್ಲ ಎಂಬುವರಂತೆ ಊಟಕ್ಕಿಳಿದುಬಿಡುತ್ತಾರೆ. ತಾವು ಉತ್ತಮ ಆಡಳಿತ ನೀಡಿ ಮರು ಆಯ್ಕೆಯಾಗುತ್ತೇವೆ ಎಂಬ ಆತ್ಮವಿಶ್ವಾಸವೇ ಅವರಲ್ಲಿಲ್ಲ. ಅವರ ಆಡಳಿತ ವೈಖರಿ ಮೇಲೆ ಅವರಿಗೇ ವಿಶ್ವಾಸವಿಲ್ಲದಿದ್ದರೆ, ಜನ ವಿಶ್ವಾಸವಿಡುವುದು ಸಾಧ್ಯವೇ?
ಚುನಾವಣೆ ಗೆದ್ದರೆ ಸಾಲದು. ಅದನ್ನು ಉಳಿಸಿಕೊಳ್ಳುವುದನ್ನೂ ಕಲಿಯಬೇಕು.
-ವಿಶ್ವೇಶ್ವರ ಭಟ್
vbhat@me.com